ಗುರುವೆಂಬುದು ಅತಿಭೌತಿಕ ಶಕ್ತಿ: ಶ್ರೀ.ಎಂ.ಎಚ್.ಮೊಕಾಶಿ

ಸಮಾಜದಲ್ಲಿ ಅನೇಕ ವೃತ್ತಿಗಳಿವೆ. ಅವುಗಳಲ್ಲಿ ಪ್ರಮುಖವಾದುದೆಂದರೆ ಶಿಕ್ಷಕ ವೃತ್ತಿಯಾಗಿದೆ. ಶಿಕ್ಷಕನನ್ನು ಬೋಧಕ, ಅಧ್ಯಾಪಕ, ಮೇಷ್ರು, ಗುರು, ಮೊದಲಾದ ಬೇರೆ ಬೇರೆ ಹೆಸರುಗಳಿಂದ ಕರೆಯುವರು. ಗುರುವನ್ನು “ಆಚಾರ್ಯ ದೇವೋಭವ”ಎನ್ನಲಾಗಿದೆ. ಅಂದರೆ ದೇವರ ಸ್ಥಾನ ಮಾನ ನೀಡಲಾಗಿದೆ. ಗುರು “ಸಂಸ್ಕøತಿಯ ಪ್ರಗತಿಯ ಅಗ್ರಧೂತ”, ”ರಾಷ್ರ ನಿರ್ಮಾತೃ”, ”ಇತಿಹಾಸದ ನಿರ್ಮಾಪಕ” ಕೂಡ ಆಗಿದ್ದಾನೆ. ಗುರು ಮಗುವಿಗೆ ದ್ವಿತೀಯ ಜನ್ಮದಾತನಾಗಿದ್ದಾನೆ. ಹೀಗಾಗಿ ಗುರುವಿಗೆ ಸಮಾಜದಲ್ಲಿ ಮಹತ್ವದ ಸ್ಥಾನಮಾನ ನೀಡಲಾಗಿದೆ. ಗುರು ಭೂಮಿಯ ಮೇಲಿರುವ ಅತಿಭೌತಿಕ ಹಾಗೂ ಉನ್ನತ ಶಕ್ತಿಯ ಕುರಿತಾದ ಅತ್ಯುನ್ನತ ಜ್ಞಾನವನ್ನು ಹೊಂದಿರುವ ಒಬ್ಬ ವ್ಯಕ್ತಿಯಾಗಿದ್ದಾನೆ. ಗುರುವು ಶಿಷ್ಯರ ಮನಸ್ಸನ್ನು ಅಪಹರಿಸುವವನಾಗಿದ್ದಾನೆ.
ನಮ್ಮಲ್ಲಿರುವ ಕತ್ತಲೆಯನ್ನು ಕಳೆದು ಬೆಳಕನ್ನು ನೀಡುವವನೇ ಗುರು. 64 ವಿದ್ಯೆಗಳನ್ನು ಕಲಿಸುವ ಶಾಶ್ವತ ದೇವರು ಗುರುವಾಗಿದ್ದಾನೆ. ಇವನು ನಮ್ಮ ಬದುಕಿಗೆ ಒದಗಿಸುವ ಬೆಳಕೇ ವಿದ್ಯೆಯಾಗಿದೆ. ‘ವಿದ್ಯೆ’ ಎಂದರೆ ಕೇವಲ ಓದು, ಬರಹ ಮಾತ್ರವಲ್ಲದೇ ನಡೆ-ನುಡಿಯೊಂದಿಗೆ ಜೀವನದ ಪ್ರತಿಯೊಂದು ಭಾಗವನ್ನು ತಿಳಿಯುವುದಾಗಿದೆ.

ಮಗುವು ತಂದೆ-ತಾಯಿ-ಗುರುಗಳೆಂಬ ಮೂರು ಅದ್ಭುತ ತ್ರಿಶಕ್ತಿಗಳಿಂದ ಮಾನವ ಸಂಪನ್ಮೂಲವಾಗಿ ಹೊರಹೊಮ್ಮುವನು. “Parents are first teacher and teacher are second parents” ಎಂಬ ಮಾತು ಗುರುವಿಗೆ ಹಿಡಿದ ಕೈಗನ್ನಡಿಯಾಗಿದೆ. ಜಗತ್ತಿನಲ್ಲಿ ನಮ್ಮ ಇಷ್ಟ ಬಂಧುವರ್ಗವು ಒಂದಿಲ್ಲೊಂದು ದಿನ ನಮ್ಮನ್ನು ತೊರೆಯುತ್ತಾರೆ. ಆದರೆ ಗುರುಕೃಪೆ ಎಂಬುದು ಜನ್ಮ ಜನ್ಮಗಳಲ್ಲಿಯೂ ನಮ್ಮೊಂದಿಗೆ ಸಂಚಲಿಸುತ್ತ ಸಾಗುತ್ತದೆ. ನಾವು ಯಾವುದೇ ಕಾರ್ಯ ಕೈಗೆತ್ತಿಕೊಂಡರೂ ಪ್ರಾರಂಭದಲ್ಲಿ ಗುರುವಿಗೆ ವಂದನೆ ಸಲ್ಲಿಸುತ್ತೇವೆ. “ಗುರು ಹಾಗೂ ಗೋವಿಂದರಲ್ಲಿ ನಾನು ಮೊದಲು ವಂದಿಸುವುದು ಗುರುವನ್ನು” ಎಂದು ಕಬೀರದಾಸರು ಹೇಳಿದ್ದಾರೆ. ಹೀಗಾಗಿ ‘ಶಿವಪಥವರಿವೆಡೆ ಗುರುಪಥವ ಮೊದಲು’ ಎಂದು ಹೇಳಲಾಗಿದೆ. ಅಲ್ಲದೇ ಗುರು ನಾನಕ್ “ಸಾವಿರಾರು ಸೂರ್ಯ ಚಂದ್ರರು ಹುಟ್ಟಿ ಬಂದರೂ ಕೂಡ ಹೃದಯದ ಒಳಗಿನ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವುದು ಸಾಧ್ಯವಿಲ್ಲ. ಇದನ್ನು ಕೇವಲ ಗುರುವಿನ ಅನುಗ್ರಹದಿಂದ ಮಾತ್ರ ತೊಡೆದುಹಾಲ್ಪಡುತ್ತದೆ” ಎಂದಿದ್ದಾರೆ. ಸರ್ವಜ್ಞನೂ ಕೂಡ

ಸರ್ವಜ್ಞನೆಂಬುವನು ಗರ್ವದಿಂದಾದವನೆ|
ಸರ್ವರೊಳಗೊಂದು ನುಡಿ ಕಲಿತು|
ವಿದ್ಯೆಯ ಪರ್ವತವೇ ಆದೆ|| ಸರ್ವಜ್ಞ ಎಂದು,
ತಾನು ಹಿರಿಯರಿಂದ ವಿದ್ಯೆ ಕಲಿತು ಸರ್ವಜ್ಞನಾದೆ ಎಂಬ ಮಾತನ್ನು ಹೇಳಿದ್ದಾನೆ.

ಪ್ರಾಚೀನ ಕಾಲದಲ್ಲಿ ಗುರುಕುಲಗಳು ಯುವಕರಿಗೆ ವಿದ್ಯಾದಾನ ಮಾಡುತ್ತಿದ್ದವು. ಗುರುಗಳಾಗಿ, ಆಚಾರ್ಯರಾಗಿ. ಋಷಿವರೇಣ್ಯರು, ಯುವಜನಾಂಗಕ್ಕೆ ವಿದ್ಯಾದಾನ ಮಾಡಿ ಮಾರ್ಗದರ್ಶನ ಮಾಡುತ್ತಿದ್ದರು. ಗುರುಗಳಿಂದ ಪಡೆದ ಜ್ಞಾನವನ್ನು ಸ್ವಧ್ಯಾಯದಿಂದ ವೃದ್ಧಿಗೊಳಿಸಿ ತಮ್ಮ ಜೀವನವನ್ನು ಹಸನಾಗಿಸಿ ಇತರರಿಗೆ ತಾವು ಕಲಿತ ವಿದ್ಯೆಯನ್ನು ಹಂಚುತ್ತಿದ್ದರು. ಗುರುಗಳು ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದರು. ಗುರುವಿನ ಅರ್ಥವೇ “ಅಜ್ಞಾನವನ್ನು ಹೊಡೆದೋಡಿಸಿ ಜ್ಞಾನವನ್ನು ಕೊಡುವವನು” ಎಂದು. ಈ ರೀತಿಯಲ್ಲಿ ಸಂಪಾದಿಸಿದ ವಿದ್ಯೆಗೆ ಹೆಚ್ಚಿನ ಮಹತ್ವವಿತ್ತು. ಅಲ್ಲದೆ ‘ವಿದ್ಯಾ ದದಾತಿ ವಿನಯಂ’ ವಿದ್ಯೆಯು ವಿನಯವನ್ನು ನೀಡುವುದು, ವಿನಯದಿಂದ ಒಳ್ಳೆಯ ಸ್ಥಾನ ದೊರೆಯುತ್ತದೆ ಎಂದು ಸಂಸ್ಕøತದ ಶುಭಾಷಿತದಲ್ಲಿ ಹೇಳಲಾಗಿದೆ.

ಇತಿಹಾಸವನ್ನು ಒಮ್ಮೆ ನೋಡಿದಾಗ ಹಲವಾರು ಸಾಧಕರನ್ನು ಕಾಣುತ್ತೇವೆ. ಕೃಷ್ಣ-ಸುಧಾಮ, ಅರ್ಜುನ, ಅಮೀರ್ ಖುಸ್ರೊ, ಶಿವಾಜಿ, ಮೀರಾಬಾಯಿ, ವಿವೇಕಾನಂದ, ಗಾಂಧೀಜಿ, ಅಂಬೇಡ್ಕರ್ ಮೊದಲಾದವರ ಸಾಧನೆಯ ಹಿಂದೆ ಅವರ ಗುರುವಿನ ಮಾರ್ಗರ್ಶನ,ಆಶೀರ್ವಾದ ಪ್ರಮುಖವಾಗಿರುವುದು ಕಂಡುಬರುತ್ತದೆ. ಇವರಿಗೆ ಈ ರೀತಿಯ ಜ್ಞಾನವನ್ನು ನೀಡಿದ ಗುರು ಪರಮ ಪೂಜ್ಯನಾಗಿದ್ದಾನೆ.

ಮಗುವಿನ ಗುರಿಯನ್ನು ತಲುಪಿಸುವಲ್ಲಿ ಶಿಕ್ಷಕನ ಪಾತ್ರ ಮಹತ್ವದ್ದಾಗಿದೆ. ಸಾಮಾನ್ಯ ಶಿಕ್ಷಕ ಬೋಧಿಸುತ್ತಾನೆ. ಉತ್ತಮ ಶಿಕ್ಷಕ ನೀಡುತ್ತಾನೆ, ಮತ್ತು ಶ್ರೇಷ್ಠ ಶಿಕ್ಷಕ ಸ್ಪೂರ್ತಿಯನ್ನೀಯುತ್ತಾನೆ. ಎಂಬ ಹೇಳಿಕೆ ಪ್ರಸಿದ್ಧಿಯಾಗಿದೆ. ಒಬ್ಬ ಗುರು ಹಲವು ಪರೀಕ್ಷೆಗಳನ್ನಿಟ್ಟು ಪ್ರತಿಭಾವಂತನಾದ ಒಬ್ಬನನ್ನು ಆಯ್ಕೆಮಾಡಿ “ಇವನೇ ನನ್ನ ಶಿಷ್ಯ”ಎಂದು ಹೇಳುವ ಪ್ರಯತ್ನಕ್ಕಿಂತ “ಇಂಥವನೇ ನನ್ನ ಗುರು”ಎಂದು ಒಬ್ಬ ಶಿಷ್ಯ ತನ್ನ ಗುರುವನ್ನು ಆರಿಸುವ ಪಕ್ವತೆ ದೊಡ್ಡದು. ಮಾನಸಿಕವಾಗಿ ತನಗೆ ಬೇಕಾದ ಗುರುವನ್ನು ಹುಡುಕಿ ಕಲಿಯುವ ಶಿಷ್ಯನಿಗಿಂತ ಅವನಿಂದ ಒಪ್ಪಿತವಾದ ಗುರುವಿಗೆ ಗೌರವ. ಅದುವೇ ಆ ಗುರು ಬದುಕಿದ ಬದುಕಿಗೆ ಸಿಗುವ ಗೌರವ ಮತ್ತು ಮನ್ನಣೆ.

ಜ್ಞಾನವು ಅಮೂಲ್ಯವಾದ ಸಿರಿಯಾಗಿದ್ದು ಅದನ್ನು ನೀಡುವವನು ಗರುವಾಗಿದ್ದಾನೆ. ಅದರಂತೆ ಮನದ ಅಂಧಕಾರವನ್ನು ಕಳೆಯುವ ಗುರು ಎಂದಿಗೂ ಪೂಜಿಸಲ್ಪಡುವನು. ಗುರುವಾದವನು ಯೋಗ್ಯ ಶಿಷ್ಯರನ್ನು ತಾನೇ ಆಯ್ಕೆ ಮಾಡಿಕೊಳ್ಳುತ್ತಾನೆ. ಇದಕ್ಕೊಂದು ನಿದರ್ಶನ ಈ ರೀತಿಯಾಗಿದೆ.
ನಂದ ಮಹಾರಾಜನು ಚಾಣಕ್ಯನನ್ನು ಪಾಟಲಿಪುತ್ರದಿಂದ ಗಡಿಪಾರು ಮಾಡುತ್ತಾನೆ. ಆಗ ಚಾಣಕ್ಯನು ಸೂಕ್ತ ಶಿಷ್ಯನಿಗಾಗಿ ಹುಡುಕಾಟ ಪ್ರಾರಂಭಿಸುತ್ತಾನೆ. ಇದೇ ಸಂದರ್ಭದಲ್ಲಿ ಹುಡುಗರ ಗುಂಪಿನಲ್ಲಿ ಆಟವಾಡುತ್ತಿದ್ದ ಚಂದ್ರಗುಪ್ತನು ಇವನ ಕಣ್ಣಿಗೆ ಬೀಳುತ್ತಾನೆ. ಆಟದಲ್ಲಿ ಚಂದ್ರಗುಪ್ತನದು ರಾಜನ ಪಾತ್ರ. ಚಾಣಕ್ಯನು ನೇರವಾಗಿ ಚಂದ್ರಗುಪ್ತನ ಬಳಿ ಹೋಗುತ್ತಾನೆ. ನನಗೊಂದು ಉಡುಗೊರೆ ಕೊಡುವೆಯಾ? ಎಂದು ಪ್ರಶ್ನಿಸುತ್ತಾನೆ. ಆಗ ಚಂದ್ರಗುಪ್ತನು ‘ಈ ಹಸುಗಳನ್ನು ದಾನವಾಗಿ ಕೊಡುತ್ತೇನೆ‘ ಎನ್ನುತ್ತಾನೆ. ಆಗ ಚಾಣಕ್ಯನು ‘ನಿನ್ನದಲ್ಲದ ಹಸುಗಳನ್ನು ನನಗೆ ಹೇಗೆ ದಾನವಾಗಿಕೊಡುತ್ತೀಯಾ? ಎಂದು ಪ್ರಶ್ನಿಸುತ್ತಾನೆ.

ಆಗ ಚಂದ್ರಗುಪ್ತನು ಸಾವಧಾನವಾಗಿ ‘ಈ ಹಸುಗಳನ್ನು ರಕ್ಷಿಸಲು ನಿನಗೆ ಸಾಧ್ಯವಾಗದಿದ್ದರೆ ನೀನು ಒಡೆಯನಾಗಲು ಸಾಧ್ಯವಿಲ್ಲ’ ಎಂದು ಹೇಳುತ್ತಾನೆ. ಚಂದ್ರಗುಪ್ತನ ಈ ಮಾತುಗಳು ಚಾಣಕ್ಯನಿಗೆ ತುಂಬ ಆನಂದ ತರುತ್ತವೆ. ತಾನು ಹಿಡಿದ ಕೆಲಸವನ್ನು ಈತ ಸಾಧಿಸಬಲ್ಲ ಎಂಬ ಭರವಸೆ ಮೂಡುತ್ತದೆ. ನಂತರ ಚಂದ್ರಗುಪ್ತನು ಪಾಟಲಿಪುತ್ರವನ್ನು ಗೆಲ್ಲುತ್ತಾನೆ. ಹೀಗೆ ಗುರು ಶಿಷ್ಯರ ಸಂಬಂಧ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ಉಳಿಯುತ್ತದೆ.

ಇಂದು ಸಮಾಜ ವಿಚಿತ್ರ ರೀತಿಯಲ್ಲಿ ಬದಲಾಗುತ್ತಿದೆ. ಗುರುಗಳ ಮೇಲಿಗ ಗೌರವ ಮೊದಲಿನಂತಿಲ್ಲ. ಇದಕ್ಕೆ ಪೋಷಕರು, ಸಾಮಾಜಿಕ ವ್ಯವಸ್ಥೆ, ಮಾಧ್ಯಮಗಳು ಕಾರಣವಾಗಿವೆ.ಅಲ್ಲದೇ ಶಿಕ್ಷಕರೂ ಸಹ ಹಲವೆಡೆ ದಾರಿ ತಪ್ಪುತ್ತಿದ್ದಾರೆ. ಹೀಗಾಗಿ ನಮ್ಮ ಸಾಮಾಜಿಕ ತಳಹದಿಯೇ ಅಲುಗಾಡುತ್ತಿದೆಯೇನೋ ಎಂದೆನಿಸಹತ್ತಿದೆ.
ನಮಗೆ ಶಾಲೆ, ಕಾಲೇಜುಗಳಲ್ಲಿ ಜ್ಞಾನದ ಜೋಳಿಗೆ ತುಂಬಿದ ಗುರುಗಳು ಅಲ್ಲಿಯೇ ಉಳಿಯುವರು. ಆದರೆ ನಮ್ಮೊಂದಿಗೆ ಅವರು ಹೇಳಿಕೊಟ್ಟ ಮಾರ್ಗದರ್ಶನ, ಅಮೂಲ್ಯ ಸಲಹೆಗಳು ನಿರಂತರವಾಗಿ ಸಾಗಿ ಬರುವವು. ಏನೇ ಆದರೂ ಜ್ಞಾನ ನೀಡಿದ ಗುರುವಿನ ಋಣ ತೀರಿಸುವುದು ಅಸಾಧ್ಯದ ಮಾತು. ನಾವು ಎಷ್ಟೇ ಬೆಳೆದರೂ ನಮ್ಮ ಗುರುಗಳಿಗೆ ಶಿಷ್ಯರೇ, ಒಳ್ಳೆಯ ಸಾಧನೆ ಮಾಡಿದ ಶಿಷ್ಯನ ಕುರಿತು ಹೆಮ್ಮೆ ಇರುವಷ್ಟೇ, ಕೆಡುಕು ಮಾಡಿ ಜೀವನವನ್ನು ಹಾಳು ಮಾಡಿಕೊಂಡ ಶಿಷ್ಯನ ಕುರಿತು ಬೇಸರ ಹಾಗೂ ಕರುಣೆಭಾವನೆ ಗುರುಗಳಲ್ಲಿರುತ್ತದೆ.

ಶ್ರೀ.ಎಂ.ಎಚ್.ಮೊಕಾಶಿ,


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
Aziz
Aziz
5 years ago

Good Article sir,

shaheen
shaheen
5 years ago

Good Atricle Bro…!

Asif
Asif
5 years ago

Excellent

Irfan sanglikar
Irfan sanglikar
5 years ago

Nice article

Arati
Arati
5 years ago

Sir,
your article is good.
“never stop learning, Because life never stops teaching”.

5
0
Would love your thoughts, please comment.x
()
x