ಗುರುವೆಂದರೆ..ಇವರೇ..!!: ಉಮೇಶ ದೇಸಾಯಿ

  umesh-desai

ಇತ್ತೀಚೆಗೆ ಸಂಧ್ಯಾರಾಣಿ ತಾವು ಗೋಪಾಲ ವಾಜಪೇಯಿಯವರನ್ನು ಮೊದಲಬಾರಿ ಭೇಟಿಯಾದಾಗಿನ ಸನ್ನಿವೇಶ ಹೇಳುತ್ತಿದ್ದರು. ಅವರು ಮುಂದುವರೆಸುತ್ತ ಹೇಗೆ ಒಬ್ಬ ಕವಿ ತಾನೇ ಗೀತೆಗಳ ರಚಿಸಿದರೂ ಅದರ ಹಕ್ಕನ್ನು ಅನುಭವಿಸಲಾಗದ ಸಂಕಟವನ್ನು ಹೇಗೆ ಅನುಭವಿಸಿರಬಹುದು ಎಂದು ಹೇಳುತ್ತಿದ್ದರು. ಅದ್ಭುತ ಅನ್ನುವ ಸಾಹಿತ್ಯ ಹಾಡುಗಳ ಬರೆದರೂ ಇದು ನನ್ನದು ಅಂತ ಹೇಳಿಕೊಳ್ಳಲಾಗದ ವಿಚಿತ್ರ ಪರಿಸ್ಥಿತಿ ಗುರುಗಳಾದ ಗೋಪಾಲ ವಾಜಪೇಯಿ ಅನುಭವಿಸಿದರು. ಅದು ಆಗಿದ್ದು ನಾಗಮಂಡಲ ನಾಟಕ/ಸಿನೇಮಾಗೆ ಸಂಬಂಧಿತವಾಗಿ. ಶಾಮರಾಯರ ಕಣ್ಣು/ಕಿವಿ ತಪ್ಪಿಸಿ ಬರೆಯುವ ಪರಿಸ್ಥಿತಿ..ಇಂದಿಗೂ ನಾಗಮಂಡಲದ ಹಾಧು ಬರೆದವರು "ಗೋಪಾಲ ಯಾಜ್ನಿಕ" ಅಂತಾನೆ ತಿಳಿದವರು ಅದೆಷ್ಟೋ ಜನ. ಆದರೆ ಗುರುಗಳು ಈ ನೋವನ್ನೂ ಮೆಟ್ಟಿನಿಂತು ಮೆರೆದ ಪರಿ ಇದೆಯಲ್ಲ ಅದು ಶ್ಲಾಘನೀಯ..!

ಹಾಗೆ ನೋಡಿದರೆ ಗುರುಗಳಿಗೆ ನೋವಿನ ನೆಂಟಸ್ತಿಕೆ ಅವರು ಸಣ್ಣವರಿದ್ದಾಗಿನಿಂದಲೇ ಸುರು ಆಗಿತ್ತು. ತಂದೆಯ ಆಶ್ರಯ ಕಳೆದುಕೊಂಡು ಸೋದರಮಾವಂದಿರ ಹಂಗಿನಲ್ಲಿ ಬೆಳೆದವರು. ಆದರೆ ನೆನಪು ಅವರು ದಾಖಲಿಸಹೊರಟಾಗ ಎಲ್ಲಿಯೂ ತಾವು ಪಟ್ಟ ಬವಣೆಯ ಬಗ್ಗೆ ಹೇಳಿಕೊಳ್ಳದೇ ಅವರ ಮನೆಯಲ್ಲಿ ಇರುವಾಗ ತಾವು ಭೇಟಿಯಾದ ಅಪರೂಪದ ಕವಿ/ಹಿರಿಯರ ಒಡನಾಟ ಹೇಗೆ ಸಿಕ್ಕಿತು ಅದರಿಂದ ತಮಗಾದ ಲಾಭ ಎಂತಹುದು ಎಂಬ ಬಗ್ಗೆ ಮಾತ್ರ ಅವರು ಹೇಳುತ್ತಾರೆ. ತಾವು ತಮ್ಮಸೋದರಮಾವನ ಹೇಳಿಕೆ ಮೇರೆಗೆ ಡಿವಿಜಿ ಅವರನ್ನು ಮೊದಲಿಗೆ ಕಂಡಿದ್ದು ಅವರು ತಮಗೆ "ವಾಜಪೇಯಿ" ಪದದ ಅರ್ಥ ಹೇಳಿದ್ದು ಇತ್ಯಾದಿ ಗುರುಗಳು ಹೇಳುವಾಗ ಸುಮ್ಮನೇ ಕುಳಿತು ಅವರ ಅಂಬೋಣದಲ್ಲಿ ಕರಗಿಬಿಡುವ ಮನಸ್ಸಾಗುತ್ತಿತ್ತು. ನೋವಿನಲೂ ನಲಿವಿದೆ ನೆನಪಿನಲಿ ನವನೀತವಿದೆ ಅದು ಹುಡುಕು ಅಂತ ಅವರು ಬಾಯಿತೆಗೆದು ಹೇಳದಿದ್ದರೂ ಅದು ಕೇಳಿದವರಿಗೆ ಆ ತತ್ವ ಪಟಾಯಿಸುತ್ತಿತ್ತು.

ಗುರುಗಳು ಹುಬ್ಬಳ್ಳಿಯವರೇ..ಹಾಗೆನೋಡಿದರೆ ಅವರ ಒಂದು ಕಾಲದ ಬಾಸ್ ಮಹಿಷಿ ಅವರು ನಮ್ಮ ಕುಟುಂಬದ ಮಿತ್ರರು. ಮಹಿಷಿ ಅವರಿಗೆ ಭೇಟಿಯಗಲು ಅನೇಕ ಸಲ ಸಂಯುಕ್ತ ಕರ್ನಾಟಕ ಕಚೇರಿಗೆ ಹೋಗುತ್ತಿದ್ದೆ. ಅವರ ಬಗ್ಗೆ ಏನೂ ಗೊತ್ತಿರಲಿಲ್ಲ. ಅವರ ಹೆಸರು ಆಗಾಗ ಸಂಯುಕ್ತಕರ್ನಾಟಕದಲ್ಲಿ ನೋಡುತ್ತಿದ್ದೆ..ಅಂತೆಯೇ ಧಾರವಾಡದ ರೇಡಿಯೋದಲ್ಲಿ ನಾಟಕ ಕೇಳುವಾಗ "ಮನೆಮನೆಯಲ್ಲಿ" ಎಂಬ ಜನಜನಿತ ಕಾರ್ಯಕ್ರಮದ ಜೊತೆ ತಳುಕು ಹಾಕಿಕೊಂಡಿತ್ತು. ಮೊದಲಬಾರಿ ಅವರನ್ನು ನೋಡಿದ್ದು ಅವರು ಹುಬ್ಬಳ್ಳಿಯ ಸವಾಯಿಗಂಧರ್ವ ಹಾಲನಲ್ಲಿ "ತಾಮ್ರಪತ್ರ"ದ ತಿರುಮಲರಾಯನನ್ನು ತಮ್ಮ ಮೈಮೇಲೆ ಆವಾಹಿಸಿಕೊಂಡಾಗ..! ಗುರುಗಳು ಆ ಪಾತ್ರಕ್ಕೆ ಒದಗಿಸಿದ ನ್ಯಾಯ ಅವರ ಆ ತಲ್ಲೀನತೆಯ ಅಭಿನಯ ಇನ್ನೂ ಕಣ್ಣಮುಂದೆ ಇದೆ. ಆದರೇನು ನಾನು ಅದೇ ಇನ್ನೂ ಜೀವನರಂಗದಲ್ಲಿ ಕಾಲಿಡುತ್ತಿದ್ದ ಎಳಸು ಅವರೋ ಆಗಲೇ ಎತ್ತರದಲ್ಲಿರುವವರು..ಭೇಟಿಯಾಗಿ ಅಭಿನಂದಿಸುವ ಆಸೆ ಹಾಗೆಯೇ ಉಳಿಯಿತು. 

ಮುಂದೆ ಈ ಫೇಸಬುಕ್ಕಿನಲ್ಲಿ ಅಕಸ್ಮಾತಾಗಿ ಸಿಕ್ಕರು ಅವರು. ಅವರ ಊರು ಪುಲಿಗೆರೆ..ನನ್ನ ಅತ್ತೆಯ ತವರುಮನೆಯೂ ಅದೇ. ಒಮ್ಮೆ ಫೇಸಬುಕ್ಕಿನಚಾಟ್ ನಲ್ಲಿ ಅವರು ಸಿಕ್ಕಾಗ ನಮ್ಮ ಪೂರ್ವಾಪರ ಹಂಚಿಕೊಂಡಾಗ ಗುರುಗಳು ನಮ್ಮ ಅತ್ತೆಯವರಿಗೆ ವಾವೆಯಲ್ಲಿ ಸೋದರ ಆಗಬೇಕು ಅನ್ನುವ ಸಂಗತಿ ಹೊರಬಿತ್ತು..! ಇದೇ ಸಂಬಂಧ ಮುಂದುವರೆಸಿ ಅವರ ಜೊತೆ ಸ್ನೇಹ ಕುದುರಿತು ಭದ್ರವಾಯಿತು ಕೂಡ..! ಹೊಸಪೀಳಿಗೆಯ ಹರಟೆಕಟ್ಟೆ ಈ ಫೇಸಬುಕ್ಕು..ಅದರಲ್ಲಿ ಅವರು ಹೊಂದಿಕೊಂಡ ರೀತಿ ಅಚ್ಚರಿ ಮೂಡಿಸುವಷ್ಟು ರಮ್ಯತೆಯಿಂದ ಕೂಡಿತ್ತು. ಅವರ ಮಿತ್ರವಲಯ ದೊಡ್ಡದು .ಪ್ರತಿಯೊಬ್ಬರ ನೋವು ನಲಿವುಗಳಲ್ಲಿ ಗುರುಗಳು ಭಾಗವಹಿಸುತ್ತಿದ್ದರೀತಿ ಅನುಕರಣೀಯ ವಾಗಿತ್ತು. ಸ್ವತಃ ಅವರೊಡನೆ ಇಂತಹ ಅನೇಕ ಸಂಧರ್ಭಗಳಲ್ಲಿ ನಾನೂ ಭಾಗಿಯಾಗಿದ್ದೆ. ನೋವಿಗೆ ಅವರು ಸಾಂತ್ವನ ಹೇಳುತ್ತಿದ್ದ ರೀತಿ ಒಬ್ಬ ಸಂತನ ಉಪದೇಶದಂತಿರದೆ ಆತ್ಮೀಯ ಗೆಳೆಯ ಹೆಗಲಮೇಲೆ ಕೈಹಾಕಿ ಸಾಂತ್ವನ ಹೇಳಿದಂತಿರುತ್ತಿತ್ತು. ನನ್ನ ಅನೇಕ ಲೇಖನಗಳಿಗೆ, ಕವಿತೆಗಳಿಗೆ, ಸ್ಟೇಟಸ್ ಗಳಿಗೆ ಅವರು ಪ್ರತಿಕ್ರಿಯಿಸುತ್ತಿದ್ದರು. ಕೆಲವೊಮ್ಮೆ ನಾನು "ಗುರುಗಳ ಹೆಂಗ ಅದ ಓದ್ರಿ.." ಅಂದಾಗ ತಮ್ಮ ಮುಕ್ತ ಅಭಿಪ್ರಾಯ ಅವರು ಹೇಳುತ್ತಿದ್ದರು.ಒಂದು ಮೆಲುಕುಹಾಕಲೇ ಬೇಕು, ಅದು ಹುಬ್ಬಳ್ಳಿಯ ದುರ್ಗದಬೈಲಿನ ಮೇಲೆ ನಾನೊಂದು ಲೇಖನ ಬರೆದು ನನ್ನ ಬ್ಲಾಗಿಗೆ ಹಾಕಿಕೊಂಡಿದ್ದೆ. ಅದನ್ನು ಓದಿ ಮೆಚ್ಚಿ ತಮ್ಮ ಹುಬ್ಬಳ್ಳಿಯನೆನಪುಗಳನ್ನು ಪ್ರತಿಕ್ರಿಯೆಯ ರೂಪದಲ್ಲಿ ಹಂಚಿಕೊಂಡರು. ಅದು ಭಾರೀ ಛಂದ ಇತ್ತು..ಇದನ್ನು ಬ್ಲಾಗಿಗೆ ಬಳಸಿಕೊಳ್ಳುವ ಉದ್ದೇಶದಿಂದ ಅವರ ಅನುಮತಿ ಕೇಳಿದೆ..ಅವರು ಖುಶಿಯಿಂದ ಒಪ್ಪಿಗೆ ಕೊಟ್ಟಿದ್ದರು. ಹಾಗೆಯೇ ನಾನು ತಪ್ಪು ಮಾಡಿದಾಗ, ಕವಿತೆಯಲ್ಲಿ ಲಾಲಿತ್ಯ ಇಲ್ಲದಿದ್ದಾಗ ಅವರು ನೇರವಾಗಿ ಹೇಳುತ್ತಿದ್ದರು. ಅಂತೆಯೇ ನನ್ನ ಕೆಲವು ಸ್ಟೇಟಸ್ ವಿವಾದರೂಪಿ ಇದ್ದರೆ ಕೂಡಲೇ ಅವನ್ನು ತೆಗೆದುಹಾಕುವಂತೆ ಫೋನ ಮಾಡಿ ಕೇಳಿಕೊಳ್ಳುತ್ತಿದ್ದರು. ಅವರೊಂಥರಾ ಅಜಾತಶತ್ರು  ಗುಂಪುಗಳಿಂದ ದೂರ ಎಲ್ಲರೂ ಅವರಿಗೆ ಬೇಕು ಅವರನ್ನು ದ್ವೇಷಿಸುವವರು ಇಲ್ಲವೇ ಇಲ್ಲ ಅಂತ ಹೇಳಬಹುದು..! ಫೇಸಬುಕ್ ನಂತಹ ಸಂತೆಯಲೂ ಅವರು ಕಬೀರರಂತೆ ನಿಂತುಕೊಂಡರು..!!

ಅವರು ಬರೆದ ಹಾಡು, ನಾಟಕ ಅದರಲ್ಲಿ ಬಳಸಿದ ಧಾರವಾಡಿ ಗಂಡು ಭಾಶೆ ಅಪ್ರತಿಮವಾಗಿದ್ದವು. ಜಿ ಎನ್ ಮೋಹನ ಹೇಳಿದ ಹಾಗೆ "ಕಿಂಗ ಲಿಯರ ಶೇಕ್ಸಪಿಯರ ಬರೆದನೋ ಅಥವಾ ಗೋಪಾಲ ವಾಜಪೇಯಿ ಬರೆದಿದ್ದನ್ನು ಶೇಕ್ಸಪಿಯರ ಎತ್ತಿಕೊಂಡನೋ ಎನ್ನುವ ಸಂಶಯ ಬರುತ್ತದೆ..". ಇದು ಅವರು ರೂಪಾಂತರಿಸಿದ ನಂದ ಭೂಪತಿಯ ಬಗ್ಗೆ ಬರೆದಿದ್ದು. ಈ ನಾಟಕದ ತುಂಬ ಹರಿದಾಡಿದ್ದು ಬಯಲು ಸೀಮೆಯ ಗಂಡುಭಾಶೆ. ಅಂತೆಯೆ ಭೀಷ್ಮ ಸಹಾನಿಯ ಕಬೀರನನ್ನು ಎಳೆತಂದು ನಮ್ಮ ಸಂತೆಯಲ್ಲಿ ನಿಲ್ಲಿಸಿದ ಪರಿನೂ ಸುಂದರ. ಕಬೀರನ ದೋಹೆಗಳ ಅನುವಾದವಂತೂ ಬಲು ಅಪರೂಪ..! 

"ಪುರಾಣ ಓದಿ ಓದಿ ಸತ್ತಿತೋ ಜಗವೆಲ್ಲ..
ಪಂಡಿತರಾಗಿಲ್ಲ ಯಾರೂ..
ಪಂಡಿತನಾಗುವಿ 'ಪ್ರೇಮ'ವೆಂಬ
ಎರಡೂವರೆ ಅಕ್ಷರ ಓದಿದರೂ…."

ಎಲ್ಲ ಹಾಗೆಯೇ ಇರುತ್ತವೆ ಗುರುಗಳೆ ಈ ಹಗಲುಗಳು ರಾತ್ರಿಗಳು ನಾಳೆಗಳು ಜಗದಲ್ಲಿ ಆದರೇನು ನೀವು ಇನ್ನಿಲ್ಲ ಇದು ಮಾತ್ರ ಕಾಯಂಕೊರತೆ..! ಹೇಳಿ ಗುರುಗಳೇ ನೆನಪುಗಳ ಪಾತ್ರೆ ಕೊಟ್ಟು ಅದರ ಮಧು ಉಣಿಸಿ ಹೋಗುವ ಅಧಿಕಾರ ನಿಮಗ್ಯಾರು ಕೊಟ್ಟರು,,? 

– ಉಮೇಶ ದೇಸಾಯಿ
 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x