ಗುರುರಾಯರು ತಪವ ಗೈದ ಪಂಚಮುಖಿ ಸುಕ್ಷೇತ್ರ: ಹೊರಾ. ಪರಮೇಶ್ ಹೊಡೇನೂರು

ಪವಿತ್ರ ಗಂಗೆ ತುಂಗಭದ್ರಾ ನದಿ   ತೀರದಲ್ಲಿ ಶ್ರೀ ಗುರು ಸಾರ್ವಭೌಮರು ಮಂತ್ರಾಲಯದಲ್ಲಿ ಐಕ್ಯಗೊಂಡ ನಂತರ ಆ ಪುಣ್ಯ ಬೃಂದಾವನ ನಾಡಿನಾದ್ಯಂತ ದೈವಭಕ್ತರ ಪವಿತ್ರ ಯಾತ್ರಾ ಸ್ಥಳವಾಗಿ ಬೆಳೆದು ರಾಯಚೂರು ತಾಲ್ಲೂಕಿನ ಗಿಲ್ಲೇಸೂಗೂರು ಹೋಬಳಿ ವ್ಯಾಪ್ತಿಗೆ ಒಳಪಡುವ ಗಾಣಧಾಳ ಗ್ರಾಮದ ಹೊರ ಭಾಗದಲ್ಲಿ ಅದೇ ಗುರುರಾಯರು 16ನೇ ಶತಮಾನದಲ್ಲಿ ಸುಮಾರು 12 ವರ್ಷಗಳ ಸುದೀರ್ಘ ತಪಸ್ಸು ಮಾಡಿ ಪಂಚಮುಖಿ ಆಂಜನೇಯ ಸ್ವಾಮಿಗಳ ದರ್ಶನ ಭಾಗ್ಯ ಪಡೆದ ಪವಿತ್ರ ಭೂಮಿಯು ಇಂದು 'ಪಂಚಮುಖಿ ಪ್ರಾಣದೇವರ ಗುಡಿ' ಎಂದೇ ಖ್ಯಾತಿ ಹೊಂದಿದೆ. ತುಂಗಾ ನದಿಯ ಆ ಕಡೆ ಮಂತ್ರಾಲಯ, ಈ ಕಡೆ ಪಂಚಮುಖಿ ಕ್ಷೇತ್ರಗಳು ತಮ್ಮದೇ ದೈವಿಕ ಪ್ರಭಾವಳಿಯಿಂದ ಆಂಧ್ರ ಹಾಗೂ ಕರ್ನಾಟಕ ಜನತೆಯ ನಡುವೆ ಭಕ್ತಿ ರಸದ ಭಾವೈಕ್ಯ ಹೊಂದಿ ಉತ್ತಮ ಸೌಹಾರ್ದ ಸಂಬಂಧದ ಕೊಂಡಿಯಾಗಿ ನಾಡಿನ ಪವಿತ್ರ ಕ್ಷೇತ್ರಗಳಾಗಿ ಹೆಸರು ಪಡೆದಿವೆ. 

ರಾಯಚೂರು – ಮಂತ್ರಾಲಯಗಳ ನಡುವೆ 29 ಕಿ. ಮೀ. ಗಳ ಅಂತರದಲ್ಲಿರುವ ಗಿಲ್ಲೇಸೂಗೂರಿಗೆ ಬಂದರೆ, ಅಲ್ಲಿನ ಮುಖ್ಯ ವೃತ್ತದಲ್ಲಿ ಪೂರ್ವಾಭಿಮುಖವಾಗಿ ನಿಂತಿರುವ ಪಂಚಮುಖಿ ಮುಖ್ಯ ಕಮಾನು ಭಕ್ತರನ್ನು ಸ್ವಾಗತಿಸುತ್ತದೆ. ಅಲ್ಲಿಂದ 6 ಕಿ. ಮೀ. ಕ್ರಮಿಸಿದರೆ ಸಾಕು ಪಂಚಮುಖಿ ಪ್ರಾಣದೇವರ ಗುಡಿಯ ದರ್ಶನವಾಗುತ್ತದೆ. 

ಶ್ರೀ ಕ್ಷೇತ್ರವು ಸುತ್ತಮುತ್ತ ನೈಸರ್ಗಿಕ ಸಿರಿವಂತಿಕೆಯನ್ನು ಹೊಂದಿದ್ದು, ಮಲೆನಾಡ ಮೈಸಿರಿಯಂತೆ ಹಸಿರಿನಿಂದ ಕಂಗೊಳಿಸುತ್ತದೆ. ದೈವಿಕ ಹಿನ್ನೆಲೆಯಿರುವ ಕಾರಣದಿಂದಲೇ ಈ ಪ್ರಾಂತ್ಯದ ಸುತ್ತಮುತ್ತಲೂ ಪ್ರತಿ ವರ್ಷ ಮಳೆ ಬೆಳೆ ಹುಲುಸಾಗೆಯೇ ಆಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. 

ಪೌರಾಣಿಕ ಹಿನ್ನಲೆ : 

ಪುರಾಣ ಯುಗದಲ್ಲಿ ಪಾತಾಳ ಲಂಕಾಧಿಪತಿಯಾಗಿದ್ದ ಮಹಿರಾವಣನ ಸಂಹಾರಕ್ಕಾಗಿ ಹನುಮಂತನು ಐದು ಮುಖಗಳ ಅವತಾರ ಎತ್ತಬೇಕಾಯಿತಂತೆ. ಏಕೆಂದರೆ ಮಹಿರಾವಣೇಶ್ವರನ ಪ್ರಾಣವು ಐದು ದುಂಬಿಗಳಲ್ಲಿ ಅಡಕವಾಗಿದ್ದು ಆ ಐದೂ ದುಂಬಿಗಳನ್ನು ಏಕಕಾಲಕ್ಕೆ ಸಂಹರಿಸಿದಾಗ ಮಾತ್ರ ಮಹಿರಾವಣನ ಸಂಹಾರ ಸಾಧ್ಯವೆಂದು ತಿಳಿದ ಆಂಜನೇಯ ಸ್ವಾಮಿಯು ಬಹುರೂಪಿಯಾಗಿ ವರಾಹ, ಗರುಡ, ನರಸಿಂಹ, ಹಯಗ್ರೀವ, ಭೀಮರಾಯ ಎಂಬ ಅವತಾರವನೆತ್ತಿ, ಬ್ರಹ್ಮಾಂಡದ ಐದೂ ದಿಕ್ಕುಗಳಲ್ಲಿ ಹಾರಿ ಹೋಗಿದ್ದ ದುಂಬಿಗಳನ್ನು ಒಂದೇ ಉಸಿರಿನಲ್ಲಿ ಸೆಳೆದು ತನ್ನ ದೇಹದೊಳಕ್ಕೆ ಎಳೆದುಕೊಂಡು ಐದು ದುಂಬಿಗಳ ಪ್ರಾಣಗಳನ್ನು ಒಂದೇ ಸಾರಿಗೆ ತೆಗೆಯುವ ಮೂಲಕ ರಾಕ್ಷಸ ಮಹಿರಾವಣನ್ನು ಸಂಹರಿಸಿ ಸೀತಾ ರಾಮ ಲಕ್ಷ್ಮಣರನ್ನು ಬಿಡಿಸಿ ಕರೆದುಕೊಂಡು ಬಂದ ಮಹಾ ಧೀಮಂತ ಈ ಹನುಮಂತ ಎಂಬ ಪುರಾಣ ಕಥೆ ಇದೆ. ದುಷ್ಟ ಸಂಹಾರಕ್ಕಾಗಿಯೇ ಪಂಚಮುಖಿಯಾಗಿ ಅವತಾರವೆತ್ತಿದ ಶ್ರೀ ಆಂಜನೇಯ ಸ್ವಾಮಿಯು ಪಂಚಮುಖಿ ಪ್ರಾಣದೇವರಾಗಿ ಗುರುರಾಯರಿಗೂ ದರ್ಶನ ನೀಡಿದ ಸ್ಥಳ ಪವಿತ್ರವೆನಿಸಿದೆ. 

ಈ ಐದೂ ಮುಖ ಮುದ್ರೆಗಳು ಬ್ರಹ್ಮಾಂಡದ ಅಸ್ತಿತ್ವಕ್ಕೆ ಕಾರಣವಾದ ಪಂಚಭೂತಗಳನ್ನು ಪ್ರತಿನಿಧಿಸುತ್ತವೆ. ತಾನು ಪಂಚಮುಖಿಯಾಗಿ ರಾಯರಿಗೆ ದರ್ಶನ ನೀಡುದುದರ ಸಂಕೇತವಾಗಿ ಅವರು ತಪಸ್ಸು ಗೈದ ಮೃದು ಬಂಡೆಯ ಮೇಲೆ ಒಡಮೂಡಿರುವುದಾಗಿಯೂ, ಅದನ್ನು ಪ್ರತಿಷ್ಠಾಪಿಸಿ ಗುಡಿ ನಿರ್ಮಾಣ ಮಾಡಿ, ಪೂಜಿಸಬೇಕೆಂದು ಆಂಜನೇಯ ಸ್ವಾಮಿಯ ಮೂಲ ಅರ್ಚಕರಾಗಿದ್ದ ಶ್ರೀ ಅನಂತಾಚಾರ್ಯರಿಗೆ ಅಪ್ಪಣೆ ಮಾಡಿದ್ದರೆಂದು ಅವರ ವಂಶದ ಈಗಿನ ಪ್ರಧಾನ ಅರ್ಚಕರಾದ ಶ್ರೀ ಶಾಮಾಚಾರ್ಯರವರು ಹೇಳುತ್ತಾರೆ. 

ಪ್ರತಿ ಶನಿವಾರ, ಮಂಗಳವಾರಗಳಂದು ವಿಶೇಷ ಪೂಜೆಗಳು ನಡೆಯುವುದರಿಂದ ಭಕ್ತರ ಸಂಖ್ಯೆ ಅಧಿಕವಾಗಿರುತ್ತದೆ. ಅಲ್ಲದೆ ಪ್ರತಿ ಅಮವಾಸ್ಯೆಯಂದು ರಥೋತ್ಸವವೂ ಜರುಗುತ್ತದೆ. ಪ್ರತಿ ಶನಿವಾರದ ಪೂಜೆಯಂದು ದೇವರಿಗೆ ಸ್ವರ್ಣವರ್ಣದ ಕವಚ ಧರಿಸಿ ಸೇವೆ ಗೈಯ್ಯಲಾಗುತ್ತದೆ. ವೈಶಾಖ, ಶ್ರಾವಣ ಮಾಸಗಳಲ್ಲಿ ಮದುವೆ, ಕೇಶ ಮುಂಡನ, ಹರಕೆ ಮುಂತಾದ ಶುಭ ಕಾರ್ಯಗಳು ನಡೆಯುತ್ತವೆ. ಬರುವ ಭಕ್ತರಿಗೆ ಕುಡಿಯುವ ನೀರಿಗಾಗಿ,ವಿಶ್ರಾಂತಿಗಾಗಿ ಅಗತ್ಯ ಸೌಕರ್ಯ ಒದಗಿಸಲಾಗಿದೆ. ದೇವಾಲಯದ ಉತ್ತರ ದಿಕ್ಕಿನಲ್ಲಿ ಕ್ಷೇತ್ರದ ಅಧಿದೇವತೆಯಾದ ಎರಕಲಾಂಬೆಯ ಗುಡಿ ಇದೆ. ದಕ್ಷಿಣ ಭಾಗದಲ್ಲಿ ಉತ್ಸವ ಮಂಟಪಗಳು, ಪಶ್ಚಿಮದಲ್ಲಿ ಪುರಾಣ ಕಾಲದ ನಿಸರ್ಗ ನಿರ್ಮಿತವಾದ ಶಿಲಾ ವಿಮಾನವಿದ್ದು, ಸ್ವಾಮಿಯು ವಿರಮಿಸುವ ಪವಿತ್ರ ಶಿಲೆಯ ಹಾಸಿಗೆ ದಿಂಬುಗಳೂ ಇವೆ. ಪಾತಾಳ ಲಂಕೆಗೆ ಮಾರ್ಗ ತೋರಿಸುವ ಗುಹೆಯೂ ಇರುವುದಾಗಿ ಸಮಿತಿಯ ಸದಸ್ಯರಾದ ಶ್ರೀನಿವಾಸಾಚಾರ್ಯ ಹೇಳುತ್ತಾರೆ. 

ಕರ್ನಾಟಕ – ಆಂಧ್ರ ರಾಜ್ಯಗಳಿಂದ ಬರುವ ದೈವ ಭಕ್ತರು ಅಮವಾಸ್ಯೆಯಂದು ಅತಿ ಹೆಚ್ಚಾಗಿ ಸೇರುತ್ತಾರೆ. ಹಣ್ಣು ಕಾಯಿ ತುಳಸೀ ಹಾರಗಳನ್ನು ಸಮರ್ಪಿಸಿ ಪುನೀತರಾಗುತ್ತಾರೆ. ದೇಗುಲದ ಪ್ರಾಂಗಣದಲ್ಲಿ ಭಜನೆ, ಶ್ರೀರಾಮನಾಮಾವಳಿಯ ಮೂಲಕ ಸ್ವಾಮಿಯ ಸೇವೆ ಗೈಯುತ್ತಾರೆ. ಅಂದು ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿರುತ್ತಿದ್ದು ಜನ ಜಾತ್ರೆಯೇ ಸೇರುತ್ತದೆ. ಆ ದಿನಗಳಲ್ಲಿ ಅಂಗಡಿ ಹೋಟೆಲ್ ಗಳಲ್ಲಿ ವ್ಯಾಪಾರ ಭರ್ಜರಿಯಾಗಿ ನಡೆಯುತ್ತದೆ. ಹೊಸ ವಾಹನಗಳಿಗಾಗಿ ಇಲ್ಲಿ ವಿಶೇಷ ಪೂಜೆ ಏರ್ಪಡುತ್ತದೆ. 

ಪ್ರಾಣದೇವರ ಪಾದುಕೆಗಳ ಮಹತ್ವ : ದೇವಸ್ಥಾನದ ಪೂರ್ವಭಾಗದ ಮಂಟಪಗಳಲ್ಲಿ ಪಂಚಮುಖಿ ಪ್ರಾಣದೇವರ ವಿಶೇಷ ಪಾದುಕೆಗಳನ್ನು ಪ್ರತಿಷ್ಠಾಪಿಸಲಾಗಿದೆ. ಇವುಗಳನ್ನು ಪ್ರತಿ ಐದು ವರ್ಷಗಳಿಗೊಮ್ಮೆ ಪುನರ್ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಪಾದುಕೆಗಳಲ್ಲಿ ಧೂಳು, ಕಲ್ಲು ಮುಳ್ಳುಗಳು ಅಂಟಿಕೊಂಡಿದ್ದು ಸವೆತವೂ ಕಂಡುಬರುತ್ತದೆ. ಹಾಗಾಗಿ ಇವುಗಳನ್ನು ಪ್ರತಿದಿನ ಧರಿಸಿ ಸ್ವಾಮಿಯು ಸಂಚಾರ ಮಾಡುತ್ತಿರುತ್ತಾರೆಂಬ ನಂಬಿಕೆ ಭಕ್ತರಲ್ಲಿದೆ. ಐದು ವರ್ಷಗಳಿಗೊಮ್ಮೆ ಹೊಸದಾಗಿ ನಿರ್ಮಿಸುವ ಈ ಪಾದುಕೆಗಳನ್ನು ಸಮೀಪದ ಕೆರೆಬೂದೂರು ಗ್ರಾಮದ 'ಪಾದಾಲವಾರು' ವಂಶಸ್ಥರು ನಿರ್ವಹಿಸುತ್ತಾರೆ. 

 
 
 

ಶ್ರೀಕ್ಷೇತ್ರದ ಮಹಿಮೆಗಳು : 
ಯಾವುದೇ ರೀತಿಯ ನ್ಯೂನತೆ, ರೋಗದಿಂದ ಬಳಲುವವರು ಪ್ರಾಣದೇವರಿಗೆ ಶರಣಾಗಿ ಪೂಜೆಗೈದರೆ ಅವರ ಯಾವುದೇ ಕೋರಿಕೆಗಳು ಈಡೇರುತ್ತವೆ ಎಂಬುದಕ್ಕೆ ಸಾಕಷ್ಟು ನಿದರ್ಶನಗಳನ್ನು ಇಲ್ಲಿನ ಗ್ರಾಮವಾಸಿ ಮುಖಂಡರು ಕೊಡುತ್ತಾರೆ. 

ಚೆಟ್ನಿಹಳ್ಳಿ ಎಂಬ ಗ್ರಾಮದ ಅಳ್ಳಿಂಗಪ್ಪನ ಹೆಂಡತಿ ಗಂಟಲಲ್ಲಿ ಹುಣ್ಣು ಕಾಣಿಸಿಕೊಂಡು ಆದೋನಿ, ಎಮ್ಮಿಗನೂರಿನ ವೈದ್ಯರಿಗೆ ತೋರಿಸಿದರೂ ವಾಸಿಯಾಗದ ಈ ಕ್ಯಾನ್ಸರ್ ಗಡ್ಡೆಯು ಸ್ವಾಮಿಯ ಭಸ್ಮವನ್ನು ಸವರಿದುದಕ್ಕಾಗಿ ವಾಸಿಯಾಯಿತು ಎಂಬುದಾಗಿ ಭಕ್ತರು ಹೇಳುತ್ತಾರೆ. ಹಾಗೆಯೇ ಗಾಣಧಾಳದ ನರಸೋಜಿ ಎಂಬುವವರಿಗೆ ಹೋದ ಕಣ್ಣಿಗೆ ಮರಳಿ  ದೃಷ್ಟಿ ಬಂದುದಾಗಿಯೂ ನಿದರ್ಶನವಿದೆ. ಹೀಗೆಯೇ ಮೂಗರಿಗೆ ಮಾತು, ವಿಕಲರಿಗೆ ಚೇತನ ಮುಂತಾದ ಹಲವಾರು ಪ್ರಸಂಗಗಳು ದೈವ ಭಕ್ತರ ಮನದಲ್ಲಿ ಹಚ್ಚ ಹಸಿರಾಗಿವೆ. 

ಗುಡಿಯಲ್ಲಿ ನಡೆಯುವ ವಿಶೇಷ ಪೂಜಾ ಕಾರ್ಯಕ್ರಮಗಳು : ಪ್ರತಿ ಶನಿವಾರ ಮತ್ತು ಅಮವಾಸ್ಯೆಯ ದಿನಗಳಂದು ನಡೆಯುವ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲದೆ ಆಯಾ ಕಾಲದ ವಿಶೇಷ ದಿನಗಳಂದೂ ವಿಶೇಷ ಪೂಜಾ ಕೈಂಕರ್ಯಗಳು ಈ ಕ್ಷೇತ್ರದಲ್ಲಿ ಜರುಗುತ್ತವೆ. 

ಕಾರ್ತಿಕ ಮಾಸದಲ್ಲಿ ದೀಪೋತ್ಸವವು ಜರುಗುತ್ತದೆ. ಈ ಸಂದರ್ಭದಲ್ಲಿ ಭಕ್ತರು ತಮ್ಮ ತಮ್ಮ ಕುಟುಂಬ ವರ್ಗದವರ, ತಮ್ಮ ಹಿತೈಷಿಗಳಷ್ಟು ಸಂಖ್ಯೆಯ ದೀಪಗಳನ್ನು ಹಚ್ಚುವ ಮೂಲಕ ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಮಾಡಿಕೊಂಡ ಸಂಕಲ್ಪ ಈಡೇರುತ್ತದೆ, ದೀಪ ಬೆಳಗುವಂತೆ ತಮ್ಮ ಬದುಕು ಬೆಳಕಾಗುತ್ತದೆ ಎಂಬುದು ಭಕ್ತರ ವಿಶ್ವಾಸ. 

ಮಾರ್ಗಶಿರ ಮಾಸದ ತ್ರಯೋದಶಿಯ ದಿನದಂದು ಹನುಮದ್ ವ್ರತವು ಏರ್ಪಾಡಾಗುತ್ತದೆ. ಈ ಸಂದರ್ಭದಲ್ಲಿ ಹನುಮನ ದಾರಗಳನ್ನು ವಿಶೇಷವಾಗಿ ಮಂತ್ರಿಸಿ ಭಕ್ತರಿಗೆ ನೀಡಲಾಗುತ್ತದೆ. ಈ ದಾರಗಳನ್ನು ಧರಿಸುವುದರಿಂದ ಯಾವುದೇ ಭೂತ, ಪ್ರೇತಗಳ ಭಯವಿಲ್ಲ ಎಂಬುದಾಗಿ ನಂಬಲಾಗಿದೆ. ಅಲ್ಲದೆ ಈ ದಿನಗಳಲ್ಲಿ ಹರಕೆ ಹೊತ್ತ ಭಕ್ತಾದಿಗಳು ಸಾರ್ವಜನಿಕ ಭಕ್ತರಿಗೆ ಅನ್ನ ಸಂತರ್ಪಣೆಯನ್ನೂ ನಡೆಸಿಕೊಡುತ್ತಾರೆ. 

ಮಾರ್ಗಶಿರ ನವಮಿಯಂದು ಹುಣ್ಣಿಮೆವರೆಗೆ ಲಕ್ಷ ತುಳಸೀ ಅರ್ಚನೆ, ಸಹಸ್ರ ನಾಮ ಸಂಕೀರ್ತನೆ ಹೋಮಗಳನ್ನು ನಡೆಸಲಾಗುತ್ತದೆ. ಈ ತುಳಸೀ ಹೋಮದಿಂದ ಏರ್ಪಟ್ಟ ಧೂಮದಿಂದ ವಾತಾವರಣದ ರೋಗಾಣುಗಳು ನಾಶವಾಗಿ ಪರಿಸರ ಸ್ವಚ್ಛತೆ ಉಂಟಾಗುವುದಲ್ಲದೆ, ಭಕ್ತರು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ವೈಜ್ಞಾನಿಕವಾಗಿಯೂ ವಿಶ್ಲೇಷಿಸಲಾಗಿದೆ. ಪ್ರತಿ ಶನಿವಾರವೂ ಪಂಚಾಮೃತಾಭಿಷೇಕವೂ ಇರುತ್ತದೆ. 

ರಾಮನವಮಿಯಂದು ಅದ್ದೂರಿ ರಥೋತ್ಸವ : ವರ್ಷದ ಅತಿ ವೈಭವವಾದ ಉತ್ಸವವೆಂದರೆ ಚೈತ್ರ ಮಾಸದ ಶುದ್ಧ ನವಮಿಯಂದು 'ಶ್ರೀ ರಾಮನವಮಿ'ಯ ಅಂಗವಾಗಿ ರಥೋತ್ಸವವು ಅದ್ದೂರಿಯಾಗಿ ನಡೆಯುತ್ತದೆ. ಬೇರೆ ಬೇರೆ ಕಾರಣಗಳಿಂದಾಗಿ ದೂರದ ಊರುಗಳಲ್ಲಿ ಗುಳೆ ಹೋಗುವ ಸುತ್ತಮುತ್ತಲ ಗ್ರಾಮದ ಕುಟುಂಬಗಳು ರಾಮ ನವಮಿಯ ಸಂದರ್ಭದಲ್ಲಿ ತಮ್ಮ ಊರುಗಳಿಗೆ ವಾಪಾಸಾಗಿ 'ರಥೋತ್ಸವ'ಕ್ಕಾಗಿ ಸಿದ್ದತೆ ಮಾಡಿಕೊಳ್ಳುತ್ತಾರೆ. ನಾಡಿನೆಲ್ಲಡೆ 'ಯುಗಾದಿ'ಯೇ ಪ್ರಮುಖ ಆಚರಣೆಯ ಹಬ್ಬವಾದರೆ ಈ ಭಾಗದ ಜನರಿಗೆ 'ಯುಗಾದಿ' ಅಷ್ಟು ಪ್ರಾಮುಖ್ಯವಲ್ಲ. ಬದಲಿಗೆ 'ರಾಮನವಮಿ' ಯೇ ಇವರ ಅತ್ಯಂತ ಸಂಭ್ರಮ, ಸಡಗರದ ಮಹಾಚರಣೆಯಾಗಿದೆ. ಸುಣ್ಣ, ಬಣ್ಣ, ಉಡುಗೆ, ತೊಡುಗೆ ಮತ್ತು ಅಡುಗೆಗಳಲ್ಲಿ ಹೊಸ ಉತ್ಸಾಹ ಹುಮ್ಮಸ್ಸಿನಿಂದ ಈ ಹಬ್ಬವನ್ನು ಮಾಡಲಾಗುತ್ತದೆ. 

ಅಷ್ಟಮಿಗೆ ಮೊದಲು ಸಪ್ತಮಿಯ ದಿನ ಗುಡಿಯ ಮೂಲ ಅರ್ಚಕರಾದ ಶ್ರೀ ಅನಂತಾಚಾರ್ಯರ ಪುಣ್ಯತಿಥಿಯ ಆಚರಣೆಯ ನಂತರ ನವಮಿಯ ದಿನದಂದು ಅರ್ಧರಾತ್ರಿ ಗಾಣಧಾಳದಿಂದ ಸ್ವಾಮಿಯ ಮೂರ್ತಿಯನ್ನು ರಥದಲ್ಲಿಟ್ಟು ಮೆರವಣಿಗೆಯಲ್ಲಿ ಮೂಲ ದೇವಸ್ಥಾನಕ್ಕೆ ತರಲಾಗುತ್ತದೆ. ವಿಶೇಷವಾಗಿ ನಿರ್ಮಿಸಲಾದ ರಥವನ್ನು ಮಾವಿನ ಎಲೆಗಳು, ತುಳಸೀ ದಳಗಳು, ಬಿಲ್ವ ಪತ್ರೆ, ಬಗೆ ಬಗೆಯ ಹೂವಿನ ಹಾರಗಳು ಮತ್ತು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿ ಭಕ್ತ ಸಮೂಹದಿಂದ ಬೆರಗು ಮೂಡಿಸುವ ರೀತಿಯಲ್ಲಿ ರಥೋತ್ಸವ ಜರುಗುತ್ತದೆ. ಮೆರವಣಿಗೆ ಸಮಯದಲ್ಲಿ ಭಜನೆಗಳು, ಕೋಲಾಟ, ರಾಮನಾಮ ಸಂಕೀರ್ತನೆಗಳು ನಡೆಯುತ್ತವೆ. ನಯನ ಮನೋಹರವಾದ ಈ ಉತ್ಸವವನ್ನು ನೋಡಿ ಭಕ್ತಿ ಭಾವಪರವಶರಾಗುವ ಭಕ್ತರ ಸಂಖ್ಯೆ ಸರಾಸರಿ 40 ರಿಂದ 50 ಸಾವಿರವನ್ನೂ ಮೀರಿರುತ್ತದೆ. ಆ ದಿನ ಸ್ಥಳಕ್ಕೆ ಆಗಮಿಸುವ ರೈತರ ಎತ್ತಿನ ಗಾಡಿಗಳು, ವಾಹನಗಳು, ಭಕ್ತರಿಂದ ಗಿಜಿಗುಡುತ್ತಿರುತ್ತವೆ. ರಾತ್ರಿಯಿಡೀ ನಡೆಯುವ ಮೆರವಣಿಗೆಯನ್ನು ವೀಕ್ಷಿಸಲು ಎರಡೂ ಕಣ್ಣುಗಳು ಸಾಲದೆಂದು ಭಕ್ತರು ಅಭಿಪ್ರಾಯ ಪಡುತ್ತಾರೆ. 

ಮರ್ಯಾದಾ ಪುರುಷೋತ್ತಮ ಶ್ರೀ ರಾಮನವಮಿಯ ಸಂದರ್ಭದ ದಿನಗಳಲ್ಲಿ ಸುಭಿಕ್ಷತೆಯ ಪ್ರತೀಕವಾಗಿ ನಾಡಿನಲ್ಲಿ ಎಲ್ಲಿಯಾದರೂ ಮಳೆರಾಯನ ಆಗಮನ ಆಗಿಯೇ ತೀರುತ್ತದೆ ಎಂದು ಹೇಳಲಾಗುತ್ತದೆ. 

ಒಟ್ಟಿನಲ್ಲಿ ಪಂಚಮುಖಿ ಕ್ಷೇತ್ರವು ಭಕ್ತರ ಭಾವನೆಗಳನ್ನು ಹುಸಿಗೊಳಿಸದೆ ಮಾಡಿದ ಸಂಕಲ್ಪಗಳು ಬೇಡಿದ ಕೋರಿಕೆಗಳನ್ನು ಈಡೇರಿಸುವ ಆಂಜನೇಯ ಸ್ವಾಮಿಯು ಈ ಭಾಗದ ಜನರಿಗೆ ನಂಬಿದ ಭಕ್ತ ಕೋಟಿಗೆ ಕಲಿಯುಗ ವರದನಾಗಿ ಪ್ರವರ್ಧಮಾನಗೊಳ್ಳುತ್ತಿದೆ. ಭಕ್ತರ ಅಚಲ ನಂಬಿಕೆ ಎಷ್ಟಿದೆ ಎಂದರೆ ಈ ಭಾಗದ ಜನರ ಹೆಸರುಗಳಲ್ಲಿ ಬಹುತೇಕ ಪ್ರಾಣೇಶ, ಭೀಮೇಶ, ಆಂಜನೇಯ, ದುಳ್ಳಯ್ಯ, ನರಸಿಂಹ, ರಾಮೇಶ , ಹನುಮಂತ ಪವನಕುಮಾರ ಮುಂತಾದವುಗಳೇ ಪ್ರತಿ ಕುಟುಂಬದಲ್ಲಿಯೂ ಪುನರಾವರ್ತನೆಯಾಗಿರುವುದನ್ನು ಶಾಲಾ ದಾಖಲಾತಿ ನಿರ್ವಹಿಸುವ ಶಿಕ್ಷಕರು ದೃಢಪಡಿಸುತ್ತಾರೆ. ವಾಯುದೇವ ಸುತನೂ ಚಿರಂಜೀವಿಯೂ ಆದ ಹನುಮಂತನ ಇರುವಿಕೆಯನ್ನು ಈ ಭಾಗದಲ್ಲಿ ಹೆಚ್ಚಾಗಿರುವ ವಾನರ ಸಂತತಿಯಲ್ಲಿಯೂ ಕಂಡು ಕೊಳ್ಳಬಹುದಾಗಿದ್ದು ಇಂತಹ ಸುಕ್ಷೇತ್ರವು ನಮ್ಮ ನೆಲದಲ್ಲಿದೆ ಎಂಬುವುದಕ್ಕೆ ಕನ್ನಡಿಗರೆಲ್ಲಾ ಹೆಮ್ಮೆ ಪಡಬಹುದಾಗಿದೆ. 
                                                    *****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ramesh gabbur
ramesh gabbur
9 years ago

sir lekhana chennagide

1
0
Would love your thoughts, please comment.x
()
x