ಬದುಕ ಪಯಣಕೆ ಬೆಳಕನಿತ್ತಿಹ ಪ್ರಣತಿ ಗುರುವರ್ಯ
ಹುಡುಗು ಮುದ್ದೆಯ ಪ್ರತಿಮೆಯಾಗಿಸಿ ನಿಂತ ಆಚಾರ್ಯ
ಸಕಲವಿದ್ಯೆಯ ಮಳೆಯಗಯ್ದಿಹೆ ಮುನಿಸ ಮೋಡದಲಿ
ಕಷ್ಟ ಸುಡುತಿರೆ, ಜೀವವಳುತಿರೆ ಸಹಿಸಿ ಮೌನದಲಿ
ನಳಿನಿ ಮೇಲಣ ಹನಿಯ ತರದಲಿ ತಪ್ಪ ಮಸ್ತಕದಿ
ಸರಿಸಿ ಹರಿಸಿದೆ ಜ್ಞಾನ ಬೆಳಕನು ತೊಳೆದ ಬುದ್ದಿಯಲಿ |೧|
ಅರಿವಿಗೆ ನಿಲುಕದ ಮಾತುಗಳಲ್ಲಿ ಗುರುವಿನ ನಿಲುವುಗಳೆಷ್ಟಿಹುದೋ
ಕತ್ತಲ ಪಥದಲೂ ಹಾಕುವ ಹೆಜ್ಜೆಯ ತಿದ್ದಿಹ ಬುದ್ದಿಗಳೆಷ್ಟಿಹುದೊ
ಶಿಸ್ತನು ಕಲಿಸಿದೆ, ಬುದ್ದಿಯ ಬೆಳೆಸಿದೆ ಸವಾಯೀಯುತಲೆ ಜಡಮನಕೆ
ತೊಲಗಿಸಿ ಮೌಢ್ಯತೆ, ಮೂಡಿಸಿ ಐಕ್ಯತೆ ನನ್ನನು ತೆರೆದಿಹೆ ಹೊಸತನಕೆ|೨|
ಬಾಳು ಕಷ್ಟವೋ ದೇವನಿಷ್ಟವೋ
ತೊರೆಯಲಾಗದಿದ ಪಡೆದಿಹೆವು
ಕತ್ತಲಟ್ಟಕೋ ನಲಿವ ಸಗ್ಗಕೋ
ನಿನ್ನ ದಾರಿಯಲಿ ನಡೆದಿಹೆವು|೩|
ಹೊರಗಡೆ ಏತಕೆ ಹುಡುಕಲಿ ಬೆಳಕಿಗೆ
ನಿನ್ನ ನೀತಿಯಿರೆ ಎದೆಯೊಳಗೆ
ಕಂಡ ಕೋಪವನು ಮರೆತೆವೆಂದಿಗೋ
ಪ್ರೀತಿ ತುಂಬಿರಲು ನುಡಿಯೊಳಗೆ|೪|
ನಾವೆಲ್ಲಾ ಸಣ್ಣವರಿದ್ದಾಗ ಯಾವುದೇ ಶ್ಲೋಕವನ್ನೋ ಮಂತ್ರವನ್ನೋ ಕಲಿಸುವಾಗ ಶುರು ಮಾಡುತ್ತಿದ್ದುದೇ "ಶ್ರೀ ಗುರುಭ್ಯೋ ನಮಃ" ಅಂತ. ಅಂದ್ರೆ ಗುರುವಿಗೆ/ಗುರುಗಳಿಗೆ ನಮಸ್ಕಾರ ಅಂತ. ಸಂಗೀತಗಾರರಾದ್ರೆ ಗೋಷ್ಠಿಯ ಮೊದಲ ಹಾಡು ಶುರುವಾಗೋದು ಗಣೇಶನ ಸ್ತುತಿಯಿಂದ. ವಿಘ್ನಾಧಿಪ ಗಣಪ ವಿದ್ಯಾಧಿರಾಜನೆಂಬ ನಂಬಿಕೆಯೂ ಇದೆ. ಶಾಲೆಯಲ್ಲಾದರೆ ತಾಯಿ ಶಾರದೆ, ಲೋಕ ಪೂಜಿತೆ, ತೇ ನಮೋಸ್ತು ನಮೋಸ್ತುತೆ ಅಂತಲೋ ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣಿ. ವಿದ್ಯಾರಂಭಂ ಕರಿಷ್ಯಾಮಿ ಸಿದ್ದಿರ್ಭವತಿ ಮೇ ಸದಾ ಅಂತಲೋ ಪ್ರಾರ್ಥನೆ ಹೇಳಿಕೊಟ್ದಿದ್ರು. ನಾಟ್ಯದಲ್ಲಿ ನಟರಾಜನ ನಮಸ್ಕಾರವಾದರೆ , ರೇಖಿಯಲ್ಲಿ ಗುರುವಿಗೆ ನಮನ. ಹೀಗೆ ಒಂದೊಂದರಲ್ಲಿ ಒಂದೊಂದು ಪರಿಯಲ್ಲಿ ವಿದ್ಯೆಯಿತ್ತ ಗುರುವಿಗೆ , ಜ್ನಾನದ ಬೆಳಕನಿತ್ತ ಆಚಾರ್ಯನಿಗೆ ನಮಸ್ಕರಿಸಿಯೇ ಮುಂದೆ ಸಾಗೋದು ನಮ್ಮ ಪರಂಪರೆ.
ಮಗುವಿಗೆ ತಾಯಿಯೇ ಮೊದಲ ಗುರುವಂತೆ. ಮಾತೇ ಇದೆಯಲ್ಲ. ಮನೆಯೆ ಮೊದಲ ಪಾಠಶಾಲೆ. ಜನನಿ ತಾನೇ ಮೊದಲ ಗುರು ಅಂತ. ಹೌದು. ಮಗುವಿನ ಅಂಬೆಗಾಲನ್ನ , ತೊದಲ ನುಡಿಗಳನ್ನು , ಮೊದಲ ಹೆಜ್ಜೆಗಳನ್ನು ಕಂಡು ಖುಷಿಪಡೋ ತಾಯಿಯೇ ಆತನಿಗೆ ಸಂಸ್ಕಾರಗಳನ್ನು, ಭದ್ರ ಬುನಾದಿಯನ್ನೂ ಹಾಕೋದು. ಮೊದಲ ಬಾರಿ ಕೆಟ್ಟ ಪದ ಬಾಯಿಗೆ ಬಂದಾಗ ತಿದ್ದಿದ ತಾಯಿ ಈಗ ಪ್ರತಿ ಹೆಜ್ಜೆಯಲ್ಲಿರದಿದ್ದರೂ ಆಕೆಯ ನುಡಿ, ನೀತಿ ಪ್ರತಿಸಲವೂ ಒಳ್ಳೆಯದನ್ನೇ ನುಡಿಸುತ್ತೆ. ಆಕೆ ಕಲಿಸಿಕೊಟ್ಟ ಹಂಚಿತಿನ್ನೋ ಗುಣ ಮಗು ಮುಂದೆ ಬೆಳೆದು ಒಂಟಿಬುಡುಕನಾಗದಂತೆ ತಡೆಯುತ್ತೆ. ಬಾಲಮಂಗಳ, ಚಂದಾಮಾಮ, ಪಂಚತಂತ್ರ, ದಿನಕ್ಕೊಂದು ಕತೆ ಹೀಗೆ ಹೊಸ ಹೊಸ ಪುಸ್ತಕಗಳ ಕೊಟ್ಟು ಓದೋಕೆ ಪ್ರೇರೇಪಿಸೋ ಆಕೆಯ ಗುಣ ಮುಂದೆ ಒಂದೊಬ್ಬ ಒಳ್ಳೆಯ ಓದುಗನನ್ನು ರೂಪಿಸುತ್ತೆ. ಬಾಲ್ಯದಲ್ಲೇ ಸಾವರ್ಕರ್, ಭಗತ್ ಸಿಂಗ್, ಶಿವಾಜಿ, ತಿಲಕರಂತಹ ದೇಶಭಕ್ತರ ಬಗೆಗಿನ ಪುಸ್ತಕಗಳನ್ನು ಓದಲು ಪ್ರೇರೇಪಿಸೋ ಆಕೆ ಮಕ್ಕಳಲ್ಲಿ ಅವರಿಗರಿವಿಲ್ಲದಂತೆಯೇ ದೇಶಪ್ರೇಮದ ಬೀಜವ ಬಿತ್ತುತ್ತಾಳೆ. ಬಾಲ್ಯದಲ್ಲಿ ಯಾವ ಸಂಸ್ಕಾರಗಳನ್ನೂ ಪಡೆಯದವನು ನಂತರ ಸನ್ನಾಗರೀಕನಾಗಬಾರದೆಂದೇನಿಲ್ಲ. ಆದರೆ ಹೆಚ್ಚಿನವುಗಳ ಆರಂಭ ಬಾಲ್ಯದಲ್ಲೇ. ಮೊನ್ನೆ ನಮ್ಮ ಆಫೀಸಿಗೆ ಸಹೋದ್ಯೋಗಿಗಳ ಮಗಳೊಬ್ಬಳು ಬಂದಿದ್ದಳು. ಮಗಳಂದರೆ ತೀರಾ ದೊಡ್ಡವಳಲ್ಲ. ಒಂದನೇ ಕ್ಲಾಸಷ್ಟೇ. ಚಾಕಲೇಟು ಕೊಟ್ರೆ ಊಹೂಂ. ತಿನ್ನೋಲ್ಲ. ಇದು ಜಂಕ್ ಫುಡ್ಡು. ಜಂಕ್ ಫುಡ್ಡೆಲ್ಲಾ ತಿನ್ನಬಾರದು ಅಂತ ಶಾಲೇಲಿ ಹೇಳಿದಾರೆ ಅಂದ್ಳು. ಓಹ್. ಪರವಾಗಿಲ್ಲ ಗುರು. ಈಗಿನ ಶಾಲೆಗಳಲ್ಲಿ ಏನೇನಲ್ಲ ಹೇಳ್ಕೊಡ್ತಾರೆ ಅಂತ ಖುಷಿಯಾಯ್ತು.! ನಾವಿದ್ದಾಗ ಶಿಸ್ತು, ಸಂಯಮ, ಸಹಬಾಳ್ವೆ, ತಾಳ್ಮೆ, ದೇಶಭಕ್ತಿ, ಪರೋಪಕಾರ, ಸೃಜನಶೀಲತೆಯಂತಹ ಗುಣಗಳ ಕಲಿಸುತ್ತಿದ್ದ ಶಾಲೆಗಳು ಈಗ ಕಾಲಕ್ಕೆ ತಕ್ಕಂತೆ ಬದಲಾಗ್ತಾ ಇದೆ. ಪರವಾಗಿಲ್ವೇ ಅನಿಸ್ತು. ಇಂದು ಕಲಿತ ಮಾತುಗಳು ನಾಳೆಯೂ ನೆನಪಿರುತ್ತೆ ಅಂತಲ್ಲ. ಆದ್ರೆ ಮಕ್ಕಳಲ್ಲಿ ಈ ಜಂಕ್ ಫುಡ್ಡುಗಳ ಬಗ್ಗೆ ಎಳೆ ವಯಸ್ಸಲ್ಲೇ ತಿಳುವಳಿಕೆ ಮೂಡಿದ್ರೆ ಈ ಕೆ.ಎಫ್.ಸಿ, ಮೆಕ್ ಡಿ, ಮತ್ತಿತ್ತರ ವಿದೇಶೀ ಹಾಳು ಮೂಳುಗಳಲ್ಲೇ ನಮ್ಮ ದೇಶದ ಅಮೂಲ್ಯ ದುಡ್ಡು ಹಾಳು ಮಾಡಿ ತಮ್ಮ ಅಮೂಲ್ಯ ಆರೋಗ್ಯವನು ಹಾಳುಮಾಡಿಕೊಳ್ಳೋ ಅದೆಷ್ಟು ಜೀವಗಳು ಕಮ್ಮಿಯಾಗಬಹುದಲ್ಲವೇ ಅನಿಸಿ ಖುಷಿಯಾಯ್ತು.
ಜೀವನದಲ್ಲಿ ಗುರು ಅನ್ನೋದು ಒಬ್ಬೊಬ್ಬರ ದೃಷ್ಠಿಯಲ್ಲಿ ಒಂದೊಂದು. ಕೆಲವರಿಗೆ ಜೀವನವೇ ಗುರುವಾದರೆ ಕೆಲವರಿಗೆ ತಾವು ಕಂಡ ಕೇಳಿದ ಅನುಭವಗಳು ಗುರು. ಕೆಲವರಿಗೆ ತಮ್ಮ ಬದುಕ ಗತಿ , ದಿಶೆ ಬದಲಾಯಿಸಿದ ಶಾಲಾ, ಕಾಲೇಜು, ಪದವಿಯ ಹಲವು ಶಿಕ್ಷಕರು ಮಹಾನ್ ಗುರುಗಳಾದರೆ ಕೆಲವರಿಗೆ ಪ್ರಕೃತಿಯ ಪ್ರತಿ ಕಣವೂ ಒಂದಿಲ್ಲೊಂದು ಪಾಠ ಹೇಳೋ ಗುರು. ಯಾರೊಬ್ಬರೂ ಮೇಲಲ್ಲ.ಕೀಳಲ್ಲ. ಯಾರೊಬ್ಬರನ್ನು ಮರೆಯಲಾಗದಿದ್ದರೂ ಎಲ್ಲರಿಗೂ ದಿನನಿತ್ಯ ಕೃತಜ್ನತೆ ಹೇಳಲಸಾಧ್ಯ. ಅದಕ್ಕೇ ವರ್ಷಕ್ಕೊಂದು ದಿನ. ಶಿಕ್ಷಕರ ದಿನ.. ನಾನು ಇಂದು ನಾನಾಗೋದಕ್ಕೆ ಕಾರಣೀಕರ್ತರಾದ ನನ್ನೆಲ್ಲ ಗುರುಗಳಿಗೆ ಧನ್ಯವಾದ ಹೇಳೋದ್ರಲ್ಲೇ ಏನೋ ಧನ್ಯತೆ ಇಂದು.. ಮತ್ತೊಮ್ಮೆ ಸಿಗೋಣ.
*****
ಜಂಕ್ ಫುಡ್ ತಿನ್ನೋದು ಒಳ್ಳೇದಲ್ಲ
ಅಂತ ಹೇಳಿಕೊಟ್ಟ ಗುರುವಿಗೂಂದು ಸಲಾಂ!
ಎಲ್ಲಾ ಗುರುಗಳು ಇದನ್ನು ಹೇಳಬೇಕು.
ಈಗಿನ ಬದಲಾದ ಕಾಲಕ್ಕೆ ಮಕ್ಕಳಿಗೂ
ಒಬ್ಬ ಡಯಟ್ ಗುರುಗಳು ಇರಬೇಕು.
ಸಾಂಧರ್ಬಿಕವಾದ ಬರಹ, ಚೆನ್ನಾಗಿದೆ ಪ್ರಶಸ್ತಿ.
ಪ್ರಶಸ್ತಿ, ಬರಹ ಚೆನ್ನಾಗಿದೆ. ಒಂದಕ್ಷರ ಕಲಿಸಿದಾತನೂ ಗುರುವೇ. ನಮ್ಮ ಜೀವನದಲ್ಲಿ ಬಂದು ನಮಗೆ ಪಾಠಕಲಿಸಿ ಹೋಗುವ ಗುರುಗಳ ಸಂಖ್ಯೆಯ ಲೆಕ್ಕ ಇಡಲಾಗದು!