ಮಾನವನ ಬದುಕು ಸಾರ್ಥಕ ಆಗಬೇಕಾದರೆ ಅವನು ಏನನ್ನಾದರೂ ಸಾಧಿಸಬೇಕು! ತನ್ನ ಜೀವನದಲ್ಲಿ ಉತ್ತಮವಾದುದನ್ನು ಸಾಧಿಸಿದರೆ ಅವನ ಜೀವನ ಸಾರ್ಥಕವಾಗುತ್ತದೆ. ಅವನಿಗೆ ಸಂತೃಪ್ತಿ ದೊರೆಯುತ್ತದೆ. ಸಾಧನೆಗೆ ಉತ್ತಮ ಸಲಕರಣೆ ಎಂದರೆ ಆರೋಗ್ಯವಂತ ಮನಸ್ಸು, ಸದೃಢ ದೇಹ. ಪ್ರಯುಕ್ತ ಆರೋಗ್ಯವನ್ನು ಕಾಪಾಡಿಕೊಂಡು ದೃಢ ಕಾಯವನ್ನು ಸಂಪಾದಿಸಿ ಸಾಧಿಸಲು ಲಪ್ರಯತ್ನಿಸಿದರೆ ಸಮಾಜದಲ್ಲಿ ಮಾನ ಮನ್ನಣೆಗಗಳು ದೊರೆಯುತ್ತವೆ. ಸಾಧಿಸಬೇಕಾಗಿರುವವನು ಮಾನಸಿಕ ದೈಹಿಕ ಸಾಮರ್ಥ್ಯ ಇರುವಾಗಲೇ ಗುರಿಯನ್ನು ಗುರುತಿಸಿಕೊಂಡು ಸಾಧಿಸಲು ಮುಂದಾಗಬೇಕು!. ಯೋಗ್ಯ ಗುರಿ ನಿರ್ಣಯವಾಗುತ್ತಿದ್ದಂತೆ ಅದನ್ನು ಸಾಧಿಸಲು ಅನೇಕ ದಾರಿಗಳು ಗೋಚರಿಸಲು ಆರಂಭಿಸುತ್ತವೆ. ಅದನ್ನು ತಲುಪಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಯೋಗ್ಯ ದಾರಿಯನ್ನು ತುಳಿಯಬೇಕು. ಗುರಿಯನ್ನೇ ತದೇಕಚಿತ್ತದಿಂದ ನೋಡುತ್ತಾ ದಿಟ್ಟ ದೃಢ ಹೆಜ್ಜೆಗಳ ಇಡುತ್ತಾ ಆ ಕಡೆಗೇ ಸಾಗಬೇಕು. ಗುರಿ ಅಚಲವಾಗಿರದಿದ್ದರೆ ಸಾಗುವ ದಾರಿಯಲ್ಲಿ ಮತ್ತೇನನ್ನೋ ನೋಡಿ ಆಕರ್ಷಿತರಾಗಿ ಗುರಿಯನ್ನೇ ಮರೆಯುವ ಸಾಧ್ಯತೆಗಳಿರುತ್ತವೆ. ಸಾಧಕ ಸಾಗುವ ಮಾರ್ಗದ ಇಕ್ಕೆಲಗಳಲ್ಲೂ ಅನೇಕ ಆಕರ್ಷಣೆಗಳು ಮನಸೆಳೆಯುತ್ತವೆ. ಸಾಧಿಸುವ ಹಾದಿಯಲ್ಲಿ ತಗ್ಗು, ದಿಬ್ಬ, ಗುಂಡಿ – ಗೊಟರು, ಇಳಿಜಾರು, ತಿರುವು, ಹಳ್ಳ, ಕೊಳ್ಳ, ಕೆರೆ, ಕಟ್ಟೆ, ಅಡ್ಡ ಬರುವ ಮೃಗಗಳು ಕೆಲವು ಘಟನೆಗಳು ಸಾಧಕನಿಗೆ ತೊಡಕುಂಟು ಮಾಡುತ್ತವೆ. ಪ್ರಯುಕ್ತ ಸದೃಢ ಕಾಯ, ದೃಢ ಮನಸ್ಸು, ಅಚಲ ಗುರಿ ಇಟ್ಟುಕೊಂಡು ಮುನ್ನುಗ್ಗಬೇಕು!
ವಿವಿಧ ವಾಹನಗಳನ್ನು ಚಲಾಯಿಸುವವರನ್ನು ಡ್ರೈವರ್, ಪೈಲಟ್, ನಾವಿಕ ಅಂತ ಕರೆಯುತ್ತೇವೆ. ಅವರು ಆ ವಾಹನವನ್ನು ಯಾವ ಸ್ಥಳ ತಲುಪಿಸಬೇಕು ಎಂದಿರುತ್ತದೋ ಆ ಸ್ಥಳವನ್ನು ತಲುಪಿಸುತ್ತಾರೆ. ಮಾರ್ಗ ಮಧ್ಯದಲ್ಲಿ ಅನೇಕ ಎಡರು, ತೊಡರುಗಳ ಎದುರಿಸಿದರೂ ಗುರಿ ತಲುಪಿಸಬೇಕಾಗುತ್ತದೆ, ಶ್ರಮಿಸಿ ತಲುಪಿಸುತ್ತಾರೆ. ಪುರಾಣಗಳಲ್ಲಿ ರಥ ಎಂಬ ವಾಹನವಿದ್ದುದನ್ನು ತಿಳಿದಿರುತ್ತೇವೆ. ಅವುಗಳನ್ನು ನಡೆಯಿಸುವವನನ್ನು ಸಾರಥಿ ಎನ್ನುತ್ತೇವೆ. ರಥಕ್ಕೆ ಕುದುರೆಗಳನ್ನು ಕಟ್ಟಿರುತ್ತಾರೆ. ಅವುಗಳ ಮೇಲೆ ನಿಯಂತ್ರಣ ತಂದು ರಥವನ್ನು ಬಯಸಿದ ಕಡೆಗೆ ನಡೆಯಿಸುವುದು ತುಂಬಾ ಕಷ್ಟ. ಒಂಟೆತ್ತಿನ ಗಾಡಿ ಜೋಡೆತ್ತಿನ ಗಾಡಿ ನೋಡಿದ್ದೇವೆ. ಒಂಟೆತ್ತಿನ ಗಾಡಿಗೆ ಕಟ್ಟಿದ ಎತ್ತಿಗೆ ಒಂದೇ ಒಂದು ಹಗ್ಗ ಮೂಗುದಾರಕ್ಕೆ ಕಟ್ಟಿರುತ್ತಾರೆ. ಅದನ್ನು ಹಿಡಿದು ಎತ್ತನ್ನು ನಿಯಂತ್ರಿಸಿ ಗಾಡಿ ನಡೆಯಿಸುವುದನ್ನು ಕೆಲವೇ ದಿನ ಕಲಿತರೆ ಸಾಕು ಗಾಡಿಯನ್ನು ಸರಿಯಾಗಿ ನಡೆಯಿಸಬಹುದು. ಉದ್ದೇಶಿತ ಗುರಿ ತಲುಪಿಸಬಹುದು. ಜೋಡೆತ್ತಿನ ಗಾಡಿ ನಡೆಯಿಸುವುದು ಒಂಟೆತ್ತಿನ ಗಾಡಿಗಿಂತ ಕಷ್ಟ! ಏಕೆಂದರೆ ಎರಡು ಎತ್ತುಗಳ ಒಂದೇ ದಾರಿಯಲ್ಲಿ ಸರಿಯಾಗಿ ನಡೆಯುವಂತೆ, ಗಾಡಿ ಬೀಳದಂತೆ ನಿಯಂತ್ರಿಸುವುದು ಸುಲಭವಲ್ಲ. ಹಾಗೆ ಐದು ಕುದರೆಯಿರುವ ರಥವನ್ನು ನಡೆಯಿಸುವುದು, ಗುರಿ ತಲುಪಿಸುವುದು ಇನ್ನೂ ಕಷ್ಟ ಅಲ್ಲವೇ?
ವಾಹನಗಳಿಗೆ ಎರಡೋ ನಾಲ್ಕೋ ಚಕ್ರಗಳಿದ್ದರೂ ನಿಯಂತ್ರಿಸಲು ಒಂದೇ ವ್ಯವಸ್ಥೆ ಇರುತ್ತದೆ. ವಾಹನಗಳನ್ನು ನಡೆಸುವವರು ಸಾಕಷ್ಟು ದಿನ ಅಗತ್ಯ ತರಬೇತಿ ಪಡೆದು ವಾಹನಗಳ ನಡೆಯಿಸುವುದ ಕಲಿತಿರುತ್ತಾರೆ. ಸರಿಯಾಗಿ ಕಲಿತ ನಂತರ ವಾಹನಗಳನ್ನು ಸ್ವತಂತ್ರವಾಗಿ ನಡೆಸಲು ಮುಂದಾಗುತ್ತಾರೆ. ವಾಹನಗಳನ್ನು ನಡೆಸಲು ಉತ್ತಮ ತರಬೇತಿ ಪಡೆದವರು, ಸಾಕಷ್ಟು ವಾಹನಗಳ ನಡೆಯಿಸಿದ ಬಹಳ ವರುಷಗಳ ಅನುಭವ ಹೊಂದಿದವರು ಒಮ್ಮೊಮ್ಮೆ ಅಪಘಾತಗಳ ಸುಳಿಗೆ ಸಿಲುಕುತ್ತಿರುವುದು ಕಂಡಿರುತ್ತೇವೆ. ತರಬೇತಿ ಪಡೆದೂ ಆನೇಕ ವರುಷಗಳ ಅನುಭವ ಹೊಂದಿಯೂ ಹೀಗೆ ಅಪಘಾತಗಳಲ್ಲಿ ಸಿಲುಕುತ್ತಿರಬೇಕಾದರೆ ಐದು ಕುದುರೆ ಇರುವ ರಥವನ್ನು ನಡೆಯಿಸುವವರ ಗತಿ ಏನಾಗಬಹುದು! ಪಂಚೇಂದ್ರಿಯಗಳೆಂಬ ಕುದುರೆಗಳ ನಿಯಂತ್ರಿಸುತ್ತಾ ದೇಹ ಎಂಬ ರಥಕ್ಕೆ ಹಾನಿಯಾಗದಂತೆ ನಡೆಯಿಸಲು ಯಾರೂ ತರಬೇತಿಯನ್ನು ಕೊಟ್ಟಿರುವುದಿಲ್ಲ. ತರಬೇತಿಯೂ ಇರದೆ, ನಡೆಯಿಸಿದ ಅನುಭವವೂ ಇಲ್ಲದೆ ದೇಹವೆಂಬ ರಥಕ್ಕೆ ತೊಂದರೆಯಾಗದಂತೆ ನಡೆಯಿಸುವುದು ಹೇಗೆ? ಹೀಗೇ ನಡೆಯಿಸಬೇಕು. ಇದೇ ಸರಿಯಾದ ದಾರಿ ಎಂದು ಅನೇಕರು ಸೂಚಿಸುತ್ತಾರೆ. ಅವು ಕ್ಷೇಮಕರ ಅಂತ ಎಷ್ಟೋ ಸಲ ಅನಿಸಿವೆ! ಕೆಲವು ಸಲ ತೊಂದರೆಗೆ ಒಳಗಾಗಿ ಕ್ಷೇಮಕರವಲ್ಲ ಅನಿಸಿವೆ. ಹೀಗೇ ಕೆಲವರು ಸೂಚಿಸಿದ ದಾರಿಯಲ್ಲೇ ನಡೆದು ಅಪಘಾತಗಳಿಗೆ ತುತ್ತಾಗಿದ್ದಾರೆ! ವಾಹನಗಳ ನಡೆಯಿಸಿದ ಅನುಭವ ಇಲ್ಲದಿದ್ದರೂ ಎಲ್ಲರೂ ಅದನ್ನು ನಡೆಸಬೇಕಾಗಿರುವುದು ಅನಿವಾರ್ಯ! ತಮ್ಮ ಸುತ್ತ ಮುತ್ತ, ಹಿಂದೆ ಮುಂದೆ ಚಲಿಸುತ್ತಿರುವ ಅನೇಕ ದೇಹ ಎಂಬ ರಥಗಳ ಕಂಡು ತಮಗೆ ಇಷ್ಟವಾದ ರಥವನ್ನು ಮಾದರಿ ಎಂದು ಆಯ್ಕೆ ಮಾಡಿಕೊಂಡು ಹಾಗೆ ನಡೆಯಿಸಿ ಮಾದರಿಯಾಗುತ್ತಾರೆ. ಕೆಲವರು ಎಷ್ಟೋ ರಥಗಳನ್ನು ಗೊತ್ತು ಗುರಿಗಳಿಲ್ಲದಂತೆ ನಡೆಯಿಸಿ ತೊಂದರೆಗೀಡಾಗುತ್ತಾರೆ. ಕೆಲವರು ಮಾತ್ರ ಗುರಿಯನ್ನು ಸ್ಪಷ್ಟಪಡಿಸಿಕೊಂಡು ನಡೆಸಲಾಗುತ್ತದಾದರೂ ಉದ್ದೇಶಿತ ಗುರಿ ತಲುಪಲು ಸಾಮರ್ಥ್ಯವಿಲ್ಲದೆ ಸೋಲುತ್ತಾರೆ. ಮತ್ತೆ ಕೆಲವರು ಗುರಿ ಸಮೀಪವೂ ಸುಳಿಯುವುದಿಲ್ಲ! ಮತ್ತೆ ಹಲವರು ಗುರಿ ಕಾಣದೆ ಸುತ್ತಿದ ಕಡೆನೇ ಸುತ್ತುತ್ತಿರುತ್ತಾರೆ. ಕೆಲವರಿಗೆ ಗುರಿಗಳೆ ಇರುವುದಿಲ್ಲ ರಥ ಇದೆ ಅಂತ ನಡೆಯಿಸುತ್ತಾರೆ! ಕೆಲವರು ಮತ್ತೆ ಮತ್ತೆ ಅಡ್ಡ ಬರುವ ಗೋಡೆಗಳಿಗೆ ಡಿಕ್ಕಿ ಹೊಡೆದು ಪಯಣ ಮುಗಿಸುತ್ತಾರೆ! ಕೇವಲ ಬೆರಳೆಣಿಕೆಯಷ್ಟು ಜನ ಗುರಿ ಸಾಧಿಸಿ ತಮ್ಮ ಜೀವನ ಸಾರ್ಥಕಗೊಳಿಸಿಕೊಳ್ಳುತ್ತಾರೆ!
ಗುರಿ ತಲುಪುವಾಗ ತೊಂದರೆಯಾಗದಿರಲೆಂದು ದಾರಿಯ ಅಕ್ಕ ಪಕ್ಕದ ಆಕರ್ಷಣೆಗಳು ಆಮಿಷಗಳು ಕಣ್ಣಿಗೆ ಕಾಣದಿರಲೆಂದು ಮುಂದಿನ ದಾರಿಯಷ್ಟೇ ಕಾಣಲೆಂದು ಜಟಕಾ ಕುದುರೆಯ ಕಣ್ಣಿಗೆ ಪಟ್ಟಿ ಕಟ್ಟಿರುತ್ತಾರೆ. ಹಾಗೆ ಕಟ್ಟದಿದ್ದರೆ ಆ ಕುದುರೆ ದಾರಿಯ ಇಕ್ಕೆಲಗಳಲ್ಲಿರುವ ಆಹಾರ, ತಿನಿಸ ತಿನ್ನಲು ಹೋಗಿ ದಾರಿ ತಪ್ಪಬಹುದು. ಜಟಕ ಗಾಡಿಯನ್ನು ಬೀಳಿಸಿಬಿಡಬಹುದು! ಒಂದು ಕುದುರೆ ಗಾಡಿಯ ಕತೆ ಇಷ್ಟಾದರೆ ಐದು ಕುದುರೆಯ ರಥದ ಗತಿ! ಅದೂ ಆ ಐದೂ ಕುದುರೆಗಳ ಕಣ್ಣಿಗೆ ಪಟ್ಟಿ ಕಟ್ಟದ ರಥದ ಗುರಿ ಮುಟ್ಟುವ ಕತೆ ಇನ್ನೇನು?
ಪಂಚೇಂದ್ರಿಯಗಳೆಂಬ ಕುದುರೆಗಳಿಂದ ಎಳೆಯಲ್ಪಡುವ ದೇಹ ಎಂಬ ರಥವ ಮನಸ್ಸು ಎಂಬ ಸಾರಥಿ ಜೀವಾತ್ಮ ಬಯಸಿದ ಕಡೆಗೆ ಸುರಕ್ಷಿತವಾಗಿ ಕೊಂಡೊಯ್ಯುವುದು ಉತ್ತಮ ಸಾರಥಿಯ ಲಕ್ಷಣ! ಸಾಧನೆ ಎಂಬ ದಾರಿಯಲ್ಲಿ ಅಪ್ಸರೆ, ಮೇನಕೆ, ತಿಲೋತ್ತಮೆಯರ ನರ್ತನಗಳು, ಕಿನ್ನರ ಕಿಂಪುರುಷರ ಮಧುರ ವಾದ್ಯ ಸ್ವನಗಳು, ಗಂಧರ್ವರ ಇಂಪಾದ ಗಾನಗಳು, ರಸಭರಿತ ಫಲ ಪುಷ್ಪ ಮೃಷ್ಟಾನ್ನಗಳು, ಹಲಸು ಮಲ್ಲಿಗೆ ಸುಗಂಧರಾಜ ಸುವಾಸನೆಗಳು, ಹಂಸತೂಲಿಕಾ ತಲ್ಪಗಳು, ಜೀಕುವ ಜೋಕಾಲೆಗಳು ಮನವನ್ನು ಸೆಳೆಯುತ್ತನೇ ಇರುತ್ತವೆ! ಕಣ್ಣೆಂಬ ಕುದುರೆ ನರ್ತನ ಕಾರಂಜಿಗಳ ಕಡೆಗೆ ಎಳೆದರೆ, ಕಿವಿ ಎಂಬ ಕುದುರೆ ಮಧುರ ಸಂಗೀತ ಸುಸ್ವರದ ಕಡೆಗೆ ಎಳೆದರೆ, ನಾಲಗೆಯೆಂಬ ಕುದುರೆ ಮೃಷ್ಟಾನ್ನ ಬೋಜನದ ಕಡೆಗೆ ಎಳೆದರೆ, ಚರ್ಮವೆಂಬ ಕುದುರೆ ಹಂಸತೂಲಿಕಾ ತಲ್ಪ, ಮಾನಿನಿಯರ ಮೃದು ಸ್ಪರ್ಷದ ಕಡೆಗೆ ಎಳೆದರೆ, ಮೂಗೆಂಬ ಕುದುರೆ ನಾರಿಯ ಮುಡಿಯ ಪುಷ್ಪ ಗಂಧ ಪರಿಮಳದ ಕಡೆಗೆ ಎಳೆದರೆ ದೇಹವೆಂಬ ರಥ ಯಾವ ಕಡೆಗೆ ಹೋದೀತು? ಹೇಗೆ ಉದ್ದೇಶಿತ ಗುರಿ ತಲುಪೀತು?
ಎಷ್ಟೋ ಸಾರಥಿಗಳು ಇಂಥಾ ಐದು ಕುದುರೆ ರಥವ ನಡೆಸಲಾಗದೆ ಅದು ಎಳೆದೊಯ್ಯುವ ಕಡೆಗೇ ಅದರ ಕೈಗೊಂಬೆಯಾಗಿ ಹೋಗಿ ಗುರಿ ತಲುಪದೆ ಗಿರ್ರನೆ ತಿರುಗುತ್ತಿಹವ! ಹೀಗೇ ಕೆಲವು ರಥಗಳು ಮದವೆಂಬ ಹಿಮಾಲಯಪರ್ವತವ ಇಳಿಯಲಾರದೇ, ಮತ್ತೆ ಕೆಲವು ಕ್ರೋಧವೆಂಬ ಜ್ವಾಲಾಮುಖಿ, ಕಾಡ್ಗಿಚ್ಚಿನಲಿ ಸಿಲುಕಿ ಅದರಿಂದ ಪಾರಾಗಲರಿಯದೆ, ಹಲವು ಕಾಮವೆಂಬ ಆಸೆಗಳ ಕಾಮನಬಿಲ್ಲನು ಏರಿ, ಅದರ ಬಣ್ಣದಿ ಮೀಯುತ್ತಾ ಜೀಕುತ್ತಾ ಅಲ್ಲಿಂದ ಜಾರಿ ಬರಲಾರದೆ, ಮತ್ತೆ ಹಲವು ಮೋಹವೆಂಬ ಪ್ರಪಾತದಿ ಮುಳುಗಿ ಎದ್ದು ಬರಲಾರದೆ, ಎಷ್ಟೋ ಲೋಭವೆಂಬ ಸುರಂಗದಿ ಸಿಲುಕಿ ಹೊರ ಬರಲಾಗದೆ, ಮತ್ತೆಷ್ಟೋ ಮತ್ಸರವೆಂಬ ಗುಡುಗು, ಮಿಂಚು, ಸುಂಟರಗಾಳಿ, ಸುನಾಮಿಯ ಸೆಳೆತಕ್ಕೆ ಸಿಕ್ಕು ಅಲೆಗಳಲಿ ಮುಳುಗಿ ಮುಳುಗಿ ಏಳುತ ದಡಕ್ಕೆ ಬರಲಾರದೇ ಹೆಣಗುತ್ತಿರುವಾಗ ಗುರಿ ಹೇಗೆ ಮುಟ್ಟಲು ಸಾಧ್ಯ? ಹೀಗೆ ಎಲ್ಲರೂ ಯೋಗ್ಯ ಸಾರಥಿ ಇಲ್ಲದೆ ಗುರಿ ತಲುಪದೆ ತೊಳಲುತ್ತಿಹರು. ಗುರಿಗಾಗಿ ಹಂಬಲಿಸುತಿಹರು.
ಕುದುರೆ ಹೃದಯ ಆರಿಯಬಲ್ಲ ಕೃಷ್ಣನ ಸರಿಸಮನಾದ ಶಲ್ಯನ ಸಾರಥ್ಯವನ್ನು ಶಲ್ಯನನ್ನು ಕರ್ಣ ಪುರಸ್ಕರಿಸದಿದ್ದಕ್ಕೋ ಶಲ್ಯಕರ್ಣನನ್ನು ತಿರಸ್ಕರಿಸಿದ್ದಕ್ಕೋ ಶಲ್ಯನ ಸಾರಥ್ಯ ಲಭಿಸದ ಕಾರಣ ಕರ್ಣ ವಿಜಯದ ಗುರಿ ತಲುಪಲಾಗಲಿಲ್ಲ! ಅರ್ಜುನನಿಗೆ ಭಗವಂತನ ಸಾರಥ್ಯ ದೊರೆತಿದ್ದರಿಂದಲೇ ಕೌರವರ ಹನ್ನೊಂದು ಅಕ್ಷೋಹಿಣಿ ಸೈನ್ಯಕ್ಕೆ ಸೋಲಿನ ಸವಿಯುಣಿಸಿ ಗೆಲುವಿನ ನಗೆ ಭೀರಿದ! ಭಗವಂತ ಅರ್ಜುನನ ರಥಕ್ಕಷ್ಟೇ ಸಾರಥಿಯಾಗಿರಲಿಲ್ಲ. ಪಾಂಡವರ ಕುಂಟುಂಬ ಎಂಬ ಧರ್ಮ ರಥಕ್ಕೂ ಸಾರಥಿಯಾಗಿ ಪಂಚೇಂದ್ರಿಯಗಳೆಂಬ ಪಾಂಡವ ಹಯಗಳ ನಿಯಂತ್ರಿಸಿ, ಸರಿದಾರಿಯಲಿ ನಡೆಯಿಸಿ ಪಾಂಡವರೈವರ ಯುದ್ದದಿ ಕಾಯ್ದು ಗೆಲುವಿನ ದಡ ಸೇರಿಸಿದ. ಪಾಂಡವರ ಯುದ್ದದ ಧರ್ಮ ರಥಕ್ಕಷ್ಟೇ ಅವನು ಸಾರಥಿಯಾಗಿರಲಿಲ್ಲ. ಲೋಕ ಕಲ್ಯಾಣಕ್ಕಾಗಿ ” ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ ಧರ್ಮಸಂಸ್ಥಾಪನಾರ್ಥ ” ವೆಂಬ ರಥಕ್ಕೂ ಸಾರಥಿಯಾಗಿ ಧರ್ಮ ಸಂಸ್ಥಾಪನೆಯ ಗುರಿ ಬಿಡದೆ ಸಾಧಿಸಿದ. ಧರ್ಮಕ್ಕೆ ಜಯ ತಂದುಕೊಟ್ಟ! ಶ್ರೇಷ್ಠ ಸಾರಥಿಯಾದ! ಗುರಿ ತಲುಪಲು ರಥ ನಡೆಸುವ ಸಾರಥಿ ಮುಖ್ಯ! ಸಾರಥಿ ಸಮ ಚಿತ್ತದವನಾದರೆ ತಲುಪಿಸಿಯಾನು ಬಯಸಿದ ಕೈಲಾಸ ಪರ್ವತದ ತುತ್ತ ತುದಿಯ!
* ಕೆ ಟಿ ಸೋಮಶೇಖರ ಹೊಳಲ್ಕೆರೆ