ಗುಡುಗುಮ್ಮ ಬಂದ
ಹೆಡಿಗೆ ತಂದಾ
ಅಕ್ಕಿ ಬ್ಯಾಡಂತೆ
ಭತ್ತ ಬ್ಯಾಡಂತೆ
ನೀನೇ ಬೇಕಂತೆ!!!
ಇಂತದೊಂದು ದಾಟಿಯನ್ನು ಹೇಳಿ ಅಳುವ ಮಕ್ಕಳನ್ನು ಸಂತೈಸುವ ಪ್ರಯತ್ನವನ್ನು ಮಲೆನಾಡಿನ ಹಳ್ಳಿಗಾಡುಗಳಲ್ಲಿ ಕಾಣಬಹುದಿತ್ತು. ನಮಗೂ ಈ ಹಾಡನ್ನು ಹೇಳಿ ಹೆದರಿಸಿ ಸಂತೈಸುತ್ತಿದ್ದದು ನೆನಪು. ಬೇಸಿಗೆ ಬೇಗೆಯಲ್ಲಿ ಬೇಯುತ್ತಾ ಸೂರ್ಯನಿಗೆ ಶಾಪ ಹಾಕುತ್ತಾ, ತಣ್ಣನೆಯ ಪಾನೀಯಗಳನ್ನು ಹೀರುತ್ತಾ, ಮೈಯೆಲ್ಲಾ ಬೆವರು, ನೀರಿದ್ದವರು ಎರೆಡೆರೆಡು ಸ್ನಾನ ಮಾಡುತ್ತಾ, ಮತ್ತೆ ಬೆವರುವ ಪರಿ, ಮಳೆಯಾದರೂ ಬಂದಿದ್ದರೆ ಚೆನ್ನಾಗಿತ್ತು ಎಂದು ಹಂಬಲಿಸುವ ಕೋಟ್ಯಾಂತರ ಮನಸ್ಸುಗಳ ಆರ್ತ ಕೇಳಿ ಮೇಲೇರಿದ ಮೋಡಕ್ಕೂ ಕೊಂಚ ಕರುಣೆ ಬಂದಿತೇನೋ? ಸೂಚನೆಯಾಗಿ ಆಕಾಶದಲ್ಲಿ ಚಿಕ್ಕದಾಗಿ ಶುರುವಾದ ಗುಡು-ಗುಡು ಕ್ರಮೇಣ ವೇಗವನ್ನು ಪಡೆದುಕೊಂಡು ಹೆಚ್ಚಾಯಿತು. ಜೊತೆಗೆ ಬಳ್ಳಿ-ಬೆಳ್ಳಿ ಮಿಂಚುಗಳು. ಕೆಲವೊಮ್ಮೆ ಉತ್ತರದಲ್ಲಿ ಫಳ್ಳನೆಯ ಮಿಂಚು, ಮಿಂಚಿದ ನಂತರದಲ್ಲಿ ಛಟಾರ್ ಎಂಬ ಕಿವಿಗಡಚಿಕ್ಕುವ ಸಿಡಿಲಿನ ಆರ್ಭಟ. ಹಿಂದೆಯೇ ತಣ್ಣನೆಯ ಹನಿಯ ಸಿಂಚನ. ಕಾದು ಗಾರಾದ ಮಣ್ಣಿನ ಮೇಲೆ ಬಿದ್ದ ನೀರು, ಜೊತೆಗೆ ಮಣ್ಣಿನ ವಾಸನೆ. ಧರಿತ್ರಿಯ ನಗ್ನ ಮೈಗೆ ಮೊದಲ ಅಭ್ಯಂಜನ. ಬರೀ ಮನುಷ್ಯರಲ್ಲದೇ, ಪ್ರಾಣಿ-ಪಕ್ಷಿಗಳೂ ಮೊದಲ ಮಳೆಗೆ ಸಂತಸ ಪಡುತ್ತವೆ. ನೆಲದಲ್ಲಿ ಹುದುಗಿ ತಪಸ್ಸಿಗೆ ಕುಳಿತ ಪಹರೆಜೀವಿಯಾದ, ಉಭಯವಾಸಿಯಾದ ಕಪ್ಪೆಗಳ ವಟರ್ ಸದ್ದು ವಾತಾವರಣಕ್ಕೆ ವಿಶೇಷ ಮೆರುಗನ್ನು ತಂದು ಕೊಡುತ್ತದೆ. ಅದೆಷ್ಟೋ ಜೀವಿಗಳ ಪಾಲಿಗೆ ಬಿರುಬೇಸಿಗೆಯಲ್ಲಿ ಬೀಳುವ ಮಳೆಯೆಂದರೆ ಅಮೃತವರ್ಷಿಣಿ.
ಕೆಲವೊಮ್ಮೆ ಕ್ಷೀಣವಾಗಿ ಬಿತ್ತರವಾಗುವ ಗುಡುಗಿನ ಗುಡು-ಗುಡು. ಹಿಂದೆಯೇ ವಾಸುಕಿಯ ದೇಹದಂತೆ ಬಳುಕಿ ಮಾಯವಾಗುವ ಬೆಳ್ಳಿ ಮಿಂಚು. ಮತ್ತೆ ಫಡಾರ್ ಎಂಬ ಮೇಘ ಗರ್ಜನೆ. ಹಿಂದೆಯೇ ಮುಸಲಧಾರೆಯಾಗಿ ಸುರಿಯುವ ಮಳೆಹನಿಗಳು. ಪೇಟೆಯ ಕೊಚ್ಚೆಯನ್ನೆಲ್ಲಾ ಒಂದೇಟಿಗೆ ತೊಳೆದು ಹಾಕುವ ಪಣ ತೊಟ್ಟಂತೆ ತೋರುವ ಮಳೆರಾಯನ ಛಲ. ಇದೇಕೆ ಹೀಗೆ? ನೀರನ್ನು ಮಂಜಿನ ರೂಪದಲ್ಲಿ ಆಕಾಶದಲ್ಲಿ ಇಟ್ಟವರಾರು? ಬೆಳಗಿನಿಂದ ಬಡಿದ ಬಿಸಿಲಿಗೆ ಆ ಮಂಜುಗಡ್ಡೆಯೇಕೆ ಕರಗಿ ಕೆಳಗಿಳಿಯಲಿಲ್ಲ. ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾಣಿಸದ ಮಿಂಚು-ಗುಡುಗು-ಸಿಡಿಲು ಮೊದಲ ಮಳೆಯಲ್ಲಿ ಎಲ್ಲಿಂದ ಪ್ರತ್ಯಕ್ಷವಾಗುತ್ತವೆ. ಒಂದೊಮ್ಮೆ ಇಡೀ ಮಂಜುಗಡ್ಡೆಯ ಇಡೀ ಮೋಡವೇ ಕಳಚಿ ಸೀದಾ ಭೂಮಿಗೆ ಬಿದ್ದರೆ ಕತೆಯೇನು? ಆಕಾಶದಲ್ಲಿ ಕೆರೆಯಿದೆಯೇ? ಇಂತಹ ನೂರಾರು ಪ್ರಶ್ನೆಗಳು ಹುಟ್ಟಿಕೊಂಡವು.
ಸೂರ್ಯನಿಗೆ ಶಾಪ ಹಾಕುವ ಬಹಳಷ್ಟು ಮಂದಿಗೆ, ಇದೇ ಸೂರ್ಯನೇ ತಂಪು ಮಳೆಗೆ ಕಾರಣ ಎನ್ನುವುದು ಗೊತ್ತಿಲ್ಲ. ಭೂಮಿಯ ಮುಕ್ಕಾಲು ಪಾಲು ನೀರಿರುವ ಶರಧಿಯಿಂದ ಆವಿಯಾದ ನೀಡು ಆಕಾಶದಲ್ಲಿ ಮೋಡವಾಗಿ, ಹನಿಗಟ್ಟಿ, ಮಂಜಾಗಿ ವಾತಾವರಣದ ಒತ್ತಡದಿಂದ ನಿಂತಿರುತ್ತದೆ. ಮಲೆನಾಡಿನ ಕಾಡು ಈ ಮೋಡಗಳನ್ನು ಸೂಜಿಗಲ್ಲಿನಂತೆ ಆ ಮೋಡಗಳನ್ನು ಸೆಳೆಯುತ್ತದೆ. ಆಕರ್ಷಿತಗೊಂಡ ಮೋಡಗಳು ಒಂದೆಡೆ ಸೇರುವಾಗ ಒಂದಕ್ಕೊಂದು ಡಿಕ್ಕಿ ಹೊಡೆಯುತ್ತವೆ. ಬೃಹತ್ ಗಾತ್ರದ ಮೋಡಗಳ ಡಿಕ್ಕಿಯಿಂದ, ಮಿಂಚು-ಗುಡುಗು-ಸಿಡಿಲು ಉಂಟಾಗುತ್ತದೆ. ಪ್ರಕೃತಿಯ ಮಡಿಲು ಅಚ್ಚರಿಗಳ ಗೂಡು. ಚಳಿಯಿಂದ ನಡುಗಿ, ಬಿಸಿಲಿನಿಂದ ಸುಟ್ಟು ನೆಲದ ಸಾರ ಸೋರಿ, ಭೂಮಿ ಬರಡಾಗಿರುತ್ತದೆ. ಮೊದಲ ಮಳೆಯಲ್ಲಿ ಉಂಟಾಗುವ ಮಿಂಚು ಭೂಮಿಗೆ ಶಕ್ತಿಯನ್ನು ನೀಡುತ್ತದೆ. ಅಪಾರ ಪ್ರಮಾಣದ ಸಾರಜನಕವನ್ನು ಮಿಂಚು-ಸಿಡಿಲುಗಳು ಭೂಮಿಗೆ ಸೇರಿಸುತ್ತವೆ. ಮುಂದೆ ಬರುವ ಮಳೆಗಾಲದಲ್ಲಿ ಸಾರ ಹೊಂದಿದ ಭೂತಾಯಿ ಹಸಿರಿನಿಂದ ಕಂಗೊಳಿಸುತ್ತಾಳೆ.
ಹಾಗಾದರೆ, ಮಳೆಗಾಲದಲ್ಲಿ ಗುಡುಗು-ಸಿಡಿಲಿನಿಂದ ಕೂಡಿದ ಮಳೆ ಸುರಿಯುವುದಿಲ್ಲ ಎಂಬ ಪ್ರಶ್ನೆಗೂ ಉತ್ತರ ಬೇಕು. ಅಪರೂಪಕ್ಕೆ ಒಮ್ಮೆ ಮಳೆಗಾಲದಲ್ಲೂ ಗುಡುಗು-ಸಿಡಿಲಿನಿಂದ ಮಳೆ ಬರುತ್ತದೆಯಾದರೂ, ಪೂರ ಮಳೆಗಾಲದಲ್ಲಿ ಸಿಡಿಲು-ಗುಡುಗು ಕೂಡಿದ ಮಳೆಯಿರುವುದಿಲ್ಲ. ಏಕೆಂದರೆ ಮಳೆಗಾಲ ಶುರುವಾದಾಗ ಬೇಸಿಗೆಯಲ್ಲಿರುವಷ್ಟು ಬಿಸಿ ವಾತಾವರಣದಲ್ಲಿ ಕಂಡು ಬರುವುದಿಲ್ಲ. ಮಾರುತದ ವೇಗವೂ ಗಮನಾರ್ಹವಾಗಿ ಕಡಿಮೆಯಾಗಿರುತ್ತದೆ. ವಾತಾವರಣದಲ್ಲಿನ ಒತ್ತಡವೂ ಕಡಿಮೆಯಾಗಿರುತ್ತದೆ. ಹೀಗಾಗಿ ಮೋಡಗಳು ನಿಧಾನವಾಗಿ ಒಂದುಗೂಡುತ್ತವೆ. ಪರಸ್ಪರ ಘರ್ಷಣೆಯ ಸಾಧ್ಯತೆ ಕ್ಷೀಣವಾಗಿರುತ್ತದೆ.
ಒಟ್ಟಾರೆ ವರ್ಷವಿಡೀ ಭೂಮಿಯ ಮೇಲೆ ಮಿಂಚು-ಸಿಡಿಲು ಅಪ್ಪಳಿಸುತ್ತಲೇ ಇರುತ್ತವೆ. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಕಿಫುಕ ಹಳ್ಳಿ ಸಿಡಿಲಿನ ಹೊಡೆತಕ್ಕೆ ಹೆಸರು ಮಾತಾಗಿದೆ. ಈ ಹಳ್ಳಿ ನೆಲಮಟ್ಟದಿಂದ ೩೨೦೦ ಅಡಿ ಎತ್ತರದಲ್ಲಿರುವುದರಿಂದಾಗಿಯೇ ಈ ಪರಿಯ ಸಿಡಿಲಿನ ಹೊಡೆತಕ್ಕೆ ಹೆಸರಾಗಿದೆ. ಒಂದು ಚದರ ಕಿ.ಮಿ. ವ್ಯಾಪ್ತಿಯಲ್ಲಿ ಸರಿಸುಮಾರು ೧೫೮ ಸಿಡಿಲು ಒಂದು ವರ್ಷದಲ್ಲಿ ಅಪ್ಪಳಿಸುತ್ತದೆ. ಸಿಡಿಲಿನ ಹೊಡೆತಕ್ಕೆ ಹೆಸರುವಾಸಿಯಾದ ಮತ್ತಿತದ ಪ್ರದೇಶಗಳೆಂದರೆ, ವೆನೆಜುವಿಲಾ, ಸಿಂಗಾಪುರ ಮತ್ತು ಬ್ರೆಜಿಲ್‌ನ ಟೆರೆಸಿನ.
ವಿಜ್ಞಾನಿಗಳು, ತಜ್ಞರು ಸಿಡಿಲಿನ ರಹಸ್ಯವನ್ನು ಬೇಧಿಸಲು ಲಾಗಾಯ್ತಿನಿಂದ ಹರಸಾಹಸ ಪಡುತ್ತಿದ್ದಾರಾದರೂ, ಇನ್ನೂ ಪೂರ್ಣ ಪ್ರಮಾಣದಲ್ಲಿ ಸಿಡಿಲಿನ ಆಂತರ್ಯವನ್ನು ಅರಿಯಲು ಸಾಧ್ಯವಾಗಿಲ್ಲ. ಸಿಡಿಲಿನಿಂದ ಆಗುವ ಹಾನಿ ಮತ್ತು ಲಾಭವನ್ನು ತುಲನೆ ಮಾಡಿದರೆ, ಸಿಡಿಲಿನಿಂದ ಲಾಭವೇ ಹೆಚ್ಚು ಎಂದು ಸ್ಪಷ್ಟವಾಗಿ ಹೇಳಬಹುದು. ಇನ್ನು ಜನ-ಜಾನುವಾರುಗಳು ಸಿಡಿಲಿನ ಹೊಡೆತಕ್ಕೆ ಸಿಕ್ಕು ಸಾಯುತ್ತವೆ. ಉತ್ತರ ಕರ್ನಾಟಕದ ಭಾಗಗಳಲ್ಲಿ ಸಿಡಿಲಿನಿಂದ ಇಡಿಯಾಗಿ ಕುರಿಮಂದೆಯೇ ನಾಶವಾದ ಉದಾಹರಣೆಗಳಿವೆ. ಸಿಡಿಲಿನ ಹೊಡೆತಕ್ಕೆ ಸಿಕ್ಕು ಸಾಯುವ ತೆಂಗು ಅಡಕೆ ಮರಗಳಿಗೂ ಮಲೆನಾಡಿನಲ್ಲಿ ಬರವಿಲ್ಲ. ಅಚಾನಕ್ ಆಗಿ ಹೆಚ್ಚಾಗಿ ಸಂಜೆಯ ಸಮಯದಲ್ಲಿ ಶುರುವಾಗುವ ಸಿಡಿಲಿನಿಂದ ಕೂಡಿದ ಮಳೆಗೆ ಆಧುನಿಕ ಯಂತ್ರಗಳಾದ ಫ್ರಿಜ್ ಮತ್ತು ಟಿ.ವಿ.ಗಳು ಸುಟ್ಟುಹೋಗುವ ಪ್ರಕರಣಗಳನ್ನೂ ಪ್ರತಿವರ್ಷ ನೋಡಬಹುದು. ಸಿಡಿಲು ಬಡಿದೂ ಬಚಾವಾದ ಮಂದಿಗಳು ಸಮಾಜದಲ್ಲಿ ಕಾಣಸಿಗುತ್ತಾರೆ. ಪ್ರಪಂಚದ ಎಲ್ಲಾ ಧರ್ಮಗಳಲ್ಲೂ ಸಿಡಿಲಿಗೆ ದೈವ ಸ್ಥಾನವನ್ನು ನೀಡಿದ್ದಾರೆ. ಹಿಂದೂಗಳಲ್ಲಿ ಇಂದ್ರನನ್ನು ಮಳೆ ಮತ್ತು ಸಿಡಿಲಿನ ದೇವರು ಎಂದು ಕರೆಯುವ ರೂಢಿಯಿದೆ. ಮಿಂಚು ಮತ್ತು ಸಿಡಿಲು ಅಪಾರವಾದ ಶಕ್ತಿಯ ಕೇಂದ್ರಗಳು, ಅದ್ದರಿಂದ ಪಶ್ಚಿಮ ದೇಶಗಳಲ್ಲಿ ಹಲವು ರಾಜಕೀಯ ಪಕ್ಷಗಳು ಮಿಂಚನ್ನು ತಮ್ಮ ಚಿಹ್ನೆಯಾಗಿ ಬಳಸಿದೆ ದಾಖಲೆ ಇವೆ. ಬೆಳಕಿನ ವೇಗ ಶಬ್ಧದ ವೇಗಕ್ಕಿಂತ ಹೆಚ್ಚು ಅಂದರೆ ಬೆಳಕು ಸೆಕೆಂಡಿಗೆ ಮೂರು ಲಕ್ಷ ಕಿ.ಮಿ. ಚಲಿಸಿದರೆ, ಶಬ್ಧದ ವೇಗ ಬರೀ ೮೪೦ ಕಿ.ಮಿ.ಗಳು.
ಹತ್ತಿಯಂತೆ ತೇಲುವ ಮೋಡಗಳು, ನೀರು ತುಂಬಿಕೊಂಡು ಕಡುನೀಲಿಯಾದ ಮೋಡಗಳು, ಬಣ್ಣ-ಬಣ್ಣದ ಮೋಡಗಳು ಛಾಯಾಗ್ರಾಹಕರನ್ನು ಸದಾ ಆಕರ್ಷಿಸುವ ಕೇಂದ್ರ ಬಿಂದುಗಳು. ಅತ್ಯುತ್ತಮ ಚಿತ್ರಗಳು ಸೂರ್ಯನ ಎದುರಿನಲ್ಲಿ ಬರುವ ಮೋಡಗಳ ಹಿನ್ನೆಲೆಯಲ್ಲಿ ಸೆರೆಹಿಡಿದಿದ್ದನ್ನು ಕಾಣಬಹುದು. ಕವಿಗಳಿಗೂ ಮೋಡ-ಮಳೆಗಳು ಸ್ಪೂರ್ತಿದಾಯಕ ವಸ್ತುಗಳಾಗಿವೆ. ಅನಂತ ಆಕಾಶವೇ ಒಂದು ನಿಗೂಢ ರಹಸ್ಯ. ಅಂತಹ ಆಕಾಶದಲ್ಲಿ ಜೀವಸೆಲೆಯಾದ ನೀರು ಶೇಖರಣೆಯಾಗಿ ವಾತಾವರಣದ ಒತ್ತಡದಿಂದ ಮಳೆಯಾಗಿ ಬೀಳುವ ಪ್ರಕ್ರಿಯೆ ಪ್ರಕೃತಿಯ ಅದ್ಭುತ ಸೃಷ್ಟಿಯಾಗಿದೆ. ಈಗಿನ ಮನೋರಂಜನೆಯ ಪ್ರಪಂಚದಲ್ಲಂತೂ ಮಳೆಯಲ್ಲಿ ತೋಯದ ನಾಯಕಿಯಿಲ್ಲ. ಚಲನಚಿತ್ರದ ಯಾವುದಾದರೊಂದು ಹಾಡು ಅಗತ್ಯವಾಗಿ ಮಳೆಯಲ್ಲಿ ನೆನೆಯುವ-ನೆನೆಸುವ ಪ್ರಕ್ರಿಯೆಯಾಗಿದೆ.
ಅಂತೆಯೇ ಪ್ರತಿವರ್ಷದ ಮಿಂಚು-ಸಿಡಿಲುಗಳು ಬಾಲ್ಯದ ನೆನಪನ್ನು ತಪ್ಪದೇ ತರುತ್ತವೆ. ಆಲಿಕಲ್ಲನ್ನು ಆರಿಸುವ ಪೈಪೋಟಿಯಲ್ಲಿ ಬಿದ್ದು ಕಾಲಿಗಾದ ಗಾಯದ ಕಲೆಯನ್ನು ನೋಡಿಕೊಳ್ಳುವಂತೆ ಒತ್ತರಿಸುತ್ತವೆ. ವರ್ಷದ ಮೊದಲ ಮಳೆಯಲ್ಲಿ ತೋಯುವ ಆನಂದ ಕೃತಕವಾದ ಯಾವ ವಸ್ತುವಿನಲ್ಲೂ ಸಿಗದು. ಬೇಕಿದ್ದರೆ ಮೊದಲ ಮಳೆಯಲ್ಲಿ ಯಾರ ಹಂಗೂ ಇಲ್ಲದೇ ತೋಯಿದು ನೋಡಿ.
[ಈ ವರ್ಷದ ಮೇ ೧ ಕಾರ್ಮಿಕರ ದಿನಾಚರಣೆಯಂದೇ ಸಂಜೆ ಸುಮಾರು ೬ ಗಂಟೆಯಿಂದ ಎರೆಡು ತಾಸು ಸಾಗರ ಪಟ್ಟಣದಲ್ಲಿ ಎಡಬಿಡದೆ ಸುರಿದ ಮಳೆ ಹಾಗೂ ಮಿಂಚು-ಸಿಡಿಲುಗಳ ಆರ್ಭಟವನ್ನು ಮನಸಾರೆ ಅನುಭವಿಸಿ, ತಣಿದು ಬರೆದ ವಿವರಗಳಿವು]
*****