ಒಳಗೆ ಆವೇಶದಲ್ಲಿ ಗುಡುಗುತ್ತಿರುವ ಮೇಷ್ಟ್ರು, ಅದರ ಪರಿಣಾಮ ಎಂಬಂತೆ ಹೊರಗೆ ಜೋರು ಮಳೆ, ಎರಡಕ್ಕೂ ಸಾಕ್ಷಿಯಾಗಿ ತಾರಸಿಯಿಂದ ಸುರಿಯುತ್ತಿದ್ದ ನೀರಿನಡಿ ನಿಂತಿದ್ದೆ..ಮಳೆಗಾಲದ ಆರಂಭವೇ ಕಾಯಿಲೆ ಹಿಡಿಸುತ್ತಾದ್ದರಿಂದ ಸುಮ್ಮಸುಮ್ಮನೆ ಮಲೆನಾಡಿನಲ್ಲಿ ನೆನೆಯೋ ಸಾಹಸ ಯಾರು ಮಾಡುತ್ತಿರಲಿಲ್ಲ.. ಅಂತಹದ್ದರಲ್ಲಿ ಸರಿಸುಮಾರು ಅರ್ಧಗಂಟೆ ನಿಸರ್ಗದ ಷವರ್ನಡಿಯಲ್ಲಿ ಸುಮ್ಮನೆ ನಿಂತಿದ್ದೆ..ಕಾರಣ ನಿಂತಿದ್ದು ಸ್ವಇಚ್ಛೆಯಿಂದಾಗಿರದೇ ಮೇಷ್ಟ್ರು ವಿಧಿಸಿದ ಶಿಕ್ಷೆಯಿಂದಾಗಿತ್ತು.
ಚಡ್ಡಿ ತ್ಯಜಿಸಿ ಪ್ಯಾಂಟ್ ಏರಿಸಿಕೊಂಡು, ಅಪ್ಪನ ಶೇವಿಂಗ್ ಬ್ಲೇಡ್ನ ಹರಿತ ಪರೀಕ್ಷಿಸುತ್ತಿದ್ದ ಕಾಲ..ಏನು ಗೊತ್ತಿಲ್ಲದವರು ಅಲ್ಲದೆ ಎಲ್ಲವನ್ನೂ ತಿಳಿದವರು ಆಗದೇ, ಗೊತ್ತಿದೆ ಬಿಡೋ ಅದೇನು ಮಹಾ ಅಂತಲೇ ಸಕಲವನ್ನು ಗೊತ್ತು ಮಾಡಿಕೊಳ್ಳುತ್ತಿದ್ದ ವಯಸ್ಸು.. ಚಿಗುರೊಡೆಯುತ್ತಿದ್ದ ಟೀನೇಜಿನ ಚರ್ಬಿಗೆ ಸುರಿಯೋ ಮಳೆ ಯಾವ ಲೆಕ್ಕ. ಹಣೆಬರಹಕ್ಕೆ ಪರಿಸ್ಥಿತಿ ಮಾತ್ರ ಪ್ರತಿಕೂಲವಾಗಿತ್ತು . ತಾರಸಿಯ ಪೈಪ್ ಸುರಿಸುತ್ತಿದ್ದ ಮಳೆಯ ಒಟ್ಟು ರಾಶಿ ಜಲಪಾತವೇ ನೆತ್ತಿಮೇಲೆ ಬಿದ್ದ ಅನುಭವ ನೀಡುತ್ತಿತ್ತು..ಚಳಿಗೆ ಚಂಡಿ ಹಿಡಿದು ಮೈ ಮರಗಟ್ಟಿ, ಕೈ ಕಾಲುಗಳಲೆಲ್ಲ ಬೆಳ್ಳಗಾಗಿ ರಕ್ತದ ಬಿಸಿಯೆಲ್ಲಾ ಆರಿಹೋಗಿತು. ಹೀಗಿದ್ರೂ ಮೇಷ್ಟ್ರ ಸಿಟ್ಟು ಎಳ್ಳಷ್ಟೂ ಕಡಿಮೆಯಾಗಿರಲಿಲ್ಲ.. ಮಳೆ ನಿಲ್ಲುತ್ತೆ ಅನ್ನೋ ನಂಬಿಕೆ ಮೊದಲೇ ಇರಲಿಲ್ಲ. ಶಾಲೆಗೆ ಶಾಲೆಯೇ ನನ್ನ ದುರುಗುಟ್ಟಿ ನೋಡುತ್ತಿದ್ರೆ, ಉಳಿದ ಮೇಷ್ಟ್ರುಗಳು ಲೇ ನಿಮ್ಮನ್ನೂ ಹೀಗೆ ನಿಲ್ಸಬೇಕಾ?, ಪಾಠ ಕೇಳ್ತಿರೋ ಎನ್ನುತ್ತಾ ಸಂದರ್ಭವನ್ನು ತಮ್ಮ ಅಕ್ಷರದ ಶಂಖನಾದಕ್ಕೆ ಬಳಸಿಕೊಂಡಿದ್ರು. ಯಾವನೊಬ್ಬನಾದ್ರೂ ಬಂದು ವಿಧಿಸಿದ್ದ ಶಿಕ್ಷೆ ಕಮ್ಮಿ ಮಾಡ್ತಾನೆ ಅಂದ್ರುಕೊಂಡ್ರೆ, ಕುಣಿಕೆಯಲ್ಲಿ ಸಿಕ್ಕಿಬಿದ್ದವನು ತಾಕತ್ತಿದ್ದರೆ ಬದುಕಿಬರ್ತಾನೆ, ಬರದಿದ್ರೂ ನಷ್ಟವೇನಿಲ್ಲ ಅಂತಂದುಕೊಂಡವರಂತೆ ಸುಮ್ಮನಾಗಿತ್ತು ಶಾಲೆಯ ಪರಿಸರ..
ಈಗೇನಾದ್ರು ಮಳೆಯಲ್ಲಿರಲಿ ಮಕ್ಕಳನ್ನು ಹಾಗೆ ನಿಲ್ಲಿಸಿದ್ರೂ ಶಿಕ್ಷಕರಿಗೆ ನೇಣೆ ಹಾಕ್ತಿದ್ರೋ ಏನೋ..ಹಾಂಗಂತ ಆಗ ಎಲ್ಲಾ ಸರಿಯಿತ್ತು ಅಂತಲ್ಲ. ಗುರುವಿನ ಕುರ್ಚಿಯ ಕಾಲಡಿಯಲ್ಲಿನ ವಿದ್ಯೆ ಮಕ್ಕಳ ಬೆಂಚಿನಡಿ ಇನ್ನೂ ಬಂದಿರಲಿಲ್ಲವಷ್ಟೇ. ಅಷ್ಟರ ಮಟ್ಟಿಗೆ ಸರ್ವಾಧಿಕಾರ ಪಾಠ ಹೇಳಿಕೊಡುವವರ ಕೈಯಲ್ಲಿತ್ತು..ಮೇಷ್ಟ್ರೆ ಓದೋದನ್ನು ಬಿಟ್ಟು ಉಪೇಂದ್ರನ ಪಿಚ್ಚರ್ ಡೈಲಾಗ್ ಹೇಳ್ತಾವ್ನೆ, ಚಾಂದಿನಿ ಚಾಂದಿನಿ ಅಂತ ಕನವರ್ಸಾತ್ತಾನೆ ವಿಚಾರಿಸಿಕೊಳ್ಳಿ ಅಂತ ಕೋಲು ಕೈ ಗಿಟ್ಟು ಹೋಗ್ತಿದ್ರು, ಪೋಷಕರು, ಮತ್ಯಾವಾಗ್ಲೋ ಬಂದು ಮೆತ್ತೆಗೆ ಹೊಡೀರಿ ಮೇಷ್ಟ್ರೆ ಅಂತ ಮನವಿನೂ ಸಲ್ಲಿಸ್ತಿದ್ರು .. ದೇವರೇ ವರ ಕೊಟ್ಟ ಮೇಲೆ, ಪೂಜಾರಿ ಪ್ರಸಾಧ ಕೊಡೋದಕ್ಕೇನು?..ಕೇಳಿದ್ರೂ ಕೇಳದಿದ್ರೂ ಅಪರಿಮಿತವಾಗಿ ಪೆಟ್ಟು ಬೀಳುತ್ತಿದ್ದವು. ಮನವಿಗೆ ಪುರಸ್ಕಾರ ನೀಡದ ಮೇಷ್ಟ್ರುಗಳು ನಮ್ಮ ಮೇಲೆ ಪ್ರಯೋಗಿಸಿದ ರೇಖಾ ಗಣಿತದ ಸ್ಕೇಲುಗಳಿಗೆ ಲೆಕ್ಕವೇ ಇರಲಿಲ್ಲ. ಪಿ..ಟಿ ಮಾಸ್ಟರ್ರೋರ್ಬು ನಿತ್ಯ ತಾವು ಬರೋ ಹಳ್ಳಿಯಿಂದ ಹೊಸ ಹೊಸ ಬೆತ್ತದ ಅಸ್ತ್ರಗಳನ್ನ ಹಿಡಿದೆ ಬರುತ್ತಿರ್ದು , ಅದೆನ್ನೆಲ್ಲಾ ಒಟ್ಟು ಹಾಕಿದ್ರೆ ಒಂದು ಹೆಣ ಸುಡಬಹುದಾಗಿತ್ತು.. ಹಾಗಂತ ಅವುಗಳಿಗೆಲ್ಲಾ ನಾವು ಜಗ್ಗಿದವ್ರು ಅಲ್ಲಾ ಬಿಡಿ. ಸ್ವಾತಂತ್ರ್ಯ ಹೋರಾಟದ ವೀರರಂತೆ ಶಿಕ್ಷೆ ಅನುಭವಿಸಿ, ಪ್ರತೀಕಾರವನ್ನು ತೀರಿಸಿಕೊಳ್ಳುತಿದ್ವಿ. ಪ್ಯೂನ್ಗಳ ಸೈಕಲ್ ಕದ್ದಿಟ್ಟು, ಮೇಷ್ಟ್ರುಗಳ ಬೈಕ್ಗಳ ಸೀಟು ಕುಯ್ದು, ಶರ್ಟಗೆ ಬ್ಲೇಡ್ ಹಾಕಿ, ಅನಾಮದೇಯ ಪತ್ರ ಬರೆದು “ನಂಗೆ ನಾನೇನೇ ಡೈಮಂಡು. ಯಾರಿಗಾಗಲ್ಲ ನಾ ಬೆಂಡು” ಅಂತಾ ಹಾಡಾಡ್ತಾ ಇದ್ವಿ.. ಗುರು ಶಿಷ್ಯರ ಇಂತಹ ಕಾಳಗದಿಂದಲೇ ಜಯಪ್ರಕಾಶ್ ನಾರಾಯಣ ಹೆಸರಿನ ಶಾಲೆ ದೊಡ್ಡಿ ಸ್ಕೂಲು ಅಂತಲೇ ಪ್ರಖ್ಯಾತಿ ಪಡೆದಿತ್ತು.
ಆದ್ರೆ ಅವತ್ತು ಮಳೆಯಲ್ಲಿ ಮೇಷ್ಟ್ರು ನನ್ನ ನಿಲ್ಲಿಸಿದ್ದರಲ್ಲಿ ನನ್ನ ತಪ್ಪಿರಲಿಲ್ಲ,, ಅಸಲಿಗೆ ಎಲ್ಲಾ ತಂಟೆ ತಕರಾರುಗಳಲ್ಲಿ ನನ್ನದು ಹಿಂಬಾಲಕನ ಪಾತ್ರಗಳೇ ಹೊರತು, ಪ್ರಮುಖ ಪಾತ್ರ ವಹಿಸಿದವನಲ್ಲ..ಹೀಗಾಗಿ ಏಟಿಗೂ ಸಿಗದೆ ಮಾತಿಗೂ ಸಿಗದೆ ಸಾಕ್ಷಿಯಿಲ್ಲದ ಅಪರಾಧಿಯಂತೆ ಹೇಗೋ ಪಾರಾಗ್ತಿದ್ದೆ.. ಪೆಟ್ಟು ಬಿದ್ರೂ, ಎಲ್ಲರಿಗಿಂತ ಒಂದೆರಡು ಕಮ್ಮಿನೇ ಬೀಳ್ತಿದ್ವು.. ಅವತ್ತು ಮಾತ್ರ ನನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಯಿತು.. ಪಕ್ಕದ ಸೀಟಲ್ಲಿ ಕುಳಿತ ಹುಡುಗಿಯೊಬ್ಬಳು ಮಿಣ್ಣಗೆ ನನ್ನ ಕೆಣಕಿದ್ದಳು, ನಾನು ಅವಳ ಕೀಟಲೆಗೆ ಪ್ರತಿಕ್ರಿಯಿಸಿದ್ದೇ ದೊಡ್ಡ ಅಪರಾಧವಾಗಿ ಹೋಯಿತು..ತೊಳೆದ ಕೆಂಡದಂತಿದ್ದ ಮೇಷ್ಟ್ರು ಮುಖ ಮತ್ತಷ್ಟು ಕಪ್ಪು ಮಾಡಿಕೊಂಡೇ ನನ್ನ ಮೇಲೆ ಮುಗಿಬಿದ್ರು… ಸೀನ್ ಕಟ್ ಮಾಡಿದ್ರೆ ನಾನು ಮಳೆಯಲ್ಲಿ ನಿಂತಿದ್ದೆ, ಅವಳು ಮುಸಿಮುಸಿ ನಗ್ತಿದ್ದಳು..ಸುರಿವ ಮಳೆ ಹಿಡಿಸಿದ ಚಳಿ, ಅವಳ ಮೇಲಿದ್ದ ಸಿಟ್ಟು, ಆದ ಅವಮಾನವೆಲ್ಲಾ ಸೇರಿಕೊಂಡು ಆ ಕ್ಷಣದಲ್ಲಿ ಶಾಲೆಯನ್ನೇ ಬಿಟ್ಟು ಹೋಗುವ ಮನಸ್ಸು ಮಾಡಿದ್ದೆ.. ಅಷ್ಟರಲ್ಲಿ ಮಮತೆಯ ಸಾಕಾರದಂತಿದ್ದ ಒಬ್ಬಾಕೆ ಬಂದ್ರು. ನನ್ನವಸ್ಥೆ ನೋಡಿದ್ದೆ, ಹಿಡಿದ ಕೊಡೆ ಬಿಸಾಡಿ,”ಯಾರ್ರೀ ಅದು ಹೀಗ್ ನಿಲ್ಲಿಸಿದ್ದೂ ಬುದ್ಧಿ ಬೇಡವೇನ್ರಿ?” ಅಂತ ಕೂಗುತ್ತಲೇ , ಸಿಟ್ಟಿನ ಮೇಷ್ಟ್ರಿಗೆ ಉಗಿದು, ನನ್ನನ್ನ ನೆನೆಯೋ ಶಿಕ್ಷೆಯಿಂದ ಬಿಡಿಸಿದ್ರು, ಸೆರಗಿನಲ್ಲಿ ತಲೆ ಒರೆಸಿ, ಬಿಸಿ ಕಾಫಿ ಕೊಟ್ಟರು, ಹೀಗೆ ಅನೀರಿಕ್ಷಿತವಾಗಿ ನನ್ನೊಂದಿಗೆ ಬೆಸೆದು ಕೊಂಡು ಮುಂದೆ ಬದುಕಿನ ಹಾದಿಯಲ್ಲಿ ನಡೆಯೋದ ಹೇಳಿಕೊಟ್ರು ..ಕಲಿಕೆಯ ಬದುಕಲ್ಲಿ ಎಂಟ್ರಿ ಕೊಟ್ಟು ಮರೆಯಾಗದೇ ಕನಸಲ್ಲಿ ಉಳಿದ ಮಳೆಯಂತಹ ಮೇಡಮ್ಮಿನ ಹೆಸರು ಮೆಹಬೂಬಿ ಮೆಹರುನ್ನಿಸಾ.
ಬದುಕಿನ ಅರ್ಥ ಗೊತ್ತಾಗುವ ಮೊದಲೇ ಊರು ಬಿಟ್ಟು ಮತ್ತೊಂದು ಊರು ಸೇರಿಕೊಂಡವ ನಾನು, ಶಾಲೆ, ಪರಿಸರ, ಭಾಷೆ, ಶಿಕ್ಷಣ ಎಲ್ಲವೂ ನನ್ನ ಪಾಲಿಗೆ ಹೊಸದಾಗಿತ್ತು.. ಕೀಟಲೆಗಳಿಗೆ ಹೊಂದಿಕೊಂಡ ಹಾಗೆ ಉಳಿದವುಗಳಿಗೆ ನಾನು ಒಗ್ಗಿಕೊಳ್ಳಲಾಗಲಿಲ್ಲ.. ಅದರ ಪರಿಣಾಮ ಕಿರು ಪರೀಕ್ಷೆಯ ಹಿಂದಿ ವಿಷಯಯಲ್ಲಿ ಫೇಲು, ಉಳಿದದ್ದೆಲ್ಲವೂ ಜಸ್ಟ್ ಫಾಸ್,, ಕಾನ್ವೆಂಟ್ ಸ್ಕೂಲ್ನಲ್ಲಿ ಏಳರವರೆಗೆ ರ್ಯಾಂಕ್ ಪಡೆಯುತ್ತಿದ್ದವ ದೊಡ್ಡಿ ಸ್ಕೂಲ್ನ ಮೊದಲ ಪರೀಕ್ಷೆಯಲ್ಲಿಯೇ ಫೇಲು. ಅಪ್ಪ ನಂದೇನು ತಪ್ಪಿಲ್ಲ.. ದೊಡ್ಡಿ ಸ್ಕೂಲ್ಗೆ ಹಾಕಿದ್ದು ನಿಂದೆ ತಪ್ಪು ಅಂತಾ ವಾದ ಮಾಡಿ ಜಯಸಿದ್ದೇನಾದ್ರೂ, ನನಗೆ ನನ್ನ ಸಾಮರ್ಥ್ಯದ ಬಗ್ಗೆ ಅನುಮಾನ ಹುಟ್ಟಿತ್ತು.. ಫೇಲು ನನ್ನ ಪಾಲಿಗೆ ಭರಿಸಲಾಗದ ಅವಮಾನವೇ ಆಗಿತ್ತು..ಆಗಲೂ ನೆರವಿಗೆ ಬಂದಿದ್ದೂ ಮತ್ತದೇ ಟೀಚರ್…
ಉಳಿದ ಟೀಚರ್ ಗಳು ನನ್ನ ಕಣ್ಣಿಗೆ ಜರ್ಮನಿಯ ಹಿಟ್ಲರ್ನ ಕಾಲಾಳುಗಳಂತೆ, ಔರಂಗಜೇಬನ ಕ್ರೂರ ಸೈನಿಕರಂತೆ ಕಾಣುತ್ತಿದ್ರು.. ಆ ಮಿಸ್ ಮಾತ್ರ ಹಾಗಿರಲಿಲ್ಲ. ನಾವು ಟೀನೇಜಿನ ಮಧ್ಯ ವಯಸ್ಕರಾದ್ರೆ, ಅವರಿಗಿನ್ನೂ ಹರಯದ ಆರಂಭ ಕಾಲ.. ನಮ್ಮ ವಯಸ್ಸಾದ ಸೀನಿಯರ್ಗಳು ಅಂದ್ರೆ ಎಸ್ಎಸ್ಎಲ್ಸಿ ಹುಡುಗ್ರು ಟೀಚರ್ ಮೇಲೆ ಕ್ರಶ್ ಹೊಂದಿದ್ರು. ಹಿರಿ ಮಕ್ಕಳ ಜೊತೆ ಕೆಲ ಮೇಷ್ಟ್ರುಗಳು ಕೂಡ ಮೇಡಮ್ ಮೇಲೇ ಪದ್ಯಗಟ್ಟಿ ಮೆಚ್ಚಿಸಲು ಹೊರಡುತ್ತಿದ್ದರು. ಇದೆಲ್ಲದಕ್ಕೂ ಮೇಡಮ್ನ ನಗುವೇ ಉತ್ತರವಾಗಿತ್ತು..ಆದ್ರೆ ನಕ್ಕ ನಗುವಿನ ಅರ್ಥ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಬಾಯಿ ತುಂಬಾ ಮಾತಾಡ್ತಿದ್ದ ಆಕೆ ನನ್ನ ಪಾಲಿಗೆ ಆಪ್ತಗುರುವಾಗಿ ಕಂಡಿದ್ದರು ಕಾರ್ಯಾನುಭವ ಪಿರಿಯಡ್ಗಳಲ್ಲಿ ನಮ್ಮಿಂದಲೇ ಕಾಂಪೌಂಡ್ ಕಟ್ಟಿಸಿಕೊಂಡು,ಕೂಲಿ ಲೆಕ್ಕದಲ್ಲಿ ಬಿಲ್ ಮಾಡಿಸಿಕೊಂಡು , ಸಿಕ್ಕಸಿಕ್ಕಾಗೆಲ್ಲಾ ನಮ್ಮ ಮೇಲೇನೇ ಗುಡುಗುತ್ತಿದ್ದ ಮೇಷ್ಟ್ರಗಳ ನಡುವೆ, ಮಳೆಯಂತೇ ಮಮತೆ ಸುರಿಸುತ್ತಿದ್ದ ಮೇಡಮ್ ಮಾತುಗಳು ನನ್ನ ವ್ಯಕ್ತಿತ್ವದ ಮೇಲೂ ಪ್ರಭಾವ ಬೀರಿತು., ಮೊದಲ ಆಶು ಕವಿತೆ ಸ್ಪರ್ಧೆಯಲ್ಲಿ ಮೊಸರನ್ನದ ಮೇಲೆ ಹೇಳಿದ ಕವಿತೆ ಯಾರಿಗೂ ಇಷ್ಟವಾಗದಿದ್ರೂ; “ಯಾರು ಹೇಳುವ ಧೈರ್ಯ ಮಾಡಲಿಲ್ಲ ನೀನು ಮಾಡಿದೆಯಲ್ಲ, ಶಹಬ್ಬಾಸ್ ಕಣೋ” ಅಂತಾ ಬೆನ್ನು ತಟ್ಟಿ ನಿಂತ ಹಿಂದಿ ಮೇಡಮ್ , ಈಗಲೂ ನನ್ನ ಗೀಚು ಕವನಗಳಿಗೆ ಬೆನ್ನುತಟ್ಟುತ್ತಿರುತ್ತಾರೆ. ಸ್ಟೇಜ್ನ್ನೇ ಹತ್ತದವನಿಗೆ ಡ್ಯಾನ್ಸ್ ಕಲಿಸಿ ಚಪ್ಪ ಚಪ್ಪ ಚರ್ಖ ಚಲೇ ಅಂತ ಡ್ಯಾನ್ಸ್ ಮಾಡಿಸಿ ಖುಷಿ ಪಟ್ಟ ಮೇಡಮ್,ಸಮಾಜದೆದುರು ನಿಲ್ಲುವ ಧೈರ್ಯ ಕಲಿಸಿದ್ರು.. ಹಿಂದಿಯ ಸರಾಗತನದ ಜೊತೆಜೊತೆಗೆ ಸಂವಹನ ಶೈಲಿಯನ್ನು ಅರ್ಥೈಸಿದ್ರು. ಸಮಾಜವನ್ನು ಅರ್ಥ ಮಾಡಿಸಿದ್ರು, ಅರ್ಥದ ವ್ಯವಹಾರ ತಿಳಿ ಹೇಳಿದ್ರು, ತಾಯಿಯಂತಹ ಗೆಳತಿಯಾಗಿ ನನ್ನೆಲ್ಲಾ ಅನುಮಾನಗಳಿಗೂ ಪರಿಹಾರ ಹೇಳಿ, ಕುಡಿ ಮುರಿದು ಸಸಿ ಹರಡುವಂತೆ ನನ್ನ ಬೆಳೆಸಿದ್ರು..
ತಮ್ಮ ಬದುಕಿನ ಸೂತ್ರಗಳನ್ನು ಅದರ ಪಾಡಿಗೆ ಹರಿಯ ಬಿಟ್ಟು, ಪಡಬಾರದ ಕಷ್ಟ ಪಟ್ಟರೂ ನಗುವನ್ನು ಬಿಟ್ಟುಕೊಡದ ಅವರು ನನಗೆ ಇಂದಿಗೂ ರೋಲ್ ಮಾಡೆಲ್..ಈಗ ನಾನೇನಾಗಿದ್ದೇನೋ, ಮುಂದೇನಾಗುತ್ತೇನೋ ಅದಕ್ಕೆ ಅವರು ಕಲಿಸಿದ ಪಾಠವೂ ಕಾರಣ.. ಅದಕ್ಕಿಂತ ಹೆಚ್ಚಾಗಿ ಸಂಸ್ಕೃತಿ, ಸಮಾಜ, ಸಂಬಂಧ, ಇತ್ಯಾದಿಯ ಭಾವ ಜಗತ್ತಿನೊಂದಿಗೆ ಸ್ಪಂದಿಸುವ ರೀತಿ ಹೇಳಿಕೊಟ್ಟ ಮೇಡಮ್ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದ್ದಾರೆ.. ಈಗ ಅಂತಹ ಮೇಡಮ್ಗಳಿರಲಿ, ಗುಡುಗೋ ಮೇಷ್ಟ್ರುಗಳಿರಲಿ, ಜೀವನದ ಪಾಠ ಹೇಳುವ ಶಿಕ್ಷಕ ವೃಂದವೇ ಕಾಣುತ್ತಿಲ್ಲ.. ದುಡ್ಡು ಕೊಡಲ್ವಾ? ಅನ್ನೋ ತಂದೆ- ತಾಯಿ, ಸುಲಿಗೆಳಿದಿರೋ ಶಾಲೆ, ಫಾರ್ಮುಲಾದ ಲೆಕ್ಕಚಾರದಲ್ಲಿ ಕಲಿಯುತ್ತಿರೋ ವಿದ್ಯಾರ್ಥಿಗಳು…ಇದಿಷ್ಟೇ ಗುರು ಶಿಷ್ಯರ ಒಡನಾಟವಲ್ಲ.. ವರ್ತಮಾನದ ಘಟನೆಗಳನ್ನು ಬಿಡಿಸಿ ತಿಳಿಸುವವರಿಲ್ಲ, ಸಾಮಾಜಿಕ ಸ್ಥರಗಳನ್ನ ಬಿಡಿಸಿ ಹೇಳುವರಿಲ್ಲ. ದುಡಿಯೋ ಯಂತ್ರಗಳನ್ನು ತಯಾರು ಮಾಡೋದೇ ಅಂತಿಮ ಗುರಿ. ಆಟಗಳ ಮಾತು ಹಾಗಿರಲಿ, ಮಕ್ಕಳ ಚೇಷ್ಟೆಗೂ ಶಿಸ್ತು ಅವಕಾಶ ಮಾಡಿಕೊಡೋದಿಲ್ಲ. ಕಾಲಘಟ್ಟದಲ್ಲಿ ಕಾಲವಷ್ಟೇ ಬದಲಾಗಿಲ್ಲ.. ಶಿಕ್ಷಕನೂ ಬದಲಾಗಿದ್ದಾನೆ, ವಿದ್ಯಾರ್ಥಿಯೂ ಬದಲಾಗಿದ್ಧಾನೆ. ಮಕ್ಕಳನ್ನೇ ಬಳಸಿಕೊಳ್ಳುವ ಮೇಷ್ಟ್ರುಗಳು, ಮೇಷ್ಟ್ರುಗಳನ್ನೇ ಬಲಿ ತೆಗೆದುಕೊಳ್ಳುವ ಮಕ್ಕಳು.. ಸರಿದಾರಿ ಹೇಳಿಕೊಡುವ ಮನಸು ಶಿಕ್ಷಕರಿಗಿರೋದಿಲ್ಲ, ತಪ್ಪು ಸರಿಗಳನ್ನು ಕಲಿಯುವ ಆಸಕ್ತಿ ಮಕ್ಕಳಿಗಿರೋದಿಲ್ಲ. ಇನ್ಫ್ಯಾಕ್ಟ್ ಮಕ್ಕಳನ್ನು ತಪ್ಪು ಮಾಡೋದಕ್ಕೇ ಬಿಡೋದಿಲ್ಲ ಈಗಿನ ಶಿಕ್ಷಣ ವ್ಯವಸ್ಥೆ. ಹೀಗಾಗಿ ಮಕ್ಕಳು ಮಾಡಿದ್ದೇಲ್ಲವೂ ಸರಿಯಾಗುತ್ತಿದೆ..ಸರಿಯಾದ್ದು ಎಂದೆವಲ್ಲಾ ಅದು ತಪ್ಪಾಗಿಯೇ ಇರುತ್ತವೆ. ಭವಿಷ್ಯ ಭೂತದ ಬುಡದಲ್ಲೇ ಬತ್ತಿ ಹೋಗಿರುತ್ತೆ..
ನಮ್ಮ ವಯಸು ಬಲಿಯೋ ಕಾಲದಲ್ಲಿ ಸುತ್ತಮುತ್ತಲಿನ ಪರಿಸರಕ್ಕಿಂತ ಹೆಚ್ಚಾಗಿ ಪಾಠ ಹೇಳಿಕೊಡುವ ಶಿಕ್ಷಕರೇ ಹೆಚ್ಚು ಪ್ರಭಾವ ಬೀರಿದ್ರು. ಮಾಸ್ಟರ್ಗಳ ಪ್ಯಾಂಟ್ ಸ್ಟೈಲ್ ನೋಡಿ ಅದೇರೀತಿ ಹೊಲಿ ಅಂತ ಟೈಲರ್ಗೆ ದುಂಬಾಲು ಬೀಳುವುದರಿಂದ ಹಿಡಿದು, ಕ್ರಾಂತಿಕಾರಿ ಮಾತುಗಳನ್ನು ಕೇಳಿಸಿಕೊಂಡು ಕಾಡಿಗೆ ಹೋಗಿ ಪ್ರಾಣ ಬಿಡುವವರೆಗೂ ಅದೆಷ್ಟೋ ವಿದ್ಯಾರ್ಥಿಗಳಿಗೆ ಶಿಕ್ಷಕನೇ ದಾರಿ ತೋರುತ್ತಿದ್ದ, ಮಾರ್ಗ ದರ್ಶಕನಾಗುತಿದ್ದ. ವ್ಯವಸ್ಥೆ ವಿರುದ್ಧ ಸೆಟೆದು ನಿಲ್ಲುವಂತೆ ಮೇಷ್ಟ್ರು ಗುಡುಗಿದ್ರೆ, ಬದುಕಿನ ಅವ್ಯವಸ್ಥೆ ಮೇಲೆ ಮಮತೆಯ ಮಳೆ ಸುರಿಸಿ, ಧೈರ್ಯದ ಬೆಳೆ ತೆಗೆಯುತ್ತಿದ್ದರು ಅಂದಿನ ಶಿಕ್ಷಕಿಯರು. ಅದರ ಸಾಕ್ಷಿಯಾಗಿ ತಲ್ಲಣವೆಬ್ಬಿಸಿ ಸಮಾಜದಲ್ಲಿ ಹರಿಯುವ ನೀರಾಗುತಿತ್ತ್ರು ವಿದ್ಯಾರ್ಥಿಗಳು. ಆದರೀಗ, ಶಿಕ್ಷಕ ಹಾಗು ವಿಧ್ಯಾರ್ಥಿಯ ಸಂಬಂಧ ಮರುಬಂಧನಕ್ಕೆ ಒಳಗಾಗಿದೆ. ಶಿಕ್ಷಕರಿಗೆ ವಿಧೇಯ ವಿದ್ಯಾರ್ಥಿಯಲ್ಲ, ಶಿಕ್ಷನನೇ ವಿದ್ಯಾರ್ಥಿಗೆ ವಿಧೇಯ. ಬದಲಾಗುತ್ತಿರುವ ಈ ತಲ್ಲಣಗಳಲ್ಲಿಯೂ ಸಾಧನೆಯ ಬೆಳೆ ಬೆಳೆಯುತ್ತಿದೆ. ಆದ್ರೆ, ಅದರಲ್ಲಿ ಗುರುವರ್ಗ ತುಂಬಿದ ಜ್ಞಾನದ ಸತ್ವ ಕಾಣುತ್ತಿಲ್ಲ. ಪರಿಣಾಮವೆಂಬಂತೆ ಸಮಾಜ ಸಾರ ಕಳೆದುಕೊಳ್ಳುತ್ತಿದೆ.. ಅಲ್ಲದೆ ಬೆಳೆಯುತ್ತಿರುವ ಶುದ್ಧ ಕಾರ್ಫೋರೇಟ್ ಪ್ರಾಡಕ್ಟ್ಗಳಲ್ಲಿ ಜೀವಂತಿಕೆ ಮರೆಯಾಗುತ್ತಿದೆ. ಇಂತಹ ವ್ಯರ್ಥ ಜಡ್ಡಿನಡಿಯಲ್ಲಿ ಅರ್ಥ ಕಳೆದುಕೊಳ್ಳುವ ಬದಲು ಮುಕ್ತಿ ಪಡೆಯಲು ಮತ್ತೆ ಹಿಂದಿನ ಗುರುಗಳ ಗುಲಾಮನಾಗಬೇಕಿದೆ. ಗುಡುಗುವ ಮೇಷ್ಟ್ರೂ, ಮಳೆಯಂಥ ಮೇಡಂಗಳ ಮಧ್ಯೆ ಮುಕ್ತವಾಗಿ ನೆನೆಯಬೇಕಿದೆ.
ನಾವು ರೋಬೊಟ್ಗಳನ್ನು ತಯಾರಿಸುವಲ್ಲಿ ಹಿಂದೆ ಬಿದ್ದಿಲ್ಲ. ಬೆಳಿಗ್ಗೆ ಆರರಿಂದ ಸರಿರಾತ್ರಿಯವರೆಗೂ ಟ್ಯೂಶನ್, ಕ್ಲಾಸು, ಎಗ್ಸಾಮು, ಸ್ಟಡಿ, ಎಂದು ಎಳೆಯರನನ್ನು ತಳ್ಳುತ್ತಾ ಅವಕ್ಕೆ ಭಾರತೀಯ ಭಾಷೆ, ಕಲೆ, ಸಂಸ್ಕೃತಿಯಂಥ ಮಾನವಿಕ ಗುಣಗಳ ಸ್ಪರ್ಶವೇ ಆಗದ ಹಾಗೆ ಬೆಳೆಸುತ್ತೇವಲ್ಲ? ಅಂಥ ಸುಖಿ ಪರಿವಾರದ ರೋಬೊಟ್ಗಳೇ ನಾಳೆ ಸೂಪರ್ ಇಂಟಲಿಜೆಂಟ್ ಜೀವಿಗಳನ್ನು ಸೃಷ್ಟಿಸಲು ಮುಂದಾಗುತ್ತವೆ. ಮನುಷ್ಯ ನಿರ್ಮಿಸಿದ ರೋಬೊಟ್ಗಳಿಗಿಂತ ರೋಬೊಟ್ ಸೃಷ್ಟಿಸಿಸುವ ರೋಬೊಟ್ಗಳದ್ದೇ ಭಯ ಜಾಸ್ತಿ.. ಹೀಗೆ ಭವಿಷ್ಯದ ಸೃಷ್ಟಿಯ ಬಗ್ಗೆ ನನ್ನಿಷ್ಟದ ಲೇಖಕ ನಾಗೇಶ್ ಹೆಗಡೆ ಬರೆಯುತ್ತಾ ಹೋಗುತ್ತಾರೆ.. ಸರಿದಾರಿಯಲ್ಲಿ ಸಾಗದ ವರ್ತಮಾನದ ಕಲಿಕೆಯನ್ನು ಚಿವುಟಿದ ಅವರ ಬರವಣಿಗೆ ನನ್ನ ತಲೆಯಲ್ಲಿ ಎಬ್ಬಿಸಿದ ಆಲೋಚನೆಗಳಿಂದಾಗಿ ಹಿಂದಿನದ್ದೆಲ್ಲಾ ನೆನಪಾಗಿ ಇಷ್ಟೆಲ್ಲಾ ಬರೆಯುವಂತೆ ಮಾಡಿತು. ಅವರೆತ್ತಿರೋ ಪ್ರಶ್ನೆಗಳನ್ನು ಅರ್ಥಮಾಡಿಕೊಂಡರೆ, ಕಳೆದುಕೊಂಡಿದ್ದಕ್ಕಿಂತ, ಕಳೆದುಕೊಳ್ಳು ಬಹುದಾದನ್ನೆಲ್ಲಾ ಉಳಿಸಿಕೊಳ್ಳಬಹುದೇನೋ…?
ಕೊನೆಯ ದಾಗಿ ಇಷ್ಟೆ ಹೇಳುತ್ತೇನೆ..ಕಲಿಸುವ ಮಹತ್ವ ಮರೆಯಾಗುತ್ತಿರುವ ಸಂದರ್ಭ, ಆಚರಣೆಯ ಉದ್ದೇಶಕ್ಕೆ ಬದಲಾಗಿ ಹೆಸರಿನ ಬದಲಾವಣೆಗೆ ಒತ್ತು ನೀಡಿರುವ ಸರ್ಕಾರ, ಯಾವುದಕ್ಕೂ ಪ್ರತಿಕ್ರಿಯಿಸದ ಕಾಲದ ನಡುವೆ ಹೀಗೆ ಬಂದು ಹಾಗೆ ಹೋಗುತ್ತಿರೋ ಶಿಕ್ಷಕರ ದಿನಾಚರಣೆ, ಬಾಲ್ಯದ ನೆನಪುಗಳನ್ನ ಕೆದಕಿ, ಮನಸ್ಸನ್ನು ನೆನೆಸುತ್ತಿದೆ..ಗುಡುಗಿನಂಥ ಮೇಷ್ಟ್ರು, ಮಳೆಯಂಥ ಮೇಡಮ್ಮು ಮತ್ತೆ ನೆನಪಾಗುತ್ತಿದ್ದಾರೆ.. ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
-ಅಜ್ಜಿಮನೆ ಗಣೇಶ್
*****
ಗಣೇಶಣ್ಣ, ಲೇಖನ ತುಂಬಾ ಚೆನ್ನಾಗಿದೆ. ನಾನೂ ನನ್ನ ಶಿಶುವಿಹಾರದ ಬೂಬಮ್ಮನನ್ನ ನೆನುವಷ್ಟು ಕಾಡಿಬಿಡ್ತು. ಕಪ್ಪಗೆ ಗುಂಡುಗುಂಡಗಿದ್ದ ನನ್ನನ್ನ ಆ ಹೆಂಗಸು ಕಂಕುಳಲ್ಲಿ ಕೂರಿಸಿಕೊಂಡು ಶಿಶುವಿಹಾರಕ್ಕೆ ಕರೆದುಕೊಂಡು ಹೋಗುತ್ತಿದ್ದಳು. ಜೇಬು ತುಂಬಾ ನಿಂಬೆ ಹುಳಿ ಪೆಪ್ಪರಮೆಂಟು ಹೊಯ್ಯುತ್ತಿದ್ದಳು. ಒಗ್ಗರಣೆ ಅನ್ನ ಮಾಡಿ, ನನಗೆ ತಟ್ಟೆ ತುಂಬಾ ಬಡಿಸುತ್ತಿದ್ದಳು. ಅದು ಇವತ್ತಗೂ ನನಗಿಷ್ಟ. ಎಂಥಾ ಹೆಂಗಸಂದ್ರೆ ನಾನು ಐದನೇ ಕ್ಲಾಸಲ್ಲಿದಾಗ, ಆಕೆ ಶಿರಾದ ಮೊದಲೂರಿನಲ್ಲಿದ್ದಳು. ನನ್ನ ನೋಡಲೆಂದೇ ಆಕೆ ನಮ್ಮೂರಿಗೆ ಬಂದು ಹೋಗಿದ್ದಳು. ಶಾಲೆಗೆ ತಪ್ಪದೇ ಹೋಗುವಂಥಾ ವೃತ ನನ್ನಲ್ಲಿ ಒಡಮೂಡಲು ಆ ತಾಯಿಯೇ ಕಾರಣ.
ಚೆಂದಾದ ಲೇಖನ. ಕಾಕತಾಳಿಯವೆಂದರೆ
ನಾನೂ ಈ ವಾರದ ನನ್ನ ಲೇಖನಕ್ಕೆ
ನಾಗೇಶ್ ಹೆಗಡೆಯವರ ಚಿಂತನೆಯನ್ನು
ಬಳಸಿಕೊಂಡಿದ್ದೇನೆ. ಧನ್ಯವಾದಗಳು
ಗಣೇಶ್.
ನಾವು ಕಷ್ಟಗಳನ್ನೇ ಕಂಡಿದ್ರೂ ಹಳೆ ನೆನಪುಗಳು ಯಾವಾಗಲೂ ಖುಷೆಯನ್ನೇ ಕೊಡ್ತಾವೆ. ನೆನಪಿನ ಬುತ್ತಿಗಳೇ ಹಾಗೆ.. ನಿನ್ನೀ ಲೇಖನ ತಂಬಾಕು ಚನ್ನಾಗಿದೆ..
ತುಂಬಾ ಆಪ್ತ ಬರಹ.. ಬಾಲ್ಯಕಾಲ, ಆ ಸರಕಾರಿ ಶಾಲೆ, ಟೀಚರು, ಮೇಷ್ಟ್ರು ಎಲ್ರೂ ನೆನಪಾದರು.
ಕೊನೆಗೆ ನೀವು ಹೇಳುವ ಒಂದಿಷ್ಟು ವಿಚಾರ ನನ್ನನ್ನೂ ಬಲವಾಗಿ ಕಾಡಿದ್ದಿದೆ.
ಅಸ್ಥಿರ ಮತ್ತು ವೇಗವಾದ ಜೀವನವೇ ಬದುಕಿನ ವೌಲ್ಯ ಎಂದು ಪರಿಗಣಿಸಿರುವ ನಾವು ಸಂಯಮ ಮತ್ತು ಸರಳತೆಯಿಂದ ಕೂಡಿದ ಜೀವನ ವ್ಯವಸ್ಥೆಯಿಂದ ದೂರವಾಗಿದ್ದೇವೆ. ಹಣ ಮತ್ತು ನಗರ ಕೇಂದ್ರೀಕೃತ ಯಾಂತ್ರಿಕ ಸಂಸ್ಕೃತಿಗೆ ಮಾರು ಹೋಗಿ ಬರೀ ದುಡ್ಡು ಗಳಿಸುವ ಯಂತ್ರಗಳ ಸೃಷ್ಟಿಯಲ್ಲಿ ತೊಡಗಿದ್ದೇವೆ…
ಅಂದು ಸುಳ್ಳು ಹೇಳಿದ್ದಕ್ಕೆ ಮಾಸ್ತರರಿಂದ ಏಟು ತಿಂದು, ಇಂದು ಸುಳ್ಳು ಹೇಳಲು ಸ್ವಲ್ಪ ಕಷ್ಟವಾಗುತ್ತದೆ. ಅದೃಷ್ಟವಶಾತ್ ನನಗೆ ಮೊದಲಿನಿಂದ, ಕೊನೆಯ ವರೆಗೂ ಒಳ್ಳೆಯ ಶಿಕ್ಷಕರೇ ಸಿಕ್ಕಿದರು. ನಿಮ್ಮ ಲೇಖನ ಓದುತ್ತಿರುವಾಗ, ಅನೇಕರ ನೆನಪಾಯಿತು. ನಿಮ್ಮ ಗುರು ವಂದನೆ ಚೆನ್ನಾಗಿದೆ.
ಸಕಾಲಿಕ ಬರಹ
ಪ್ರತಿಸ್ಪಂದನೆಗೆ ಧನ್ಯವಾದಗಳು….ನಿಮ್ಮೆಲ್ಲರ ಸಹಕಾರ ಹೀಗೆ ಇರಲಿ…