ಹಸಿರ ಹಾದಿಯ ಪಯಣ, ಮನ ತಣಿಸುವ ಕಾನನ. ಸವಿಯುತ್ತಾ ಸವಿಯುತ್ತಾ ಮುಂದೆ ಸಾಗಿದರೇ ಮಲೆನಾಡ ಹಬ್ಬಾಗಿಲಿನಲ್ಲಿ ಕೈ ಬೀಡಿ ಕರೆಯುವುದೇ ಗುಡವಿ ಎಂಬ ಪಕ್ಷಿಗಳ ಲೋಕ. ಈ ಪ್ರವಾಸಿ ತಾಣಕ್ಕೆ ಕಾಡಿನ ಮಧ್ಯದ ಹಾದಿಯ ಮೂಲಕ ಸಾಗುತ್ತಾ ಹೋದ ಹಾಗೆ, ಪ್ರವಾಸಿಗರ ಮನ ಮಿಡಿಯುತ್ತದೆ. ತಂಪಾದ ಹಾದಿಯ ಪಯಣ ನಿಮಗೆ ಮುಗಗೊಳಿಸುತ್ತದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನಿಂದ 12 ಕಿಲೋಮೀಟರ್ ದೂರದಲ್ಲಿರುವ ಸುಮಾರು 23 ಬಗೆಯ ಹಕ್ಕಿಗಳ ಕಲರವದ ತಾಣ ಗುಡವಿ ಪಕ್ಷಿಧಾಮ. 1986 ರಲ್ಲಿ ಜೆ.ಎಚ್.ಪಟೇಲ್ ಅವರಿಂದ ಉದ್ಘಾಟನೆಯಾದ ಈ ಪಕ್ಷಿಧಾಮ, 182.30 ಎಕರೆ ವಿಸ್ತೀರ್ಣದಲ್ಲಿದೆ.
ವೈಟ್ ನೆಕ್ಕಡ್ ಸ್ಟರ್ಕ್, ಡಾಟರ್, ಕಾಟರ್ ಈಗ್ರೇಟ್, ನೀರು ನವಿಲು, ಬೆಳ್ಳಕ್ಕಿ, ಕೊಕ್ಕರೆ ಸೇರಿದಂತೆ ಇನ್ನೂ ಮೊದಲಾದ 23ಕ್ಕೂ ಹೆಚ್ಚು ಬಗೆಯ ಪಕ್ಷಿಗಳನ್ನು ನೀವಿಲ್ಲಿ ಕಾಣಬಹುದು. ಪಕ್ಷಿಗಳನ್ನು ವೀಕ್ಷಿಸಲು, ಈ ತಾಣದಲ್ಲಿ ಚತುರ್ಥ ಪಥದಲ್ಲಿ ವೀಕ್ಷಣಾ ಗೋಪುರ ನಿರ್ಮಿಸಲಾಗಿದೆ. ಈ ವೀಕ್ಷಣಾ ಗೋಪುರ ಏರಿ ನೋಡಿದರೆ, ಬಗೆ ಬಗೆಯ ಇಲ್ಲಿನ ಪಕ್ಷಿಗಳ ಕಲರವ, ನಲಿದಾಟ, ಆಟ, ಮರಿಗಳಿಗೆ ಗುಟುಕು ನೀಡುವುದು, ಮೊಟ್ಟೆ ಇಟ್ಟು ಮರಿ ಮಾಡುತ್ತಿರುವುದು, ಮೊಟ್ಟೆ ಹೊಡೆದು ಹೊರ ಬರುವ ಮರಿಗಳ ಅಮೂಲ್ಯ ಕ್ಷಣವನ್ನು ನೀವಿಲ್ಲಿ ಕಣ್ ತುಂಬಿಕೊಂಡು ಸವಿಯಬಹುದು.
ಭೇಟಿ ಕೊಡಲು ಸೂಕ್ತ ಸಮಯ
ಪ್ರವಾಸಿಗರುವ ಇಲ್ಲಿಗೆ ಭೇಟಿ ಕೊಡಲು ಸೂಕ್ತ ಸಮಯ ಜೂನ್ ನಿಂದ ನವೆಂಬರ್ ತಿಂಗಳು. ಈ ಸಮಯದಲ್ಲಿ ನೀವು ಗುಡುವಿ ಪಕ್ಷಿಧಾಮಕ್ಕೆ ಭೇಟಿ ನೀಡಿದರೇ, ಬಗೆ ಬಗೆಯ ಪಕ್ಷಿಗಳ ಕಲರವದ ಮೆಲ್ ನುಡಿಯ ನಿನಾದ ಸವಿಯಬಹುದು.
ಪ್ರವೇಶ ಶುಲ್ಕ
ಪ್ರವಾಸಿಗರು ಗುಡವಿ ಪಕ್ಷಿಧಾಮವನ್ನು ವೀಕ್ಷಿಸಲು ಒಳಗೆ ತೆರಳಬೇಕಾದರೇ, ಪ್ರವೇಶ ಶುಲ್ಕವಿದೆ. ಮಕ್ಕಳಿಗೆ ರೂ.10, ವಯಸ್ಕರಿಗೆ ರೂ.25 ಶುಲ್ಕ ವಿಧಿಸಲಾಗಿದೆ. ಈ ಪ್ರವೇಶ ಶುಲ್ಕ ನೀಡಿ, ಟಿಕೆಟ್ ಖರೀದಿಸಿ, ಒಳ ನಡೆದರೇ, ಪಕ್ಷಿಸಂಕುಲದ ನೃತ್ಯ ನರ್ತನ ನಿಮಗೆ ಎದುರಾಗುತ್ತದೆ..
ಹತ್ತಿರದ ಪ್ರವಾಸಿ ಸ್ಥಳಗಳು
ಒಂದು ದಿನ ಪ್ರವಾಸದಲ್ಲಿ ಜೋಗದಜಲಪಾತ, ಸಿಗಂಧೂರು, ಗುಡವಿ, ಬನವಾಸಿ ಪ್ರವಾಸಿ ತಾಣಗಳನ್ನು ನೋಡಬಹು. ಇಲ್ಲಿಗೆ ತೆರಳುವುದಾದರೇ, ಶನಿವಾರ ರಾತ್ರಿ 11.15ಕ್ಕೆ ಬೆಂಗಳೂರಿನಿಂದ ಹೊರಡುವ ರೈಲು ಏರಿದರೇ, ಸಾಗರವನ್ನು ಭಾನುವಾರ ಬೆಳಿಗ್ಗೆ 7ಕ್ಕೆ ತಲುಪಬಹುದು. ಇಲ್ಲಿಂದ ಖಾಸಗಿ ವಾಹನ ಮಾಡಿಕೊಂಡು ಮುಂದೆ ಸಾಗಿದರೇ, ಜೀವನದಲ್ಲಿ ಒಮ್ಮೆಯಾದರೂ ನೋಡಲೇ ಬೇಕಾದ ಪ್ರವಾಸಿ ತಾಣ ಜೋಗದ ಜಲಪಾತ 34 ಕಿಲೋಮೀಟರ್. ತಾಯಿ ಸಿಂಗಧೂರು ಚೌಡೇಶ್ವರಿ ತಾಣ, 30 ಕಿಲೋಮೀಟರ್. ಇವೆರಡೂ ನೋಡಿಕೊಂಡು, ಗುಡವಿ ಪಕ್ಷಿಧಾಮ ನೋಡಿಕೊಂಡು, ಮರಳಿ ಭಾನುವಾರ ರಾತ್ರಿ 8.30ಕ್ಕೆ ಹೊರಡುವ ರೈಲನ್ನು ಏರಿದರೇ ಮರಳಿ ಬೆಂಗಳೂರು ತಲುಪಬಹುದು.
ಹೋಗೋದು ಹೇಗೆ..?
ಸೊರಬ ತಾಲೂಕಿನಿಂದ 12 ಕಿಲೋಮೀಟರ್ ಇರುವ ಈ ಗುಡವಿ ಪಕ್ಷಿಧಾಮಕ್ಕೆ ಬಸ್ ವ್ಯವಸ್ಥೆ ಇದೆ. ನೀವು ನಿಮ್ಮದೇ ವಾಹನದಲ್ಲಿ ತೆರಳುವುದಾದರೇ, ಸೊರಬದಿಂದ ಹಾನಗಲ್ ರಸ್ತೆಯ ಮೂಲಕ ನಾಲ್ಕು ಕಿಲೋಮೀಟರ್ ಸಾಗಿ, ಚಿತ್ರಟ್ಟೆಹಳ್ಳಿಯ ಗೇಟ್ ನಲ್ಲಿ ಎಡಕ್ಕೆ ತಿರುವು ಪಡೆದು, 9 ಕಿಲೋಮೀಟರ್ ಸಾಗಿದರೆ ಸಾಕು, ಗುಡವಿ ಪಕ್ಷಿಧಾಮ ನಿಮ್ಮನ್ನು ಸ್ವಾಗತಿಸುತ್ತದೆ. ರೈಲು ಮೂಲಕ ತೆರಳುವುದಾದರೇ, ಸಾಗರಕ್ಕೆ ತೆರಳಿ, ಅಲ್ಲಿಂದ ಸೊರಬಗೆ ತೆರಳಿದರೇ ನೀವು ಈ ಪ್ರವಾಸಿವತಾಣಕ್ಕೆ ತೆರಳಬಹುದು.
ಸೋ ಒಮ್ಮೆ ಶಿವಮೊಗ್ಗ ಜಿಲ್ಲೆಗೆ ಪ್ರವಾಸಕ್ಕೆ ತೆರಳಿದರೇ, ಸೊರಬ ತಾಲೂಕಿನ ಈ ಗುಡವಿ ಪಕ್ಷಿಧಾಮ, ಸಾಗರ ತಾಲೂಕಿನ ಜೋಗದ ಜಲಪಾತ, ಸಿಗಂಧೂರು ಚೌಡೇಶ್ವರಿ ದೇವಾಲಯಕ್ಕೆ ಮಿಸ್ ಮಾಡದೇ ನೋಡಿಕೊಂಡು ಬನ್ನಿ. ಬಟ್ ಟೇಕ್ ಕೇರ್..
ವಸಂತ ಬಿ ಈಶ್ವರಗೆರೆ