ಯಾವ ಗುಂಪುಗಳ ಬಗ್ಗೆ ಮಾತನಾಡುತ್ತಿದ್ದೇನೆ, ಅಂದಿರಾ? ನಮ್ಮ ದೇಶದಲ್ಲಿ ಹೇರಳವಾಗಿ ಸಿಗುವ ಜಾತಿ, ಮತ, ಭಾಷೆ, ಜನಾಂಗ, ವ್ಯಕ್ತಿಗಳ ಪರ, ವಿರೋಧಗಳ ಗುಂಪಲ್ಲ, ಮಾರ್ರೆ. ನಾ ಹೇಳ್ತಾ ಇರೋದು ಈ ಮುಖಪುಟ, ವಾಟ್ಸಾಪ್, ಇನ್ಸ್ಟಾ, ಟೆಲಿಗ್ರಾಮ್ ಇತ್ಯಾದಿಗಳಲ್ಲಿ ಕಾಣ ಸಿಗುವ ” ಗ್ರೂಪ್” ಗಳು. ಊಟ, ಸೀರೆ, ಸಾಹಿತ್ಯ, ಅಡುಗೆ, ಭಾಷೆ, ಪಂಗಡ… ಯಾವುದು ಬೇಕು ಹೇಳಿ? ಎಲ್ಲ ರೀತಿಯ ಗುಂಪುಗಳೂ ನಿಮಗೆ ಕಾಣ ಸಿಗುತ್ತವೆ. ಗಣತಿಯ ಪ್ರಕಾರ ೬೨೦ಮಿಲ್ಲಿಯನ್ ಗ್ರೂಪುಗಳು ಇವೆಯಂತೆ ಬರೀ ಮುಖಪುಟದಲ್ಲಿ! ಇವುಗಳ ವೈವಿಧ್ಯ ನಮ್ಮ ಎಣಿಕೆಗೆ ಮೀರಿದ್ದು.
ನಾ ಹೇಳಹೊರಟಿರುವುದು ಜನ ಸಾಮಾನ್ಯರಾದ ನಾವು, ಕೆಲವು ಹತ್ತಿರದ ಸ್ನೇಹಿತರ ಜತೆಗಿರುವ ಗುಂಪುಗಳು. ಇವು ನಮ್ಮ ಸಹಪಾಠಿಗಳದ್ದಾಗಿರಬಹುದು, ನಮ್ಮ ಅಪಾರ್ಟ್ಮೆಂಟುಗಳ ನಿವಾಸಿಗಳದ್ದಾಗಿರಬಹುದು, ಸಹೋದ್ಯೋಗಿಗಳದ್ದಾಗಿರಬಹುದು ಅಥವಾ ಮುಖಪುಟದಲ್ಲಿ ಸಮಾನ ಆಸಕ್ತಿಯುಳ್ಳವರದ್ದಾಗಿರಬಹುದು. ಕೆಲವೊಮ್ಮೆ ನಾವೇ ಗುಂಪಿನ ವಿಷಯದಲ್ಲಿ ಆಸಕ್ತಿ ಹೊಂದಿ ಸೇರಿರಬಹುದು. ಕೆಲವೊಮ್ಮೆ ನಮಗರಿವಿಲ್ಲದಂತೆ ಯಾರೊ ನಮ್ಮನ್ನು ಸೇರಿಸಿಬಿಟ್ಟಿರಬಹುದು. ಒಟ್ಟಿನಲ್ಲಿ ನಾವು ಹಲವಾರು ಗುಂಪುಗಳ ಸದಸ್ಯರಾಗಿಬಿಟ್ಟಿರುತ್ತೀವಿ.
ಮೊದ ಮೊದಲು ಗುಂಪಿನ ನಿಯಮಗಳು, ಸದಸ್ಯರನ್ನು ಅರ್ಥ ಮಾಡಿಕೊಳ್ಳಲು ಹೆಣಗಾಡಬೇಕಿರುತ್ತದೆ. ನಾನಿರುವ ಸ್ಕೂಲ್, ಕಾಲೇಜು ಗುಂಪುಗಳಲ್ಲಿ ಕೂಡ ಈ ಕಷ್ಟ ಎದುರಿಸಿದ್ದೇನೆ. ನಮ್ಮ ಜತೆ ಓದಿದವರಿರಬಹುದು, ಆಟ ಆಡಿದವರಿರಬಹುದು ಆದರೊ ಈಗ ಅವರೆಲ್ಲ ಪ್ರಬುದ್ಧರು, ತಮ್ಮದೇ ವ್ಯಕ್ತಿತ್ವ ಹೊಂದಿದವರಾಗಿರಬಹುದು. ಮುಂಚಿನಷ್ಟು ಸಲುಗೆ ಈಗ ಇರುವುದಿಲ್ಲ. ಈಗಲೂ ಏಕವಚನದಲ್ಲಿ ಮಾತನಾಡಿಸಿದರೂ ಮುಂಚಿನಷ್ಟು ಫ಼್ರೀ ಆಗಿರುವುದಕ್ಕೆ ಕಷ್ಟ. ಹಾ, ಚಿಕ್ಕ ವಯಸ್ಸಿನಿಂದ ಇಲ್ಲಿಯವರೆಗೂ ಸ್ನೇಹವನ್ನು ಕಾಪಾಡಿಕೊಂಡು ಬಂದಿದ್ದರೆ ಅದು ಬೇರೆ ವಿಷಯ. ಹೊಸದಾಗಿ ಮತ್ತೆ ಕಟ್ಟಿದ ಹಳೇ ಸ್ನೇಹಿತರ ಗುಂಪುಗಳಲ್ಲಿ ಸ್ವಲ್ಪ ಎಚ್ಚರವಾಗಿರುವುದು ಒಳ್ಳೆಯದು. ಸಡನ್ ಆಗಿ ಸಿಕ್ಕವರು ಹಿಂದೊಮ್ಮೆ ಆಪ್ತ ಗೆಳೆಯ/ಗೆಳತಿಯರಾಗಿದ್ರೂ ಈಗ ಸಾವಕಾಶವಾಗಿ ಹೆಜ್ಜೆ ಇಡಬೇಕಾಗುತ್ತದೆ. ತುಂಬಾ ಸಲುಗೆ ತೆಗೆದುಕೊಂಡು ಜಾಸ್ತಿ ಹತ್ತಿರವಾಗಲು ಹೋದರೆ ಅಭಾಸವಾದೀತು.
ಇನ್ನು ಎಲ್ಲ ಗುಂಪುಗಳಲ್ಲೂ ” ಗುಂಪುಗಾರಿಕೆ” ಸಾಮಾನ್ಯ. ಕೆಲವರು ಇಲ್ಲೆ ಎಲ್ಲರಿಗಿಂತ ಸ್ವಲ್ಪ ಜಾಸ್ತಿ ತೂಕ. ಅವರು ಹೇಳಿದ್ದು, ಮಾಡಿದ್ದು ಎಲ್ಲರಿಗೂ ವೇದವಾಕ್ಯ. ಇದಕ್ಕೆ ಕಾರಣ ಹಲವಾರಿರಬಹುದು. ನಮಗೆ ತಕ್ಷಣ ಸಿಗುವ ಕಾರಣಗಳು – ಅವರ ರೂಪ, ಧನಬಲ, ಅವರ ಸಾಮಾಜಿಕ ಸ್ಥಾನ ಇತ್ಯಾದಿ. ಇದನ್ನು ಮುಖಪುಟ, ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿಯೂ ನೋಡಬಹುದು. ಕೆಲವರು ಏನು ನಿಲುಮೆ ಪೋಸ್ಟ್ ಮಾಡಿದರೂ, ಶುಭದಿನ, ರಾತ್ರಿ ಸಂದೇಶ ಹಾಕಿದರೂ, ಅದಕ್ಕೆ ಪ್ರತಿ ಶುಭಾಶಯ ಕೋರುವ, ಲೈಕ್ ಒತ್ತುವ ಮಂದಿ ಬಹಳಷ್ಟು ಇರುತ್ತಾರೆ. ಅದೇ ಕೆಲವರು ಎಷ್ಟು ಸುಂದರವಾದ ಕವನ/ ಉಲ್ಲೇಖನ ಬರೆದರೂ ಪ್ರತಿಕ್ರಿಯೆಗಳು ಅಷ್ಟಕಷ್ಟೆ. ಇವರ ಯಾವುದೇ ನಿಲುಮೆಗೆ, ಮೆಸೇಜುಗಳಿಗೆ ಸ್ಪಂದನ ಕಡಿಮೆ. ಇನ್ನು ಗುಂಪಿನ ಕಾರ್ಯಕ್ರಮಗಳಲ್ಲೂ ಕೆಲವು “ಗುಂಪು”ಗಳ ಪಾಲ್ಗೊಳ್ಳುವಿಕೆ ಜಾಸ್ತಿ. ಅಸಲು ಈ ಕಾರ್ಯಕ್ರಮದ ಬಗ್ಗೆ ಗುಂಪಿನ ಬಹುತೇಕ ಸದಸ್ಯರಿಗೆ ಗೊತ್ತೇ ಇರುವುದಿಲ್ಲ. ಎಲ್ಲ ಕಡೆ ಇರುವಂತೆ ಎಂದು ಸಮಾಧಾನ ಪಟ್ಟಿಕೊಳ್ಳಬೇಕಷ್ಟೇ.
ಇನ್ನು ಕೆಲವರು ಸೈಲೆಂಟ್ ಆಗಿ ಎಲ್ಲವನ್ನು ಓದುತ್ತಿರುತ್ತಾರೆ. ಯಾರಾದರೂ ಏನಾದರೂ ಪರ/ ವಿರೋಧ ಮಾತನಾಡಿದರೆ ಇವರುಗಳು ಭುಸ್ಸೆಂದು ಬರುತ್ತಾರೆ. ಕನಿಷ್ಟ ಹುಟ್ಟುಹಬ್ಬಕ್ಕೆ ಶುಭಾಶಯ ಕೋರದ, ಸಾವಿಗೆ, ನೋವಿಗೆ ಸಂತಾಪ ತೋರದ ಕೆಲವರೂ ಇರುತ್ತಾರೆ. ಎಲ್ಲದಕ್ಕೂ ಮುನ್ನುಗ್ಗಿ ಕಾಮೆಂಟಿಸುವ ಜನಗಳೂ ಗುಂಪುಗಳ ಅವಿಭಾಜ್ಯ ಅಂಗ. ಎಷ್ಟೇ ಖರಾಬ್ ಜೋಕು ಹಾಕಲಿ ನಕುವ, ನಗು ಇಮೋಜಿ ಹಾಕುವ ಜನರ ಜತೆ ಒಳ್ಳೆ ಹಾಸ್ಯಕ್ಕೂ ಪ್ರತಿಕ್ರಿಯೆ ನೀಡದ ಜನ ಕಾಣಸಿಗುತ್ತಾರೆ.
ಇನ್ನು ರಾಜಕೀಯದ ವಿಷಯದಲ್ಲಂತೂ ಕೇಳುವುದೇ ಬೇಡ, ಆರೋಪ, ಪ್ರತ್ಯಾರೋಪಗಳು ಯುದ್ಧದಲ್ಲಿ ಬಾಣಗಳು ಹಾರಿದಂತೆ ಹಾರಾಡುತ್ತಲೇ ಇರುತ್ತವೆ. ಆ ಗುಂಪಿನಲ್ಲಿ ಇರುವುದಕ್ಕೆ ಸುಕೋಮಲೆಯರಿಗೆ ಸ್ವಲ್ಪ ಕಷ್ಟ. ಸಾಹಿತ್ಯ, ಸಂಗೀತ, ಅಡುಗೆ,ಶಾಪಿಂಗ್ ಇತ್ಯಾದಿ ಗುಂಪುಗಳಲ್ಲಿ ಹೆಣ್ಣು ಮಕ್ಕಳ ರಾಜ್ಯಭಾರ ಜಾಸ್ತಿ. ಹೆಂಗಸರಿಗೆ ಮಾತ್ರ ಎನ್ನಲಾಗುವ ಗುಂಪುಗಳಲ್ಲಿ ಚರ್ಚೆಗಳೂ ಸಾಮಾನ್ಯವಾಗಿ ಹೆಣ್ಣಿನ ಸಮಸ್ಯೆಗಳು, ವಿಷಯಗಳ ಸುತ್ತಲೇ ಇರುತ್ತವೆ. ಸಾಮಾನ್ಯವಾಗಿ ಇಂತಹ ಗುಂಪುಗಳಲ್ಲಿ ಎಷ್ಟೋ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಹಂಚಿಕೊಂಡು ಹಗೂರಾಗುವುದೂ ಇದೆ. ಹಾಗೆಯೆ ವಾದ ವಿವಾದಕ್ಕೊಳಗಾಗಿ ಮಾನಸಿಕ ಹಿಂಸೆ ಪಟ್ಟಿದ್ದೂ ಉಂಟು. ಹಲವಾರು ಜನ ಒಟ್ಟಿಗೆ ವಾಗ್ಧಾಳಿ ಮಾಡಿದರೆ ಸಹಿಸಿಕೊಳ್ಳಲು ಎಲ್ಲರಿಗೂ ಆಗುವುದಿಲ್ಲ.
ಹೆಣ್ಣು ಮಕ್ಕಳ ಗುಂಪಿರಿರುವಂತೆ ಗಂಡಸರದ್ದೂ ಇರಬಹುದು. ಅವರುಗಳು ಅಲ್ಲಿ ಏನು ಚರ್ಚೆ ನಡೆಸುತ್ತಾರೊ ಅದು ಅವರಿಗೇ ಗೊತ್ತು. ಪ್ರೇಯಸಿ, ಹೆಂಡತಿ, ತಾಯಿ, ಇವರುಗಳ ಜತೆ ಸಂಬಂಧ ಚೆನ್ನಾಗಿದ್ದರೆ ಪರವಾಗಿಲ್ಲ. ಇಲ್ಲದಿದ್ದರೆ ಗಂಡಸರ ಪಾಡು ಶೋಚನೀಯ. ಎಲ್ಲ ಗುಂಪುಗಳಲ್ಲೂ ಗುಂಪುಗಾರಿಕೆ ಇರುವುದಿಲ್ಲ. ಕೆಲವೊಂದರಲ್ಲಿ ಹಾರ್ದಿಕ ಮಾತು ಕತೆ, ವಿಚಾರ ವಿನಿಮಯ, ಹಂಚಿಕೊಳ್ಳುವಿಕೆ, ಸೌಹಾರ್ಧ ಇರುತ್ತವೆ. ಒಂದು ರೀತಿಯ ಚೌಕಟ್ಟಿನಲ್ಲಿ ಚರ್ಚೆಗಳು ನಡೆದು ಎಲ್ಲರೂ ಸಂಯಮದಿಂದಿರುತ್ತಾರೆ. ಅಂಟಿಯೂ ಅಂಟದಂತಿರುವುದು ಒಂದು ಕಲೆ.ಜಾಸ್ತಿ ವಿವಾದಕ್ಕೊಳಗಾಗದೆ, ಎಲ್ಲರೊಡನೆ ಬೆರೆತು ಬಾಳುವುದು, ಬೇಕಾದಾಗ ಪ್ರತಿಕ್ರಿಯೆ, ಇಲ್ಲದಿದ್ದರೆ ಸುಮ್ಮನಿರುವುದು ರೂಡಿಸಿಕೊಳ್ಳುವುದೇ ಜಾಣತನ,
ಒಟ್ಟಿನಲ್ಲಿ “ಗುಂಪಿನಲ್ಲಿ ಗೋವಿಂದ” ಎನ್ನುವವರು ಎಲ್ಲಿಯೂ, ಎಲ್ಲ ಗುಂಪುಗಳಲ್ಲಿಯೂ ಸಲ್ಲುತ್ತಾರೆ!
-ಸಹನಾ ಪ್ರಸಾದ್