ಗುಂಡು ಕೊರೆದ ಮೊಳಕಾಲಿನ ಕಲೆಯೂ ಆ ದಿನಗಳ ನೆನಪೂ…: ಷಡಕ್ಷರಿ ತರಬೇನಹಳ್ಳಿ


ಮೊನ್ನೆ ಕಾಲ ಮೇಲೆ ಕಾಲ್ ಹಾಕಿ ಕುಳಿತು ಪ್ರಜಾವಾಣಿ ಓದುತ್ತಿದ್ದೆ. ಅದೇ ಎಡಗಾಲಿನ ಕಲೆ ಅವನ ನೆಚ್ಚಿನ ಚಿಣ್ಣರ ಚಿತ್ತಾರ ಅಂಕಣ ನೋಡಲು ಬಂದ ಅನಿಶನ ಕಣ್ಸೆಳೆದಿತ್ತು. “ಏನಪ್ಪಾ ಈ ಕಲೆ? ಯಾಕೆ ಅದು ಅಷ್ಟು ಅಗಲಕ್ಕಿದೆ? ಎಂದ. ನಾನು “ಸಣ್ಣವನಿದ್ದಾಗ ಬಿದ್ದು ಏಟು ಮಾಡಿಕೊಂಡಿದ್ದೆ ಕಣೋ, ಅದೇ ಮಚ್ಚೆಯಂತೆ ಉಳಿದು ಬಿಟ್ಟಿದೆ” ಎಂದರೂ ಅವನ ಕುತೂಹಲದ ಕಣ್ಣುಗಳಲ್ಲಿನ್ನೂ ಸಂಶಯ ಇಂಗಿರಲಿಲ್ಲ. ಆ ಕಲೆಯನ್ನೇ ಮುಟ್ಟಿ ಮುಟ್ಟಿ ನೋಡಿ, ಅಲ್ಲಿ ಗುಂಡಿ ಬಿದ್ದಿರುವಂತ ಅದರ ಅನುಭವ ಪಡೆದುಕೊಂಡ ನಂತರ ಒಮ್ಮೆ ನನ್ನನ್ನು ವಿಶೇಷವಾಗಿ ದಿಟ್ಟಿಸಿ ನೋಡಿ ಜಾಗ ಖಾಲಿ ಮಾಡಿದ.

ನಿನ್ನ ಕಣ್ಣುಗಳಲ್ಲೂ ಅದೇ ರೀತಿಯ ತೀರದ ಕುತೂಹಲ ನಮ್ಮಿಬ್ಬರ ಎರಡನೇ ಭೇಟಿಯಲ್ಲಿ ನಾನು ಕಂಡಿದ್ದು ನೆನಪಿಗೆ ಬರಲಾರಂಭಿಸಿತ್ತು. ಹಾಗೆಯೇ ಆ ದಿನಗಳ ಹಸಿರು ಕಾಡುಗಳೂ, ಜಿಟಿ ಜಿಟಿ ಹನಿಯುವ ಮಳೆಯೂ ರಕ್ತ ಹೀರುವ ಜಿಗಣೆಗಳೂ ಮತ್ತು ನಿನ್ನ ನನ್ನ ನಿಘೂಡ ಜಗತ್ತೂ. ಅಂದು ಇಬ್ಬರೂ ಆರಾಮವಾಗಿ ದಿನವಿಡೀ ಒಟ್ಟಿಗೆ ಇರುವುದೆಂದು ಒಪ್ಪಿಕೊಂಡಿದ್ದೆವು. ನಮ್ಮಿಬ್ಬರ ಜೀವನದ  ಅಕೌಂಟಿನಲ್ಲಿ ಎಂದೂ ಬ್ಯಾಲೆನ್ಸ್ ನಿಲ್ ಇರುವ ಸಮಯದ ಕೊರತೆ ಬಜೆಟ್ಟಿನಲ್ಲೂ ಸರಿದೂಗಿಸಿಕೊಂಡು. ನಿನ್ನ ಹಾರುವ ಹಕ್ಕಿಯ ಸ್ವಚ್ಛಂದ ಹಾಡುವ ಜೀವನ ನಿನ್ನದಾದರೆ ನನ್ನ ನೆಲದ ರಕ್ಷಣೆಯ ಹೊಟ್ಟೆ ಪಾಡು ನನ್ನದಾಗಿತ್ತು. ಇಬ್ಬರದ್ದೂ ಒಂದೊಂದು ದಿಕ್ಕು ದೆಸೆ. ಆದರೂ ಅನೇಕ ವಿರೋಧಗಳ, ಅಭಾಸಗಳ, ಅನಿರೀಕ್ಷಿತಗಳ ಮೀರಿ ಒಟ್ಟಾಗಿದ್ದೆವು.

ಇಬ್ಬರೂ ವಿರಾಮವಾಗಿ ಮಂಚದ ಮೇಲೆ  ಮಲಗಿದಂತೆ ಕುಳಿತು ಲ್ಯಾಪ್ಟಾಪಿನಲ್ಲಿ ಪ್ರಶಸ್ತಿ ಪಡೆದ ಚಿತ್ರಗಳ ನೋಡಿ ಮುಗಿಸಿದ್ದೆವು. ನಮ್ಮಿಬ್ಬರ ನಡುವೆ ಉಳಿದ ಸಮಯಕ್ಕೆ ಸಾಕಾಗುವಷ್ಟಿದ್ದ ಚಾಕೋಲೇಟ್, ಜೇನು ಬೆರೆಸಿದ ಹಸಿರು ಚಹಾ, ನನ್ನ ಬ್ಯಾಗಿನಲ್ಲಿ ತುಂಬಿ ತಂದಿದ್ದ ರೆಡ್ ವೈನ್ ಬಾಟಲ್ಲುಗಳು ಎಲ್ಲವೂ ಮುಗಿಯುತ್ತಾ ಬಂದಿದ್ದವು. ನೀನು ಮಲಗಿದ್ದ ನನ್ನ ಮೊಳಕಾಲ ಮೇಲಿದ್ದ ಅದೇ ಕಲೆಯನ್ನೇ ದಿಟ್ಟಿಸಿ ನೋಡಲಾರಂಭಿಸಿದ್ದೆ. ಸುಮ್ಮನಿರಲಾರದ ನಿನ್ನ ಮಗುವಿನ ಮನಸ್ಸಿನ ಕುತೂಹಲವೂ ಅವನಂತೆಯೇ ನನ್ನ ಅದೇ ನಾಲ್ಕಾಣೆಯಗಲದ ಬಿಳಿ ಮಚ್ಚೆಯನ್ನೊಮ್ಮೆ ಮುಟ್ಟಿ ನೋಡುವಂತೆ ಮಾಡಿತ್ತು. ನೀನು ಮುಟ್ಟಿ ನೋಡಿ ಅದರ ಅಗಲ ಅಳೆಯುವಷ್ಟರಲ್ಲೆ ನಾನು ನಿನ್ನ ಗಮನ ಬೇಕಂತಲೇ ಬೇರೆಡೆ ಸೆಳೆದಿದ್ದೆ. ನೀನು ಅಲ್ಲೇ ಸ್ವಲ್ಪ ಪ್ರೆಸ್ ಮಾಡಿ ನೋಡಿದ್ದರೆ  ನಿನಗೂ ಅದು ಗೊತ್ತಾಗಿರುತಿತ್ತು. ಅದೊಂದು ಬಂದೂಕಿನ ಗುಂಡು ಒಳಹೊಕ್ಕು ಮಾಡಿದ ಗುಂಡಿಯ ಮುಚ್ಚಿದ ಮೇಲ್ಮೈ ಮಚ್ಚೆಯೆಂಬುದು.

****

ನಕ್ಸಲರ ಹಾವಳಿ ನಮ್ಮಿಂದ ದೂರದಲ್ಲಿದೆ ಎಂದು ನಿರಾಳವಾಗಿದ್ದ ನಮ್ಮ ರಾಜ್ಯ ಸರ್ಕಾರಕ್ಕೂ ಅವರ ನುಸುಳುವಿಕೆಯ ಬಿಸಿ ತಟ್ಟಿತ್ತು. ಮಲೆನಾಡಿನ ಒಳಗಿನ ದಟ್ಟ ಕಾಡುಗಳಲ್ಲಿ ಅವರ ಓಡಾಟ, ತಾತ್ಕಾಲಿಕ ತರಬೇತಿ ಕ್ಯಾಂಪ್, ಶೇಕರಣಾ ಬಂಕರ್ಸ್ಗಳ ನಿರ್ಮಾಣ ಎಲ್ಲದರ ಗುಪ್ತಚರ ಮಾಹಿತಿ ರವಾನೆಯಾಗಿತ್ತು. ಅವರ ಸುಲಿಗೆಯ ನೇರ ಗುರಿಯಾಗಿದ್ದವರಿಗೂ ಅವರಿಗೂ ತಿಕ್ಕಾಟಗಳೂ, ಸಂಘರ್ಷಗಳೂ ಸಂಭವಿಸಿದ್ದರ ವರದಿ ನಮ್ಮ ಮುಂದಿತ್ತು. ಮುಂದಿನ ದಿನಗಳ ಅವರ ಕಾರ್ಯತಂತ್ರಗಳಿಗೆ ಪ್ರತಿತಂತ್ರ ಹೆಣೆಯುವ ಹೊಣೆಗಾರಿಕೆ ನನ್ನದಾಗಿತ್ತು.

ಸಮಯ ಸಿಕ್ಕಾಗಲೆಲ್ಲಾ ನಮ್ಮವರ ದೈಹಿಕ ಬಲ ಬಳಸಿ ಅವರನ್ನು ಅಲ್ಲಲ್ಲೇ ಮಟ್ಟಹಾಕುತ್ತಾ ಇದ್ದರೂ ಅವರ ಬಲ ಕುಂದಿರಲಿಲ್ಲ. ಅವರ ಮಾಂತ್ರಿಕ ಮಾತಿನ ಮೋಡಿಗೆ ಮರುಳಾಗಿ ಸುಲಭವಾಗಿ ಅವರ ಸುಳಿಗೆ ಸಿಗುತ್ತಿದ್ದ ಸ್ಥಳಿಯ ಯುವಕ ಯುವತಿಯರು ಅವರ ಬತ್ತದ ಶಕ್ತಿಯಾಗಿದ್ದರು. ಕಾಲ ಕ್ರಮೇಣ ನಮ್ಮವರ ನಿರಂತರ ಗುಂಡಿನ ದಾಳಿಗಳಲ್ಲಿ ಏಟುತಿಂದವರು, ಸ್ಪೋಟಕಗಳ ಬಳಕೆಯ ತರಬೇತಿಯ ಸಮಯದಲ್ಲಿ ಕೈ ಕಾಲು ಕಳೆದುಕೊಂಡವರು ಅವರ ಕಡೆ ಹೆಚ್ಚಾದರು. ಸೋಲುವುದು ಖಚಿತವಾದಾಗ ಸಂಧಾನಕ್ಕೆ  ಅವರು ನಂಬುವ ಆತ್ಮೀಯ ಮಿತ್ರರಾದ ಮಾಧ್ಯಮದವರ ಮೂಲಕ ಕರೆಬಂತು. ನಾನೂ ಮಾಧ್ಯಮ ಪ್ರತಿನಿಧಿಯಾಗಿ ಅವರ ಅರಿವಿಗೆ ಬರದಂತೆ ತಂಡದೊಳಗೆ ಕಣ್ಣಿಗೆ ಬಟ್ಟೆಕಟ್ಟಿಸಿಕೊಂಡು ಪಶ್ಚಿಮ ಘಟ್ಟಗಳ ದಟ್ಟ ಕಾನನದ ನಡುವೆ ನಡೆದ ಸಂಧಾನ ಸ್ಥಳಕ್ಕೆ ಹೋಗಿಬಂದಿದ್ದೆ.

****

ಅವರ ನಾಯಕ ಕೇಳಿದಂತೆಯೇ ಎಲ್ಲ ಹದಿಹರೆಯದ ಯುವಕರೂ ಅಷ್ಟೇ ಸಂಖ್ಯೆಯ ಯುವತಿಯರನ್ನೂ ಅವರ ಬಳಿ ಕಳಿಸಿಕೊಡುವ ಗುರುತರ ಜವಾಬ್ದಾರಿ ನನ್ನ ಹೆಗಲಿಗೇರಿತ್ತು.ನಾನೂ ನನ್ನ ಮಾಮೂಲಿ ಕಾರ್ಯಾಚರಣೆ ಶುರುವಿಟ್ಟುಕೊಂಡೆ. ನಾನು ಯಾವತ್ತೂ ಚಕ್ರವ್ಯೂಹದೊಳಕ್ಕೆ ನುಗ್ಗುವ ಮುನ್ನ ಸಾವಿರ ಬಾರಿ, ಅನ್ನ ನೀರು ಕಡೆಗಣಿಸಿ, ಅಲ್ಲಿಂದ ಹೊರ ಬರುವ ದಾರಿ ಹುಡುಕುತ್ತಿರುತ್ತೇನೆ. ನಮ್ಮ ಸೆಟಲೈಟ್ ಮ್ಯಾಪಿನ ಪ್ರತೀ ಮಿಲ್ಲೀ ಮೀಟರಿನ ಕೂಲಂಕುಶ ಅಧ್ಯಯನ ಮಾಡಿ ಮುಗಿಸಿದ್ದೆ. 30 ಸಮಬಲ ಯುವಕ ಯುವತಿಯರ ತಂಡದೊಂದಿಗೆ, ನೋಡಿದವರಿಗೆ ಚಾರಣಿಗರೆಂಬಂತೆ ಕಾಣುವಂತೆ ಟ್ರಿಪ್ ಹೊರಟಿರೋ ಟ್ರೆಕ್ಕರ್ಸ್ ಥರಾ ಅಲ್ಲಿಗೆ ತಲುಪಿದ್ದಾಯ್ತು.

ನನ್ನ ಮೂಲ ಯೋಜನೆಯಂತೆಯೇ ಅಮಾವಾಸ್ಯೆಯ  ಕರಾಳ ರಾತ್ರಿಗಳಲ್ಲೇ ನಮ್ಮ ಬಿಡಾರ ಬೇಸ್ ಕ್ಯಾಂಪಿನಲ್ಲಿ ಬೀಡು ಬಿಟ್ಟಿತ್ತು. ಅಲ್ಲಿದ್ದ ಎಲ್ಲರೂ ಆ ಮೋಡಗಳ ಮೀರಿ ನಿಗುರಿ ನಿಂತ ಅತೀ ದೊಡ್ಡ ಘಟ್ಟದ ತುದಿ ತಲುಪುವುದೇ ನಮ್ಮ ಜೀವನದ ಗುರಿಯೆಂಬಂತೆ ಕಾಣಿಸಿಕೊಳ್ಳುತ್ತಿದ್ದರು ಹಾಗೇ ಮಾತನಾಡುತ್ತಿದ್ದರೂ ಕೂಡಾ. ನಮ್ಮೊಳಗೆ ತೀರ್ಮಾನವಾದಂತೆ ಬೆಳಗೆಲ್ಲಾ ಯಾರಿಗೂ ಕಾಣದಂತ ಜಾಗದಲ್ಲಿ ಮಲಗುವುದು ಹಾಗೂ ರಾತ್ರಿಯ ಸಂಪೂರ್ಣ ಕಪ್ಪು ಕತ್ತಲಿನಲ್ಲಿ ಮೃಗಗಳಂತೆ ಚಲಿಸುವುದು ಮಾಡುತ್ತಾ 3 ರಾತ್ರಿ ಕಾಡಿನಲ್ಲಿ ನಡೆದಿದ್ದೆವು. ಅವರ ಮೂಲ ಕ್ಯಾಂಪಿನ ಸನಿಹಕ್ಕೆ ಬಂದ ಕುರುಹು ನನಗೆ ಸಿಕ್ಕಿತ್ತು.

****

ಮೂರು ಟೆಂಟುಗಳಲ್ಲಿ 10 ಜನರ ತಂಡಗಳಾಗಿ ಮಲಗಿದ್ದೆವು. ರಾತ್ರೀ ಪೂರಾ ನಡೆದು ಸುಸ್ತಾಗಿದ್ದ ಎಲ್ಲರೂ ಬೆಳಗಿನಜಾವದ ಸಕ್ಕರೆ ನಿದ್ದೆಗೆ ಜಾರಿದ್ದರು. ಇದ್ದಕ್ಕಿದ್ದಂತೆ ನಮ್ಮ ಪಕ್ಕದ ಡೇರೆಯಲ್ಲಿ ಗುಂಡು ಹಾರಿದ ಸದ್ದು ಬೆಚ್ಚಿ ಬೀಳಿಸಿತ್ತು. ನಮ್ಮ ಕ್ಯಾಂಪ್ ಮೇಲೆ ಅವರು ಮುಗಿ ಬಿದ್ದಿರುವುದು ಖಚಿತವಾಯ್ತು. ತಕ್ಷಣ ನನ್ನ ನೈಟ್ ವಿಷನ್ ಲೆನ್ಸ್ ಹಾಕಿಕೊಂಡು ಹೊರಗೆ ನೋಡಿದೆ. ಆ ಡೇರೆಯಲ್ಲಿ ಅವರು ನನ್ನನ್ನು ಹುಡುಕುತ್ತಿರುವುದು ಗೋಚರಿಸಿತ್ತು. ನಮ್ಮೊಡನೆ ಬೆಟ್ಟ ಗುಡ್ಡ ಹತ್ತುವ ಮಾಸ್ಟರ್ ಟ್ರೈನರ್ ಆಗಿ ಬಂದಿದ್ದ ಕೀರ್ತಿಯ ಮೆದುಳು ಚಿದ್ರವಾಗಿ ಅವನ ಅರಿವಿಗೂ ಬಾರದೇ ಚಿರನಿದ್ರೆಗೆ ಜಾರಿದ್ದ. ಮರು ಕ್ಷಣವೇ ನನ್ನ ವಾರ್ ಟೈಮ್ ಅಲೆರ್ಟ್ ಸಿಗ್ನಲ್ ಸೈರನ್ ಹೊಡೆದಿತ್ತು. ಮುಂದೆ ಬರೀ ಗುಂಡಿನ ಸುರಿಮಳೆಯ ಸದ್ದು, ಎಲ್ಲೆಂದರಲ್ಲಿಂದ ಬಂದು ನಮ್ಮನ್ನು ಸೀಳುತ್ತಿದ್ದ ಬುಲ್ಲೆಟ್ಗಳ ಹಾರಾಟ. ಅಲ್ಲಲ್ಲೇ ಬುಲ್ಲೆಟ್ಟ್ ಹೊಕ್ಕವರ ಚೀರಾಟ, ಕೆಲವೇ ನಿಮಿಷಗಳಲ್ಲಿ ಹಲವರ ನಿಂತುಹೋದ ಉಸಿರುಗಳ ನಿಶಬ್ಧ ನೆಲೆಸಿತ್ತು. 

ನನ್ನ ಪಕ್ಕವೇ ಮಲಗಿದ್ದ ಆ ಅಭಿರಾಮಿಯೆಂಬ ಎಲ್ ಟಿ ಟಿ ಇ ನಿಗ್ರಹಕ್ಕಾಗಿ ತರಬೇತಿ ಪಡೆದ ಹೆಣ್ಣುಮಗಳು ನನ್ನ ದೇಹವನ್ನೇ ಅವಳ ರಕ್ಷಣೆಗಾಗಿ ತಡೆಗೋಡೆಯಂತೆ ಒಡ್ಡಿದ್ದಳು. ಪಾಪ ಅವಳ ಮದುವೆಯ ಕನಸು ಚಿದ್ರಗೊಳ್ಳುವುದು ಅವಳಿಗೆ ಇಷ್ಟವಿರಲಿಲ್ಲವೆಂಬುದು ನನಗೆ ಗೊತ್ತಿದ್ದರೂ ಅವಳನ್ನು ಅವಳ ಅನುಭವದ ಹಿನ್ನೆಲೆ ಪರಿಗಣಿಸಿ ಕರೆತಂದ ತಪ್ಪಿಗೆ ನನಗೆ ಶಿಕ್ಷೆವಿಧಿಸಲೆಂಬಂತೆ. ಆದರೆ ಅವಳ ಲೆಕ್ಕಾಚಾರ ತಪ್ಪಾಗಿ ಅವಳ ದೇಹದುದ್ದಕ್ಕೂ ಪಯಣಿಸಿದ ಆ ಗುಂಡು ನನ್ನ ಮೊಳಕಾಳಿನ ಮಾಂಸದೊಳಗೆ ಸೇರುವಷ್ಟರಲ್ಲಿ ಅದರ ಗತಿ ಕಳೆದುಕೊಂಡು ಅಲ್ಲೇ ಉಳಿದು ಬಿಟ್ಟಿತು.

****

ನನ್ನ ಈ ಅನಿರೀಕ್ಷಿತ ದಾಳಿಯನ್ನು ಊಹಿಸಿರದಿದ್ದ ಆ ಸೂರ್ಯನೆಂಬ ನಾಯಕ ಅಲ್ಲೇ ಬಂಡೆಯ ಹಿಂದೆ ಅಡಗಿ ಕುಳಿತಿರುವುದರ ಮಾಹಿತಿ ನನ್ನ ಮೈಕ್ರೋ ಫ್ಲೈಯಿಂಗ್ ಕ್ಮಾಮೆರಾಗಳು ಒದಗಿಸುತ್ತಿದ್ದವು. ನಾನು ಬದುಕಿ ಉಳಿದು ಎದುರೇಟು ಕೊಡುವ ಶಕ್ತಿಯಿರುವುದು ಗೊತ್ತಿಲ್ಲದ ಆತ ಅಲ್ಲೇ ಅವನ ಸತ್ತ ಸಹಚರರ ಲೆಖ್ಖಹಾಕುತ್ತಿದ್ದ. ಅಳಿದುಳಿದ ಬಾಂಬುಗಳಲ್ಲಿ ಒಂದನ್ನು ಕೈಗೆ ತೆಗೆದು ಕೊಳ್ಳುವುದರಲ್ಲಿದ್ದ. ಅವನ ಮುಂದಿನ ನಡೆಯೇನೆಂದು ಗೊತ್ತಿದ್ದ ನಾನು ಕ್ಷಣಾರ್ಧದಲ್ಲಿ ಅವನ ಮುಂದಿದ್ದೆ. ನನ್ನ ರಿವಾಲ್ವರ್ರಿನ ನಳಿಗೆ ಅವನ ನೆತ್ತಿಗೆ ಒತ್ತಿ ಮುತ್ತಿಕ್ಕುತ್ತಿತ್ತು. ನನ್ನ  ಬೆರಳುಗಳೂ ತಡಮಾಡದೇ ಮಿಂಚಿನಂತೆ ಟ್ರಿಗ್ಗರ್ರ್ ಒತ್ತಿಬಿಟ್ಟಿದ್ದವು. ಅವನ ಕಣ್ಣುಗಳಲ್ಲಿದ್ದ ನಂಬಲಾಗದ ಆಶ್ಚರ್ಯವೂ ಹಾಗೇ ಸ್ಟಿಲ್ ಆಗಿ ನಿಂತಿರುವಂತೆಯೇ ಅವನ ಮೆದುಳು ಕದರಿ ಬಂಡೆಯ ಮೇಲೆ ನೆತ್ತರಾಗಿ ಹರಿದಿತ್ತು. ಅಲ್ಲಿಗೆ ನಮ್ಮ ರಾಜ್ಯದಲ್ಲೂ ಕೆಂಪು ರಕ್ತದೋಕುಳಿಯಾಡುವ ಅವನ ಅರಾಜಕತೆಯ ಬೀಜ ಬಿತ್ತುವ ಆಸೆ ನೆಲಸಮವಾಗಿತ್ತು.

ಮೈಯಲ್ಲಿದ್ದ ನೆತ್ತರೆಲ್ಲಾ ಕುದಿಯುತ್ತಿದ್ದ ನಾನು ಮಾಡಿದ ಮೊದಲ ಕರೆ ಅದೇ ಆ ಸಹೋದ್ಯೋಗಿ ದೇಶದ್ರೋಹಿಗಾಗಿತ್ತು. ನನ್ನ ನಂಬರ್ ನಿಂದ ಬಂದ ಕರೆ ನೋಡಿದ ಅವನು ಅಲ್ಲೇ ಲಘು ಹೃದಯಾಘಾತವಾಗಿ ಕುಸಿದು ಬಿದ್ದು ಸತ್ತಿದ್ದ. ನನ್ನಇಡೀ ಕಾರ್ಯತಂತ್ರವನ್ನು ಮಣ್ಣುಗೂಡಿಸಿ ನನ್ನ ಉಸಿರನ್ನೂ ಇದೇ ಮಲೆನಾಡಿನ ಕಾಡಿನೊಳಗೆ ಲೀನ ಮಾಡುವ ಮಹದಾಸೆಹೊಂದಿದ್ದ ಅವನ ಕನಸು ಚೂರುಚೂರಾಗಿತ್ತು.  ಈ ಮೂಗುನತ್ತಿನ ಶೋಕಿಯ ಅರಿವಿದ್ದು ಅವನ ಬೆನ್ನು ಬಿದ್ದು ನಮ್ಮ ಇಲಾಖೆಯ ಅತಿ ಸೆನ್ಸಿಟೀವ್ ವಿಷಯಗಳ ಕಲೆಹಾಕುತ್ತಿದ್ದ ಪತ್ರಿಕೆಯ ವರದಿಗಾರ್ತಿಯೊಬ್ಬಳ ಹುಚ್ಚು ಸೆನ್ಸೇಷನಲ್ ಸಾಹಸದ ಕಥೆ ನನ್ನ ಎಚ್ಚರದ ಮೂಲಕ ನಾಡಿನ ನಂಬರ್ ಒನ್ ಪತ್ರಿಕೆಯಲ್ಲಿ ಪ್ರಕಟವಾಗದೇ ಹೋಯಿತು. 

****

ಈ ಘಟನೆ ನಡೆದು ಅದೆಷ್ಟು ವರ್ಷಗಳಾದವು. ಮತ್ತೆ ಮತ್ತೆ ಮರುಕಳಿಸುವ ನೆನಪುಗಳು ಮುಂದಿನ ತಿಂಗಳ  ಅದೇ 6 ರಂದು ಮತ್ತೆ ಮತ್ತೆ ನೆನಪಾಗುತ್ತವೆ. ನಾನು ಅವರು ಹೆಣೆದ ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೇ ಇದ್ದಿದ್ದರೆ ಅದೇ 6 ರಂದು ನಮ್ಮ ಮನೆಯಲ್ಲಿ ನನ್ನ ಪುಣ್ಯತಿಥಿಯ ವಾರ್ಷಿಕ ಸೂತಕವಿರುತಿತ್ತು. ಅದಕ್ಕಿನ್ನ ಘೋರವೆಂದರೆ ನಮ್ಮ ಕಾರ್ಯಾಚರಣೆಯಲ್ಲಿ ಒಂದೇ ಒಂದು ಜೀವವೂ ಸಾಯದೆ ಅವನನ್ನು ಅತೀ ಸಮೀಪದಿಂದ ನಾನು ಗುಂಡಿಕ್ಕುವ ಅವಕಾಶ ಕಸಿದಿದ್ದ ಆ ದ್ರೋಹಿಗಳ ದೆಸೆಯಿಂದ ಇಂದು 29 ಮನೆಗಳಲ್ಲಿ ಅದೇ ದಿನ ಶ್ರಾಧ್ದದ ಸೂತಕ. ನನ್ನ ಜೊತೆ ಬಂದಿದ್ದ ಯಾರೊಬ್ಬರೂ ಉಳಿಯದೆ ಅಸು ನೀಗಿದ್ದು ಅಂದಿನ ದುರಂತ. ಅದರಲ್ಲೂ ಆ ಕೀರ್ತಿ ಮತ್ತು ಅಭಿರಾಮಿ ಇಬ್ಬರೂ ಎಂಗೇಜ್ ಮೆಂಟ್ ಮಾಡಿಕೊಂಡು ಇನ್ನು ಕೆಲವೇ ದಿನಗಳಲ್ಲಿ ಮಧುಮಗ/ಳಾಗುವವರಿದ್ದರು. ಅವರೆಲ್ಲರ ನೆನಪಿಗಾಗಿ ಅಂದು ನಾನು ಉಪವಾಸ, ಮೌನವ್ರತ ಆಚರಿಸಿ ಇನ್ನಷ್ಟು ವಿದ್ರೋಹಿಗಳ ಕುತಂತ್ರಗಳನ್ನು ಛೇದಿಸುವ ಪಣ ತೊಡುತ್ತೇನೆ ಪ್ರತೀ ವರ್ಷ. 

ಈ ಇಡೀ ಕಾರ್ಯಾಚರಣೆಯನ್ನು ನಾನು ನನ್ನ ಜವಾಬ್ದಾರಿಯಲ್ಲಿ ತೆಗೆದುಕೊಂಡಿದ್ದು ನಮ್ಮ ಗುಪ್ತದಳದ ಆ ವಿದ್ರೋಹಿಗೆ ಮಾತ್ರಾ ಗೊತ್ತಿತ್ತು. ಅವನು ಅವನ ಮಾಧ್ಯಮ ಗೆಳತಿಯ ತೊಡೆಮೇಲೆ ಮಲಗಿ ಮೈಮರೆತು ಉಸಿರಿದ್ದ ತಪ್ಪಿಗೆ ನಮ್ಮ 29 ಜನರ ತಂಡ ಬಲಿಯಾಗಬೇಕಾಯಿತು. ಈ ವಿಷಯ ಅವನ ಖಾಸಾ ಬದುಕಿನ ಗೆಳತಿಯಾದ ಅವಳಿಂದ ತಿಳಿದ ಸೂರ್ಯ ನನ್ನ ಕಾರ್ಯಾಚರಣೆಯ ಶೈಲಿ ಅರಿತಿದ್ದರಿಂದ ಅವನ ಅಡಗು ತಾಣ ನಾವು ತಲುಪುವ ಮುನ್ನವೇ ನಮ್ಮ ಮೇಲೆ ಧಾಳಿಮಾಡಿದ್ದ. ಆದರೆ ಈ ಬಾರಿ ನಾನು ಸಾಕಷ್ಟು ಹ್ಯೂಮನ್ ಬಯೋ ಸೆನ್ಸರ್ಗಳ ಬಳಕೆ ಮಾಡಿದ್ದು ಗೊತ್ತಿಲ್ಲದ ಆ ಇಬ್ಬರೂ ಬೇಸ್ತು ಬಿದ್ದಿದ್ದರು. ಅವರ ಇಡೀ ದೇಹದ ಪ್ರತೀ ಚಲನೆಯ ಕಾರ್ಯಕ್ರಮಗಳು ನನ್ನ ಕಪ್ಪು ಕನ್ನಡಕದ ಮಾನಿಟರ್ನಲ್ಲಿ ದಾಖಲಾಗುತ್ತ ನನಗೆ ಅವರ ಪ್ರತೀ ಕ್ಷಣಗಳ ವರದಿಯೊಪ್ಪಿಸಿದ್ದರಿಂದ ನಾನು ಇಂದು ನಿಮಗೆ ಈ ಕಥೆ ಬರೆಯಲು ಉಳಿದುಕೊಂಡಿದ್ದೀನಿ. 

ಓ ಮೈ ಗಾಡ್ ಅನೀಶನೂ  ಮೊದಲೇ ನನ್ನಂತೆಯೇ ಅನ್ವೇಷಣೆಯೆಂದರೆ ಎತ್ತಿದ ಕೈ. ಅವನಾಗಲೇ ನನ್ನ ರಿವಾಲ್ವರ್ರಿನಲ್ಲಿ ಹುದುಗಿರುವ / ಕಡಿಮೆಯಾಗಿರುವ ಟೋಟಲ್ಲು ಬುಲ್ಲೆಟ್ಟುಗಳನ್ನು ನನ್ನ ಬೆಡ್ ರೂಮಿನಲ್ಲಿ ಕುಳಿತು ಎಣಿಸುತ್ತಿರಬಹುದು.  ಆಮೇಲೆ ಮತ್ತೆ  ಕಥೆ ಮುಂದುವರಿಸೋಣಾ, ಬಂದೆ ಇರೀ, ಮೊದಲು ಅವನ ಕೈಲಿರುವ ಆಯುಧ ಸೇಫ್ ಮಾಡಿ ಬರಬೇಕಿದೆ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
10 years ago

ಅದ್ಭುತವಾಗಿದೆ.

shadakshari.Tarabenahalli

Thanks  for the compliments Akhilesh Chipli..:)

Meera
Meera
10 years ago

Very good and touching sotry. Nice way of writing too.

regards,

Meera. 

Sarvesh
Sarvesh
10 years ago

Romanchaka…… No words to tell

prashasti.p
10 years ago

ಕನ್ನಡದಲ್ಲಿ ಯಂಡಮೂರಿಯವರ , ಗಣೇಶಯ್ಯನವರ, ಅಜ್ಜಂಪುರ ಸೂರಿಯವರ ಕತೆ/ಕಾದಂಬರಿಗಳನ್ನ ಓದಿದ್ದೆ.
ಅದಕ್ಕೆ ಯಾವ ರೀತಿಯಲ್ಲಿ ಹೋಲಿಕೆ ಮಾಡದಿದ್ದರೂ ಕನ್ನಡದಲ್ಲಿ ಕಡಿಮೆಯಾಗುತ್ತಿರೋ ಪತ್ತೇದಾರಿ ಸಾಹಿತ್ಯದ ಗತವೈಭವಗಳನ್ನು ನೆನಪಿಸುವಂತೆ ಬರೆದಿದ್ದೀರ ಸರ್.. ದಯವಿಟ್ಟು ನಿಮ್ಮೀ ಪ್ರಕಾರವನ್ನು ಮುಂದುವರೆಸಿ ಅನ್ನೋದು ನನ್ನ ಸವಿನಯ ಪ್ರಾರ್ಥನೆ.

5
0
Would love your thoughts, please comment.x
()
x