ಕನ್ನಡ ಕಥಾ ಪರಂಪರೆಯಲ್ಲಿ ಮಹಿಳಾಪರ ಕಥೆಗಳು ಬರುವುದು ತುಂಬಾ ಮುಖ್ಯವಾಗಿದೆ. ಕನ್ನಡ ಕಥೆಗಳಲ್ಲಿ ಮಹಿಳಾ ಅಸ್ಮಿತೆಯನ್ನು ಉಳಿಸಿಕೊಂಡು ಹೋಗುವ ಕಥೆಗಳು ಇತ್ತೀಚಿಗೆ ಅಪರೂಪವಾಗಿದೆ. ಮತ್ತು ನನಗದು ಸ್ವಲ್ಪ ಸಮಾಧಾನವಿದೆ ಅಂತಹ ಸಮಾಧಾನ ತರುವಲ್ಲಿ ದೀಪ್ತಿ ಭದ್ರಾವತಿ ಅವರ ಗೀರು ಕಥಾಸಂಕಲನ ಯಶಸ್ವಿಯಾಗಿದೆ. ಬಹುಶಃ ಇದರಲ್ಲಿನ ಎಲ್ಲಾ ಕಥೆಗಳಲ್ಲೂ ಮಹಿಳೆ ಮುಖ್ಯಪಾತ್ರವಹಿಸಿ, ಬದುಕಿನ ಕಾಲಘಟ್ಟದಲ್ಲಿ ಅವಳ ಪಾತ್ರ ಎಷ್ಟು ಮುಖ್ಯ ಎನ್ನುವುದನ್ನು ಸಾರಿ ಸಾರಿ ಹೇಳುತ್ತದೆ. ಈ ಕಥೆಗಳಲ್ಲಿನ ಮಹಿಳೆ ತಾನು ಅನುಭವಿಸುವ ಕಷ್ಟಗಳನ್ನು ನೋಡಿದರೆ ಕರುಳು ಕಿತ್ತು ಬರುವುದಂತೂ ಸತ್ಯ. ಇಲ್ಲಿನ ಕಥೆಗಳು ನಮ್ಮ ನಮ್ಮ ಇಗೋ ಗಳನ್ನು ಬದಿಗಿಟ್ಟು ಅವಳನ್ನು ತಾಯಿ ಎಂದು ನೋಡಬೇಕಾದ ಅನಿವಾರ್ಯ ಮತ್ತು ಅಗತ್ಯತೆ ಎರಡೂ ಇದೆ ಎಂದು ನನಗನಿಸುತ್ತದೆ. ಇಲ್ಲಿ ಒಟ್ಟು 14 ಕಥೆಗಳು ಇದ್ದು ಒಂದಕ್ಕೊಂದು ವಿಭಿನ್ನವಾದ ಕಥಾಹಂದರವನ್ನು ಕಟ್ಟುತ್ತಾ ಹೋಗುತ್ತವೆ.
ಮೊದಲ ಕಥೆ ಗೀರು ಈ ಕಥೆಯಲ್ಲಿ ಅರುಂಧತಿ ನಾಯಕಿಯಾಗಿದ್ದಾಳೆ. ಆಸ್ಪತ್ರೆಯಲ್ಲಿ ಯಾರೂ ಇಲ್ಲವೇನೋ ಎನ್ನುವಂತೆ ಒಂಟಿಯಾಗಿ ಮಲಗಿರುವ ಗರ್ಭವತಿ ಅರುಂಧತಿ. ಇಲ್ಲಿ ತಾಯಿ ಹಾಲುಣಿಸುವ ಪವಿತ್ರವಾದ, ಜಗತ್ತಿನಲ್ಲಿ ಶ್ರೇಷ್ಟವಾದ ಮೊದಲಿಗೆ ಆಹಾರ ನೀಡುವ ಸ್ತನಗಳನ್ನು ತೊಗಲು ದಿಮ್ಮಿ ಎಂದಿರುವುದು ನಿಜಕ್ಕೂ ಮಾರ್ಮಿಕವಾಗಿದೆ ಮತ್ತು ಅವುಗಳನ್ನು ಗಂಡು ಹೇಗೆ ನೀಚವಾಗಿ ತುಚ್ಛವಾಗಿ ನೋಡುತ್ತಾನೆ ಎಂಬುದರ ರೂಪಕವೆಂದು ಹೇಳಬಹುದು. ಇಲ್ಲಿ ಅರುಂಧತಿ ತಾನು ವಯಸ್ಸಾಗಿ ಮದುವೆಯಾಗದಿರುವ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಉಳಿದ ತಂಗಿಯರ ಮದುವೆ ಸಾಧ್ಯವೇ ? ಮದುವೆಯಾದರೆ ಉಳಿದ ತಂಗಿಯರ ಜೀವನ ಹೇಗೆ ಎನ್ನುವುದರ ಬಗ್ಗೆ ಪ್ರಶ್ನೆ ಕೊನೆಗೆ ಗೌತಮನನ್ನು ಮದುವೆಯಾಗಿ ನಂತರ ಇವಳ ಮೇಲಿನ ಅವನ ನಿರ್ಲಕ್ಷ್ಯ ಆದರೂ ಅವನನ್ನು ಒಲಿಸಿಕೊಳ್ಳುತ್ತೇನೆ ಎನ್ನುವ ಸಕಾರಾತ್ಮಕ ಭಾವ ಇಲ್ಲೆಲ್ಲಾ ಗಂಡು ಹೆಣ್ಣಿನ ಮೇಲೆ ತನ್ನ ಬೇಜವಾಬ್ದಾರಿಯನ್ನು ತೋರಿಸಿಯೇ ತೋರುತ್ತಾನೆ. ಸೆಕ್ಸ್ ಸ್ಯಾಟಿಸ್ ಫ್ಯಾಕ್ಷನ್ ಬಗ್ಗೆ ನನಗಂತೂ ತಕರಾರು ಇದ್ದೇ ಇದೆ. ನನ್ನ ಅರ್ಥದಲ್ಲಿ ಹೆಣ್ಣಿನ ವಿರೋಧದ ಸೆಕ್ಸ್ ಎನ್ನುವುದು ಹೆಣ್ಣಿನ ಮೇಲೆ ಮಾಡುವ ದೌರ್ಜನ್ಯವೇ ಸರಿ. ಇಲ್ಲಿ ಲೈಂಗಿಕತೆ ಹೆಣ್ಣಿಗೆ ಅನಿವಾರ್ಯವೇ ? ಎನ್ನುವ ಪ್ರಶ್ನೆಯನ್ನು ಅರುಂಧತಿ ತನ್ನಲ್ಲೇ ಕೇಳಿಕೊಳ್ಳುತ್ತಾಳೆ. ನನಗಂತೂ ಲೈಂಗಿಕತೆ ಹೆಣ್ಣಿಗೆ ಅನಿವಾರ್ಯವಾದರೂ ಗಂಡಿಗೆ ಆ ಅನಿವಾರ್ಯವಲ್ಲ ಎನ್ನುವಂತೆ ಬಿಂಬಿಸುವ ಗೌತಮನ ಬಗ್ಗೆ ನನಗೆ ಸಿಟ್ಟಿದೆ. ಇಲ್ಲಿ ಅತ್ತೆ ಅರುಂಧತಿಗೆ ?ನನ್ನ ಮಗ ಮುಟ್ಟಿದರೆ ಸಾಕು ಮಕ್ಕಳಾಗ್ತವೆ? ಎಂದಿರುವುದು ಮಹಿಳೆಗೆ ಮಹಿಳೆಯೇ ಶತೃ ಎನ್ನುವ ಮಾತು ಮತ್ತೆ ನಿಜ ಎನಿಸುವುದರಲ್ಲಿ ಸಂದೇಹವಿಲ್ಲ. ಇಲ್ಲಿ ಗಂಡಸು ತನ್ನನ್ನು ಪುರುಷತ್ವವನ್ನು ಮಗುವಿನ ಮೂಲಕವೇ ಜಗತ್ತಿಗೆ ತೋರಿಸಬೇಕಾ? ಅವನಿಗೆ ಬೇಕಾಗಿರುವುದು ಮಗುವಾ ? ಪ್ರತಿಷ್ಠೆಯಾ ? ಎನ್ನುವ ಪ್ರಶ್ನೆ ಅರುಂಧತಿಯಲ್ಲಿ ಹುಟ್ಟಿರುವುದು ಸಮಂಜಸ. ಕೊನೆಗೆ ಪಕ್ಕದ ರೂಮಿನಿಂದ ಮಗುವಿನ ಅಳು ಕೇಳಿ ಅರುಂಧತಿಗೆ ತನ್ನ ಮಗುವಿನ ಅಳುವೇ ? ಎನ್ನುವ ಅನುಮಾನ ಮೂಡಿಸಿ ನಿರರ್ಥಕ ಭಾವ ಮೂಡಿಸಿ ನನ್ನನ್ನು ಅಳುವೆನೆಡೆಗೇ ತಳ್ಳುತ್ತದೆ.
ಎರಡನೇ ಕಥೆ ಭಾಗೀಚಿಕ್ಕಿ. ಯಾವುದೋ ಊರಿನಿಂದ ಬಂದ ಭಾಗೀಚಿಕ್ಕಿ ಹೊಸಕೊಪ್ಪ ಗ್ರಾಮದ ಸಾಹುಕಾರರ ಮನೆಗೆ ಅಡಿಕೆ ಸಂಭಾವನೆಗೆಂದು ಬರುತ್ತಿದ್ದವರಲ್ಲಿ ಭಾಗೀಚಿಕ್ಕಿ ಕೂಡಾ ಒಬ್ಬಳು. ಭಾಗೀರಥಿಯಾಗಿದ್ದ ಇವಳು ಭಾಗೀಚಿಕ್ಕಿಯಾಗಿದ್ದು ವಿಪರ್ಯಾಸ. ನಂತರ ಸಾಹುಕಾರರ ಮೊಮ್ಮಗಳು ಶಾರದೆಯ ಸ್ನೇಹವಾಯಿತು. ಭಾಗೀಚಿಕ್ಕಿ ಬಂದದ್ದು ಎಲ್ಲಿಂದ, ಯಾರು ಎನ್ನುವ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ. ಹಗಲು ಇರುಳೆನ್ನದೇ ಯಾವುದಾದರೊಂದು ಕೆಲಸ ಮಾಡುತ್ತಲೇ ಇದ್ದಳು ಭಾಗೀಚಿಕ್ಕಿ ಒಂದು ಕ್ಷಣವೂ ತಾನು ಬೇರೆಯವರ ಮನೆಯಲ್ಲಿ ಕೆಲಸ ಮಾಡದೇ ಉಣ್ಣಬಾರದೆಂಬ ನಿರ್ಧಾರ ಇವಳದಾಗಿತ್ತು. ಒಂದೊಂದು ಬಾರಿ ಏಕಾದರೂ ಈ ಮನೆಗೆ ಬಂದು ಸೇರಿದೆನೋ ಎನ್ನುವ ಪ್ರಶ್ನೆ ಕಾಡುತ್ತಲೇ ಇತ್ತು. ಅವಳ ಬಾಯಿ ಪುರುಸೊತ್ತಿಲ್ಲದೆ ಯಾರನ್ನೂ ಬಿಡದೇ ಸೌಜನ್ಯದಿಂದ ಮಾತಾಡುತ್ತಲೇ ಇರಲಿಲ್ಲ. ಹನ್ನೆರಡು ವರ್ಷದ ಮಗು ಕೈಬಿಟ್ಟು ಹೋದದ್ದು ಇದೇ ದುಃಖದಲ್ಲಿ ಗಂಡನೂ ನೇಣಿಗೆ ಶರಣಾದದ್ದು ಇವಳಿಗೆ ತಡೆಯಲಾಗದ ದುಃಖವಾಗಿತ್ತು. ಆದ್ದರಿಂದ ಯಾರೊಬ್ಬರೂ ಕನಿಕರದಿಂದ ಹೊರತು ಮತ್ತೇನೂ ಮಾತಾಡುತ್ತಿರಲಿಲ್ಲ. ಹೀಗೆ ಒಮ್ಮೆ ಸ್ವಾಮೀಜಿಯೊಬ್ಬರು ಬಂದು ನೆಲೆಸಿದರು. ಕಾಲಕಳೆಯುತ್ತ ಅಜ್ಜ ಮತ್ತು ಅಜ್ಜಿ ತಿಂಗಳ ಅಂತರದಲ್ಲಿ ಇಬ್ಬರೂ ಕಣ್ಮುಚ್ಚಿದರು. ಒಂದು ಸಲ ಮತ್ತೊಬ್ಬ ಸ್ವಾಮೀಜಿ ಊರಿಗೆ ಬಂದಾಗ ಊರಿನ ಎಲ್ಲರೂ ನಮಸ್ಕರಿಸಲು ಹೋದಾಗ ಇವಳೂ ಹೋದಳು ಅಲ್ಲಿ ಇವಳು ಬಂದೊಡನೆ ಸ್ವಾಮೀಜಿ ಮುಖ ಮುರಿದಿದ್ದನ್ನು ನೋಡಿ ಭಾಗೀಚಿಕ್ಕಿಯ ಸಿಟ್ಟು ನೆತ್ತಿಗೇರಿ ಗುರುವನ್ನೂ ಬೈದಿದ್ದಳು. ಇದನ್ನು ಗಮನಿಸಿದ ಊರಜನರು ಅವಳನ್ನು ಹೊರದಬ್ಬಲು ಮುಂದಾದಾಗ ಅವಳ ಅಸಹಾಯಕತೆ ?ಮುಂಡೇರೆನು ಹುಟ್ತಾನೇ ಆಗ್ತಾರೇನೋ, ನಿಮ್ಮಂತ ಗಂಡಸರು ಮಾಡೋದು? ಎನ್ನುವ ಮಾತು ಮತ್ತೆ ಗಂಡಸಿನ ನೀಚ ಕೃತ್ಯವನ್ನು ಬಯಲಿಗೆಳೆಯುತ್ತದೆ. ಮನೆಯಲ್ಲಿಯೂ ಇವಳ ಮಾತುಗಳು ವಿರೋಧವಾಗಿ ಕಾಣಿಸಿ ಮನೆಯಿಂದ ಹೊರಗಟ್ಟಲು ಮುಂದಾದರು. ಎಲ್ಲರ ಕಾಲುಗಳನ್ನು ಹಿಡಿದರೂ ಪ್ರಯೋಜನವಾಗಲಿಲ್ಲ. ಹೊರಬಂದ ಭಾಗೀಚಿಕ್ಕಿ ಬಾವಿಕಟ್ಟೆ ಹತ್ತಿರ, ಕೊಟ್ಟಿಗೆಯ ಹತ್ತಿರ, ಗೊಬ್ಬರದ ಗುಂಡಿನ ಹತ್ತಿರ ಇರತೊಡಗಿ, ದನಕರು ಮೇಯಿಸುವ ನೀರು ಕುಡಿದಳು. ಅವಳ ಮೊಲೆಗಳ ಮೇಲೆ ಕಣ್ಣುಹಾಕುವ ಕಣ್ಣುಗಳನ್ನು ನೋಡಿ ಹಿಡಿಶಾಪ ಹಾಕುತ್ತಲೇ ತಾನು ಹೆಣ್ಣಾಗಿ ಹುಟ್ಟಿದ್ದು ಅಪರಾಧವೇ ? ಎನ್ನುವ ಪ್ರಶ್ನೆ ಹಾಕಿಯೇ ಮುಂದುವರೆಯುತ್ತಾಳೆ. ನಂತರ ಶಾರದೆಯ ಮನೆಗೆ ಮನೆಗೆಲಸಕ್ಕೆ ಸೇರಿಕೊಂಡ ಭಾಗೀಚಿಕ್ಕಿ ಅಲ್ಲಿಯೂ ತನ್ನ ಬಿಡುವಿಲ್ಲದ ಕೆಲಸ ಮುಂದುವರೆಸಿ ಅಲ್ಲಿಯೂ ಅವಳನ್ನು ಹೊರಗಟ್ಟಲು ತಡವೇನು ಆಗಲಿಲ್ಲ ಶಾರದೆಗೆ ಕೊನೆಗೆ ಶಾರದೆಗೆ ನಿನ್ನ ಮಗಳ ಹಾರೈಕೆ ನೀನು ಮಾಡು ಎಂದು ಹೇಳುತ್ತಾ ದರದರನೆ ಕಣ್ಮರೆಯಾಗಿಯೇ ಹೋಗಿಬಿಡುತ್ತಾಳೆ ಭಾಗಿಚಿಕ್ಕಿ.
ಮೂರನೇ ಕಥೆ ಕ್ಯಾನ್ವಾಸ್ ಈ ಕಥೆಯ ನಾಯಕ ಸೆಬಾಸ್ಟಿನ್. ಇಲ್ಲಿ ಸೆಬಾಸ್ಟಿನ್ ಸರ್ಕಾರಿ ನೌಕರ ರಜೆಯ ಬಗ್ಗೆ ಅವನಿಗಿರುವ ವ್ಯಥೆ, ಯಾರು ಸತ್ತರೂ ಅರ್ಧ ದಿನ ರಜೆ ಸಾಂದರ್ಭಿಕ ರಜೆ ಹಾಕಲಾರದಷ್ಟು ವ್ಯಸ್ಥತೆ, ನಂತರ ನಿವೃತ್ತನಾದ ಮೇಲೆ ಪೆನ್ಷನ್ ಕುರಿತಾಗಿ ಇನ್ನಿಲ್ಲದ ಕೋಪ. ಹೀಗೆ ನಿವೃತ್ತನಾದ ಮೇಲೆ ವಾಕಿಂಗ್ ಮಾಡುತ್ತಲೇ ತನ್ನ ಜೀವನ ಸಾಗಿಸುತ್ತಿದ್ದ. ಹೀಗೆ ವಾಕಿಂಗ್ ಮಾಡುತ್ತಿರುವಾಗ ಪರಿಚಯವಾದವರೇ ಮಾಥುರ್, ಮಾಥುರ್ ಅವರ ಹೆಂಡತಿ, ಮತ್ತು ಸುಬ್ರಮಣ್ಯಂ ಮತ್ತವನ ಹೆಂಡತಿ. ಹೀಗೆ ಒಂದು ದಿನ ದಿನ ಮಾಥುರ್ ತನ್ನ ವಯಸ್ಸಿನ ಸುಂದರ ಮತ್ತು ಎರಡನೇ ಹೆಂಡತಿಯ ಕಾಲಿನ ಚಿತ್ರವನ್ನು ಯಾರೋ ಅಪರಿಚಿತ ಬಿಡಿಸಿದಾಗ ಮಾಥುರ್ ನ ಕೋಪ ನೆತ್ತಿಗೇರಿತು ಅವನೊಂದಿಗೆ ಜಗಳ ಮಾಡಿ ಅವಳು ಬಿಡಿಸಿದ್ದು ತನ್ನ ಹೆಂಡತಿಯ ಚಿತ್ರವನ್ನೇ ಎಂದು ಚಕಾರ ಎತ್ತಿದ ಕಾರಣ ಅವಳ ಕಾಲಲ್ಲಿ ಇದ್ದ ಸಣ್ಣ ಮಚ್ಚೆ ಮತ್ತು ಅವನು ಬಿಡಿಸಿದ ಚಿತ್ರದಲ್ಲೂ ಸಣ್ಣ ಮಚ್ಚೆ ಎರಡೂ ಒಂದೇ ಎನ್ನುವ ಭಾವ ತೋರಿಸುತ್ತಿದ್ದುದರಿಂದ ಅವನು ಇದು ನನ್ನ ಹೆಂಡತಿಯ ಪಾದದ್ದೇ ಚಿತ್ರ ಎಂದು ಜಗಳವಾಡತೊಡಗಿದ. ಇದನ್ನು ನೋಡಿದ ಸೆಬಾಸ್ಟಿನ್ ಕೂಡ ಅವನನ್ನು ಪ್ರಶ್ನಿಸಿದಾಗ ಅವನೂ ಹೌದು ಎನ್ನುತ್ತಲೇ ತನ್ನ ಉತ್ತರ ನೀಡಿದ. ನಂತರದಲ್ಲಿ ವಾಕಿಂಗ್ ಬರುವ ಎಲ್ಲಾ ಹೆಣ್ಣುಮಕ್ಕಳಿಗೂ ಶೂ ಕಡ್ಡಾಯ ಎಂದು ಅನಧಿಕೃತವಾಗಿ ಹೇಳತೊಡಗಿದರು. ಇದಾದ ಮೇಲೆ ಹೆಂಡತಿಯನ್ನು ಬಿಟ್ಟು ಮಾಥುರ್ ವಾಕಿಂಗ್ ಬರಲು ಶುರುಮಾಡಿದ. ನಂತರದಲ್ಲಿ ಬಿಪಿ ಶುಗರ್ ನಿಂದ ಆಸ್ಪತ್ರೆ ಬೆಡ್ ಹಿಡಿದಿದ್ದಾನೆ ಎನ್ನುವ ವಿಷಯ ಸುಬ್ರಮಣ್ಯಂನಿಂದ ವಿಷಯ ತಿಳಿಯಿತು. ತಿಳಿದೊಡನೆ ಮಾತಾಡಿಸಲು ಹೋಗುತ್ತಾನೆ ಇಲ್ಲಿ ಬಹುಶಃ ಮಾಥುರ್ ನನ್ನು ನೋಡುವ ಇರಾದೆ ಇಲ್ಲ ಎಂದೆನಿಸುತ್ತದೆ ಬದಲಾಗಿ ಮಾಥುರ್ ನ ಹೆಂಡತಿಯನ್ನು ನೋಡಬೇಕು ಎನ್ನುವುದನ್ನು ಹೇಳುತ್ತದೆ ಈ ಕಥೆ. ಕೊನೆಗೆ ಮಾಥುರ್ ಉಳಿಯಲಿಲ್ಲದೇ ಹೋದದ್ದು ದುರಾದೃಷ್ಟ.ಈ ಕಥೆ ಯಾರನ್ನೂ ನೋಡಿ ಚಿತ್ರ ಬರೆಯುವ ಸ್ವಾತಂತ್ರ್ಯವೇ ಇಲ್ಲವೇ ? ಎನ್ನುವ ಪ್ರಶ್ನೆಯನ್ನು ನಮ್ಮ ಮುಂದೆ ಇಡುತ್ತದೆ.
ನಾಲ್ಕನೇ ಕಥೆ ಚೌಕಟ್ಟು. ಈ ಕಥೆಯ ನಾಯಕಿ ಮಧೂನನ್ನು ಪ್ರೀತಿಸಿ ನಾಟಕವಾಡಿದ ಗಂಡಸಿನ ಲೈಂಗಿಕ ಕ್ರಿಯೆಗೆ ಹೆಣ್ಣು ದಾಳವಾಗಿ ಅವಳ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಕೊನೆಗೆ ಸಾಯುವ ಸಾಹಸಕ್ಕೆ ಕೈ ಹಾಕಿ ಮಧೂ ಆಸ್ಪತ್ರೆಗೆ ಸೇರಿದ್ದು, ಅಲ್ಲಿ ಆಪ್ತ ಸಮಾಲೋಚನೆಯ ಭಾಗದಲ್ಲಿ ಅಸುರಕ್ಷಿತ ಲೈಂಗಿಕ ಸಂಪರ್ಕ ಹೊಂದುವುದು ತಪ್ಪು, ಹಾಗೊಂದುವೇಳೆ ಹೊಂದುವುದೇ ಆದರೆ ಕಾಂಡೋಮ್ ಬಳಸಿ ಎನ್ನುವ ಮಾತುಗಳು ಮತ್ತಷ್ಟು ಮಧುವನ್ನು ಜರ್ಜರಿತಗೊಳಿಸುತ್ತವೆ. ಈ ಗಂಡಸು ಎಂಬ ಜಾತಿ ತನ್ನ ತೆವಲುಗಳಿಗಾಗಿ ಹೆಣ್ಣಿನ ಮೇಲೆ ನಡೆಯುವ ಅಸಹಜ ಲೈಂಗಿಕ ಕ್ರಿಯೆಯನ್ನು ಹೊಂದಿ ಯಾಕೆ ಹೆಣ್ಣಿನ ಜೀವನದಲ್ಲಿ ಆಟವಾಡುತ್ತಾನೆ ? ಮಧೂ ಕೊನೆಗೆ ನಾ ಸಾಯಲೇಬೇಕು ಎನ್ನುವ ಮಾತುಗಳು ನಿಜಕ್ಕೂ ಕಣ್ಣೀರು ತರಿಸುತ್ತವೆ. ಕೊನೆಗೆ ತನ್ನ ಜೀವನದಲ್ಲಿ ಆಟವಾಡುವ ಆ ಗಂಡಿನ ಮೇಲೆ ಮನೆಯವರ ವೇದನೆ, ಕಿರುಚಾಟ ನಿಜಕ್ಕೂ ಮನಃ ಕಲಕುತ್ತದೆ. ಕೊನೆಗೆ ಮಧೂನ ಜೀವನ ಹೀಗಾಗಬಾರದಿತ್ತು. ಈ ಕಥೆ ನನ್ನನ್ನು ತುಂಬಾ ಕಾಡುತ್ತಲೇ ಹೋಗುತ್ತದೆ.
ಐದನೇ ಕಥೆ ಮುಚ್ಚಿದ ಬಾಗಿಲು ಕಥೆಯಲ್ಲಿ ಒಬ್ಬ ಹೋಟೆಲಿನ ಕೆಲಸ ಮುಗಿಸಿ ಹೊರಡುವಷ್ಟರಲ್ಲಿ ಮಳೆಯ ಪೇಚಿಗೆ ಬಿದ್ದು ಒಂದು ಹಳೆಮನೆಯ ದಾರಿ ಹಿಡಿದು ಅಲ್ಲಿಯೇ ಹೋಗಿ ನಿಂತು ಸ್ವಲ್ಪ ಹೊತ್ತು ಅಲ್ಲಿಯೇ ಇದ್ದುಬಿಟ್ಟ. ಆ ದಟ್ಟ ಕಾನನದಲ್ಲಿ ಮೆಲ್ಲಗೆ ಹಾಡೊಂದು ಕೇಳುತ್ತಾ ಎಲ್ಲಿರಬಹುದು ಎಂದು ಅತ್ತಿತ್ತ ನೋಡಿದಾಗ ಅಲ್ಲಿ ಪುಟ್ಟದೊಂದು ಕಿಟಕಿಯಿಂದ ನಾ ಹಾಡುಗಳು ಕೇಳುತ್ತಲೇ ಇತ್ತು. ಅಷ್ಟೊತ್ತಿಗೆ ತನ್ನ ಮನೆಯಲ್ಲಿಯೂ ಒಬ್ಬ ಮುದುಕಿ ಇದ್ದಾಳೆ ಅವಳಿಗೂ ಗಂಜಿ ಬೇಯಿಸಬೇಕು ಎನ್ನುವುದು ತಟ್ಟನೆ ಅರಿವಾಯಿತು ಕೂಡಲೇ ಮನೆಯ ಕಡೆ ಹೆಜ್ಜೆ ಹಾಕುತ್ತಾನೆ. ಅವನ ಮದುವೆ, ಮಕ್ಕಳು ಮಕ್ಕಳ ಮದುವೆ ಇವೆಲ್ಲಾ ಆದ ಮೇಲೂ ಅವನಿಗೆ ಮತ್ತದೇ ಹಾಡಿನ ಕಲರವ ಕಿವಿಯಲ್ಲಿ ಹಾಗೇ ಇತ್ತು. ಒಂದು ಹಾಡಿನ ಬಗ್ಗೆ ಹೀಗೆಲ್ಲಾ ಕಥೆ ಕಟ್ಟಿ ನಮ್ಮನ್ನೊಂದು ಹಾಡಿನ ಲೋಕಕ್ಕೆ ಕಥೆಗಾರ್ತಿ ಒಯ್ಯುತ್ತಾರೆ.
ಆರನೇ ಕಥೆ ಮೊಹರು. ಒಂದೇ ಶಾಲೆಯ ನಾಲ್ಕನೇ ಇಯತ್ತಿನವರೆಗೂ ಜೊತೆಗೆ ಓದಿದ ಸ್ನೇಹಿತೆಯರ ಕಥೆ ಇದು. ಇಲ್ಲಿ ನನಗೆ ಕಥಾನಾಯಕಿ ಲೈಂಗಿಕ ರೋಗಕ್ಕೆ ತುತ್ತಾಗಿರಬಹುದೆಂದು ಊಹಿಸುವೆ. ಆ ರೋಗದ ಬರಲು ನೀನು ಮೊದಲು ಕಾಂಡೋಮ್ ಬಳಸುವ ಯೋಚನೆ ಮಾಡಿದ್ದರೆ ಈ ಗತಿ ಬರುತ್ತಿರಲಿಲ್ಲ ಎಂದು ಸಮಾಲೋಚಕಿ, ಗೆಳತಿ ನಾಯಕಿಗೆ ಹೇಳುತ್ತಲೇ ಹೋಗುತ್ತಾಳೆ. ಆದರೆ ಕಥಾನಾಯಕಿ ಗಂಡಿನ ತೆವಲಿಗೆ ಅಷ್ಟು ಸಮಯ ಎಲ್ಲಿದೆ ಹೇಳು ಆ ರೀತಿ ಉಪದೇಶ ಮಾಡುತ್ತಾ ಹೋದರೆ ನನ್ನ ಹತ್ತಿರ ಒಬ್ಬರೂ ಬರಲೊಲ್ಲರು ಎಂಬ ಉತ್ತರ ಕಥಾನಾಯಕಿಯದು. ಅವಳ ರೋಗವನ್ನು ಯಾರಿಗೂ ಹೇಳಬಾರದೇ ಗೆಳತೀ ಎಂದು ಬಲವಾಗಿ ಕೈ ಹಿಡಿದುಕೊಳ್ಳುವುದು, ಇದು ನನ್ನ ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ಹೇಳುವುದು ಕೊನೆಗೆ ಎಲ್ಲಿ ನಿನ್ನ ಇಲಾಖೆಯ ರಬ್ಬರ್ ಆಯುಧ ಅಂದರೆ ಕಾಂಡೋಮ್ ಗಳನ್ನು ಕೊಡು ಎಂದು ನಗುತ್ತಾ ಕೈ ಚಾಚಿರುವುದು ಹೊಟ್ಟೆಯ ಪಾಡಿಗಾಗಿ ತನ್ನ ಮಕ್ಕಳ ಪಾಲನೆಗಾಗಿ ತಾನು ಈ ವೃತ್ತಿಗೆ ಬಂದಿರಬಹುದೆಂದು ಹೇಳಬಹುದು. ಇಲ್ಲಿಯೂ ಕೂಡ ಆ ತಾಯಿಯ ಅಸಹಾಯತೆಯನ್ನು ಅಂತರಾಳವನ್ನು ಕಲಕಿ ಹೋಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಇನ್ನುಳಿದಂತೆ, ಗೀರು, ನ್ಯೂಸ್ ಬೀ, ನೆರಳಿನಾಚೆ, ಶಿಕ್ಷೆ, ಅಲಮೇಲಮ್ಮ ಮತ್ತು ಇಂಗ್ಲೀಷ್, ಕುದಿ, ರೊಕ್ಕದೋಷ, ಈ ಟೆಂಡರ್ -ಈ ಕಥೆಗಳ ಬಗ್ಗೆ ನಾನು ಬರೆಯುವುದಿಲ್ಲ ಕಾರಣ ಆ ಕಥೆಗಳ ಬಗ್ಗೆ ಬರೆದರೆ ಕ್ಲೀಷೆ ಮತ್ತು ನಿಮ್ಮ ಕಥೆ ಓದುವ ಕುತೂಹಲವನ್ನು ನಾನು ಕಸಿದುಕೊಂಡಂತಾಗುತ್ತದೆ. ಅದಕ್ಕಿಂತ ತಾವು ಅದನ್ನು ಕೊಂಡು ಓದಿದರೇ ಸಾರ್ಥಕ ಎನ್ನುವ ಮಾತನ್ನು ಹೇಳುತ್ತಾ ನನಗೆ ತಿಳಿದಷ್ಟು ಗೀರು ಕಥಾ ಸಂಕಲನದ ಬಗ್ಗೆ ಬರೆದಿರುವೆ.
ಈ ಕಥಾಸಂಕಲನಕ್ಕೆ ಪಾಟೀಲ ಪುಟ್ಟಪ್ಪ ಪ್ರಶಸ್ತಿ ಸಂದಿರುವುದು ಈ ಕೃತಿಯ ಮೆರಗನ್ನು ಹೆಚ್ಚಿಸಿದೆ. ನಾನು ಈ ಮೊದಲು ದೀಪ್ತಿ ಭದ್ರಾವತಿ ಅವರ ಆ ಬದಿಯ ಹೂವು ಕಥಾಸಂಕಲನವನ್ನು ಓದಿ ಅವರ ಕಥೆಗಳನ್ನು ಕಾಯುತ್ತಲೇ ಕೂತವನು ನಾನು. ಮತ್ತೆ ಇಷ್ಟು ದಿನಗಳ ನಂತರ ಗೀರು ಕಥಾಸಂಕಲನ ಮೇರು ಕೃತಿ ಎನ್ನುವುದರಲ್ಲಿ ಸಂದೇಹವೇ ಇಲ್ಲದ ಹಾಗೆ ಕಥೆಗಳನ್ನು ಕಟ್ಟಿರುವರು. ನಿಜಕ್ಕೂ ಕನ್ನಡದ ಕಥೆಗಾರರಿಗೆ ಹಬ್ಬದೂಟ ಬಡಿಸಿ ಮತ್ತೆ ಮತ್ತೆ ಮಹಿಳಾ ಅಸ್ಮಿತೆಯ ಬಗ್ಗೆ ಚಿಂತೆ ಮಾಡುವ ಗೀಳಿಗೆ ಹಚ್ಚುವುದಂತೂ ಖಂಡಿತ. ದೀಪ್ತಿ ಭದ್ರಾವತಿ ಅವರಿಂದ ಮತ್ತಷ್ಟು ಮತ್ತಷ್ಟು ಕಥೆಗಳು ಬರಲಿ ಎನ್ನುವ ಆಶಾಭಾವನೆಯಿಂದ ಕಾಯುತ್ತಿರುವೆ.
-ಕೊಟ್ರೇಶ್ ಕೊಟ್ಟೂರು