ಗಿಳಿ ಕಲಿಸಿದ ಪಾಠ: ವರದೇಂದ್ರ ಕೆ.

ಒಂದು ಕಾಡು ಇತ್ತು. ಆ ಕಾಡಿಗೆ ಬೆಂಕಿ ಬಿದ್ದು ಎಲ್ಲ ಗಿಡ ಮರಗಳೂ ಸುಟ್ಟು ಕರಕಲಾಗಿದ್ದವು. ಹೇಗೋ ತಪ್ಪಿಸಿಕೊಂಡ ಪ್ರಾಣಿ ಪಕ್ಷಿಗಳು ದಿಕ್ಕಾಪಾಲಾಗಿ ಹೋದವು. ಅದರಲ್ಲಿ ಒಂದು ಮರಿ ಗಿಳಿ ತಾಯಿ, ತಂದೆಯಿಂದ ಬೇರ್ಪಟ್ಟು ದೂರವಾಯಿತು. ಎಲ್ಲ ಕಡೆ ಸುತ್ತಿ ಸುತ್ತಿ ದಣಿವಾಯಿತು. ಹೊಟ್ಟೆ ಹಸಿದರೂ ತಿನ್ನಲು ಯಾವ ಹಣ್ಣು ಸಿಗದೆ ಬಳಲಿತು. ಆಹಾರ ಮತ್ತು ವಾಸಕ್ಕಾಗಿ ಅಲೆಯತೊಡಗಿತು. ಎಷ್ಟು ದೂರ ಸಾಗಿದರೂ ಏನು ಸಿಗದೆ ಸತ್ತೇ ಹೋಗುತ್ತೇನೋ ಎನ್ನುವಷ್ಟು ನಿರಾಸೆಯಿಂದ ಚಿಂತಿಸತೊಡಗಿತು. ಅಷ್ಟರಲ್ಲಿ ದೂರದಲ್ಲಿ ಒಂದು ಊರು ಕಾಣಿಸಿತು. ಅಬ್ಬಾ! ಬದುಕಿದೆ ಅಲ್ಲಿ ಏನಾದರೂ ಆಹಾರ ಸಿಗಬಹುದೇನೋ ಎಂಬ ನಿರೀಕ್ಷಿಯಿಂದ ಹೊರಟಿತು. ನಿರೀಕ್ಷೆಗೂ ಮೀರಿದ ದೊಡ್ಡ ಮಾವಿನ ಮರ ಕಂಡು ಸಂತೋಷದಿಂದ ಮರದ ಕಡೆ ಧಾವಿಸಿತು. ಸಾವಿರಾರು ಹಣ್ಣುಗಳನ್ನು ಕಂಡೇ ಹೊಟ್ಟೆ ತುಂಬಿದಂತಾಯಿತು. ಹಾಗೆ ಒಂದು ಹಣ್ಣನ್ನು ತಿಂದಿತು. ಆಹಾ ಎಂತಹ ರುಚಿ ಎಷ್ಟಿ ಸಿಹಿಯಾದ ಹಣ್ಣಿದು. ಇದುವರೆಗೂ ತಿಂದ ಹಣ್ಣುಗಳಿಗಿಂತ ಅತಿ ಹೆಚ್ಚು ಸಿಹಿಯಾದ ಹಣ್ಣಿದು ಎಂದು ಮತ್ತೊಂದು ಹಣ್ಣನ್ನು ತಿಂದಿತು. ಇಲ್ಲೇ ವಾಸವಿದ್ದರೆ ಪ್ರತಿದಿನವೂ ಸಿಹಿಯಾದ ಹಣ್ಣುಗಳನ್ನು ಸವಿಯಬಹುದು ಎಂದು ಯೋಚಿಸಿತು.

ಅಷ್ಟರಲ್ಲೇ ಯಾರೋ ಒಬ್ಬ ಮಾನವ, “ಬನ್ನಿ, ಬೇಗ ಬನ್ನಿ ಈ ಅರಮನೆಯ ಮರದ ಹಣ್ಣನ್ನು ಯಾವುದೋ ಗಿಳಿ ಕದ್ದು ತಿನ್ನುತ್ತಿದೆ. ಹಿಡಿಯಿರಿ ಅದನ್ನು ಹಿಡಿಯಿರಿ” ಎಂದು ಕೂಗಿದ ಧ್ವನಿ ಕೇಳಿಸಿತು. ಸುತ್ತಲು ನೋಡು ನೋಡುತ್ತಲೆ ನೂರಾರು ಸಿಪಾಯಿಗಳು ಬಿಲ್ಲು-ಬಾಣ, ಬರ್ಚಿ ಹಿಡಿದು ನಿಂತರು. ಒಬ್ಬ ರಾಜನಿಗೆ ವಿಷಯ ತಿಳಿಸಿದರೆ ಮತ್ತಬ್ಬ ಮಾಯ ಬಲೆಯಿಂದ ಬಂಧಿಸಿಯೇ ಬಿಟ್ಟ. ಕೂಡಲೆ ರಾಜನ ಆಸ್ಥಾನದಲ್ಲಿ ಗಿಳಿಯನ್ನು ಪಂಜರದಲ್ಲಿಟ್ಟು ನಿಲ್ಲಿಸಿದರು. ರಾಜ ಕೋಪಗದಿಂದ “ಎಲೈ ಗಿಳಿಯೆ, ಈ ಊರಲ್ಲಿನ ಬೆಟ್ಟ, ಗುಡ್ಡ, ಗಿಡ, ಮರ, ಭೂಮಿ ಎಲ್ಲವೂ ನನ್ನ ಸ್ವತ್ತು ನನ್ನ ಅಪ್ಪಣೆಯಿಲ್ಲದೆ ಯಾರು ಏನು ಮಾಡುವಂತಿಲ್ಲ. ಆದರೆ ನೀನು ಅರಮನೆಗೆ ಬಂದು ಅರಮನೆಯಲ್ಲಿರುವ ಮರದ ಹಣ್ಣನ್ನೇ ಕದ್ದು ತಿಂದಿದ್ದೀಯಾ, ನಿನ್ನ ಈ ತಪ್ಪಿಗೆ ನಿನ್ನನ್ನು ಕೊಂದು ನಿನ್ನ ಶವವನ್ನು ಅತಿ ಎತ್ತರದ ಪ್ರದೇಶದಲ್ಲಿ ನೇತು ಹಾಕುತ್ತೇನೆ. ಇನ್ನು ಮುಂದೆ ಊರಿನ ಯಾವ ಗಿಳಿಯೂ ಇಂತಹ ತಪ್ಪು ಮಾಡಬಾರದು” ಎಂದ. ಸೈನಿಕರೆ ಇದನ್ನು ಕೊಂದುಬಿಡಿ ಎಂದು ಆಜ್ಞಾಪಿಸಿದ.

ಕಕ್ಕಾಬಿಕ್ಕಿಯಾದ ಗಿಳಿ ತಕ್ಷಣವೇ ಮಾತಾಡತೊಡಗಿತು, ” ದೀನ ದಯಾಳು, ಕರುಣಾ ಸಾಗರ, ಸಕಲ ಜೀವಚರಗಳ ರಕ್ಷಕ ರಾಜ ಶ್ರೇಷ್ಠನೆ, ನನ್ನ ಮಾತನ್ನು ಕೇಳು; ದಯಮಾಡಿ ಕೇಳು” ಎಂದಿತು. ರಾಜನಿಗೆ ಗಿಳಿ ಮಾತನಾಡುವುದನ್ನು ಕಂಡು ಆಶಚರ್ಯವಾಯಿತು. ಸರಿ ಹೇಳು ನೀನು ಮಾತನಾಡುವುದೇ ನಮಗೆ ಸೋಜಿಗವಾಗದೆ. ಏನು ಹೇಳಬೇಕೆಂದಿರುವೆ ಹೇಳು? ಎಂದನು. ಆಗ ಗಿಳಿಯು “ರಾಜ ಮೊದಲು ನನ್ನನ್ನು ಪಂಜರದಿಂದ ಹೊರಹಾಕು. ನನ್ನ ಅಪರಾಧ ಸಾಬೀತಾದರೆ ಮಾತ್ರ ನನ್ನನ್ನು ಬಂಧಿಸಬಹುದು, ನಾನೇನು ತಪ್ಪಿಸಿಕೊಂಡು ಹೋಗುವುದಿಲ್ಲ” ಎಂದಿತು. ರಾಜ ಗಿಳಿಯನ್ನು ಪಂಜರದಿಂದ ಹೊರತೆಗೆಸಿ ಮಾತನಾಡಲು ಹೇಳಿದ. ರಾಜ ನಾನು ನಿನ್ನ ಊರಿನ ಗಿಳಿ ಅಲ್ಲ, ಹಾಗಾಗಿ ನನಗೆ ಇಲ್ಲಿನ ನಿಯಮಗಳು ತಿಳಿದಿಲ್ಲ. ಈ ವಿಷಯ ನಿನ್ನ ಗಮನಕ್ಕಿರಲಿ. ಮತ್ತೆ ನೀನು ರಾಜ, ಇದು ಅರಮನೆ ಎಂಬ ಕಲ್ಪನೆ ನನಗಿಲ್ಲ. ನಾನು ಕಾಡಿನಲ್ಲಿ ಬೆಳೆದಿದ್ದರಿಂದ ನನಗೆ ಮಾನವನ ಸ್ವಭಾವ, ನಡವಳಿಕೆಯ ಅರಿವಿಲ್ಲ. ದೇವರು ಪ್ರಕೃತಿಯನ್ನು ನಮಗೆಲ್ಲರಿಗಾಗಿ ದಯಪಾಲಿಸಿದ್ದಾನೆ. ನಾವು ವೃಕ್ಷವಾಸಿಗಳು, ಜಗದ ಪ್ರತಿಯೊಂದು ಮರದಲ್ಲೂ ವಾಸಿಸುವ ಹಕ್ಕು ನಮಗಿದೆ. ನಮಗಾಗಿಯೇ ಇರುವ ಮರಗಳಿಗೆ ನೀನು ಒಡೆಯ ಎಂದು ಹೇಳುತ್ತಿರುವುದು; ರಾಜಧರ್ಮವಲ್ಲ. ಹಾಗೆ ನೋಡಿದರೆ ನಮಗಾಗಿ ಮೀಸಲಿರುವುದನ್ನು ಕಬಳಿಸುತ್ತಿರುವುದು ನೀವು. ನೀವೇ ಅಪರಾಧಿಗಳು. ಪ್ರಕೃತಿಯನ್ನು ಪ್ರೀತಿಸಿ ಪೋಷಿಸಬಹುದೇ ಹೊರತು ಯಾರು ಆಳಲು ಸಾಧ್ಯವಿಲ್ಲ. ಎಂದು ಗಿಳಿಯು ರಾಜನಿಗೆ ಹೇಳಿತು.

ಇದನ್ನು ಕೇಳಿಸಿಕೊಂಡ ಮಹಾರಾಣಿ ಹೌದು ಗಿಳಿಯ ಮಾತಿನಲ್ಲಿ ಸತ್ಯವಿದೆ. ನಾವು ಪ್ರಾಣಿ ಪಕ್ಷಿಗಳ ಆಹಾರವನ್ನು ಬಲವಂತವಾಗಿ ಪಡೆಯುತ್ತಿದ್ದೇವೆ. ಪರಿಸರವನ್ನು ಹಾಳುಗೆಡವಿ ಪ್ರಾಣಿ ಪಕ್ಷಿಗಳು ನಗರದೆಡೆಗೆ ನುಗ್ಗಲು ನಾವೇ ಕಾರಣ. ಆದ್ದರಿಂದ ಈ ಗಿಳಿಯದು ಏನು ತಪ್ಪಿಲ್ಲ. ಅದಕ್ಕೆ ಯಾವುದೇ ಶಿಕ್ಷೆ ಕೊಡುವ ಅಧಿಕಾರ, ಅರ್ಹತೆ ಯಾವ ಮಾನವನಿಗೂ ಇಲ್ಲ. ಇನ್ನು ಮುಂದೆ ಈ ಮಾವಿನ ಮರವನ್ನು, ಇದರಲ್ಲಿ ಬೆಳೆಯುವ ಎಲ್ಲ ಫಲಗಳನ್ನು ಪಕ್ಷಿಗಳಿಗಾಗೆ ಮೀಸಲಿಡಬೇಕು ಮಹಾರಾಜರೆ, ನನ್ನ ಈ ಕೋರಿಕೆಯನ್ನು ಈಡೇರಿಸಿ ಎಂದು ಮಹಾರಾಣಿ ಕೇಳಿಕೊಳ್ಳುತ್ತಾಳೆ. ಎಲ್ಲವನ್ನು ಆಲಿಸಿದ ರಾಜನ ಮನಸು ಪರಿವರ್ತನೆ ಆಗುತ್ತದೆ. ಕಾನು ರಾಜನಾಗಿ ರಾಜಧರ್ಮ ಮರೆತು ಒಂದು ಪಕ್ಷಿಯನ್ನು ಶಿಕ್ಷಿಸಲು ಹೊರಟಿದ್ದನ್ನು ನೆನೆದು, ಪಶ್ಚಾತಾಪದಿಂದ ಗಿಳಿಗೆ ಕ್ಷಮೆ ಕೋರುತ್ತಾನೆ. ಗಿಳಿರಾಜ ನೀನು ಇನ್ನು ಮುಂದೆ ನಮ್ಮ ಅರಮನೆಯಲ್ಲಿಯೇ ಇರಬಹುದು, ನಿನ್ನ ಎಲ್ಲ ಬಳಗದವರಿಗೂ ಈ ಮರ ಮೀಸಲು. ಅಲ್ಲದೆ ನಮ್ಮ ಅರಮನೆಕಡೆಯಿಂದ ಕಾಡನ್ನು ಮರು ನಿರ್ಮಾಣ ಮಾಡಿ ಗಿಡ ಮರಗಳನ್ನು ಬೆಳೆಸಿ ಅದನ್ನು ಸಂರಕ್ಷಿಸುವ ಹೊಣೆಯೂ ನಮ್ಮದು, ಎಂದು ಗಿಳಿಗೆ ಮಾತು ಕೊಡುತ್ತಾನೆ. ಗಿಳಿ ಕಲಿಸಿದ ಪಾಠದಿಂದ ರಾಜ್ಯದ ಎಲ್ಲ ಪ್ರಾಣಿ ಪಕ್ಷಿಗಳು ಸಂತೋಷದಿಂದಿರುತ್ತವೆ.

-ವರದೇಂದ್ರ ಕೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x