ಗಿಲಿಗಿಲಿ ಪುವ್ವಾ : ಕೃಷ್ಣ ಶ್ರೀಕಾಂತ ದೇವಾಂಗಮಠ

ಪಾತ್ರ ವರ್ಗ

ಚಾರು – ಒಂದು ಕೈ ಮಾತ್ರ ಇರುವ ಕೇರಿಯ ಹುಡುಗ
ಮಾನು – ಕೇರಿಯ ಹುಡುಗ
ಮೀರಾ – ಕೇರಿಯ ಹುಡುಗಿ
ಮಾದಪ್ಪ – ಮಾನುವನ ತಂದೆ
ಅನಾಮಿಕ – ಧ್ವನಿ
ಪುಟ್ಟಿ – ಲಂಬೋದರ & ಜಾನ್ನವಿಯ ಮಗಳು
ಗೌರಿ – ಗೆಳತಿ
ದೇವ್ರು – ಅಜ್ಜಿಯ ಮಮ್ಮಕ್ಕಳು
ಅನಿ – ಅಜ್ಜಿಯ ಮಮ್ಮಕ್ಕಳು
ಮಾಯಾ – ಅಕ್ಕನಂಥ ಗೆಳತಿ
ಜಾನ್ನವಿ – ಪುಟ್ಟಿಯ ತಾಯಿ
ಲಂಭೋದರ – ಪುಟ್ಟಿಯ ತಂದೆ

ದೃಶ್ಯ -1

ಹಾಡು :-

ಶರಣು ನಿಮಗ ಬರ್ರಿ ||3||
ಆದಿಪ್ರೇಕ್ಷಕ ಗಣಪ
ಇಲಿಯ ಮ್ಯಾಲ ಬರ್ರಿ
ವಿಘ್ನ ಚೆಂಡಾಡ ಬರ್ರಿ
ಕಡುಬು ಮೋದಕ ನಿಮಗ
ತಂದೇವು ಸ್ವಾಮಿ
ಕಡುಬು ಮೋದಕ ನಿಮಗ

( ಚಾರು ಮತ್ತು ಮಾನು ಮಾತಿಗಿಳಿದು )

ಚಾರು : ನೀವೆಲ್ಲಾ ನಾಟಕ ನೋಡಾಕ ಬಂದಿರಿ ನಾವು ನಾಟಕ ಮಡಾಕ ಬಂದಿವಿ ಆದರ ಇನ್ನೊಂದ ರೀತಿ ನೋಡಿದ್ರ ನಾವು ನೀವು ಎಲ್ಲಾ ಮಾಡುದು ಬರೀ ನಾಟಕಾನಾ ಹೌದಂತಿರೋ ಇಲ್ಲೋ

ಮಾನು : ಹೌದ ಅನ್ನಲಾಕ ಬೇಕು ಅಲ್ಲನ್ನಾಕ ಹೆಂಗ ಸಾಧ್ಯ ಐತಿ ಯಾರವರು ಅಲ್ಲನ್ನಾವರು ತೋರಸು ನೋಡುನು, ಇವರಾ, ಇವರಾ, ಇಲ್ಲಾ ಅಲ್ಲಿ ಹಿಂದ ಮೂಲ್ಯಾಗ ಕುಂತಾರಲಾ ಅವ್ರಾ, ಯಾರ ಹೇಳು ಒಂದ ಕೈ ನೋಡಕೊಂಡ ಬಿಡತೇನಿ ( ಎಎಏ ಎಂದು ಎಗರಾಡುವನು)

ಚಾರು : ನಿಂದ ಇರುದ ಒಂದ ಕೈ ಅದನ ನೋಡಕೊಳ್ಳಾಕ ಅವರು ಬೇಕನ ನಿನಗ ತಗೊ ಈ ಕನ್ನಡಿ ನಿನ್ ಮುಖ ನೋಡಕೊ ಒಮ್ಮೆ ಮಾರಿ ತಕ್ಕೊಳಾರ್ದ ಹಂಗ ಬಂದಿ ( ನಗುವನು )

ಮಾನು : ಕಾಡ್ನಾಗಿಂದ ಸಿಂಹ ನಾಡ್ನಾಗಿನ ದೇವ್ರು ಎಂದು ತಾವ ಸ್ನಾನಾ ಮಾಡಂಗಿಲ್ಲಾ ಮಳಿ ಬಂದ ಮೈ ತೊಳದ ಹೊಕ್ಕೆತಿ ಹಂಗ ನಂಗು ನಮ್ಮಪ್ಪ ಮಾಡಸಿದ್ರ ಜಳಕ ಇಲ್ಲಂದ್ರ

ಚಾರು : ಹಾ ಈಗ ಗೊತ್ತಾತು ನೋಡು ಯಾಕ ನೀ ಮಂಗ್ಯಾನ ಗತೆ ಅದಿ ಅಂತ, ಮಂಗ್ಯಾನು ಹಂಗ ನಿನಗತೆನ ಇರತೇತಿ
( ರೇಗಿಸುತ್ತಾ ಓಡಿ ಹೋಗುವನು ಅವನನ್ನು ಬೆನ್ನಟ್ಟಿ ಮಾನುವೂ ಹೋಗುವನು ಹೋದವನು ಹಾಗೆ ಹಿಂದೆ ಬಂದು )

ಮಾನು : ಅವ ಅಂದಿದ್ದನ್ನ ಸೀರಿಯಸ್ಸ ತಗೋಬ್ಯಾಡರೀ ಮತ್ತ
ನಾನೇನ ಮಂಗ್ಯಾನಗತೆ ಅದಿನ್ಯಾ ಹಹ ಇಲ್ಲ ಇಲ್ಲ ಹುಲಿ ಹುಲಿ ನಾ
( ಯಾರೋ ಹಿಂದಿನಿಂದ ಧ್ವನಿಯಲ್ಲಿ )

ಅನಾಮಿಕ : ಹುಲಿ ಬಂತು ಹುಲಿ ಹುಲಿ

ಮಾನು : ಎಲ್ಲಿ ಎಲ್ಲಿ ನಾನಲ್ಲಾ ನಾನಲ್ಲಾ ( ಓಡುವನು )

ದೃಶ್ಯ -2

( ಅಂಕದ ಮೇಲೆ ಪುಟ್ಟಿ, ಗೌರಿ ಮತ್ತು ಇವರಿಗಿಂತ ತುಸುವೆ ದೊಡ್ಡವಳಾದ ಮಾಯಾ ಎಲ್ಲರೂ ಹಪ್ಪೆ ಆಡುತ್ತಿದ್ದಾರೆ. ಗೌರಿ ಒಂದು ಬಾರಿ ಆ ಕಡೆಯಿಂದ ಈ ಕಡೆಗೆ ಬಂದು 3 ನೇ ಚೌಕಕ್ಕೆ ಹಪ್ಪೆ ಒಗೆಯಲು ವಿಫಲಳಾಗಿ ಪುಟ್ಟಿಯ ಸರದಿ ಬರುತ್ತದೆ )

ಪುಟ್ಟಿ : ಎಸ್ ಇವಾಗ ನಂದು (ಹಪ್ಪೆ ಒಗೆಯುತ್ತಾ ಎರಡು ಮಣೆ ಆಡಿ ಜಾರಿ ಬೀಳುವಳು )

ಗೌರಿ : ಹಂಗ ಆಗಬೇಕೊ ಹಲ್ಲು ಮುರಿಬೇಕೊ ನೀ ಅಳಬೇಕೊ ನಾ ನಗಬೇಕೊ ಹಹಹಹ ( ಎನ್ನುತ್ತಾ ಕಿಸಿಕಿಸಿ ನಗುವನು )

( ಕೈಗಾದ ಗಾಯವನ್ನು ಮತ್ತು ಕಣ್ಣೀರನ್ನು ಒರೆಸಿಕೊಂಡು ಗೌರಿಯನ್ನು ಸಿಟ್ಟಿನಿಂದ ನೋಡಿ ಜೋರಾಗಿ ಅಳಲಾರಂಭಿಸುವಳು. ಅದೇ ಸಮಯಕ್ಕೆ ಅಲ್ಲಿಗೆ ದೇವ್ರು ಮತ್ತು ಅನಿ ಬರುವರು )

ದೇವ್ರು : ಯಾಕೆ ಪುಟ್ಟಿ ಅಳತಿದ್ದೀಯಾ , ಮಾಯಾ ಏನಾದ್ರು ಮಾಡಿದ್ಲಾ ಹೇಗೆ ? ಏನಾಯ್ತೆ ಗೌರಮ್ಮಾ ( ಇನ್ನೂ ಜೋರಾಗಿ ಅಳುವಳು )

ಮಾಯಾ : ( ತುಸುವೇ ಸಿಟ್ಟಿನಿಂದ ) ನಾನ್ಯಾಕ ಏನಾದ್ರು ಮಾಡ್ಲಿ ಆಡೋವಾಗ ಅವಳೇ ಜಾರಿ ಬಿದ್ಲು ಆಷ್ಟೇ ನನಮೇಲ್ಯಾಕೋ ಗೂಬೆ ಕೂರಿಸ್ತಿಯಾ

ಅನಿ : ಅಯ್ಯೋ ಅಸ್ಟೇನಾ, ಹು ಸರಿ ಎದ್ದೇಳು ಪುಟ್ಟಿ ನಿಮ ಮನೆ ಹತ್ತರಾ ಬರಬೇಕಾದರೆ ನಿಮ್ ಅಪ್ಪಾ ಬರತಿರೋದ ನೋಡದೆ ಕೈಲೆರಡು ಚೀಲಾ ಬೇರೆ ಇತ್ತು ಅಂತೀನಿ

ಪುಟ್ಟಿ : ಓ ಹೌದಾ ಅಪ್ಪಾ ಬಂದ್ರಾ ಬಟ್ಟೆ, ತಿಂಡಿ, ಗೊಂಬೆ,
( ಅಳು ನಿಲ್ಲಿಸಿ ಓಡಿ ಹೋಗುವಳು ಜೊತೆಗೆ ದೇವ್ರು ಅನಿ ಈ ಕಡೆ ಹೊರಟು ನಿಲ್ಲುವರು )

ಗೌರಿ : ಲೋ ದೇವ್ರು ನಿಂತ್ಕೊಳೋ, ಅಲ್ಲಾ ದೇವ್ರು ಇದಾನಾ ಅಂತ ನಿಮ್ ಮನೆಲಿ ಅಮ್ಮಮ್ಮನ ಕೇಳಿದರೆ

ಅನಿ : ನಿಮ್ ಜೊತೆ ಆಟಕ್ಕೆ ಅಂತ ಹೋದ್ನಲ್ಲೋ ಅಂತಾರೆ

ಮಾಯಾ : ನೀನ್ ನೋಡಿದ್ರೆ ಒಂದಿನಾನು ನಮ್ ಜೊತೆ ಆಟಕ್ಕೆ ಬಂದಿಲ್ಲಾ ಏನೋ ಇದು

( ಅನಿ ಮುಖವನ್ನು ನೋಡಿ ದೇವ್ರು ಸಿಕ್ಕಿಹಾಕಿಕೊಂಡ ಕಳ್ಳನಂತೆ ಉಗುಳು ನುಂಗುವಾ)

ದೇವ್ರು ಮತ್ತು ಅನಿ : ಜೂಟ್ ( ಓಡುವರು ) (ಲೈಟ ಆಫ್)

ದೃಶ್ಯ -3

( ಚಾರು, ಮಾನು ಮತ್ತು ಮೀರಾ ಚಿಂದಿ ಆಯ್ದು ತಂದ ಚೀಲಗಳನ್ನು ಕೆಳಗಿಳಿಸುತ್ತಾ )

ಮೀರಾ : ಲೋ ಮಾನು ಇಲ್ಲ ನೋಡ ಬಾರೋ ನನಗೇನ ಸಿಕ್ಕಿದೆ ಅಂತಾ

ಮಾನು : ಎಲ್ಲಿ ಏನ್ ಸಿಕ್ಕಿದೆ ತೋರಸು ನೋಡೋಣ

ಮೀರಾ : ಇಲ್ಲಿಗೆ ಬಂದ್ರೆ ತಾನೆ ನಿಂಗೆ ತೋರಸಕ್ಕೆ ದೊರೆ ಮಗನ ಥರಾ ಅಲ್ಲೇ ಕುತಕೊಂಡ ತೋರಸು ಅಂತಾನೆ ಹ್ಹು ಹ್ಹು ( ಸಿಟ್ಟಿನಿಂದಾ )

ಚಾರು : ಯಾಕ್ರೋ ಕಿತ್ತಾಡ್ತಿರಾ ಏನ್ ಸಿಕ್ತು ನಿಂಗೆ ಅಂತದ್ದು ಇವಾಗ
ತೋರಸು ಮೀರಾ ನಾನ್ ನೋಡತೀನಿ

ಮೀರಾ : ( ಖುಷಿಯಿಂದ ) ಇದೋ ರಿಮೋಟ ಕಾರು ನೋಡಿಲ್ಲಿ
ಆದರೆ ಇದಕ್ಕೆ ಶೆಲಗಳೇ ಇಲ್ಲ ( ಸ್ವಲ್ಪ ಬೇಜಾರಾಗಿ )

ಮಾನು : ನಮ್ ಅಪ್ಪಾ ಮನೆ ಮಾಳಿಗೆ ಮೇಲೆ ಟ್ರಂಕಲ್ಲಿ ಗಡಿಯಾರದ ಶೆಲಗಳಿಟ್ಟವನೆ ರಿಮೋಟ ಕಾರ್ ನಂಗ ಕೊಡೆ ಮೀರಾ

ಮೀರಾ : ಊ ಊ ಕೊಡತೀನಿ ಬಾ ನನ್ ತಮ್ಮ ಇರಬೇಕಾದರೆ ನೀನ್ಯಾವೂರ ದಾಸಯ್ಯಾ ಅಂತಾ ಕೊಡಬೇಕು ನಿಂಗೆ ಅದರಲ್ಲೂ ಕರದರೆ ನಂಗೆ ದವಲತ್ತು ತೋರಸ್ತಿಯಾ

ಮಾನು : ಸಾರಿ ಮೀರಾ ಬಾಯಿ ಈ ಮಾಧವಾ ಕಮ್ ಮಾನುಗೆ ಇನಶರ್ಟ ಮಾಡತೀಯಾ ಇರ್ಲಿ ನಿನ್ನು ಒಂದ ಕೈಯಿ ನೋಡಕೋತೀನಿ , ನೋಡಕೋತಿನಿ ( ಬ್ಯಾಗು ಹೆಗಲಿಗೇರಿಸಿ ಹೋಗುವನು )

ಮೀರಾ : ಹೋಗೋಲೋ ಹೋಗೋ ನೀನೇನ ನೋಡಕೊಳ್ಳೋದು
ನೀನೇನ ಘೇಂಡಾಮೃಗ ಹೆದರಕೊಳ್ಳೋದಕ್ಕೆ ಹೋಗೋ

ಚಾರು : ಅಯ್ಯೋ ಇರ್ಲಿ ಸರಿ ಸರಿ ನೀನ್ ಅವನ ಮಾತಿಗೆ ತಲೆ ಕೆಡಸ್ಕೋಬೇಡಾ , ರಿಮೋಟ ಕಾರನ ನಿನ್ ತಮ್ಮನಗೆ ಕೊಡು ಆಯ್ತಾ
ಇರು ನನಗೂ ಏನೋ ಸಿಕ್ಕಿದೆ ಇವತ್ತು ತೋರಿಸತೀನಿ

ಮೀರಾ : ಹು ತೋರಸು ತೋರಸು ನಿಂಗು ರಿಮೋಟ ಕಾರ್ ಏನಾದ್ರು

ಚಾರು : ಅದೆಲ್ಲಾ ಏನಿಲ್ಲಾ ಪುಸ್ತಕ ಇದು

ಮೀರಾ : ಅಯ್ಯೋ ಪುಸ್ತಕಾನಾ ಕಾಲ್ ಕೇಜಿನೂ ತೂಗಲ್ಲಾ ಇದು
ನಾನ್ ದಿನಾ ಏನಿಲ್ಲಾ ಅಂದ್ರು 3 ಕೇಜಿ ರದ್ದಿ ಹಾಕ್ತಿನಿ (ಹೆಮ್ಮೆಯಿಂದ)
ಗೊತ್ತಾ

ಚಾರು : ಅಯ್ಯೋ ಹುಚ್ಚಮ್ಮಾ ಇದು ರದ್ದಿಗೆ ಹಾಕೋ ಪುಸ್ತಕ ಅಲ್ಲಾ ಇದು ಭಾರತದ ಸಂವಿಧಾನ

ಮೀರಾ : ಭಾರತದ ಸಂವಿಧಾನನಾ ? ಇದ್ಯಾಕೆ ನಮ್ಮ ಊರಿಗೆ ಬಂತು ಭಾರತ ಬಿಟ್ಟು. ಹೆಂಗೆ ಸಿಕ್ತು ಕದ್ಧಕೊಂಡ ಏನಾದ್ರು ಬಂದಾ

ಚಾರು : ಇಲ್ಲಾ ಇಲ್ಲಾ ಇದು ಶಾಲೆಲಿ ದೊಡ್ಡೋರಗೆ ಕಲಿಸೋದಂತೆ ನಮ್ ಊರಿನ ಶಾಲೆ ಮೇಷ್ಟ್ರಿಗೆ ತೋರಿಸ್ದೆ ಅವರ ಹೇಳಿದ್ರು

ಮೀರಾ : ಓ ಸರಿ ಹೋಯ್ತು ನೀನು ಅ ಆ ಇ ಈ ನೇ ಕಲತಿಲ್ಲಾ ನಿಂಗೆ ಇಷ್ಟ ದಪ್ಪಾ ಪುಸ್ತಕ ಓದಪ್ಪಾ ಓದು ಓದಿ ದೊಡ್ಡ ಮನಸಾ ಆಗು ನಾನ್ ಹೋಗ್ತಿನಿ ( ನಿಧಾನ ಮಾತನಾಡುತ್ತಾ ಚೀಲ ಎತ್ತಿಕೊಂಡು ) ಇದನ್ನಾ ತೂಕಕ್ಕ ಹಾಕಿ ಈ ರಿಮೋಟ ಕಾರ್ ಗೆ ಶಲ್ ತಗೋಬೇಕು ನಾನ ಬರ್ತಿನಿ

( ಚಾರು ಪುಸ್ತಕವನ್ನು ಕೈಯಲ್ಲೇ ಹಿಡಿದು ಚೀಲವನ್ನು ಹೆಗಲಿಗೇರಿಸಿ ನಡೆಯುವನು )

ದೃಶ್ಯ – 4

ಲಂಭೋದರ : ಇದ ತಗೋ ನಿಂಗೆ ಅಂತ ಸ್ವೀಟು, ಹೂವು ತಂದಿದ್ದೀನಿ

ಜಾನ್ನವಿ : ಇದೆಲ್ಲಾ ಯಾಕ ತರಕ್ಕೋದರಿ ಸುಮ್ಮನೆ

ಲಂಬೋದರ : ಅಷ್ಟೂ ತರದಿದ್ರೆ ಹೇಗೆ ಹೇಳು ಈಗೀಗ ನನ್ನಾ ಮರತೇ ಬಿಟ್ಟಿದ್ದೀರಿ ಅಂತಿ ಅನ್ನೋ ಭಯ ನಂಗೆ

ಜಾನ್ನವಿ : ಹಾಗಾದ್ರೆ ನಿಜವಾದ ಪ್ರೀತಿಯಿಂದಾ ಏನು ತಂದಿಲ್ಲಾ ಅನ್ನಿ

ಲಂಬೋದರ : ಅಯ್ಯೋ ಇದೊಳ್ಳೆ ಆಯ್ತೆ ನಾನೆಲ್ಲೆ ಹಾಗ ಹೇಳದೆ ಸುಮ್ಮನೆ ಮಾತಿಗಂದನಪ್ಪಾ ಅಷ್ಟೇ

( ಪುಟ್ಟಿ ಓಡಿ ಬರುವಳು )

ಪುಟ್ಟಿ : ಅಪ್ಪಾ

ಲಂಬೋದರ : ಹೆ ಬಾ ಮಗಳೇ ಎಲ್ಲ ಹೋಯ್ತು ನನ್ ಬಂಗಾರ ಕಾಣಿಸತಿಲ್ಲವೇ ಅಂತಿದ್ದೆ ಅಷ್ಟರಲ್ಲ ಬಂದಬಿಟ್ಟೆ

ಪುಟ್ಟಿ : ಅಪ್ಪಾ ಅಪ್ಪಾ ನಂಗೆ ಬಟ್ಟೆ ಸ್ವೀಟು ಆಟಕೆ ತಂದಿದ್ದೀಯಾ ತಾನೆ

ಲಂಬೋದರ : ಎಲ್ಲ ತಂದಿದ್ದೀನಿ ಮಗಳೇ

ಪುಟ್ಟಿ : ಮತ್ತೆಲ್ಲಿ ತೋರಸಪ್ಪಾ ಕೊಡು ನಂಗೆ

ಜಾನ್ನವಿ : ಒಳಗಡೆ ಇವೆ ಆಮೇಲೆ ಕೊಡತೀನಿ ಮೊದಲು ಹೋಗು ಕೈ ಕಾಲ ಮುಖ ತೊಳಿ ನೋಡು ಬಟ್ಟೆ ಎಲ್ಲಾ ಎಷ್ಟ ಗಲೀಜಾಗಿದೆ ಅಂತ

ಲಂಬೋದರ : ಹಾ ಅಂದಂಗೆ ಇನ್ನೊಂದು ಮುಖ್ಯವಾದ ವಿಷಯ ಪುಟ್ಟಿನಾ ಆ ಶಾರದಜ್ಜಿ ಮಮ್ಮಕ್ಕಳ ಜೊತೆ ಆಟಕ್ಕ ಕಳಿಸಬೇಡಾ ಆಯ್ತಾ ಅವರು ಕೇರಿ ಹುಡುಗರ ಜೊತೆ ಸೇರತಾರೆ ಅನ್ನೋ ವಿಷಯ ನನ್ನವರೆಗೂ ಬಂದಿದೆ ನೀನು ಮನೆಲಿದ್ದು ನೋಡ್ಕೊಳೋಕಾಗಲ್ವಾ ಮಕ್ಕಳು ಯಾರ ಜೊತೆ ಆಡತವೆ ಎಲ್ಲಿರತವೆ ಎಲ್ಲಾ ಗಮನಿಸತಿರಬೇಕು ಸರಿನಾ ಹೇಳಿದ್ದನ್ನಾ ಸ್ವಲ್ಪ ನಿಗಾ ವಹಿಸು

ಜಾನ್ನವಿ : ಆಯ್ತ ಆಯ್ತು ನಿಮ್ಮ ಮಗಳು ನನ್ ಮಾತ ಎಲ್ಲಿ ಕೇಳತಾಳೆ
ಕೇಳಿದ್ದನ್ನೆಲ್ಲಾ ಕೊಡಸಿ ಮುದ್ದ ಮಾಡಿ ಮಾಡಿ ಕೆಡಸಿಟ್ಟಿದ್ದೀರಾ

ಲಂಬೋದರ : ಅಪ್ಪಾ ಆಗಿ ನಾನ್ ಮಾಡಬೇಕಾಗಿರೋದನ್ನಾ ನಾನ
ಮಾಡತಿದ್ದೀನಿ ತಾಯಿಯಾಗಿ ಅವಳ ಜವಾಬ್ದಾರಿ ನಿಂಗ ಸೇರಿದ್ದು
ಅದು ಅಲ್ದೆ ನಾನ್ ಇಲ್ಲೇ ಇರೋ ಹಾಗಿದ್ರೆ ನಿನಗ ಹೇಳೋ ಪ್ರಸಂಗಾನೂ ಇರತಿರಲಿಲ್ಲ ಅರ್ಥಮಾಡ್ಕೋ

ಜಾನ್ನವಿ : ಹು ಹೀಗೆ ಜಬರದಸ್ತ ಮಾಡೋಕೆನ ಕಡಿಮೆ ಇಲ್ಲ ಯಾರೋ ಹೇಳಿದ್ರು ಅಂತಾ ಕಿವಿ ಕೊಟ್ರೆ ಹೀಗೆನೆ ಆಗೋದು
( ವಟಗುಟ್ಟುತ್ತಾ ಹೋಗುವಳು )

ದೃಶ್ಯ – 5

( ರಾತ್ರಿ ಹೊತ್ತು ಮಾದಪ್ಪಾ ಮಾನುವಿಗೆ ಊಟ ಮಾಡಿಸುತ್ತಿದ್ದಾನೆ ಜೋಪಡಿಯಲ್ಲಿ ಲ್ಯಾಟಿನ್ ಉರಿಯುತ್ತಿದೆ )

ಮಾನು : ಅಲ್ಲಪ್ಪಾ, ಅಮ್ಮ ನಮನ್ಯಾಕೆ ಬಿಟ್ಟ ಬಿಟ ಹೋದ್ಲು

ಮಾದಪ್ಪ : ಅವಳೆಲ್ಲಪ್ಪಾ ನಮ್ಮನ ಬಿಟ್ಟ ಬಿಟ ಹೋದಳು ಈ ಹಾಳು ಬಡತನ ಅವಳನಾ ನಮ್ಮಿಂದಾ ಕಿತ್ತಕೊಂಡಬಿಟ್ಟತು

ಮಾನು : ನಾವು ಬಡವರಾ ಅಪ್ಪಾ

ಮಾದಪ್ಪಾ : ಆ ಅಣ್ಣು , ಅಲ್ಲದೇ ಮತ್ತೇನ ಕೂಸೆ , ಈ ದಿನಾ ಪೂರಾ ಕೂಲಿ ಮಾಡಿದ್ರೆ ಅಲ್ವೆ ಈ ಹಾಳಾದ ಹೊಟ್ಟೆ ತುಂಬೋದು

ಮಾನು : ನಾವ್ಯಾಕಪ್ಪಾ ಬಡವರಾಗಿದ್ದು, ನಾವ್ಯಾಕೆ ಈ ಗುಡಸಲಲ್ಲಿದ್ದೀವಿ ? ನಮಗ್ಯಾಕೆ ಆ ದೊಡ್ಡ ಬೀದಿ ಮನೆಗಳ ಥರಾ ಮನೆಗಳಿಲ್ಲ

ಮಾದಪ್ಪಾ : ಅವರೆಲ್ಲಾ ಶ್ರೀಮಂತರಪ್ಪಾ ನಾವು ಹಂಗ ಮನೆ ಕಟ್ಟಸಕ್ಕಾಗದೆ ಆ ಮನೆನಾ ಕನಸಲ್ಲೂ ನೆನಸಕ್ಕಾಗಕ್ಕಿಲ್ಲಾ ಅಂತೀನಿ

ಮಾನು : ನಾನ ದೊಡ್ಡೋನಾದ ಮೇಲೆ ಅದಕ್ಕಿಂತಾ ದೊಡ್ಡ ಮನೆ ಕಟ್ಟಸತೀಸಿ ಕಣಪ್ಪಾ . ಆದರೆ, ಆದರೆ, ಈಗ ನಂಗೋಂದು ರಿಮೋಟ ಕಾರ್ ಕೊಡಸಪ್ಪಾ

ಮಾದಪ್ಪಾ : ಕಟ್ಟಸ ಕಣ್ಮಗಾ ಅದನ್ನಾ ಕಣ್ಣಾರೆ ನೋಡಕ್ಕಿಂತ ದೊಡ್ಡ ಭಾಗ್ಯ ಈ ಜನ್ಮಕ್ಕೆ ಇನ್ನೇನದೆ. ರಿಮೋಟ ಕಾರನಾ ಮುಂದಿನ ಕಿತಾ ಜಾತ್ರ್ಯಾಗೆ ಕೊಡಸತೀನಿ ಅಲ್ಲಿವರಗೂ ಅದರ ಸುದ್ದಿ ಎತ್ತಬೇಡಾ ಕೂಸೆ

ಮಾನು : ಕೊಡಸತೀಯಾ ಅಲ್ವಾ ಅಷ್ಟ ಸಾಕಪ್ಪಾ ನೀನ ಊಟಾ ಮಾಡು ನಂಗೆ ನಿದ್ದೆ ಬರ್ತಾದೆ ನಾನ್ ಮಕ್ಕೋತಿನಿ, ಆಹಾ ( ಆಕಳಿಕೆ)

ಮಾದಪ್ಪ : ಸರಿ ಮಲಗು ಮಲಗು ಕೂಸೆ ಬೆಳಗಾ ಮುಂಜಾನೆ ಆ ಪುಡಿ ಕಬ್ಬಣಾವಾ ತೂಕಕ್ಕಾಕಬಿಡು ( ನಿಧಾನ ಲ್ಯಾಟಿನ ಆರಿಸುವಾ )

ದೃಶ್ಯ – 6

ಚಾರು : ಕೈ ಕೈ ಧೂಳ ಗೈ ಪಂಚಮ್ ಪಗಡಮ್ ನಲ್ಲಿಕಟ್ಟಿ ಹನಮಾ ದಾಸರ ಬರಮಾ ತಿಪ್ಪಿಮ್ಯಾಲೆ ಕೋಳಿ ರಗತ್ತ ಬೋಳಿ

( ಹೀಗೆ ಆಡುವಾಗ ಅಲ್ಲಿಗೆ ದೇವ್ರು ಅನಿ ಬರುವರು )

ದೇವ್ರು : (ಸುಸ್ತಾದವರಂತೆ) ಎಲ್ಲರೊ ಹುಡಕೋದು ನಿಮ್ಮನಾ ಆ ಹಾಳ ಬಾವಿ , ಹೊಲದ ಗುಡಸಲು ಕೊನೆಗೆ ತಿಪ್ಪೆ ಗುಂಡಿ ಎಲ್ಲಾ ಹುಡಕದೆ ನೀವ ನೋಡಿದ್ರೆ ಇಲ್ಲಿ ಆಡತಿದ್ದೀರಾ

ಮಾನು : ಎಲ್ಲಾದ್ರು ಇರತೀವಿ ಇದೆಲ್ಲಾ ನಮದೆ ನೋಡು ಎಷ್ಟ ವಿಶಾಲವಾದ ಬಯಲು

ಅನಿ : ಹೌದೌದು ಎಲ್ಲಾ ನಿಂದೆ ಮಹಾರಾಜಾ ನೀನು

ದೇವ್ರು : ಅನಿ ಸುಮ್ನಿರೋ , ಸರಿ ಏನ ಆಡತಿದ್ದೀರಾ ನೆಲದ ಮೇಲೆ ಕೈ ಇಟ್ಟು, ನಾನು ಗೋಲಿ ಆಡೋಣ ಅಂತಾ ಬಂದೆ

ಚಾರು : ಗೋಲಿಗಿಂತಾ ಈ ಆಟ ತುಂಬಾನೇ ಮಜಾ ಇದೆ

(ಅಷ್ಟರಲ್ಲಿ ಇವರನ್ನು ಹುಡುಕುತ್ತಾ ಪುಟ್ಟಿ ಗೌರಿಯ ಜೊತೆ ಬರುವಳು)

ಪುಟ್ಟಿ : ಲೋ ಅನಿ, ದೇವ್ರು ನೀವಿಲ್ಲೆ ಎಲ್ಲೋ ಈ ಕೇರಿಲೆ ಇರತೀರಿ ಅಂತಾ ಹುಡಕೊಂಡ ಬಂದ್ವಿ

ಗೌರಿ : ನಮ್ ಜೊತೆ ಆಡೋಕ ಬರದೆ ಇಲ್ಲಿಗ ಬರತಾ ಇದ್ದೀರಾ ಇರಿ ಅಮ್ಮಮ್ಮಂಗೆ ಹೇಳತೀನಿ

ದೇವ್ರು : ಅದಿರಲಿ ನಾವು ಇಲ್ಲಿರತೀವಿ ಅಂತಾ ನಿಂಗ್ಯಾರ ಹೇಳಿದ್ದು

ಪುಟ್ಟಿ : ಯಾರು ಹೇಳಲಿಲ್ಲ ನಿನ್ನೆ ನಮ್ಮಪ್ಪಾ ನಿಮ ಜೊತೆ ಆಟಕ್ಕೆ ಕಳಸಬೇಡಾ ಅಂತಾ ನಮ್ಮಮ್ಮಗೆ ಹೇಳತಾ ನೀನು ಈ ಕೇರಿಲಿ ಇರತೀ ಅಂತಾ ಅಂದರು ನಾನದನ್ನಾ ಕದ್ದ ಕೇಳಿಸಕೊಂಡಿದ್ದೆ ಅದಕ್ಕೆ ನೇರಾ ಇಲ್ಲಿಗೆ ಬಂದೆ

ಅನಿ : ಹೌದಾ ಹಂಗಾದ್ರೆ ನಾನ್ ಈ ಆಟಕ್ಕಿಲ್ಲಪ್ಪಾ, ನಾನಿಲ್ಲಿಗೆ ಬಂದೇಇಲ್ಲ

ದೇವ್ರು : ಹಂಗಾದ್ರೆ ನೀವಿಲ್ಲಿರಬೇಡಿ ಹೊರಡಿ ಮನೆಗೆ

ಪುಟ್ಟಿ : ನಾವಿಲ್ಲಿಗ ಬಂದಿದ್ದು ವಾಪಸ ಹೋಗೋಕಲ್ಲಾ, ಆಡೋಣ ಅಂದರೆ ಮಾಯಾನೂ ಊರಲಿಲ್ಲ ಅದಕ್ಕೆ ಇಲ್ಲಿ ನಿಮ್ಮೆಲ್ಲರ ಜತೆ ಆಡೋಣ ಅಂತಾ ಜೊತೆಗೆ ಗೌರಿನೂ ಕರಕೊಂಡು ಬಂದೆ

ದೇವ್ರು : ಮತ್ತೆ ನಿಮ್ಮಪ್ಪಾ ನಮ್ ಜೊತೆ ಆಡಬೇಡಾ ಅಂದರು ಅಂದೆ

ಪುಟ್ಟಿ : ಅವರು ಬೇಡಾ ಅಂದರೆ ಏನಾಯ್ತು ನಂಗೆ ಆಡೋಕೆ ಗೆಳೆಯರೇ ಬೇಡ್ವಾ , ( ಮಾನು ಮತ್ತು ಚಾರುವನ್ನು ನೋಡಿ) ಹಾಯ್ ನನ್ನ ಹೆಸರು ಪುಟ್ಟಿ ಅಂತಾ ಇವಳು ಗೌರಿ ನನ್ ಕ್ಲೋಸ್ ಪ್ಲೆಂಡು

( ಚಾರು ಮಾನು ಒಟ್ಟೋಟ್ಟಿಗೆ ‘ ಹಾಯ್ ‘ ಎನ್ನುವರು ನಸು ನಗುತ್ತಾ * ಜೊತೆಗೆ ಮತ್ತೆ ಎಲ್ಲರೂ ಕುಳಿತು ಆಟ ಮುಂದುವರೆಸುವರು ಕೈಕೈ ಧೂಳಗೈ * )

ದೃಶ್ಯ – 7

( ಪುಟ್ಟಿ ಒಬ್ಬಳೇ ಚೆಂಡಾಟವನ್ನು ಆಡುತ್ತಿದ್ದಾಳೆ ಅಲ್ಲಿಗೆ ಮಾನು ಬರುವ ಹೆಗಲಲ್ಲಿ ಚೀಲವಿದೆ )

ಮಾನು : ( ಅತ್ತ ಇತ್ತ ಸುತ್ತ ನೋಡಿ ) ಹಾಯ್ ಪುಟ್ಟಿ ನಾನು ಮಾನು ನಿನ್ನೆ ಸಂಜೆ ಒಟ್ಟಿಗೆ ಆಡಿದ್ವಲ್ಲಾ

ಪುಟ್ಟಿ : ಹೆ ಹಾಯ್ ಮಾನು ಇದೇನೋ , ಅಷ್ಟ ಬೇಗ ಮರತಬಿಟ್ಟೆ ಅನಕೊಂಡಾ. ಯಾಕೆ ಆ ಕಡೆ ಈ ಕಡೆ ನೋಡತಿದ್ದೀಯಾ

ಮಾನು : ಹಾಗೇನಿಲ್ಲಾ , ನಿಮ್ ಅಪ್ಪಾ ಅಮ್ಮ ನೋಡಿದ್ರೆ ಅಂತಾ

ಪುಟ್ಟಿ : ಅವರ ನೋಡಿದ್ರೆ ಏನಾಗುತ್ತೆ ಬಾ ನಮ್ಮನೆಗೆ ಹೋಗೋಣ

ಮಾನು : ಬೇಡಾ ಬೇಡಾ , ಯಾಕೆ ಅಂದ್ರೆ ನಿನ್ನೆ ನೀನು ದೇವ್ರು ಮತ್ತೆ ಅನಿ ನಮ್ ಜೊತೆ ಆಡತಾರೆ ಅಂದಿದ್ದಕ್ಕೆ ಅವರ ಜೊತೆನೆ ಆಡಬೇಡಾ ಅಂತಾ ಹೇಳಿದಾರೆ ಅಂದೆ ಈಗ ನನ್ ಜೊತೆ ನೋಡಿದ್ರೆ ಅಷ್ಟೆ
( ಅವಸರದಲ್ಲಿ ) ಸರಿ ನಾನು ಹೋಗ್ತಿನಿ

ಪುಟ್ಟಿ : ಏ ಏ ನಿಲ್ಲೋ ಮಾನು ( ಮನಸ್ಸಿನಲ್ಲಿ ) ಹೌದು ಅಪ್ಪ ಇವರ ಜೊತೆ ಯಾಕೆ ಆಡಬೇಡಾ ಅಂದರು ನಾನ್ ಇವರ ಜೊತೆ ಆಡಿದ್ರೆ ಏನಾಗುತ್ತೆ ಅಪ್ಪನ್ನೇ ಕೇಳತೀನಿ

ದೃಶ್ಯ – 8

( ಲಂಬೋದರ ಮನೆಯಲ್ಲಿ ಪೇಪರ್ ಓದುತ್ತಾ ಕೂತಿದ್ದಾನೆ )

ಪುಟ್ಟಿ : ಅಪ್ಪಾ ಈ ಗೊಂಬೆ ಮುರದೋಯ್ತು

ಲಂಬೋದರ : ಹೌದಾ ಮಗಳೇ ಮತ್ತೆ ಹೊಸದು ಕೊಡಸತೀನಿ ಸರಿನಾ

ಪುಟ್ಟಿ : ನಂಗೇನು ಬೇಡಾ ನಂಗೆ ಪ್ರೆಂಡ್ಸ ಇದಾರೆ ಆಡಕೊಳ್ಳೋಕೆ

ಲಂಬೋದರ : ನೀನು ಆಡೋದನ್ನಾ ಕಡಿಮೆ ಮಾಡಿ ಓದೋ ಕಡೆ ಗಮನ ಕೊಡು ಇನಮೇಲೆ ಅದು ಅಲ್ದೆ ಆ ಅಜ್ಜಿ ಮನೆ ಮಕ್ಕಳ ಜೊತೆ ಸೇರಬೇಡಾ

ಪುಟ್ಟಿ : ಯಾಕಪ್ಪಾ ಸೇರಬಾರದು ನಂಗಿರೋದೆ ಅವರಷ್ಟೇ ಫ್ರೆಂಡ್ಸ ಅವರ ಜೊತೆ ಆಡಬೇಡಾ ಅಂದರೆ ಈ ಗೊಂಬೆಗಳ ಜೊತೆ ಮನೆಲೇ ಆಡಬೇಕಾ ಅದ ನನ್ ಕೈಲಾಗಲ್ಲ

ಲಂಬೋದರ : ಅದಕ್ಕೆ ಹೇಳಿದ್ದು ಆಡೋದು ಕಡಿಮೆ ಮಾಡು ಓದಿನ ಕಡೆ ಗಮನ ಕೊಡು ಅಂತ

ಪುಟ್ಟಿ : ಹು ಇವರ ಜೊತೆ ಆಡೋದು ಬಿಟ್ರೆ ನನಗೆ ಹೊಸದಾಗಿ ಇಬ್ಬರು ಪ್ರೆಂಡ್ಸ ಆಗಿದಾರೆ ಅವರ ಜೊತೆ ಆಡಕೊಳತೀನಿ ಅವರು ತುಂಬಾ ಒಳ್ಳೆಯವರು ನಮಗೆ ಗೊತ್ತಿಲ್ಲದೇ ಇರೋ ಎಷ್ಟೋ ಆಟಾ ಆಡತಾರೆ

ಲಂಬೋದರ : ಶಾಲೆಗೆ ಹೊಸದಾಗಿ ಸೇರಿಕೊಂಡವರಾ ಇಲ್ಲಾ ಇಲ್ಲಿಗೆ ಹೊಸದಾಗಿ ಬಂದವರಾ

ಪುಟ್ಟಿ : ಊಹು ಪಾಪಾ ಅಪ್ಪಾ ತುಂಬಾ ಬಡವರು ಅವರು ಶಾಲೆಗೆ ಹೋಗಲ್ವಂತೆ ಚಿಂದಿ ಆರಸತಾರೆ ಅದೇ ಆ ಆಚೆ ಕೇರಿ ಇದೆಯಲ್ಲಾ ಅಲ್ಲೇ ಮನೆ

ಲಂಬೋದರ : ಏ ಜಾನ್ನವಿ ಬಾರೇ ಇಲ್ಲಿ ನಿಂಗೆ ಮಗು ಎಲ್ಲಿ ಯಾರ ಜೊತೆ ಆಡುತ್ತೆ ಎಂಥಾ ಜನಾ ಯಾವ ಜಾಗ ಯಾವ ಕೇರಿ ಏನಾದರೂ ಅರವಿದೆಯಾ ಏ ಜಾನ್ನವಿ, ಜಾನ್ನವಿ ( ಕೂಗುವನು )

ಜಾನ್ನವಿ : ಯಾಕ್ರಿ ಅಷ್ಟ ಗಟ್ಟಿಯಾಗಿ ಅರಚತಿದ್ದೀರಿ ಏನ್ ಪ್ರಪಂಚಾ ಮುಳುಗೋಯ್ತಾ

ಲಂಬೋದರ : ಪ್ರಪಂಚಾ ಅಲ್ವೆ ನಮ್ ಕುಲ ಕೆಟ್ಟೋಯ್ತು ಇಲ್ಲಿ ಮಕ್ಕಳ ಜೊತೆನೇ ಸೇರಿಸಬೇಡಾ ಅಂತಾ ಹೇಳಿದರೆ ಆ ಆಚೆ ಕೇರಿಯೋರ ಜೊತೆ ಆಡತಾಳಂತೆ ನಿನ್ ಮಗಳು

ಜಾನ್ನವಿ : ( ಒಂದೇಟು ಸೌಟಿನಿಂದ ಹೊಡೆದು ) ಹೌದೇನೆ ನಿಂಗೆ ಸುಮ್ಮನೆ ಆಡಬೇಡಾ, ಅವರ ಜೊತೆ ಸೇರಬೇಡಾ, ಆ ಕೇರಿ ಕಡೆ ತಲೆ ಹಾಕಬೇಡಾ ಅಂದರೆ ಅರ್ಥ ಆಗಲ್ಲಾ ಅಲ್ವಾ , ಕತ್ತೆ ಕತ್ತೆ ಇನ್ನೊಂದ ಸಾರಿ ಆ ಕಡೆ ಹೋದರೆ ಕೈ ಕಾಲ್ ಮುರದ ಬಿಡತೀನಿ

( ಲಂಬೋದರ ಪೇಪರ ಬಿಸಾಕಿ ಹೋಗುವನು , ಜಾನ್ನವಿ ಒಳಗೆ ಓಡುವಳು, ಪುಟ್ಟಿ ಅಳುತ್ತಾ ಅಲ್ಲೇ ಕೂರುವಳು )

ದೃಶ್ಯ – 9

ಹಾಡು

ಜಾತಿಯ ಬೇರುಗಳು
ಹೃದಯದ ಆಳಕೆ ಇಳಿದಿಹವು
ಜೀವ ನೆಲೆಯಲ್ಲಿ ಹೂವುಗಳರಳಲು
ಮುಳ್ಳವು ಹಿಡಿದಿಹವು

ಬೇಲಿಯಾಚೆಗೆ ಬಳ್ಳಿ ಹರಡಿ
ಮನಸನೂ ಹೊಕ್ಕಿಹುದು
ಮಕ್ಕಳ ಮನಸನೂ ಹೊಕ್ಕಿಹುದು
ತಾವು ಅರಳಲು ಕಾದಿಹವು

( ಮಾನು , ಚಾರು, ಮೀರಾ, ದೇವ್ರು , ಅನಿ, ಪುಟ್ಟಿ , ಗೌರಿ, ಮಾಯಾ ಎಲ್ಲಾ ಕುಳಿತಿದ್ದಾರೆ )

ಪುಟ್ಟಿ : (ಸಪ್ಪೆಯಾಗಿ) ನಾನಿನ್ನ ಮೇಲೆ ನಿಮ್ ಜೊತೆ ಆಟಾ ಆಡೋಕೆ ಬರಲ್ಲಾ

ಮೀರಾ : ಯಾಕೆ ಏನಾಯ್ತು ಪುಟ್ಟಿ ಮೊದಲೆ ಒಂಥರಾ ಇದ್ದೀಯಾ

ಪುಟ್ಟಿ : ( ಅಳುತ್ತಾ ) ಬಂದರೆ ಅಪ್ಪ ಬೈತಾರೆ

ದೇವ್ರು : ನಮ್ ಜೊತೆ ಆಡೋಕೆ ಬಂದರೆ ಬೈತಾರಾ ? ಯಾಕೆ ನಾವೇನ ಮಾಡಿದ್ವಿ , ನಮ್ಮಿಂದಾ ಏನಾದ್ರು ಬೇಜಾರಾಯ್ತಾ,?, ಅಳತಾ ಹೇಳತಿದ್ದೀಯಾ

ಪುಟ್ಟಿ : ನಂಗೊತ್ತಿಲ್ಲ ಈ ಕೇರಿಗೆ ಕಾಲಿಟ್ರೆ ಅಮ್ಮ ಕಾಲ್ ಮುರ್ದಾಕ್ತಿನಿ ಅಂದ ಬಿಟ್ಟರು

ಮಾಯಾ : ಹು ನಂಗಿವಾಗ ಗೊತ್ತಾಯ್ತು ಸಮಸ್ಯೆ ಏನು ಅಂತಾ

ಅನಿ : ಏನ್ ಸಮಸ್ಯೆ ಏನ ಗೊತ್ತಾಯ್ತು

ಮಾಯಾ : ಜಾತಿ. ಕೀಳು, ಮೇಲು ಅನ್ನೋ ತಾರತಮ್ಯ

ಮಾನು : ಹೌದು ನಾವು ಕೀಳು, ಬಡವರು ಅಂತಾ ನಮ್ಮಪ್ಪಾ ಯಾವಾಗಲೂ ಹೇಳತಿರತಾನೆ ಅಲ್ವೆನೋ ಚಾರು

ಚಾರು : ಹೌದು ನಮ್ಮ ಅವ್ವಾನೂ ಹಂಗೇ ಹೇಳತಿರತಾಳೆ

ಮಾಯಾ : ಹು ನಮ್ಮ ಅವ್ವಾ ಅಪ್ಪನೂ ಅಷ್ಟೇ ನಾವು ಮೇಲನವರು ನಾವು ಮೇಲನವರು ಅಂತಾರೆ

ದೇವ್ರು : ನಂಗೇನು ಅಂತಾ ವ್ಯತ್ಯಾಸ ಕಾಣಿಸತಿಲ್ಲ ಮಾಯಕ್ಕಾ
ಎಲ್ಲರೂ ಮನುಷ್ಯರೇ ಅಲ್ಲವಾ ನಮ್ ಪಾಠದಲ್ಲೇ ಇದೆ

ಅನಿ : ಹೌದು ನಮ್ ಕನ್ನಡ ಮೇಷ್ಟು ಶಾಲೆಲಿ ನಾವೆಲ್ಲ ಒಂದೇ ಒಂದೇ ತಾಯಿ ಮಕ್ಕಳು ಜಾತಿ ಅನ್ನೋದು ಶಾಪಾ ಅಂತಾ ಹೇಳತಿರತಾರೆ

ಮಾಯಾ : ಸರಿಯಾಗೇ ಹೇಳಿದಾರೆ ಜಾತಿ ಅನ್ನೋದು ಶಾಪಾ ಈ ಮನುಷ್ಯ ಕುಲಕ್ಕೆ ಶತಮಾನಗಳಿಂದ ಅಂಟಿರೋ ಶಾಪ

ಮೀರಾ : ಏನೋ ಒಟ್ಟನಲ್ಲಿ ಪುಟ್ಟಿ ಇನಮೇಲೆ ನಮ್ ಜೊತೆ ಆಡೋಕೆ ಬರಲ್ಲಾ

ದೇವ್ರು : ಅಜ್ಜಿಗೆ ಈ ವಿಷಯಾ ಗೊತ್ತಾದರೆ ನಮ್ಮನ್ನೂ ಆಟಕ್ಕೆ ಕಳಸೋದೆ ಇಲ್ಲ

ಮಾನು : ಎಲ್ಲಾ ನಮ್ಮಿಂದಾನೆ

ಚಾರು : ನಮ್ ಜೊತೆ ಆಡೋಕೆ ಬಂದಿದ್ದಕ್ಕೆ ಹೀಗಾಗಿದ್ದು

ಪುಟ್ಟಿ : ನಮ್ ಯಾರ ತಪ್ಪೂ ಅಲ್ಲಾ ಎಲ್ಲಾ ದೊಡ್ಡೋರ ಮಾಡಿದ ತಪ್ಪು

ಮಾಯಾ : ಹೌದು ನಿನ್ ಮಾತು ಸರಿ ಪುಟ್ಟಿ ದೊಡ್ಡೋರ ಮಾಡಿದ ತಪ್ಪೆ ನಿಜಾ ಆದರೆ ಮುಂದೆ ನಾವ ದೊಡ್ಡೋರಾದ ಮೇಲೆ ಇದೇ ತಪ್ಪು ಮಾಡಬಾರದು ಅಷ್ಟೇ

ಪುಟ್ಟಿ : ನಾವ್ಯಾರು ಈ ತಪ್ಪ ಮಾಡಲ್ಲಾ ( ಎಲ್ಲರೂ ಕೈ ಮೇಲೆ ಕೈ ಇಟ್ಟು ಪ್ರಮಾಣ ಮಾಡುವರು )

ಹಾಡು

ಮಕ್ಕಳು ನಾವು ನಾಳೆಗಳು
ನಾಳೆಯ ದಿನದ ಕನಸುಗಳು

ಜಾತಿ ಮುಳ್ಳ ಮೇಲ ಹೂವುಗಳು
ನೋವ ನುಂಗಿ ನಗೋ ಒಡಲುಗಳು

ಭವ್ಯ ಭಾರತದ ನವದೃಷ್ಟಿಗಳು
ಮನುಷ್ಯ ಕೇಂದ್ರದ ಭಾವಗಳು

ಅನಾಮಿಕ : (ಧ್ವನಿ) ಹೀಗೆ ಮಕ್ಕಳ ಮನಸ್ಸು ಜಾತಿಯ ಪೊರೆ ಕಳಚಬೇಕು. ಪ್ರತಿಯೊಬ್ಬರು ಜೀವ ಕೇಂದ್ರಿತ ನೆಲೆಯಲ್ಲಿ ಯೋಚಿಸುವಂತಾಗಬೇಕು. ಇಂಥಹ ನಾಳೆಗಳು ಅನಂತವಾಗಬೇಕು ಅನಂತವಾಗಬೇಕು

ದೃಶ್ಯ – 10

( ಲಂಬೋದರ ಪುಟ್ಟಿಯನ್ನು ಶಾಲೆಗೆ ಕರೆದೊಯ್ಯುವವನಿದ್ದಾನೆ )

ಲಂಬೋದರ : ತಯಾರಾದ್ಯಾ ಮಗಳೇ ಬೇಗ ಹೊತ್ತಾಯ್ತು

ಜಾನ್ನವಿ : ಹು ರೀ ಟಿಫನ ಬಾಕ್ಸ ಹಾಕತಿದ್ದೀನಿ ( ಪುಟ್ಟಿಯನ್ನು ಕರೆದುಕೊಂಡು ಬಂದು ) ಹು ತಯಾರಾದ್ಲು ನೋಡಿ

ಲಂಬೋದರ : ಹು ಸರಿ ನಡಿ ಬೇಗ ಒಂಬತ್ತು ಮುಕ್ಕಾಲಾಯ್ತು ಕಾಲ ಗಂಟೆ ಮಾತ್ರ ಬಾಕಿ

ಪುಟ್ಟಿ : ಹೋಗಬರತೀನಮ್ಮಾ

ಜಾನ್ನವಿ : ( ಮುತ್ತಿಟ್ಟು ) ಮಧ್ಯಾಹ್ನ ಊಟದ ಬಾಕ್ಸ ಪೂರಾ ಖಾಲಿ ಮಾಡಬೇಕು ಆಯ್ತಾ

ಲಂಬೋದರ : ಹು ಸರಿ ಸರಿ ಅವಳಗೆ ಬೇಕಾದಷ್ಟು ತಿಂದೆ ತಿಂತಾಳೆ , ಸರಿಯಾಗಿ ಓದಕೊ ಅಂತಾ ಮಾತ್ರಾ ಹೇಳಬೇಡಾ
( ಕರೆದುಕೊಂಡು ಹೋಗುವನು )

( ಹೋಗುತ್ತಾ ಮಧ್ಯೆ ರಸ್ತೆಯಲ್ಲಿ ಮಾರವ್ವನ ಚಿಕ್ಕ ಗುಡಿ ನೋಡಿ ನಮಸ್ಕರಿಸಿ )

ಲಂಬೋದರ : ದೇವರಗೆ ನಮಸ್ಕಾರ ಮಾಡು

ಪುಟ್ಟಿ : (ನಮಸ್ಕರಿಸುತ್ತಾ) ಅಪ್ಪಾ ಈ ದೇವರು ಈ ಕೇರಿಯ ಇಲ್ಲಿಯ ಜನರ ದೇವರು ಅಂದ ಮೇಲೆ ಅದು ಕೀಳೇ ಅಲ್ವ ಅಪ್ಪ ಮತ್ತೆ ಇದಕ್ಕೆ ನಮಸ್ಕಾರ ಮಾಡತಿದ್ದೀಯಾ ?

( ಲೈಟುಗಳು ಆಫ ಆಗುತ್ತವೆ , ದೇವರ ಮೇಲೆ ಮಾತ್ರ ಬೆಳಕು ಉಳಿಯುತ್ತದೆ )

-ಕೃಷ್ಣ ಶ್ರೀಕಾಂತ ದೇವಾಂಗಮಠ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x