ಮನುಷ್ಯ ಪ್ರೀತಿ, ಮಾನವೀಯ ಅನುಕಂಪ, ಪರಿಸರ ಕಾಳಜಿ, ದೇಶ-ಭಾಷೆ, ಸಂಬಂಧಗಳು, ಸಮಾಜದ ಓರೆ-ಕೋರೆ, ತೊಡುಕು-ಕೆಡುಕಗಳನ್ನು ತನ್ನ ಹೊಟ್ಟೆಯಲ್ಲಿಟ್ಟುಕೊಂಡಿರುವ ಕಲುಷಿತ ಸಾಮಾಜಿಕ ಆವರಣ, ಆ ಆವರಣದ ನಡುವೆ ಬದುಕಿಗಾಗಿ ಹಂಬಲಿಸುವ, ಮನಮಿಡಿಯುವ ಮುಗ್ಧತೆ, ನ್ಯಾಯಕ್ಕಾಗಿ ಹೋರಾಡುವ, ಇರುವಿಕೆಯನ್ನು ಮುಟ್ಟಿನೋಡಿಕೊಳ್ಳುವ ಪಾತ್ರಗಳು… ಇಂಥ ಅನುಭವವನ್ನು ಗಾಢವಾಗಿ ಕಟ್ಟಿಕೊಡುವ ಶಕ್ತಿ ಕಾಸರವಳ್ಳಿಯವರ ಎಲ್ಲಾ ಸಿನೆಮಾಗಳ ಆವರಣದಲ್ಲಿದೆ. ಕತೆ, ಘಟನೆಯ ಓಘದಲ್ಲಿ ಪಾತ್ರಗಳು ಅನಾವರಣಗೊಳ್ಳುವ ಬಗೆಯನ್ನು ಸಮರ್ಥವಾಗಿ ಚಿತ್ರದ ಚೌಕಟ್ಟಿನಲ್ಲಿಟ್ಟಿರುವ ಹಲವು ಚಿತ್ರಗಳ ಗೊಂಚಲು ಕನ್ನಡದಲ್ಲಿ ಬಂದಿವೆ. ಅವೆಲ್ಲವವೂ ಮೂಲ ಆಕರವಾಗಿ ಸಾಹಿತ್ಯದಿಂದ ಪ್ರೇರಣೆಪಡೆದಿವೆ. ಸಂಸ್ಕಾರದಿಂದ ಶುರುವಾದ ಹೊಸ ಅಲೆಯ ಸಿನಿಮಾಗಳು ಮೊದಮೊದಲು ಪ್ರೇಕ್ಷಕರಿಂದ ಭಾರಿ ಮನ್ನಣೆ ಪಡೆದರೂ ಬರಬರುತ್ತ ಚಿತ್ರಮಂದಿರ ಕಾಣದಂತೆ ಉತ್ಸವಗಳಲ್ಲಿ ಮಾತ್ರ ಪ್ರದರ್ಶನ ಕಾಣತೊಡಗಿದವು. ಇದು ಬೇಸರದ ಸಂಗತಿಯಾದರೂ ಕಲಾಕೃತಿ ನಿರ್ಮಾತೃಗಳಲ್ಲಿ ಉತ್ಸಾಹ ಬತ್ತದೆ ಮತ್ತೆಮತ್ತೆ ಹೊಸ ಪ್ರಯತ್ನಕ್ಕೆ ಕೈ ಹಾಕುವುದು, ದೇಶವಿದೇಶದಲ್ಲಿ ಪ್ರದರ್ಶನ ನೀಡುವುದು ಮತ್ತು ರಾಜ್ಯ, ದೇಶ, ವಿದೇಶದ ಪ್ರತಿಷ್ಟಿತ ಪ್ರಶಸ್ತಿಗಳನ್ನು ಪಡೆಯುವುದು ನಮ್ಮ ಚಲನಚಿತ್ರೋದ್ಯಮದಲ್ಲಿನ ಒಂದು ಅಚ್ಚರಿಯ ಸಂಗತಿಯಾಗಿದೆ. ಗಿರೀಶ ಕಾಸರವಳ್ಳಿಯವರ ಶ್ರದ್ಧೆ ಅಂತಹ ಘನವಾದ ಸಿನೆಮಾಗಳನ್ನು ನೀಡುತ್ತ ಬಂದಿದೆ.
ಯಾವ ಉತ್ಪ್ರೇಕ್ಷೆಗಳಿಲ್ಲದ ಸರಳ ಕಥಾಹಂದರದೊಳಗಿನ ತವಕ-ತಲ್ಲಣಗಳನ್ನು ಯಥಾವತ್ತಾಗಿ ಸಿನೆಮಾ ಮಾಧ್ಯಮದಲ್ಲಿ ತರಲು ಸಾಧ್ಯವಾಗುವುದಿಲ್ಲ. ಸಾಹಿತ್ಯ ಕಟ್ಟಿಕೊಡುವ ಪರಿಸರ ಮತ್ತೊಂದು ಮಾಧ್ಯಮದಲ್ಲಿ ದೃಶ್ಯವಾಗುವುದರಿಂದ ಸಾಹಿತ್ಯಿಕ ವಿವರಣೆಗಳನ್ನು ಇಲ್ಲಿ ಬಯಸುವುದು ಸರಿಯಲ್ಲ. ಮನೋರಂಗಭೂಮಿಯಲ್ಲಿ ಅಸಾಧ್ಯ ಕಲ್ಪನೆಗಳ ನೇಯ್ದದ್ದು ಚಿತ್ರವಾಗಿ ಸಪ್ಪೆ ಎನಿಸುತ್ತದೆ. ಮೂಲ ಕತೆಯ ಸಿನೆಮಾವೇ ಅಲ್ಲ ಇದು ಎಂಬಷ್ಟರ ಮಟ್ಟಿಗೆ ಚರ್ಚೆಗಳೇ ನಡೆಯುತ್ತವೆ. ಹಲವು ಓದಿನಲ್ಲಿ ವಿಭಿನ್ನ ಆಯಾಮಗಳು ದೊರೆಯುತ್ತವೆ. ಸಿನಿಮಾ ಕೂಡ ಆ ಕತೆಯ ಮತ್ತೊಂದು ಓದು ಆಗಿರುತ್ತದೆ. ಆದರೆ ದೃಶ್ಯ – ಶ್ರವ್ಯ ಕಾರಣಕ್ಕಾಗಿ ಅದು ತನ್ನ ಮಾಧ್ಯಮದ ಮುಖೇನ ಪ್ರಸ್ತುತಗೊಳ್ಳುತ್ತದೆ. ಸಾಹಿತ್ಯ ಕೃತಿಯಾಧಾರಿತ ಸಿನೆಮಾಗಳನ್ನು ಮಾಡುವ ಈ ಗುಂಪಿನಲ್ಲಿ ಅಗ್ರಗಣ್ಯರು ಗಿರೀಶ ಕಾಸರವಳ್ಳಿ. ‘ಘಟಶ್ರಾದ್ಧ’ದಿಂದ ಆರಂಭವಾಗಿ ಕೂರ್ಮಾವತಾರ ತನಕ ಸಾಹಿತ್ಯಕೃತಿಗಳ ಆಧಾರಿತ ಸಿನಿಮಾಗಳನ್ನೇ ಮಾಡುತ್ತ ಬಂದಿದ್ದಾರೆ.
ಸಿನಿಮಾ ಮುಖಾಂತರ ಎಷ್ಟು ಕಾಳಜಿ – ಶ್ರದ್ಧೆಯಿಂದ ಸಾಮಾಜಿಕ ಸ್ವಾಸ್ತ್ಯ ಬಯಸುತ್ತಾರೋ ಅಷ್ಟೇ ತೀವ್ರವಾಗಿ ಸಾಮಾಜಿಕ ಜೀವನಕ್ಕೂ ಸ್ಪಂದಿಸುವ ಕಾಸರವಳ್ಳಿಯವರು ತಾಯಿ ಹೃದಯದ ನಿಷ್ಕಲ್ಮಶ ಮನಸ್ಸಿನವರು. ಸಾಣೆಹಳ್ಳಿಯಲ್ಲಿ ನಡೆದ ಕನ್ನಡ ಸಿನಿಮಾ ಸಹೃದಯ ಶಿಬಿರದಲ್ಲಿ ಅವರ ಸಿನಿಮಾಗಳನ್ನು ಹಳ್ಳಿಗರಿಗಾಗಿ ಸಾಯಂಕಾಲ ಸ್ಕ್ರೀನಿಂಗ್ ಮಾಡಲಾಗುತ್ತಿತ್ತು. ಮರುದಿನ ರಾತ್ರಿ ನೋಡಿದ ಚಿತ್ರದ ಕುರಿತು ಒಂದು ಸಂವಾದ ಏರ್ಪಡಿಸಲಾಗುತ್ತಿತ್ತು. ಅಲ್ಲದೆ ದಿನದ ತರಗತಿಗಳಲ್ಲಿ ಕೂಡ ಬೇರೆಬೇರೆ ಡಾಕ್ಯುಮೆಂಟರಿ ಸಿನಿಮಾಗಳ ಅಧ್ಯಯನವೂ ನಡೆಯುತ್ತಿತ್ತು. ‘ನೀರೋ ಗೆಸ್ಟ್ಸ್’ ನೋಡಿದ ಶಿಬಿರಾರ್ಥಿಗಳು ಜೋರು ಚರ್ಚೆಯಲ್ಲಿ ತೊಡಗಿರುವಾಗ ಕಾಸರವಳ್ಳಿಯವರು ಸಾಣೆಹಳ್ಳಿಗೆ ಬಂದಿಳಿದರು. ಆಗ ಬಂದಿದ್ದ ಅವರನ್ನು ಸ್ವಾಗತಿಸಿ, ತಿಂಡಿ,ಕಾಫಿ ಎಂದು ಅವರನ್ನು ಕ್ಯಾಂಟೀನ್ ಕಡೆಗೆ ಕರೆದೊಯ್ಯುತ್ತಿದ್ದಾಗ ಅವರ ಚಿತ್ತ ಪೂರ್ತ ಸಂವಾದದ ಕಡೆಗಿತ್ತು. ಶಿಬಿರಾರ್ಥಿಯೊಬ್ಬ ರೈತನ ದುರ್ಬಲ ಮನಸ್ಸೇ ಆತನ ಆತ್ಮಹತ್ಯಗೆ ಕಾರಣವೆಂದೂ, ಸರಕಾರದ ಮುಗೊರೆಸುವ ಸೌಲಭ್ಯಗಳ ಪಡೆಯುವಲ್ಲಿ ರೈತರೂ ಭ್ರಷ್ಟರೆಂದು ಏನೇನೋ ಮನಗಟ್ಟಲೆ ಮಾತಾಡುತ್ತಿರುವಾಗ ಕಾಸರವಳ್ಳಿಯವರು ಕಾಫಿ ಕುಡಿಯುತ್ತಲೆ ಚಡಪಡಿಸತೊಡಗಿದರು. “ಯಾರದು..? ಅವರು ಏನು ಮಾತಾಡತಿದಾರೆ ನೋಡಿ.. ನಾನು ಆಮೇಲೆ ಕಾಫಿ ಕುಡಿಯುತ್ತೇನೆ. ಅವರಿಗೆ ಸರಿಯಾಗಿ ತಿಳಿಸಿ ಹೇಳಬೇಕು” ಮೆಲುದನಿಯಲ್ಲಿ ತೀವ್ರತರವಾದ ಕಾಳಜಿ ಇತ್ತು. ಆ ಸಂವಾದವನ್ನು ಸಂಘಟಕರು ಬರಖಾಸ್ತ ಮಾಡಿ ಮುಂದಿನ ತರಗತಿಗೆ ಅಣಿಯಾದ್ದರಿಂದ ಅವರೊಳಗಿನ ತಲ್ಲಣ ಕಡಿಮೆ ಆಗಲಿಲ್ಲ. ಮುಂಜಾನೆಯ ಚರ್ಚೆಗೆ ಪೂರಕವಾಗಿ ಸಿನಿಮಾ ಮೀಮಾಂಸೆಯ ಕುರಿತಾದ ತಮ್ಮ ದಿರ್ಘ ಭಾಷಣದಲ್ಲಿ ಆ ವಿಷಯವನ್ನು ಪ್ರಸ್ತಾಪಿಸಿ ತಿಳಿಸಿ ಹೇಳುವುದನ್ನು ಮರೆಯಲಿಲ್ಲ.
*** *** ***
ತೈಮೂನ ತನ್ನ ಸೈನ್ಯದೊಂದಿಗೆ ಕಡಿದಾದ ಬೆಟ್ಟ-ಗುಡ್ಡಗಳ ನಡುವೆ ಹೋಗುತ್ತಿದ್ದಾಗ ಆನೆಯೊಂದು ಅಕಸ್ಮತ್ತಾಗಿ ಹೆಜ್ಜೆ ತಪ್ಪಿಟ್ಟು, ಕಾಲುಜಾರಿ ಕಂದಕದ ಪ್ರಪಾತದ ಕತ್ತಲೆಗೆ ಬಿತ್ತು. ಬೀಳುವಾಗ ಅದರ ಆಕ್ರಂದನ ಮುಗಿಲು ಮುಟ್ಟಿತು. ಆ ಆನೆಯ ಘೀಳಿಡುವಿಕೆಯು ಮತ್ತು ಆಳಾಳ ಪ್ರಪಾತದಲ್ಲಿ ಅದರ ಕಿರಚಾಟ ಮಾರ್ದನಿಸಿದ ರೀತಿಯು ತೈಮೂನ್ ಮಹಾಶಯನಿಗೆ ಒಂದು ರೀತಿಯ ಹುಚ್ಚು ಸಂತಸವನ್ನು ಕೊಟ್ಟಕಾರಣಕ್ಕಾಗಿ ಅದು ಮನರಂಜನೆಯಾಗಿ ಕಾಣಿಸಿತು. ಆಗ ತನ್ನಲ್ಲಿದ್ದ ಆನೆಗಳನ್ನೆಲ್ಲ ಒಂದೊಂದಾಗಿ ಕಂದಕಕ್ಕೆ ತಳ್ಳಿ… ತಾನು ರಂಜನೆಯನ್ನು ಪಡೆಯತೊಡಗಿದ. ಸಿನೆಮಾ ಮತ್ತು ಪಿಚ್ಚರ್ ನಡುವಿನ ರಂಜನಾ ದ್ರವ್ಯದ ವ್ಯತ್ಯಾಸವೂ ಇಂಥದೆ ಗೆರೆಗಳ ಮಧ್ಯದಲ್ಲಿದೆ. ಸಿನಿಮಾದ ಸಾಧ್ಯತೆಗಳ ಕುರಿತು ಮತ್ತು ಪ್ರೇಕ್ಷಕರ ಅಭಿರುಚಿಗಳ ಬಗ್ಗೆ ಮಾತಾಡುತ್ತ ಈ ಕಥೆಯನ್ನು ಕಾಸರವಳ್ಳಿಯವರೇ ಹೇಳಿದರು. ಕಲಾತ್ಮಕ ಸಿನಿಮಾಗಳು ಬಿಡುಗಡೆಗೊಳ್ಳುವುದಿಲ್ಲ ಎಂಬ ಕೊರಗಿದ್ದರೂ ಸಹೃದಯರಿಗಾಗಿ ಅಲ್ಲಲ್ಲಿ ಶಿಬಿರ, ಚಿತ್ರೋತ್ಸವ, ರಸಗ್ರಹಣ ಶಿಬಿರ ಹೀಗೆ ಒಂದಷ್ಟು ಕಡೆ ಪ್ರದರ್ಶನಗೊಳ್ಳುತ್ತವೆ. ಚಿತ್ರಸಮಾಜವು ಆ ದಿಸೆಯಲ್ಲಿ ಕೆಲಸ ಮಾಡುತ್ತಿದ್ದು ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಸಂಸ್ಕಾರ, ತಬರನ ಕತೆ, ಚಿತ್ರಗಳಿಗೆ ಸಿಕ್ಕ ಯಶಸ್ಸು ಆ ನಂತರದ ಯಾವ ಚಿತ್ರಕ್ಕೂ ಸಿಕ್ಕಲಿಲ್ಲ.
*** *** ***
ಕಾಸರವಳ್ಳಿ ತೋಟದಲ್ಲಿ ಪ್ರತಿಮೆಗಳು ಬಹಳಷ್ಟು ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತವೆ. ಒಂದೊಂದು ಚಿತ್ರಿಕೆಯೂ ಒಂದೊಂದು ಕತೆ ಹೇಳುತ್ತವೆ. ಹೆಣ್ಣು ಮತ್ತು ಭಾರತೀಯ ಸಮಾಜರಚನೆಯಲ್ಲಿ ಆಕೆಯ ಪಾವಿತ್ರ್ಯದ ಕುರೂಪಗಳು, ಅಸಹಾಯಕತೆ, ಅಲೆದಾಟ, ಪುನರ್ವಸತಿ, ಮುಗ್ಧತೆ, ಚೈತನ್ಯ, ಆಕ್ರೋಶ, ಕೋಮುವಾದ ಹೀಗೆ ಕಲಾಕೃತಿಯಲ್ಲಿ ಘನೀಭೂತಗೊಳ್ಳುವ ಪ್ರತಿಮೆಗಳು ಇರುತ್ತವೆ.
ಚಲೋ ಬರೆದಿರಿ ಮಹಾದೇವಣ್ಣ. ನಮ್ಮ ಭಾಗದಾಗ ರಂಗಭೂಮಿಯ ಚಟುವಟಿಕೆ, ಶಿಬಿರ, ಪ್ರಯೋಗಗಳ ವಿಮರ್ಶೆ, ಪರಿಚಯವನ್ನು ಮಾಡಿಸುವವರು ಯಾರು ಇರಲಿಲ್ಲ. ನೀವು ದಾರವಾಡ ಸಾಂಸ್ಕೃತಿಕ ನಗರಿಯಲ್ಲಿ ನೆಲೆಗೊಂಡು ಇಂಥ ಚಟುವಟಿಕೆಗಳನ್ನು ನಡೆಸುತ್ತಿರುವುದು ಖುಷಿ ತಂದಿದೆ.
ಮಹದೇವಣ್ಣ, ಇಲ್ಲಿಯ ನಿರೂಪಣೆ ಮತ್ತು ವಿಷಯ ಮಂಡನೆ ಚೆನ್ನಾಗಿದೆ…..ಓದಿದ ನಂತರವೂ ಲೇಖನದಲ್ಲಿಯ ಕೆಲವು ವಿಚಾರಗಳು ಯೋಚಿಸುವಂತೆ ಮಾಡುತ್ತವೆ….ಶುಭದಿನ
ಉತ್ತಮ ಲೇಖನ.
ಗಿರೀಶ್ ಕಾಸರವಳ್ಳಿಯವರ ಚೋಮನ ದುಡಿ ಚಿತ್ರ ನೋಡಿದ್ದೇನೆ .
ವಿಶ್ವಮಟ್ಟದಲ್ಲಿ ಅವರು ಕನ್ನಡ ಸಿನೆಮಾದ ಮತ್ತು ಸಂಸ್ಕೃತಿಯ ಅಗ್ರಪ್ರತಿನಿಧಿ.
ಉತ್ತಮ ಲೇಖನ.
ಉತ್ತಮ ಲೇಖನ. ಸುಮಾರು ಮೂವತ್ತು ವರ್ಷಗಳ ಹಿಂದೆ ನೊಡಿದ, ಅವರ ಮೊದಲ ಚಿತ್ರ, ಘಟಶೃಆದ್ಧ ಇನ್ನೂ ನೆನಪಾಗುತ್ತದೆ. ಆ ಸಿನೇಮಾ ತೋರಿಸಲು, ಬೇರೆ ಬೇರೆಯವರನ್ನು ಕರೆದುಕೊಂಡು ಮೂರು ಸಲ ಅದನ್ನು ನೋಡಿದ್ದೆ. ಅವರ ನಾಯಿಯ ನೆರಳು ಅಷ್ಟೊಂದು ಖುಶಿ ಕೊಡಲಿಲ್ಲ. ಇತ್ತೀಚೆಗಿನ ಅವರ ಚಿತ್ರ ನೋಡಿಲ್ಲ.
ಅವರ ಸಿನೇಮಾಗಳ ಬಗ್ಗೆ, ಕೊನೆಯ ಮೂರು ಸಾಲುಗಳಲ್ಲಿ ಚೆನ್ನಾಗಿ ಹೇಳಿದ್ದೀರಿ.
ಸರ್ ಒಂದ್ ಸರಿ ನಿಮಗ್ ಕೇಳಿದ್ದೇರಿ ನಿಮ್ಮ ಬರವಣಿಗೆಯನ್ನ ಓದತಿನಿ ಕೋಡ್ರಿ ಅಂತ – ಆದ್ರ ಆ ಟೈಮ್ ಇವಾಗ ಬಂತ ನೋಡ್ರಿ ಬಾಳ ಚೋಲೊ ಬರದಿರಿ ಸರ್ ……….