[ಪ್ರತಿವರ್ಷದ ಆರಂಭದಲ್ಲಿ ಮಕರ ಸಂಕ್ರಾತಿಯ ಸಂದರ್ಭದಲ್ಲಿ ಗುಜರಾತಿನಲ್ಲಿ ನಡೆಯುವ ಗಾಳಿಪಟದ ಹಬ್ಬದಲ್ಲಿ ನಡೆಯುವ ಹಿಂಸೆಯ ಕುರಿತಾದ ಲೇಖನವಿದು. ಮಾನವ ತನ್ನ ಮನರಂಜನೆಗಾಗಿ ಏನೆಲ್ಲಾ ಅವಘಡಗಳನ್ನು ಮಾಡುತ್ತಾನೆ ಎಂಬುದರ ಕುರಿತು ಬೆಳಕು ಚೆಲ್ಲುವ ಪ್ರಯತ್ನ]
ಈಗೊಂದು 25 ವರ್ಷಗಳ ಹಿಂದೆ ಗಾಳಿಪಟ ಹೆಸರು ಕೇಳಿದೊಡನೆ ಆಗಿನ ಮಕ್ಕಳ ಮುಖ ಮೊರದಗಲವಾಗುತ್ತಿತ್ತು. ಮನೆಯ ಹಿರಿಯರಿಗೆ ಬೆಳಗಿನಿಂದ ಕಾಡಿ-ಬೇಡಿ ಮಾಡಿದರೆ ಸಂಜೆ 4ರ ಹೊತ್ತಿಗೆ ಗಾಳಿಪಟ ತಯಾರಾಗುತ್ತಿತ್ತು. ಗಾಳಿ ಬಂದಂತೆಲ್ಲಾ ಮೇಲೇರುವ ಗಾಳಿಪಟವನ್ನು ಆಕಾಶದೆತ್ತರಕ್ಕೇರಿಸಲು ವಿಶಾಲವಾದ ಖಾಲಿ ಜಾಗದ ಅಗತ್ಯವಿತ್ತು. ಮಲೆನಾಡಿನಲ್ಲಿ ಎದುರು ಭಾಗದಲ್ಲಿ ಅಡಿಕೆ ತೋಟ ಹಾಗೂ ಹಿಂಭಾಗದಲ್ಲಿ ಬೆಟ್ಟ. ಹಾಗಾಗಿ ಗದ್ದೆ ಕಟಾವು ಆದ ನಂತರದಲ್ಲಿ ಗದ್ದೆಯಲ್ಲೋ ಅಥವಾ ಕರಡವನ್ನು (ಕರಡವೆಂದರೆ ಖುಷ್ಕಿಜಾಗದಲ್ಲಿ ಬೆಳೆಯುವ ಹುಲ್ಲು, ಜಾನುವಾರುಗಳಿಗೆ ಆಹಾರವಾಗಿ ನೀಡಲಾಗುತ್ತಿತ್ತು) ಕಡಿದು ಆದ ಮೇಲೆ ಸಿಗುವ ಖಾಲಿ ಬ್ಯಾಣದ ಜಾಗವನ್ನೋ ಹುಡುಕಬೇಕಾಗಿತ್ತು. ಈ ತರಹದ ಭೌಗೋಳಿಕ ಅಡಚಣೆಯ ಕಾರಣದಿಂದ ನಮ್ಮಲ್ಲಿ ಗಾಳಿಪಟದಾಟಕ್ಕೆ ಲಗೋರಿ, ಚಿನ್ನಿ-ದಾಂಡು, ಪೇಂದ, ಮರಕೋತಿ, ಕಳ್ಳ-ಪೋಲೀಸ್ ಇತ್ಯಾದಿ ಆಟಗಳಿಗೆ ಸಿಗುವಷ್ಟು ಮನ್ನಣೆ ಹಾಗೂ ಜನಪ್ರಿಯತೆ ಈ ಭಾಗದಲ್ಲಿ ಸಿಗಲಿಲ್ಲ ಎನ್ನುವುದು ನಿಜ. ಈಗಂತೂ ಬಿಡಿ, ಟಿ.ವಿ ಬಂದ ಮೇಲೆ ಎಲ್ಲಾ ಸಾಂಪ್ರಾದಾಯಿಕ ಆಟಗಳೂ ಅಳಿದೇ ಹೋಗಿವೆ. ಪೆಟ್ಲು ಪಟಾಕಿಯ ಬದಲು ಗರ್ನಾಲು-ಪಟಾಕಿ, ಚನ್ನೆಮಣೆ ಬದಲು ಸ್ನೇಕ್ & ಲ್ಯಾಡರ್, ಪಗಡೆಯ ಬದಲಿಗೆ ಕೇರಂ ಇತ್ಯಾದಿಗಳು ಬಂದವು. ಪೆಟ್ಲು ತಯಾರಿಸುವಾಗ ಕನಿಷ್ಟ ಮೂರ್ನಾಲ್ಕು ತರಹದ ಸಸ್ಯವೈವಿಧ್ಯದ ಪರಿಚಯವಾಗುತ್ತಿತ್ತು. ಪೆಟ್ಲು ತಯಾರಿಸಲು ಶಮೆ ಬಿದಿರು, ಜುಮ್ಮನ ಹಳ್ಳು ಅಥವಾ ಕೆಸವಿನ ಎಲೆ ಇವುಗಳ ಪರಿಚಯ ಮಕ್ಕಳಿಗಾಗುತ್ತಿತ್ತು. ಮಾಲಿನ್ಯವಿಲ್ಲದ ಈ ನೈಸರ್ಗಿಕ ಪಟಾಕಿ ಜಾಗತೀಕರಣವೆಂಬ ದೈತ್ಯನ ಕಾಲಡಿಯಲ್ಲಿ ಹೂತುಹೋಗಿದೆ. ಗಾಳಿಪಟವೂ ಅಷ್ಟೇ ಮನೆಮಂದಿಯೆಲ್ಲಾ ಸೇರಿ ಸಂಭ್ರಮಿಸುವ ಆಟವಾಗಿತ್ತು.
ದಕ್ಷಿಣ ಭಾರತಕ್ಕೆ ಹೋಲಿಸಿದರೆ ಉತ್ತರ ಭಾರತದಲ್ಲಿ ಗಾಳಿಪಟದಾಟದ ಹುಚ್ಚು ತುಸು ಹೆಚ್ಚೇ ಇದೆ ಹೇಳಬಹುದು. ಮೂಲತ: ಚೀನಾದ ಮಂದಿ ಕಂಡು ಹಿಡಿದ ಗಾಳಿಪಟ ತಂತ್ರಜ್ಞಾನ ಕ್ರಮೇಣ ಪ್ರಪಂಚದಾದ್ಯಂತ ವ್ಯಾಪಿಸಿತು ಎಂದು ಹೇಳಲಾಗುತ್ತದೆ. ಗಾಳಿಪಟವನ್ನು ವಿವಿದ್ದೋಶಗಳಿಗೆ ಬಳಸುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ. ಇದಕ್ಕೊಂದು ಅತ್ಯಂತ ಕ್ರೂರವಾದ ಮುಖವೂ ಇದೆ ಎಂದರೆ ನಂಬುತ್ತೀರಾ? ಅಹಿಂಸಾ ಮೂರ್ತಿ ಬುದ್ಧ ಹುಟ್ಟಿದ ದೇಶದಲ್ಲಿ ಗಾಳಿಪಟವೆಂಬ ಮನರಂಜನೆಯ ಅಸ್ತ್ರ ಎಷ್ಟೊಂದು ಸಂವೇದನೆ ಕಳೆದುಕೊಂಡಿದೆ ಎಂಬುದನ್ನು ಇಲ್ಲಿ ನೋಡೋಣ.
ಉತ್ತರಾಯಣ ಪುಣ್ಯಕಾಲ: ಸಾಮಾನ್ಯವಾಗಿ ಪುಷ್ಯಮಾಸದಲ್ಲಿ ಬರುವ ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲವೆಂದು ಕರೆಯುತ್ತಾರೆ. ಕೇವಲ ಬದುಕುವುದಕ್ಕೆ ಮಾತ್ರವಲ್ಲ ಸಾಯುವುದಕ್ಕೂ ಉತ್ತರಾಯಣ ಪುಣ್ಯಕಾಲ ಶ್ರೇಷ್ಠವೆಂದು ಹೇಳಲಾಗಿದೆ. ಅದಕ್ಕಾಗಿಯೇ ಭೀಷ್ಮ ದೇಹ ತ್ಯಜಿಸಲು ಉತ್ತರಾಯಣ ಕಾಲದವರೆಗೂ ಶರಶಯ್ಯೆಯಲ್ಲಿ ಹರಿಸ್ಮರಣೆ ಮಾಡುತ್ತಾ ಕಾದಿದ್ದನು ಎಂದು ಮಹಾಭಾರತದಲ್ಲಿ ಉಲ್ಲೇಖವಿದೆ. ಇದೇ ಮಕರ ಸಂಕ್ರಾಂತಿ ಅಥವಾ ಉತ್ತರಾಯಣ ಪುಣ್ಯಕಾಲದಂದು ಗುಜರಾತಿನಲ್ಲಿ ಗಾಳಿಪಟದ ಸ್ಪರ್ಧೆ ಏರ್ಪಡುತ್ತದೆ.
2013-14 ಸಾಲಿನ ಜನವರಿ ತಿಂಗಳು. ಅಂತಾರಾಷ್ಟ್ರೀಯ ಗಾಳಿಪಟದ ಉತ್ಸವವನ್ನು ಉದ್ಘಾಟಿಸಿ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಉವಾಚ “ಬಾಯಿಯೋ ಔರ್ ಬಹೆನೋ” ವರ್ಷದಿಂದ ವರ್ಷಕ್ಕೆ ಈ ಗಾಳಿಪಟದ ಹಬ್ಬದ ಮೆರಗು ಹೆಚ್ಚಾಗುತ್ತಿದೆ. ಇದರಿಂದ ನಮ್ಮ ರಾಜ್ಯಕ್ಕೆ ಕೋಟ್ಯಾಂತರ ರೂಪಾಯಿಗಳ ಆದಾಯ ಹರಿದು ಬರುತ್ತಿದೆ. ನಮ್ಮಲ್ಲಿಯ ಬಡಕುಟುಂಬಗಳಿಗೆ ಆದಾಯ ಸಿಗುತ್ತಿದೆ. ಈ ವರ್ಷ ಗಾಳಿಪಟದಿಂದ ಬಂದ ಆದಾಯ ಸುಮಾರು 500 ಕೋಟಿ ದಾಟಿದೆ, ಇದೇ ಉದ್ಯಮ ಸುಮಾರು 30 ಸಾವಿರ ಜನರಿಗೆ ಉದ್ಯೋಗವನ್ನು ನೀಡಿದೆ. ಆದ್ದರಿಂದ, ಎಲ್ಲರೂ ಈ ಉತ್ಸವದಲ್ಲಿ ಪಾಲ್ಗೊಳ್ಳಿ, ಜೈ ಹಿಂದ್. ಗುಜರಾತ್ ರಾಜ್ಯದ ಹೆಚ್ಚಿನ ಜನ ತಾರಸಿ ಕಟ್ಟಡಗಳ ಮೇಲೆ ಗಾಳಿಪಟ ಹಾರಿಸುವ ಕಾಯಕದಲ್ಲೇ ತೊಡಗಿರುತ್ತಾರೆ. ಸಾಂಪ್ರಾದಾಯಿಕ ರೀತಿಯ ಗಾಳಿಪಟ ಏರಿಸುವ ಸ್ಪರ್ಧೆಯಿರುವಾಗ, ಗಾಳಿಪಟದ ದಾರವೂ ಹತ್ತಿಯದೇ ಆಗಿರುತ್ತಿತ್ತು. ಯಾವಾಗ ಹಾರಿಸುವ ಸ್ಪರ್ಧೆಯಲ್ಲಿ ಪೈಪೋಟಿ ಶುರುವಾಯಿತೋ, ಆಗ ಒಬ್ಬರ ಗಾಳಿಪಟದ ದಾರವನ್ನು ಇನ್ನೊಬ್ಬರು ಕತ್ತರಿಸುವ ಮೋಜಿಗೆ ಬಿದ್ದರೋ, ಆಗ ಪೈಪೋಟಿಯಲ್ಲಿ ಅಸಾಧಾರಣ ಮಾರ್ಪಾಟಾಯಿತು. ಸ್ಥಳೀಯವಾಗಿ ತಯಾರಾದ ಗಾಳಿಪಟಕ್ಕಿಂತ ಚೀನಾದಿಂದ ಅಮದಾದ ಗಾಳಿಪಟವೇ ಶ್ರೇಷ್ಠವೆಂದು ತೋರಿತು. ಇದಕ್ಕೂ ಕಾರಣವಿದೆ. ಚೀನಾದ ಗಾಳಿಪಟದ ದಾರದಲ್ಲಿ ಎದುರಾಳಿಯ ದಾರವನ್ನು ಕತ್ತರಿಸಲು ಬೇಕಾದ ಅಂಶಗಳಿವೆ. ಅಲ್ಲದೇ ಈ ದಾರ ಕೂಡ ನೈಲಾನ್ ದಾರವಾಗಿದ್ದು ಸುಲಭದಲ್ಲಿ ಹರಿದು ಹೋಗುವುದಿಲ್ಲ. ಎದುರಾಳಿಯ ಗಾಳಿಪಟದ ದಾರವನ್ನು ತುಂಡರಿಸಲು ಅನುಕೂಲವಾಗುವಂತೆ, ಆ ದಾರಕ್ಕೆ ಗಾಜಿನ ಪುಡಿಯನ್ನು ಅಂಟಿನ ಮೂಲಕ ಸವರಲಾಗಿರುತ್ತದೆ. ಈ ದಾರವೇ ಮೃತ್ಯುಸದೃಶ್ಯವಾಗಿರುತ್ತದೆ.
ನರೇಂದ್ರ ಮೋದಿಯವರ ಜೊತೆ ಸಲ್ಮಾನ್
ಗಾಯಗೊಂಡಿರುವ ರಣಹದ್ದು
ಗಾಳಿಪಟದ ದಾರಕ್ಕೆ ಸಿಲುಕಿದ ಹಕ್ಕಿ
ಬೆಳ್ಳಕ್ಕಿ, ಗಿಡುಗ, ಹದ್ದು, ಪಾರಿವಾಳ, ಬಾತು ಹೀಗೆ ಅಸಂಖ್ಯ ಪಕ್ಷಿಗಳು ಬೆಳಗಿನ ಮತ್ತು ಸಂಜೆಯ ಹೊತ್ತಿನಲ್ಲಿ ಆಕಾಶವನ್ನೇ ತಮ್ಮ ಕೇಂದ್ರವನ್ನಾಗಿ ಮಾಡಿಕೊಂಡಿರುತ್ತವೆ. ಗೂಡಿನಲ್ಲಿರುವ ಮರಿಗಳಿಗೆ ಆಹಾರ ತರುವುದು, ಗೂಡು ಕಟ್ಟಲು ಬೇಕಾದ ಕಡ್ಡಿಗಳನ್ನು ತರುವುದು, ಗೂಡು ಕಟ್ಟಲು ಜಾಗ ಹುಡುಕಲು ಹೀಗೆ ಅಸಂಖ್ಯ ಕೆಲಸಗಳು ಈ ಆಕಾಶಕಾಯಗಳಿಗೆ ಇರುತ್ತದೆ. ಕೆಲವೊಂದು ಪಕ್ಷಿಗಳು ಬೇರೆ ದೇಶದಿಂದ ವಲಸೆ ಬರುತ್ತಿರುತ್ತವೆ. ಇದೇ ಸಮಯದಲ್ಲಿ ಗಾಳಿಪಟದ ಹಬ್ಬ ಅವುಗಳ ದಿಕ್ಕುಗೆಡಿಸುತ್ತವೆ. ಅತ್ಯಂತ ಬಲಿಷ್ಠವಾದ ನೈಲಾನ್ ದಾರಗಳು ಅವುಗಳ ಕೊರಳಿಗೆ, ಕಾಲಿಗೆ, ರೆಕ್ಕೆಗಳಿಗೆ ಸಿಲುಕುತ್ತವೆ. ಕತ್ತಿಯ ಅಲುಗಿನಂತೆ ಹರಿತವಾದ ನೈಲಾನ್ ದಾರ ಅವುಗಳ ದೇಹದಲ್ಲಿ ಸಿಕ್ಕು ಗಾಯ ಮಾಡುತ್ತವೆ. ಕಾಲು-ರೆಕ್ಕೆ ತುಂಡಾಗುವುದು ಮಾಮೂಲು. ಬಿಡಿಸಿಕೊಳ್ಳುವ ವ್ಯರ್ಥ ಪ್ರಯತ್ನದಲ್ಲಿ ದಾರ ಇನ್ನಷ್ಟು ಬಿಗಿಯಾಗಿ ಸುತ್ತಿಕೊಳ್ಳುತ್ತದೆ. ಹೀಗೆ ಗಾಳಿಪಟದ ಸಮೇತ ಪಕ್ಷಿಗಳು ಧರಾಶಾಯಿಯಾಗುತ್ತವೆ. ಮಕರ ಸಂಕ್ರಾಂತಿಯ ದಿನವೇ ರಾಮ ಸೀತೆಯನ್ನು ರಾವಣನಿಂದ ಬಿಡಿಸಿಕೊಂಡು ಬಂದ ಎಂಬುದೊಂದು ಪ್ರತಿತಿ ಇದೆ. ಇದಕ್ಕೂ ಪೂರ್ವದಲ್ಲಿ ರಾವಣ ಸೀತೆಯನ್ನು ಪುಷ್ಪಕ ವಿಮಾನದಲ್ಲಿ ಅಪಹರಿಸಿಕೊಂಡು ಹೋಗುವಾಗ ಜಟಾಯುವೆಂಬ ದೈತ್ಯ ಪಕ್ಷಿ ಸೀತೆಯನ್ನು ರಕ್ಷಿಸಲು ಹೋರಾಡುತ್ತಾ ತನ್ನೆರೆಡು ರೆಕ್ಕೆಗಳನ್ನು ಕಳಚಿಕೊಂಡು ಕೆಳಗೆ ಬೀಳುವ ಸನ್ನಿವೇಶವೂ ರಾಮಾಯಣದಲ್ಲಿ ಬರುತ್ತದೆ. ಹೀಗೆ ಮಕರ ಸಂಕ್ರಾಂತಿ ಸಂಧರ್ಭದಲ್ಲಿ ಸಾವಿರಾರು ಜಟಾಯುಗಳು ಆಧುನಿಕ ರಾವಣನ ಗಾಳಿಪಟವೆಂಬ ಮನರಂಜನೆಯ ತೆವಲಿಗೆ ಸಿಲುಕಿ ಧರೆಗುರುಳುತ್ತವೆ. ಇದರಲ್ಲೂ ಅತ್ಯಂತ ಗಂಭೀರವಾದ ವಿಷಯವೆಂದರೆ, ಜಗತ್ತಿನಲ್ಲೇ ಅತಿ ವೇಗವಾಗಿ ಅಳಿಯುತ್ತಿರುವ ನೈಸರ್ಗಿಕ ಜಾಡಮಾಲಿಯಾದ ಹದ್ದಿನ ಕುರಿತದ್ದು, ಸಾಮಾನ್ಯವಾಗಿ ಹದ್ದುಗಳು ಮೊಟ್ಟೆಯಿಟ್ಟು ಮರಿ ಮಾಡುವುದು ಜನವರಿ ತಿಂಗಳಲ್ಲೇ ಆಗಿದೆ. ಈ ಹದ್ದುಗಳು ದಿನಕ್ಕೆ ಕನಿಷ್ಟ ಮೂರು ಬಾರಿಯಾದರೂ ತಮ್ಮ ಮರಿಗಳಿಗೆ ಆಹಾರ ನೀಡುತ್ತವೆ. ಅತ್ತ ಆಹಾರ ಹುಡುಕಲು ಆಕಾಶಕ್ಕೇರಿದ ತಾಯಿ ಹದ್ದು, ಗಾಳಿಪಟಕ್ಕೆ ಸಿಕ್ಕುರುಳಿದರೆ, ಇತ್ತ ಮರಿಗಳು ಆಹಾರವಿಲ್ಲದೆ ಅಸುನೀಗುತ್ತವೆ.
ಗಾಳಿಪಟದ ಹಬ್ಬದಲ್ಲಿ ಬರೀ ಹಕ್ಕಿಗಳಷ್ಟೆ ಸಾಯುತ್ತಿಲ್ಲ. ಮನುಷ್ಯರು ಇದರ ಸಂತ್ರಸ್ಥರಾಗಿದ್ದಾರೆ. 2011ರಲ್ಲಿ ಗಾಳಿಪಟ ಅಹಮದಾಬಾದಿನಲ್ಲಿ 8 ಜನರನ್ನು ಬಲಿ ತೆಗೆದುಕೊಂಡಿತು. ಗಾಳಿಪಟದ ನೈಲಾನ್ ದಾರ 4 ವರ್ಷದ ಹೆಣ್ಣು ಮಗುವಿನ ಕೊರಳನ್ನೇ ಸೀಳಿ ಹಾಕಿತು. ಇದೇ ವರ್ಷದಲ್ಲಿ ಅಲ್ಲಿ 300 ಜನ ತೀವ್ರವಾಗಿ ಗಾಯಗೊಂಡರು. 2009ರಿಂದಲೇ ಗಾಳಿಪಟ ಹಾರಿಸಲು ನೈಲಾನ್ ದಾರವನ್ನು ಉಪಯೋಗಿಸಬಾರದೆಂಬ ನಿಷೇಧ ಜಾರಿಯಲ್ಲಿದೆ. ದುರದೃಷ್ಟವಶಾತ್ ಇದು ಆಚರಣೆಯಲ್ಲಿಲ್ಲ ಅಷ್ಟೆ. ಗಾಳಿಪಟದಾಟಕ್ಕೆ ಬಲಿಯಾಗುವವರು ಹೆಚ್ಚಿನದಾಗಿ ದ್ವಿಚಕ್ರ ವಾಹನ ಚಾಲಕರು. ಪೈಪೋಟಿಯಲ್ಲಿ ತುಂಡಾಗಿ ಕೆಳಗೆ ಬೀಳುವ ಗಾಳಿಪಟದ ಜೊತೆಯಲ್ಲಿ ನೈಲಾನ್ ದಾರವೂ ಕೆಳಗೆ ಬೀಳುತ್ತದೆ. ಎಲ್ಲೆಲ್ಲೋ ಸಿಲುಕಿಕೊಂಡ ದಾರ ರಸ್ತೆಗೆ ಅಡ್ಡಲಾಗುತ್ತದೆ. ದಾರವನ್ನು ಗಮನಿಸದ ದ್ವಿಚಕ್ರ ವಾಹನ ಸವಾರ ನೈಲಾನ್ ದಾರಕ್ಕೆ ಸಿಲುಕಿ ಗಾಯಗೊಳ್ಳುತ್ತಾನೆ ಅಥವಾ ಮರಣಹೊಂದುತ್ತಾನೆ. ಶತಕೋಟಿ ಸಂಖ್ಯೆಯ ಜನಸಂಖ್ಯೆಯಿರುವ ಈ ದೇಶದಲ್ಲಿ ಕೆಲವೊಬ್ಬರು ಈ ತರಹದ ಅಪಘಾತಕ್ಕೆ ಒಳಗಾಗಿ ಸತ್ತರೆ ಯಾರು ಅಳುತ್ತಾರೆ. ಮನುಷ್ಯರದ್ದೇ ಈ ಕತೆಯಾದರೆ, ಪಕ್ಷಿಗಳ ಕತೆ ಯಾರಿಗೆ ಬೇಕು.
ವಿದ್ಯುತ್ ಕಂಬದಲ್ಲಿ ನೇತಾಡುತ್ತಿದ್ದ ಗಾಳಿಪಟವನ್ನು ಎಳೆದು ತೆಗೆಯಲು ಹೋದ ಮುಖೇಶ್ ಪಟೇಲ್ ಎಂಬ 13 ವರ್ಷದ ಬಾಲಕ ವಿದ್ಯುತ್ ಶಾಕ್‍ಗೆ ಸಿಲುಕಿ ಮೃತಪಡುತ್ತಾನೆ. ಇದೇನು ನೈಲಾನ್ ದಾರದಲ್ಲೂ ವಿದ್ಯುತ್ ಪಸರಿಸುತ್ತದೆಯೇ ಎಂದು ಆಶ್ಚರ್ಯಪಡಬೇಡಿ. ಇದೇ ನೈಲಾನ್ ದಾರಕ್ಕೆ ಕಬ್ಬಿಣ ಮತ್ತು ಅಯಸ್ಕಾಂತ ಪುಡಿಗಳನ್ನು ಬೆರೆಸಿ ಸವರಲಾಗಿತ್ತು. ಗುಜರಾತ್ ಅರಣ್ಯ ಇಲಾಖೆಯ ಪ್ರಕಾರ 2014ರಲ್ಲಿ ಬರೀ 1150 ಪಕ್ಷಿಗಳು ಗಾಯಗೊಂಡಿದ್ದವು. ಇದರಲ್ಲಿ ವನ್ಯಜೀವಿ ಕಾಯ್ದೆ 1972 ಪರಿಚ್ಛೇದ 1 ರಲ್ಲಿ ಬರುವ, ಅಂದರೆ ಸಂರಕ್ಷಿತ ಪಕ್ಷಿಗಳ ಸಂಖ್ಯೆ ಬರೀ 10. ಜೀವದಯಾ ಎಂಬ ಸರ್ಕಾರೇತರ ಸಂಸ್ಥೆ ಇದೇ ವರ್ಷ 1500 ವಿವಿಧ ಪಕ್ಷಿಗಳಿಗೆ ಚಿಕಿತ್ಸೆ ನೀಡಿತ್ತು. 2015ರಲ್ಲಿ ಈ ರಾಜ್ಯದಲ್ಲಿ ಒಟ್ಟು 2,789 ಪಕ್ಷಿಗಳು ಗಾಳಿಪಟದ ಪಾಶಕ್ಕೆ ಸಿಲುಕಿದ್ದವು, ಇದರಲ್ಲಿ 490 ಪಕ್ಷಿಗಳು ಸತ್ತೇ ಹೋಗಿದ್ದವು. ಇದೇ ಯಮಸದೃಶ ಪಾಶ 76 ರಸ್ತೆ ಅಪಘಾತಗಳಿಗೆ ಕಾರಣವಾಗಿತ್ತು. ಇದರಲ್ಲಿ 21 ಜನರ ಕೊರಳಿನ ಭಾಗ ಭಾಗಶ: ಕತ್ತರಿಸಿತ್ತು.
ಹಾಗಾದರೆ ನಮ್ಮ ಅರಣ್ಯ, ವನ್ಯಜೀವಿ ಇತ್ಯಾದಿ ಇಲಾಖೆಗಳು ಏನು ಮಾಡುತ್ತಿವೆ? 2009ರಿಂದಲೇ ಜಾರಿ ಬರುವಂತೆ ಚನೈನಲ್ಲಿ ಗಾಳಿಪಟದಾಟವನ್ನು ನಿಷೇಧಿಸಲಾಗಿದೆ. ಪಕ್ಕದ ಪಾಕಿಸ್ತಾನದಲ್ಲೂ ಈ ಆಟವನ್ನು ನಿಷೇಧಿಸಲಾಗಿದೆ. ಪಂಜಾಬ್, ಪಶ್ಚಿಮ ಬಂಗಾಲಗಳಲ್ಲಿ ನೈಲಾನ್ ದಾರ ಉಪಯೋಗಿಸುವುದನ್ನು ನಿಭಂದಿಸಲಾಗಿದೆ. ಅಹಮದಾಬಾದಿನ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ನೋಡಲು ವಿದೇಶಿಗರು ಆಗಮಿಸುತ್ತಾರೆ. ಜಪಾನ್, ಯುಕೆ, ಕೆನಡಾ, ಆಸ್ಟ್ರೇಲಿಯ ಮೊದಲಾದ ದೇಶಗಳ ಪ್ರವಾಸಿಗರು ಈ ಉತ್ಸವನ್ನು ನೋಡಲು ಆಗಮಿಸುತ್ತಾರೆ. 2015ರ ಜನವರಿಯ ಪೂರ್ವಾರ್ಧದಲ್ಲೆ 3 ಲಕ್ಷ ಗಾಳಿಪಟಗಳು ಮಾರಾಟವಾಗಿ ದಾಖಲೆ ನಿರ್ಮಿಸಿವೆ. 2015ರಲ್ಲಿ ಈ ರಾಜ್ಯದ ಗಾಳಿಪಟದ ವಾರ್ಷಿಕ ವಹಿವಾಟಿನ ಮೊತ್ತ 700 ಕೋಟಿಗಳು. ವೈಬ್ರಂಟ್ ಕೈಟ್ ಕ್ಲಬ್ ಸ್ಥಾಪಕನಾದ ಮೆಹುಲ್ ಪಾಠಕ್ ಪ್ರಕಾರ, ಈ ಉತ್ಸವದಿಂದ ಮನುಷ್ಯರಿಗೂ ಹಾಗೂ ಹಕ್ಕಿಗಳಿಗೂ ಅಪಾಯಕಾರಿಯಾಗಿ ಪರಿಣಮಿಸಿದೆ ನಿಜ, ಆದರೇನು ಮಾಡುವುದು, ಗಾಳಿಪಟದ ಉತ್ಸವದೆಡೆಗೆ ಜನರ ಉತ್ಸಾಹವೂ ಅಪರಿಮಿತವಾಗಿದೆಯಲ್ಲ ಎಂದು ನಗುತ್ತಾರೆ.
ಸೂರತ್ ಪಟ್ಟಣದ ಮಾಜಿ ಮೇಯರ್ ರಾಜು ದೇಸಾಯಿ ಪ್ರಕಾರ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಜರುಗುವ ಉತ್ಸವಕ್ಕೆ ಸುರಕ್ಷಿತವಾದ ಕಾನೂನುಗಳೇ ಇಲ್ಲ. ಜನಸ್ನೇಹಿ ಹಾಗೂ ಪರಿಸರ ಸ್ನೇಹಿ ಉತ್ಸವವಾಗಿ ಆಚರಿಸುವ ಮುನ್ನ ಇನ್ನೆಷ್ಟು ಜನರ ಮತ್ತು ಪಕ್ಷಿಗಳ ಹರಣವಾಗಬೇಕೋ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಜನರಿಗೆ ಅಹ್ಲಾದಕರವಾದ ಈ ಉತ್ಸವದ ಪರಿಣಾಮ ಪಕ್ಷಿಗಳ ಮೇಲಾಗುತ್ತದೆ. ರಕ್ತ-ಸಿಕ್ತವಾದ ಈ ಆಚರಣೆಗೆ ಬಾರಿ ದೊಡ್ಡ ಇತಿಹಾಸವೇನೂ ಇಲ್ಲ. 1989ರಿಂದ ಇದಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೊರಕಿಸುವಲ್ಲಿ ಅಲ್ಲಿನ ಸರ್ಕಾರ ಯಶಸ್ವಿಯಾಯಿತು. ದೇಶದ ಹಲವು ಪ್ರಾಣಿಗಳ ಕುರಿತಾದ ಸಂಘಟನೆಗಳು ಈ ಉತ್ಸವವನ್ನೇ ನಿಷೇಧಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಕೆಟ್ಟದ್ದನ್ನು ಬೇಗನೆ ಅಪ್ಪಿಕೊಳ್ಳುವ ಮನ:ಸ್ಥಿತಿಯ ಬಹುಸಂಖ್ಯಾತರಿರುವ ಈ ರಾಷ್ಟ್ರದಲ್ಲಿ ಉತ್ಸವ ನಿಷೇಧಿಸುವ ಮಾತು ದೂರವೇ ಉಳಿಯುತ್ತದೆ. ಬದಲಾಗಿ ಈ ತರಹದ ವಿಕೃತ ಆಟಗಳು ದೇಶಾದ್ಯಾಂತ ಹರಡುವ ಅಪಾಯವೂ ಇದೆ.