ದಕ್ಷಿಣ ನೇಪಾಳದ ಕಠ್ಮಂಡುವಿನಿಂದ ಸುಮಾರು 160 ಕಿ.ಮಿ. ದೂರದಲ್ಲಿರುವ ಜಿಲ್ಲೆಯ ಹೆಸರು ಬಾರ. ಈ ಜಿಲ್ಲೆಯ ಭರಿಯಾರ್‍ಪುರ್‍ನಲ್ಲಿರುವ ಗಾಧಿಮಾಯಿ ದೇವಸ್ಥಾನ ಇವತ್ತು ಜಗತ್ ಖ್ಯಾತವಾಗಿದೆ. 5 ವರ್ಷಗಳಿಗೊಮ್ಮೆ ಇಲ್ಲಿ ಜಾತ್ರೆ ನಡೆಯುತ್ತದೆ. ನಮ್ಮಲ್ಲೂ ಹಳ್ಳಿ-ಹಳ್ಳಿಗಳಲ್ಲಿ ಜಾತ್ರೆಗಳು ನಡೆಯುತ್ತವೆ. ಇದರಲ್ಲೇನು ವಿಶೇಷವೆಂದು ಕೇಳಬಹುದು. ಎಲ್ಲಾ ಜಾತ್ರೆಗಳಲ್ಲೂ ಮಾರಿಯನ್ನು ಸಂತೃಪ್ತಿಗೊಳಿಸುವ ಸಲುವಾಗಿ ಪ್ರಾಣಿಬಲಿಯನ್ನು ನೀಡುತ್ತಾರೆ. ಕೆಲವು ಕಡೆ ಅಕ್ರಮವಾಗಿ ನರಬಲಿಯನ್ನು ನೀಡುವುದೂ ಇದೆ. ಭಾರತದಂತಹ ದೇಶದಲ್ಲಿ ಪ್ರಾಣಿಬಲಿ ತಡೆಯುವ ಕಟ್ಟುನಿಟ್ಟಾದ ಕಾನೂನುಗಳಿವೆ. ಈ ಕಾನೂನು ಹಲವು ಬಾರಿ ವಿಫಲವಾಗುತ್ತದೆ. ಕಾನೂನು ಜಾರಿಗೊಳಿಸಬೇಕಾದ ಪೋಲೀಸರು ಮೂಕಪ್ರೇಕ್ಷಕರಂತೆ ಪ್ರಾಣಿಬಲಿಯನ್ನು ನೋಡುತ್ತಿರಬೇಕಾಗುತ್ತದೆ. ಬಿಗಿಭದ್ರತೆಯ ನಡುವೆಯೂ ಕೋಣವನ್ನು ಬಲಿ ನೀಡಲಾಯಿತು ಎಂಬು ಸುದ್ಧಿಸಾಲುಗಳನ್ನು ದಿನಪತ್ರಿಕೆಗಳಲ್ಲಿ ಕಾಣಬಹುದು. ಮಂಗಳನ ಅಂಗಳದಲ್ಲಿ ನೌಕೆಯನ್ನು ಇಳಿಸುವ ಸಾಮಥ್ರ್ಯ ಹೊಂದಿರುವ ದೇಶದಲ್ಲಿ ಮೌಡ್ಯವಿನ್ನೂ ತಾಂಡವವಾಡುತ್ತಿದೆ. ಜನಜಾಗೃತಿಯಿಂದ ಇಂತಹ ಅನಿಷ್ಟ ಪದ್ಧತಿಗಳು ಕ್ರಮೇಣ ಅಳಿದು ಹೋಗಬಹುದು.
ಈ ಮೊದಲೇ ಹೇಳಿದಂತೆ, ಭಾರತದಲ್ಲಿ ದೇವತೆಗಾಗಿ ಪ್ರಾಣಿ ಬಲಿಯನ್ನು ನೀಡುವುದನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿದೆ. ಉತ್ತರಪ್ರದೇಶ ಮತ್ತು ಬಿಹಾರದ ಹೆಚ್ಚಿನ ಜನಸಂಖ್ಯೆ ನಿಧಾನವಾಗಿ ಈ ಕಾನೂನಿಗೆ ಒಗ್ಗಿಕೊಳ್ಳುವತ್ತ ಸಾಗುತ್ತಿದೆಯಾದರೂ, ಅಲ್ಲಿನ ಮೌಡ್ಯ ಇನ್ನೂ ಸಂಪೂರ್ಣವಾಗಿ ತೊಲಗಿಲ್ಲ. ನೇಪಾಳದಲ್ಲಿ ವಾಸಿಸುವ ಮಾದೇಶಿ ಜನಾಂಗದವರೇ ಹೆಚ್ಚಿನ ಸಂಖ್ಯೆಯಲ್ಲಿ ನಂಬಿಕೊಂಡಿರುವ ದೇವತೆಯ ಹೆಸರು ಗಾಧಿಮಾಯಿ. 5 ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ನಡೆಯುವ ಮಾರಣ ಹೋಮದ ಬೀಕರತೆ ನಾಗರೀಕ ಸಮಾಜ ತಲೆತಗ್ಗಿಸುವಂತದ್ದು, ಮೇಲಾಗಿ ಇಲ್ಲಿನ ಸರ್ಕಾರವೇ ಇಂತಹ ದುಷ್ಕ್ರತ್ಯಕ್ಕೆ ನೀರೆರೆದು ಪೋಷಿಸುತ್ತಿದೆ. ಸುಮಾರು 5 ಲಕ್ಷ ಜನ ಸೇರುವ ಈ ಜಾತ್ರೆಯ ಸಂದರ್ಭದಲ್ಲಿ ಇಷ್ಟೇ ಸಂಖ್ಯೆಯ ಪ್ರಾಣಿಗಳನ್ನು ಬಲಿ ನೀಡಲಾಗುತ್ತದೆ. 2009ರಲ್ಲಿ 5 ಲಕ್ಷ ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ 70% ಭಕ್ತರು ಭಾರತದವರೇ ಆಗಿದ್ದರು. ಪ್ರಾಣಿ ಬಲಿಯನ್ನು ನೀಡುವುದರಿಂದ ದುಷ್ಟಶಕ್ತಿಗಳು ತೊಲಗುತ್ತವೆ ಹಾಗೂ ಸಂಪತ್ತು ಲಭಿಸುತ್ತದೆ ಎಂಬ ಬಲವಾದ ಭಾವನೆ ಭಕ್ತರಲ್ಲಿದೆ. 2009ರಲ್ಲಿ ಜಾತ್ರೆ ನಡೆಯುವ ಒಂದು ತಿಂಗಳ ಮೊದಲು ಮಾದೇಶಿ ಜನಾಂಗವನ್ನು ಪ್ರತಿನಿಧಿಸುವ ರಾಜಕಾರಣಿಗಳು ಬಲಿ ನೀಡಲು ಕುರಿಗಳ ಕೊರತೆಯುಂಟಾಗದಂತೆ ಮಾಡಲು ಅಲ್ಲಿನ ರೇಡಿಯೋವನ್ನು ಬಳಸಿಕೊಂಡು, ರೈತರಿಗೆ ಕುರಿಗಳನ್ನು ಮಾರಲು ಮನವಿ ಮಾಡಿಕೊಂಡಿದ್ದರು.
ಇದು ಪ್ರಪಂಚದ ಎರಡನೇ ಅತಿದೊಡ್ಡ ಹತ್ಯಾಕಾಂಡ, ಇಲ್ಲಿ ಸುಮಾರು 5 ಲಕ್ಷ ವಿವಿಧ ಜಾತಿಗಳ ಪ್ರಾಣಿಗಳನ್ನು ಬಲಿನೀಡಲಾಗುತ್ತದೆ. ಇದರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವುದು, ಮುಸ್ಲೀಮರ ಕಾಶಿಯಾದ ಹಜ್. ಇಲ್ಲಿ ಕೂಡಾ ಪ್ರತಿವರ್ಷ ಲಕ್ಷೋಪಲಕ್ಷ ಪ್ರಾಣಿಗಳನ್ನು ಬಲಿ ನೀಡಲಾಗುತ್ತದೆ. ಒಂಟೆ, ಮೇಕೆ, ಎಮ್ಮೆ, ದನ ಇತ್ಯಾದಿಗಳು ಬಲಿಯಾಗಲಿರುವ ಪ್ರಾಣಿಗಳು. ಗಾಧಿಮಾಯಿ ಹತ್ಯೆಯಲ್ಲಿ ಸೇರುವ ಪ್ರಾಣಿಗಳೆಂದರೆ ಮುಖ್ಯವಾಗಿ ಎಮ್ಮೆ, ಕೋಣ, ಬಾತುಕೋಳಿ, ಪಾರಿವಾಳ, ಕೋಳಿ ಇತ್ಯಾದಿಗಳು. ಇಷ್ಟು ವರ್ಷ ನೇಪಾಳದ ಈ ಜಾತ್ರೆಗೆ ಭಾರತದ ಎಮ್ಮೆಗಳನ್ನು ರಫ್ತು ಮಾಡಲಾಗುತ್ತಿತ್ತು. ಸವೋಚ್ಛ ನ್ಯಾಯಾಲಯದ ಆದೇಶದಂತೆ ಇದೀಗ ಭಾರತದಿಂದ ಎಮ್ಮೆ-ಕೋಣಗಳನ್ನು ರಫ್ತು ಮಾಡುವಂತಿಲ್ಲವಾದ್ದರಿಂದ ಎಮ್ಮೆಗಳ ಹರಣ ಪ್ರಮಾಣ ಕಡಿಮೆಯಾಗಿದೆ. 2009ರಲ್ಲಿ 20 ಸಾವಿರ ಎಮ್ಮೆಗಳನ್ನು ಹರಣ ಮಾಡಲಾಗಿತ್ತು. ಕಳೆದ ನವಂಬರ್‍ನಲ್ಲಿ ನಡೆದ ಹತ್ಯಾಕಾಂಡದಲ್ಲಿ ಈ ಪ್ರಮಾಣ 5000ಕ್ಕೆ ಇಳಿಕೆಯಾಗಿದೆಯಾದರೂ, ಮೌಡ್ಯದ ಹೆಸರಿನಲ್ಲಿ ನಡೆಯುವ ಈ ಹತ್ಯಾಕಾಂಡದ ಬರ್ಬರತೆ ಎಂತವರ ಎದೆಯನ್ನು ನಡುಗಿಸುವಂತಿದೆ. ಕಣ್ಣು ಹಾಯಿಸಿದಷ್ಟೂ ದೂರವೂ ರುಂಡ ಬೇರೆಯಾದ ಎಮ್ಮೆಗಳ ಶವಗಳು. ರಕ್ತದ ಕೋಡಿ, ಎಮ್ಮೆಗಳ ನಾಲಗೆಯನ್ನು ಕತ್ತರಿಸಿಕೊಂಡು ಹೋಗುವ ಕಟುಕರು ಒಂದೆಡೆಯಾದರೆ, ಚರ್ಮ ಸುಲಿದು ಗುಡ್ಡೆ ಹಾಕುವ ದೃಶ್ಯಗಳು ಒಂದೆಡೆ. ಇಷ್ಟು ಪ್ರಮಾಣದ ಮಾಂಸ ಮತ್ತು ಎಲುಬು ಮತ್ತಿತ್ತರ ಉಚ್ಚಿಷ್ಟಗಳನ್ನು ಖರೀದಿ ಮಾಡುವ ಕಂಪನಿಗಳು ಇವೆ. ಭಾರತ ಮತ್ತು ನೇಪಾಳದ ಮಾಂಸ ರಫ್ತು ಮಾಡುವ ಕೆಲ ಕಂಪನಿಗಳೇ ಈ ಜಾತ್ರೆಯ ಮುಖ್ಯ ಗಿರಾಕಿಗಳು. ಕೋಟಿಗಟ್ಟಲೆ ಲಾಭಮಾಡಿಕೊಳ್ಳುವ ಈ ಕಂಪನಿಗಳು ಈ ತರಹದ ಮೌಡ್ಯವನ್ನು ಪೋಷಿಸುತ್ತವೆ.
ಅವರವರ ಭಾವಕ್ಕೆ-ಭಕುತಿಗೆ ತಕ್ಕಂತೆ ಇಲ್ಲಿ ಪ್ರಾಣಿಗಳನ್ನು ವಧೆ ಮಾಡಲಾಗುತ್ತದೆ. ಕೆಲವರು ಹಂದಿಗಳನ್ನು ಬಲಿ ನೀಡಿದರೆ, ಇನ್ನು ಕೆಲವರು ಇಲಿಗಳನ್ನು ಬಲಿ ನೀಡುತ್ತಾರೆ. ಇದರಲ್ಲಿ ಎಮ್ಮೆಗಳನ್ನು ವಧೆ ಮಾಡುವಲ್ಲಿ ತುಂಬಾ ಹಿಂಸೆ ವಿಜೃಂಭಿಸುತ್ತದೆ. ಕತ್ತಿಯ ಅಲುಗಿನ ಗುಣಮಟ್ಟದ ಮೇಲೆ ಬಲಿಯ ನೋವು ನಿರ್ಧಾರವಾಗುತ್ತದೆ. ಬಲಿಯನ್ನು ಪಡೆಯುವ ಮನುಷ್ಯನ ಶಕ್ತಿಯೂ ಕೂಡಾ ಬಲಿಯ ನೋವಿನ ಪ್ರಮಾಣ ವ್ಯತ್ಯಾಸವಾಗುತ್ತದೆ. ಕೆಲವು ಬಾರಿ ಒಂದೇಟಿಗೆ ಬಲಿಯ ಕತ್ತು ಕತ್ತರಿಸುವುದಿಲ್ಲ. ಆಗ ಪದೇ ಪದೇ ಕತ್ತಿಯಿಂದ ಏಟು ಹಾಕಬೇಕಾಗುತ್ತದೆ. 2009ರ ಜಾತ್ರೆಯನ್ನು ನೋಡಲು ಹೋದ ಭಾರತದ ಮೂರು ಶಿಶುಗಳು ಅಲ್ಲಿನ ಚಳಿ ತಡೆಯಲಾರದೇ ಮೃತ ಪಟ್ಟಿದ್ದರು ಹಾಗೂ 6 ಜನರು ಅಲ್ಲಿನ ನಕಲಿ ಸರಾಯಿ ಸೇವಿಸಿ ಸತ್ತಿದ್ದರು. ಹಿಂಸೆ ಹೀಗೂ ಬಲಿಯನ್ನು ಪಡೆಯುತ್ತದೆ.
ಈ ಅತಿದೊಡ್ಡ ಹಿಂಸಾಕಾಂಡವನ್ನು ತಡೆಯಬೇಕು ಎಂದು ಅಲ್ಲಿನ ಪ್ರಾಣಿ ಹಕ್ಕು ಹೋರಾಟಗಾರರು ಲಾಗಾಯ್ತಿನಿಂದ ಹೋರಾಡುತ್ತಲೇ ಇದ್ದಾರೆ. ಆದರೆ ಬಲಿ ಪಡೆಯುವವರ ಸಂಖ್ಯೆಯ ಮುಂದೆ ಉಳಿಸುವವರ ಸಂಖ್ಯೆ ನಗಣ್ಯವಾಗಿದೆ. ಈ ಕುರಿತು ಹಿಂದೆ ಭಾರತದ ಪ್ರಾಣಿಗಳ ಹಕ್ಕುಗಳ ಹೋರಾಟಗಾರ್ತಿ ಮನೇಕಾ ಗಾಂಧಿಯವರು ನೇಪಾಳದ ರಾಜರಿಗೆ ಪತ್ರ ಬರೆದಿದ್ದರು. ರಾಜಕೀಯ ಲೆಕ್ಕಾಚಾರವನ್ನಿಟ್ಟು ಕೊಂಡು ವ್ಯವಹಾರ ನಡೆಸುವ ಅಲ್ಲಿನ ಸರ್ಕಾರ ಇದನ್ನು ಬೆಳೆಸಿ-ಪ್ರೋತ್ಸಾಹಿಸುವಲ್ಲಿ ಹೆಚ್ಚು ಆಸ್ಥೆ ತೋರುತ್ತದೆ. ಮಾಂಸಾಹಾರದಿಂದ ಜಾಗತಿಕ ತಾಪಮಾನ ಹೆಚ್ಚಳವಾಗುತ್ತದೆ ಎಂಬುದು ಸಾಬೀತಾದ ವಿಷಯವಾಗಿದ್ದು. ಈ ತರಹದ ಜಾತ್ರೆಗಳು ತಾಪಮಾನ ಹೆಚ್ಚಳಕ್ಕೆ ತಮ್ಮ ಕೊಡುಗೆಯನ್ನು ಅಪಾರವಾಗಿಯೇ ನೀಡುತ್ತವೆ. ಜನರಲ್ಲಿ ಜಾಗೃತಿ ಮೂಡಿಸುವುದರ ಮೂಲಕ ಇಂತಹ ಅನಿಷ್ಟ ಆಚರಣೆಗಳನ್ನು ತೊಡೆದುಹಾಕುವುದು ನಾಗರೀಕ ಸಮಾಜದ ಆದ್ಯ ಕರ್ತವ್ಯವಾಗಬೇಕು.
****