ಗಾದೆಗಳು- ರೂಪದಲ್ಲಿ ವಾಮನ, ಅರ್ಥದಲ್ಲಿ ತ್ರಿವಿಕ್ರಮ: ಹೊರಾ.ಪರಮೇಶ್ ಹೊಡೇನೂರು

Paramesh Ho Ra
        
ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಜನಪದ ಸಾಹಿತ್ಯವೂ ಪ್ರಮುಖವಾದುದಾಗಿದೆ. ಜನಪದರ ಅನುಭವ ಜನ್ಯವಾಗಿ ಉದಯಿಸಿದ ಈ ಸಾಹಿತ್ಯ ಪ್ರಕಾರದಲ್ಲಿ "ಗಾದೆಗಳು" ವಿಶೇಷವಾಗಿ ಗಮನ ಸೆಳೆಯುತ್ತವೆ. "ವೇದ ಸುಳ್ಳಾದರೂ ಗಾದೆ ಸುಳ್ಳಾಗದು" ಎಂಬ ಜನಜನಿತವಾದ ಗಾದೆಯೆ ಗಾದೆಗಳ ಮಹತ್ವ, ಅರ್ಥವಂತಿಕೆಯನ್ನು ಎತ್ತಿ ತೋರಿಸುತ್ತದೆ.
        
ಗಾದೆಗಳು ಜನಸಾಮಾನ್ಯರ ಪ್ರತ್ಯಕ್ಷ ಅನುಭವಗಳ ಮೂಸೆಯಿಂದ ರೂಪುಗೊಂಡಿರುವುದರಿಂದ ಅವುಗಳ ಅರ್ಥ ಸುಲಭವಾಗಿ ತಿಳಿಯುವುದರ ಜೊತೆಗೆ ಹೆಚ್ಚಿನ ಆಸಕ್ತಿಯನ್ನು ಉಂಟುಮಾಡುತ್ತವೆ. ದೈನಂದಿನ ಸಂದರ್ಭಗಳಲ್ಲಿ ಇಕ್ಕಟ್ಟುಗಳು ತಲೆದೋರಿದಾಗ ಅಥವಾ ಕೆಲವರ ಗುಣ ವರ್ತನೆಗಳ ಬಗ್ಗೆ ಹೇಳುವಾಗ ಹಿರಿಯರು ಗಾದೆ ಮಾತುಗಳನ್ನು ಉದಾಹರಿಸಿ ಗಮನ ಸೆಳೆಯುತ್ತ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ಮಾಡುತ್ತಾರೆ. ಕೆಲವೊಮ್ಮೆ ನಾವಾಡುವ ಮಾತುಗಳು ನಿಸ್ಸಾರ ಅಥವಾ ಶುಷ್ಕವೆಂಬ ಭಾವನೆ ಮೂಡಿದಾಗ ಕೇಳುವವರಲ್ಲಿ ಕಿರಿ ಕಿರಿ ಇಲ್ಲವೆ ನಿರಾಸಕ್ತಿ ಮೂಡಿಸುತ್ತವೆ. ಇಂಥ ಸಂದರ್ಭಗಳಲ್ಲಿ ಮಾತಿನ ಸಂದರ್ಭಕ್ಕೆ ಸರಿ ಹೊಂದುವ ಗಾದೆಗಳನ್ನು ಸೇರಿಸಿಕೊಂಡಾಗ ಆಡುವ ಮಾತು ಸ್ವಾರಸ್ಯಪೂರ್ಣವಾಗುತ್ತವೆ. ಇದರಿಂದಲೇ ಗಾದೆಗಳ ಔಚಿತ್ಯವನ್ನು ಬಹಳ ಸುಲಭವಾಗಿ ಗ್ರಹಿಸಬಹುದಾಗಿದೆ.
          
ಗಾದೆಗಳು ಜೀವನಾನುಭವದಿಂದ ಹುಟ್ಟಿದವು ಎಂಬ ಕಾರಣಕ್ಕಾಗಿ ಮಾತ್ರವಲ್ಲದೆ ಆಕಾರ ಅಥವ ಗಾತ್ರದ ದೃಷ್ಟಿಯಿಂದಲೂ ಹೆಚ್ಚು ಇಷ್ಟವಾಗುತ್ತವೆ. ಇದೇ ಕಾರಣಕ್ಕಾಗಿಯೆ"ವೇದಗಳಿಗಿಂತಲೂ ಗಾದೆಗಳು ಮಿಗಿಲು" ಎಂಬ ಹಣೆಪಟ್ಟಿಯು ಜನಪದರಿಂದಲೇ ದೊರಕಿದೆ. ವೇದಗಳು ಅಕ್ಷರ ಜ್ಞಾನ ಉಳ್ಳವರಿಗೆ ಮಾತ್ರ ಸೀಮಿತವಾಗಿದ್ದರೆ, ಗಾದೆ ಮಾತುಗಳು ಎಲ್ಲರ ಸ್ವತ್ತಾಗಿವೆ. ವೇದಗಳ ಜ್ಞಾನವು ನಿರ್ದಿಷ್ಟ ವಾದುದಾದರೆ, ಗಾದೆಗಳು ಕಾಲದಿಂದ ಕಾಲಕ್ಕೆ ವಿಸ್ತಾರವಾಗುತ್ತ ಹೋಗುವ ಜೀವನ ಜ್ಞಾನದ ಶಾಖೆಗಳಾಗಿವೆ.
         
ಕನ್ನಡ ಜಾನಪದ ವಿದ್ವಾಂಸರಾದ ಡಾ.ದೇಜಗೌ ರವರು ತಮ್ಮ ಜಾನಪದ ಅಧ್ಯಯನ ಗ್ರಂಥದಲ್ಲಿ ಹೇಳಿರುವಂತೆ "ಕೆಲವೇ ಕೆಲವು ಅರ್ಥಗರ್ಭಿತವಾದ ಮಾತುಗಳುಳ್ಳ, ಚಿಕ್ಕದೂ, ಚೊಕ್ಕವಾದದ್ದೂ ಆದ ವಾಕ್ಯವೇ ಗಾದೆ". ಅದು ಪದ್ಯದಂತೆ ಲಯ-ಬಂಧ, ಪ್ರಾಸಗಳುಳ್ಳದ್ದು, ಗದ್ಯದಂತೆ ಗಣನಿಯಮವಿಲ್ಲದ್ದು, ಹರಿವುಳ್ಳದ್ದು, ಸ್ಪಷ್ಟತೆಯುಳ್ಳದ್ದು. ಗದ್ಯ ಮತ್ತು ಪದ್ಯಗಳ ಲಕ್ಷಣಗಳನ್ನು ಅರ್ಥಪೂರ್ಣವಾಗಿ ಮೇಳೈಸಿಕೊಂಡ ವಿಶಿಷ್ಟ ಪ್ರಕಾರವಾಗಿದೆ. ಮಾನವ ಜೀವನದ ಸಮಸ್ತ ವಿಷಯಗಳನ್ನು ತನ್ನಲ್ಲಿ ಹುದುಗಿಸಿಕೊಂಡಿರುವ ಗಾದೆ ಮಾತುಗಳುರೂಪದಲ್ಲಿ ವಾಮನನಂತೆ ಚಿಕ್ಕವಾಗಿದ್ದರೂ ಅರ್ಥದಲ್ಲಿ ತ್ರಿವಿಕ್ರಮನಂತೆ ಬಲಿಷ್ಠವಾಗಿವೆ.

"ಗಾದೆ" ಪದದ ನಿಷ್ಪತ್ತಿ:       
ಕನ್ನಡದ ಮತ್ತೊಬ್ಬ ಜಾನಪದ ವಿದ್ವಾಂಸರರಾದ ರಾಮೇಗೌಡ (ರಾಗೌ) ಅವರು ಹೇಳುವಂತೆ "ನೂರು ಭಾವದ ನೂರು ವಿಷಯದ ನೂರು ಅಭಿವ್ಯಕ್ತಿ"ಯೇ ಗಾದೆ ಮಾತು. ಗಾದೆ ಪದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ನಾಣ್ಣುಡಿ ಎಂಬ ಶಬ್ದ ಪ್ರಚಲಿತದಲ್ಲಿದೆ. 'ಗಾದೆ' ಪದಕ್ಕೆ ಸಂಸ್ಕೃತದ 'ಗಾಥಾ' ಎಂಬ ಶಬ್ದವು ಮೂಲ ಎಂದು ಹೇಳಲಾಗಿದೆ. ಅಚ್ಚ ಕನ್ನಡದ 'ನಾಣ್ಣುಡಿ'ಯನ್ನು ಮರೆಸುವಷ್ಟರ ಮಟ್ಟಿಗೆ 'ಗಾದೆ' ಪದವೇ ಜನಪ್ರಿಯವಾಗಿಬಿಟ್ಟಿದೆ. ಆಂಗ್ಲ ಭಾಷೆಯಲ್ಲಿ Proverb ಎಂದು ಕರೆಸಿಕೊಳ್ಳುವ ಗಾದೆಗೆ ಸಂವಾದಿಯಾಗಿ ಲೋಕೋಕ್ತಿ, ಪ್ರಾಚೀನೋಕ್ತಿ, ಸಾರೋಕ್ತಿ, ಉದ್ಧರಣೆ, ಹೇಳಿಕೆ, ವಿಧಿ ಮುಂತಾದ ಪದಗಳಿದ್ದರೂ ಹಗುರ ಅರ್ಥದಲ್ಲಿ ಬಳಕೆಗೊಂಡಿರುವ ಈ ಪರ್ಯಾಯ ಪದಗಳು ಮೂಲಾರ್ಥದಲ್ಲಿ ಗಾದೆಯನ್ನು ಪ್ರತಿನಿಧಿಸುವುದಿಲ್ಲ.
      
ಗೊರೂರು ರಾಮಸ್ವಾಮಿಯವರು "ಗಾದೆ"ಯು ಸಿದ್ಧಿಸಿದ ನುಡಿ, ಜನವಾಣಿ, ದೇವವಾಣಿ, ಸತ್ಯ-ಗಾದೆ-ಮೂರ್ಖ ಈ ಮೂವರನ್ನೂ ಎದುರಿಸಲಾಗದು ಎಂದಿದ್ದಾರೆ. 
       
ಮಾಸ್ತಿ ಯವರು "ಜನಾಂಗದಲ್ಲಿ ಪ್ರಚಾರದಲ್ಲಿರುವ ತಿಳಿವು ತನ್ನ ಮನಸ್ಸಿನಲ್ಲಿ ಬಿದ್ದಾಗ ನಾಲ್ಕು ಮಾತಿನಲ್ಲಿ ಘನೀಭವಿಸಿ ಮುತ್ತಿನಂತಾಗುತ್ತದೆ. ಹಲವರ ಭಾವ ಒಬ್ಬನ ಮಾತಿನಲ್ಲಿ ಕಂಡು ಆ ಮಾತು ಹಲವರ ಮಾತಾಗುತ್ತದೆ. ಗಾದೆಗಳನ್ನು ನೋಡಿದರೆ  ಜನಾಂಗದ ಮನಸ್ಸು ಎಂಥದೆಂದು ಊಹಿಸಲು ಸಾಧ್ಯವಾಗುವುದಕ್ಕೆ ಇದೇ ಕಾರಣ" ಎಂದು ನುಡಿದಿದ್ದಾರೆ.
         
ಎ.ಕೆ.ರಾಮಾನುಜಂ ರವರು "ಗಾದೆ ಮಾತು ಜನತೆಯ ಮನಸ್ಸನ್ನು  ಒಂದು ಮುಖದಲ್ಲಿ ಬಿಂಬಿಸುತ್ತದೆ, ಮತ್ತೊಂದು ಮುಖದಲ್ಲಿ ಆಳುತ್ತದೆ, ಅವರ ಅನುದಿನದ ನಂಟುಗಳನ್ನು ನಡೆಸುತ್ತದೆ, ಗಂಟುಗಳನ್ನು ಬಿಡಿಸುತ್ತದೆ" ಎಂದು ಹೇಳಿದ್ದಾರೆ.     
          
*ಗಾದೆ ಮಾತುಗಳ ಸಾಂದರ್ಭಿಕ ವರ್ಗೀಕರಣ

ವಿವಿಧ ವಿಷಯ ವಸ್ತು, ಸಂದರ್ಭಗಳಿಗ ಸಂಬಂಧಿಸಿದ ಅನೇಕ ಗಾದೆಗಳ ಕಡೆಗೆ ಹೀಗೆ ಮೆಲುಕು ಹಾಕಬಹುದಾಗಿದೆ.

*ಮನುಷ್ಯ ಸಂಬಂಧದ ಗಾದೆಗಳು:
ಬಹುತೇಕ ಗಾದೆಗಳು ಮಾನವ ಜೀವನದ ಅನುಭವಗಳಿಂದಲೆ ಹುಟ್ಟಿಕೊಂಡಿದ್ದರೂ, ಕೆಲವು ನೇರವಾಗಿ ಮನುಷ್ಯನ ವರ್ತನೆ ಸ್ವಭಾವ ಗುಣಾವಗುಣಗಳನ್ನು ಕುರಿತೇ ಸೃಷ್ಟಿಯಾಗಿವೆ. ಅಂತಹ ಗಾದೆಯೊಂದನ್ನು ಉದಾಹರಿಸುವುದಾದರೆ,

"ಆಡುವಾಗ ಇಕ್ಕುವಾಗ ಅಡವಿಯೆಲ್ಲ ನೆಂಟರು"

ನಮ್ಮ ಕೌಟುಂಬಿಕ ಆರ್ಥಿಕ ಸ್ಥಿತಿಗತಿ ಉತ್ತಮವಾಗಿದ್ದಾಗ ನೆರೆ ಹೊರೆಯವರು ನಮ್ಮ ಬಂಧುತ್ವ, ಸ್ನೇಹತ್ವವನ್ನು ಬಯಸಿ ಹುಡುಕಿಕೊಂಡು ತಾವಾಗಿಯೆ ಬರುತ್ತಾರೆ. ಆದರೆ ನಮ್ಮ ಕೈಯಲ್ಲಿ ಹಣ,ಅಂತಸ್ತು ಅಧಿಕಾರ ಇಲ್ಲದಿರುವಾಗ ಯಾರೂ ನಮ್ಮ ಬಳಿ ಸುಳಿಯುವುದೇ ಇಲ್ಲ ಎಂಬ ಮನುಷ್ಯರ ವಿಲಕ್ಷಣ ಸ್ವಭಾವವನ್ನು ತಿಳಿಸಿಕೊಡುತ್ತದೆ. ಇದೇ ರೀತಿಯ ಮತ್ತೊಂದು ಗಾದೆ ಹೀಗಿದೆ,

"ಅತ್ತೆಗೆ ಹಳೇ ಚಾಪೆ, ಸೊಸೆಗೆ ತೂಗು ಮಂಚ"

ಈ ಗಾದೆಯಂತೆ ಸಾಮಾನ್ಯವಾಗಿ ಯಾವುದೇ ಕುಟುಂಬದಲ್ಲಿ ಅತ್ತೆಯ ಸ್ಥಾನ ದೊಡ್ಡದು. ಆದರೆ ಗಂಡನ ಕಿವಿ ಹಿಂಡುವ ಸೊಸೆಯು ತನ್ನ ಒನಪು ವೈಯ್ಯಾರಗಳಿಂದ ಗಮನ ಸೆಳೆದು ಕಿರಿಯವಳಾದರೂ ಮನೆಯ ಹಿರಿತನವನ್ನು ಬಯಸಿ ಅತ್ತೆಯ ಯಜಮಾನಿಕೆಯನ್ನು ಕಸಿದುಕೊಳ್ಳುವ ಮೂಲಕ ಆ ಮನೆಯ ಮಹಾರಾಣಿಯಾಗಿ ಮೆರೆಯುತ್ತಾಳೆ. ಮುಂದೊಂದು ದಿನ ತಾನೂ ಅತ್ತೆಯಾಗುತ್ತೇನೆ, ತನ್ನ ಸೊಸೆಯೂ ಹೀಗೇ ಅಲಕ್ಷಿಸಬಹುದೆಂಬ ದೂರದೃಷ್ಟಿಯಿಲ್ಲದ ಸೊಸೆಯ ಉದ್ದಟತನವನ್ನು ಈ ಗಾದೆಯು ಬಿಂಬಿಸುತ್ತದೆ. ಇದೇ ಸ್ಥಿತಿಯ ಆಧಾರದಲ್ಲಿ "ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ"ಎಂಬ ಇನ್ನೊಂದು ಗಾದೆಯು ಬಳಕೆಯಲ್ಲಿದೆ. 
ಹೀಗೆಯೇ ಮನುಷ್ಯ ಸಂಬಂಧ ಗಾದೆಯಾಗಿ "ಅಣ್ಣ ಬದಕಿದ್ರೆ ಅವ್ನ ಹೆಂಡ್ತಿ ಮಕ್ಳಿಗೆ, ಅಕ್ಕ ಬದಕಿದ್ರೆ ಅವ್ಳ ಗಂಡ ಮಕ್ಳಿಗೆ" ಎಂಬುದನ್ನು ಉದಾಹರಿಸಬಹುದು.

ಪರಂಪರೆಯನ್ನು ಕುರಿತ ಗಾದೆ ಮಾತುಗಳು:

ನಮ್ಮ ಸಂಪ್ರದಾಯ, ನಂಬಿಕೆ ಪರಂಪರೆಗಳನ್ನು ಕುರಿತು ಹೇಳುವ ಗಾದೆ ಮಾತುಗಳು ಹೆಚ್ಚಾಗಿ ನಮಗೆ ನೀತಿ, ಬುದ್ಧಿ ವಾದಗಳನ್ನು ಹೇಳುತ್ತವೆ. ಅದಕ್ಕೆ ಉದಾಹರಣೆಯಾಗಿ "ಅಪ್ಪ ಹಾಕಿದ ಆಲದ ಮರ ಅಂತ ಅದರಲ್ಲಿ ನೇಣಾಕ್ಕೊಳಕಾಯ್ತದಾ!"ಗಾದೆಯನ್ನು ಬಳಸಬಹುದು. ಇದರರ್ಥ ತುಂಬಾ ಮಾರ್ಮಿಕವಾಗಿದೆ. ಅಪ್ಪ ಹಾಕಿದ ಆಲದ ಮರ ವ್ಯಾಪಕವಾದ ಅರ್ಥವನ್ನು ತಿಳಿಸುತ್ತದೆ. ಒಂದು ಮನೆಯ ವಿವರದಿಂದ ಹಿಡಿದು, ಒಂದು ದೇಶದ ವಿದ್ಯಮಾನಗಳವರೆಗಿನ ಘಟನೆಗಳನ್ನು ಕ್ರೋಢೀಕರಿಸಿಹೇಳುವಂತಹ ಪದಗುಚ್ಛವಾಗಿದೆ. ಯಾವುದೇ ನಂಬಿಕೆ ಆಚರಣೆ ಪದ್ಧತಿಗಳ ಸತ್ಯಾಸತ್ಯತೆಯನ್ನು ಅರಿತುಕೊಂಡು ಅನುಸರಿಸಬೇಕೇ ವಿನಃ ಅದು ಹಿಂದಿನಿಂದ ಬಂದಿದೆ, ಹಿಂದಿನವರು ಮಾಡಿದ್ದೆಲ್ಲ ಸರಿಯಾಗಿಯೇ ಇರುತ್ತದೆಯೆಂಬ ಕುರುಡು ನಂಬಿಕೆಯನ್ನು ಮುಂದುವರೆಸಬಾರದು ಎಂದು ಎಚ್ಚರಿಸುತ್ತದೆ.
   
ಹಾಗೆಯೇ "ಅಪ್ಪ ಆರಂಕಣ ಕಟ್ಟುಸ್ದ, ಮಗ ಮೂರಂಕಣ ಕಟ್ಟುಸ್ದ"ಎಂಬ ಗಾದೆಯು ತಂದೆ ಮಕ್ಕಳ ನಡುವಿನ ಕಾಲಾಂತರದ ಸಾಮರ್ಥ್ಯದ ವ್ಯತ್ಯಾಸವನ್ನು ಹೇಳುತ್ತದೆ. ಜೊತೆಗೆ ಪರಂಪರೆಯ ಶಕ್ತಿಯು ತಲೆಮಾರಿನ ಕಾಲ ವ್ಯತ್ಯಾಸದಲ್ಲಿ ಸ್ಥಿತ್ಯಂತರ ಹೊಂದುತ್ತದೆಯೆಂದು ತಿಳಿಸುತ್ತದೆ. ಇದೇ ರೀತಿಯ ಗಾದೆಯಾಗಿ "ಆಳೋರಿಗೆ ಏಳು ಜನ ಹೆಂಡತೀರು" ಎಂಬ ಗಾದೆಯನ್ನೂ ಸೇರಿಸಬಹುದು. ಇದರ ಅರ್ಥ ವ್ಯಕ್ತಿಯ ಆರ್ಥಿಕ ಸದೃಢತೆ ಮತ್ತು ದೈಹಿಕ, ಮಾನಸಿಕ ಸಾಮರ್ಥ್ಯದ ಆಧಾರದ ಮೇಲೆ ಯಾವ ಸವಾಲುಗಳನ್ನಾದರೂ ಸ್ವೀಕರಿಸಲು ಮುಂದಾಗುವ ಮನುಷ್ಯನ ಮನಸ್ಥಿತಿಯನ್ನು ತಿಳಿಸುತ್ತದೆ. ಇಲ್ಲಿ 'ಹೆಂಡ್ತೀರು' ಎಂಬುದು ಸಾಂಕೇತಿಕವಷ್ಟೆ. ಇದು ಯಾವುದೇ ಕೆಲಸ, ಜವಾಬ್ದಾರಿ, ನಿರ್ಧಾರ ಎಂಬುದನ್ನು ಪ್ರತಿನಿಧಿ ಸುತ್ತದೆ.

ಸ್ತ್ರೀ ನಿಂದನೆಯ ಗಾದೆಗಳು:

ಕೌಟುಂಬಿಕ ಅಥವ ಸಾಮಾಜಿಕ ನೀತಿಗಳಿಗೆ ಅನುಸಾರವಾಗಿ ನಡೆದುಕೊಳ್ಳದ ಅಸಹಜ ಅಥವಾ ಅತಿರೇಕದ ಸ್ವಭಾವ ಹೊಂದಿದ ಕೆಲವರು ಹೆಂಗಸರನ್ನು ಕುರಿತಂತೆ ನಿಂದನೆ ರೂಪದಲ್ಲಿ ವ್ಯಕ್ತವಾಗುವ ಗಾದೆಗಳು ಈ ಬಗೆಯಲ್ಲಿ ಸೇರುತ್ತವೆ. ಕೆಲವೊಮ್ಮೆ ಪುರುಷರೇ ಸ್ತ್ರೀಯರನ್ನು ಕೆಲವು ವಿಚಿತ್ರ ಸಂದರ್ಭಗಳಿಗೆ ಸಿಲುಕಿಸಿಯೂ ಈ ರೀತಿಯ ಗಾದೆಗಳ ಹುಟ್ಟಿಗೆ ಕಾರಣವಾಗಿರಬಹುದು. ಅಂತಹ ಕೆಲವು ಉದಾಹರಣೆಗಳಲ್ಲಿ "ಓಡ್ಹೋಗೋ ಬಡ್ಡಿ ಹಾಲ್ಗೆ ಹೆಪ್ಪು ಹಾಕ್ತಾಳೆಯೇ?" ಎಂಬುದು ಒಂದಾಗಿದೆ.  ಮೇಲು ನೋಟಕ್ಕೆ ಇದು ಹೆಂಗಸರನ್ನು ನಿಂದಿಸುವ, ಅಣಕಿಸುವ ರೀತಿಯಂತೆ ಕಂಡರೂ ಕೆಲವೊಮ್ಮೆ ಹೆಂಗಸರು ಅತ್ತೆ ಮಾವ ನಾದಿನಿ ಮೈದುನ ಅಥವ ಗಂಡನ ಕಿರುಕುಳ ತಾಳಲಾರದೆ ಯಾರಿಗೂ ತಿಳಿಯದಂತೆ ಮನೆ ಬಿಟ್ಟುಹೋಗುವುದನ್ನು 'ಓಡಿ ಹೋಗುವುದು' ಎನ್ನಲಾಗುತ್ತದೆ. ಈ ರೀತಿಯ ಅಸಹಾಯಕತೆ ಇರುವ ಹೆಣ್ಣು ಮಕ್ಕಳು ಮನೆಗೆಲಸದ ಬಗ್ಗೆ ನಿರಾಸಕ್ತಿ ವಹಿಸುತ್ತಾಳೆ ಎಂಬುದು ಈ ಮಾತಿನ ಅಂತರಾರ್ಥ. ಎಷ್ಟೋ ಬಾರಿ ಎಲ್ಲಾ ಸರಿಯಿದ್ದರೂ ಅನೈತಿಕ ಸಂಬಂಧಕ್ಕೆ ಮುಂದಾಗಿ ಪರಪುರುಷನೊಂದಿಗೆ ಪಲಾಯನ ಗೈಯ್ಯುವ ಸ್ತ್ರೀಯರ ವರ್ತನೆ ಕುರಿತು ಮಾತನಾಡುವಾಗ ಈ ಗಾದೆಯು ಹುಟ್ಟಿಕೊಂಡಂತಿದೆ.
        
ಇದೇ ರೀತಿಯಲ್ಲಿ " ಕಟ್ಕೊಂಡೋಳು ಕಡೇಗಂಟ, ಕರ್ಕೋಂಡ್ ಬಂದೋಳು ಇರೋಗಂಟ " ಗಾದೆಯು ವೈವಾಹಿಕ ಬಂಧನದ ಘನತೆಯನ್ನು ಮತ್ತು ವಿವಾಹ ಬಾಹಿರವಾಗಿ ಬಂದ ಹೆಣ್ಣು ಗಂಡಿಗಿರುವ ಸಂಬಂಧದ ಅಸ್ಥಿರತೆಯನ್ನು ವ್ಯಕ್ತಪಡಿಸುತ್ತದೆ. ಈ ಬಗೆಯ ಸ್ತ್ರೀ ನಿಂದನಾತ್ಮಕ ಗಾದೆ ಮಾತುಗಳು ಬಹಳಷ್ಟಿದ್ದು ಆ ಸಾಲಿನಲ್ಲಿ 
ಕಂಡೋರ್ ಮನೆ ಕದ ನಚ್ಕೊಂಡು ಬೆಳಗಾನ ನಾಯಿ ಹೊಡುದ್ಲಂತೆ" ,ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ ತೀರಿಸ್ಕೊಂಡ್ಲು, ಮಳ್ಳೀ ಮಳ್ಳೀ..ಮಂಚಕ್ಕೆ ಎಷ್ಟು ಕಾಲು ಅಂದ್ರೆ ಮೂರು… ಮತ್ತೊಂದು ಅಂದ್ಲಂತೆ, ಮುಂತಾದ ಗಾದೆಗಳನ್ನು ಮೆಲುಕು ಹಾಕಬಹುದಾಗಿದೆ.
         
ಹೀಗೆ ಗಾತ್ರದಲ್ಲಿ ಚಿಕ್ಕವಾದರೂ ಅರ್ಥದಲ್ಲಿ ಹಿರಿವಂತಿಕೆ ಹೊಂದಿರುವ ಗಾದೆಗಳಲ್ಲಿ ಮತ್ತಷ್ಟು ಉದಾಹರಣೆಗಳನ್ನು ಹೀಗೆ ಅವಲೋಕಿಸಬಹುದಾಗಿದೆ.
     *ಕದ್ದ ಹೋಳಿಗೆ ಕೊಟ್ರೆ ಬೆಲ್ಲ ಕಮ್ಮಿಯಾಯ್ತು ಅಂದ್ರಂತೆ
     *ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು
     *ಗಾಳಿ ಬಂದಾಗ ತೂರ್ಕೋ ವ್ಯಾಳಿ ಬಂದಾಗ ಮಾರ್ಕೋ
     *ಬೀದಿ ಮಕ್ಕಳು ಬೆಳದೋ ಕೋಣೆ ಮಕ್ಕಳು ಕೊಳತೋ
     *ಊಟ ಕೌರವರ ಕಡೆ ಕೂಟ ಪಾಂಡವರ ಕಡೆ
     *ಅಜ್ಜಿ ಇಲ್ಲದ ಮನೆ ಮಜ್ಜಿಗೆ ಇಲ್ದಿರೊ ಊಟ ಸಜ್ಜನರಿಲ್ಲದ ಸಭೆ ಎಂದಿಗೂ ಬ್ಯಾಡ
     *ಅಕ್ಕಿ ಮ್ಯಾಲಾಸೆ ನೆಂಟರ ಮ್ಯಾಲೆ ಪ್ರೀತಿ
     *ಹಾಡ್ತಾ ಹಾಡ್ತಾ ರಾಗ ನರಳ್ತಾ ನರಳ್ತಾ ರೋಗ
     *ಬೆಳಗಾನ ರಾಮಾಯಣ ಕೇಳಿ ಬೆಳಕಾಗುತ್ಲು ರಾಮಂಗೂ ಸೀತೇಗೂ ಏನಾಗಬೇಕು ಅಂದಂಗೆ
     *ಬಯ್ತಾ ಹೇಳೋರು ಬದಕಾಕ್ಹೇಳಿದ್ರು ನಗತಾ ಹೇಳೋರು ಕೆಡಾಕ್ಹೇಳಿದ್ರು.
      
ಇವೇ ಮೊದಲಾದ ಗಾದೆ ಮಾತುಗಳು ಮಾನವ ಜೀವನದ ಸಾರ ಸಂಗ್ರಹದಂತಿದ್ದು, ಬದುಕಿನ ಮೌಲ್ಯಗಳನ್ನು ತಿಳಿಸಿಕೊಡುತ್ತವೆ. ಆಧುನಿಕ ಕಾಲಘಟ್ಟದಲ್ಲಿರುವ ಇಂದಿನ ಜನರ ಧಾವಂತದ ಬದುಕಿನಲ್ಲಿ ಗಾದೆಗಳ ಬಳಕೆಯು ಕಡಿಮೆಯಾಗುತ್ತಿರುವಂತೆ ಭಾಸವಾಗುತ್ತಿದೆ. ಆದರೂ ಕನ್ನಡ ಜಾನಪದ ಪರಿಷತ್ತಿನ ಮೂಲಕ ಜಾನಪದ ಸಾಹಿತ್ಯದ ಬಳಕೆ ಉಳಿಕೆಗಾಗಿ ಅನೇಕ ವಿಚಾರಗೋಷ್ಠಿಗಳು, ಸಮ್ಮೇಳನಗಳು , ಕಮ್ಮಟಗಳು ಆಗಾಗ ಯಶಸ್ವಿಯಾಗಿ ನಡೆಯುತ್ತಿದ್ದು ಕಳೆದುಹೋಗುತ್ತಿರುವ ಜನಪದ ಸಿರಿವಂತಿಕೆಯನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ. ಜನಮಾನಸದಲ್ಲಿ ಗಾದೆಗಳು ಅಮರವಾಗಿ ಉಳಿಯುವ ಪ್ರಯತ್ನವಾಗಿ ವಿದ್ವಾಂಸರಾದ ಕಾಳೇಗೌಡ ನಾಗವಾರರವರು 1400 ಕ್ಕೂ ಹೆಚ್ಚು ಗಾದೆಗಳನ್ನು "ಬೀದಿ ಮಕ್ಕಳು ಬೆಳೆದೋ" ಎಂಬ ಹೆಸರಿನ ಸಂಕಲನದಲ್ಲಿ ಸಂಗ್ರಹಿಸಿರುವುದು (೧೯೭೭-ಬೆಂಗಳೂರು ವಿ.ವಿ) ಶ್ಲಾಘನೀಯ ಸೇವೆಯಾಗಿದೆ.
      
ಒಟ್ಟಿನಲ್ಲಿ ಗಾದೆಗಳನ್ನು ಬಳಸಿ ಉಳಿಸಿ ಮುಂದಿನ ತಲೆಮಾರುಗಳಿಗೂ ಕೊಂಡೊಯ್ಯುವ ಕಾರ್ಯವನ್ನು ಸಾಹಿತ್ಯಾಸಕ್ತರು, ಸಾಹಿತಿಗಳು ಸಾಮಾನ್ಯರೊಡನೆ ಸೇರಿ ಮಾಡಬೇಕಾಗಿದೆ.                      

~ಹೊರಾ.ಪರಮೇಶ್ ಹೊಡೇನೂರು,


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x