ಗಾಂಧೀ ಬಾಂಧವ್ಯ: ಎಸ್. ಜಿ. ಸೀತಾರಾಮ್, ಮೈಸೂರು.

ಗಾಂಧೀ ಎಂದೊಡನೆ ಜನರು ಗಾಂಧೀಜೀಯವರನ್ನು ನೆನೆದು ಸುಮ್ಮನಾಗುವರೇ ಹೊರತು, ಅವರ ಗಾಂಧೀ ನಾಮಧಾರಿ ಬಂಧುಗಳನ್ನಾಗಲೀ ಅಥವಾ ಗಾಂಧೀ ನಾಮದ ಮೂಲವನ್ನಾಗಲೀ ಸಾಮಾನ್ಯವಾಗಿ ಹುಡುಕಲೆತ್ನಿಸುವುದಿಲ್ಲ. ಹಾಗೆ ಹುಡುಕಲು ಹೊರಟಲ್ಲಿ, ಗಾಂಧೀ ಎಂಬುವ ಪದ ಗಂಧ ಎಂಬ ಶಬ್ದದಿಂದ ಬಂದಿದ್ದು, ಗಂಧದ ವ್ಯಾಪಾರಿಗಳನ್ನು ಹೀಗೆ ಕರೆಯುತ್ತಿದ್ದರೆಂಬುದನ್ನು ತಿಳಿದು ಶುರುವಿನಲ್ಲೇ ಅಚ್ಚರಿಯಾಗುತ್ತದೆ. ಹಾಗೆಯೇ ಮುಂದುವರಿದರೆ, ಗಾಂಧೀಜೀಯವರಿಗೆ ಮುಂಚೆಯೇ ಇನ್ನೊಬ್ಬ ವಿಶ್ವವಿಖ್ಯಾತ ಗಾಂಧೀ ಇದ್ದರೆಂದು ತಿಳಿದು ಕುತೂಹಲ ಮತ್ತಷ್ಟು ಕೆರಳುತ್ತದೆ. ಇವರೇ ಬ್ಯಾರಿಸ್ಟರ್ ಮತ್ತು ಬಹುಧರ್ಮ ವಿದ್ವಾಂಸ ವೀರ್‌ಚಂದ್ ರಾಘವ್‌ಜೀ ಗಾಂಧೀ (೧೮೬೪-೧೯೦೧). ಅಮೇರಿಕಾಗೆ ಸಾರ್ವಜನಿಕ ಭೇಟಿಕೊಟ್ಟ ಮೊಟ್ಟಮೊದಲ ಗುಜರಾತಿ ನಾಯಕರೆಂದು ಪರಿಗಣಿಸಲ್ಪಡುವ ಈ ಗಾಂಧೀ, ಸ್ವಾಮಿ ವಿವೇಕಾನಂದರು ಪ್ರಸಿದ್ಧಿಗೊಳಿಸಿದ ವಿಶ್ವ ಧರ್ಮಗಳ ಪಾರ್ಲಿಮೆಂಟ್‌ನಲ್ಲಿ (ಶಿಕಾಗೋ, ೧೮೯೩) ಜೈನ ಧರ್ಮದ ಪ್ರತಿನಿಧಿಯಾಗಿ ಮನಮೋಹಕ ಉಪನ್ಯಾಸವನ್ನು ನೀಡಿದರು.  ಅಮೇರಿಕೀ ಜೈನಮತಕ್ಕೆ ಪಿತಾಮಹರಾದರು. 

೧೮೯೩ರ ಶಿಕಾಗೋ ವಿಶ್ವ ಧರ್ಮ ಸಮ್ಮೇಳನದಲ್ಲಿ ವಿವೇಕಾನಂದರೊಡನೆ (ಎಡದಿಂದ ಮೂರನೆಯವರು) ಕುಳಿತಿರುವ ವೀರ್‍ಚಂದ್ ಗಾಂಧೀ (ಎಡದಿಂದ ಮೊದಲನೆಯವರು).

ಹೀಗೆ ಹುಡುಕುತ್ತಾ, ಗಾಂಧೀಜೀ ಕುಟುಂಬದೆಡೆಗೇ ಹೊರಳಿದರಂತೂ, ಅನೇಕ ಅಜ್ಞಾತ ಗಾಂಧೀಗಳು ಪ್ರತ್ಯಕ್ಷರಾಗುತ್ತಾರೆ. ಇವರಲ್ಲಿ ಮುಂಚೆಯೇ ಕಾಣಸಿಗುವವರು ಗಾಂಧೀಜೀ ಅಕ್ಕ ರಲಿಯತ್ (ಜನನ: ೧೮೬೨), ಅನಂತರ ಅವರ ಇಬ್ಬರು ಅಣ್ಣಂದಿರಾದ ಲಕ್ಷ್ಮೀದಾಸ್ (ಜನನ: ೧೮೬೩) ಮತ್ತು ಕರ್ಸನ್ (ಕೃಷ್ಣ) ದಾಸ್ (ಜನನ: ೧೮೬೭). ಗಾಂಧೀಜೀ ತಂದೆ ದಿವಾನ್ ಕರಮ್‌ಚಂದ್ ಉತ್ತಮ್‌ಚಂದ್ ಗಾಂಧೀ (ಕಾಬಾ ಗಾಂಧೀ) ಅವರಿಗೆ, ಪುತಲೀಬಾಯಿಯವರು ನಾಲ್ಕನೆಯ ಪತ್ನಿಯಾಗಿದ್ದರು.  ಅವರ ಮೊದಲಿನ ಮೂವರು ಪತ್ನಿಯರಲ್ಲಿ ಇಬ್ಬರಿಗೆ ಮಾತ್ರ ಮಕ್ಕಳಾಗಿತ್ತು: ಒಬ್ಬರಿಗೆ ಮುಲೀ ಎಂಬ ಹೆಣ್ಣುಮಗು, ಇನ್ನೊಬ್ಬರಿಗೆ ಪನ್‌ಕುನ್ವರ್ ಎಂಬ ಹೆಣ್ಣುಮಗು. ಹೀಗಾಗಿ, ಗಾಂಧೀಜೀಯವರಿಗೆ ಇಬ್ಬರು ಬಲ-ಅಕ್ಕಂದಿರಿದ್ದರು. ಒಟ್ಟಿನಲ್ಲಿ ಗಾಂಧೀಜೀಯವರು ಕಡೆಯ ಮಗುವಾಗಿ, ಕುಟುಂಬದ ವಿಶೇಷ ಪ್ರೀತಿಗೆ ಪಾತ್ರರಾಗಿದ್ದರು; ಎಲ್ಲರೂ ಅವರನ್ನು ಮೋನಿಯಾ ಎಂದೇ ಕರೆಯುತ್ತಿದ್ದರು. 

ಮುಂದೆ, ರಲಿಯತ್ ಅವರ ಪತಿ ರಾಜ್‌ಕೋಟ್‌ನಲ್ಲಿ ಚಿಕ್ಕ ವಯಸ್ಸಿನಲ್ಲೇ ಮೃತರಾದ ಬಳಿಕ, ಅವರ ಒಬ್ಬನೇ ಮಗ ೧೦ ವರ್ಷದ ಗೋಕುಲ್‌ದಾಸ್‌ನನ್ನು, ಗಾಂಧೀಜೀ ದಕ್ಷಿಣ ಆಫ಼್ರಿಕಾಕ್ಕೆ ತಮ್ಮ ಎರಡು ಗಂಡುಮಕ್ಕಳೊಡನೆ ಕರೆದೊಯ್ದರು, ಮತ್ತು ಅಣ್ಣ ಲಕ್ಷ್ಮೀದಾಸ್‌ರು ಮೋಹನ್‌ದಾಸ್‌ರನ್ನು  ಇಂಗ್ಲೆಂಡ್‌ಗೆ ಕಳುಹಿಸಲು ಹಾಗೂ ವಕೀಲರನ್ನಾಗಿಸಲು ಮುಖ್ಯ ಕಾರಣರಾದರು.  ಆದರೆ, ಕಾಲಾಂತರದಲ್ಲಿ, ಕುಟುಂಬ ನಿರ್ವಹಣೆಯ ವಿಚಾರದಲ್ಲಿ ಲಕ್ಷೀದಾಸ್-ಮೋಹನ್‌ದಾಸ್ ನಡುವೆ ಮನಸ್ತಾಪ ಬಂದು, ಲಕ್ಷೀದಾಸ್‌ರ ಅಂತ್ಯಕಾಲದಲ್ಲಷ್ಟೇ ಈ ಸೋದರರ ನಡುವೆ ಸಂಧಾನವಾಯಿತು.

ಇನ್ನು ಕಸ್ತೂರ್‌ಬಾ ಬಾಲ್ಯದತ್ತ ತಿರುಗಿದರೆ, ಅವರ ತಂದೆ ಗೋಕುಲ್‌ದಾಸ್ ಮಕನ್‌ಜಿ ಕಪಾಡಿಯಾ ಪೋರ್‌ಬಂದರ್‌ನಲ್ಲಿ ಶ್ರೀಮಂತ ಬನಿಯಾ ವರ್ತಕರಾಗಿದ್ದರು. ಗಾಂಧೀಜೀಯವರಿಗಿಂತ ಕಸ್ತೂರ್‌ಬಾ ಆರು ತಿಂಗಳು ದೊಡ್ಡವರಾಗಿದ್ದರು (ಜನನ: ೧೦ ಏಪ್ರಿಲ್ ೧೮೬೯) ಮತ್ತು ಇಬ್ಬರಿಗೂ ಸುಮಾರು ಏಳು ವರ್ಷ ವಯಸ್ಸಾಗಿರುವಾಗಲೇ ವಿವಾಹನಿಶ್ಚಿತಾರ್ಥವಾಗಿತ್ತು. ಇದಕ್ಕೆ ಮುಂಚೆ ಗಾಂಧೀಜೀಯವರಿಗೆ ಇನ್ನಿಬ್ಬರು ಪುಟ್ಟ ಹುಡುಗಿಯರೊಡನೆ ವಿವಾಹದ ಒಪ್ಪಂದವಾಗಿದ್ದರೂ, ಆ ಇಬ್ಬರೂ ವಿವಾಹಕ್ಕೆ ಮುಂಚೆಯೇ ತೀರಿಕೊಂಡಿದ್ದರು. ಕಡೆಗೆ, ಗಾಂಧೀಜೀ-ಕಸ್ತೂರ್‌ಬಾ ವಿವಾಹವು ಮೇ ೧೮೮೨ರಲ್ಲಿ (ಅಂದರೆ ಇಬ್ಬರಿಗೂ ಸುಮಾರು ೧೩ ವರ್ಷ ವಯಸ್ಸಾಗಿರುವಾಗ) ಗಾಂಧೀಜೀ ಅಣ್ಣ ಕರ್ಸನ್‌ದಾಸ್‌ರ ಮತ್ತು ಒಬ್ಬ ಸೋದರಸಂಬಂಧಿಯ ವಿವಾಹಗಳೊಟ್ಟಿಗೆ ಪೋರ್‌ಬಂದರ್‌ನಲ್ಲಿ  ಜರುಗಿತು. 

ತರುವಾಯ, ಗಾಂಧೀಜೀ-ಕಸ್ತೂರ್‌ಬಾ ದಂಪತಿಗಳಿಗೆ ಹರಿಲಾಲ್ (೧೮೮೮-೧೯೪೮), ಮಣಿಲಾಲ್ (೧೮೯೨-೧೯೫೬), ರಾಮ್‌ದಾಸ್ (೧೮೯೬-೧೯೬೯) ಮತ್ತು ದೇವ್‌ದಾಸ್ (೧೯೦೦-೧೯೫೭) ಎಂಬ ನಾಲ್ಕು ಗಂಡುಮಕ್ಕಳಾದರು. ಇಸ್ಲಾಂಗೆ ಪರಿವರ್ತಿತರಾಗಿ, ಬಳಿಕ ಹಿಂದೂ ಧರ್ಮಕ್ಕೇ ಮರಳಿ, ಹಲವಾರು ವ್ಯಸನಗಳಿಗೀಡಾಗಿ, ತಂದೆಯ ಅಂತ್ಯಕ್ರಿಯೆಗೂ ಅನರ್ಹರೆಂದೆನಿಸಿಕೊಂಡು, ಕಡೆಗೆ ಮುಂಬೈನ ಮುನಿಸಿಪಲ್ ಆಸ್ಪತ್ರೆಯೊಂದರಲ್ಲಿ ಅನಾಥ ಶವವಾಗಿ ಅಳಿಸಿಹೋದ ಹರಿಲಾಲ್‌ರ ದುರಂತ ಆತ್ಮಕಥನವು ಈಗ ಸಾಕಷ್ಟು ಜನಜನಿತ. ಹರಿಲಾಲ್‌ರ (ಪತ್ನಿ: ಗುಲಾಬ್) ಮಗ ಕಾಂತಿಲಾಲ್ ಮೈಸೂರು ಮೆಡಿಕಲ್ ಕಾಲೇಜಿನಿಂದ ೧೯೩೮ರಲ್ಲಿ ಎಂ.ಬಿ.ಬಿ.ಎಸ್. ಪದವಿ ಪಡೆದು, ಕೊನೆಗೆ ಪುಣೆಯ ಬಳಿ ಬಡರೋಗಿಗಳಿಗಾಗಿ ಒಂದು ಆರೋಗ್ಯಧಾಮವನ್ನು ನಡೆಸಿದರು.      

ಗಾಂಧೀಜೀ ಎರಡನೆಯ ಮಗ ಮಣಿಲಾಲ್‌ರು (ಪತ್ನಿ: ಸುಶೀಲಾ) ದಕ್ಷಿಣ ಆಫ಼್ರಿಕಾದಲ್ಲೇ ಇದ್ದು, ಡರ್ಬಾನ್‌ನ ಫ಼ೀನಿಕ್ಸ್ ಆಶ್ರಮವನ್ನೂ, ಇಂಡಿಯನ್ ಒಪೀನ್‌ಯನ್ ಪತ್ರಿಕೆಯನ್ನೂ ನಡೆಸಿದರು, ಮತ್ತು ವರ್ಣಭೇದ ನೀತಿಯ ವಿರುದ್ಧ ಹೋರಾಡಿದರು. ಮಣಿಲಾಲ್‌ರ ಮಗ ಅರುಣ್ ಮತ್ತು ಅರುಣ್‌ರ ಮಗ ತುಷಾರ್ ಇಬ್ಬರೂ ಸಕ್ರಿಯ ಸಾಮಾಜಿಕ-ರಾಜಕೀಯ ಹೋರಾಟಗಾರರು. ಮಣಿಲಾಲ್‌ರ ಮಗಳು ಇಳಾ ದಕ್ಷಿಣ ಆಫ಼್ರಿಕಾದ ಪಾರ್ಲಿಮೆಂಟ್‌ನ ಸದಸ್ಯೆಯಾಗಿದ್ದರು; ಇಳಾ ಅವರ ಮಗ ಕುಶ್ ಯುವವಯಸ್ಸಿನಲ್ಲೇ ವರ್ಣಭೇದವಿರೋಧಿ ಚಳುವಳಿಯಲ್ಲಿ ಹತರಾದರು.  

ಗಾಂಧೀಜೀ ಮೂರನೆಯ ಮಗ ರಾಮ್‌ದಾಸ್‌ರು ತಂದೆಯೊಡನೆ ಭಾರತದಲ್ಲೇ ಸ್ವಾತಂತ್ರ್ಯ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ರಾಮ್‌ದಾಸ್‌ರ (ಪತ್ನಿ: ನಿರ್ಮಲಾ) ಮಗಳು ನಿವೃತ್ತ ಐ.ಎ.ಎಸ್. ಅಧಿಕಾರಿ ಮತ್ತು ರಾಜ್ಯಸಭಾ ಮಾಜಿಸದಸ್ಯೆ ಸುಮಿತ್ರಾ ಕುಲಕರ್ಣಿ ಈಗ ಬೆಂಗಳೂರಿನಲ್ಲಿ ನೆಲಸಿದ್ದಾರೆ.  

ಗಾಂಧೀಜೀ ಕೊನೆಯ ಮಗ ದೇವ್‌ದಾಸ್‌ರು ದಿಲ್ಲಿಯ ’ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದರು. ಅವರಿಗೆ ರಾಜಾಜಿಯವರ ಎರಡನೆಯ ಮಗಳು ಲಕ್ಷ್ಮೀಯವರೊಡನೆ ವಿವಾಹವಾಗಿತ್ತು. ದೇವ್‌ದಾಸ್‌ರ ಮಕ್ಕಳಲ್ಲಿ ರಾಜ್‌ಮೋಹನ್ ಗಾಂಧೀ (ಸಂಶೋಧಕ-ಪ್ರಾಧ್ಯಾಪಕರು, ಲೇಖಕರು, ಉಪನ್ಯಾಸಕರು, ರಾಜ್ಯಸಭೆಯ ಮಾಜಿ ಸದಸ್ಯರು ಮತ್ತು ಮಾನವೀಯ ಸುಧಾರಣೆಗಳ ಸಕ್ರಿಯ ಪ್ರತಿಪಾದಕರು), ಗೋಪಾಲ್‌ಕೃಷ್ಣ ಗಾಂಧೀ (ಭೂತಪೂರ್ವ ಐ.ಎ.ಎಸ್. ಅಧಿಕಾರಿ-ರಾಯಭಾರಿ-ಪಶ್ಚಿಮಬಂಗಾಳ ರಾಜ್ಯಪಾಲ, ಮತ್ತು ಸಾಂಸ್ಕೃತಿಕ-ಬೌದ್ಧಿಕ ವಲಯಗಳಲ್ಲಿ ಪ್ರತಿಷ್ಠಿತರು) ಹಾಗೂ ದಿವಂಗತ ರಾಮ್‌ಚಂದ್ರ ಗಾಂಧೀ (ತತ್ತ್ವಶಾಸ್ತ್ರಜ್ಞರಾಗಿದ್ದರು) ಅವರು ಚಿಂತಕರ ವೇದಿಕೆಗಳಲ್ಲಿ ಗಣ್ಯನಾಮರು. 

ಕಸ್ತೂರ್‌ಬಾ-ಮೋಹನ್‌ದಾಸ್ ಗಾಂಧೀ ವಂಶವೃಕ್ಷದಲ್ಲಿ ಸಾಧಾರಣವಾಗಿ ೧೩ ಮೊಮ್ಮಕ್ಕಳನ್ನು ಮತ್ತು ೨೯ ಮರಿಮಕ್ಕಳನ್ನು ಗುರುತಿಸುತ್ತಾರೆ; ಮರಿಮಕ್ಕಳು ಮತ್ತು ಮರಿಮೊಮ್ಮಕ್ಕಳು ಇಂದು ಜಗತ್ತಿನಾದ್ಯಂತ ಚದುರಿದ್ದಾರೆ. ಹೃದ್ರೋಗ, ನೇತ್ರರೋಗ ಮತ್ತು ಮಧುಮೇಹ ತಜ್ಞರು, ವ್ಯಾಯಾಮ-ಚಿಕಿತ್ಸಕರು,  ಕಂಪ್ಯೂಟರ್ ತಂತ್ರಜ್ಞರು, ಹಣಕಾಸು ವಿಶೇಷಜ್ಞರು, ಛಾಯಾಗ್ರಾಹಕರು, ಪತ್ರಕರ್ತರು, ಪ್ರೊಫ಼ೆಸರರು, ಗಾಂಧೀ ಸಂಸ್ಥೆಗಳ ನಿರ್ವಾಹಕರು ಇತ್ಯಾದಿ ವಿಧವಿಧ ವೃತ್ತಿಗಳಲ್ಲಿ, ಭಾರತದಲ್ಲಿಯೇ ಅಲ್ಲದೆ, ಯು. ಎಸ್. ಎ., ಕ್ಯಾನಡ, ದಕ್ಷಿಣ ಆಫ಼್ರಿಕಾ, ಇಂಗ್ಲಂಡ್, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿಯೂ ಗಾಂಧೀ ಪೀಳಿಗೆಯ ಸದಸ್ಯರು ಇಂದು ಸೇವೆ ಸಲ್ಲಿಸುತ್ತಿದ್ದಾರೆ. 

ಕಡೆಯದಾಗಿ, ಗಾಂಧೀ-ನೆಹ್ರೂ ಸಂಬಂಧದಿಂದಾಗಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಒಂದು ಅಭಿನವ ಗಾಂಧೀಶಕೆ ಪ್ರಾರಂಭವಾದುದರ ಬಗ್ಗೆ ಯೋಚಿಸುವುದು ಸ್ವಾರಸ್ಯಕರವೆನಿಸಬಹುದು. ಘಾಂಧೀ ಅಥವಾ ಘಾಂಡೀ ಎಂದು ಪಾರ್ಸಿ ಜನರಲ್ಲಿ ಸಾಮಾನ್ಯವಾಗಿರುವ ಕುಲನಾಮವನ್ನೇ ಇಂದಿರಾ ಗಾಂಧೀ ಪತಿ ಫ಼ಿರೋಜ಼್‌ರು ಮೊದಲಲ್ಲಿ ಹೊಂದಿದ್ದು, ವಿವಾಹದ ಸಮಯಕ್ಕೆ ತಮ್ಮ ಹೆಸರನ್ನು ಫ಼ಿರೋಜ಼್ ಜಹಾಂಗೀರ್ ಗಾಂಧೀ ಎಂದು ಗಾಂಧೀಜೀ ಸಲಹೆಯ ಮೇರೆಗೆ ಬದಲಾಯಿಸಿಕೊಂಡರೆನ್ನುತ್ತಾರೆ.  ಇದಕ್ಕೆ ಮುಂಚೆ, ಟ್ಯಾಗೋರ್‌ರ ಅಕ್ಕನ ಮಗಳು ಸರಳಾದೇವಿಯವರ ಮಗ ದೀಪಕ್ ಚೌಧರಿಯವರೊಡನೆ ಇಂದಿರಾ ಗಾಂಧೀ ವಿವಾಹವನ್ನು ಗಾಂಧೀಜೀ ನೆಹ್ರೂರವರೊಡನೆ ಪ್ರಸ್ತಾಪಿಸಿದ್ದರಂತೆ. ಇದೇನಾದರೂ ನೆರವೇರಿ, ಇಂದಿರಾ ಪ್ರಿಯದರ್ಶಿನಿಗೆ ಗಾಂಧೀ ನಾಮದ ಬಲವೇ ದೊರಕದೆ ಹೋಗಿದ್ದರೆ, ಸ್ವತಂತ್ರ ಭಾರತದ ಇತಿಹಾಸವೇ ಬದಲಾಗುತ್ತಿತ್ತೇನೋ! 

~ ೦ ~

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
9 years ago

ಕುತೂಹಲಕಾರಿಯಾಗಿದೆ.

1
0
Would love your thoughts, please comment.x
()
x