ಗಾಂಧೀಜಿಯವರ ಅಹಿಂಸಾ ತತ್ವ: ರವಿ ತಿರುಮಲೈ

ಆಧುನಿಕ ಪ್ರಪಂಚದ ಚರಿತ್ರೆಯಲ್ಲಿ ಗಾಂಧೀಜಿಯವರ ' ಅಹಿಂಸೆ '  'ಅಸಹಕಾರ' ಮತ್ತು 'ಸತ್ಯಾಗ್ರಹ' ದ ಭಾವನೆ, ಸಿಧ್ಧಾಂತ ಅಥವಾ ತತ್ವಗಳು ಪ್ರಧಾನವಾಗಿ  ಎದ್ದು ಕಾಣುತ್ತವೆ. ಈ ಸಿಧ್ಧಾ೦ತಗಳು , ಭಾರತೀಯರಿಗೆ, ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ಹೂಡಿದ ಆಂದೋಲನದಲ್ಲಿ, ಸ್ಪೂರ್ತಿ, ಆತ್ಮ ವಿಶ್ವಾಸ ಮತ್ತು ಉತ್ಸಾಹವನ್ನು ತುಂಬಿದ್ದವು. 
 
ಭಾರತದಲ್ಲಿ ಗಾಂಧೀಜಿಯವರು ಅಹಿಂಸಾತ್ಮಕ ಚಳುವಳಿ ಅಥವಾ ಅಂದೋಲನವನ್ನು ಹುಟ್ಟು ಹಾಕುವವರೆಗೆ, ಪ್ರಪಂಚದಲ್ಲಿ ನಡೆದ ಎಲ್ಲಾ ಹೋರಾಟಗಳೂ, ಆಂದೋಲನಗಳೂ, ಮತ್ತು ದಂಗೆಗಳೂ ಹಿಂಸೆಯಿಂದ ಕೂಡಿದ್ದಾಗಿದ್ದವು. ಭಾರತೀಯ ಸ್ವಾತಂತ್ರ ಚಳುವಳಿಯು ಅಹಿಂಸೆಯನ್ನೇ ಅವಲಂಬಿಸಿತ್ತು ಎಂಬುದು ಮಹತ್ವಪೂರ್ಣವಾದ ಅಂಶ. ಅಷ್ಟೇ ಅಲ್ಲ, ಪ್ರಪಂಚದ ಆಧುನಿಕ ಇತಿಹಾಸದಲ್ಲೇ ಭಾರತೀಯ ಅಹಿಂಸಾತ್ಮಕ ಸಾಮೂಹಿಕ ಆಂದೋಲನವು, ಪ್ರಪಥಮ ಅಹಿಂಸಾಧಾರಿತ ಆಂದೋಲನವಾಗಿತ್ತು ಮತ್ತು ನಂತರ ನಡೆದ ಹತ್ತು ಹಲವಾರು ಚಳುವಳಿಗಳಿಗೆ ಮಾದರಿಯಾಗಿತ್ತು.  ಬಹುಕಾಲ ನಡೆದ ಅಹಿಂಸಾತ್ಮಕ ಚಳುವಳಿಯ ಕಾರಣವಾಗಿ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಬೇಕಾಯಿತು.ಯುರೋಪಿನಲ್ಲೂ ಸಹ ನಾಜಿಗಳಿಗೆ ಡೇನಿಯರ ಅಹಿಂಸಾತ್ಮಕವಾದ ಚಳುವಳಿಯನ್ನು ಮತ್ತು ಅಂದೋಲನವನ್ನು ಎರಡನೇ ಮಹಾ ಯುಧ್ಧಾನಂತರ ಎದುರಿಸಬೇಕಾಯಿತು. 
 
ಗಾಂಧೀಜಿಯವರು ಅಹಿಂಸಾತ್ಮಕ ಚಳುವಳಿ ಅಥವಾ ಅಂದೋಲನದ ಮಾದರಿಯನ್ನು ಅನುಸರಿಸಿ 1960 ರಲ್ಲಿ ವರ್ಣಭೇದದ ವಿರುಧ್ಧ, ಸಾಮಾನ್ಯ ಮಾನವ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಪಡೆಯಲು ಅಮೇರಿಕಾದಲ್ಲಿ ವಾಸಿಸುತ್ತಿದ್ದ ಆಫ್ರಿಕನ್ನರು ಹೋರಾಡಿ ಜಯ ಪಡೆದರು. 
 
ಕಮ್ಯುನಿಸ್ಟ್ ದೇಶವಾಗಿದ್ದ ಪೋಲಂಡ್ನಲ್ಲಿ 1980 ರಲ್ಲಿ ಅಹಿಂಸಾತ್ಮಕ ಚಳುವಳಿಯ ಮೂಲಕವೇ, ಮುಕ್ತ ಕಾರ್ಮಿಕ ಸಂಸ್ಥೆಗಳನ್ನು ಸ್ಥಾಪಿಸುವ ಹಕ್ಕನ್ನು ಪಡೆದುಕೊಂಡವು. ಫಿಲಿಪಿನ್ಸ್ ಮತ್ತು ಚಿಲಿಯಂತಹ ದೇಶಗಳಲ್ಲೂ ಸರ್ವಾಧಿಕಾರಿಗಳನ್ನು ಇಳಿಸಿ ಪ್ರಜಾಸತ್ತೆಯನ್ನು ಸ್ಥಾಪಿಸಲು ಅಹಿ೦ಸಾತ್ಮಕ ಚಳುವಳಿಯನ್ನೇ ಬಹಳ ಸೂಕ್ತವಾಗಿ ಬಳಸಿಕೊಳ್ಳಲಾಯಿತು. 
 
ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯನ್ನು ನಿರ್ಬಲಗೊಳಿಸಿ ಆ ದೇಶಕ್ಕೆ ಹೊಸ ರಾಜಕೀಯ ಆಯಾಮವನ್ನು ಕೊಡಲು ಸಾರ್ವಜನಿಕ ಅಹಿಂಸಾತ್ಮಕ ಚಳುವಳಿಯೇ ಕಾರಣವಾಗಿತ್ತು. 1980 ರ ಕೊನೆಗೆ ಪೂರ್ವ ಯುರೋಪ ಮತ್ತು ಮಂಗೋಲಿಯನ್ ದೇಶಗಳಲ್ಲೂ ಸಹ ಅಧಿಕಾರಸ್ಥ ಕಮ್ಯುನಿಸ್ಟರ ಹಿಡಿತವನ್ನು ಕಿತ್ತೊಗೆಯಲು ಮತ್ತು ಪ್ರಜಾತಂತ್ರದ ತಳಹದಿಯನ್ನು ಭದ್ರಪಡಿಸಲೂ ಸಹ ಅಹಿಂಸಾತ್ಮಕ ಚಳುವಳಿಗಳೇ ಕಾರಣವಾಗಿದ್ದವು.ಸನ್ 2000  ದಲ್ಲಿ ಸರ್ಬಿಯಾ ದೇಶದ ಮಿಲೋಸೆವಿಕ್ ಎಂಬ ಸರ್ವಾಧಿಕಾರಿಯನ್ನು ಕಿತ್ತೊಗೆಯಲು ಅಲ್ಲಿನ ಪೊಲೀಸರಿಗೆ ಮತ್ತು ಸೈನ್ಯಾಧಿಕಾರಿಗಳಿಗೆ, ವಿಧ್ಯಾರ್ಥಿಗಳ ಅಹಿಂಸಾತ್ಮಕ ಆಂದೋಲನವೇ ಪೂರಕವಾಗಿತ್ತು. 
 
ಅಹಿಂಸಾತ್ಮಕ ಚಳುವಳಿಗಳಿಗೆ ವರ್ಚಸ್ವೀ ನಾಯಕರ ಅವಶ್ಯಕತೆ ಇಲ್ಲ.  ಉದಾಹರಣೆಗೆ ಗಾಂಧೀಜಿ ತಮ್ಮ ವೈಯಕ್ತಿಕ ಸರಳತೆಯನ್ನೇ ಅವಲಂಬಿಸಿದ್ದರೂ ತಮ್ಮ ಪಟ್ಟು ಬಿಡದ ಮತ್ತು ದೃಡನಿರ್ಧಾರದ ತಳಹದಿಯ ಮೇಲೆ ರೂಪಿಸಿದ ಆಂದೋಲನದ ಕಾರ್ಯಕ್ರಮಗಳಿಂದ ಜನಮಾನಸದ ಮೇಲೆ ಪ್ರಭಾವ ಬೀರಿ, ಸ್ವಾವಲಂಬನೆಯಂತಹ ಸಿಧ್ಧಾ೦ತಗಳನ್ನು ಪ್ರತಿಪಾದಿಸಿ, ಜನರು ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳುವಂತೆ ಮಾಡಿ ಕ್ರಮೇಣ ಜನಸಮೂಹದ ಮೇಲೆ ಬ್ರಿಟಿಷರ ಹಿಡಿತ ದೂರಾಗುವಂತೆ ಮಾಡಿದರು.  
 
ಜೂ! ಮಾರ್ಟಿನ್ ಲೂಥರ್ ಕಿಂಗ್ ಒಬ್ಬ ಪ್ರತಿಭಾವಂತ ವಾಗ್ಮಿಯಾಗಿದ್ದ. ಅವನು ಮತ್ತು ಅವನ ಅನುಯಾಯಿಗಳು ಅಮೇರಿಕದ ಆಫ್ರಿಕನ್ನರನ್ನು,  ವ್ಯವಸ್ಥೆಯ ಪ್ರತ್ಯೇಕವಾದದಮೇಲೆ ಅಹಿಂಸಾ ಪೂರ್ವಕ ಒತ್ತಡವನ್ನು ಹೇರಿ ಆರ್ಥಿಕ ಮತ್ತು ರಾಜಕೀಯ ಒತ್ತಾಸೆಯನ್ನು ಬಲಹೀನಗೊಳಿಸುವಂತೆ ರೂಪಿಸಿದರು. ಡೆನ್ಮಾರ್ಕಿನ ಭೂಗತ ಪ್ರತಿಭಟನಾ ನಾಯಕರೂ ಸಹ, ಎರಡನೇ ಮಹಾಯುಧ್ಧದ ಸಮಯದಲ್ಲಿ ಜರ್ಮನಿಯನ್ನು ತೀವ್ರವಾಗಿ ವಿರೋಧಿಸಿದರೂ ತಾವು ತೆರೆ ಮರೆಯಲ್ಲೇ ಇದ್ದರು. 
 
ಯಾವುದೇ ಆಂದೋಲನಕ್ಕೆ ನಾಯಕತ್ವವು ಬಹಳ ಮುಖ್ಯ. ಆದರೆ ಆಂದೋಲನದ ಸಾಫಲ್ಯ ನಾಯಕರ ಸಕಾರಾತ್ಮಕ ಯೋಜನೆ, ಯೋಚನೆ ಮತ್ತು ವಿವೇಕದ ಮೇಲೆ ಆಧಾರಿತವಾಗಿರುತ್ತದೆ. ಚೀನಾ ದೇಶದ, ಟಿಯಾನನ್ ಮೆನ್ ಚೌಕದ ವಿಧ್ಯಾರ್ಥಿ ಆಂದೋಲನದಲ್ಲಿ ಅದ್ಭುತ ನಾಯಕರಿದ್ದಾಗ್ಯೂ ವ್ಯವಸ್ಥೆಯೊಂದಿಗೆ ಸಮರ್ಪಕವಾಗಿ ವ್ಯವಹರಿಸದೆ ಇದ್ದದ್ದರಿಂದ ಅವರ ಆಂದೋಲನ ಕುಸಿದು ಬಿತ್ತು.  
 
20 ನೇ ಶತಮಾನದಲ್ಲಿ ದಬ್ಬಾಳಿಕೆಯಿಂದ ದೇಶವನ್ನಾಳುತ್ತಿದ್ದ ಹಲವು ಸರ್ವಾಧಿಕಾರಿಗಳನ್ನು, ಕೇವಲ ಅಹಿಂಸಾತ್ಮಕ ಚಳುವಳಿಯಿಂದಲೇ ಕಿತ್ತೊಗೆಯಲಾಯಿತು. ಜನರಲ್ ಪಿನೋಚೆಟ್ನಂಥ  ಕ್ರೂರಿ, ಕೊಲೆಗಡುಕ ಮತ್ತು ಅಮಾನವೀಯ ಸರ್ವಾಧಿಕಾರಿಯನ್ನು ಅಹಿಂಸಾತ್ಮಕ ಚಳುವಳಿಯೇ ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿತು. ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ, ಕರಿಯರ ವಸಾಹತುಗಳ ಸಭೆಗಳ ಮೇಲಿನ ನಿರ್ಭಂಧಗಳು, ಇವುಗಳನ್ನು ವಿರೋಧಿಸಿದ ಸಂಘ ಸಂಸ್ಥೆಗಳ ಸಂಚಾಲಕರ ಅಮಾನವೀಯ ಕಗ್ಗೊಲೆ ಮುಂತಾದವುಗಳನ್ನು ಅಹಿಂಸಾತ್ಮಕ ಚಳುವಳಿಯಿಂದಲೇ ವಿರೋಧಿಸಿ ಜಯ ಪಡೆದಿದ್ದು ಇಂದು ಚರಿತ್ರೆಯಲ್ಲಿ ಸೇರಿಹೋಗಿದೆ.  
 
 ಅಹಿ೦ಸೆ ಎಂಬ ವ್ಯವಸ್ಥೆ: 
ರಾಜಕೀಯ ಅಥವಾ ಸಾಮಾಜಿಕ ಬದಲಾವಣೆಯನ್ನು ತರಲು, ಅಹಿಂಸೆ ಮತ್ತು ಅಹಿಂಸಾತ್ಮಕ ಆಂದೋಲನ ರಾಜಕೀಯ ಅಥವಾ ಸಾಮಾಜಿಕ ಚಳುವಳಿಯ ತಂತ್ರವಾಗಬಹುದು. ದಬ್ಬಾಳಿಕೆಗೆ ಒಳಗಾಗುವುದು ಅಥವಾ ಆಯುಧ ಹಿಡಿದು ಯುಧ್ಧಮಾಡುವುದಕ್ಕೆ  ಪರ್ಯಾಯವಾಗಿ ಅಹಿಂಸೆ, ಅಸಹಕಾರ, ಅಹಿಂಸಾತ್ಮಕ ವಿರೋಧ ಅಥವಾ ಸಾಮಾಜಿಕ ಅವಿಧೇಯತೆಗಳನ್ನು ಕಾರ್ಯ ಸಾಧನಾ ತಂತ್ರಗಳನ್ನಾಗಿ ಉಪಯೋಗಿಸಿಕೊಳ್ಳುವುದು ಸೂಕ್ತವೆನಿಸುತ್ತದೆ. ಗಾಂಧೀಜಿ, ಮಾರ್ಟಿನ್ ಲೂಥರ್ ಕಿಂಗ್ ಮುಂತಾದವರು ಅಳವಡಿಸಿಕೊಂಡ ಅಥವಾ ಒಪ್ಪಿಕೊಂಡು ಅಪ್ಪಿಕೊಂಡ ಈ ಅಹಿಂಸಾತ್ಮಕ ಆಂದೋಲನಗಳು, ಸಮೂಹದ, ಜನಸಾಮಾನ್ಯರ ಆಂದೋಲನ ಎಂದರೆ ಅತ್ಹಿಶಯೋಕ್ತಿಯಾಗುವುದಿಲ್ಲ. 
 
ಅಹಿಂಸೆಯ ಕೇಂದ್ರ ಸಿಧ್ಧಾಂತವು ಬಹುತೇಕ, ಇಸ್ಲಾಂ, ಯಹೂದಿ ಮತ್ತು ಕ್ರೈಸ್ತ ಮತಗಳ ಮತ್ತು ಧರ್ಮಾನುವರ್ತಿ ಮತಗಳಾದ ಹಿಂದೂ, ಭೌಧ್ಧ, ಜೈನ ಮತ್ತು ಸಿಖ್ಖ ಪಂಥಗಳಲ್ಲಿ ಕಾಣಸಿಗುತ್ತವೆ. ಪ್ರಪಂಚದ ನಾನಾ ಭಾಗಗಳಲ್ಲಿ ನಡೆದ ಅಹಿಂಸಾತ್ಮಕ ಚಳುವಳಿಗಳ ನೇತಾರರು ಹತ್ತು ಹಲವಾರು ಮತಗಳಲ್ಲಿ ಲಭ್ಯವಿರುವ, ಅಹಿಂಸೆಯನ್ನು ಭೋಧಿಸುವ ಮತ್ತು ಅಹಿಂಸೆಗೆ ಒತ್ತಾಸೆಯನ್ನು ನೀಡುವ ತತ್ವಗಳನ್ನು ಆಯ್ದು ಅನುಸರಿಸಿ ತಮ್ಮ ತಮ್ಮ ಆಂದೋಲಗಳಲ್ಲಿ ಬಳಸಿಕೊಂಡಿದ್ದಾರೆ

ಅಹಿಂಸಾತ್ಮಕ ಚಳುವಳಿಗೆ ಜಯ ಹೇಗೆ ದೊರೆಯುತ್ತದೆ? 

 ಅನಾದಿಕಾಲದಿಂದ ಬಂದ  ಅಧಿಕಾರವನ್ನು ಗಳಿಸಿಕೊಳ್ಳಲು ಮತ್ತು  ಉಳಿಸಿಕೊಳ್ಳಲು ಯುಧ್ಧದ ಮೇಲಿನ ಅವಲಂಬನೆಯಿಂದ, ಅಹಿಂಸಾತ್ಮಕವಾದ ಚಳುವಳಿಗೆ  ಬದಲಾದದ್ದು ಒಂದು ಅದ್ಭುತವೇ ಸರಿ.  ಅಹಿಂಸೆಯ ಮೂಲ ತತ್ವವೇನೆಂದರೆ, ಸತ್ತಾರೂಢ ನಾಯಕರ ಅಧಿಕಾರಕ್ಕೆ ಇಡೀ ಜನಸಮೂಹದ ಅಥವಾ ಅಧಿಕ ಪ್ರತಿಶತ ಜನಸಮೂಹದ ಆಮೋದನೆ ಅಥವಾ ಒಪ್ಪಿಗೆ ಅಗತ್ಯ. ಕಾರ್ಯ ನಿರ್ವಾಹಕ ಅಧಿಕಾರಿಗಳು, ದಂಡಾಧಿಕಾರಿಗಳು, ಪೋಲಿಸ್ ಮತ್ತು ಸೈನ್ಯದ ಅಧಿಕಾರಿಗಳ ಒತ್ತಾಸೆ ಮತ್ತು ಸಹಾಯದ ಬಲದಿಂದಲೇ ನಾಯಕರು ತಮ್ಮ ಅಧಿಕಾರದ ಮೇಲೆ ಹಿಡಿತವನ್ನು ಸುಭದ್ರವಾಗಿ ಇಟ್ಟುಕೊಳ್ಳಬಹುದು. ಹಾಗಾಗಿ ಅಧಿಕಾರ ಅನ್ಯರ ಸಹಾಯ ಮತ್ತು ಒತ್ತಾಸೆಯಿಂದಲೇ ನಿರ್ವಹಿಸಲ್ಪಡುತ್ತದೆ. 
 
ಆದರೆ ಅದೇ ನಾಯಕರು ಜನವಿರೋಧಿಯಾದರೆ, ಅಧಿಕಾರ ದುರುಪಯೋಗಪಡಿಸಿಕೊಂಡರೆ, ಸಮಾಜಕ್ಕೆ ಕಂಟಕರಾದರೆ, ಅನ್ಯರ  ಸಹಕಾರ ಪಡೆದು ಅವರ ಮೇಲೆಯೇ ದಬ್ಬಾಳಿಕೆಗೆ ಉಪಯೋಗಿಸುವ ಅವರ ಅಧಿಕಾರವನ್ನು, ಅದೇ ಅನ್ಯರ ಮತ್ತು ಒಟ್ಟು ಜನಸಮೂಹದ  ಅಸಹಕಾರದಿಂದ ನಿಷ್ಕ್ರಿಯಗೊಳಿಸಬಹುದು ಅಥವಾ ಎಲ್ಲರೂ ಸಹಕಾರವನ್ನು ಹಿಂತೆಗೆದುಕೊಂಡಾಗ, ನಾಯಕರನ್ನು ಶಕ್ತಿಹೀನರನ್ನಾಗಿಸಬಹುದು. ಇದೇ ಅಹಿಂಸಾತ್ಮಕ ಚಳುವಳಿಯ ಮೂಲ ತತ್ವ.  
 
"ಸರ್ಮನ್ ಆನ್ ದಿ ಮೌಂಟ್ " ನಲ್ಲಿ  ಏಸುಕ್ರಿಸ್ತನು " ನಿನ್ನ ವಿರೋಧಿಯನ್ನು ಪ್ರೀತಿಸು" ಎನ್ನುತ್ತಾನೆ.  ಟಾಓ ನ ವೈ ಅಥವಾ ಪ್ರಯತ್ನ ರಹಿತ ಕಾರ್ಯ, ಬುಧ್ಧನ ಮೆಟ್ಟಾ ಅಥವಾ " ಎಲ್ಲ ಜೀವಿಗಳ ಪ್ರತಿ ಪ್ರೀತಿ ಅಥವಾ ಕರುಣೆ" ಜೈನ ಮತ್ತು ಹಿಂದೂ ಮತಗಳ ಕೆಲ ಭಾಗಗಳಲ್ಲಿ ಕಾಣುವ ಅಹಿಂಸಾವಾದ, ಇವೆಲ್ಲವೂ 20  ನೇ ಶತಮಾನದ ಅಹಿಂಸಾವಾದಿಗಳಿಗೆ ಪ್ರೇರಕ ಮತ್ತು ಸ್ಪೂರ್ತಿದಾಯಕವಾಗಿತ್ತು.   
 
" ಅಹಿಂಸೆಯಂದರೆ ದೈಹಿಕ ಕ್ರೌರ್ಯ ಮಾತ್ರವಲ್ಲ. ಆಂತರಿಕವಾಗಿ ಆತ್ಮವನ್ನು ಶಾ೦ತವಾಗಿಸುವುದೇ ಅಹಿಂಸೆ. ನೀನು ಬೇರೊಬ್ಬನನ್ನು ಹಿಂಸೆ ಮಾಡದೆ ಇರುವುದರ ಜೊತೆಗೆ ಅವನನ್ನು ದ್ವೇಷಿಸದೆ ಇರುವುದೇ ನಿಜವಾದ ಅಹಿಂಸೆ" ಎನ್ನುತ್ತಾನೆ ಮಾರ್ಟಿನ್ ಲೂಥರ್ ಕಿಂಗ್. 
 
ಅಹಿಂಸೆಯ ಮತ್ತು ಕ್ಷಮೆಯ ತತ್ವಗಳು ಕ್ರೈಸ್ತಮತದ ಅಡಿಪಾಯವಾಗಿ ಬೈಬಲ್ ಮತ್ತು ಖುರಾನಿನ ಕಥೆಗಳಲ್ಲೂ ಪ್ರತಿಪಾದಿಸಲ್ಪಟ್ಟಿವೆ. ಉದಾರನೀತಿಯ ಆಂದೋಲನ ಮತ್ತು ಚಟುವಟಿಕೆಗಳೂ ಸಹ ಈ ಕಥೆಗಳನ್ನು, ಇಸ್ಲಾಂ ಧರ್ಮದಲ್ಲಿ ಅಹಿಂಸಾವಾದವನ್ನು ಪ್ರತಿಪಾದಿಸಲು ಉಪಯೋಗಿಸಿಕೊಂಡಿವೆ. 
 
ಕಡೆಯದಾಗಿ ಸತ್ಯಸಂದತೆಯೇ ಅಹಿಂಸಾವಾದದ ಕೇಂದ್ರ ಬಿಂದುವಾಗಿದೆ. ಸತ್ಯ, ಹಲವಾರು ಮುಖ ಅಥವಾ ಆಯಾಮಗಳನ್ನು ಹೊಂದಿ, ಅದನ್ನು ಪೂರ್ಣವಾಗಿ ಅರಿಯಲು ಯಾರಿಂದಲೂ ಸಾಧ್ಯವಿಲ್ಲವೆಂದು, ಗಾ೦ಧೀಜಿ ಅರಿತಿದ್ದರು. ಎಲ್ಲರೂ ಸತ್ಯದ ಯಾವುದೋ ಒಂದು ಮುಖವನ್ನು ಮಾತ್ರ ಅರಿತಿರುತ್ತಾರಾದ್ದರಿಂದ, ಎಲ್ಲರ ಅಭಿಪ್ರಾಯಗಳೂ ಮುಖ್ಯವೆಂದು ಗಾಂಧಿ  ತಿಳಿದಿದ್ದರು. ವಾಸ್ತವಿಕವಾಗಿ ಬೇರೊಬ್ಬರ ಅಭಿಪ್ರಾಯವನ್ನು ಕೇಳುವುದರಿಂದಲೇ  ನಮ್ಮ ಅಭಿಪ್ರಾಯವನ್ನು ಬೇರೊಬ್ಬರು ಕೇಳುವಂತೆ ಮಾಡುತ್ತದೆ೦ಬುದು ಗಾ೦ಧಿ ವಾದ

ಅಹಿಂಸೆಯನ್ನು  ಪ್ರತಿಪಾದಿಸುವ ನಾಯಕರೆಲ್ಲರೂ ಧಾರ್ಮಿಕ ಮತ್ತು ನೈತಿಕ ಕಾರಣಗಳನ್ನು ಅವಲಂಬಿಸಿದ್ದರು. ಹಲವು ಬಾರಿ ಅದು ವ್ಯಾವಹಾರಿಕ ಮತ್ತು ಯೋಜನಾಧಾರಿತ ರಾಜಕಾರಣಗಳಿಗೆ ಅಹಿಂಸೆಯನ್ನು ಪ್ರತಿಪಾದಿಸಬಹುದು. ಕೆಲವು ಎರಡೂ ಕಾರಣಗಳನ್ನು ಉಪಯೋಗಿಸಿಕೊಂಡು ಆಂದೋಲನವನ್ನು ಮುಂದುವರೆಸಬಹುದು. 
 
ಚರಿತ್ರೆ ಸೃಷ್ಟಿಸುವಂತ  ರಾಜಕೀಯ ಮಾರ್ಪಾಡುಗಳಿಗೆ ಹಿಂಸಾತ್ಮಕ ಚಟುವಟಿಕೆಗಳೇ ಅಗತ್ಯವೆಂಬ ತಪ್ಪು ಕಲ್ಪನೆಗೆ ಚರಿತ್ರೆಕಾರರು ಮತ್ತು ಮಾಧ್ಯಮದವರೇ ಕಾರಣರೆಂದರೆ ತಪ್ಪಾಗಲಾರದು. ಹಿಂಸೆಯಿಂದಲೇ ಅಧಿಕಾರವೆನ್ನುವುದು, ಕ್ರೂರ ಸರ್ವಾಧಿಕಾರಿಗಳ ಮತ್ತು ಆಕ್ರಮಣಕಾರಿಗಳ ಸೂತ್ರವಾಗಿರಬಹುದು. ಆದರೆ ಕಳೆದ 100 ವರ್ಷಗಳಲ್ಲಿ ರಾಕ್ಷಸೀ ಪ್ರವೃತ್ತಿಯ ಸರ್ವಾಧಿಕಾರಿಗಳು ಮತ್ತು ಜಂಟಾ ನಾಯಕರೆಲ್ಲರನ್ನೂ ಅಹಿಂಸಾತ್ಮಕ ಚಳುವಳಿಯೇ ಅಧಿಕಾರರಹಿತರನ್ನಾಗಿಸಿದೆ.
 
ತಮ್ಮದೇ ರೀತಿಯಲ್ಲಿ ರೂಪಿಸಿಕೊಂಡ ಅಹಿಂಸೆ ಮತ್ತು ಅಸಹಕಾರವನ್ನೇ ಆಧಾರವಾಗಿಟ್ಟುಕೊಂಡ, ಅಹಿಂಸಾತ್ಮಕ ಚಳುವಳಿಯು ಭಾರತದ ಸ್ವಾತಂತ್ರ  ಹೋರಾಟಕ್ಕೆ ದೇಶದ ಮೂಲೆ ಮೂಲೆಗಳಿಂದ ಜನರನ್ನು ಒಗ್ಗೂಡಿಸಲು ಮತ್ತು ಇದೇ  ಜನ ಸಮೂಹವನ್ನು ಅಹಿಂಸಾತ್ಮಕ ಮತ್ತು ಅಸಹಕಾರ ಆಂದೋಲನದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಳ್ಳಲು ಪ್ರೇರೇಪಿಸಿ ಬ್ರಿಟಿಷರನ್ನು ಭಾರತದಿಂದ ಹೊರಗಟ್ಟಲು ಗಾ೦ಧೀಜಿಯವರಿಗೆ ಸಹಾಯವಾಯಿತು. ವಾಸ್ತವವಾಗಿ ಅಹಿಂಸಾತ್ಮಕ ಚಳುವಳಿಗಳು ಬಹುಕಾಲ ಶಾಂತಿಯನ್ನು ತರುವ ಪ್ರಜಾತಂತ್ರಕ್ಕೆ ನಾಂದಿಯಾಗುತ್ತವೆ. ಜನಗಳ ಆಶೋತ್ತರಗಳನ್ನು ಈಡೇರಿಸಬಲ್ಲ ಶುಧ್ಧ ಪ್ರಜಾತಂತ್ರಕ್ಕೆ ಅಡಿಪಾಯವಾಗುತ್ತವೆ.

ಸಾಮಾಜಿಕ  ಅಸಮಾನತೆ, ದಬ್ಬಾಳಿಕೆ, ತುಳಿತ, ಅನ್ಯಾಯ ಮತ್ತು ಹಿಂಸೆಯಂತಹ ಸಾಮಾಜಿಕ ಕೆಡುಕುಗಳ ವಿರುಧ್ಧ ಹೋರಾಡಲು ಗಾ೦ಧೀಜಿಯ ಅಹಿಂಸಾತ್ಮಕ ಅಸಹಕಾರ ಆಂದೋಲನವೇ ಉಪಯೋಗಿಯಾಗಿ ಸಾಮಾಜಿಕ ಬದಲಾವಣೆಯನ್ನು ತರಲು ಸಾಧ್ಯವಾಯಿತು.   

 
ಅಂದಿನ ದಿನಗಳಿಗಿಂತ ಇಂದಿನ ದಿನಗಳಲ್ಲಿ ಅಂದರೆ ಪ್ರಸಕ್ತ ಸಾಮಾಜಿಕ ಪರಿಸ್ಥಿತಿಯಲ್ಲಿ ಅಹಿಂಸಾತ್ಮಕ ಆಂದೋಲನ ಮತ್ತು ಚಳುವಳಿಗಳು ಹೆಚ್ಚು ಪ್ರಸ್ತುತ. ಬರ್ಮಾ ದೇಶದ, ನೋಬಲ್ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಸ್ಯಾನ್ ಸುಇ ಯವರು ಧೀರ್ಘಕಾಲದಿಂದಲೂ, ಸೇನಾ ಸರ್ವಾಧಿಕಾರದ ವಿರುಧ್ಧ ನಡೆಸುತ್ತಿರುವ ಅಹಿಂಸಾತ್ಮಕ ಹೋರಾಟವೇ ಇದಕ್ಕೆ ನಿದರ್ಶನ. 
 
ಇಂದು  ವಿಶ್ವದಾದ್ಯಂತ ನಿಶಸ್ತ್ರೀಕರಣ , ವಿಶ್ವ ವ್ಯಾಪಾರ ಒಪ್ಪಂದ, ಶಸ್ತ್ರ ನಿರ್ಬಂಧ, ಯುಧ್ಧ ವಿರೋಧೀ ಆಂದೋಲನ ಮತ್ತು ಶಾಂತಿಯುತ ಸಹಬಾಳ್ವೆಯಂತಹ ವಿಷಯ ವಿಧ್ಯಮಾನಗಳು, ಗಾಂಧೀಜಿಯವರ ಪ್ರೀತಿ, ಕರುಣೆ, ಪರಸ್ಪರ ನಂಬಿಕೆ, ವಿಶ್ವಾಸ, ಸತ್ಯ ಮತ್ತು ಅಹಿಂಸೆಯಂತಹ ತತ್ವಗಳ ಆಧಾರದ ಮೇಲೆ ಅವಲಂಬಿಸಿದೆ. ಹಿಂಸೆಯಿಂದ ಅಥವಾ ಯುಧ್ಧದಿಂದ ಯಾರೂ ಏನನ್ನ್ನೂ ಪಡೆಯಲಿಲ್ಲ. ಬ್ರಷ್ಟ್ರಾಚಾರ, ಜನಶಕ್ತಿಯ ದಮನ, ದಬ್ಬಾಳಿಕೆ, ಲೋಭ ಅಸಹನೆಯಂತಹ ಗುಣಗಳು ವಿನಾಶಕ್ಕೆ ಹೇತುವಾದರೆ, ಅಹಿಂಸೆ, ಸತ್ಯ ಶಾ೦ತಿ , ಸಹಬಾಳ್ವೆಯಂತಹ  ಗುಣಗಳು ಶಾಶ್ವತ ಶಾಂತಿಯನ್ನು ತರುತ್ತದೆ ಎಂಬುದು ಗಾಂಧೀಜಿಯವರ ಮತ. 
 
ಗಾಂಧೀಜಿಯವರು ಸತ್ಯ ಅಹಿಂಸೆಯಾಧಾರಿತ ಹೋರಾಟದಿಂದ ಭಾರತಕ್ಕೆ ಸ್ವಾತಂತ್ರ್ಯವನ್ನೇನೋ ತಂದು ಕೊಟ್ಟರು. ಆದರೂ ಅಂತಹ ಮಹಾತ್ಮನನ್ನು ಮನುಷ್ಯನ ಮನಸ್ಸಿನ ಹಿಂಸೆಯೇ ಬಲಿ ತೆಗೆದುಕೊಂಡಿತು.ಆದರೆ ಅಂದಿನ ಸಂಧರ್ಭಗಳಿಗಿಂತ ತೀರ ಭಿನ್ನ ಮತ್ತು ವಿರುಧ್ಧವಾಗಿರುವ ಇಂದಿನ ನಮ್ಮ ದೇಶದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿ-ಗತಿಗಳನ್ನು ಅವಲೋಕಿಸಿದರೆ ನಮಗೆ ಕಾಣುವುದೇನೆಂದರೆ ಎಲ್ಲಿ ನೋಡಿದರೂ ಅಸತ್ಯ, ಹಿಂಸೆ, ಅನಕ್ಷರತೆ, ಬಡತನ, ರಾಜಕೀಯ ವ್ಯಕ್ತಿಗಳಲ್ಲಿಮತ್ತು ಅಧಿಕಾರಶಾಹಿ ವ್ಯಕ್ತಿಗಳಲ್ಲಿ ನೀತಿಯ, ಸತ್ಯಸಂದತೆಯ ಸಂಪೂರ್ಣ ದಿವಾಳಿ, ಅತಿ ಭ್ರಷ್ಟಾಚಾರ, ಅಧಿಕಾರವನ್ನುಳಿಸಿಕೊಳ್ಳಲು ಯಾವ ಮಟ್ಟಕ್ಕಾದರೂ ಇಳಿಯಲು ಹೇಸದ ನಮ್ಮನ್ನಾಳುವ ನಾಯಕರ  ನೀಚ ಬುಧ್ಧಿ. 
ಇಂತಹ ಸಂಧರ್ಭದಲ್ಲಿ ಸಮಾಜದಲ್ಲಿ ಬದಲಾವಣೆಯನ್ನು ತರಲು ಕೇವಲ ಹಲವರ ಪ್ರಯತ್ನದಿಂದ ಸಾದ್ಯವಿಲ್ಲ. ಭೂತಾಕಾರದಲ್ಲಿ ಬೆಳೆದಿರುವ ಭ್ರಷ್ಟಾಚಾರದ ಹೆಮ್ಮರವನ್ನು ಕಡಿಯಲು ಮತ್ತು ಬೇರುಸಹಿತ ಕಿತ್ತೊಗೆಯಲು ಸಾಮೂಹಿಕ  ಚಳುವಳಿ ಮತ್ತು ಆಂದೋಲನವೇ ಸೂಕ್ತ. ಆದರೆ ಸಾಮೂಹಿಕ ಆಂದೋಲನಕ್ಕೆ ಅಹಿಂಸಾ ಮಾರ್ಗವೇ ಹೆಚ್ಚು ಸೂಕ್ತ ಮತ್ತು ಫಲಕಾರಿ.
 
ಆದರೆ ನಾವು ಒಂದು ವಿಚಾರ ಮಾಡಬೇಕಾಗಿದೆ. ಸದಾ ಕಾಲ ರಾಜಕೀಯ ನಾಯಕರು ಮತ್ತು ಅಧಿಕಾರ ಶಾಹಿ ಜನಗಳ  ಭ್ರಷ್ಟಾಚಾರವನ್ನೇ ಉಲ್ಲೇಖಿಸುತ್ತಿರುತ್ತೇವೆ. ಇಂದಿನ ಭ್ರಷ್ಟಚಾರಯುತ ಸಮಾಜದಲ್ಲಿ, ಸಾಮಾನ್ಯ ಜನರ ಪಾತ್ರವೇನು ಎಂಬುದನ್ನೂ ಸಹ ನೋಡಬೇಕಲ್ಲವೇ? ಏಕೆಂದರೆ ಕೊಡುವವರಿರುವ ತನಕ ತೆಗೆದುಕೊಳ್ಳುವವರಿರುತ್ತಾರೆ. ಆದರೆ ಕೊಡುವವರು ಏಕೆ ಕೊಡುತ್ತಾರೆ ಎಂದು ನೋಡೋಣ. 
 
ನಮ್ಮ ದೇಶದ ಕಾನೂನುಗಳು ಹೇಗಿವೆಯೆಂದರೆ ಅಥವಾ ಹೇಗೆ ರೂಪಿಸಲ್ಪಟ್ಟಿವೆ ಎಂದರೆ, ಸಾಮಾನ್ಯರಿಗೆ ಅದು ಅರ್ಥವೇ ಆಗಲಾರದು. ಯಾವ ಕಚೇರಿಗೆ ಹೋದರೂ ತೊಂದರೆ. ಆ ತೊ೦ದರೆಯಿಂದ ಮುಕ್ತರಾಗಿ ನಿಮ್ಮ ಕೆಲಸ ಸಾಧಿಸಬೇಕಾದರೆ ಮಧ್ಯವರ್ತಿಗಳ ಸಹಾಯಕ್ಕೆ ಮೊರೆ. ಅವರಿಗೆ ಹಣ. ಅಕಸ್ಮ್ಮಾತ್ ನಿಮಗೇ ಕಾನೂನು ಗೊತ್ತಿದ್ದೂ ಅರ್ಜಿ ಮತ್ತು ಅದಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳೂ ಕಾನೂನುಬಧ್ಧವಾಗಿದ್ದರೂ, ಕ್ಷುಲ್ಲಕ ಕಾರಣಗಳನ್ನೊಡ್ಡಿ ನಿಮ್ಮ ಕೆಲಸ ಆಗದಂತೆ ನೋಡಿಕೊಳ್ಳುವ ಭ್ರಷ್ಟ ಅಧಿಕಾರಶಾಹಿ. ಕಾಸು ಬಿಚ್ಚಿದರೆ ಕೆಲಸ ಆಗುತ್ತದೆ ಎಂದಾದರೆ "ಹಾಳಾಗಿ ಹೋಗಲಿ" ಎಂದು ನೀವೇ ಲಂಚ ಕೊಡಲು ಸಿಧ್ಧರಾಗುತ್ತೀರಿ. ಇದು ಅಲ್ಲಿ ಇಲ್ಲಿ ಎಂದಲ್ಲ. ಎಲ್ಲಕಡೆಯಲ್ಲೂ ನಡೆಯುವ ವಿಧ್ಯಮಾನ. ಸುಮಾರು 50 ವರ್ಷಗಳಿಂದ ಸ್ವಲ್ಪ ಸ್ವಲ್ಪವಾಗಿ ಈ ಬಗೆ ಬೆಳೆದು ಇಂದು ಹೆಮ್ಮರವಾಗಿ ನಮ್ಮ ಎಲ್ಲಾ ಪ್ರಗತಿಗೂ ಅಡ್ಡವಾಗಿ ನಿಂತಿದೆ.

" ಅಯ್ಯೋ ಈ ದೇಶ  ಭ್ರಷ್ಟಾಚಾರದಿಂದ ತುಂಬಿಹೋಗಿದೆ" ಎಂದು ಹಲುಬುವ ಸಾಮಾನ್ಯ ಜನರು ಮೊದಲು ತಮ್ಮನ್ನು ತಾವು ಸರಿಪಡಿಸಿಕೊಂಡಲ್ಲಿ ಸಮಸ್ಯೆಯ ಅರ್ಧಬಾಗ ನಿವಾರಣೆಯಾಗುತ್ತದೆ.ಎಲ್ಲರೂ " ನಾನು ಲಂಚ ಕೊಡುವುದಿಲ್ಲ"  ಎಂದು ದೃಡ ನಿರ್ಧಾರ ಮಾಡಿಕೊಳ್ಳಬೇಕು, 

ಇನ್ನರ್ಧಬಾಗ ಸರಿಪಡಿಸಲು ಸಾಮೂಹಿಕ ಆಂದೋಲನದ ಅಗತ್ಯವಿದೆ. ಆದರೆ ಸಾಮೂಹಿಕವಾದದ್ದರಿಂದ ಸತ್ಯ, ನಿಸ್ಸ್ವಾರ್ಥ  ಮತ್ತು ಅಹಿಂಸೆಯ ಅಧಾರದಮೇಲಿರಬೇಕು. ಇಲ್ಲವಾದಲ್ಲಿ ಸರ್ವನಾಶ ಖಂಡಿತ. 

ಹಾಗಾಗಿ ಇಂದಿಗೂ ಅಹಿಂಸಾತ್ಮಕ ಆಂದೋಲನ ಮತ್ತು ಚಳುವಳಿಗಳೇ ಹೆಚ್ಚು ಪ್ರಸ್ತುತ ಮತ್ತು ಸೂಕ್ತ. ಅಹಿಂಸಾತ್ಮಕ ಚಳುವಳಿಯಿಂದ ಸಾಮಾಜದ ಕೊಳೆಯನ್ನು ತೊಳೆಯಲು ಖಂಡಿತ ಸಾಧ್ಯ.
ರವಿ ತಿರುಮಲೈ
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
PARTHASARATHY N
11 years ago

ಹೌದು ರವಿತಿರುಮಲೈ ರವರೆ 
 
ಅಹಿಂಸಾತ್ಮಕ ಚಳುವಳಿಯಿಂದ ಸಾಮಾಜದ ಕೊಳೆಯನ್ನು ತೊಳೆಯಲು ಖಂಡಿತ ಸಾಧ್ಯ.
 

Utham Danihalli
11 years ago

Gurugalle chenagidhe nimma lekana
Shubhavagali

2
0
Would love your thoughts, please comment.x
()
x