ಗಾಂಧಿ: ನಾ.ಧನಪಾಲ

ಮೂಲ: ತೆಲುಗು ಕತೆ

ಲೇಖಕರು: ಸಲೀಂ,

ಕನ್ನಡಕ್ಕೆ: ನಾ. ಧನಪಾಲ

ಪ್ರಮುಖ ಸಾಪ್ತಾಹಿಕದಲ್ಲಿ ಗಾಂಧಿ ಬರೆದ ಲೇಖನವನ್ನು ಓದಿ ಮುಗಿಸಿದೊಡನೆ ಕಣ್ಣುಗಳು ಒದ್ದೆಯಾದವು.  ಅರಣ್ಯವನ್ನು ನಂಬಿಕೊಂಡು ಬದುಕುತ್ತಿರುವ ಬುಡಕಟ್ಟಿನವರ ಏಳು ಬೀಳುಗಳನ್ನು ಎಷ್ಟು ಚೆನ್ನಾಗಿ ಬರೆದಿದ್ದನೋ ?  ಬಹಳ ಹೃದ್ಯವಾಗಿ. . . !  ಮನಸ್ಸನ್ನು ಕಲಕುವಂತಿದೆ. ಹಾಗೆ ಬರೆಯಲು ಗಾಂಧಿಯಂತಹ ಮಾನವತಾವಾದಿಗೆ ಮಾತ್ರವೇ ಸಾಧ್ಯ. 

ಗಾಂಧಿ ತಾನು ನಂಬಿರುವ ತನ್ನ ಸಿದ್ಧಾಂತಗಳಿಗಾಗಿ ಪ್ರಾಣಾರ್ಪಣೆಗಾದರೂ ಸಿದ್ಧನಿರುವ ಧೀಮಂತ ವ್ಯಕ್ತಿ.  ಕರ್ನಾಟಕದಲ್ಲಿ ಆತನಿಗೆ ಬಹಳ ಅಭಿಮಾನಿಗಳಿದ್ದಾರೆ.  

ಮಾನವತೆಯನ್ನು ಸಾರುವ ಆತನ ಕಥೆಗಳಿಗಾಗಿ, ನಿಜವನ್ನು ನಿರ್ಭಯವಾಗಿ ಬಿಚ್ಚಿಡುವ ಆತನ ಅಂಕಣಗಳಿಗಾಗಿ ಕಾತುರದಿಂದ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಕಾಯುತ್ತಿರುತ್ತಾರೆ. ನಾನೂ ಸಹ ಆತನ ವೀರಾಭಿಮಾನಿಯೇ.  ಆತನು ನನಗೆ ಸ್ವತಃ ಅಣ್ಣನಾಗಿರುವುದು ನನ್ನ ಮಹಾದೃಷ್ಟ. . .  ಹೆಮ್ಮೆ. . 

ಗಾಂಧಿ ನನಗಿಂತ ಎರಡು ವರ್ಷ ಹಿರಿಯನು.  ಆತ ಚಿಕ್ಕಂದಿನಲ್ಲೇ ತುಂಬಾ ಹಿರಿತನದಿಂದ ನಡೆದುಕೊಳ್ಳುತ್ತಿದ್ದನೆಂದು ಅಮ್ಮ ಹೇಳುತ್ತಿದ್ದಳು. ’ಇಷ್ಟು ಚಿಕ್ಕ ವಯಸ್ಸಿಗೆ ಎಷ್ಟು ದೊಡ್ಡ ಮನಸ್ಸು !’ ಎಂದು ಅಜ್ಜಿ ಹೆಮ್ಮೆಪಟ್ಟರೆ, ’ಗೇಣುದ್ದ ಇಲ್ಲ ಇವನಿಗೆ ಯಾಕೆ ಈ ಅನವಶ್ಯಕವಾದ ವಿಷಯಗಳೆಲ್ಲಾ ?’  ಎಂದು ಬಂಧುವರ್ಗ ಕಿವಿಗಳು ಕಚ್ಚಿಕೊಳ್ಳುತ್ತಿದ್ದರಂತೆ.  

ಭಿಕ್ಷುಕರನ್ನು, ಬಡವರನ್ನು ನೋಡಿ ’ಅವರೇಕೆ ಹಾಗೆ ಇದ್ದಾರೆ. . . ?  ನಮ್ಮಂತೆ ಯಾಕೆ ಇಲ್ಲ. . . ?  ನಮಗೂ ಅವರಿಗೂ ಯಾಕಿಷ್ಟು ವ್ಯತ್ಯಾಸ. . . ?  ಇದಕ್ಕೆ ಯಾರು ಕಾರಣ. . . ?’ ಎಂದು ಅಪ್ಪನನ್ನು ಆಗಾಗ ಪ್ರಶ್ನಿಸುತ್ತಿದ್ದನಂತೆ.

ನಾನು ಆರನೇಯ ತರಗತಿಯಲ್ಲಿ ಇರುವಾಗ ನಡೆದ ಘಟನೆ ಚೆನ್ನಾಗಿ ನೆನಪಿದೆ.  

ಸ್ಕೂಲು ಬಿಟ್ಟ ಮೇಲೆ ಮಕ್ಕಳೆಲ್ಲಾ ಕೂಗಾಡುತ್ತಾ ಹೊರಗೆ ಬಂದೆವು.  ರಸ್ತೆಯ ಪಕ್ಕದಲ್ಲಿದ್ದ ಮರದ ಕೆಳಗೆ ಹುಚ್ಚಿಯೊಬ್ಬಳು ನಿಂತಿದ್ದಳು.  ಹಲವು ಕಡೆ ಹರಿದು ಹೋಗಿರುವ ಬಟ್ಟೆಯನ್ನು ಸೀರೆಯಂತೆ ಸುತ್ತಿಕೊಂಡು, ಚಲ್ಲಾಪಿಲ್ಲಿಯಾದ ತಲೆಗೂದಲನ್ನು ಬೆರಳುಗಳಿಂದ ಕೆದರುತ್ತಾ ದೈನ್ಯಕ್ಕೆ ಪ್ರತಿರೂಪದಂತೆ ಆಕೆ ನಿಂತಿದ್ದಳು.  ಮಕ್ಕಳು ಕೆಲವರು ಆಕೆಯನ್ನು ಗೇಲಿ ಮಾಡುತ್ತಾ ಕೆಣಕಲಾರಂಭಿಸಿದರು.  ಆಕೆ ಕೋಪದಿಂದ ಬೈಯುತ್ತಾ ಹೊಡೆಯಲು ಹಿಂದೆ ಬಿದ್ದರೆ ಓಡಿ ಹೋಗುವುದು. . .  ಪುನಃ ಹಿಂದೆ ಬಂದು ಆಕೆಯನ್ನು ಅಳಿಸುತ್ತಿದ್ದರು. . .  ಆಕೆ ಕಲ್ಲು ತೆಗೆದುಕೊಂಡು ಬೀಸಿದಳು.  ಅಷ್ಟೇ.  ಮಕ್ಕಳೂ ಸಹ ಆಕೆಯ ಮೇಲೆ ಕಲ್ಲು ತೂರಿದರು.  ಕಲ್ಲುಗಳು ತಗುಲಿ ಆಕೆಗೆ ಮೈಯೆಲ್ಲಾ ಗಾಯಗಳಾಗಿ ರಕ್ತತೊಟ್ಟಿಕ್ಕಲಾರಂಭಿಸಿತು. . .  ಮಕ್ಕಳು ಕರುಣೆಯಿಲ್ಲದೆ ಇನ್ನು ಗುರಿ ನೋಡಿ ಕಲ್ಲುಗಳನ್ನು ಬೀಸಿ ವಿಕೃತ ಆನಂದವನ್ನು ಪಡುತ್ತಿದ್ದರು. 

ಅದನ್ನು ನೋಡಿದ ಗಾಂಧಿ ’ನಿಲ್ಲಿಸಿರೋ’ ಎಂದು ಗಟ್ಟಿಯಾಗಿ ಹೂಂಕರಿಸಿದನು.  ಮಕ್ಕಳೊಂದಿಗೆ ಜಗಳ ಮಾಡಿ ಅವರ ಕೈಗಳಲ್ಲಿದ್ದ ಕಲ್ಲುಗಳನ್ನು ಕಿತ್ತುಕೊಂಡನು.  

ಆಕೆ ಹುಚ್ಚಿ. ಅಂತಹವರನ್ನು ದಯೆಯಿಂದ ನೋಡಬೇಕಂತ ನಿಮಗೆ ಗೊತ್ತಿಲ್ಲವೆ. . . ?  ನಿಮಗೂ ಹುಚ್ಚಿದ್ದರೆ ಆಕೆಯ ಮೇಲೆ ಕಲ್ಲುಗಳು ಬೀಸಿ ಎಂದನು. 

ಕಲ್ಲು ತೂರುತ್ತಿದ್ದ ಮಕ್ಕಳು ಸುಮ್ಮನಾದರು. ಗಾಂಧಿಯ ಉಗ್ರ ಸ್ವರೂಪ ನೋಡಿದ ಮೇಲೆ ನನಗೊಂದು ವಿಷಯ ಅರ್ಥವಾಯಿತು.  ನಮ್ಮ ಅಣ್ಣ ನಾವು ಪುಸ್ತಕಗಳಲ್ಲಿ ಓದಿಕೊಂಡ ಗಾಂಧಿ ಮಹಾತ್ಮನಂತೆ ಸಹನೆ, ಶಾಂತಿ ಎನ್ನುವಂತಹವನಲ್ಲವೆಂದು. . .  ಅಗತ್ಯವಾದರೆ ಆ ರುದ್ರನಂತೆ ಪ್ರತಿಭಟಿಸುತ್ತಾನೆಂದು. . . !

ಮನೆಗೆ ಬಂದ ಮೇಲೆ ನಡೆದ ವಿಷಯ ಅಪ್ಪನಿಗೆ ಹೇಳಿದರೆ ಕಳವಳಗೊಂಡು ಮಕ್ಕಳೇನೋ ಮಾಡಿದರೆ ನಿನಗೇನೋ ?  ನಿನ್ನಷ್ಟಕ್ಕೆ ನೀನು ಸುಮ್ಮನೆ ಮನೆಗೆ ಬರಬಹುದಲ್ಲಾ. . . ಅವರೊಂದಿಗೆ ಜಗಳ ನಿನಗೇಕೆ ? ಎಂದು ಗದರಿಸಿದರು.

ಹಾಗೆಂದರೆ ಹೇಗಪ್ಪಾ. . . !  ಅನ್ಯಾಯವಾಗಿ ಆ ಹುಚ್ಚಿಯನ್ನು ಮಕ್ಕಳು ಹೊಡೆಯುತ್ತಿದ್ದರೆ ನೋಡುತ್ತಾ ಸುಮ್ಮನಿರಬೇಕೇ. . . ?  ನನಗೇನು ಸಂಬಂಧವಿಲ್ಲದಂತೆ ತಲೆ ತಗ್ಗಿಸಿಕೊಂಡು ಮನೆಗೆ ಬರಬೇಕೇ. . . ?  ಹಾಗೆ ಇರುವುದು ನನ್ನಿಂದಾಗುವುದಿಲ್ಲ, ಕಣ್ಣೆದುರು ನಡೆಯುವ ಅನ್ಯಾಯವನ್ನು ನೋಡುತ್ತಾ ಸಹಿಸಲಾರೆ ಎಂದ ಅಣ್ಣನ ಕಣ್ಣುಗಳು ಕೆಂಪಾಗಿದ್ದವು.

ಮಕ್ಕಳು ನಾಲ್ಕೈದು ಮಂದಿ ಸೇರಿ ನಿನ್ನ ಮೇಲೆ ತಿರುಗಿಬಿದ್ದಿದ್ದರೆ ಏನು ಮಾಡುತ್ತಿದ್ದೆ. . . ?  ನನ್ನ ನೋವೆಲ್ಲಾ ನಿನ್ನ ಬಗ್ಗೆಯೇ.  ನಿನಗೆ ಏನಾದರೂ ಆದರೆ ನಾನು ಭರಿಸಲಾರೆ ಎಂದು ಅಣ್ಣನ ತಲೆ ಸವರಿದರು.

ನನಗೇನೋ ಅಪಾಯವಾಗುವುದೆಂದು ಹೇಡಿಯಂತೆ ನಡೆಯುತ್ತಿರುವ ಘೋರವನ್ನು ಎದುರಿಸದೆ ಓಡಿಹೋಗಬೇಕೇ ? ಎಂದು ಅಪ್ಪನ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಿದನು.

ಹತ್ತನೇಯ ತರಗತಿಯಲ್ಲಿಯಿದ್ದಾಗಲೇ ನನ್ನೊಂದಿಗೆ ಜೀವನ ಅಮೂಲ್ಯವಾದದ್ದು ಗೊತ್ತಾ. . . ?  ಅದರಲ್ಲೂ ಮಾನವ ಜನ್ಮ ಬಹಳ ಶ್ರೇಷ್ಠವಾದದ್ದು.  ಅದನ್ನು ಸಾರ್ಥಕಪಡಿಸಿಕೊಳ್ಳುವುದೇ ಮನುಷ್ಯನ ಕರ್ತವ್ಯ ಎಂದ ಅಣ್ಣ ಗಾಂಧಿಯ ಮಾತಗಳು ನೆನ್ನೆ ಮೊನ್ನೆ ಕೇಳಿದಂತಿದೆ. 

ಪಿಯುಸಿ ಓದುತ್ತಿದ್ದಾಗ ಜೀವನದ ಮೌಲ್ಯ ನಾವು ಹೇಗೆ ಜೀವಿಸುತ್ತಿದ್ದೇವೆ, ಯಾಕೆ ಜೀವಿಸುತ್ತಿದ್ದೇವೆ, ಯಾರಿಗಾಗಿ ಜೀವಿಸುತ್ತಿದ್ದೇವೆ ಎಂಬುವುದರ ಮೇಲೆ ಆಧಾರವಾಗಿರುತ್ತದೆ.  ನನಗೆ ಈ ಅಸಂಖ್ಯಾತ ಬಡವರ ಅಭಿವೃದ್ಧಿಗಾಗಿ ಶ್ರಮಿಸಬೇಕೆಂಬ ಗುರಿಯಿದೆ.  ಈ ದೇಶವನ್ನು ಕ್ಯಾನ್ಸರ್ ಮಹಾಮ್ಮಾರಿಯಂತೆ ಪೀಡಿಸುತ್ತಿರುವ ಅರಾಜಕತೆ, ಭ್ರಷ್ಟಚಾರದ ವಿರುದ್ಧವಾಗಿ ಹೋರಾಡಬೇಕೆಂಬ ಮಹತ್ವಾಕಾಂಕ್ಷೆ ಇದೆ ಎಂದಾಗ, ಅಣ್ಣ ಮುಂದೆ ನಾವೆಲ್ಲಾ ಗೌರವಿಸುವಂತಹ ಸಾಧಕನಾಗುತ್ತಾನೆಂದು ಗುರುತಿಸಿದೆ.

* * * *

ನಾನು ಡಿಗ್ರಿ ಮುಗಿದ ಮೇಲೆ ಬಿಜಿನೆಸ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಿ ರಿಯಲ್ ಎಸ್ಟೇಟ್ ಬಿಜಿನೆಸ್ ಶುರುಮಾಡಿದೆ.  ಹಂತ ಹಂತವಾಗಿ ಏರುತ್ತಾ ಚೆನ್ನಾಗಿ ಸಂಪಾದಿಸಿದೆ.  ಅಣ್ಣ ಮಾತ್ರ ಡಿಗ್ರಿ ಮಾಡಿ ನಮ್ಮ ಊರಿನಲ್ಲೇ ಟೀಚರ್ ಉದ್ಯೋಗಕ್ಕೆ ಸೇರಿದ.  

ದೊಡ್ಡ ಮಗ ಪ್ರಯೋಜಕನಾಗಲಿಲ್ಲವೆಂದು ಕೊರಗುವ ಅಪ್ಪನಿಗೆ ನನ್ನ ಆಲೋಚನೆಗಳು, ಆಶಯಗಳನ್ನು ಹತ್ತುಮಂದಿಗೆ ಹಂಚಿಕೊಳ್ಳಲು ಅವಕಾಶವಿರುವ ಉದ್ಯೋಗ ಇದು.  ವಿದ್ಯಾರ್ಥಿಗಳು ಭಾವಿ ಭಾರತದ ಪ್ರಜೆಗಳು.  ಅವರನ್ನು ಮಾನವತೆಯುಳ್ಳ ವ್ಯಕ್ತಿಗಳನ್ನಾಗಿ ನಿರ್ಮಿಸುವ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡುತ್ತಿದ್ದೇನೆ.  ದೊಡ್ಡ ದೊಡ್ಡ ಉದ್ಯೋಗಗಳನ್ನು ಮಾಡಿ ಹಣ ಮಾಡುವ ಕೋರಿಕೆ ನನಗಿಲ್ಲ.  ನನಗೆ ತೃಪ್ತಿ ಕೊಡುವ ವೃತ್ತಿಯನ್ನು ಮಾಡಲು ಬಿಡಿ ಎಂದನು.

ಅಣ್ಣ ನಾನು ಕಂಡ ಅಪರೂಪದ ರಿಯಲ್ ಹೀರೋ.  ಅಣ್ಣನ ಅಂಕಣ ಓದಿದಾಗಿನಿಂದ ಅವರನ್ನು ಭೇಟಿಯಾಗಬೇಕೆನಿಸಿದರೂ ವ್ಯಾಪಾರದ ಲೇವಾದೇವಿಗಳಲ್ಲಿ ಬಿಡುವು ಸಿಗಲಿಲ್ಲ.  

ಈ ದಿನ ಭಾನುವಾರ.  ನಾವು ಮದುವೆ ಮಾಡಿಕೊಂಡು ಬೇರೆ ಬೇರೆಯಾಗಿಯಿದ್ದರೂ ವಾರಕ್ಕೊಂದು ಸಾರಿಯಾದರೂ ಅಣ್ಣನನ್ನು ಭೇಟಿಯಾಗಿ ಮಾತನಾಡಿಸದಿದ್ದರೆ ಏನೋ ಕಳೆದುಕೊಂಡ ಭಾವ ಕಾಡುತ್ತದೆ.

ಅಣ್ಣನ ಮನೆಗೆ ಹೊರಡುತ್ತಿದ್ದಾಗ ನನ್ನ ಎರಡನೇಯ ಮಗಳು ಅಪ್ಪಾ.  ಈ ಪ್ರಶ್ನೆಗೆ ಉತ್ತರ ಹೇಳು ಎಂದಳು. 

ಅವಳು ಈಗ ಬ್ಯಾಂಕು ಉದ್ಯೋಗದ ಅರ್ಹತಾ ಪರೀಕ್ಷೆಗಳನ್ನು ಬರೆಯುತ್ತಿದ್ದಾಳೆ.  ಅದರಲ್ಲಿ ಟೆಸ್ಟ್ ಆಫ್ ರೀಜನಿಂಗ್ ಕೂಡ ಇರುತ್ತದೆಯಂತೆ.  ಪ್ರಶ್ನೆ ಅದಕ್ಕೆ ಸಂಬಂಧಿಸಿದ್ದೇ –  ”ವಕೀಲರು ಕಪ್ಪು ಕೋಟು ಹಾಕಿಕೊಳ್ಳುತ್ತಾರೆ.  ವೈದ್ಯರು ಬಿಳಿ ಕೋಟು ಹಾಕಿಕೊಳ್ಳುತ್ತಾರೆ.  ಆದ್ದರಿಂದ ಕಪ್ಪು ಕೋಟು ಹಾಕಿಕೊಂಡವರೆಲ್ಲಾ ವಕೀಲರು, ಬಿಳಿಕೋಟು ಹಾಕಿಕೊಂಡವರೆಲ್ಲಾ ವೈದ್ಯರು ಎನ್ನುವುದು ಸರಿಯೋ ? ತಪ್ಪೋ ?” ಎಂಬ ದ್ವಂದ್ವ ಪ್ರಶ್ನೆ.

ಇಂತಹ ಪ್ರಶ್ನೆಗಳು ಬಹಳ ಗೊಂದಲಮಯವಾಗಿವೆ. . . ಅಪ್ಪಾ.  ಈ ರೀತಿಯ ಯಾವ ಪ್ರಶ್ನೆಯನ್ನು ಓದಿದರೂ ಸರಿಯೇನೋ ಅನಿಸುತ್ತದೆ ಎಂದಳು ನಾಚಿಕೊಳ್ಳತ್ತಾ.

ಜೀವನದಲ್ಲೂ ಇದೇ ರೀತಿಯ ಸಂದರ್ಭಗಳು ಬಹಳ ಎದುರಾಗುತ್ತವೆ.  ವಿಚಕ್ಷಣೆಯಿಂದ ಆಲೋಚಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಹೇಳಿ ಕಾರಿನಲ್ಲಿ ಕುಳಿತೆ.

ಹೋಗುವಷ್ಟರಲ್ಲಿ ಎಂದಿನಂತೆ ಅಣ್ಣನ ಸುತ್ತಲೂ ಹತ್ತು ಮಂದಿ ಕುಳಿತು ಶ್ರದ್ಧೆಯಿಂದ ಕೇಳುತ್ತಿದ್ದಾರೆ.  ಅವರೆಲ್ಲಾ ಅಣ್ಣನ ಅನುಯಾಯಿಗಳು.  ಆತನು ಹಮ್ಮಿಕೊಳ್ಳುವ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಚುರುಕಾಗಿ ಭಾಗವಹಿಸುವ ಕಾರ್ಯಕರ್‍ತರು.  ನಾನೂ ಅವರೊಂದಿಗೆ ಕುಳಿತೆ.

ಪರಿಸರ ಮಾಲಿನ್ಯವನ್ನು ತಡೆಯುವ ಜವಾಬ್ದಾರಿ ನಮ್ಮ ಮೇಲೆ ಇದೆ.  ಇಂದು ವಿಶ್ವ ಭೂಮಿಯ ದಿನ.  ಪ್ಲಾಸ್ಟಿಕ್ ಬಳಕೆಯನ್ನು ನಿಷೇದಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು.  ನಮ್ಮ ಭೂಮಿಯನ್ನು ಜಲ, ವಾಯು ಮಾಲಿನ್ಯದಿಂದ ಕಾಪಾಡಿಕೊಳ್ಳಬೇಕು.  ಹಸಿರು ಮನೆ ಪರಿಣಾಮದಿಂದ ರಕ್ಷಿಸಿಕೊಳ್ಳದಿದ್ದರೆ ನಮ್ಮ ಮುಂದಿನ ಪೀಳಿಗೆಗೆ ನಾವು ಕೊಡುವುದು ಹಸಿರಿನ ಸೊಬಗಿನಿಂದ ಸಮೃದ್ಧವಾದ ನೆಲವನ್ನಲ್ಲ; ಕೆಂಪಾಗಿ ಧಗಧಗಾ ಉರಿಯುವ ಅಗ್ನಿಗೋಳವನ್ನು.  ಆದ್ದರಿಂದ ನಾವು ಇಂದಿನಿಂದಲೇ ಪರಿಸರ ಸಂರಕ್ಷಣೆಯ ಅಂಗವಾಗಿ ನಮ್ಮ ಸುತ್ತ ಮುತ್ತಲೂ ಸಸಿಗಳನ್ನು ನೆಡೋಣ.  ಗಿಡ ಮರಗಳನ್ನು ಬೆಳೆಸಬೇಕಾದ ಅಗತ್ಯವನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಹೇಳೋಣ ಎಂದು ಮನಮುಟ್ಟುವಂತೆ ಹೇಳಿದನು.

ಕಾರ್ಯಕರ್ತರು ಹೊರಟುಹೋದ ಮೇಲೆ ನಾವು ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾತಿಗಿಳಿದಾಗ ವೇಶ್ಯೆಯರ ಬದುಕಿನಲ್ಲಿ ಬದಲಾವಣೆ ತರಬೇಕೆಂದು ಆರು ತಿಂಗಳ ಹಿಂದೆ ಹೋರಾಟ ಆರಂಭಿಸಿದೆವಲ್ಲಾ, ಏನಾಯಿತಣ್ಣಾ ? ಎಂದೆ.

ದಯಮಾಡಿ ಅವರನ್ನು ಆ ಹೆಸರಿನಿಂದ ಕರೆದು ಅವಮಾನಿಸಬೇಡ.  ತಮ್ಮ ತನು ಮನ ಆರೋಗ್ಯಗಳನ್ನು ಪಣವಾಗಿಟ್ಟು ನಾನಾ ಸಂಕಟಗಳನ್ನು ಅನುಭವಿಸುತ್ತಿದ್ದರೆ ಈ ಪೊಲೀಸಿನವರು ದಾಳಿಗಳು ನಡೆಸಿ ಸುಲಿಗೆ ಮಾಡುವುದು ಘೋರವಾದ ಅನ್ಯಾಯವಲ್ಲವೇ. . . ?  ಹಫ್ತಾ ತೆಗೆದುಕೊಳ್ಳುವುದು ಅಮಾನುಷವಲ್ಲವೇ. . . ?  ಮೊನ್ನೆ ಟಿವಿಯಲ್ಲಿ ಒಂದು ಹುಡುಗಿಯ ಸಂದರ್ಶನವಿತ್ತು ನೋಡಿದೆಯಾ. . . ?  ಪೊಲೀಸರು ಹಫ್ತಾ ತೆಗೆದುಕೊಳ್ಳುವುದಲ್ಲದೆ ಅವರ ದೇಹಗಳೊಂದಿಗೆ ಉಚಿತವಾಗಿ ಚಕ್ಕಂದವಾಡುತ್ತಾರಂತೆ.  ಪೊಲೀಸರಿಗೆ ತಿರುಗಿ ಬಿದ್ದರೆ ಯಾವುದೋ ಒಂದು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಜೈಲಿಗೆ ನೂಕುತ್ತೇವೆಂದು ಬೆದರಿಸುತ್ತಾರಂತೆ. . .  ಹೊಟ್ಟೆ ಪಾಡಿಗಾಗಿ ವಿಧಿಯಿಲ್ಲದೆ ಕೀಳು ವೃತ್ತಿ ಮಾಡಿ  ಸಂಪಾದಿಸಿದ ದುಡ್ಡನ್ನು ಸುಲಿಗೆ ಮಾಡುವುದು ಮಹಾಪರಾಧವಲ್ಲವೇ. . . ?  ಆದ್ದರಿಂದ ಅವರ ಪರವಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇನೆ.  

ಆ ವೃತ್ತಿಯಲ್ಲಿನ ಸ್ತ್ರೀಯರನ್ನು ಪೊಲೀಸಿನವರು ಬಂಧಿಸಬಾರದೆಂದು, ಅದನ್ನು ಅಪರಾಧವೆಂದು ಪರಿಗಣಿಸಬಾರದೆಂದು ನ್ಯಾಯಾಲಯದಲ್ಲಿ ಮೊರೆಯಿಟ್ಟಿದ್ದೇನೆ. ತಪ್ಪು ಅವರದ್ದಲ್ಲ; ಬಡತನದ್ದು, ಹಸಿವಿನದ್ದು, ಅಸಮಾನತೆಯದ್ದು.  ಅಪರಾಧವೆಂದುಕೊಳ್ಳುತ್ತಿರುವುದರ ಮೂಲವನ್ನು ಪ್ರಕ್ಷಾಳನೆ ಮಾಡದೆ ಹೊರಗೆ ಕಾಣುವುದನ್ನು ಅಪರಾಧವೆಂದು ಸಾರಿ ಶಿಕ್ಷಿಸುವುದು ಶೋಚನೀಯ ಸಂಗತಿಯಲ್ಲವೇ. . .?  ಈ ವಿಷಯವನ್ನು ನೀನು ನೆನಪು ಮಾಡಿದ್ದು ಒಳ್ಳೆಯದಾಯಿತು.  ನಾಳೆ ವಕೀಲರನ್ನು ಭೇಟಿಯಾಗಿ ದಾವೆಯ ಪ್ರಗತಿಯನ್ನು ತಿಳಿದುಕೊಳ್ಳಬೇಕು ಎಂದನು.

* * * *

ಅಣ್ಣ ಹತ್ತನೇಯ ತರಗತಿಯಲ್ಲಿ ಇದ್ದಾಗ ಜಗದೀಶ್ ಮೇಷ್ಟ್ರ ಜೊತೆ ವಾದ ಮಾಡಿದ್ದು ನೆನೆಪಾಯಿತು.  ತನ್ನ ಸಹಪಾಠಿ ಸಿದ್ಧೇಶ ಜ್ಯಾಮೆಟ್ರಿ ಬಾಕ್ಸ್ ತರಲಿಲ್ಲವೆಂದು ಮೇಷ್ಟ್ರು ಹೊಡೆದರಂತೆ. ಸಿದ್ಧೇಶ ತುಟಿ ಬಿಚ್ಚದೆ ಒದೆಗಳು ತಿನ್ನುತ್ತಿದ್ದಾಗ ಅಣ್ಣ ಎದ್ದು ನಿಂತು ಮೇಷ್ಟ್ರನ್ನು ತರಾಟೆಗೆ ತೆಗೆದುಕೊಂಡನಂತೆ.  ಆ ವಿಷಯ ನೆನಪಿಸಿದೊಡನೆ ಅಣ್ಣನ ಮುಖದಲ್ಲಿ ಕಿರುನಗೆ ಮೂಡಿತು.

ಅಣ್ಣ ನಗುವುದು ತುಂಬಾ ಅಪರೂಪ.  ಯಾವಾಗಲೂ ಒಮ್ಮೊಮ್ಮೆ ನಗುತ್ತಾನೆ.  ಅದೇ ವಿಷಯವನ್ನು ಒಂದು ಸಾರಿ ಕೇಳಿದಾಗ ನಾವು ಬದುಕುತ್ತಿರುವ ಸಮಾಜದಲ್ಲಿ ಪರಿಸ್ಥಿತಿಗಳು ಇಷ್ಟು ಭಯಂಕರವಾಗಿರುವಾಗ ನಗು ಹೇಗೆ ಬರುತ್ತದೆ ?  ಸ್ವಾರ್ಥ ರಾಜಕಾರಣಿಗಳ ಕೈಗಳಲ್ಲಿ ಪ್ರಜಾಪ್ರಭುತ್ವ ಉಸಿರು ಗಟ್ಟಿ ನಿತ್ಯ ನಲುಗುತ್ತಿದ್ದರೆ, ನಮ್ಮ ಜೀವನಗಳು ನಗೆಪಾಟಲುಗೀಡಾಗುತ್ತಿದ್ದರೆ ನೋಡಿ ಅಳು ಬರುತ್ತದೆಯೇ ಹೊರತು ನಗು ಹೇಗೆ ಬರುತ್ತದೆ ? ಎಂದು ಪ್ರಶ್ನಿಸಿದ.

ಜಗದೀಶ್ ಮೇಷ್ಟ್ರು ಒಳ್ಳೆಯವರೇ.  ಆದರೆ ಆ ದಿನ ಅವರು ಮಾಡಿದ್ದು ತಪ್ಪು.  ಜ್ಯಾಮೆಟ್ರಿ ಬಾಕ್ಸ್ ತೆಗೆದುಕೊಳ್ಳಲು ದುಡ್ಡಿಲ್ಲದಿದ್ದರೆ ಸಿದ್ಧೇಶನ ತಪ್ಪೇನಿದೆ ಹೇಳು. . . ?  ನಿನಗೆ ಗೊತ್ತಲ್ಲಾ ಸಿದ್ಧೇಶನವರ ಅಪ್ಪ ಕೂಲಿ ಮಾಡುವವರು. . .  ಬರುವ ಪುಡಿಗಾಸಿನ್ನು ಕುಡಿದು ಹಾಳುಮಾಡುತ್ತಾರೆ ಮೇಷ್ಟ್ರಗೆ ನಾನದನ್ನೇ ಹೇಳಿದ್ದು.  ಅವರಪ್ಪನನ್ನು ಕರೆದು ಯಾಕೆ ಕುಡಿಯುತ್ತಿದ್ದೀರಾ ಎಂದು ಹೊಡೆಯಲು ಹೇಳಿದೆ.  ಅವರ ಬಡತನವನ್ನು ಬೆತ್ತದಿಂದ ಬಿಗಿಯಲು ಹೇಳಿದೆ.  ಸಿದ್ಧೇಶನನ್ನು ಹೊಡೆದರೆ ಏನು ಪ್ರಯೋಜನವಿರುವುದಿಲ್ಲ ಮತ್ತು ಅದರ ಪರಿಣಾಮ ಕೆಟ್ಟದಾಗಿರುತ್ತದೆ.  ಹೇಗೂ ಅವರಪ್ಪಾ ಜ್ಯಾಮೆಟ್ರಿ ಬಾಕ್ಸ್‌ಗೆ ಹಣ ಕೊಡುವುದಿಲ್ಲ.  ಮೇಷ್ಟ್ರು ಹೊಡೆಯುತ್ತಾರೆಂದು ಅವನು ಸ್ಕೂಲಿಗೆ ಬರುವುದಿಲ್ಲ.  ಶಿಕ್ಷಣವೇ ಸರ್ವಶಕ್ತಿ.  ಅವನಿಗೆ ವಿದ್ಯಾಭ್ಯಾಸ ಅತ್ಯಗತ್ಯ.  ಶಿಕ್ಷಣದಿಂದ ಅವನನ್ನು ದೂರ ಮಾಡುವ ಅಧಿಕಾರ ಮೇಷ್ಟ್ರಿಗೆ ಎಲ್ಲಿದೆ ? ಎಂದನು.

ಮೇಷ್ಟ್ರು ನಿನ್ನನ್ನು ಹೊಡೆಯುವುದಕ್ಕೆ ಬಂದರಂತಲ್ಲಾ ? ಎಂದು ಅಣ್ಣನ ಕಡೆಗೆ ನೋಡುತ್ತಾ ಕೇಳಿದೆ. 

ಗೇಣುದ್ದ ಇಲ್ಲ.  ನನಗೆ ಉಪದೇಶ ಮಾಡುತ್ತಿಯೇನೋ ? ಎಂದು ಸಿದ್ಧೇಶನನ್ನು ಬಿಟ್ಟು ನನ್ನನ್ನು ಹೊಡೆಯಲು ಬಂದರು.  ನಾನು ಕೈಗಳನ್ನು ಕಟ್ಟಿಕೊಂಡು, ’ನಿಮ್ಮ ಕೋಪ ಹೋಗೋ ತನಕ ಹೊಡೆಯಿರಿ.  ಸುಮ್ಮನಿರುತ್ತೇನೆ.  ಆದರೆ ನಾನು ಹೇಳಿದ್ದು ಸರಿಯೋ ? ಅಲ್ಲವೋ  ?  ಒಂದು ಸಾರಿ ಆಲೋಚಿಸಿ.  ನಿಮಗೆ ದಯಾಗುಣವಿದ್ದರೆ ನೀವೇ ಒಂದು ಜ್ಯಾಮೆಟ್ರಿ ಬಾಕ್ಸ್ ತೆಗೆದು ಕೊಡಿ.  ಇಲ್ಲ ಅಂದರೆ ನಾವೆಲ್ಲಾ ಸೇರಿ ಅವನಿಗೆ ಜ್ಯಾಮೆಟ್ರಿ ಬಾಕ್ಸ್ ಕೊಂಡು ಕೊಡುತ್ತೇವೆ.  ಅವನ ಸಮಸ್ಯೆಗೆ ಪರಿಷ್ಕಾರ ತೋರಿಸದೆ ಹೊಡೆದರೆ ಅವನೇನು ಮಾಡುತ್ತಾನೆ ಸಾರ್. . . ?  ಅವನು ಅವರಪ್ಪನ ಜೊತೆ ಜಗಳ ಮಾಡಲಾರ.  ಜಗಳವಾಡಿದರೂ ಅಪ್ಪನ ಕೈಯಲ್ಲಿ ಒದೆಗಳು ತಿನ್ನುವುದು ಬಿಟ್ಟರೆ ಬೇರೇನು ಲಾಭವಿರುವುದಿಲ್ಲ ಸಾರ್. . . ನಾನು ನಿಮಗಿಂತ ತುಂಬಾ ಚಿಕ್ಕವನು.  ನಿಜವೇ ಸಾರ್. . .  ಆದರೆ ನಿಜವನ್ನು ಹೇಳುವುದಕ್ಕೂ ವಯಸ್ಸಿಗೂ ಸಂಬಂಧವೇನು ?  ಎಂದು ಕೇಳಿದೆ.  

ನನ್ನನ್ನು ನುಂಗುವಂತೆ ನೋಡಿ ಏನೆಂದುಕೊಂಡರೋ ಏನೋ ?  ಹೊಡೆಯದೆಯೇ ಹೊರಟುಹೋದರು  ಎಂದ ಅಣ್ಣನ ಮಾತುಗಳಲ್ಲಿ ಮದ್ಯಪಾನದ ನಿರ್ಮೂಲನೆ,  ಬಡತನ ನಿವಾರಣೆಗಾಗಿ ಹೋರಾಡಬೇಕೆಂಬ ಛಲವನ್ನು ಕಂಡೆ.

    ಮಾರನೇ ದಿನ ಜಗದೀಶ್ ಮೇಷ್ಟ್ರು ಸಿದ್ಧೇಶನಿಗೆ ಜ್ಯಾಮೆಟ್ರಿ ಬಾಕ್ಸ್ ತಂದುಕೊಟ್ಟರಲ್ಲಾ ಎಂದು ಹತ್ತನೇಯ ತರಗತಿಯಲ್ಲಿ ನಡೆದ ಘಟನೆ ಕಣ್ಣಿಗೆ ಕಟ್ಟಿದಂತೆ ಮನಸ್ಸಿನಲ್ಲಿ ಮುದ್ರೆಗೊಂಡಿರುವುದನ್ನು ಮೆಲಕು ಹಾಕಿದೆ.

    ಹೌದು, ಹೇಳಿದೆನಲ್ಲಾ.  ಮನುಷ್ಯರಾಗಿ ಆ ಮೇಷ್ಟ್ರು ಒಳ್ಳೆಯವರೇ.  ಆದರೆ ಆವೇಶದಲ್ಲಿ ಹಾಗೆ ವರ್ತಿಸಿದರು.  ಆವೇಶದಿಂದ ಅನರ್ಥಗಳು ಸಂಭವಿಸುತ್ತವೆ.  ಆದ್ದರಿಂದ ಅಂತಹ ಸಮಯದಲ್ಲಿ ಒಂದು ಸರಿಯಾದ ಮಾತು, ಸೂಕ್ತವಾದ ಸಲಹೆ ಮನುಷ್ಯನನ್ನು ಮತ್ತೆ ಒಳ್ಳೆಯ ಮಾರ್ಗದಲ್ಲಿ ನಡೆಸುತ್ತದೆ ಎಂದಾಗ ಸಂಜೆ ಆರು ಗಂಟೆಯಾಗಿತ್ತು.

ಅಣ್ಣನಿಂದ ಬೀಳ್ಕೊಡುವಾಗ ನಾಳೆ ಅತ್ತಿಗೆ ಮಕ್ಕಳನ್ನು ಕರೆದುಕೊಂಡು ನಮ್ಮ ಮನೆಗೆ ಊಟಕ್ಕೆ ಬಾ.  ನೀವು ಬಂದು ಬಹಳ ದಿನಗಳಾಗಿವೆಂದು, ಲಕ್ಷ್ಮಿ ನಿಮ್ಮನ್ನೆಲ್ಲಾ ತಪ್ಪದೇ ಬರಹೇಳಿದಳು ಎಂದೆ.

ನಾಳೆ ಬಿಡುವಿಲ್ಲ.  ಕೆಲಸದ ಮೇಲೆ ಬಾಗೇಪಲ್ಲಿಗೆ ಹೋಗುತ್ತಿದ್ದೇನೆ.  ಅಲ್ಲಿನ ನೀರಿನ ಕೊರತೆ, ಫೋರೈಡ್‌ನ ಸಮಸ್ಯೆ, ರೈತರ ಬವಣೆಗಳನ್ನು ಪ್ರತ್ಯಕ್ಷವಾಗಿ ಅಧ್ಯಯನ ಮಾಡಿ ಒಂದು ಲೇಖನ ಬರೆಯಬೇಕೆಂದಿದ್ದೇನೆ. ಬುಧವಾರ ವಾಪಸ್ಸು ಬರುತ್ತೇನೆ.  ಆಗ ಖಂಡಿತ ಎಲ್ಲರೂ ಒಟ್ಟಿಗೆ ಬರುತ್ತೇವೆಂದು ಲಕ್ಷ್ಮಿಗೆ ಹೇಳು ಎಂದು ನನ್ನ ಕಾರಿನವರೆಗೆ ಬಂದು ಬೀಳ್ಕೊಟ್ಟನು.

* * * *

ಗುರುವಾರ ಬೆಳಿಗ್ಗೆ ಎಂಟು ಗಂಟೆಗಳು. . .  ಕರೆ ಗಂಟೆಯ ಶಬ್ದವಾಯಿತು.   ಹೋಗಿ ಬಾಗಿಲು ತೆಗೆದರೆ  ಅತ್ತಿಗೆ ಕಂಡಳು.

ಬನ್ನಿ ಅತ್ತಿಗೆ. . .  ಅಣ್ಣ ಎಲ್ಲಿ, ಬರಲಿಲ್ಲವೇ ?  ಎಂದು ಗೇಟಿನ ಕಡೆಗೆ ನೋಡಿದೆ.  ಅಣ್ಣನ ಜಾಡಿಲ್ಲ.

ಅವರು ನೆನ್ನೆಯೇ ಬರಬೇಕಾಗಿತ್ತು.  ಇವತ್ತು ಕೂಡ ಬರದಿದ್ದಾಗ ಕಂಗಲಾಗಿ ನಿಮ್ಮ ಮನೆಗೆ ಬಂದೆ ಎಂದ ಆಕೆಯ ಕಂಗಳಂಚಿನ ಕಂಬನಿ ಜಾರಲು ಸಿದ್ಧವಾಗಿದ್ದವು.  

ಆಕೆಯ ಮುಖದಲ್ಲಿ ಭಯ. . .  ಸಂಶಯಗಳನ್ನು ಗುರುತಿಸಿದೆ. . .  ರಾತ್ರಿಯೆಲ್ಲಾ ನಿದ್ದೆ ಮಾಡಿದಂತಿಲ್ಲ, ಮುಖ ಸೊರಗಿತ್ತು.

    ಮಾಮೂಲಿನೇ ಅಲ್ಲವೇ ಅತ್ತಿಗೆ.  ಹೀಗೆ ಎಷ್ಟು ಸಾರಿ ಆಗಿಲ್ಲ ?  ಎರಡು ದಿನಗಳೆಂದು ಹೋಗಿ ವಾರವಾದ ಮೇಲೆ ಬಂದದ್ದು. . .  ಅಣ್ಣನ ಸ್ವಭಾವ ನಿಮಗೆ ತಿಳಿಯದ್ದೇನಲ್ಲಾ ?  ಇಷ್ಟಕ್ಕೆಲ್ಲಾ ಕಂಗಲಾದರೆ ಹೇಗೆ ?  ಎಂದು ಧೈರ್ಯವೇಳಿದೆ.

    ಆಕೆ ಸೋಫಾದಲ್ಲಿ ನೀರಸವಾಗಿ ಕುಳಿತರು.  

ನಿಜವೇ.  ಹೀಗೆ ಬಹಳ ಸಾರಿ ನಡೆದಿದೆ.  ಆದರೆ ಎಂದೂ ತಮ್ಮ ಮೊಬೈಲನ್ನು ದಿನವಿಡೀ ಸ್ವಿಚಾಫ್ ಮಾಡಿರಲಿಲ್ಲ.  ನೆನ್ನೆ ಬೆಳಿಗ್ಗೆ ಫೋನ್ ಮಾಡಿದ್ದರು.  ಕೆಲಸ ಮುಗಿದಿದೆ ಸಾಯಂಕಾಲ ಬರುತ್ತೆದ್ದೇನೆಂದರು.  ಆಮೇಲೆ ನಾನೆಷ್ಟು ಸಾರಿ ಫೋನ್ ಮಾಡಿದರೂ ಸ್ವಿಚಾಫ್ ಎಂದು ಬಂತು.  ಈ ರೀತಿ ಎಂದೂ ಆಗಿಲ್ಲ.  ನನ್ನ ಮನಸ್ಸು ಏನೋ ಕೇಡನ್ನು ಶಂಕಿಸುತ್ತಿದೆ ಎಂದಳು ಸೀರೆಯ ಸೆರಗಿನಿಂದ ಕಣ್ಣೀರೊರೆಸಿಕೊಳ್ಳುತ್ತಾ.

    ಎಷ್ಟೋ ಕಾರಣಗಳಿಂದ ಹಾಗೆ ಆಗಿರಬಹುದಲ್ಲಾ ಅತ್ತಿಗೆ, ಮೊಬೈಲ್ ಕಳೆದು ಹೋಯಿತೇನೋ. . . ?  ಕೆಟ್ಟು ಹೋಯಿತೆನೋ. . . ?  ಅಥವಾ ಚಾರ್ಜ್ ಖಾಲಿಯಾಯಿತೇನೋ. . . ?  ನೀನು ಅನವಶ್ಯವಾಗಿ ಭಯಪಡಬೇಡ.  ನಾಳೆ ಬಂದು ಬಿಡುತ್ತಾನೆ ನೋಡು. . . ಎಂದು ಅತ್ತಿಗೆಯನ್ನು ಸಾಂತ್ವನಿಸಲು ಯತ್ನಿಸಿದೆ.

    ಹಾಗೇನಾದರೂ ಆಗಿದ್ದರೆ ಅವರು ಲ್ಯಾಂಡ್‌ಲೈನ್‌ನಿಂದಾದರೂ ಫೋನ್ ಮಾಡುತ್ತಿದ್ದರು.  ತಾವು ಎಲ್ಲಿದ್ದರೂ ಎಂತಹ ಪರಿಸ್ಥಿತಿಯಲ್ಲಿದ್ದರೂ ಸಹ ದಿನಕ್ಕೆ ಕನಿಷ್ಠ ಎರಡು ಮೂರು ಸಾರಿ ಫೋನ್ ಮಾಡದೆ ಇರುವುದಿಲ್ಲ.  ಅವರು ಫೋನ್ ಮಾಡದಿದ್ದರೆ ಕಂಗಾಲಾಗುತ್ತೇನೆಂದು ಅವರಿಗೆ ಚೆನ್ನಾಗಿ ಗೊತ್ತು ಎಂದರು.

ನನ್ನ ಮೊಬೈಲ್‌ನಿಂದ ಎರಡು ಸಾರಿ ಪ್ರಯತ್ನ ಮಾಡಿದೆ. ’ನೀವೀಗ ಕರೆ ಮಾಡುತ್ತಿರುವ ಸಂಖ್ಯೆ ವ್ಯಾಪ್ತಿ ಪ್ರದೇಶದಿಂದ ಹೊರಗಿದೆ’ ಎಂದು ಬಂತು.

    ಬಾಗೇಪಲ್ಲಿಯಲ್ಲಿ ನನಗೆ ತಿಳಿದವರಿದ್ದಾರೆ ಅತ್ತಿಗೆ.  ಅವರಿಗೆ ಫೋನ್ ಮಾಡಿ ಕೇಳುತ್ತೇನೆ.  ನೀನು ಚಿಂತೆ ಮಾಡಬೇಡ ಎಂದು ಅತ್ತಿಗೆಯನ್ನು ಮನೆಯ ಹತ್ತಿರ ಬಿಟ್ಟು ಧೈರ್ಯ ಹೇಳಿ ಬಂದೆ. 

ನನ್ನ ಪ್ರಯತ್ನಗಳಿಂದೇನೂ ಪ್ರಯೋಜನವಾಗಲಿಲ್ಲ.

ಮಾರನೇಯ ದಿನ ಅತ್ತಿಗೆಯಿಂದ ಫೋನ್ ಬಂತು.  

ಬೇಗ ಬಾ ಎಂದು. . . !  ಅತ್ತಿಗೆಯ ಅಳು ಸ್ಪಷ್ಟವಾಗಿ ಕೇಳಿಸಿತು.  ವಿಷಯವೇನೋ ಹೇಳದೆಯೇ. . . ಫೋನ್ ಇಟ್ಟುಬಿಟ್ಟರು.

ಕ್ಷಣ ಕೂಡ ತಡಮಾಡದೆ ಕೂಡಲೇ ಹೊರಟೆ.  ನನ್ನನ್ನು ನೋಡಿದೊಡನೆಯೇ ಅತ್ತಿಗೆ ಜೋರಾಗಿ ಅಳುತ್ತಾ ನಿಮ್ಮ ಅಣ್ಣನನ್ನು ಕೊಲೆ ಮಾಡಿದ್ದಾರೆ. . . !  ಪೊಲೀಸರೇ ಸುಟ್ಟು ಕೊಲೆ ಮಾಡಿದ್ದಾರೆ ಎಂದಳು.

ಅಣ್ಣನನ್ನು ಪೊಲೀಸರು ಕೊಲೆ ಮಾಡುವುದೇ. . . ?  ಅತ್ತಿಗೆ ಏನು ಹೇಳುತ್ತಿದ್ದೀರಾ. . . ? ಎಂದು ತಡಬಡಿಸುತ್ತಿರುವಾಗ ಅಂದಿನ ಪತ್ರಿಕೆಗಳಲ್ಲಿ ಬಂದ ದೊಡ್ಡ ದೊಡ್ಡ ಅಕ್ಷರಗಳ ದುರ್ವಾರ್ತೆಯನ್ನು ನನಗೆ ತೋರಿಸಿದಳು.

ವೆಂಕಟಮ್ಮನ ಹಳ್ಳಿಯ ನಿರ್ಜನ ಹೊರವಲಯದಲ್ಲಿ ನೆನ್ನೆ ತಡರಾತ್ರಿ ನಡೆದ ನಕ್ಸಲರ ನಿಗ್ರಹ ದಳದ ಕಾರ್ಯಾಚರಣೆಯಲ್ಲಿ ಗಾಂಧಿ ಎಂಬ ನಕ್ಸಲ್ ಮುಖಂಡನ ಸಾವು

ಆ ವಾರ್ತೆಯನ್ನು ಓದಿ ಮೈಯೆಲ್ಲಾ ಬೇವತು ಒದ್ದೆಯಾಯಿತು.  ಗಂಟಲು ಒಣಗಿ ಹೋಯಿತು. ಶರೀರ ಸ್ವಲ್ಪ ಹೊತ್ತು ನಿಷ್ಕ್ರಿಯವಾಯಿತು.  ಆ ಆಘಾತದಿಂದ ತೇರ್ಗಡೆಯಾಗಲು ಹತ್ತು ನಿಮಿಷಗಳು ಬೇಕಾದವು.  ನಂತರ ಮೆದುಳು ಸರಿಯಾಗಿ ಕೆಲಸ ಮಾಡಲಾರಂಭಿಸಿತು.  ಸುಮ್ಮನೆ ಹೇಗೆ ಭಯಪಟ್ಟೆನೆಂದು ತಿಳಿದು ನಗು ಬಂತು.

    ಅನವಶ್ಯವಾಗಿ ನೀನು ಭಯಪಟ್ಟು ನನ್ನನ್ನೂ ಭಯಪಡಿಸಿದೆಯಲ್ಲಾ ಅತ್ತಿಗೆ. . .  ಆ ವಾರ್ತೆಯಲ್ಲಿರುವ ಗಾಂಧಿ ನಮ್ಮ ಗಾಂಧಿಯಲ್ಲ,  ನಕ್ಸಲರಲ್ಲಿ ಗಾಂಧಿ ಎಂಬ ಹೆಸರಿರುವ ನಕ್ಸ್‌ಲೈಟ್  ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.  ಅಷ್ಟೇ. . .

ಇಲ್ಲ ನನಗೇನೋ ಅನುಮಾನ ಬರುತ್ತಿದೆ. . .  ನಿಮ್ಮ ಅಣ್ಣನನ್ನು ಎಳೆದುಕೊಂಡ ಹೋಗಿ ನಕ್ಸಲ್ ಪಟ್ಟಕಟ್ಟಿ ಅಪರಾತ್ರಿ ಊರಾಚೆ ಕೊಲೆಮಾಡಿದರೇನೋ ಎಂದು ಕುಸಿದು ಬಿದ್ದರು.

ಅದಕ್ಕೆ ಅವಕಾಶವೇ ಇಲ್ಲ.  ಯಾವ ಆಧಾರವು ಇಲ್ಲದೆ ಅಣ್ಣನನ್ನು ನಕ್ಸಲೈಟ್ ಎಂದು ಹೇಗೆ ನಿರ್ಧರಿಸುತ್ತಾರೆ ?  ಹಾಗೊಮ್ಮೆ ಅಪ್ಪಿತಪ್ಪಿ  ನಕ್ಸಲ್ ಎಂದು ಅನುಮಾನಿಸಿದರೂ ಖಚಿತ ಸಾಕ್ಷ್ಯಾಧಾರಗಳಿಲ್ಲದೆ ಅಣ್ಣನ ಮೇಲೆ ಹೇಗೆ ಗುಂಡು ಹಾರಿಸುತ್ತಾರೆ ?  ನೀವು ಹೇಳುವುದು ಸಮಂಜಸವಾಗಿಲ್ಲ ಅತ್ತಿಗೆ. . .  ನನ್ನ ಮಾತು ನಂಬಿ.  ಅಣ್ಣ ಎಲ್ಲಿದ್ದರೂ ಕ್ಷೇಮವಾಗಿರುತ್ತಾರೆ.  ನಿನಗೆ ಫೋನ್ ಮಾಡಲು ಬಿಡುವಿಲ್ಲದಿರಬಹುದು.  ಅಷ್ಟೇ  ಎಂದು ಅತ್ತಿಗೆಯನ್ನು ಕುರ್ಚಿಯಲ್ಲಿ ಕೂರಿಸುತ್ತಾ ಹೇಳಿದೆ.

ಇಷ್ಟೆಲ್ಲಾ ಸಮಾಧಾನ ಮಾಡಿದರೂ ಸಹ ಅತ್ತಿಗೆ ಸುಮ್ಮನಾಗಲಿಲ್ಲ.  ಬಿಕ್ಕಿ ಬಿಕ್ಕಿ ಅಳುತ್ತಾ ಇಲ್ಲ ನನಗೆ ಯಾಕೋ ಸಂಶಯ, ನಮ್ಮವರಿಗೆ ಏನೋ ಆಗಿದೆಯೆಂಬ ಅಳುಕು ಎಂದು ಗೋಗರೆದರು.

ನಾವು ಒಂದು ಸಾರಿ ಬಾಗೇಪಲ್ಲಿಗೆ ಹೋಗೋಣ ಎಂದು ತಕ್ಷಣ ಮೇಲೆದ್ದರು.

ಹೆಣ್ಣಾಗಿ, ಹೆಂಡತಿಯಾಗಿ ತನ್ನ ಗಂಡನಿಗಾಗಿ ವಿಲಪಿಸುತ್ತಿರುವ ಆಕೆಯ ನೋವು, ತಳಮಳವನ್ನು ಅರ್ಥಮಾಡಿಕೊಂಡು ಸರಿ ಅತ್ತಿಗೆ. . .  ಈಗಲೇ ಕಾರಿನಲ್ಲೇ ಹೋಗೋಣ ಎಂದು ಹೊರ ನಡೆದೆ.

ಬಾಗೇಪಲ್ಲಿಗೆ ತಲುಪಿದೊಡನೇ ಪೊಲೀಸ್ ಠಾಣೆಯಲ್ಲಿ  ವಿಚಾರಿಸಿದೆವು.  ಶವಾಗಾರದಲ್ಲಿಟ್ಟಿದ್ದ  ಶವವನ್ನು ತೋರಿಸಿದರು.  ಶವ ಅಣ್ಣನದೇ. . . !!!  

ನಿಂತ ನೆಲವೇ ಕುಸಿದಂತಾಯಿತು ! 

ಅತ್ತಿಗೆ, ನಾನು ಶವದ ಮೇಲೆ ಬಿದ್ದು ಎಷ್ಟು ಅತ್ತರೂ ದುಃಖ ತೀರುತ್ತಿಲ್ಲ.  

ಈ ದುಃಖ, ಸಂಕಟ ಎಂದಾದರೂ ತೀರುವಂತಹದ್ದೇ ?  

ಅಣ್ಣನನ್ನು ನಕ್ಸಲೈಟ್ ಎಂದು ಹೇಗೆ ಭಾವಿಸಿದರು ?  ಯಾರಿಗೂ ಕೇಡು ಬಯಸದೆ ಅಣ್ಣನನ್ನು ಹೇಗೆ ಸಾಯಿಸಿದರು ?  ದೀನ ದುರ್ಬಲರಿಗಾಗಿ ನಿಸ್ವಾರ್ಥವಾಗಿ ಶ್ರಮಿಸಿದ ಅಣ್ಣನನ್ನು ಅನ್ಯಾಯವಾಗಿ ಪೊಲೀಸರು ಕೊಂದು ಬಿಟ್ಟರಲ್ಲಾ. . . !  ಇರುವೆಗೂ ಹಾನಿ ಮಾಡದ ಅಣ್ಣನನ್ನು ಅಮಾನುಷವಾಗಿ ಹತ್ಯೆಗೈದಿದ್ದಾರಲ್ಲಾ. . . !  

ಸ್ವಲ್ಪ ಸಮಯದ ನಂತರ ಮಾನವ ಹಕ್ಕುಗಳ ಸಂಘದವರು ಪೊಲೀಸರ ಕ್ರೌರ್ಯ ನಶಿಸಬೇಕೆಂದು ನಿನಾದಗಳನ್ನು ಮಾಡುತ್ತಿರುವುದು ಕೇಳಿಸಿತು.  ಒಬ್ಬ ಅಮಾಯಕನಿಗೆ ನಕ್ಸಲೈಟ್ ಪಟ್ಟಕಟ್ಟಿ ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆಂದು ಪೊಲೀಸರ ವಿರುದ್ಧ ಪ್ರತಿಭಟನಾಕಾರರು ’ಧಿಕ್ಕಾರ. . . ಧಿಕ್ಕಾರ. . . ಪೊಲೀಸರ ನಕಲಿ ಎನ್‌ಕೌಂಟರ್‌ಗೆ ಧಿಕ್ಕಾರ. . . ಎಂದು ತೀವ್ರವಾಗಿ ಘೋಷಣೆ ಮಾಡುತ್ತಿದ್ದಾರೆ.  

ಗಾಂಧಿ ನಕ್ಸಲೈಟ್ ಎನ್ನುವುದಕ್ಕೆ ತಮ್ಮಲ್ಲಿ ನಿಖರವಾದ ಸಾಕ್ಷ್ಯಾಧಾರಗಳಿವೆಂದು ಪೊಲೀಸರು ಸಮರ್ತಿಕೊಳ್ಳುತ್ತಿದ್ದಾರೆ.

ಪತ್ರಿಕೆಯವರು, ಟೀವಿ ಮಾಧ್ಯಮದವರು ಅತ್ತಿಗೆಯನ್ನು ಮುತ್ತಿಕೊಂಡು ಪ್ರಶ್ನೆಗಳ ಮಳೆಗರೆಯುತ್ತಿದ್ದಾರೆ.  

ನನ್ನ ಗಂಡ ನಕ್ಸಲೈಟ್ ಅಲ್ಲ.  ಮಾನವತಾವಾದಿ.  ಸಾಮಾಜಿಕ ಹೋರಾಟಗಾರ.  ಸಮಾಜವನ್ನು ತನ್ನಿಂದ ಸಾಧ್ಯವಾದಷ್ಟು ಪರಿವರ್ತಿಸಬೇಕೆಂದು ಜೀವಿಸಿದ ಕಟ್ಟಾಳು, ಕರ್ಮಜೀವಿ.  ಬಡವರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದ ಶ್ರಾಮಿಕ.  ನನ್ನ ಗಂಡನನ್ನು ಅನ್ಯಾಯವಾಗಿ ಹತ್ಯೆಗೈಯಲಾಗಿದೆ ಎಂದು ಅಕ್ರೋಶದಿಂದ ಕೂಗುತ್ತಾ, ಮಧ್ಯ ಮಧ್ಯದಲ್ಲಿ ಕಣ್ಣೊರೆಸಿಕೊಳ್ಳುತ್ತಿದ್ದಾರೆ.  

ಆತನ ಹೆಗಲಿನಲ್ಲಿದ್ದ ಚೀಲದಲ್ಲಿ ಕ್ರಾಂತಿ ಸಾಹಿತ್ಯದ ಕೃತಿಗಳು ಸಿಕ್ಕಿವೆ.  ಆತನು ನಕ್ಸಲೈಟ್ ಅಲ್ಲದೆ ಬೇರೇನು ?  ಈ ಫೋಟೋದಲ್ಲಿ ಶವ ಪಕ್ಕದಲ್ಲಿ ಬಿದ್ದಿರುವ ರಿವಲ್ವಾರ್ ಆತನದೇ.  ನಾವು ನಡೆಸಿದ ಕಾರ್‍ಯಾಚರಣೆಯ ವೇಳೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಸತ್ತುಹೋದನು.  ಮಾಧ್ಯಮಗಳು ಉದ್ದೇಶಪೂರ್ವಕವಾಗಿಯೇ ರಾದ್ಧಾಂತವನ್ನು ಮಾಡುತ್ತಿವೆ ಎಂದು ಪೊಲೀಸರು ಗಟ್ಟಿಯಾಗಿ ವಾದಿಸುತ್ತಿದ್ದಾರೆ.

ನಾನು ಇವರನ್ನು ಬಿಡುವುದಿಲ್ಲ.  ನ್ಯಾಯಾಲಯಕ್ಕೆ ಎಳೆಯುತ್ತೇನೆ.  ನನ್ನ ಗಂಡ ನಕ್ಸಲೈಟ್ ಅಲ್ಲವೆಂದು ನಿರೂಪಿಸುತ್ತೇನೆ.  ನನ್ನ ಗಂಡನ ಸಾವಿಗೆ ಕಾರಣರಾದವರಿಗೆ ಗಲ್ಲು ಶಿಕ್ಷೆಯಾಗುವವರಿಗೂ ಹೋರಾಡುತ್ತೇನೆ  ಎಂದು ಎಲ್ಲರೆದುರು ಅತ್ತಿಗೆ ಶಪಥಗೈದರು.

* * * *

ಒಂದು ಸಾರಿ ನಕ್ಸಲ್ ಉದ್ಯಮದ ಬಗ್ಗೆ ಅಣ್ಣ ಹಾಗೂ ನನ್ನ ನಡುವೆ ಜರುಗಿದ ಚರ್ಚೆ ನನಗೆ  ನೆನಪಾಗುತ್ತಿದೆ.

ನಕ್ಸಲೈಟ್‌ಗಳು ಲ್ಯಾಂಡ್ ಮೈನ್ಸ್‌ಗಳನ್ನು ಬಳಸಿ ಪೊಲೀಸರ ವ್ಯಾನನ್ನು ಧ್ವಂಸ ಮಾಡಿದ ದುಷ್ಕೃತ್ಯದಲ್ಲ್ಲಿ ಇಪ್ಪತ್ತೈದು ಮಂದಿ ಪೊಲೀಸ್ ಪೇದೆಗಳು ಬಲಿಯಾಗಿದ್ದರು.  ಆ ದಿನ ಅಣ್ಣನನ್ನು ನೋಡಿ ಬರೋಣವೆಂದು ಅವರ ಮನೆಗೆ ಹೋದೆ.  

ಅಣ್ಣನ ಸುತ್ತಲೂ ಒಂದು ಡಜನ್ ಮಂದಿ ಕುಳಿತ್ತಿದ್ದಾರೆ.  ಚರ್ಚೆ ಲ್ಯಾಂಡ್‌ಮೈನ್ಸ್ ಸ್ಫೋಟದಲ್ಲಿ ಸತ್ತುಹೋದವರ ಕುಟುಂಬದವರ ಕುರಿತು ಸಾಗುತ್ತಿತ್ತು.

ನಾನು ಕಾಲೇಜಿಗೆ ಸೇರಿದ ಹೊಸದರಲ್ಲಿ ನಕ್ಸಲ್ ಹೋರಾಟವನ್ನು ಕುರಿತು ಕೇಳುತ್ತಿದ್ದಾಗ ನನ್ನ ನರನಾಡಿಯಲ್ಲಿ ಮಿಂಚಿನ ಸಂಚಾರವಾಗುತ್ತಿತ್ತು.  ನಕ್ಸಲೀಸಂ ಎಂದರೆ ದಬ್ಬಾಳಿಕೆಗಳನ್ನು ಮಾಡುವ ಭೂಸ್ವಾಮಿಗಳನ್ನು, ಪಾಳೇಗಾರನನ್ನು, ಬಡವರ ರಕ್ತ ಹೀರುವ ದಗಾಕೋರರನ್ನು ನಾಶ ಮಾಡುವುದೆಂಬ ಊಹಾಲೋಚನೆಗಳು ತುಂಬಾ ರೋಚಕವಾಗಿರುತ್ತಿತ್ತು.  ಸಮಸಮಾಜ, ನವಸಮಾಜ ಕಣ್ಣೋಟದ ದೂರದಲ್ಲಿ ಕಂಗಳಿಗೆ ರಂಗುರಂಗಿನ ಕಾಂತಿಯಂತೆ ಕಾಣುತ್ತಿತ್ತು.  ಆದರೆ ಆ ಕನಸುಗಳೆಲ್ಲಾ ಕೇವಲ ಕನಸುಗಳಾಗಿಯೇ ಉಳಿದುಹೋದವು.  ಹೋರಾಟದ ಹಾದಿ ತಪ್ಪಿತು ಎಂದು ಅಣ್ಣ ಗಾಂಧಿ ವಿಷಾದದಿಂದ ಹೇಳಿದ.

ನಕ್ಸ್‌ಲೈಟ್‌ಗಳು ಅಡವಿಗಳಲ್ಲಿ, ಬೆಟ್ಟಗಳಲ್ಲಿ ದುರ್ಬಭರವಾದ ಜೀವನವನ್ನು ನಡೆಸುತ್ತಾ ಹೋರಾಡುತ್ತಿರುವುದು ನಮಗಾಗಿಯೇ ಅಲ್ಲವೇ ಅಣ್ಣಾ ಎಂದೆ.

ನಿಜವೇ.  ಆದರೆ ಅಂಚೆ ಕಛೇರಿಗಳನ್ನು, ರೈಲು ಹಳಿಗಳನ್ನು ಧ್ವಂಸಗೊಳಿಸುವುದರಿಂದ ನಷ್ಟ ಹೋಗುವುದು ಶ್ರೀಸಾಮಾನ್ಯರೆಂಬ ವಿಷಯವನ್ನು ಯಾಕೆ ವಿಸ್ಮರಿಸುತ್ತಿದ್ದಾರೆ ? ಅವುಗಳನ್ನು ಪುನರ್ನಿರ್ಮಿಸಲು ಆಗುವ ಖರ್ಚು ವೆಚ್ಚಗಳನ್ನು ನಾವೇ ಅಲ್ಲವೇ ತೆರಿಗೆಯ ರೂಪದಲ್ಲಿ ಭರಿಸಬೇಕಿರುವುದು. . .  ಪೊಲೀಸ್ ಪೇದೆಗಳನ್ನು ಸಾಯಿಸುವುದರಿಂದ ಏನು ಸಾಧಿಸಬೇಕೆಂದುಕೊಳ್ಳುತ್ತಿದ್ದಾರೆ ?  ಅಮಾಯಕ ಪೊಲೀಸಿನವರಿಗೆ ಮೇಲಾಧಿಕಾರಿಗಳ ಆಜ್ಞಾನುಸಾರವಾಗಿ ನಡೆದುಕೊಳ್ಳುವುದನ್ನು ಬಿಟ್ಟರೆ ಸ್ವಂತ ವ್ಯಕ್ತಿತ್ವ, ಸ್ವಂತ ಆಲೋಚನೆ ಇರುವುದಿಲ್ಲವೆಂದು ಇವರಿಗೆ ತಿಳಿಯದೆ. . . ?  ಅನಾಥರಾದ ಅವರ ಮಕ್ಕಳ ಗತಿಯೇನು ?  ವಿಧವೆಯರಾದ ಆ ಸ್ತ್ರೀಯರು ಏನು ಪಾಪ ಮಾಡಿದರೆಂದು ಈ ಶಿಕ್ಷೆ ?   ಸರ್ಕಾರ ಅನುಸರಿಸುತ್ತಿರುವ ವಿಧಾನವೇ ತಪ್ಪು.  ಗ್ರೀನ್ ಹಂಟ್ ಹೆಸರಿನಲ್ಲಿ ಮಾಡುತ್ತಿರುವುದು ನರಮೇಧವಲ್ಲದೇ ಬೇರೇನು ?’ ಎಂದು ವ್ಯಾಕುಲನಾದನು. 

ದುಷ್ಟರನ್ನು ಸಾಯಿಸಿದರೂ. . .  ನ್ಯಾಯಶಾಸ್ತ್ರಗಳ ಪ್ರಕಾರ ಅದು ಅಪರಾಧವೇ.  ಆದರೂ ಸಮಾಜದಲ್ಲಿನ ಬಹುಸಂಖ್ಯಾತರು ಅದನ್ನು ಸಂತೋಷಿಸುತ್ತಾರೆ.  ಆದರೆ ಅಮಾಯಕರನ್ನು ಕೊಂದರೆ. . .  ಅದರಲ್ಲೂ ಒಳ್ಳೆಯವರನ್ನು, ಸಮಾಜಕ್ಕೆ ಒಳಿತು ಮಾಡಲು ಹೊರಟವರನ್ನು ಕೊಂದರೆ. . .  ಸುಮ್ಮನಿರುತ್ತಾರೆಯೇ. . . ?  

ನಮ್ಮ ಅಣ್ಣ ಗಾಂಧಿ ಒಳ್ಳೆಯವನು. . .  ನಕ್ಸಲೈಟ್ ಅಲ್ಲ. . .

ಗಾಂಧಿ ನಕ್ಸಲೈಟ್ ಎಂಬ ಪೊಲೀಸರ ವಾದವನ್ನು ಸುಳ್ಳೆಂದು ನಿರೂಪಿಸಲು ತನ್ನ ಸರ್ವ ಶಕ್ತಿಯನ್ನು ಒಡ್ಡಿ ಹೋರಾಡಲು ಅತ್ತಿಗೆ ಸನ್ನದ್ಧವಾಗುತ್ತಿದ್ದಾರೆ.

ಸಮಾಜದ ಶ್ರೇಯಸ್ಸಿಗಾಗಿ ಶ್ರಮಿಸುವವರನ್ನು, ಬಡವರ ಅಭಿವೃದ್ಧಿಗಾಗಿ ಹೋರಾಡುವವರನ್ನು, ದೀನ ದುರ್ಬಲರ ಪರವಾಗಿ ಮಾತನಾಡುವವರನ್ನು, ಬದಲಾವಣೆಗಾಗಿ ಕನಸುಗಳನ್ನು ಕಾಣುವವರನ್ನು ಈ ಪೊಲೀಸರು ನಕ್ಸಲೈಟ್‌ಗಳೆಂದರೆ ಆಶ್ಚರ್ಯವೇನಿಲ್ಲ. . .  

ಒಂದು ರೀತಿ ಆಲೋಚಿಸಿದರೆ ನಮ್ಮ ಅಣ್ಣ ಗಾಂಧಿ ಕೂಡ ನಕ್ಸಲೈಟೇ. . .

ಹಾಗೆಂದುಕೊಳ್ಳುತ್ತಿದ್ದಂತೆ ಅಷ್ಟು ದುಃಖದಲ್ಲೂ ನನ್ನ ಎರಡನೇಯ ಮಗಳು ಕೇಳಿದ ಪ್ರಶ್ನೆ ನೆಪಾಯಿತು. 

ಗಾಂಧಿ ಅಂತ್ಯಕ್ರಿಯೆಗಳಿಗೆ ಸಿದ್ಧತೆಗಳು ಆರಂಭವಾದವು.

ಬಡವರಿಗಾಗಿ ಹೋರಾಡುವವರು, ಸಮಾಜದ ಉನ್ನತಿಗಾಗಿ ಶ್ರಮಿಸುವವರೆಲ್ಲರೂ ನಕ್ಸಲೈಟ್‌ಗಳಾದರೆ. . .  ನಕ್ಸಲೈಟ್‌ಗಳೆಲ್ಲರೂ ಬಡವರಿಗಾಗಿ ಹೋರಾಡುತ್ತಾ ಸಮಾಜದ ಉನ್ನತಿಗಾಗಿ ಶ್ರಮಿಸುತ್ತಿರುವವರು’ ಎಂಬ ಹೇಳಿಕೆ ಸರಿಯೋ ? ತಪ್ಪೋ ?  ಎಂಬ ಪ್ರಶ್ನೆಗೆ ಉತ್ತರ ಯಾರನ್ನು ಕೇಳಬೇಕು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x