ಭೌತಿಕವಾದ ಗಾಂಧಿಯನ್ನು ಕೊಂದಿದ್ದು ನಾಥುರಾಮ್ ಗೋಡ್ಸೆ. ಗಾಂಧಿಯನ್ನು ಕೊಂದ ತಾನು ನೇಣಿಗೇರಿ ಸತ್ತ. 600 ಚಿಲ್ಲರೆ ರಾಜರನ್ನು ಹೊಂದಿದ ಪುರಾತನ ಭಾರತವನ್ನು ಒಡೆದಾಳಿ, ಗುಲಾಮಗಿರಿಗೆ ತಳ್ಳಿ ಮೆರೆದಿದ್ದು ಸೂರ್ಯ ಮುಳುಗದ ಸಾಮ್ರಾಜ್ಯವೆಂದು ಕರೆಯಲಾಗುವ ಬ್ರೀಟಿಷರ ಹೆಗ್ಗಳಿಕೆ. ದೇಶಾಭಿಮಾನ ಮತ್ತು ಸ್ವಾಭಿಮಾನ ಮೇಳೈಸಿ, ಗುಲಾಮತನಕ್ಕೆ ಒಗ್ಗಿಹೋಗಿದ್ದ ಲಕ್ಷಾಂತರ ಭಾರತೀಯರಿಗೆ ಸ್ವದೇಶಿ, ಸ್ವಾಭಿಮಾನ, ಸ್ವಾತಂತ್ರ್ಯವೆಂಬ ಊರುಗೋಲುಗಳನ್ನು ನೀಡಿ ಎಬ್ಬಿಸಿ ನಿಲ್ಲಿಸಿದವರಲ್ಲಿ ಗಾಂಧಿ ಪ್ರಮುಖರು. ಇದಕ್ಕಾಗಿಯೇ ಗಾಂಧಿಯನ್ನು ಇಡೀ ದೇಶ ರಾಷ್ಟ್ರಪಿತನೆಂದು ಒಪ್ಪಿಕೊಂಡಿದೆ. ಸ್ವಾತಂತ್ರ್ಯ ಪಡೆದ ನಂತರದಲ್ಲಿ ರಚಿತವಾದ ಸರ್ಕಾರಗಳ ಧೋರಣೆಗಳು ಇನ್ನಿಲ್ಲದಂತೆ ಬದಲಾದವು. ಗಾಂಧಿ ಹೇಳಿದ್ದು, ಹಳ್ಳಿಗಳೇ ದೇಶದ ಜೀವಾಳ, ರೈತನೇ ದೇಶದ ಬೆನ್ನೆಲುಬು, ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿ, ಔಧ್ಯಮೀಕರಣ, ಕೈಗಾರಿಕರಣ ಇವುಗಳು ಮುಂದೊಂದು ದಿನ ಈ ದೇಶಕ್ಕೆ ಶಾಪವಾಗಿ ಪರಿಣಮಿಸಲಿವೆ. ಬೃಹತ್ ಕೈಗಾರಿಕೆಗಳು, ಬೃಹತ್ ಆಣೆಕಟ್ಟುಗಳು ಈ ದೇಶದ ಅವಶ್ಯಕತೆಗಳಲ್ಲ, ಬದಲಿಗೆ ದೇಶದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಲಿವೆ. ರಾಮರಾಜ್ಯವೆಂದರೆ ಹೆಣ್ಣು ಮಕ್ಕಳು ಸರಿರಾತ್ರಿಯಲ್ಲೂ ಯಾರ ಭಯವಿಲ್ಲದೆ ಹೊರಗೆ ಏಕಾಂಗಿಯಾಗಿ ತಿರುಗಾಡುವಂತಹ ಸ್ಥಿತಿ. ಹೀಗೆ ಹತ್ತು ಹಲವು ದೇಶ ಕಟ್ಟುವ ವಿಚಾರಗಳನ್ನು ಹೇಳಿದ್ದರು. ಅವರಂತೂ ನುಡಿದಂತೆ ನಡೆದು ತೋರಿಸಿದರು. ಗಾಂಧಿ ಕೊಂದದು ಎಷ್ಟು ದೊಡ್ಡ ಅಪರಾಧವೋ ಅದಕ್ಕಿಂತ ಸಾವಿರ ಪಟ್ಟು ಹೆಚ್ಚು ಅಪರಾಧ ಗಾಂಧೀಜಿಯ ಆದರ್ಶಗಳನ್ನು ಕೊಲ್ಲುವುದಾಗಿದೆ.
ನಮ್ಮನ್ನಾಳುವ ಸರ್ಕಾರಗಳು ಪ್ರತಿನಿತ್ಯ ಗಾಂಧಿಯನ್ನು ಕೊಲ್ಲುತ್ತಿವೆ. ಪ್ರತಿವರ್ಷ ಗಾಂಧಿಜಯಂತಿಯನ್ನು ಆಚರಣೆ ಮಾಡಿ ಅವರ ಆದರ್ಶಗಳನ್ನು ಪಾಲಿಸಬೇಕೆಂದು ಪ್ರತಿಯೊಬ್ಬ ಜನಸೇವಕನೂ ಕರೆ ನೀಡುತ್ತಾನೆ. ಸಲಹೆ ನೀಡುತ್ತಾನೆ. ಆದರೆ ಕೃತಿಯಲ್ಲಿ ಆಚರಿಸುವುದಿಲ್ಲ. ರೈತರ ಜಮೀನುಗಳನ್ನು ಬಲವಂತವಾಗಿ ಕಿತ್ತುಕೊಂಡು ಕೈಗಾರಿಕೆಗಳಿಗೆ ನೀಡುವ ಕಾನೂನನ್ನೇ ಸರ್ಕಾರಗಳು ರೂಪಿಸುತ್ತವೆ. ರೈತನಿಗಾಗಿ ಹುಸಿಕಂಬನಿಗರೆಯುವುದನ್ನು ಬಿಟ್ಟರೆ ಬೇರೇನು ಸಾಧಿಸಿಲ್ಲ. ಮೊನ್ನೆ ತೋಟಗಾರಿಕಾ ಇಲಾಖೆಯ ಹಿರಿಯ ಮಂತ್ರಿಯೊಬ್ಬರು ನನ್ನ ಕೈಯಲ್ಲಿರುವುದು ಕೆಲಸಕ್ಕೆ ಬಾರದ ಖಾತೆ ಎಂದಿದ್ದನ್ನು ರಾಜ್ಯಮಟ್ಟದ ಪತ್ರಿಕೆಗಳು ವರದಿ ಮಾಡಿವೆ. ರಾಜ್ಯದಲ್ಲಿರುವ ತೋಟಗಾರಿಕಾ ಪ್ರದೇಶವೆಷ್ಟು, ಇವುಗಳನ್ನೇ ನಂಬಿಕೊಂಡ ರೈತರೆಷ್ಟು, ಈ ರೈತರ ಸ್ಥಿತಿ ಏನಾಗಿದೆ ಎಂಬುವ ಬಗ್ಗೆ ಇವರಿಗೆ ಕಾಳಜಿಯಿಲ್ಲ. ಇದೊಂದೇ ವಾಕ್ಯ ಸಾಕು ಸರ್ಕಾರಗಳಿಗೆ ರೈತರ ಬಗ್ಗೆ ಕಾಳಜಿ ಎಷ್ಟಿದೆ ಎಂಬುದನ್ನು ಅರಿಯಲು.
ದೇಶದ ಪ್ರಥಮ ಪ್ರಧಾನಿಯವರು ಆಣೆಕಟ್ಟುಗಳು ಈ ದೇಶದ ದೇವಾಲಯಗಳಿಂದ್ದಂತೆ ಎಂದು ಹೇಳಿ ಸರ್ವನಾಶಕ್ಕೆ ನಾಂದಿ ಹಾಡಿದರು. ಮುಂದೆ ಬಂದವರೆಲ್ಲರೂ ದೇಶದ ಬಡವರ, ರೈತರ ಕಣ್ಣೀರೊರೆಸುವ ನಾಟಕವಾಡಿದ್ದನ್ನು ಬಿಟ್ಟರೆ, ಸಮಗ್ರವಾಗಿ ದೇಶ ಕಟ್ಟುವ ಕೆಲಸದಲ್ಲಿ ಸಾಮೂಹಿಕವಾಗಿ ವಿಫಲರಾದರು. ಕೈಯಲ್ಲಿ ನೂಲುತ್ತಿದ್ದರನ್ನು ಬೀದಿಪಾಲು ಮಾಡಿ ನೂರಾರು ಸ್ಪಿನ್ನಿಂಗ್ ಮಿಲ್‍ಗಳನ್ನು ಸೃಷ್ಟಿ ಮಾಡಿದರು. ಕಷ್ಟವೋ ನಷ್ಟವೋ ಲಕ್ಷಾಂತರ ಸೈಕಲ್ ರಿಕ್ಷಾವಾಲಗಳು ಸಾರ್ವಜನಿಕ ಬಸ್ಸುಗಳ ಸೇವೆಯಿಂದಾಗಿ ತಮ್ಮ ದುಡಿಮೆಯನ್ನು ಕಳೆದುಕೊಂಡು ನಿರ್ಗತಿಕರಾದರು. ಸಾರ್ವಜನಿಕರ ಹಣದಿಂದ ನಿರ್ವಹಿಸಲ್ಪಡುವ ಸರ್ಕಾರಿ ಪೋಷಿತ ಬಸ್ ಕಂಪನಿಗಳು ಯಾವಾಗಲೂ ನಷ್ಟದಲ್ಲೇ ಇರುತ್ತವೆ. ಬಸ್ಸು ಖರೀದಿ ಪ್ರಕ್ರಿಯೆಯಲ್ಲಿ ಕೋಟ್ಯಾಂತರ ದೊಡ್ಡವರ ಪಾಲಾಗುತ್ತದೆ. ಸಮಾಜದ ಕಟ್ಟಕಡೆಯ ಮನುಷ್ಯ ಅಥವಾ ಕುಟುಂಬ ಅಥವಾ ಜನಾಂಗ ನೆಮ್ಮದಿಯ ಬದುಕನ್ನು ಕಾಣಬೇಕು ಎಂಬುದು ಗಾಂಧಿಜಿಯ ಆಶಯವಾಗಿತ್ತು. ಹೀಗೆ ಪ್ರತಿ ಹೆಜ್ಜೆಯಲ್ಲೂ ಗಾಂಧಿಜೀಯ ಹೆಸರನ್ನು ಮಾತ್ರ ಬಳಸಿಕೊಂಡು ಅವರ ಆದರ್ಶಗಳನ್ನು ಕೊಲ್ಲುತ್ತಾ ಬಂದರು. ಪಂಚವಾರ್ಷಿಕ ಯೋಜನೆಗಳೂ, 20 ಅಂಶದ ಕಾರ್ಯಕ್ರಮಗಳು, ಮಾಜಿ ಪ್ರಧಾನಿಗಳ ಹೆಸರುಳ್ಳ ಹಲವು ಜನಪ್ರಿಯ ಯೋಜನೆಗಳು ಯಾವುದೂ ಜನರಿಗೆ ಪ್ರಿಯವಾಗಲೇ ಇಲ್ಲ. ಇಂದಿಗೂ ಬರೀ ಹತ್ತಿಪ್ಪತ್ತು ರೂಪಾಯಿಗಳ ಸಂಬಳ ಪಡೆದು ಜೀವನ ನಡೆಸುವ ಕುಟುಂಬಗಳನ್ನು ಸ್ವತಂತ್ರ ಭಾರತದಲ್ಲಿ ಕಾಣಬಹುದು. ಭಾರೀ ಆಣೆಕಟ್ಟುಗಳು, ಭಾರೀ ಕೈಗಾರಿಕೆಗಳು ಅಥವಾ ಸರ್ಕಾರದ ಯಾವ ಯೋಜನೆಯೂ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾದವು ಅಲ್ಲದೇ ಸಮಸ್ಯೆಗಳನ್ನು ಹೆಚ್ಚು ಮಾಡುವಲ್ಲಿ ಸಹಕರಿಸಿದವು ಎನ್ನಬಹುದು.
ಹಾಗಾದರೆ ಇದಕ್ಕೇನು ಪರಿಹಾರ? ಹವಾಮಾನ ವೈಪರೀತ್ಯಕ್ಕೆ ನೇರ ಕಾರಣ ನಾವು ಬಳಸುವ ಪೆಟ್ರೋಲ್-ಡೀಸೆಲ್ ಹಾಗೂ ಕಲ್ಲಿದ್ದಲು. ಭಾರತದ 57% ವಿದ್ಯುಚ್ಚಕ್ತಿಯ ಉತ್ಪಾದನೆ ಕಲ್ಲಿದ್ದಲಿನಿಂದಾಗುತ್ತದೆ. 12ನೇ ಪಂಚವಾರ್ಷಿಕ ಯೋಜನೆ (2012-2017)ಯಲ್ಲಿ ಇನ್ನೂ 1 ಲಕ್ಷ ಮೆಗಾವ್ಯಾಟ್ ವಿದ್ಯುಚ್ಚಕ್ತಿಯನ್ನು ಕಲ್ಲಿದ್ದಲಿಂದಲೇ ಉತ್ಪಾದಿಸಲು ಯೋಜನೆಗಳು ತಯಾರಾಗಿದೆ. ನಮ್ಮಲ್ಲಿ ಕಲ್ಲಿದ್ದಲ ನಿಕ್ಷೇಪ ಬರಿದಾಗುತ್ತಿದೆ. ವರ್ಷದ 300 ದಿನಗಳಲ್ಲೂ ಸೂರ್ಯನ ಪ್ರಖರ ಬೆಳಕು ಲಭ್ಯವಿದ್ದರೂ ಸರ್ಕಾರಗಳು ಮರುಬಳಕೆಯ ತಂತ್ರಜ್ಞಾನದತ್ತ ಗಮನಹರಿಸದಿರುವುದು ನಾಚಿಕೆಗೇಡಿನ ವಿಚಾರವೇ ಸೈ. ಕಲ್ಲಿದ್ದಲ ಮಾಲಿನ್ಯದಿಂದ ಪ್ರತಿವರ್ಷ 8೦,೦೦೦ ಜನರು ಭಾರತದಲ್ಲಿ ಮರಣ ಹೊಂದುತ್ತಿದ್ದಾರೆ ಎಂದು ವರದಿಯೊಂದು ಹೇಳುತ್ತದೆ. ವಿದ್ಯುತ್ ವಿಕೇಂದ್ರಿಕರಣವೊಂದೇ ಇದಕ್ಕೆ ಪರಿಹಾರವಾಗಬಲ್ಲದು. ಅಂದರೆ ಜನ ತಮ್ಮ ವಿದ್ಯುತ್‌ನ್ನು ತಾವೇ ಛಾವಣಿಗಳಿಂದ ಉತ್ಪಾದಿಸಿಕೊಳ್ಳಬಹುದು.
ಗ್ಲೋಬಲ್ ಪವರ್ ಶಿಪ್ಟ್ ಅಂದರೆ ಜಾಗತಿಕ ಮಟ್ಟದಲ್ಲಿ ಪರ್‍ಯಾಯ ಇಂಧನವನ್ನು ಬಳಸುವ ನಿಟ್ಟಿನಲ್ಲಿ ಹಲವು ದೇಶಗಳ ಸಂಘ-ಸಂಸ್ಥೆಗಳು ಒಟ್ಟಾಗಿ ಸೇರಿಕೊಂಡು ರೂಪಿಸಿಕೊಂಡ ಒಂದು ವ್ಯವಸ್ಥೆ. ಗ್ರೀನ್-ಪೀಸ್‌ನಂತಹ ಪರಿಸರ ಸಂಘಟನೆಗಳು ಇದರ ಬೆನ್ನಿಗಿವೆ. ಭಾರತದಲ್ಲೂ ಪರ್‍ಯಾಯ ಇಂಧನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನ್ಯಾಷನಲ್ ಪವರ್ ಶಿಫ್ಟ್ ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳು, ವಿಜ್ಞಾನಿಗಳು, ಸಂಶೋಧಕರು, ಪರಿಸರವಾದಿಗಳು ಎಲ್ಲರೂ ಇದ್ದಾರೆ. ಥಿಂಕ್ ಗ್ಲೋಬಲಿ ಆಕ್ಟ್ ಲೋಕಲಿ ಎಂಬುದು ಇವರ ಮಂತ್ರ. ಡಿಸೆಂಬರ್ 17-21ರವರೆಗೆ ರಾಜಧಾನಿ ಬೆಂಗಳೂರಿನಲ್ಲಿ ಜಗತ್ತಿನ ವಿವಿಧ ದೇಶಗಳ 15೦ ಮಂದಿ ಸೇರಿ ಸಮಾವೇಶ ನಡೆಸಲಿದ್ದಾರೆ. ಮುಂದಿನ ಪೀಳಿಗೆಗೆ ಸ್ವಚ್ಛವಾದ ಪರಿಸರವನ್ನು ನೀಡಬೇಕು ಎಂಬುದೇ ಈ ವಿಚಾರ ಸಂಕಿರಣದ ಸದಾಶಯ. ಉಡಾಣ್ ಹೆಸರಿನಲ್ಲಿ ನಡೆಯುವ ಈ ಸಮಾವೇಶದಲ್ಲಿ ಭಾಗವಹಿಸಲು ಇಚ್ಚಿಸುವವರು 350.org ಈ ಜಾಲತಾಣದಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು ಅಥವಾ southasia@350.org ಇಲ್ಲಿಗೆ ಭೇಟಿ ನೀಡಿ ಹೆಚ್ಚಿನ ವಿವರಗಳನ್ನು ಪಡೆಯಬಹುದು. ಹೆಸರು ನೋಂದಾಯಿಸಲು ಕೊನೆಯ ದಿನಾಂಕ ಅಕ್ಟೋಬರ್ 15, 2013.
ಲೇಖನ ಇಷ್ಟ ಆತು… ನಮ್ಮ ದೇಶದ ಜನಗಳು ಹೇಂಗಂದರ ಗಾಂಧೀಜಿ ಅವರನ್ನ " ಮಹಾತ್ಮ" ಅಂತಾನು ಕರಿತಾರ, ಹಂಗಾ ನಾಥೂರಾಮ ಗೋಡ್ಸೆನ್ನ " ಹೀರೊ ಅಂತನು ಪರಿಗಣಿಸ್ತಾರ.. ಹಿಂಗಾಗಿ ಗಾಂಧೀಜಿ ಕಂಡ ಅಭಿವೃಧ್ಧಿಯ ದೇಶ ನಮ್ಮದಾಗಲಿಕ್ಕೆ ಸಾಧ್ಯನ ಇಲ್ಲ.
ಲೇಖನ ಇಷ್ಟ ಆತು. ನಮ್ಮ ದೇಶದ ಜನರು ಹೆಂಗಿದ್ದಾರಂದರ " ಗಾಂಧೀಜಿಯವರನ್ನ ಮಹಾತ್ಮ ಅಂತಾನು ಅಂತಾರ, ಹಂಗಾ ನಾಥೂರಾಮ ಗೊಡ್ಸೆನ್ನ ಹೀರೊ ಅಂತನು ಪರಿಗಣಿಸ್ತಾರ, ಹಿಂಗಿದ್ದಾಗ ಗಾಂಧೀಜಿಯವರು ಕಂಡ ಅಭಿವೃಧ್ಧಿಯುತ ದೇಶ ಆಗಲಿಕ್ಕೆ ಸಾಧ್ಯನ ಇಲ್ಲಾ…
Superb article sir!
ನಮ್ಮ ದೇಶದ ಅನೇಕ ದುರದೈವಗಳಲ್ಲಿ ಇದು ಒಂದು ಸದ್ಯ ಪ್ರಸ್ತುತ ಅನಿಸುತ್ತದೆ ಸರ್
ಲೇಖನ ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು
ಸಖತ್ತಾದ ಲೇಖನ 🙂 ಇಷ್ಟ ಆತು 🙂
ನಮ್ಮನ್ನಾಳುವ ಸರ್ಕಾರಗಳು ಪ್ರತಿನಿತ್ಯ ಗಾಂಧಿಯನ್ನು ಕೊಲ್ಲುತ್ತಿವೆ. ಪ್ರತಿವರ್ಷ ಗಾಂಧಿಜಯಂತಿಯನ್ನು ಆಚರಣೆ ಮಾಡಿ ಅವರ ಆದರ್ಶಗಳನ್ನು ಪಾಲಿಸಬೇಕೆಂದು ಪ್ರತಿಯೊಬ್ಬ ಜನಸೇವಕನೂ ಕರೆ ನೀಡುತ್ತಾನೆ. ಸಲಹೆ ನೀಡುತ್ತಾನೆ. ಆದರೆ ಕೃತಿಯಲ್ಲಿ ಆಚರಿಸುವುದಿಲ್ಲ.
ಸತ್ಯವಾದ ಮಾತು..ಗೋಡ್ಸೆ ಒಮ್ಮೆ ಕೊಂದ ..ನಾವು ನಿತ್ಯವೂ ಪರೋಕ್ಷವಾಗಿ ಗಾಂಧೀ ಆದರ್ಶಗಳನ್ನು ಕೊಲ್ಲುತ್ತಿದ್ದೇವೆ
nice article..