ಗಲಭೆ: ವಾಸುಕಿ ರಾಘವನ್

ಕಳೆದೆರಡು ದಿನಗಳಿಂದ ನಾರಾಯಣ ತಂತ್ರಿಯವರಿಗೆ ಆ ಊರಿನ ರೈಲ್ವೆ ಸ್ಟೇಷನ್ನಿಂದ ಹೊರಬರಲಾಗಿರಲಿಲ್ಲ. ಊರಿಗೆ ಬರುವ ಮತ್ತು ಅಲ್ಲಿಂದ ಹೊರಡುವ ರೈಲುಗಳೆಲ್ಲಾ ರದ್ದಾಗಿದ್ದವು. ಊರಿನಲ್ಲಿನ್ನೂ ಗಲಭೆ ನಿಯಂತ್ರಣಕ್ಕೆ ಬಂದಿರಲಿಲ್ಲ. ಫೋನ್ ಸರ್ವೀಸುಗಳೂ ಬಂದ್ ಆಗಿದ್ದರಿಂದ ತಮ್ಮ ಮನೆಯವರಿಗೆ ತಾವಿಲ್ಲಿ ಇರುವ ವಿಷಯ ತಿಳಿಸಲು ಆಗಿರಲಿಲ್ಲ. ಹೊರಗಡೆ ಕರ್ಫ್ಯೂ ವಿಧಿಸಲಾಗಿತ್ತು. ತುಂಬಾ ಸುಸ್ತಾಗಿದ್ದರೂ, ತಂತ್ರಿ ಹತಾಶರಾಗಿ ಪ್ಲಾಟ್ಫಾರ್ಮಿನ ಆ ಕಡೆಯಿಂದ ಈ ಕಡೆಗೆ ಓಡಾಡುತ್ತಿದ್ದರು. ತಮ್ಮ ಮಗಳಿಗೆ ಒಳ್ಳೆ ಸಂಬಂಧ ಹುಡುಕಿಕೊಂಡು ಈ ಊರಿಗೆ, ಅದೂ ಈ ಹೊತ್ತಿನಲ್ಲಿ ಬಂದು ಸಿಕ್ಕಿಹಾಕಿಕೊಂಡೆನಲ್ಲಾ ಅಂತ ಪೇಚಾಡಿಕೊಂಡರು. “ಥೂ ಯಾವ ಕೆಟ್ಟ ಘಳಿಗೇಲಿ ಈ ದರಿದ್ರ ಊರಿಗೆ ಕಾಲಿಟ್ಟೆನೋ” ಅಂತ ಗೊಣಗಿಕೊಂಡವರೇ ಕೈಯಲ್ಲಿದ್ದ ಖಾಲಿ ಪೇಪರ್ ಕಪ್ಪನ್ನು ಹಳಿಗಳ ಮೇಲೆ ಬಿಸಾಡಿದರು. ಬೆಳಗ್ಗೆಯಿಂದ ಇವರ ಮೂದಲಿಕೆಗಳನ್ನು ಕೇಳಿ ಕೇಳಿ ಬೇಸರಗೊಂಡಿದ್ದ ಚಹಾ ಅಂಗಡಿ ವಾಗ್ದೇವಿ ಮುಖೇಶ್ ಗೂ ಕೋಪ ನೆತ್ತಿಗೇರಿತು. “ರೀ ಸ್ವಾಮೀ, ಯಾಕ್ರೀ ನಮ್ಮೂರಿಗೆ ಹಂಗೆಲ್ಲಾ ಬೈತಿದೀರಿ?” ಅಂದವಳೇ ಅಂಗಡಿಯಿಂದ ಆಚೆಗೆ ದಢದಢನೆ ನಡೆದು ಬಂದಳು. 

“ಇನ್ನೇನ್ ಮತ್ತೆ, ಇಪ್ಪತ್ತಮೂರನೇ ಶತಮಾನದಲ್ಲೂ ಈ ರೀತಿ ಗಲಭೆ ಅಂದ್ರೆ, ನಮ್ಮೂರಲ್ಲಿ ಹಿಂಗೆಲ್ಲಾ ಒಂದು ಸಲಾನೂ ಆಗಿಲ್ಲ, ಥೂ ನಾಚಿಕೆಗೇಡು” ಅಂದರು ತಂತ್ರಿ ಮುಖ ಸಿಂಡರಿಸಿಕೊಂಡು. “ನಮ್ಮೂರಲ್ಲೂ ಇಲ್ಲಿಯವರೆಗೆ ಆಗಿರಲಿಲ್ಲಪ್ಪಾ, ಎಲ್ಲಾ ಈ ಟ್ವಿಟ್ಟರ್ ಪಂಥದವರು ನಮ್ಮೂರಲ್ಲಿ ಜಾಸ್ತಿ ಆದಮೇಲೇ ಈ ಅನಿಷ್ಟಗಳೆಲ್ಲಾ ನಡೀತಿರೋದು” ಅಂತ ಕೊಂಕು ನುಡಿದಳು ವಾಗ್ದೇವಿ. ತಂತ್ರಿಯವರ ಎಡತೋಳಿನ ಮೇಲಿದ್ದ ದೊಡ್ಡ “ಟಿ” ಟ್ಯಾಟೂ ನೋಡಿ ಬೇಕಂತಲೇ ಅವಳು ಹಾಗಂದಿದ್ದಳು. “ಆಹಾ ತೋರಿಸಿಬಿಟ್ರಲ್ಲಾ ನಿಮ್ಮ ಫೇಸ್ಬುಕ್ ಪಂಥದವರ ಚಿಲ್ಲರೆ ಬುದ್ಧೀನಾ” ಅಂತ ತಂತ್ರಿ ತಿರುಗೇಟು ಕೊಟ್ಟರು. ಜೋರಾಗಿ ಬೀಸಿದ ತಂಗಾಳಿಗೆ ವಾಗ್ದೇವಿ ಕೊರಳಲ್ಲಿದ್ದ “ಎಫ್” ತಾಯಿತ ಸಣ್ಣಗೆ ಅಲುಗಾಡಿತು. 

ಪ್ಲಾಟ್ಫಾರ್ಮಿನ ಆ ಮೂಲೆಯಲ್ಲಿಟ್ಟಿದ್ದ ಟಿವಿಯಲ್ಲಿ ಎರಡು ದಿನ ಹಳೆಯದಾದ ಗಲಭೆಯ “ಬ್ರೇಕಿಂಗ್ ನ್ಯೂಸ್” ಕಾರ್ಯಕ್ರಮ ಜೋರುದನಿಯಲ್ಲಿ ಹೊಡೆದುಕೊಳ್ಳುತ್ತಿತ್ತು. ಗಲಭೆಯ ಸವಿಸ್ತಾರವಾದ ವರದಿಯನ್ನು ಮೂವ್ವತ್ತೆಂಟನೇ ಸಲ ಮರುಪ್ರಸಾರ ಮಾಡುತ್ತಿದ್ದರು. ಊರಮಧ್ಯದಲ್ಲಿ ನೂರೈವತ್ತು ವರ್ಷಕ್ಕೂ ಹಳೆಯ ಒಂದು ದೊಡ್ಡ “ಎಫ್” ಲೋಗೋ ಇತ್ತು. ಇನ್ನೂರ ಐವತ್ತಮೂರು ಅಡಿಯ ಬೃಹದಾಕಾರವಾದ ಆ “ಎಫ್” ಲೋಗೋ ನೋಡಲು ದೇಶವಿದೇಶಗಳಿಂದ ಜನ ಬರುತ್ತಿದ್ದರು. ವಿಮಾನದಿಂದಲೂ ಸ್ಪಷ್ಟವಾಗಿ ಕಾಣಿಸುತ್ತಿದ್ದ ಆ ಲೋಗೋವಿನಿಂದಾಗಿ ಊರಿಗೆ ಪ್ರಖ್ಯಾತಿ ದೊರಕಿತ್ತು. ಎರಡು ದಿನಗಳ ಹಿಂದೆ ಯಾರೋ ಕಿಡಿಗೇಡಿಗಳು ಅದರ ಪಕ್ಕ “ಯು ಸಿ ಕೆ” ಅನ್ನುವ ಅಕ್ಷರಗಳನ್ನು ಇಟ್ಟುಬಿಟ್ಟಿದ್ದರು. “ಫೇಸ್ಬುಕ್” ಪಂಥದವರ ಭಾವನೆಗಳು ಕೆರಳಿದ್ದವು. ಇದು “ಟ್ವಿಟ್ಟರ್” ಪಂಥದವರದೇ ದುಷ್ಕೃತ್ಯ ಅಂತ “ಫೇಸ್ಬುಕ್” ಪಂಥದವರು ಕೆಲವು “ಟ್ವಿಟ್ಟರ್” ಜನರನ್ನು ಹಿಡಿದು ಚಚ್ಚಿದ್ದರು. ಊರ ಮುಖಂಡರು ಶಾಂತಿಸಂಯಮ ಕಾಪಾಡಿ ಅಂತ ಮಾಡಿಕೊಂಡ ಮನವಿ ಕಿವುಡರ ಮುಂದೆ ಕಿನ್ನರಿ ಬಾರಿಸಿದಂತೆ ಆಗಿತ್ತು. “ಟ್ವಿಟ್ಟರ್” ಹಿರಿಯರು ಇದು “ಎಫ್ ಸಿ, ಯು ಕೆ” ಬ್ರಾಂಡ್ ಅವರ ಕೆಲಸ ಇರಬೇಕು, ತಮಗೆ ಬಿಟ್ಟಿ ಜಾಹೀರಾತು ಸಿಗಲಿ ಅಂತ ಆತುರಾತುರವಾಗಿ ಮಾಡಿದ ಕೆಲಸದಿಂದಾಗಿ, ಅಕ್ಷರಗಳು ಅದಲುಬದಲಾಗಿ ಅಪಾರ್ಥ ಆಗಿರಬಹುದು ಅಂತ ಸಮಜಾಯಿಷಿ ಕೊಟ್ಟಿದ್ದರು. “ಎಫ್ ಸಿ, ಯು ಕೆ” ಗುಂಪಿನವರು ವಿನಾಕಾರಣ ತಮ್ಮ ಹೆಸರಿಗೆ ಮಸಿಬಳಿಯುವ ಈ ತಂತ್ರಜ್ಞಾನಿಗಳ ಪಿತೂರಿಯನ್ನು ಖಂಡಿಸಿ ತಮ್ಮ ತೀವ್ರವಾಗಿ ಪ್ರತಿಭಟನೆಯನ್ನು ತೋರಿಸಿದ್ದರು. ವದಂತಿಗಳು ಹರಡದಂತೆ ತಡೆಯಲು ಆಡಳಿತವರ್ಗ ಫೋನ್, ಇಂಟರ್ನೆಟ್ ಎಲ್ಲವನ್ನೂ ಬಂದ್ ಮಾಡಿತ್ತು. 

ತಂತ್ರಿ ಮತ್ತು ವಾಗ್ದೇವಿ ನಡುವಿನ ಮಾತಿನ ಚಕಮಕಿಯನ್ನು ಪ್ಲಾಟ್ಫಾರ್ಮ್ ಮೂಲೆಯಲ್ಲಿ ಕೂತಿದ್ದ ತತ್ವಪದ ಹಾಡುತ್ತಿದ್ದ ಅಜ್ಜ ಗಮನಿಸುತ್ತಿದ್ದ. ಅವನಿಗೆ ಸರಿಯಾಗಿ ಕಣ್ಣು ಕಾಣುತ್ತಿರಲಿಲ್ಲ. ಆದರೂ ಒಮ್ಮೊಮ್ಮೆ ಅವನ ಕಣ್ಣುಗಳಲ್ಲಿ ಅತಿಮಾನುಷವಾದ ಬೆಳಕು ಮೂಡಿ ಮರೆಯಾಗುತ್ತಿತ್ತು. ಅವನಿಗೀಗ ನೂರಿಪ್ಪತ್ತು ವರುಷ ಅಂತ ಊರವರೆಲ್ಲಾ ಹೇಳುತ್ತಾರೆ. ನೂರಿಪ್ಪತ್ತೋ, ಇನ್ನೂರಿಪ್ಪತ್ತೋ ಅವನನ್ನು ನೋಡಿದರೆ ಯುಗಯುಗಾಂತರದಿಂದ ಇಲ್ಲೇ ನೆಲೆಸಿರಬೇಕು ಅನ್ನುವಂತಿದ್ದಾನೆ. “ಯಾಕೋ ಹೀಂಗ ತಲಿ ಬಿಸಿ ಮಾಡ್ಕೊತೀ…ಈ ಜನಗಳ ಹುಚ್ಚು ಬುದ್ಧಿ ಇವತ್ತು ನೆನ್ನೇದು ಅಲ್ಲ ನೋಡು…ಇವತ್ತು ಈ ಊರು ಹತ್ತಿ ಉರೀತದಾ, ನಾಳೆ ಇನ್ನೊಂದ್ ಊರು, ನಾಳಿದ್ದು ಎಲ್ಲಾ  ಶಾಂತ ಆಗ್ತದಾ, ಆಚಿ ನಾಳಿದ್ದು ಕಂಡೋರು ಯಾರು ಹೇಳ ಮತ್ತಾ…” ಅಂತ ಪೆಚ್ಚುನಗು ನಕ್ಕ. “ಈ ಊರಿನ ಕಥೆ ಗೊತ್ತೇನೋ ನಿಂಗೆ?” ಅಂದವನೇ ಕೇಳುವವರು ಇದ್ದಾರೋ ಇಲ್ಲವೋ ಅನ್ನುವ ಪರಿವೆಯೇ ಇಲ್ಲದೆ ತನ್ನ ವಿವರಣೆಯನ್ನು ಮುಂದುವರಿಸಿದ!

ಈ ಊರು ನೂರಾರು ವರ್ಷಗಳಿಂದ ಶಾಂತಿಯ ನೆಲೆಗೂಡಾಗಿತ್ತು. ಬಹಳ ಮುಂಚೆ, ಅಂದರೆ ಎರಡು ಶತಮಾನಗಳ ಹಿಂದೆ, ಬೇರೆಬೇರೆ ಧರ್ಮ, ಜಾತಿ ಮತಗಳು ಇದ್ದವು ಈ ಊರಲ್ಲಿ. ವೈವಿಧ್ಯತೆಯನ್ನು ಅಲ್ಲಿಯ ಜನ ಯಾವತ್ತಿಗೂ ಶಾಪ ಅಂತ ಪರಿಗಣಿಸಿರಲಿಲ್ಲ. “ಏನೋ ಹಾರ್ವಯ್ಯ, ತೋರಿಸಿಬಿಟ್ಯಾ ನಿನ್ ಕಂತ್ರಿ ಬುದ್ಧೀನಾ?”, “ಲೋ ಸಾಬಿ, ಭಾರಿ ಪಾಕಡಾ ಆಸಾಮಿ ಕಣಯ್ಯಾ ನೀನು” ಅಂತೆಲ್ಲಾ ಒಬ್ಬರನ್ನೊಬ್ಬರು ತಮಾಷೆ ಮಾಡಿಕೊಳ್ಳುತ್ತಿದ್ದರು. ಮನಸ್ಸು ಸ್ವಚ್ಚವಾಗಿರುವಾಗ, “ತೋರಿಕೆಯ ಸೌಜನ್ಯದ” ಅನಿವಾರ್ಯತೆಯೇನೂ ಇರಲಿಲ್ಲ. ಆದರೆ ತಂತ್ರಜ್ಞಾನದ ಕ್ರಾಂತಿಯ ಕೆಲ ವರ್ಷಗಳ ಮುಂಚೆ ಬೇರೆಬೇರೆ ಧರ್ಮ, ಜಾತಿ, ಮತಗಳ ಜನರಲ್ಲಿ ಸಣ್ಣಗೆ ಅಸಹನೆ ಶುರುವಾಯಿತು. ಬೇರೆ ಊರುಗಳಲ್ಲಿ ನಡೆದ ಮಟ್ಟಿಗೆ ಗಲಾಟೆಗಳೇನೂ ನಡೆಯದಿದ್ದರೂ, ಜನರ ನಡುವಿನ ಅಂತರ ದಿನೇದಿನೇ ಹೆಚ್ಚಾಗುತ್ತಿತ್ತು. 

ಯಾವಾಗ ತಂತ್ರಜ್ಞಾನ ಈ ಊರಿಗೆ ಕಾಲಿಟ್ಟಿತೋ, ಜನ ತಂತಮ್ಮ ಸೌಕರ್ಯ, ಸೌಲಭ್ಯಗಳಿಗೆ ಪ್ರಾಮುಖ್ಯತೆ ಕೊಡಲು ಶುರುಮಾಡಿದರೋ, ಹಳೆಯ ಜಾತಿ, ಮತ, ಧರ್ಮಗಳು ನಿಧಾನವಾಗಿ ನಶಿಸಲು ಪ್ರಾರಂಭವಾಯಿತು. ತಂತ್ರಜ್ಞಾನ ಬಂದಮೇಲೆ ಜನರ ಮನಸ್ಸಿನಲ್ಲಿರುವ ಬೇಧಭಾವ ಹೊರಟುಹೋಗುತ್ತದೆ, ಮನುಷ್ಯ ಮನುಷ್ಯ ಸಂಬಂಧ ಗಟ್ಟಿಯಾಗುತ್ತದೆ ಅಂದರು ಕೆಲವು ಆಶಾವಾದಿಗಳು. ತಂತ್ರಜ್ಞಾನ ಕೆಟ್ಟದ್ದು, ಅದು ಮನುಷ್ಯನನ್ನು ಇನ್ನೊಂದು ಬಗೆಯ ಗುಲಾಮಗಿರಿಗೆ ದೂಡುತ್ತದೆ ಅಂತ ಕೆಲವರು ಆತಂಕ ಪಟ್ಟರು. ಬಹಳಷ್ಟು ಮಂದಿ ತಂತ್ರಜ್ಞಾನ ಒಳ್ಳೆಯದೂ ಅಲ್ಲ ಕೆಟ್ಟದ್ದೂ ಅಲ್ಲ, ನಾವು ಬಳಸಿಕೊಂಡಂತೆ ನಮ್ಮ ಬದುಕು ಅಂತ ಅಭಿಪ್ರಾಯಪಟ್ಟರು. “ನಾವೆಲ್ಲಾ ಬೆಳಕಿನ ಮಕ್ಕಳು, ಜ್ಞಾನವೇ ನಮ್ಮ ದೈವ, ಸೊನ್ನೆ ಒಂದುಗಳೇ ನಮ್ಮ ಪರಮ ಮಂತ್ರವು” ಅನ್ನುವ ನಾಡಗೀತೆ ಜನಮನದಲ್ಲಿ ನೆಲಸಿತು. ತಂತ್ರಜ್ಞಾನ ಬಂದರೂ ಮನುಷ್ಯ ಸಂಘಜೀವಿಯೇ ತಾನೆ? ಸಾಮಾಜಿಕ ನಡವಳಿಕೆಗಳ ಮೇಲೆ ಜನ ಪಂಥಗಳನ್ನು ಕಟ್ಟಿಕೊಳ್ಳಲು ಶುರುಮಾಡಿದರು. ಹಾಗೆ ಹೆಚ್ಚು ಪ್ರಸಿದ್ಧಿಗೆ ಬಂದ ಪಂಥಗಳು “ಫೇಸ್ಬುಕ್” ಪಂಥ ಮತ್ತು “ಟ್ವಿಟ್ಟರ್” ಪಂಥಗಳು. 

“ಫೇಸ್ಬುಕ್” ಪಂಥ ಮೊದಲಿಗೆ ಕೇವಲ ಒಂದು ಮಠಕ್ಕೆ ಮಾತ್ರ ಸೀಮಿತವಾಗಿತ್ತು. ಯಾವಾಗ ಜಕ್ಕೂರಿನ ಮಾರ್ಕಂಡೇಯ ಎಲ್ಲೆಡೆ ಅದರ ಪ್ರಚಾರ ಮಾಡಿದನೋ, ಜನ ಅದರೆಡೆಗೆ ಮುಗಿಬಿದ್ದರು. ತಮ್ಮ ಮನೆಯ ತೋಟದಲ್ಲಿ ಕಾಣಿಸಿಕೊಂಡ ಎರೆಹುಳು ಫೋಟೋ ಹಂಚಿಕೊಳ್ಳೋದೇನಂತೆ, ಈ ದಿನ ಇಷ್ಟು ಕೊಡ ನೀರನ್ನು ಬಾವಿಯಿಂದ ಸೇದಿದೆ ಅಂತ ಲೆಕ್ಕ ಒಪ್ಪಿಸೋದೇನಂತೆ, ತಮ್ಮ ಸೋದರತ್ತೆ ಹೇಳಿಕೊಟ್ಟಿದ್ದ ಹಳಸಲು ಜೋಕುಗಳನ್ನು ಮತ್ತೆ ಮತ್ತೆ ಹೇಳೋದೇನಂತೆ – ಊರಲ್ಲಿ ಸಂಭ್ರಮವೋ ಸಂಭ್ರಮ. ಈ ಸಂಭ್ರಮ, ಸಡಗರ ಕೆಲವು ಸಂಕೋಚದ ವ್ಯಕ್ತಿಗಳಿಗೆ ಮುಜುಗರ ಉಂಟುಮಾಡಿತು. ಅವರದೇನಿದ್ದರೂ “ಮಾತಾಡಿದರೆ ಹೋಯಿತು, ಮುತ್ತು ಉದುರಿದರೆ ಹೋಯಿತು” ಅನ್ನುವ ಜಾಯಮಾನ. “ನೋಡಿ ಇವರೇ, ನೋಡಿ ಇವರೇ” ಅಂತ ಯಾರ ಬೆನ್ನು ಬಿದ್ದೂ ಮಾತಾಡಿಸೋ ಅಭ್ಯಾಸ ಇರಲಿಲ್ಲ ಅವರಿಗೆ. ತಾವು ಏನಾದರೂ ಮಾತಾಡಿದಾಗ ಇಷ್ಟ ಇರುವವರು ಕೇಳಿಸಿಕೊಂಡರೆ ಸಾಕು ಅನ್ನುವ ಆಲೋಚನೆ ಅವರದು. 

ಇಷ್ಟೆಲ್ಲಾ ವ್ಯತ್ಯಾಸಗಳಿದ್ದರೂ ಎರಡು ಪಂಥಗಳ ನಡುವೆ ಅಂಥ ತಿಕ್ಕಾಟವೇನೂ ಆಗಿರಲಿಲ್ಲ. ಒಬ್ಬರ ಪಂಥದಲ್ಲಿರುವ ಒಳ್ಳೆಯ ಅಂಶಗಳನ್ನು ಇನ್ನೊಬ್ಬರು ಅಳವಡಿಸಿಕೊಳ್ಳುವ ಉದಾರ ಮನಸ್ಥಿತಿ ಆ ಜನರಲ್ಲಿತ್ತು. ಎರಡೂ ಪಂಥದವರು ಸೇರಿಕೊಂಡು ವರ್ಷಕ್ಕೊಂದು ದಿನ “ಹ್ಯಾಶ್” ಹಬ್ಬ ಆಚರಿಸಿ, ಭಂಗಿ ಸೇದಿ ಮೈಮರೆಯುತ್ತಿದ್ದರು. ಸ್ವಲ್ಪ ಅಪರೂಪ ಆದರೂ, ಎರಡು ಗುಂಪುಗಳಲ್ಲೂ ಕೊಟ್ಟು-ತಂದು ಮಾಡಿಕೊಳ್ಳುವುದು ನಿಷಿದ್ಧವೇನೂ ಆಗಿರಲಿಲ್ಲ. ಕೆಲವು “ಟ್ವಿಟ್ಟರ್” ಹುಡುಗಿಯರು “ಫೇಸ್ಬುಕ್” ಮನೆಯನ್ನು ಸೇರಿದ ಮೇಲೆ ಹೆಚ್ಚು ಮಾತಾಡುವುದನ್ನು ರೂಢಿಸಿಕೊಂಡಿದ್ದರು. ಇನ್ನು ಕೆಲವು ಫೇಸ್ಬುಕ್-ಟ್ವಿಟ್ಟರ್ ದಂಪತಿಗಳು ಒಬ್ಬರ ಮೇಲೊಬ್ಬರು ಏನನ್ನೂ ಹೇರದೆ, ತಂತಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಂಡಿದ್ದರು. ಮಕ್ಕಳಿಗೆ ಎರಡೂ ಪಂಥಗಳ ಆಚಾರವಿಚಾರಗಳ ಸಂಪೂರ್ಣ ಪರಿಚಯ ಮಾಡಿಸುವ ಅಭಿಲಾಷೆ ಹೊಂದಿದ್ದ ಪೋಷಕರ ಸಂಖ್ಯೆ ಕೂಡ ದಿನೇದಿನೇ ಹೆಚ್ಚುತ್ತಿತ್ತು. ಇನ್ನೊಬ್ಬರ ಆಚರಣೆಗಳು, ವಿಚಾರಗಳ ಬಗ್ಗೆ ಲಘು ಹಾಸ್ಯ, ಗೇಲಿ ಎಲ್ಲಾ ಸಾಮಾನ್ಯವಾಗಿದ್ದರೂ ಮನಸ್ಸಿನಲ್ಲಿ ಕಹಿಯೇನಿರಲಿಲ್ಲ. “ಈ ಫೇಸ್ಬುಕ್ ಜನ ತುಂಬಾನೇ ಆಡಂಬರ, ಸ್ವಲ್ಪನೂ ನಯ ನಾಜೂಕಿಲ್ಲ” ಅಂತ ಟ್ವಿಟ್ಟರ್ ಜನ ಅಂದುಕೊಳ್ಳುವುದೂ, “ಬಾಯಿ ತುಂಬಾ ಮಾತಾಡಿದ್ರೆ ಅದೇನು ಗಂಟು ಕಳ್ಕೊತಾರೋ ಈ ಟ್ವಿಟ್ಟರ್ ಜನ” ಅಂತ ಫೇಸ್ಬುಕ್ ಜನ ಲೇವಡಿ ಮಾಡುವುದೂ ಸಾಮಾನ್ಯವಾಗಿ ಕೇಳಬಹುದಿತ್ತು. ಇವೆಲ್ಲಾ ಇದ್ದರೂ ಶಾಂತಿ ಸಾಮರಸ್ಯಕ್ಕಾಗಿ ಸತತವಾಗಿ ಮೂರು ಸಲ ಪ್ರಶಸ್ತಿಯನ್ನು ಪಡೆದುಕೊಂಡಿತ್ತು ಈ ಊರು. ಎಲ್ಲಾ ಚನ್ನಾಗೇ ಇತ್ತು. ಈ ಗಲಭೆ ಆಗುವವರೆಗೆ…

ತತ್ವಪದ ಹಾಡುವ ಮುದುಕ ತನ್ನ ಪಾಡಿಗೆ ತಾನು ಬಡಬಡಿಸುತ್ತಿದ್ದ – “ಹೊಸ ಹೊಸಾ ವಿಚಾರ ಬರತಾವು, ಹೊಸ ಹೊಸಾ ಕಾಲ ಬರತಾವು, ಆದರ ಮನಷಾ ಬುದ್ಧಿ ಹಾಂಗಾ ಇರತಾದಾ ನೋಡು ಮತ್ತಾ…” ದೂರದ ಮೂಲೆಯಲ್ಲಿದ್ದ ಟಿವಿಯಲ್ಲಿ ಗಲಭೆಯ ಸವಿಸ್ತಾರ ವರದಿಯ ಪ್ರಸಾರ ಮೂವ್ವತ್ತೊಂಭತ್ತನೇ ಬಾರಿಗೆ ಶುರುವಾಯಿತು!

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

13 Comments
Oldest
Newest Most Voted
Inline Feedbacks
View all comments
Radhika
10 years ago

Super Vasuki! FB, Twitter yugadalloo namma TNS avra naming convention prabhaava biTTilla 😀

Vasuki
10 years ago

TNS prabhaava enalla…aa hesarugalige artha ide…

Narayana Tantri = Nano Technology
Vagdevi Mukesh = Facebook
Jakkur Markandeya = Mark Zuckerberg

😉

Anitha Naresh Manchi
Anitha Naresh Manchi
10 years ago

🙂 🙂 ಬಂದೇ ಬರತಾವ ಇಂತಾ ಕಾಲ 🙂

Akhilesh Chipli
Akhilesh Chipli
10 years ago

ತುಂಬಾ ಚೆನ್ನಾಗಿದೆ. ಗುಡ್

amardeep.p.s.
amardeep.p.s.
10 years ago

very nice vasuki ji….

Prajwal Kumar
10 years ago

ಬೇರೆ ಯಾರೋ ಬರೆದಿದ್ರೆ ಈ "ಜಕ್ಕೂರಿನ ಮಾರ್ಕಂಡೇಯ" ದ ಅರ್ಥ ಹುಡುಕ್ತಾ ಇರ್ಲಿಲ್ಲ!
ನೀವು ಬರ್ದಿರೋದ್ರಿಂದ ಅಲ್ಲೊಂದು 'ಪನ್' ಇರ್ಬೇಕು ಅಂತ ಹುಡುಕಿ ಅದು ಫೇಸ್ಬುಕ್ಕಿನ ಸಿ.ಇ.ಒ. ಅನ್ನೋದು ಗೊತ್ತಾಯ್ತು 😉

Susheel Sandeep
10 years ago

Super!
Tatvapada haadtaa kootidda kaNNu kANada, aayassu teerida aa thaathana hesaru 'ArkuTTappa' antaana? 😉

prashasti.p
10 years ago

Sooper Vasuki bhai.. welcome back to Panju 🙂 Jakkur markandeya == zuckerberg .. narayana tantri=nano technology.. Awesome 🙂 🙂

ಕೃಷ್ಣ
ಕೃಷ್ಣ
10 years ago

ತುಂಬಾ ಚೆನ್ನಾಗಿದೆ… ಐ ಎಮ್ ಇಂಪ್ರೆಸ್ಡ್…..

Harsha D P
Harsha D P
10 years ago

Super. Creative.
Facebook may not live for 200+ years. The thing which is trend today will die in next 20 years due to fast generation. Example: orkut.
ಮಹಾ ಪರ್ವ ಕಾಲ ಇದು.

Narayan Sankaran
Narayan Sankaran
10 years ago

CHENNAAGI BANDIDE. However, I thought it might have part-2. I mean to say the conclusion perhaps, is not conclusive enough 🙂

Vasuki
10 years ago

Katheyannu mechchida ellarigoo tumbaa thanks! 🙂

Gerald Carlo
Gerald Carlo
3 years ago

ಇಪ್ಪತ್ತಮೂರನೇ ಶತಮಾನದಲ್ಲೂ FB ಮತ್ತು Twitter ಇರುವುದು ನೋಡಿ ಖುಷಿಯಾಯ್ತು.

13
0
Would love your thoughts, please comment.x
()
x