“ಹೆಣ್ಣಾಗಿ ಹುಟ್ಟೊಕ್ಕಿಂತ ಮಣ್ಣಾಗಿ ಹುಟ್ಟಿದರೆ
ಮಣ್ಣಿನ್ಮೇಲೊಂದು ಮರವಾಗಿ ಹುಟ್ಟಿದರೆ
ಪುಣ್ಯವಂತರಿಗೆ ನೆರಳಾಗಿ.”
ಇದು ನಮ್ಮ ಜಾನಪದ ಗೀತೆಗಳಲ್ಲಿ ಬರುವ ಗರತಿಯ ಹಾಡಿನ ಒಂದು ತುಣುಕು.ಆಕೆ ಹೆಣ್ಣು.ಆಕೆಗೆ ಅದ್ಯಾಕೋ ಬದುಕು ಸಾಕಾಗಿದೆ. ಈ ಹೆಣ್ಣಿನ ಬದುಕಿನಲ್ಲಿ ಪುರುಷನ ಆತನ ಸಾಮಾಜಿಕ ನಿಲುವಿನ ಆಘಾತ ಚೇತರಿಸಿಕೊಳ್ಳಲಾಗದಂತಹ ನೋವು ನೀಡಿದೆ.ಅದಕ್ಕಾಗೆ ಆಕೆ ಮಣ್ಣಾಗಿ ಇಲ್ಲವೇ ಮರವಾಗಿ ಹುಟ್ಟಿದ್ದರೆ ಪುಣ್ಯವಂತರಿಗೆ ಆಸರೆಯಾಗಿ ನೆರಳಾಗಿ ಬದುಕಬಹುದಿತ್ತು.ಸ್ವಾರ್ಥ ರಹಿತಳಾದ ಆಕೆ ಇತರರಿಗೆ ನೆರಳಾಗಿಯೇ ತನ್ನ ಬದುಕಿನ ಸಾರ್ಥಕತೆಯನ್ನು ಬಿಂಬಿಸುತ್ತಾಳೆ.ಆದರೆ ಈ ಹೆಣ್ಣು ಜನ್ಮ ಎಷ್ಟು ತ್ಯಾಗ ಮಾಡಿದರೂ ಒಪ್ಪಿಕೊಳ್ಳದ ಪುರುಷ ಪ್ರಧಾನತೆಯಲ್ಲಿ ಆಕೆ ನರಳಿಹೋಗಿದ್ದಾಳೆ.
ಗರತಿ ಹಾಡುಗಳ ಅನನ್ಯತೆಯ ಗಮನಿಸಿದರೆ ನಿರಕ್ಷರಕುಕ್ಷಿಗಳು, ಸರಳ ಜೀವನದ ರೂವಾರಿಗಳು,ಸದಾ ಮನೆಯಲ್ಲಿಯೇ ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದು ಬದುಕಿನ ಸಾರ್ಥಕತೆಯ ಕಂಡುಕೊಳ್ಳುತ್ತಿದ್ದ ಗರತಿಯರ ಜೀವನಾನುಭವದ ಹಾಡನ್ನು ಕಟ್ಟಿಕೊಡುವಲ್ಲಿ ಆಕೆಯ ಭಾಷಾನೈಪುಣ್ಯತೆಯಲ್ಲಿ ಇಂದಿನ ಶಿಕ್ಷಿತ ಮಹಿಳಾ ಸಮಾಜ ಹಿಂದೆ ಬೀಳುತ್ತಿದೆ. ಸ್ವಾನುಭವವನ್ನು ಸಾದರಪೂರ್ವಕ ಒಳಗೊಳ್ಳುತ್ತ ಕಾವ್ಯಶಿಲ್ಪದ ಕೆತ್ತನೆಯಲ್ಲಿ ಸಿದ್ಧ ಹಸ್ತಳಾಗಿ ಬೆಳೆದು ಬಂದ ದಾರಿ ಸುದೀರ್ಘ ಇತಿಹಾಸ ಹೊಂದಿದೆ.ಅಲ್ಲಿಯ ಹೆಣ್ಣು ಆಕೆಯ ಜಗತ್ತು ಇಂದಿಗೆ ಸ್ವಲ್ಪ ಭಿನ್ನ ಸಂವೇದನೆಗಳಿದ್ದರೂ ಆ ಕಾಲದ ಪಾರಂಪಾರಿಕ ಕಸುವುಳ್ಳ ಕಾವ್ಯಗಳು ನೆಲದ ಹಸಿಯನ್ನು ಒಳಗೊಂಡಿದ್ದು ಸ್ತ್ರೀ ಬದುಕಿನ ಎಲ್ಲ ಒಳಹೊರಗನ್ನು, ನೋವು ನಿಂದನೆಗಳನ್ನು,ತ್ಯಾಗದೊಂದಿಗೆ ಭೋಗದ ಅನುಭವವನ್ನು ಕಟ್ಟಿಕೊಟ್ಟಿವೆ. ಅದೂ ನಮ್ಮ ನೆಲದ ಸಾಂಸ್ಕøತಿಕ ನೆಲಹಾಸನ್ನು ಬಿಡಿಬಿಡಿಯಾಗಿ ಬಿಂಬಿಸಿವೆ.ಆದರೆ ಆ ಸಾಹಿತ್ಯದಲ್ಲೂ ಹೇರಳವಾಗಿ ಕಂಡುಬರುವುದು ದೌರ್ಜನ್ಯದ ಅತಿರೇಕವನ್ನು ಆಕೆ ಮೌನವಾಗಿ ಸವೆಯಬೇಕಾದ ಅನಿವಾರ್ಯತೆ, ತಾನು ಹೆಣ್ಣು ಎಂಬ ಕಾರಣಕ್ಕೆ ಪುರುಷಪ್ರಧಾನ ಸಮಾಜ ನೀಡಿದ ಗರತಿಯ ಪಟ್ಟದ ಮೇಲುಗಾರಿಕೆಯನ್ನು ಮೌನವಾಗಿ ಪ್ರದರ್ಶಿಸುತ್ತ ಒಳಗೊಳಗೆ ತನ್ನತನ ಒಣಗಿ ಹೋಗುತ್ತಿರುವಾಗಲೂ ಮನೆಗಾಗಿ ಮಕ್ಕಳಿಗಾಗಿ ಕುಟುಂಬದ ಮರ್ಯಾದೆಗಾಗಿ ಆಕೆ ಏನೆಲ್ಲವನ್ನೂ ತ್ಯಾಗ ಮಾಡಬೇಕಿತ್ತು.ಇಲ್ಲದಿದ್ದರೆ ಮನೆಗೆ ಕುಟುಂಬಕ್ಕೆ ಕೆಟ್ಟ ಹೆಸರು ತಂದ ಕೀರ್ತಿ ಆಕೆಗೆ ತಗುಲಿಸುವ ಪರಿಪಾಠ ಕುಟುಂಬದ ಹಿರಿಯ ಸ್ತ್ರೀಯರಿಂದಲೇ ಆಗುತ್ತಿತ್ತು.
“ಅತ್ತೆ ಮಾವಗಂಜಿ ಸುತ್ತೇಳು ನೆರೆಗಂಜಿ
ಮತ್ತೆ ಆಳುವ ದೊರೆಗಂಜಿ! ತಂಗ್ಯವ್ವ
ಅತ್ತೆ ಮನೆಯಾಗೆ ಬಾಳಮ್ಮ.”
ಈ ತ್ರಿಪದಿ ಹೆಣ್ಣು ಸದಾ ಇನ್ನೊಬ್ಬರಿಗೆ ಅಂಜಿಯೇ ಬಾಳುವೆ ಮಾಡಬೇಕಾದುದೇ ನೀತಿ ಎಂಬರ್ಥದಲ್ಲಿ ಮೂಡಿದೆ.ಆಕೆಯ ಸಂಪೂರ್ಣ ಸ್ವಾತಂತ್ರ್ಯಹರಣವನ್ನು ಪ್ರತಿಪಾದಿಸಿ, ತಗ್ಗಿಬಗ್ಗಿ ನಡೆಯಬೇಕಾದುದೇ ಸ್ತ್ರೀ ಧರ್ಮವೇನೋ ಎಂಬಂತೆ ಬಿಂಬಿಸಿದೆ.ಹಾಗಾದರೆ ಹೆಣ್ಣಿಗೆ ಸ್ವಂತ ಅಸ್ತಿತ್ವವೇ ಇಲ್ಲ. ಆಕೆ ಸದಾ ಇನ್ನೊಬ್ಬರಿಗೆ ಅಡಿಯಾಳಾಗಿ, ಬೆದರುತ್ತಲೇ, ಬದುಕಿನ ನೋವುಗಳನ್ನು ಹೊರುತ್ತಲೇ ಹೋಗಬೇಕೆಂಬ ಸಿದ್ಧಾಂತವಿದೆ.ಇನ್ನು “ತೌರುಮನೆಗೆ ಮಾತು ತಂದವಳು ಮಗಳಲ್ಲ” ಎಂದು ಜನಪದರು ನುಡಿವಲ್ಲಿ ಗಂಡನ ಮನೆಯ ಎಲ್ಲ ಕಷ್ಟಕೋಟಲೆಗಳ ಅಳುನುಂಗಿ ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ಇತ್ತೆಂದು ತೋರುತ್ತದೆ. ಆಕೆಯ ಯಾವ ಆಕಾಂಕ್ಷೆಗಳಿಗೂ ಬೆಲೆ ಇರದ ಬದುಕನ್ನು ಹೆಣ್ಣು ಅದ್ಹೇಗೋ ನಿಭಾಯಿಸಿದ ಕುರಿತು ,ಮರುಕ ಉಂಟಾಗುತ್ತದೆ.ತವರಿಗೆ ಕೆಟ್ಟ ಹೆಸರು ಬರುವುದೆಂದು ಗಂಡಿನ ಮನೆಯ ಶೋಷಣೆ ದೌರ್ಜನ್ಯಗಳ ತಾಳಿ ಬಾಳಿದ ಸಹಿಷ್ಣುಗಳು ಈ ಹೆಣ್ಣೆ, ಅದು ಅಸಾಧ್ಯವಾದಾಗ ಪ್ರಾಣ ಬಿಟ್ಟರೆ ಹೊರತು ತವರಿಗೆ ಕೆಟ್ಟ ಹೆಸರು ತರಲೊಲ್ಲರು. ಆಕೆಯ ಪ್ರಾಣದ ಬೆಲೆ ಇಷ್ಟೇ ಎಂಬಂತಾಯ್ತು.ಇದು ಸ್ತ್ರೀ ಶೋಷಣೆಯ ಪರಮಾವಧಿ. ಇದು ಇಂದಿಗೂ ಪೂರ್ಣ ಬದಲಾಗಿಲ್ಲ.
“ಬಾಲಕರಿಲ್ಲದ ಬಾಳಿದ್ಯಾತರ ಜನ್ಮ
ಬಾಡಿಗೆ ಎತ್ತು ದುಡಿದ್ಹಂಗ ಬಾಳೆಲೆಯ ಹಾ
ಹಾಸ್ಯುಂಡು ಬೀಸಿ ಒಗೆದ್ಹಂಗ”
ಬಂಜೆತನ ಎಂಬುದು ಬರಿಯ ಹೆಣ್ಣಿಗೆ ಮಾತ್ರ ಎಂಬ ನಂಬಿಕೆಯಿದ್ದ ಕಾಲವಿತ್ತು. ಗಂಡು ಬರಡಾಗಿದ್ದು ಸಂತಾನ ನೀಡುವ ತಾಕತ್ತಿಲ್ಲದಿದ್ದಾಗ್ಯೂ ಆ ದೋಷವನ್ನು ಹೆಣ್ಣಿಗೆ ಕಟ್ಟಿ ಬಿಡುತ್ತಿದ್ದರು.ಆಕೆ ಫಲಪ್ರದೆಯಾಗಿದ್ದರೂ ಗಂಡಿನ ನ್ಯೂನ್ಯತೆಯ ಕಾರಣ ಮಕ್ಕಳಾಗದಿದ್ದಲ್ಲಿ ಮನೆಯವರ ಇಲ್ಲವೇ ಕಂಡವರ ವೈಂಗ್ಯಕ್ಕೆ,ನಿಂದನೆಗೆ ಗುರಿಯಾಗುತ್ತಿದ್ದವಳು ಅವಳೇ ಆಗಿರುತ್ತಿತ್ತು.ಎಲ್ಲವನ್ನೂ ಸ್ತ್ರೀಯ ತಲೆಗೆ ತಂದಿಡುವ ಪರಿಪಾಠ ಅಂದಿನಿಂದಲೂ ಬೆಳೆದುಕೊಂಡೇ ಬಂದಿದೆ.ಹಾಗಾಗಿ ಗರತಿಯಾದವಳು “ಮಕ್ಕಳನ್ನು ಕೊಡು ಶಿವನೇ” ಎಂದು ಹಲಬುವುದರಲ್ಲಿ ಅದಕ್ಕಾಗಿ ಪರಿತಪಿಸುವುದರಲ್ಲಿ ವ್ಯಸ್ತಳು.ಬದುಕಿನ ಏಕೈಕ ಆಸೆಯೆಂದರೆ ಮಕ್ಕಳನ್ನು ಹೊಂದುವುದು. ಮಕ್ಕಳಿಲ್ಲದ ನೋವು ಬಾಡಿಗೆಗೆ ಎತ್ತು ದುಡಿದಂತೆ ಮತ್ತು ಬಾಳೆಲೆಯ ಹಾಸಿ ಉಂಡು ಎಸೆದಂತೆ ನಿರರ್ಥಕ ಎಂಬ ಸಂಗತಿ ವ್ಯಕ್ತಪಡಿಸುತ್ತಾಳೆ. ಮಕ್ಕಳ ನೀಡದ ಪತ್ನಿಯನ್ನು ಪತಿ ತಿರಸ್ಕರಿಸಿದರೂ ತಿರಸ್ಕರಿಸಬಹುದು. ಹಾಗಾಗಿ ಆಕೆ ಅತಂತ್ರತೆಯ ನೆರಳಲ್ಲಿ ಬಳಲುತ್ತಾಳೆ. ಮೊದಲಿಗೆ ಮಗುವನ್ನು ಕೊಡೆಂದು ಪ್ರಾರ್ಥಿಸುತ್ತಾಳೆ.ಹಾಗೆಂದು ಜಾನಪದ ಸಾಹಿತ್ಯದಲ್ಲೆಲ್ಲಾ ಮಹಿಳಾ ಶೋಷಣೆಯೇ ಮುಖ್ಯವಾಗಿಲ್ಲ. ಅವರು ಬದುಕನ್ನು ಬಾಳಿದವರು. ಜಾನಪದ ಸಾಹಿತ್ಯದಲ್ಲಿ ತಾಯಿಯ ಶ್ರೇಷ್ಟತೆಗೆ ಮೊದಲ ಸ್ಥಾನ.ಅದನ್ನು ಹೊರತಾಗಿ ಉಳಿದ ಸ್ತ್ರೀ ಪಾತ್ರಗಳು ಸದಾ ಕಾದ ಕಬ್ಬಿಣದ ಅಲಗಿನ ಮೇಲೆ ನಡಿಗೆಗೆ ಬದ್ಧರಾಗಿರಬೇಕಿತ್ತು.
ಇನ್ನು ಸ್ವಾತಂತ್ರ್ಯವೆಂದರೆ ಸ್ವೇಚ್ಛೆಯಲ್ಲ.ಮಹಿಳೆ ಸ್ತ್ರೀವಾದದ ಪರಿಕಲ್ಪನೆಯಲ್ಲಿ ನಾನಾ ವಿಧದಲ್ಲಿ ಆಯಾಮಗಳಲ್ಲಿ ತನ್ನನ್ನು ಗುರುತಿಸಿಕೊಳ್ಳುತ್ತ ಸಾಗುತ್ತಿದ್ದಾಳೆ.ಸ್ವಾತಂತ್ರ್ಯದ ಪರಿಮಿತಿ ಎಷ್ಟಿರಬೇಕೆಂಬುದು ಮುಖ್ಯ ಅದು ಮಿತಿಯಲ್ಲಿದ್ದರೆ ಉತ್ತಮ.ಇದಕ್ಕೆ ಹೆಣ್ಣು ಗಂಡು ಭೇದ ಬೇಡ. ಮೀತಿ ಮೀರಿದಾಗ ಆಪತ್ತು ಸಹಜ. ಹಾಗಾಗಿ ಬದುಕಿನ ಸಂಪೂರ್ಣ ಅರಿವನ್ನು ಪಡೆಯುವವರೆಗೂ ಒಂದು ಕಟ್ಟಿನಲ್ಲಿರುವುದು ಅಗತ್ಯ.ಪ್ರತಿಯೊಬ್ಬಲ್ಲಿ ರಾಮತ್ವವೂ ಇರುವುದು ರಾವಣತ್ವವೂ ಇರುವುದು.ಅದು ಪುರುಷ ಅಥವಾ ಸ್ತ್ರೀಯರಿಗೆ ಮಾತ್ರ ಅನ್ವಯಿಸತಕ್ಕುದಲ್ಲ.ಜಾನಪದರಲ್ಲಿ ಇಂತಹ ವಿಚಾರಗಳಿಗೆ ಗಂಡು ಹೆಣ್ಣು ಭೇದವಿಲ್ಲದೆ ಕಟ್ಟಿದ ಗಾದೆಗಳಿವೆ.”ಮಲಗಲು ಹೋಗಿ ಮಗ ಕೆಟ್ಟ ಬೀಸೋದಕ್ಕೆ ಹೋಗಿ ಸೊಸೆ ಕೆಟ್ಲು” ಈ ಗಾದೆ ನೈಜ ಬದುಕಿನ ಚಿತ್ರಣ. ಪೂರ್ಣ ಸ್ವಾತಂತ್ರ್ಯ ಸಲ್ಲ.ಅದು ಎಂಥವರನ್ನಾದರೂ ಕೆಡಿಸಿಡುವುದು ಎಂಬರ್ಥದಲ್ಲಿ.
ಇತಿಹಾಸದ ಉದ್ದಕ್ಕೂ ಅರ್ಧದಷ್ಟು ಸ್ತ್ರೀ ಸಮುದಾಯ ಇದ್ದರೂ ಸಾಹಿತ್ಯ, ಕಲೆ, ತತ್ವಜ್ಷಾನ, ಸಾಮಾಜಿಕ ಹಾಗೂ ಸಾರ್ವಕಾಲಿಕ ಮೌಲ್ಯಗಳಲ್ಲೆಲ್ಲಾ ಪುರುಷನದೇ ಮೇಲುಗೈ. ಇದಕ್ಕೆ ಕಾರಣ ಆಕೆಯನ್ನು ಶಿಕ್ಷಣ ವಂಚಿತೆಯಾಗಿಸಿದ ನಮ್ಮ ಸಂಪ್ರದಾಯ. ಗಂಡಸಿನ ಕೈಯ ದಾಳವಾಗಿ ಆತ ಹೇಳಿದ್ದನ್ನೆ ಗಿಳಿಪಾಠವಾಗಿ ಮಾಡಿಕೊಂಡ ಸ್ತ್ರೀ ಸಮುದಾಯ ಅದನ್ನೇ ಊರುಹೊಡೆದದ್ದು ಸಹಜವಾದದ್ದೆ. ನನ್ನೊಳಗಿನ ಅಂತಪ್ರಜ್ಷೆಗೆ ಇದು ಅಸಭ್ಯ ಅನೀತಿ ಎನ್ನಿಸಿದಾಗಲಷ್ಟೇ ನಾನು ಅದರಿಂದ ಮುಕ್ತಳಾಗಲು ಬಯಸುವುದು.ಈ ಸತ್ಯದ ದರ್ಶನ ಮಾಡಿಸುವದು ಜ್ಞಾನ. ಹಾಗಾಗಿ ಅಂದಿನ ಸ್ತ್ರೀಗೆ ಅಸಭ್ಯವೆನಿಸಿದ್ದು ಆಧುನಿಕತೆಯಲ್ಲಿ ಮುಂದುವರೆದ ಇಂದಿನ ಹೆಣ್ಣಿನ ಕಲ್ಪನೆಗಳಲ್ಲದೇಯೂ ಇರಬಹುದು. ಅಂತಹ ಹತ್ತು ಹಲವು ಸಂಗತಿಗಳು ಇಂದಿನ ಸಮಾಜ ಒಪ್ಪಿಕೊಳ್ಳುತ್ತ ಸಾಗುತ್ತಿದೆ.
ಅಕ್ಷರಕ್ರಾಂತಿಯೊಂದಿಗೆ ಇಂದಿನ ಸ್ತ್ರೀ ಸಮುದಾಯ ಬೆಳೆದು ಸಂಪೂರ್ಣ ವಿಶಿಷ್ಟ ಮಹಿಳಾ ಶೈಲಿ,ವಸ್ತು ವೈವಿಧ್ಯತೆಯೆಡೆಗೆ ತನ್ನನ್ನು ಗುರುತಿಸಿಕೊಳ್ಳುವ ಪ್ರಯತ್ನದೊಂದಿಗೆ ಸ್ತ್ರೀ ಸಾಹಿತ್ಯವೂ ಪುರುಷ ಬಹುತ್ವ ಸಾಹಿತ್ಯದೊಂದಿಗೆ ಸಂವಾದಿಯಾಗಿ ನಿಲ್ಲುತ್ತ ಸಾಗಬೇಕಾದ ಅಗತ್ಯ ಇಂದಿಗಿದೆ. ಆಧುನಿಕ ಕನ್ನಡ ಸಾಹಿತ್ಯದಲ್ಲೂ ಸ್ತ್ರೀ ವಿರಚಿತ ಪ್ರಾರಂಭಿಕ ಸಾಹಿತ್ಯಗಳಲ್ಲಿ ದಾರ್ಶನಿಕತೆಯ ಬಿಂಬಿಸುವ ಕಡೆಯಲ್ಲಿಯೇ ಹೆಚ್ಚು ಗಮನ ಕೇಂದ್ರಿಕೃತವಾಗಿದ್ದು ಪುರುಷ ಪ್ರಧಾನತೆಗೆ ಅಪರೋಕ್ಷವಾಗಿ ಬೆಂಬಲದ ನೀತಿಯೇ ಇತ್ತೆಂಬುದು ಸುಳ್ಳಲ್ಲ.
-ನಾಗರೇಖಾ ಗಾಂವಕರ