ಗರಂ ಹವಾ : ವಾಸುಕಿ ರಾಘವನ್

ನಮ್ಮ ದೇಶಕ್ಕೆ ತುಂಬಾ ದೊಡ್ಡ ಇತಿಹಾಸ ಇದೆ. ಆದರೆ ಅದಕ್ಕೆ ನ್ಯಾಯ ಒದಗಿಸುವಷ್ಟು ಸಂಖ್ಯೆಯಲ್ಲಾಗಲೀ, ಗುಣಮಟ್ಟದಲ್ಲಾಗಲೀ ಚಿತ್ರಗಳು ಬಂದಿಲ್ಲ. ನಮ್ಮವೇ ಚಾರಿತ್ರಿಕ ಘಟನೆಗಳು, ರಾಜಕೀಯ ಸನ್ನಿವೇಶಗಳು, ಪ್ರಸಿದ್ಧ ವ್ಯಕ್ತಿಗಳು ನಮ್ಮ ನಿರ್ದೇಶಕರನ್ನು ಪ್ರೇರೇಪಿಸಿದ್ದು ಕಡಿಮೆ. ನಮ್ಮ ಗಾಂಧಿಯ ಬಗ್ಗೆ ಚಿತ್ರ ಮಾಡಲು ರಿಚರ್ಡ್ ಅಟ್ಟೆನ್ಬರೋ ಬರಬೇಕಾಯ್ತು. ಮಂಗಲ್ ಪಾಂಡೆ, ಭಗತ್ ಸಿಂಗ್, ವಲ್ಲಭಭಾಯ್ ಪಟೇಲ್, ಸುಭಾಷ್ ಚಂದ್ರ ಬೋಸ್ ಎಲ್ಲರ ಬಗ್ಗೆ ಒಂದೋ ಎರಡೋ ಚಿತ್ರಗಳು. ನಮ್ಮಲ್ಲಾಗಿರೋ ಯುದ್ಧಗಳ ಬಗ್ಗೆ ಡಾಕ್ಯುಮೆಂಟರಿ ಥರದಲ್ಲಿ ಒಂದೊಂದು ಚಿತ್ರ ಅಷ್ಟೇ.

ಬಾಲ್ಯವಿವಾಹ, ಸತಿ ಪದ್ಧತಿ ಎಲ್ಲಾ ಪ್ರಚಲಿತವಿದ್ದ ಕಾಲ ಹೇಗಿತ್ತು ಅಂತ ನಮಗೆ ತೋರಿಸಿಕೊಡಲು ಚಿತ್ರಗಳೇ ಇಲ್ಲ. ಸಿಪಾಯಿ ದಂಗೆ, ಸ್ವಾತಂತ್ರ ಸಂಗ್ರಾಮ ಇವುಗಳ ಬಗ್ಗೆಯೂ ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ. ಎಮರ್ಜೆನ್ಸಿ ಬಗ್ಗೆ ಎಷ್ಟು ಸಿನಿಮಾ ಇದೆ? ಅಥವಾ ಸ್ವಾತಂತ್ರ್ಯ ಸಿಕ್ಕ ಮೇಲೆ ದೇಶದ ವಿಭಜನೆ ಆಯ್ತಲ್ಲಾ, ಅದರ ಬಗ್ಗೆ ಎಷ್ಟಿವೆ?

ಈ ಕೊರಗನ್ನು ಹೋಗಲಾಡಿಸುವ ಕೆಲವೇ ಚಿತ್ರಗಳ ಪೈಕಿ 1973ರಲ್ಲಿ ಬಿಡುಗಡೆಯಾದ ಹಿಂದಿ/ಉರ್ದು ಚಿತ್ರ “ಗರಂ ಹವಾ”! ಇದರ ನಿರ್ದೇಶಕರು ಎಂ.ಎಸ್.ಸತ್ಯು (ಮೈಸೂರು ಶ್ರೀನಿವಾಸ ಸತ್ಯು) ಇದಕ್ಕೆ ಸತ್ಯು ಅವರ ಹೆಂಡತಿ ಶಾಮ ಜೈದಿ ಹಾಗು ಕೈಫಿ ಅಜ್ಮಿ ಅವರ ಅಧ್ಬುತವಾದ ಚಿತ್ರಕಥೆ ಇದೆ. ಕೈಫಿ ಅಜ್ಮಿ ಅವರ ಸುಂದರವಾದ ಉರ್ದು ಸಾಹಿತ್ಯ, ಉಸ್ತಾದ್ ಬಹದ್ದೂರ್ ಖಾನ್ ಅವರ ಬಿಡದೆ ಕಾಡುವ ಮೋಹಕ ಸಿತಾರ್ ವಾದನ ಚಿತ್ರದ ಹೈಲೈಟ್ಸ್.

ಕಥಾನಾಯಕ ಸಲೀಂ. ಪೂರ್ವಜರ ಹವೇಲಿಯಲ್ಲಿ ತನ್ನ ಹೆಂಡತಿ ಮಕ್ಕಳು, ತನ್ನ ವೃದ್ಧ ತಾಯಿ, ತನ್ನ ಅಣ್ಣನ ಕುಟುಂಬದ ಜೊತೆ ವಾಸ. ಭಾರತಕ್ಕೆ ಸ್ವಾತಂತ್ರ್ಯ ಬಂದಿದೆ. ದೇಶದ ವಿಭಜನೆ ಆಗಿ ಪಾಕಿಸ್ತಾನ ರೂಪುಗೊಂಡಿದೆ. ಸಲೀಂ ಅಣ್ಣ ಹಲೀಮ್ ಪಾಕಿಸ್ತಾನದಲ್ಲಿ ಹೋಗಿ ನೆಲೆಸಲು ನಿರ್ಧರಿಸುತ್ತಾನೆ. ಸಲೀಂ ಮುದ್ದಿನ ಮಗಳು ಅಮೀನಾ ಹಲೀಮ್ ಮಗ ಕಾಸಿಂ ಒಬ್ಬರನ್ನೊಬ್ಬರು ತೀವ್ರವಾಗಿ ಪ್ರೀತಿಸುತ್ತಿರುತ್ತಾರೆ. ಇದರಿಂದ ಅವರ ಪ್ರೇಮಕ್ಕೆ ಅಡ್ಡಿ ಉಂಟಾಗುತ್ತದೆ. ಬಹುಸಂಖ್ಯೆಯಲ್ಲಿ ಮುಸ್ಲಿಮರು ಪಾಕಿಸ್ತಾನಕ್ಕೆ ವಲಸೆ ಹೋಗುತ್ತಿರುವ ಕಾರಣ, ಸಲೀಂ ಶೂ ಕಾರ್ಖಾನೆಗೆ ಸಾಲ ಸಿಗುವುದು ನಿಂತುಹೋಗುತ್ತೆ. ಇವತ್ತು ಇರುವ ಕೆಲಸಗಾರರು ನಾಳೆ ಅಷ್ಟೊತ್ತಿಗೆ ದೇಶದಲ್ಲೇ ಇಲ್ಲ. ಸಲೀಂ ಹಿರಿಯ ಮಗ ಬಕಾರ್ ಫ್ಯಾಕ್ಟರಿ ನವೀಕರಿಸೋಣ ಇಲ್ಲ ಅಂದರೆ ಪಾಕಿಸ್ತಾನಕ್ಕೆ ಹೋಗೋಣ ಅಂತ ಒಂದೇ ಹಠ. ಸಲೀಂ ಯಾವ ಬದಲಾವಣೆಗೂ ಸಿದ್ಧ ಇಲ್ಲ; ಸುತ್ತಲಿನ ಜಗತ್ತು ಅಷ್ಟು ವೇಗವಾಗಿ ಬದಲಾಗುತ್ತಿದ್ದರೂ ಕೂಡ! ಮನೆಯ ಕಾಗದಪತ್ರಗಳು ಹಲೀಮ್ ಹೆಸರಲ್ಲೇ ಇರುವುದರಿಂದ ತಾವಿರುವ ಮನೆಯನ್ನು ಬಿಟ್ಟುಹೋಗುವ ಪರಿಸ್ಥಿತಿ ಉಂಟಾಗುತ್ತದೆ. ಸಲೀಂ ಅಮ್ಮ ಇದಕ್ಕೆ ಸುತರಾಂ ಒಪ್ಪೋದಿಲ್ಲ; ಸತ್ತರೆ ಇದೆ ಹವೇಲಿಯಲ್ಲಿ ಅಂತ ಪಟ್ಟು ಹಿಡಿದು ಕೂರುತ್ತಾಳೆ. ಸಲೀಂ ಕಿರಿ ಮಗ ಸಿಕಂದರ್ ಕೆಲಸ ಹುಡುಕಿ ಹೋದಲ್ಲೆಲ್ಲಾ “ಪಾಕಿಸ್ತಾನಕ್ಕೆ ಹೋಗು, ಅಲ್ಲಿ ನಿಂಗೆ ಅವಕಾಶಗಳು ಹೆಚ್ಚು” ಅಂತ ಬಿಟ್ಟಿ ಸಲಹೆಗಳು. ಈ ಎಲ್ಲಾ ಒತ್ತಡಗಳ ಮಧ್ಯೆ ಸಲೀಂ ಏನು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ ಅನ್ನುವುದು ಚಿತ್ರದ ಸಾರ.

ನನಗೆ ಈ ಚಿತ್ರ ತುಂಬಾ ಇಷ್ಟ ಆಗಲು ಬಹಳ ಕಾರಣಗಳಿವೆ. ಆಗಲೇ ಹೇಳಿದಂತೆ ಚಿತ್ರಕಥೆ, ಸಾಹಿತ್ಯ, ಸಂಗೀತ ಮನಸ್ಸಿನಲ್ಲಿ ಉಳಿಯುವಂಥದ್ದು. ಸಲೀಂ ಪಾತ್ರ ಮಾಡಿರುವ ಬಲರಾಜ್ ಸಾಹ್ನಿ ಭಾರತದ ಅತ್ಯುತ್ತಮ ನಟರಲ್ಲಿ ಒಬ್ಬರು, ಎಂತಹ ಮನೋಜ್ಞ ಅಭಿನಯ ಅವರದ್ದು! ಈ ಕುಟುಂಬ ನಿಮ್ಮ ಮನೆಯ ಪಕ್ಕದವರೇ ಏನೋ ಅನ್ನುವಷ್ಟು ನೈಜವಾದ ಚಿತ್ರಣ ಮೂಡಿಬಂದಿದೆ. ಇದು “ವಿಭಜನೆ”ಯ ಕುರಿತ ಚಿತ್ರ ಆದರೂ, ಆ ಸಮಯದಲ್ಲಿ ನಡೆದ ಮಾರಣಹೋಮ, ಭೀಕರತೆ ಇವುಗಳ ಬಗ್ಗೆ ಗಮನ ಕೊಡೋಲ್ಲ. ಇಡೀ ಚಿತ್ರದಲ್ಲಿ ವಿಭಜನೆಯಿಂದ ಆಗುವ ಪರಿಣಾಮಗಳನ್ನು ಅತ್ಯಂತ ಸಹಜವಾಗಿ ಚಿತ್ರಿಸಲಾಗಿದೆ. ಮನುಷ್ಯ ಮನುಷ್ಯನ ಸಂಬಂಧದಲ್ಲಿ ಬಿರುಕುಂಟಾಗುತ್ತದೆ. ನಂಬಿಕೆ ಕುಸಿಯುತ್ತದೆ. ಉದ್ಯೋಗ, ಉದ್ದಿಮೆ, ಪ್ರೀತಿ ಎಲ್ಲದರ ಮೇಲೆ ಇದರ ಕಪ್ಪು ನೆರಳು ಬೀಳುತ್ತದೆ. ಚಿತ್ರದ ಆರಂಭದಲ್ಲಿ ಎಲ್ಲರೂ ಒಟ್ಟಾಗಿ ಕುಳಿತು ಊಟ ಮಾಡುತ್ತಿದ್ದ ತುಂಬು ಕುಟುಂಬ, ನೋಡ ನೋಡುತ್ತಿದ್ದಂತೆಯೇ “ವಿಭಜನೆ” ಗೊಳ್ಳುತ್ತಾ ಹೋಗುತ್ತದೆ. ಚಿತ್ರ ಎಷ್ಟು ಪ್ರಬುದ್ಧವಾಗಿದೆ ಅಂದರೆ, ಪಾಕಿಸ್ತಾನವನ್ನು ಬೈದು ಇಂಡಿಯಾ ಅನ್ನು ಹೊಗಳುವ ಪ್ರಯತ್ನ ಮಾಡೋದಿಲ್ಲ. ಇಡೀ  ಚಿತ್ರದ “ಟೋನ್” ನಂಗೆ ಹಿಡಿಸಿತು; ಇಷ್ಟೊಂದು ತುಮುಲಗಳ ನಡುವೆಯೂ ಮನುಷ್ಯನ ಒಳ್ಳೆಯತನವನ್ನು, ಒಬ್ಬರಿಗೊಬ್ಬರು ಸಹಾಯಕ್ಕಗುವುದನ್ನು, ಹೃದಯದ ಆಳದಲ್ಲಿ ಇರುವ ಆಶಾವಾದವನ್ನು  ತೋರಿಸಿರುವ ರೀತಿ ನಿಜಕ್ಕೂ ಮೆಚ್ಚುವಂತದ್ದು.

ಈ ಚಿತ್ರದಲ್ಲಿ ಒಬ್ಬ ಜಟಕಾ ಓಡಿಸೋನು ಹೇಳ್ತಾನೆ – “ಈ ಬೀಸೋ ಗಾಳಿ ತುಂಬಾ ಬಿಸಿ ಆಗಿದೆ. ಬೀಸೋ ರಭಸಕ್ಕೆ ಬುಡಸಮೇತ ನಿನ್ನನ್ನು ಕಿತ್ತುಹಾಕುತ್ತದೆ. ಇಲ್ಲ ಅಂದರೆ ಸುಟ್ಟು  ಒಣಗಿಸಿಬಿಡುತ್ತದೆ”

ಯಾಕೋ ಈ ಚಿತ್ರ ನೋಡಿ ತುಂಬಾ ದಿನ ಆದರೂ ಅದರಲ್ಲಿ ಬರೋ ಒಂದು ಶಾಯರಿ ಬಹಳ ಕಾಡ್ತಾ ಇತ್ತು. ಇಂಗ್ಲಿಷ್ ಸಬ್ ಟೈಟಲ್ಸ್ ನೋಡಿ ಉತ್ತೇಜನಗೊಂಡು ಕನ್ನಡದಲ್ಲಿ ಹೇಳೋ ಉದ್ಧಟತನ ಮಾಡಿದ್ದೀನಿ!

ಮನೆ ಮನೆಯಲ್ಲಿ ಉರಿದಿತ್ತು ಚಿತೆ
ಧಗಧಗಿಸಿತ್ತು ಬೆಂಕಿ ಮುಗಿಲೆತ್ತರ

ರಸ್ತೆ, ಊರು, ಕೇರಿ ಎಲ್ಲಾ ಸ್ಮಶಾನ
ಹಾಗಾಗಿತ್ತು ಅಲ್ಲಿ, ಇಲ್ಲಿಯೂ ಕೂಡ

ಗೀತೆಯ ಮಾತು ಯಾರಿಗೂ ಬೇಕಿರಲಿಲ್ಲ
ಕುರಾನ್ ಕೇಳುವವರು ಒಬ್ಬರೂ ಇರಲಿಲ್ಲ

ದಿಗ್ಭ್ರಮೆಗೊಂಡಿತ್ತು ಧರ್ಮ
ಹಾಗಾಗಿತ್ತು ಅಲ್ಲಿ, ಇಲ್ಲಿಯೂ ಕೂಡ!
-ವಾಸುಕಿ ರಾಘವನ್

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Raghunandan K
11 years ago

ಸೊಗಸಾದ ವಿಮರ್ಶೆ, ಶಾಯರಿಯ ಅನುವಾದವೂ ಚೆಂದ ಚೆಂದ…

ರಾಘವೇಂದ್ರ ತೆಕ್ಕಾರ್
ರಾಘವೇಂದ್ರ ತೆಕ್ಕಾರ್
11 years ago

ಚಂದಕೆ ಕಟ್ಟಿಕೊಟ್ಟಿದ್ದೀರಿ, ಓದಿ ಖುಷಿಯಾಯಿತು

Santhosh
Santhosh
11 years ago

sogasaagide.

Bhavani Bharawaj
Bhavani Bharawaj
11 years ago

Shaayariya anuvaada tumba chennagi bandide Vasuki 🙂

4
0
Would love your thoughts, please comment.x
()
x