.
ಎಳ್ಳುಂಡೋಳಿಗೆ ಕಬ್ಬು ಮೆಲುವವಗೇ.. ಎಂದು ಅಪ್ಪ ಸುಶ್ರಾವ್ಯವಾಗಿ ಯಕ್ಷಗಾನೀಯ ಸ್ಟೈಲಿನಲ್ಲಿ ಬೆಳಗ್ಗೆಯೇ ಹಾಡಲು ಶುರು ಮಾಡಿದ್ದರು. ಹಿಮ್ಮೇಳವಾಗಿ ತೆಂಗಿನಕಾಯಿ ಹೆರೆಯುವ ಸದ್ದು ಜೊತೆಗೆ ಕೇಳಿ ಬರುತ್ತಿತ್ತು. ಅಮ್ಮ ಮೂರ್ನಾಲ್ಕು ತೆಂಗಿನಕಾಯಿಗಳನ್ನು ಒಡೆದು ತಂದು ಅಪ್ಪನ ಮುಂದಿಟ್ಟು ಕ್ಲಿನಿಕ್ಕಿಗೆ ಹೋಗೋ ಮೊದಲು ಇದಿಷ್ಟು ತುರಿದುಕೊಟ್ಟು ಹೋಗಬೇಕು ಅಂತ ಫರ್ಮಾನ್ ಹೊರಡಿಸಿದ್ದಳಲ್ಲಾ.. ಅಪ್ಪನ ಆಲಾಪಕ್ಕೆ ಸರಿಯಾಗಿ ಕಾಯಿ ತುರಿಯುವ ವೇಗ ವೃದ್ಧಿಸುವುದು, ಕಡಿಮೆಯಾಗುವುದು ನಡೆಯುತ್ತಿತ್ತು.
ಈಗ ಅಡುಗೆ ಮನೆಗೆ ಹೋದರೆ ಅಮ್ಮ ಏನಾದರೂ ಕೆಲಸ ಅಂಟಿಸುತ್ತಾಳೆ ಎಂದು ನನಗೂ ಅಣ್ಣನಿಗೂ ತಿಳಿದಿತ್ತು. ಆ ದಿನ ಊರಿಡೀ ಹಬ್ಬದ ಸಡಗರ ಇರುವುದರಿಂದ ನಮಗೆ ಯಾರ್ಯಾರ ಮನೆಯಲ್ಲಿ ಏನೇನು ತಯಾರಾಗಿದೆ ಅಂತ ನೋಡುವ ಆಸೆ. ಹೀಗೆ ನೋಡುವುದರಿಂದ ನಮಗೆ ಭಯಂಕರ ಲಾಭ ಇತ್ತು ಅಂದ್ರೆ ನೀವು ನಂಬ್ತೀರೋ ಇಲ್ವೋ ಗೊತ್ತಿಲ್ಲ. ಅದೇನಪ್ಪಾ ಅಂದರೆ ಯಾರ ಮನೆಗೆಲ್ಲಾ ನಮ್ಮ ಭೇಟಿ ಆಗಿರುತ್ತದೋ ಆ ಮನೆಯವರೆಲ್ಲಾ ಏನಾದರೊಂದು ತಿಂಡಿ ತಂದು ಕೊಡುತ್ತಿದ್ದರು. ನಮಗೇನೋ ಇದು ಆಟ. ಆದರೆ ಅಮ್ಮನಿಗೆ ಇದು ಪ್ರಾಣ ಸಂಕಟ. ಆ ಎಲ್ಲಾ ಮನೆಗಳಿಗೆ ಅಮ್ಮನೂ ತಾನು ಮಾಡಿದ ತಿಂಡಿ ಸರಬರಾಜು ಮಾಡಬೇಕಿತ್ತು.
ಆದರೆ ಇದೆಲ್ಲಾ ಸಾಧ್ಯವಾಗುತ್ತಿದ್ದುದು ಅಮ್ಮನ ಕಣ್ಣು ತಪ್ಪಿಸಿ ಹೊರಹೋಗಲು ಆದರೆ ಮಾತ್ರ. ಅದೆಂತಾ ಕ್ಯಾಮೆರಾ ಫಿಟ್ ಮಾಡಿದ್ರೇನೋ, ನಾವಂತೂ ಚೂರು ಕಣ್ಣು ತಪ್ಪಿಸಿ ಪಕ್ಕದ ಮನೆಯ ಜಗಲಿಯಲ್ಲಿ ಕಲ್ಲಾಟವೋ ಗೋಲಿ ಆಟವೋ ಆಡಲು ಕುಳಿತದ್ದು ಗೊತ್ತಾದರೆ ಸಾಕು ಅಮ್ಮ ಅಲ್ಲಿಗೆ ಬಂದು ಕಣ್ಣು ದೊಡ್ಡದು ಮಾಡಿ ನಮ್ಮನ್ನು ಎಬ್ಬಿಸಿ ನಾವು ಮನೆಯಲ್ಲಿ ಅರ್ಧದಲ್ಲಿ ಬಿಟ್ಟು ಬಂದ ಹೋಮ್ವರ್ಕೋ, ಅಮ್ಮನಿಗೆ ಸಹಾಯವೋ ಎಲ್ಲಾ ಮಾಡಬೇಕಿತ್ತು. ಆದರೆ ಇವತ್ತು ನಮ್ಮನ್ನು ಗಮನಿಸುವಷ್ಟು ಬಿಡುವಿಲ್ಲ ಅಮ್ಮನಿಗೆ.
ಕಾಯಿ ಕಡುಬು, ಮೋದಕ ಕರ್ಜಿಕಾಯಿ ಚಕ್ಕುಲಿ ಕೋಡುಬಳೆ, ಎಳ್ಳಿನ ಉಂಡೆ, ಪಾಯಸ, ಪಂಚಕಜ್ಜಾಯ, ಹೋಳಿಗೆ, ಹೀಗೆ ತಯಾರಾಗಬೇಕಿರುವ ತಿಂಡಿಗಳ ಲೀಸ್ಟ್ ಉದ್ದ ಇದ್ದಿದ್ರಿಂದ ನಾವುಗಳು ಆ ದಿನದ ಮಟ್ಟಿಗೆ ಬಚಾವ್ ಆಗ್ತಾ ಇದ್ವಿ.
ಕಣ್ಣಲ್ಲೇ ಇಬ್ಬರೂ ಮಾತನಾಡಿಕೊಂಡೆವು. ಅಡುಗೆ ಕೋಣೆಗಿಣುಕಿದರೆ ಕಿರಾಣಿ ಅಂಗಡಿಯೇ ಲೂಟಿಯಾಗಿ ನಮ್ಮಲ್ಲಿಗೆ ಬಂದಂತಿತ್ತು. ಅಮ್ಮ ಒದ್ದೆ ಕೂದಲಿಗೊಂದು ಬೆಳ್ಳನೆ ಟವೆಲ್ ಕಟ್ಟಿಕೊಂಡು, ಸ್ಟವ್ವಿನ ಎದುರು ನಿಂತು ಏನನ್ನೋ ಹುರಿಯುತ್ತಿದ್ದಳು. ಅಪ್ಪ ಹೇಗೂ ರಾಗಲೋಕದೊಳಗೆ ಹೋಗಿರುವುದರಿಂದ ಪಕ್ಕನೆ ಇಹಕ್ಕೆ ಬಂದು ನಮ್ಮನ್ನು ಗದರಿಸುವ ಹೆದರಿಕೆ ಇರಲಿಲ್ಲ. ಸದ್ದಾಗದಂತೆ ಹೊರ ಬಂದೆವು.
ನಮ್ಮಂತೆ ಮೆತ್ತಗೆ ಹೊರಬಂದ ವಠಾರದ ಮಕ್ಕಳ ದಂಡು ಮನೆಯೆದುರಿನ ರಸ್ತೆಯ ಆ ಬದಿಯಲ್ಲಿದ್ದ ಗದ್ದೆಯಲ್ಲಿ ಸೇರಿತ್ತು. ಕೆಲವರು ಚಿಣ್ಣಿಕೋಲು ಆಡುವ ಹಂಚಿಕೆಯಲ್ಲಿದ್ದರೆ ಇನ್ನು ಕೆಲವರು ಲಗೋರಿಗೆ ಸಿದ್ದರಾಗುತ್ತಿದ್ದರು. ಆದರೆ ನಮಗಿಬ್ಬರಿಗೂ ದೇವಸ್ಥಾನಕ್ಕೆ ಹೋಗುವುದು ಆಗಿನ ಬಹುಮುಖ್ಯ ಕೆಲಸವಾಗಿತ್ತು.ಹಾಗಾಗಿ ಆಡುತ್ತಿದ್ದ ಮಕ್ಕಳಿಗೆ ಕಾಣದಿರಲೆಂಬಂತೆ ಅಲ್ಲಿಂದ ರಭಸವಾಗಿ ನಡೆದು ದೇವಸ್ಥಾನ ಸೇರಿದೆವು.
ಕರ್ಪೂರ ಅಗರಬತ್ತಿಗಳ ಪರಿಮಳ, ಚಂದನಗಂಧಗಳಿಂದ ಲೇಪಿತನಾದ ಬಾಲಗಣಪನ ವಿಗ್ರಹ ಎಲ್ಲರನ್ನೂ ಕೈ ಬೀಸಿ ಕರೆಯುತ್ತಿತ್ತು. ಭಗಂಡೇಶ್ವರ ದೇವಸ್ಥಾನದ ಹೊರಾವರಣದಲ್ಲಿದ್ದ ಅವನ ಪುಟ್ಟ ಗುಡಿ ಹೂಗಳಿಂದ ಶೃಂಗಾರಗೊಂಡಿತ್ತು. ಹಣ್ಣು ಕಾಯಿ ಇಟ್ಟು ನಮಸ್ಕರಿಸುವವರ ಸಾಲೇ ಅಲ್ಲಿತ್ತು. ಆದರೆ ನಮ್ಮ ದಿವ್ಯ ದೃಷ್ಟಿ ಇದ್ದುದು ಅಲ್ಲಿಗೂ ಅಲ್ಲ.
ಒಳಾವರಣದಲ್ಲಿದ್ದ ಗುಡಿಗಳ ಎದುರು ಜನಸಂದಣಿ ಕಡಿಮೆ. ನಾವಿಬ್ಬರೂ ಗುಡಿಗಳ ಕಡೆಗೆ ನೋಡದೇ ಮತ್ತು ಮುಂದಕ್ಕೆ ಹೆಜ್ಜೆ ಹಾಕಿದೆವು. ದೇವಸ್ಥಾನದ ಪ್ರಸಾದ, ನೈವೇಧ್ಯ ಎಲ್ಲವನ್ನೂ ಸಿದ್ದಗೊಳಿಸುವ ಅಡುಗೆ ಮನೆಯೊಂದು ಒಳಸುತ್ತಿನ ಒಂದು ಮೂಲೆಯಲ್ಲಿತ್ತು. ಅದರ ಹೊರಭಾಗದಲ್ಲಿ ದೊಡ್ಡದಾದ ಒಂದು ಕಡೆಯುವ ಕಲ್ಲು. ಆ ಕಲ್ಲು ಎಷ್ಟು ದೊಡ್ಡದಿತ್ತೆಂದರೆ ನಾಲ್ಕು ಜನ ಸೇರಿ ಅದನ್ನು ತಿರುಗಿಸಬೇಕಾಗಿತ್ತು. ಅದಕ್ಕೆಂದೇ ಅದರ ನಾಲ್ಕು ಬದಿಗಳಲ್ಲಿ ಕಲ್ಲಿನ ಪುಟ್ಟ ಮಣೆಯಾಕಾರಾದ ಪೀಠವೂ ಇತ್ತು. ಗಣಪತಿಗೆ ಪ್ರಿಯವಾದ ಅಪ್ಪಂ ಎಂಬ ತಿನಿಸಿಗೆ ಅಕ್ಕಿ ಕಡೆದು ಹಿಟ್ಟು ತಯಾರಿಸಲು ಮುಖ್ಯವಾಗಿ ಬಳಸುತ್ತಿದ್ದ ಈ ಕಲ್ಲಿಗೆ ಇವತ್ತು ಅತ್ಯಂತ ಪ್ರಾಮುಖ್ಯತೆ ಇತ್ತು. ಇಂದಿನ ಸ್ಪೆಷಲ್ ಐಟಮ್ ಆದ ಪಂಚಕಜ್ಜಾಯ ಇಲ್ಲೇ ಹುಡಿಯಾಗಿ ತಯಾರಾಗುತ್ತಿದ್ದುದು. ದೊಡ್ಡದಾದ ಮರದ ಒನಕೆಯಲ್ಲಿ ಹುರಿದ ಬೇಳೆ, ಬೆಲ್ಲ ತೆಂಗಿನಕಾಯಿ ಸೇರಿಸಿ ಕುಟ್ಟಿ ಪುಡಿ ಮಾಡುತ್ತಿದ್ದುದು ಇಲ್ಲಿಯೇ. ಆ ಕೆಲಸವನ್ನು ನಸುಕಿನಲ್ಲೇ ಮಾಡುತ್ತಿದ್ದರು. ಮತ್ತೆ ಮತ್ತೆ ಪ್ರಸಾದದ ಅವಶ್ಯಕತೆ ಬೀಳಬಹುದೆಂಬ ಮುಂದಾಲೋಚನೆಯಲ್ಲಿ ಆ ಕಲ್ಲನ್ನು ಕೂಡಲೇ ಶುಚಿಗೊಳಿಸದೆ ಹಾಗೆ ಬಿಟ್ಟಿರುತ್ತಿದ್ದರು. ಅವಸರದಿಂದ ಅದರಲ್ಲಿರುವ ಪ್ರಸಾದವನ್ನು ತೆಗೆದುಕೊಂಡು ಹೋಗುವಾಗ ಸುಮಾರು ಅದರಲ್ಲೇ ಉಳಿದಿರುತ್ತಿತ್ತು. ನಾವು ನಿತ್ಯವೂ ಕಾಣುವ ಮಕ್ಕಳಾದ ಕಾರಣ ನಮಗಲ್ಲಿಗೆ ಮುುಕ್ತ ಪ್ರವೇಶವೂ ಇತ್ತು.
ಅಡುಗೆ ಮಾವ ತಮ್ಮ ಸೈನ್ಯದೊಡನೆ ಅಪ್ಪಂ ತಯಾರಿಯಲ್ಲಿ ತೊಡಗಿದ್ದುದು ಕಾಣಿಸುತ್ತಿತ್ತು. ಧಗ ಧಗನೆ ಉರಿಯುವ ಒಲೆಯ ಬೆಂಕಿಯ ಎದುರಲ್ಲಿ ಕುಳಿತ ಅವರೂ ಬೆಂಕಿಯ ಗೋಲದಂತೆ ಕಾಣುತ್ತಿದ್ದರು. ಬಿಸಿ ಬಿಸಿ ಅಪ್ಪಂ ತಯಾರಾದ ಕೂಡಲೇ ಅದನ್ನು ಬಾಳೆ ಎಲೆಯಲ್ಲಿ ಇಟ್ಟು ಮಡಚಿ ಪ್ರಸಾದ ಪೊಟ್ಟಣ ಸಿದ್ಧ ಮಾಡುವ ಜನ ಅತ್ತಿತ್ತ ನೋಡದೇ ಆ ಕೆಲಸದಲ್ಲಿ ತೊಡಗಿದ್ದರು.
ನಾವಿಬ್ಬರೂ ಕಲ್ಲಿನ ಸಮೀಪ ಹೋಗಿ ಕುಳಿತುಕೊಂಡೆವು. ಕಲ್ಲಿನಲ್ಲಿ ಅಂಟಿಕೊಂಡಿದ್ದ ಪಂಚಕಜ್ಜಾಯದ ಹುಡಿಯೇ ನಮ್ಮ ಪ್ರಮುಖ ಆಕರ್ಷಣೆಯಾಗಿ ನಮ್ಮನ್ನಿಲ್ಲಿಗೆ ಎಳೆದು ತಂದಿತ್ತು. ಇಬ್ಬರೂ ಬೆರಳುಗಳಲ್ಲಿ ಅದನ್ನು ಸಾಧ್ಯವಾದಷ್ಟು ಕೆರೆದು ತೆಗೆದು ಹೊಟ್ಟೆಗೆ ತಳ್ಳಿಕೊಂಡೆವು. ಅದೆಷ್ಟು ಮಗ್ನರಾಗಿರುತ್ತಿದ್ದೆವೆಂದರೆ ಅಲ್ಲಿ ಅತ್ತಿತ್ತ ಸುಳಿವ ಯಾರೂ ನಮ್ಮ ಗಮನಕ್ಕೆ ಬೀಳುತ್ತಿರಲಿಲ್ಲ. ಅದೆಷ್ಟು ಹೊತ್ತು ಕಳೆಯುತ್ತಿತ್ತೋ ಏನೋ.. ಅಡುಗೆ ಮಾಮನೇ ಹೊರಗೆ ಬಂದು ಮೈಕೈ ಇಡೀ ಬೆಳ್ಳನೆಯ ಪಂಚಕಜ್ಜಾಯದ ಹುಡಿ ಮೆತ್ತಿಕೊಂಡ ನಮ್ಮ ಹನುಮಂತನಂತಹ ಮುಖ ನೋಡಿ ಜೋರಾಗಿ ನಕ್ಕು ‘ ಎಂತಾ ಮಕ್ಕಳೇ ಇದು.. ಪ್ರಸಾದ ಇಲ್ಲಿ ಕೇಳಿದ್ರೆ ಕೊಡ್ತಿದ್ದೆವಲ್ಲಾ’ ಎಂದು ಒಳಗೆ ಹೋಗಿ ಒಂದೆರಡು ಪ್ಯಾಕೆಟ್ ಪಂಚಕಜ್ಜಾಯವನ್ನು ನಮ್ಮ ಕೈಗಳಲ್ಲಿಡುತಿದ್ದರು. ಅದನ್ನು ಮನೆಗೆ ತೆಗೆದುಕೊಂಡು ಹೋಗಿ ತಿಂದರೆ ಕಲ್ಲಿನಲ್ಲಿ ಬೆರಳುಗಳಿಂದ ಕೆರೆದು ತಿಂದ ಪ್ರಸಾದದ ರುಚಿ ಖಂಡಿತಾ ಇರುತ್ತಿರಲಿಲ್ಲ.
ಚೌತಿ ಬಂದಾಗೆಲ್ಲಾ ಈಗಲೂ ನೆನಪಾಗಿ ಕಾಡುವ ಆ ಬಾಲ್ಯದ ದಿನಗಳೆಲ್ಲಾ ಎಲ್ಲಿ ಕಳೆಯಿತೋ..
-ಅನಿತಾ ನರೇಶ್ ಮಂಚಿ.
ಪಂಚಕಜ್ಜಾಯ ಸೂಪರ್ !