ಕತೆ, ಕವಿತೆ, ಕ್ರೈಮು, ಕಾರ್ಟೂನು, ಸಿನಿಮಾ, ಟೀಕೆ-ಟಿಪ್ಪಣಿ, ಸತ್ವವಿಲ್ಲದ ಸರ್ಕಾರಿ ಪತ್ರಗಳು, ಆಫೀಸಿನ ನೀರಸ ಮಣಭಾರದ ರಿಪೋರ್ಟುಗಳು ಹೀಗೆ ಹಿರಿ, ಕಿರಿ, ಕಿರಿಕಿರಿಯೆನ್ನಿಸುವ ಏನೇನೋ ವಿಷಯಗಳ ಬಗ್ಗೆ ಬರೀತಾ ಬರೀತಾ ಚೌತಿಯ ಗಣೇಶನ ಬಗ್ಗೆ ವಾರದ ವಿಶೇಷ ಪುರವಣಿಗೆ ಬರೆಯುವುದೇ ಒಂದು ಖುಷಿ. ಗಣಪತಿ ಎಂದರೆ ನನಗೆ ಹೊಸ ಜಗತ್ತು ತೆರೆದುಕೊಳ್ಳುತ್ತದೆ. ನನಗೆ ಗಣಪ ಎಂದರೆ ಏನೆಲ್ಲಾ, ಎಷ್ಟೆಲ್ಲಾ… ಅತಿಮಧುರ ಸಂಸ್ಕøತ ಶ್ಲೋಕಗಳನ್ನು ಬದಿಗಿಟ್ಟುಕೊಂಡರೂ ಗಣಪತಿಯೆಂದರೆ ನನ್ನದೇ ಹಲವು ವರ್ಷನ್ನುಗಳು ನನಗೆ. 'ಗಣೇಶ' ಎಂದರೆ ಗಣೇಶನ ಮದುವೆಯ ಅನಂತನಾಗ್ ರ ಶುಭ್ರ ನಗೆ ನೆನಪಾದಂತೆ, 'ಗಣಪ' ಎಂದರೆ ಒಬ್ಬ ಡೊಳ್ಳು ಹೊಟ್ಟೆಯ ಠೊಣಪನಂತೆ, 'ಏಕದಂತ' ಅಂದಾಗ ತೆಳ್ಳಗೆ ನಗೆಯುಕ್ಕಿಸುವ ಪಿ. ಮಹಮ್ಮದರ ವ್ಯಂಗಚಿತ್ರದಂತೆ, ಶ್ರೀ ಮಹಾಗಣಪತಿ ಎಂದಾಗ ಹೆಸರಲ್ಲೇ ತೂಕ, ನಿಂತಲ್ಲೇ ಸಾಷ್ಟಾಂಗ ಮಾಡುವ ತವಕ. ಪುಸ್ತಕದ ಕಪಾಟಿನಲ್ಲೂ ಅವನಿಗೊಂದು ಸ್ಥಾನ. ಶೋಕೇಸಿನಲ್ಲೂ ಅವನಿಗೊಂದು ಸ್ಥಾನ. ದೇವರ ಮಂಟಪದಲ್ಲೂ ಅವನು ಹೀರೋ, ಕಾರಿನ ಡ್ಯಾಶ್ ಬೋರ್ಡಿನಲ್ಲೂ ಅವನಿಗೊಂದು ಪರ್ಮನೆಂಟು ಸೀಟು. ಗಣಪತಿಯೆಂದರೆ ಮುಗ್ಧತೆಯ, ಜ್ಞಾನದ, ಹೊಸ ಆರಂಭದ ಪ್ರತೀಕವಾಗಿ ಇರುವುದರಿಂದಲೇ ಏನೋ, ಮನೆಮನೆಯಲ್ಲೂ ಗಣಪ ಎಂದರೆ ಒಂದು ಸ್ಪೆಷಲ್ ಸಲುಗೆ, ಮನೆಮಗಳಿಗಿದ್ದಂತೆ.
ನನ್ನ ಮಟ್ಟಿಗೆ ಬೇರ್ಯಾವ ಹಬ್ಬಗಳಿಗೂ ಇರದ ವಿಶೇಷ ತೂಕ ಚೌತಿಗೆ. ನಮ್ಮ ಕುಟುಂಬದಲ್ಲಂತೂ ಸಂಪ್ರದಾಯ, ಕಟ್ಟುಪಾಡು ಎಂಬ ಪಾರಂಪರಿಕ ಸೀಮೆಗಳಾಚೆಗೆ ನಡೆದು ಆಚರಣೆ, ಉತ್ಸವ ಎಂಬಂತೆ ಖುಷಿಖುಷಿಯಾಗಿ ಅರ್ಥಪೂರ್ಣವಾಗಿ ಆಚರಿಸುವ ಹಬ್ಬ ಎಂದರೆ ಇದೊಂದೇ. ಮನೆಯಲ್ಲಿ ಅಮ್ಮ ಸಂಕಷ್ಟಹರ ಚತುರ್ಥಿಯನ್ನು ಪ್ರತೀ ತಿಂಗಳೂ ಮಾಡೋರು. ಮನೆಯಲ್ಲಿ ಭಜನೆಯೆಂಬುದು ದಿನನಿತ್ಯದ ದಿನಚರಿಯಾಗಿದ್ದರೂ ಚೌತಿಯ ಸಾಮೂಹಿಕ ಭಜನೆ ಅತ್ತೆಯ ಮನೆಯಲ್ಲಿ ಪ್ರತೀ ವರ್ಷವೂ ರಂಗೇರುತ್ತಿತ್ತು. ನಮ್ಮೆಲ್ಲರಿಗಂತೂ ಹಬ್ಬದ ಹೆಸರಿನಲ್ಲಿ ಒಂದು ಭರ್ಜರಿ ಫ್ಯಾಮಿಲಿ ಗೆಟ್-ಟುಗೆದರ್ ಮಾಡೋ ಖುಷಿ. ಚೌತಿಯ ಒಂದು ವಾರದ ಮೊದಲೇ ನಮ್ಮ ಕೌಂಟ್ ಡೌನ್ ಶುರು. ಪ್ರಕೃತಿಯ ಮಡಿಲಿನಲ್ಲಿದ್ದರೂ ಮುದ್ದಾದ ಉದ್ಯಾನವನ್ನು ಸ್ವತಃ ತಮ್ಮ ಕೈಯಾರೆ ಮಾಡಿದ್ದ ಅತ್ತೆಯ ಮನೆಗೆ ಹೋಗುವುದೆಂದರೆ ತಿಂಗಳ ಮೊದಲೇ ನನಗೆ ಉತ್ಸಾಹ. ಶಾಲಾ ದಿನಗಳಲ್ಲಿ ಉಡುಪಿಯಿಂದ ಅಪ್ಪ, ಅಮ್ಮನ ಜೊತೆ ಬರುತ್ತಿದ್ದ ನಾನು, ಕೆಲ ವರ್ಷಗಳ ಬಳಿಕ ಪಕ್ಕದಲ್ಲೇ ನೆಲೆಯೂರಿದ ಮೇಲಂತೂ ಚೌತಿಯೆಂಬುದು ಪರ್ಫೆಕ್ಟ್ ಮನೆಹಬ್ಬವಾಗಿ ಮಾರ್ಪಾಡಾಯಿತು. ದೂರದೂರದಲ್ಲಿ ನೆಲೆಯೂರಿದ್ದ ಚಿಕ್ಕಪ್ಪ, ದೊಡ್ಡಪ್ಪ, ಅತ್ತೆ, ಮಾವಂದಿರ ಆಗಮನ, ಹೋ ಎಂದು ಸೂರು ಹಾರಿಹೋಗುವಂತೆ ಮನೆಯಿಡೀ ಕುಣಿದಾಡುತ್ತಿದ್ದ ಮಕ್ಕಳ ಸೈನ್ಯ, ಪ್ರತಿವರ್ಷವೂ ಪ್ರತಿಷ್ಠಾಪಿಸುವ ಸುಂದರ ಗಣೇಶನ ಮೂರ್ತಿ, ಮಾತಿನ ನಡುವೆಯೇ ಅಲಂಕಾರ, ಅರ್ಧರಾತ್ರಿಯವರೆಗೂ ನಡೆಯುತ್ತಿದ್ದ ಭಜನೆ, ಬಗೆಬಗೆಯ ಆರತಿಗಳು, ಹಲಬಗೆಯ ಭಕ್ಷ್ಯಗಳು, ವಿಸರ್ಜನೆಯತ್ತ ಗಣಪನೊಂದಿಗೆಯೇ ಸಾಗುವ ಭಾರದ ಮನಸ್ಸು, ನೇರವಾಗಿ ತಲೆಯ ಮೇಲೆ ನಿಂತಿರುವ ಚಂದಿರನ ಕಣ್ಣುತಪ್ಪಿಸಿ ಓಡಾಡುವ ಅನಿವಾರ್ಯತೆ… ಹೀಗೆ ಮಾತು, ತರಲೆ, ಕೀಟಲೆ, ಭಕ್ತಿ, ಭಜನೆ, ಔತಣಗಳಲ್ಲೇ ಮನೆಯಲ್ಲೊಂದು ಪರಿಪೂರ್ಣ ಹಬ್ಬ.
ನೆನಪುಗಳನ್ನು ನೆರೇಟ್ ಮಾಡಿಕೊಳ್ಳುವುದೂ ಎಂಥಾ ಉಲ್ಲಾಸದ ಅನುಭವ ನೋಡಿ. ಮೊದಲೇ ಹೇಳಿದಂತೆ ಉಡುಪಿಯ ಮೂಲೆಯೊಂದರಿಂದ ತಾಳಿಪಾಡಿ ಗ್ರಾಮದ ಮನೆಯ ಪ್ರಯಾಣವೇ ನನಗೆ ಉತ್ಸಾಹದ್ದಾಗಿತ್ತು. ತೊಂಭತ್ತರ ದಶಕದ ಕುಡಿಯಾಗಿದ್ದ ನನಗೆ ಸರಕಾರಿ ಕ್ವಾರ್ಟಸ್ಸುಗಳೆಂಬ ಫ್ಲ್ಯಾಟುಗಳಿಂದ ಹೊರಬರಿಸಿ ಕಾಡನ್ನು ಪರಿಚಯಿಸಿದ್ದೇ ಈ ಮನೆ. ರಜಾದಿನಗಳಲ್ಲಿ ಇಲ್ಲಿಗೇ ನನ್ನ ಸವಾರಿ. (ಬುದ್ಧಿ ಬಲಿತಂತೆ ಬಾಲ್ಯದ ನಮ್ಮ ಈ ಕಾಡು, ಬೋಳುಗುಡ್ಡೆಯೆಂಬ ನಾಮಧೇಯವನ್ನು ಪಡೆದುಕೊಂಡಿತು.) ಒಂದೂವರೆ ಘಂಟೆಯ ಪ್ರಯಾಣದ ಬಳಿಕ ಆಗ ತಾನೇ ಪ್ರತಿಷ್ಠಾಪಿಸಿದ್ದ ಮುದ್ದಾದ ಮಂದಸ್ಮಿತ ಗಣಪತಿಯ ಮೂರ್ತಿ ಮನೆಯಲ್ಲೊಂದು ಅದ್ಭುತ ಪ್ರಭಾವಳಿಯನ್ನು ನೀಡುತ್ತಿದ್ದಂತೆ ಭಾಸವಾಗುತ್ತಿತ್ತು, ಮಧ್ಯಾಹ್ನ ಒಂದರ ಹೊತ್ತಿಗೆ ಇನ್ನಷ್ಟು ಅತಿಥಿಗಳ ಆಗಮನ. ಮಾತು, ಗದ್ದಲ, ನಗೆಯ ಮೆರವಣಿಗೆಯೊಂದಿಗೆ ಮುದ್ದು ಗಣಪನಿಗೆ ಅಲಂಕಾರ. ದಿನ ಜಾರುತ್ತಿದ್ದಂತೆಯೇ ದಂಡುದಂಡಾಗಿ ಇನ್ನಷ್ಟು ಅತಿಥಿಗಳ ಆಗಮನ ಮತ್ತು ಮಂತ್ರಗಳ ಉದ್ಘೋಷದೊಂದಿಗೆ ಭಜನೆ ಶುರು. ಇವತ್ತಿಗೂ ಮನೆಯೊಂದರಲ್ಲಿ ಬಂಧು-ಬಳಗ, ಸ್ನೇಹಿತರು, ಹಿತೈಷಿಗಳು ಹೀಗೆ ಎಲ್ಲರೂ ಒಂದಾಗಿ ಹಾಡುತ್ತಾ, ಮನಃಪೂರ್ವಕವಾಗಿ ಮಾಡುವ ಆಚರಣೆ ಒಂದು ಅಪೂರ್ವವಾದ ಕ್ಷಣ ಮತ್ತು ಶಬ್ದಗಳಲ್ಲಿ ಹಿಡಿದಿಡಲಾಗದಂಥಾ ಅನುಭವ. ಮನೆಯ ಹಿರಿಯರು ನಾಮುಂದು ತಾಮುಂದು ಎಂದು ಸಮಯದ ಪರಿವೆಯಿಲ್ಲದೆ ಸುಶ್ರಾವ್ಯವಾಗಿ ಹಾಡುತ್ತಾ ಹೋದರೆ, ಹಿನ್ನೆಲೆಯಲ್ಲಿ ತಾಳಕ್ಕೆ ತಾಳ ಬಡಿಯುತ್ತಾ ನಮ್ಮಂಥಾ ಚಿಣ್ಣರ ಕೋರಸ್ಸು. ಅರ್ಧತಾಸಿಗೊಮ್ಮೆ ಹತ್ತು ಹಲವು ಬಗೆಯ ಮೋದಕಗಳನ್ನು, ಭಕ್ಷ್ಯಗಳನ್ನು ನೋಡಲೆಂದೇ ಅಡುಗೆಮನೆಗೊಂದು ಸಂಕ್ಷಿಪ್ತ ಪ್ರದಕ್ಷಿಣೆ. ಹೀಗೆ ಭಜನಾ ಕಾರ್ಯಕ್ರಮ ಮುಗಿದ ನಂತರ ನಡೆಯುತ್ತಿದ್ದುದು ಆರತಿ ಮತ್ತು ವಿಸರ್ಜನೆಯ ಭಾಗಗಳು. ಅಷ್ಟು ಬಗೆಯ ಆರತಿಗಳನ್ನು ಮನೆಯಂಗಳದಲ್ಲಿ ಕಣ್ತುಂಬಿಕೊಳ್ಳುತ್ತಿದ್ದ ನಮ್ಮ ಕಣ್ಣುಗಳಿಗಂತೂ ಹಬ್ಬವೇ ಹಬ್ಬ.
ಮನೆಯ ಹಿತ್ತಿಲ ಮೂಲೆಯಲ್ಲೇ ಇದ್ದ ಪುಟ್ಟಬಾವಿಯೊಂದರಲ್ಲಿ ನಡೆಯುತ್ತಿತ್ತು ನಮ್ಮ ಗಣೇಶನ ವಿಸರ್ಜನೆ. 'ಭಾದ್ರಪದ ಶುಕ್ಲದ ಚೌತಿಯಂದು, ಚಂದಿರನ ನೋಡಿದರೆ ಅಪವಾದ ತಪ್ಪದು' ಎಂಬ ಸೂಚನೆಯನ್ನು ದಿನವಿಡೀ ಕೇಳುತ್ತಿದ್ದ ನಮಗೆ ವಿಸರ್ಜನೆಯ ಹೊತ್ತಿನಲ್ಲಿ ಕಣ್ಣಿಗೆ ಹೊಡೆಯುವಂತೆ ಮಿಂಚುತ್ತಾ ನಗುತ್ತಿದ್ದ ಚಂದಿರನ ಕಣ್ಣು ತಪ್ಪಿಸಿ ಹೋಗುವುದೇ ಒಂದು ಮಹಾಚಿಂತೆ. ಭಾರವಾದ ಮನಸ್ಸಿನಿಂದ ವಿಸರ್ಜನೆಯತ್ತ ಸಾಗುತ್ತಿರುವಂತೆಯೇ ಚಂದಿರನ ಜೊತೆ ಕಣ್ಣಾಮುಚ್ಚಾಲೆಯಾಡುವ ಅನಿವಾರ್ಯತೆ. ಪ್ರತೀ ವರ್ಷದಂತೆ 'ಅಯ್ಯೋ, ನೋಡೇ ಬಿಟ್ಟೆ ಕಣೇ ಚಂದ್ರನನ್ನು, ಇನ್ನೇನು ಕಾದಿದೆಯೋ ಏನೋ', ಎಂದು ಅಲ್ಲೊಂದು ಇಲ್ಲೊಂದು ಮಂದದನಿಯ ಗೊಣಗಾಟ. ನಿಮಿಷಾರ್ಧದಲ್ಲಿ ಅನ್ನಸಂತರ್ಪಣೆಯ ಬೆನ್ನಿಗೇ ಅರ್ಧರಾತ್ರಿಯಲ್ಲಿ ಒಬ್ಬೊಬ್ಬರಾಗಿ ನಿರ್ಗಮಿಸುತ್ತಿದ್ದಂತೆಯೇ ಮನೆ-ಮನ ಖಾಲಿಯಾಗುತ್ತಿತ್ತು. ಚೌತಿಯ ಮರುದಿನ ರಜಾದಿನವಾದರೆ ಅನಧಿಕೃತವಾಗಿ ನಮ್ಮನಮ್ಮಲ್ಲೇ ಕಾಡುಸುತ್ತುವ, ರಜೆಯನ್ನು ಎಂಜಾಯ್ ಮಾಡುವ ಬಾಲ್ಯದ ಪ್ಲಾನುಗಳು. ಚೌತಿ ವಾರದ ಮಧ್ಯದ ದಿನವಾದರೆ ಮರುದಿನದ ಶಾಲೆಯ ಹೆಸರು ಹೇಳಿ ಬಲವಂತವಾಗಿ ಚಾಪೆಗೆ ದಬ್ಬುತ್ತಿದ್ದ ಹೆತ್ತವರು. ಹೀಗೆ ಮತ್ತದೇ ಮುಂದಿನ ವರ್ಷದ ಗಣಪನಿಗಾಗಿ, ಅವನ ಹೆಸರಿನಲ್ಲಿ ನಡೆಯುವ ಫ್ಯಾಮಿಲಿ ಗೆಟ್-ಟುಗೆದರ್ ಗಾಗಿ ಕಾತರ. ಕಳೆದ ನಾಲ್ಕು ವರ್ಷಗಳಿಂದ ರಾಷ್ಟ್ರ ರಾಜಧಾನಿಯಾದ ದೆಹಲಿಯಲ್ಲಿ ಬೀಡುಬಿಟ್ಟ ನಂತರ ನನಗಂತೂ ಕಳಿಸಿದ ಫೋಟೋಗಳಲ್ಲೇ ಆಚರಿಸಿದ ಹಬ್ಬವನ್ನು ನೋಡಿ ಖುಷಿಪಟ್ಟುಕೊಳ್ಳುವ ಅನಿವಾರ್ಯತೆ. ಗಣಪನೆಂದರೆ ನೆನಪುಗಳ ಭಂಡಾರ, ಹೊಸತನದ ಹುರುಪು, ಮುಂದಿನ ಚೌತಿಯ ಕಾತರ.
ಖಾಸಗಿಯಾಗಿ ಹೀಗೆ ಭರ್ಜರಿಯಾಗಿ ಗಣೇಶನ ಹಬ್ಬವನ್ನು ಆಚರಿಸುವ ಭಾಗ್ಯ ಪಡೆದಿದ್ದ ನನಗೆ ಸಾಮೂಹಿಕವಾಗಿಯೂ ಕಮ್ಮಿ ಉತ್ಸುಕತೆಯಾಗಲೀ, ಅವಕಾಶವಾಗಲೀ ಇರಲಿಲ್ಲ. ಆಗೆಲ್ಲಾ ಚಿತ್ರಕಲೆಯ ಗುಂಗಿನಲ್ಲಿದ್ದ ನನಗೆ ಗಣೇಶೋತ್ಸವದ ಸ್ಪರ್ಧೆಗಳಲ್ಲಿ ಗಣೇಶನ ಚಿತ್ರ ಬಿಡಿಸುವ ಮತ್ತು ಬಹುಮಾನಗಳನ್ನು ಬಾಚುವ ಗೀಳು. ಅದಕ್ಕಿಂತಲೂ ದೊಡ್ಡ ಗೀಳಿದ್ದದ್ದು ಗಣಪನನ್ನು ಹಲವರ ಕುಂಚಗಳಲ್ಲಿ, ಹಲವು ವರ್ಷನ್ನುಗಳಲ್ಲಿ ನೋಡಲು. ಆ ಸಮಯದಲ್ಲಿ ಏನೆಲ್ಲಾ ಟ್ರೆಂಡಿನಲ್ಲಿತ್ತೋ, ಅವೆಲ್ಲಾ ರೂಪಿನಲ್ಲಿ ಗಣಪತಿ ಹಲವು ಕಲಾವಿದರ ಕುಂಚಗಳಲ್ಲಿ ರೂಪುಗೊಳ್ಳುತ್ತಿದ್ದ. ಆರ್ಮಿ ಸಮವಸ್ತ್ರ ಹಾಕಿಕೊಂಡು ವೀರಪ್ಪನ್ನಿನಂತೆ ರೈಫಲ್ ಹಿಡಿದುಕೊಂಡು ಕಾಡಿನಲ್ಲಿ ಅಡ್ಡಾಡುತ್ತಿದ್ದ ಗಣಪ, ಉಪೇಂದ್ರನಂತೆ ವಿಚಿತ್ರವಾಗಿ ಫ್ಯಾಷನ್ ಬಟ್ಟೆಗಳನ್ನು ಧರಿಸಿದ್ದ ಗಣಪ, ಸಾಂಪ್ರದಾಯಿಕವಾಗಿ ಕುಳಿತು ಸೈಲೆಂಟಾಗಿ ಮೋದಕ ಮೆಲ್ಲುತ್ತಿದ್ದ ಗಣಪ, ಗಿಟಾರು ಹಿಡಿದು ರಾಕ್-ಆಂಡ್-ರೋಲ್ ಮಾಡುತ್ತಿದ್ದ ಗಣಪ, ಖಾದಿ, ಗಾಂಧೀ ಟೋಪಿ ಧರಿಸಿ ಹಾಕಿ ರಾಜಕಾರಣಿಯಂತೆ ಮೈಕಿನೆದುರು ಪೋಸು ಕೊಡುತ್ತಿದ್ದ ಗಣಪ, ತೆಂಡುಲ್ಕರ್ ನಂತೆ ಒಂದು ಕೈಯಲ್ಲಿ ಬ್ಯಾಟ್, ಇನ್ನೊಂದು ಕೈಯಲ್ಲಿ ಹೆಲ್ಮೆಟ್ ಎತ್ತಿ ಹಿಡಿದ ಗಣಪ… ಹೀಗೆ ಲೆಕ್ಕವಿಲ್ಲದಷ್ಟು. ಬಹುಶಃ ಗಣಪ ನನಗೆ ಹತ್ತಿರವಾದದ್ದು ಇದೇ ಕಾರಣದಿಂದ ಎಂದನಿಸುತ್ತದೆ ಕೆಲವೊಮ್ಮೆ. ಇವತ್ತಿಗೂ ನನ್ನ ಮಟ್ಟಿಗೆ ಗಣಪ ಎಂದರೆ ಒಬ್ಬ ಅಪ್ ಡೇಟೆಡ್ ಗಾಡ್ ಹೂ ನೆವರ್ ಗೋಸ್ ಔಟ್ ಆಫ್ ಸ್ಟೈಲ್. ಪ್ರತೀ ರೂಪದಲ್ಲೂ, ಪ್ರತೀ ಶೈಲಿಯಲ್ಲೂ ಗಣಪ ಎಲ್ಲೆಂದರಲ್ಲಿ ಸುಮ್ಮನೆ ಮಿಂಚುತ್ತಾನೆ. ಉಡುಪಿಯ ಪ್ರತಿಷ್ಠಿತ ವಿಭೂತಿ ಆರ್ಟ್ ಗ್ಯಾಲರಿ, ದೃಶ್ಯ ಹೀಗೆ ಹಲವು ಸ್ಥಳಗಳಿಗೆ ಅಪರೂಪಕ್ಕೊಮ್ಮೆ ಭೇಟಿಕೊಡುತ್ತಿದ್ದ ನನಗೆ ಕಲಾವಿದರ ಕುಂಚಗಳಲ್ಲಿ ಮೂಡುತ್ತಿದ್ದ ಗಣಪನ ಕಲಾಕೃತಿಗಳು ಅಚ್ಚರಿಯನ್ನುಂಟು ಮಾಡುತ್ತಿದ್ದವು. ಬಿ. ಕೆ. ಎಸ್. ವರ್ಮಾ ಮತ್ತು ಪಿ. ಎನ್. ಆಚಾರ್ಯರ ಕಲಾಕೃತಿಗಳು ಇಂದಿಗೂ ನನ್ನ ಫೇವರಿಟ್. ಎಷ್ಟು ದೇವರುಗಳಿಗುಂಟು ಹೇಳಿ ಇಂಥಾ ಭಾಗ್ಯ!
ಹಲವು ದಿನಗಳಿಂದ ಕವಯತ್ರಿ ಅಮೃತಾ ಪ್ರೀತಮ್ ರ ಕವಿತೆಗಳ ಅಮಲಿನಲ್ಲಿರುವ ನನಗೆ ಅವರ ಬಹುಕಾಲದ ಸಂಗಾತಿ ಇಮ್ರೋಝ್ ಮತ್ತು ಅಮೃತಾರ ನಡುವೆ ನಡೆದ ಘಟನೆಯೊಂದು ಪಂಜಾಬಿಯೊಬ್ಬರ ಜೊತೆ ನಡೆದ ಮಾತುಕತೆಯೊಂದರಲ್ಲಿ ಬಂದುಹೋಯಿತು. "ಅದ್ಭುತ ಪ್ರಪಂಚವೊಂದು ನಿನ್ನನ್ನು ಕಾಯುತ್ತಿದೆ ಕಣೋ ಹೊರಗೆ" ಎಂದು ಅಮೃತಾ ಹೇಳುತ್ತಿದ್ದಂತೆಯೇ ಇಮ್ರೋಝ್, ಅಮೃತಾರ ಸುತ್ತ ಒಂದು ಪ್ರದಕ್ಷಿಣೆ ಮಾಡಿ "ನೀನೇ ನನ್ನ ಜಗತ್ತು" ಎಂದರಂತೆ. ತಕ್ಷಣ ಗಣಪ ನೆನಪಾದ. ಶಿವ, ಪಾರ್ವತಿ, ಕಾರ್ತಿಕೇಯರು ನೆನಪಾದರು.
ಗಣಪನೆಂದರೆ ಪ್ರೀತಿಯಂತೆ… ಅವನು ಶಬ್ದಾತೀತ, ಸೀಮಾತೀತ, ಕಲ್ಪನಾತೀತ ಮತ್ತು ವರ್ಣನಾತೀತ.
*****
ಮಸ್ತ್
khandita ! ganapanendare varnanaateeta,shabtateeta……
ಲೇಖನ ಇಷ್ಟವಾಯ್ತು.
Thank you all 🙂