ವಿಘ್ನೇಶನ ಬಗ್ಗೆ ಬರೆಯೋದೇನನ್ನ
ನಾಥನೆನ್ನಲೇ ಗೌರೀತನಯನನ್ನ
ಯಶವ ಹಂಚುವ ಆದಿ ಪೂಜ್ಯನನ್ನ
ಕರವ ಮುಗಿಯುವೆ ಹರಸು ಗಣಪನೆನ್ನ
ಗಣೇಶನೆಂದರೆ ಏನು ಹೇಳಲಿನ್ನ
ಜಾಣನೆನ್ನಲೇ ವಿದ್ಯಾ ದೇವನನ್ನ
ನಮನವೆನ್ನಲೇ ವಕ್ರದಂತನನ್ನ
ನಶಿಶು ವಿಘ್ನವ ನೀಡಿ ಹರುಷ, ಹೊನ್ನ
ವಿನಾಯಕ, ಗಜಾನನ ಅಂತ ಬರಿಯೆ ಬರೆಯೋದೇನು, ಅದನ್ನೇ ಆದಿಯಕ್ಷರಗಳಾಗಿಸಿ ಒಂದಿಷ್ಟು ಸಾಲು ಗೀಚಬಾರದೇಕೇ ಅಂತೆನ್ನೋ ಆಲೋಚನೆ ನರನ ತಲೆಯಲ್ಲಿ ಹೊಳೆದಿದ್ದೇ ತಡ ಕೃಷ್ಣ ಪಿಂಗಾಕ್ಷನ ಬಗ್ಗೆ ಒಂದಿಷ್ಟು ಸಾಲು ಜೋಡಿಸಾಯ್ತು. ತನ್ನ ದಂತದಿಂದಲೇ ರಾಮಾಯಣವನ್ನು ಬರೆದನೆಂಬೋ ಧೂರ್ಮವರ್ಣನ ಬಗ್ಗೆ ಒಂದಿಷ್ಟು ಸಾಲುಗಳು ನೆನಪುಗಳ ಬುತ್ತಿಯಿಂದ.
ಸುಮುಖ, ಏಕದಂತ, ಕಪಿಲ, ಗಜಕರ್ಣಕ(ಆನೆ ಕಿವಿಯವನು), ಲಂಬೋದರ(ದೊಡ್ಡ ಹೊಟ್ಟೆಯವನು) , ವಿಕಟ, ವಿಘ್ನರಾಜ, ಗಣಾಧಿಪ ಹೀಗೆ ನಾನಾ ನಾಮಗಳಿಂದಲಂಕೃತ ಗಣಪನ ಹಬ್ಬ ಬಂತೆಂದ್ರೆ ಏನೋ ಖುಷಿ. ಈ ಹಬ್ಬದ ದಿನವೂ ಆಫೀಸಿಟ್ಟವರಿಗೆ, ಇದರ ಹಿಂದೆ , ಮುಂದೆ ಎಕ್ಸಾಮಿಟ್ಟವರಿಗೆ ಬಯ್ಯುತ್ತಿದ್ದ ಪದವಿ ಕಾಲದ ಕಾಲವನ್ನು ಈ ಬಾರಿ ರಜಾ ಕೊಡಿಸಿದ ದೇವ ತಳ್ಳಿಹಾಕಿದ್ದಾನೆ. ಶುಕ್ರವಾರವೇ ಹಬ್ಬ ಬಂದು ಮೂರು ದಿನ ರಜೆಯ ಸೌಭಾಗ್ಯವನ್ನೂ ಕರುಣಿಸಿದ್ದಾನೆ. ಬಸ್ಸು ಸಿಕ್ಕಾಪಟ್ಟೆ ರಷ್ಷು ಕಣೋ, ರೈಲಲ್ಲಿ ಟಿಕೆಟ್ ಸಿಗಲ್ಲ. ಬಸ್ಸುಗಳು ಒಂದಕ್ಕೆ ಮೂರು ರೇಟು ಕೇಳ್ತಾರೆ ಕಣೋ ಅಂತೇನೇ ಅಂದ್ರೂ ಜಗ್ಗದ ಮನ ಊರಿಗೆ ಹೊರಡಲೇಬೇಕೆಂಬ ತುಡಿತದಿಂದ ತಯಾರಾಗಿದೆ. ಇಂಟರ್ನೆಟ್ಟು, ಫೇಸ್ಬುಕ್ಕು, ವಾಟ್ಸಾಪು, ಕಾಲಿಗೆ ಕೈಗೆ ಎಲ್ಲಾ ಸೌಲಭ್ಯ ಕೊಟ್ಟಿರೋ ಸ್ವರ್ಣಸದೃಶ ಬೆಂಗಳೂರಿದ್ದರೂ ಇವೆಲ್ಲ ಇಲ್ಲದಿದ್ದರೂ ಹುಟ್ಟಿಬೆಳೆದ ಸಾಗರವೇ ಸ್ವರ್ಗಸಮಾನವಾಗಿ ಹಬ್ಬಕ್ಕೆ ಬಾ ಎಂದು ಕರೆದ ಸಂರ್ಭಮ ಯಾಕೋ. ಲಂಕೆಯನ್ನು ಗೆದ್ದಾಗ ಈ ಲಂಕೆ ಬಂಗಾರದಂತಿದೆ. ಇಲ್ಲೇ ಇದ್ದುಬಿಡೋಣವೇ ಅಣ್ಣಾ ಅನ್ನೋ ಲಕ್ಷ್ಮಣನಿಗೆ ಶ್ರೀರಾಮ ಹೇಳೋ "ಅಪಿ ಸ್ವರ್ಣಮಯಿ ಲಂಕಾ ನ ಮೇ ಲಕ್ಷ್ಮಣ ರೋಚತೇ, ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ" ಅನ್ನೋ ಮಾತಿನಂತೆ ತಾಯ್ನೆಲದ ನೆನಪು ಸೆಳೆಯುತ್ತಿದೆ.
ನಮ್ಮಜ್ಜನ, ಅಪ್ಪನ ಕಾಲದ ನೆನಪುಗಳನ್ನ ಅವರ ಮಾತಲ್ಲಿ ಕೇಳೋದಾದ್ರೆ ಮಲೆನಾಡಲ್ಲಿ ಗಣಪನ ಹಬ್ಬಕ್ಕಿಂತಲೂ ದೀಪಾವಳಿಯ ಆಚರಣೆ ಹೆಚ್ಚು. ದೀಪಾವಳಿಗೆ ದೊಡ್ಡಬ್ಬ ಅಂತ್ಲೇ ಹೆಸರು ಅಲ್ಲಿ. ತಿಲಕರಿಂದ ರಾಷ್ಟ್ರಾದ್ಯಂತ ಪ್ರಸಿದ್ದಿ ಪಡೆದ ಗಣೇಶನ ಹಬ್ಬದ ಹರ್ಷ ಶುರುವಾಗಿದ್ದು ಇತ್ತೀಚೆಗಂತೆ. ಒಟ್ಟು ಕುಟುಂಬಗಳಿದ್ದಾಗ ಮೂಲ ಮನೆಯಲ್ಲಿ ಗಣೇಶನ ತಂದು ಕೂರಿಸ್ತಿದ್ದರಂತೆ. ಹಿಂದಿನ ದಿನ ಗೌರಿ ಪೂಜೆ ಮಾಡಿದ ಹೆಣ್ಮಕ್ಕಳು ಮಾರನೇ ದಿನ ತಮ್ಮಣ್ಣನ ಮನೆಯ ಗಣೇಶನ ನೋಡಕ್ಕೆ ಬರೋದು, ತಮ್ಮ ಮನೆ ಗಣೇಶನ ಪೂಜೆ ಮುಗಿಸಿದ ಮೇಲೆ ಸಂಜೆ ಉಳಿದವರ ಮನೆ ಗಣೇಶನ ಮನೆಗೆ ಹೋಗೋರು, ಗಣಪತಿ ಹಬ್ಬ ಅಂದ್ರೆ ಎಲ್ಲೂ ಹೋಗದೇ ಮಾರನೇ ದಿನವೇ ಉಳಿದವರ ಮನೆಗೆ ಹೋಗೋರು.. ಹಿಂಗೆ ಒಂದೊಂದು ಮನೇಲಿ ಒಂದೊಂದು ಸಂಪ್ರದಾಯವಾದ್ರೂ ಗಣಪತಿಯ ಕಡುಬು, ಚಕ್ಕುಲಿ, ಕರ್ಜೀಕಾಯಿಯ ನೋಡೇ ಆನಂದಿಸೋ ಹುಡುಗರ ಸಂಭ್ರಮವಂತೂ ಎಲ್ಲೆಲ್ಲೂ ಇದ್ದಿದ್ದೇ.ಕುಟುಂಬಗಳು ಹರಿದು ಹಂಚಿ ಹೋದ್ರೂ ಇನ್ನೂ ಮೂಲಮನೆಯಲ್ಲಿರೋ ಹಿರಿಯಣ್ಣ ಪ್ರತಿವರ್ಷ ಗಣಪತಿ ತರೋದು, ಆ ಸಂಭ್ರಮದಲ್ಲಿ ಉಳಿದ ತಮ್ಮಂದಿರು ಭಾಗಿಯಾಗೋ ಪರಂಪರೆ ನಗರೀಕರಣದ ಈ ಕಾಲದಲ್ಲೂ ಅನೇಕ ಕಡೆ ಕಾಣಸಿಗ್ತಿರೋದು ಖುಷಿಯ ಸಂಗತಿ ಅಂತ್ಲೇ ಅನಿಸುತ್ತೆ. ಮೂರು ದಿನ ರಜಾ ಸಿಕ್ತು . ಆ ಗೊಡ್ಡು ಊರಿಗೆಲ್ಲಿ ಹೋಗೋದು ಉಸ್ಸಪ್ಪಾ ಅಂತ ಆಯಾಸ ಪಟ್ಕೊಂಡು. ಎಲ್ಲಾದ್ರೂ ಟ್ರಿಪ್ ಹೋಗೋಣ ಅನ್ನೋ ಹೊಸ ಟ್ರೆಂಡ್ ಶುರುವಾಗಿದೆ ಈಗ ಅಂತ ಗೆಳೆಯರ ಬಾಯಲ್ಲಿ ಕೇಳ್ತಿದ್ದಾಗ ಹೀಗೂ ಉಂಟೆ ಅನಿಸಿ ಮನಸ್ಸಿಗೊಮ್ಮೆ ಪಿಚ್ಚೆಂದಿದ್ದು ಸುಳ್ಳಲ್ಲ. ರಜೆಯಿಲ್ಲದ ಹಿಂದಿನ ವರ್ಷ ಆಫೀಸು ಸಹೋದ್ಯೋಗಿಯೊಬ್ಬನ, ನಮ್ಮ ಪೀಜಿಯಲ್ಲಿನ, ಎದುರು ದೇವಸ್ಥಾನದ ಎದುರಿಟ್ಟಿದ್ದ ಗಣೇಶನನ್ನ ನೋಡೇ ತೃಪ್ತಿ ಪಟ್ಟಿಕೊಂಡಿದ್ದ ನನಗೆ ಈ ವರ್ಷವೊಂದು ರಜಾ ಸಿಕ್ಕಿದೆ ಹಬ್ಬಕ್ಕೆ. ಹಾಗಾಗಿ ಬೇರೆಯವರ ಬಗ್ಗೆ ಯೋಚಿಸೋ ಸಮಯವಿಲ್ಲ. ಊರಿಗೆ ನೆಗೆಯೋ ಹರ್ಷವೊಂದಷ್ಟೇ.
ಬೀದಿಯಲ್ಲೊಂದು ಗಣೇಶ, ಪೇಟೆಯ ಸರ್ಕಲ್ ಗಣಪ ಅಂತ ಇಟ್ಟು ಪೂಜಿಸುವ ಮೂಲಕ ಜನರಲ್ಲೊಂದು ಏಕತೆ ಮೂಡಲೆಂಬ ಅದ್ಭುತ ಪರಿಕಲ್ಪನೆ ತಿಲಕರದ್ದಾಗಿದ್ದರೂ ಒಂದು ವಾರ ಮುಂಚೆಯೇ, ಮತ್ತೊಂದು ವಾರ ನಂತರವೂ ಅಹೋರ್ನಿಷಿ ಮೈಕು ಹಾಕಿ ಹೊಡಿ ಮಗ, ಹೊಡಿ ಮಗ, ನಿನ್ನಿಂದಲೇ ನಿನ್ನಿಂದಲೇ ಅನ್ನೋ ಸಿನಿಮಾ ಹಾಡು ಹಾಕೋ, ರಸ್ತೆಗೆ ಹಗ್ಗ ಕಟ್ಟಿ, ಕಲ್ಲು ಅಡ್ಡವಿಟ್ಟು ಗಣೇಶನ ಚಂದಾ ಕೇಳುವ ಮನಸ್ಥಿತಿಯ ಮುನ್ಸೂಚನೆ ಖಂಡಿತಾ ಇದ್ದಿರಲಿಕ್ಕಿಲ್ಲ ಅವರಿಗೆ. ಪದವಿಯಲ್ಲಿದ್ದಾಗಲೆಂತೂ ಈ ಗಣೇಶ ಚತುರ್ಥಿ, ದೀಪಾವಳಿ, ರಂಜಾನಿನಂತಹ ಹಬ್ಬಗಳ ಹಿಂದೆ ಮುಂದೆಯೇ ಯಾವುದಾದ್ರೂ ಎಕ್ಸಾಮಿಟ್ಟಿರೋದು. ಬೆಳಗ್ಗಿನಿಂದ ಸಂಜೆಯವರೆಗೂ ಮೈಕು ಹಾಕೋ ಇವರು ಮಧ್ಯರಾತ್ರೆಯವರೆಗೂ ಬಾಗಿಲು ಬಂದ್ ಮಾಡದಿದ್ದಾಗ ಯಾಕಪ್ಪಾ ದೇವ್ರೆ ನಿನ್ನ ಹಬ್ಬಗಳಿಗಿಷ್ಟು ಕೂಗಾಟ ? ಇರುವೆಯ ಸಪ್ಪಳವನ್ನೂ ಕೇಳೋ ನಿನಗೀ ಬೊಬ್ಬಿರಿಯೋ ಪ್ರಾರ್ಥನೆ ಬೇಕೇ ಅಂತ ಕೇಳಬೇಕೆನಿಸುತ್ತಿತ್ತು. ಆದ್ರೂ ಪ್ರತೀ ಸಲ ಹಬ್ಬ ಬಂದಾಗ್ಲೂ ನಾನು ಹದಿನೈದು ಗಣೇಶ ನೋಡಿದೆ, ನಿಂದೆಷ್ಟು ? ಇಪ್ಪತ್ತಾ ? ತಡಿ ಸಂಜೆ ಹೊತ್ಗೆ ನಾನು ಇನ್ನೊಂದಿಷ್ಟು ಗಣೇಶ ನೋಡೇ ಇಲ್ಲ. ಆ ಚಾಮರಾಜಪೇಟೆದು, ವಿನೋಬಾ ಶಾಲೆದು, ಗಣಪತಿ ದೇವಸ್ಥಾನದ್ದು, ನಗರೇಶ್ವರ ದೇವಸ್ಥಾನದ್ದು, ಭಾಹುಸಾರ ಕ್ಷತ್ರಿಯದ್ದು, ಅಶೋಕ ರಸ್ತೇದು.. ಹಿಂಗೆ ಸುಮಾರಷ್ಟು ಪೇಟೆ ಗಣಪನ್ನ ನೋಡೋದಿನ್ನೂ ಬಾಕಿ ಇದೆ. ಮನೆ ಸುತ್ತ ಮುತ್ತ ಇರೋ ಗಣಪನ್ನ ನೋಡಿದ್ದಷ್ಟೇ ಅಂತ ಮುಂಚಿನಂತೇ ಈಗ್ಲೂ ಮಾತಾಡೋ ಬಯಕೆಗಳು ಗರಿಗೆದುರುತ್ತೆ.
ನಮ್ಕಡೆ ಎಲ್ಲಾ ಗಣೇಶ ಅಂದ್ರೆ ಇಷ್ಟವಾಗೋದು ಹಬ್ಬಕ್ಕಂತ ಮಾಡೋ ಹಲತರದ ತಿಂಡಿಗಳಿಂದ. ಬೆಲ್ಲದ ಪಂಚಕಜ್ಜಾಯ, ಸಕ್ಕರೇದು ಅಂತ ಮುಖ್ಯವಾಗಿ ಎರಡು ತರದ್ದು ಮಾಡಿದ್ರೂ ಪ್ರತೀ ಮನೇದು ಒಂದೊಂದು ರುಚಿ ಅದಕ್ಕೆ. ದಪ್ಪ ಚಕ್ಕುಲಿ, ಸಣ್ಣದ್ದು, ವೃತ್ತಾಕಾರದ್ದು, ಉದ್ದುದ್ದದ್ದು.. ಹೀಗೆ ಹಲ ರೂಪದ ಚಕ್ಕುಲಿ, ಕೋಡುಬಳೆ, ಕಡುಬು ಹೀಗೆ ಒಂದೊಂದು ಮನೇಲಿ ಒಂದೊಂದು ತರಹ ಸಿಹಿ ಈ ಹಬ್ಬಕ್ಕೆ. ಬೆಳಬೆಳಗ್ಗೆ ಮನೇ ಪೂಜೆ ಮುಗಿಸಿಬಿಟ್ರೆ ಆಮೇಲೆ ಈ ಹೊಟ್ಟೆಪೂಜೆಯೆ. ಸಂಜೆ ಚಂದ್ರನ ನೊಡಬಾರದೆಂಬ ನಂಬಿಕೆಯಿಂದ ಎಲ್ಲಿದ್ದರೂ ಸಂಜೆಯಾಗೋದ್ರೊಳಗೆ ಮನೆ ಸೇರಬೇಕೆನ್ನೋ ಆಜ್ನೆ ಮನೆಯಿಂದ. ಎಷ್ಟು ಬೇಡವೆಂದ್ರೂ ಕನ್ನಡಿಯ ಮೂಲಕವಾದ್ರೂ ತನ್ನ ಮೊಗವ ನಮಗೆ ತೋರಿಸೇ ಬಿಡೋ ಹಂಬಲ ಆ ಚಂದ್ರನಿಗೂ ಅಂದು. ತಗೋ ಅದಕ್ಕೆ ಸರಿಯಾಗಿ ಅಜ್ಜನ ಬಾಯಲ್ಲೋ, ಅಮ್ಮನ ಬಾಯಲ್ಲೋ ಶ್ಯಮಂತಕ ಮಣಿಯ ಕತೆ ಕೇಳೋ ಭಾಗ್ಯ ನಮಗೆಲ್ಲಾ. ಚಂದ್ರ ಕಂಡ್ರೆ ಏನಾಗುತ್ತೆ, ಅದೊಂದು ಮೂಢನಂಬಿಕೆ ಅಂತ ಬೊಬ್ಬಿರಿಯೋ ವೈಜ್ನಾನಿಕರ ತರ್ಕಕ್ಕಿಂತ ವರ್ಷಕ್ಕೊಂದು ದಿನವಾದ್ರೂ ನಮ್ಮ ಜೊತೆಗೆ ಕೂತು ಪ್ರೀತಿಯಿಂದ ಮಾತಾಡುತ್ತಿದ್ದ , ಆಸಕ್ತಿಯಿಂದ ಕತೆ ಹೇಳುತ್ತಿದ್ದ ಅಜ್ಜನ ಮೊಗದಲ್ಲಿ ಆಗ ಕಾಣುತ್ತಿದ್ದ ಖುಷಿ, ಕಣ್ಣುಗಳಲ್ಲಿ ಮೂಡುತ್ತಿದ್ದ ಆ ಕಾಂತಿಯಿದ್ಯಲ್ಲ.. ಆಹಾ, ಅದೇ ಎಷ್ಟೋ ಪಾಲು ಉತ್ತಮ ಅಂತ ಅನಿಸುತ್ತಿತ್ತು. ಈಗ್ಲೂ ಅನಿಸುತ್ತೆ ಬಿಡಿ. ಗಣಪತಿ ಹಬ್ಬ ಅಂದ್ರೆ ನೆನಪಾಗೋದು ಮೂಮೆಂಟ್ಸುಗಳು. ಬ್ರಹ್ಮಕಪಾಲ, ಶ್ಯಮಂತಕ ಮಣಿಯ ಕತೆ, ಹಿರಣ್ಯ ಕಶಿಪುವಿನ ಕತೆ, ಅಯ್ಯಪ್ಪನ ಕತೆ.. ಹೀಗೆ ಪ್ರತೀ ವರ್ಷ ಹೊಸ ಹೊಸ ಪ್ರಸಂಗಗಳನ್ನ ಗೊಂಬೆಗಳ ಮೂಲಕ ನಿರೂಪಿಸುತ್ತಿದ್ದ ನಮ್ಮೂರಿನ ಯುವಕ ಸಂಘಗಳ ಶ್ರಮ ನಿಜಕ್ಕೂ ಸಖತ್ ಖುಷಿ ಕೊಡ್ತಿತ್ತು. ಆ ಸಂಘಕ್ಕಿಂತ ಇವರದ್ದು ಚೆನ್ನಾಗಿತ್ತು, ಇವರಿಗಿಂತ ಅವರದ್ದು ಅಂತ ವಾದವಿವಾದಗಳೇ ನಡೆದುಬಿಡುವಷ್ಟು ಚೆನ್ನಾಗಿ ಮಾಡುತ್ತಿದ್ದ ಆ ಸಂಘಗಳೆಲ್ಲಾ ಎಲ್ಲಿ ಹೋದವೋ ಇಂದು ಅನಿಸುತ್ತೆ. ಹಿಂದಿನ ವರ್ಷ ಊರಲ್ಲಿ ಒಂದು ಪ್ರಸಂಗವೂ ಆಗಲಿಲ್ಲ ಅಂತ ಕೇಳಿ ಸಖತ್ ಬೇಜಾರಾಗಿತ್ತು. ನಗರೀಕರಣದಿಂದ ನಶಿಸುತ್ತಿರೋ ಕಲೆಗಳಲ್ಲಿ ಇದೂ ಒಂದಾಯ್ತೇ ಅನ್ನೋ ಆತಂಕ ಈ ಸಲವಾದ್ರೂ ನಿವಾರಣೆಯಾಗಿ ಒಂದಿಷ್ಟು ಪ್ರಸಂಗಗಳು ಕಾಣಸಿಗಲೆಂಬ ಆಸೆ ಈ ಬಾರಿ.
ಶಿಮಮೊಗ್ಗದ ರಾಮಣ್ಣ ಶೆಟ್ಟಿ ಪಾರ್ಕ್ ಗಣಪತಿ, ಹಿಂದೂ ಮಹಾ ಸಭಾ ಗಣಪತಿ, ಗೋಪಾಳದ ಗಣಪತಿ, ದೂರವಾಣಿ ಬಡಾವಣೆ ಗಣಪತಿ.. ಹೀಗೆ ಸಖತ್ ನೆನಪುಗಳ ತೋರಣ ಈ ಹಬ್ಬದ ನೆನಪಾದಾಗೆಲ್ಲ. ಆಗ ಗಣಪತಿ ನೋಡಲೆಂದೇ ಸೈಕಲ್ ತಗೊಂಡು ಸುತ್ತುತ್ತಿದ್ದ ಮಜಾ ಈಗ ಈ ಬೆಂದಕಾಳೂರಿನ ವೋಲ್ವೋವಿನ ಏಸಿಯಲ್ಲೂ ಸಿಗ್ತಿಲ್ಲ. ಯಾಕೋ ಗೊತ್ತಿಲ್ಲ. ಮೊದಲೇ ಅಂದಂತೆ ಜನನೀ ಜನ್ಮಭೂಮಿಶ್ಚ.. ಅನ್ನೋ ಮಾತಿನ ಮಹಿಮೆಯಿರಬಹುದೇನೋ. ಊರಿಗೆ ಹೊರಡೋ ಸಮಯವಾಗ್ತಾ ಬಂತು. ವರ್ಷಕ್ಕೊಮ್ಮೆಯಾದ್ರೂ ಸಿಗೋ ಗೆಳೆಯರನ್ನೆಲ್ಲಾ ಭೇಟಿ ಮಾಡಬೇಕು, ದೊಡ್ಡಪ್ಪಂದಿರ ಮನೆಗೆ ಹೋಗಬೇಕು, ಅದು ಮಾಡಬೇಕು, ಇದು ಮಾಡಬೇಕು ಅಂತ ನೂರೆಂಟು ಬಯಕೆ. ರೆಕ್ಕೆಯಿದ್ದಿದ್ರೆ ಹಾರೇ ಹೋಗ್ತಿದ್ನೇನೋ ಊರಿಗೆ. ಆದ್ರೆ ಏನ್ಮಾಡೋದು ? ಈ ಟ್ರಾಫಿಕ್ಕಲ್ಲಿ ಮೆಜೆಸ್ಟಿಕ್ಕಿಗೆ, ಅಲ್ಲಿಂದ ತುಂಬಿ ತುಳುಕೋ ಯಾವುದೋ ಬಸ್ಸಿನ ಕೊನೆಯ ಸೀಟಿನಲ್ಲೇ ಸಾಗೋ ಭಾಗ್ಯ ಬಿಡುವುದಿಲ್ಲವಲ್ಲ ನನಗೆ. ಏನೇ ಅನ್ನಿ. ಊರ ಹಬ್ಬದ ಗೆಲುವ ಮುಂದೆ ಇವೆಲ್ಲಾ ಗೌಣ. ರಜೆ ಸಿಕ್ಕಿದ್ದೇ ದೊಡ್ಡ ವಿಷಯ 🙂 ಸಿಗುವೆ ಮತ್ತೊಮ್ಮೆ. ಅಲ್ಲಿಯವರೆಗೆ ನಿಮಗೆ, ನಿಮ್ಮ ಮನೆ ಮಂದಿ, ಗೆಳೆಯರಿಗೆಲ್ಲಾ ನನ್ನ ಪರವಾಗಿ ಗಣೇಶನ ಹಬ್ಬದ ಶುಭಾಶಯಗಳು..
*****
ವಿಪರೀತದ ಗಣೇಶನ ಹಬ್ಬ ಮುಂದೊಮ್ಮೆ
ಬರಬಹುದು ಎಂಬ ಕಲ್ಪನೆ ತಿಲಕಗಿರಲಿಲ್ಲ.
ಡ್ರಮ್, ಜಾಂಜ್, ಪಟಾಕಿ ಹಾವಳಿಗಳ
ಬಗ್ಗೆ ಯೋಚಿಸಿರಲಿಲ್ಲವೆಂದೆನಿಸುತ್ತದೆ.
ಚೆನ್ನಾಗಿ ಮೂಡಿ ಬಂದಿದೆ. ಧನ್ಯವಾದಗಳು ಪ್ರಶಸ್ತಿ.