ಗಣತಂತ್ರ ದಿನ: ಪ್ರಶಸ್ತಿ ಪಿ.ಸಾಗರ

ಗಣತಂತ್ರ ದಿನದ ಶುಭಾಶಯಗಳು !. 
ಓ. ಧನ್ಯವಾದಗಳು. ಅಂದಂಗೆ ನಂಗೆ ಗಿಫ್ಟೆಲ್ಲಿ ? 
ಗಿಫ್ಟಾ? ನಿಂಗಾ? ಯಾಕೆ ? !!!
ಇದೊಳ್ಳೆ ಕತೆ ಆಯ್ತು. ಹುಟ್ಟಿದಬ್ಬಕ್ಕೆ, ಮದುವೆ ವಾರ್ಷಿಕೋತ್ಸವಕ್ಕೆ, ಸ್ನೇಹಿತರ ದಿನಕ್ಕೆ, ಅಪ್ಪಂದಿರ ದಿನಕ್ಕೆ, ಮಕ್ಕಳ ದಿನಕ್ಕೆ, ಪ್ರೇಮಿಗಳ ದಿನಕ್ಕೆ ಅಂತ ವರ್ಷವೆಲ್ಲಾ ಗಿಫ್ಟ್ ಗಿಫ್ಟಂರ್ತೀಯ. ನನ್ನ ದಿನಕ್ಕೊಂದು ಗಿಫ್ಟ್ ಕೊಡಕ್ಕಾಗಲ್ವಾ ? 

ಓ,ಹೌದಲ್ವಾ ? ಇಷ್ಟು ವರ್ಷ ಈ ತರ ಯೋಚ್ನೇನೆ ಮಾಡಿರ್ಲಿಲ್ಲ. ಏನು ಬೇಕು ಗಿಫ್ಟು ನಿಂಗೆ ? 
ಯಾವತ್ತೂ ಅದು ಸಿಕ್ಕಿಲ್ಲ, ಇದು ಸಿಕ್ಕಿಲ್ಲ. ಬೇಕು ಬೇಕು ಅಂತಿದ್ದವನು ಇವತ್ತು ನಿಂಗೇನು ಬೇಕು ಅಂದ್ಯಲ್ಲ. ಅದೇ ಸಂತೋಷ ಮಗನೆ. ನನಗಿನ್ನೇನೂ ಬೇಡ. 
ಏ, ಹಂಗೆಲ್ಲಾ ಹೇಳಂಗಿಲ್ಲ. ಗಿಫ್ಟು ಬೇಕು ಅಂತ ಕೇಳಿದ್ಮೇಲೆ ಕೇಳ್ಮೇ ಬೇಕು. ನೀನು ಕೇಳೋದು ಹೆಚ್ಚಾ ? ನಾನು ಕೊಡೋದು ಹೆಚ್ಚಾ ? 
ಹೌದಾ ಮಗೂ . ಸರಿ , ನಾನು ಕೇಳಿದ್ದು ಕೊಡ್ತೀಯಾ ? 
ವರ್ಷಕ್ಕೆ ಲಕ್ಷ ಲಕ್ಷ ಸಂಬಳ ಎಣಿಸ್ತೀನಂತೆ. ಇನ್ನು ಇಷ್ಟು ವರ್ಷ ಹೊತ್ತ ನಿನಗೊಂದು ಗಿಫ್ಟು, ಅದೂ ನೀನು ಬಾಯ್ಬಿಟ್ಟು ಕೇಳ್ತಿರುವಾಗ ಕೊಡಲಾರೆ ಅಂತೀನಾ ? ಸರಿ ಕೇಳು. 
ಅಷ್ಟಕ್ಕೂ ನಾನೆಣಿಸಿದ ಪ್ರತೀ ಪೈಸೆಯೂ ನಿನಗೆ ಕೊಟ್ಟ ಗಿಫ್ಟೇ ಅಲ್ಲವೇ ? ಅದಕ್ಕೂ ಮಿಗಿಲಾದ ಗಿಫ್ಟು ಬೇಕನ್ನುತ್ತಿದ್ದೀಯ. ಸರಿ ಕೇಳಿಬಿಡು ತಾಯೆ. ನಾನೇನ ಕೊಡಲಿ ನಿನಗೆ ..

ನೀನು ಕಷ್ಟಪಟ್ಟಿದ್ದು ನಿಜವೇ. ಲಕ್ಷ ಲಕ್ಷ ಎಣಿಸಿದ್ದೂ ನಿಜವೇ. ಆದರೆ ನನಗೆ ದಕ್ಕಿದ್ದೇನು ಅದರಲ್ಲಿ ? ಹೊಟ್ಟೆಯಿಂದ ಬಟ್ಟೆಯವರೆಗೆ ಪರಕೀಯ ದಾಸ ನೀನು. ನಿನ್ನ ಸಂಪಾದನೆಯ ನಯಾಪೈಸೆಯೂ ಇಲ್ಲುಳಿಯುವುದಿಲ್ಲ. ಅಂತದ್ದರಲ್ಲಿ ನನಗೆ ಕೊಡ್ತೀನಂತೀಯಲ್ಲ ಎಷ್ಟು ಸತ್ಯವೋ ಇದು ಮಗನೇ ? 
ಹೌದಲ್ಲಾ. ತಿನ್ನೋಕೆ ಮೆಕ್ಡಿ ಬರ್ಗರ್ರು, ಫಿಜ್ಜಾ, ಕೆ.ಎಫ್.ಸಿ, ಫಿಜ್ಜಾ ಹಟ್ಟು, ಕುಡಿಯಲು ಪೆಪ್ಸಿ ಕೋ, ಕೋಕುಗಳು ಅಥವಾ ಅವರ ಅಣ್ಣತಮ್ಮಂದಿರು, ಹಾಕಲು ಲೆವೀಸ್, ಕರೋಕೆ, ನ್ಯೂ ಪೋರ್ಟ್, ಪೀಟರ್ ಇಂಗ್ಲೆಂಡ್, ಪೇಪೇ ಜೀನ್ಸು.. ಶೂ, ಸೆಂಟು, ಕ್ರೀಮುಗಳೆಲ್ಲಾ ಹೋಗ್ಲಿ ಯಕಶ್ಚಿತ್  ಉಪ್ಪಲ್ಲೂ  ಅನ್ನಪೂರ್ಣ ಅನ್ನೋ ಹೆಸರಿಟ್ಟುಕೊಂಡಿರೋ ವಿದೇಶಿಯೇ ಬೇಕೆನುವ  ಪರಕೀಯ ದಾಸ ನಾನು !!!  ತೊಳೆಯೋಕಾದ್ರೂ ಸ್ವದೇಶಿ ? ಊಹೂಂ.  ಅದಕ್ಕೂ ಯುನಿಲಿವರ್ರು, ಸರ್ಫು,  ಮತ್ತೊಂದು. ದುಡಿದಿದ್ದರಲ್ಲಿ ಒಂದು ರೂಪಾಯಾದರೂ ನಮ್ಮ ದೇಶಕ್ಕೆ ?? ಅರೆ ಬ್ಯಾಂಕಲ್ಲಿ ಇಡುತ್ತಿದ್ದೀನಲ್ಲ. ಬ್ಯಾಂಕಲ್ಲಿಡುತ್ತಿದ್ದೇನೆ ತಾಯೆ. ಅದು ನಿನಗೇ ಬರೋದಲ್ಲವೇ ?

ಯಾವ ಬ್ಯಾಂಕಪ್ಪಾ ನಿಂದು . ಡಾಯಿಶ್ ಬ್ಯಾಂಕು, ಸಿಟಿ ಬ್ಯಾಂಕು, ಸ್ವಿಸ್ ಬ್ಯಾಂಕು.. ನೀನಿಟ್ಟ ಮೂಟೆಯಿಂದ ನನಗೆಲ್ಲಿಯ ಲಾಭವೋ ಮಗು  ?!
ಅರೆ ಹೌದಲ್ವಾ ? ನಾನು ತಗೊಂಡ ಕಾರು, ಬೈಕುಗಳೆಲ್ಲಾ ದೇಶದ ಆರ್ಥಿಕತೆಯ ಲಾಭವಲ್ಲವೇ ? 
ಕಾರೇ ? ಯಾವುದಪ್ಪಾ ? ಫೋರ್ಡು, ಐ ೧೦ , ಐ೨೦.. ಬೈಕೆಂದರೆ ಹಯಾ ಬುಜಾ ಶೋಕಿ ನಿಂದು .. ಇದರಿಂದ..

ಅದಕ್ಕೆ ಹಾಕೋ ಪೆಟ್ರೋಲು, ಗ್ಯಾಸು, ಅದಕ್ಕೆ ಕಟ್ಟೋ ತೆರಿಗೆ.. ಅದಾದ್ರೂ ಲಾಭವಲ್ಲವೇ ? 
ಗ್ಯಾಸಿನ ಮೇಲೆ ಲಾಭ ? ಸರ್ಕಾರ ಕೊಡೋ ಸಬ್ಸಿಡಿಯನ ಮರುಮಾತಿಲ್ಲದೇ ಒಪ್ಪಿಕೊಳ್ಳೋ ನೀನು, ತೈಲ ಕಂಪನಿಗಳು ನಷ್ಟ ನಷ್ಟವೆಂದು ದಿನಾ ಕಣ್ಣೀರಿಡುತ್ತಿರೋದನ್ನೂ ನೋಡಿದವ ಆಡೋ ಮಾತೇ ಇದು ?  ದೇಶದ ಹಣ ಯಾವುದೋ ತೈಲ ದೇಶಕ್ಕೆ ಹರಿಸೋದು ಯಾವ ಲಾಭವೋ ? ? ತೈಲಕ್ಕೆ ಕೊಡೋ ದುಡ್ಡು ಡಾಲರಿನಲ್ಲಿ. ಡಾಲರಿನ ಬೆಲೆ ಹೆಚ್ಚಿದಂತೆಲ್ಲಾ ಅಷ್ಟೇ ತೈಲಕ್ಕೆ ಹೆಚ್ಚೆಚ್ಚು ಬೆಲೆ ತೆತ್ತೂ ತೆತ್ತೂ ಹೈರಾಣಾಗಿ ಹೋಗಿದ್ದೇನೆ. ನಿನ್ನ ಶೋಕಿಗೆ ಎಲ್ಲರಿಗೂ ಹೊಗೆಯುಗುಳಿಸಿದ್ದಲ್ಲದೇ ಬೆಲೆಯೇರಿಕೆ ಗುಮ್ಮನ ತಂದಿಟ್ಟಿರುವೆ. ಇದು ಲಾಭದ ಪರಿಯೇ ? 
ಹೌದಲ್ಲಾ ? ಏನು ಉತ್ತರಿಸಬೇಕೆಂದು ತಿಳಿಯದೇ ಮಗ ಅರೆಕ್ಷಣ ಮೌನಿಯಾದ. 

ರಿಂಗಣಿಸಿತು ಮೊಬೈಲು. ಹಲ್ಲೋ ಹಲ್ಲೋ ಹಲ್ಲೋ.. ನೀನೇ ಚಮ್ಮಕ್ ಚಲ್ಲೋ.. ಹಾಡಿನೊಂದಿಗೇ ವಾಸ್ತವಕ್ಕೆ ವಾಪಾಸ್ಸಾದ ಇವ. ಇದಾದರೂ ನಿನಗೆ ಲಾಭವಲ್ಲವೇ ? 
ಇದೇ ? ಮೊಬೈಲೆಂದರೆ ಐಫೋನು, ಮತ್ತೊಂದೆದರೆ ಐಪ್ಯಾಡು, ಹೋಗ್ಲಿ ಮಾತಾಡೋ ದುಡ್ಡು..ಅದಕ್ಕೂ ವೋಡಾಫೋನೇ ಬೇಕಲ್ಲೋ ನಿನಗೆ. ಇದರಿಂದ…
ಎಲ್ಲಾ ಹೋಗ್ಲಿ . ದೇಶೋದ್ದಾರಕ್ಕೆ ಅಂತ ನಾನು ಪ್ರತೀ ವರ್ಷವೂ ತಪ್ಪದೇ ತೆರಿಗೆ ಕಟ್ತೀನಲ್ಲ. ಅದರಿಂದ್ಲಾದರೂ ?
ತೆರಿಗೆ ? ಆ ವಿನಾಯಿತಿ ಈ ವಿನಾಯಿತಿ ಅಂತ ಸುಳ್ಸುಳ್ಳೇ ವಿನಾಯಿತಿ ಪಡೆಯುವವ ನೀನು. ತೆರಿಗೆ ಕಟ್ಟಬೇಕಂತ ಅಗತ್ಯವಿಲ್ಲದಿದ್ದರೂ ಸಾಲ ಪಡೆದು ಅದನ್ನೂ ಇನ್ನೇಲ್ಲೂ ಡಿಪಾಸಿಟ್ ಮಾಡೋ ನೀನು.. ಇದರಿಂದ..

ಹೌದು . ದೇಶಕ್ಕೆ ನಾನೇನು ಕೊಟ್ಟೆ.. ವಿದ್ಯಾರ್ಥಿವೇತನ ಕೊಡು , ಮೀಸಲಾತಿ ಕೊಡು, ಕೆಲಸ ಕೊಡು ಅಂತ ಕೇಳಿದ್ದಲ್ಲದೇ ಪ್ರತೀ ಬಾರಿಯೂ ಬೇಡಿದ್ದಲ್ಲದ್ದೇ ಅದರಲ್ಲೂ ಕೊಳಕು ರಾಜಕೀಯ .
ಪ್ರತೀ ಬಾರಿಯ ಗಣತಂತ್ರದಂದು ಬೇಗನೇ ಎದ್ದು ಭಾರತ್ ಮಾತಾಕೀ ಜೈಯೆನ್ನುತ್ತಿದ್ದ ಬಾಲ ತಾನೇನಾ ಅನ್ನಿಸತೊಡಗಿತು ..

ಎಷ್ಟು ಚೆನ್ನಾಗಿತ್ತಲ್ಲವೇ ಆ ಬಾಲ್ಯ ? ಬೆಳಗ್ಗೆ ಆರೂವರೆಯ ಚಳಿಗೆ ಎಬ್ಬಿಸುತ್ತಿದ್ದ ಅಮ್ಮ. ಹಲ್ಲುಜ್ಜುತ್ತಲೋ , ರೆಡಿಯಾಗುತ್ತಲೋ ಇದ್ದರೂ ಕಿವಿಯೆಲ್ಲಾ ರೇಡಿಯೋ ಮೇಲೆಯೇ ಇರುತ್ತಿತ್ತು.  ಆರೂ  ಐವತ್ತೈದಕ್ಕೆ ಕೆಂಪುಕೋಟೆಯ ಮೇಲೆ ಮಾನ್ಯ ಪ್ರಧಾನಿಗಳು  ಧ್ವಜಾರೋಹಣ ಮಾಡಿ ಮಾಡೋ ಭಾಷಣದ ಬಗ್ಗೆ. ಅಲ್ಲಿ ನಡಿಯುತ್ತಿರೋ ತಯಾರಿಗಳ ಬಗ್ಗೆ ಕೇಳುತ್ತಿದ್ದರೆ ನಾವೇ ದೆಲ್ಲಿಯಲ್ಲಿದ್ದಂತಹ ಕಲ್ಪನೆ. ಶಾಲೆಗೆ ಲೇಟಾಗತ್ತೆ ಬೇಗ ರೆಡಿಯಾಗೋ ಅಂತ ಅಮ್ಮ ಎಚ್ಚರಿಸೋವರೆಗೂ ಕಲ್ಪನಾ ಲೋಕದಲ್ಲೇ ನಾನು . ಕೊಳೆಯಾದ ಶೂಗಳನ್ನೆಲ್ಲಾ ಒರೆಸಿ, ಬಿಳಿ ಪ್ಯಾಂಟು, ಶರಟು ಧರಿಸಿ, ಕೈಗೊಂದು ತಿರಂಗಾದ ಬ್ಯಾಂಡು ಧರಿಸಿ ಶಾಲೆಗೆ ಹೊರಡೋದೇ ಒಂದು ಖುಷಿ. ಜನವರಿಯ ಚಳಿಯಲ್ಲಿ, ದಾರಿ ಕಾಣದಂತೆ  ಮಂಜು ಕವಿದಿರುತ್ತಿದ್ದ ಮಲೆನಾಡಲ್ಲೂ ಗಣರಾಜ್ಯೋತ್ಸವದ ಪ್ರಭಾತ್ ಪೇರಿಯೆಂದರೆ ಅದೊಂದು ಖುಷಿ. ಏಳೂವರೆಗೆ ಶಾಲೆಯಲ್ಲಿ ಧ್ವಜಾರೋಹಣಕ್ಕೆಂದು ಸೇರುತ್ತಿದ್ದೆವು ಎಲ್ಲಾ. ಏಳೂ ಮುಕ್ಕಾಲರ ಹೊತ್ತಿಗೆ ಧ್ವಜಾರೋಹಣ. ಆಮೇಲೆ ಶಾಲಾ ಸಮಿತಿಯವರಿಂದ ಭಾಷಣ. ಹಾರುತ್ತಿರೋ ತಿರಂಗಾವನ್ನು ನೋಡುತ್ತಾ ಹೆಮ್ಮೆಯಿಂದ ಜನಗಣಮನ ಹಾಡುವುದೆಂದರೆ ಮೈಯ ನರನಾಡಿಗಳಲ್ಲೆಲ್ಲಾ ಏನೋ ರೋಮಾಂಚನ. ಉಚ್ಚಲ ಜಲಧಿತರಂಗಾ.. ಅನ್ನೋ ಹೊತ್ತಿಗೆ ನಾನು ಭಾರತೀಯನೆಂಬ ಹೆಮ್ಮೆಯಿಂದ ಶುಭ್ರ, ಉಚ್ಚಾಗಸದಲ್ಲಿ ತೇಲುತ್ತಿದ್ದಂತೆ ಭಾವ. ರಾಷ್ಟ್ರಗೀತೆ ಮುಗಿಯೋ ಹೊತ್ತಿಗೆ ಏನೋ ಧನ್ಯ ಭಾವ. ಈ ನಾಡು ನಮ್ಮದು, ಈ ಭೂಮಿ ನಮ್ಮದು, ಕಣಕಣದಲೂ ಭಾರತೀಯ ರಕ್ತ ನಮ್ಮದು ಅನ್ನೋ ಹಾಡನ್ನು ಕೆಲವೊಮ್ಮೆ ಹೇಳುತ್ತಿದ್ದುದೂ ಉಂಟು. ಶಾಲೆಯಲ್ಲಿ ಹೇಳದಿದ್ದರೂ ರೇಡಿಯೋದಲ್ಲಿ, ಯುವಕ ಸಂಘದವರ ಮೈಕುಗಳಲ್ಲಿ ಅದು ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪಕ್ಕಾ ಕೇಳಿಬರುತ್ತಿದ್ದ  ಹಾಡು. ಮುಖ್ಯ ಅತಿಥಿಗಳು, ಕೆಲ ಹುಡುಗ,ಹುಡುಗಿಯರು ದೇಶದ ಹಿರಿಮೆಯ ಬಗ್ಗೆ, ಅದಕ್ಕಾಗಿ ಮಿಡಿವ, ಮಡಿವ ಬಗ್ಗೆ ಹೆಮ್ಮೆಯಿಂದ, ರೋಷಾವೇಶಗಳಿಂದ ಮಾತನ್ನಾಡುತ್ತಿದ್ದರೆ ಕೇಳುವವರ ಮನ ದೇಶಕ್ಕಾಗೇ ಜೀವನವನ್ನು ಮೀಸಲಿಡುವಂತೆ ಮಿಡಿಯುತ್ತಿತ್ತು. ಸಿಹಿ ವಿತರಣೆ ನಂತರ ಪ್ರಭಾತ್ ಪೇರಿ. ಆ ಶುರುವಾಗುತ್ತಿತ್ತಲ್ಲವೇ ನಮ್ಮ ಕ್ಷಣಗಳು. ಡ್ರಮ್ಮು, ಪೀಪಿ, ಟ್ರಯಾಂಗಲ್ ಹಿಡಿದ ನಮ್ಮ ತಂಡ ಎಲ್ಲರಿಗಿಂತಲೂ ಮುಂದೆ. ಕೆಲವೊಮ್ಮೆ ಹೆಜ್ಜೆ ಹಾಕುವವರ ಮಧ್ಯೆ. ಕೆಲವೊಮ್ಮೆ ಎಲ್ಲರಿಗಿಂತಲೂ ಹಿಂದೆ..

ಹೀಗೆ ಎಲ್ಲೇ ಇದ್ದರೂ ಎಲ್ಲರ ಕಿಮಿ ನಮ್ಮ ವಾದ್ಯಗಳ ಮೇಲೇ. ಢಂ ಢಂ ಢಂ ಎನ್ನೋ ದೊಡ್ಡ ಡ್ರಂ. ಅದಕ್ಕೆ ಸಾಥಿಯಾದ ಟಿಟ್ಟಿರಿಟಿಟ್ಟಿರಿ ಟಿಟ್. ಟಿಟ್ ಟಿಟ್. ಟಿಟ್ಟಿರಿಡಿಟ್ಟಿರಿ ಡಿಟ್… ಅನ್ನೋ ಸಣ್ಣ ಡ್ರಮ್ಮು, ಅದಕ್ಕೆ ಸಾಥಿ ಪೂ ಪೂಪೂ, ಪುಪ್ಪು ಪೂಪೂಪೂ, ಪೂಪೂಪೂ,  ಪುಪ್ಪು ಪೂಪೂಪೂ ಅನ್ನುತ್ತಿದ್ದ ಬ್ಯೂಗಲ್ ಅಥವಾ ಪೀಪಿ. ಟೀಣ್ ಟೀಣ್ ಟೀಣ್ ಅಂತ ಇವಕ್ಕೆ ಸಾಥ್ ಕೊಡುತ್ತಿದ್ದ ಟ್ರಯಾಂಗಲ್ ಅಥವಾ ತ್ರಿಕೋಣ ಇವಿಷ್ಟು ನಮ್ಮ ಶಾಲಾ ಬ್ಯಾಂಡ್ ಸೆಟ್ಟು.ಹಳ್ಳಿ ಶಾಲೆಯಾದ್ದರಿಂದ ಇಷ್ಟೇ ನಮ್ಮ ಶ್ರೀಮಂತಿಕೆ. ಪೇಟೆ ಶಾಲೆಗಳವರ ಬ್ಯಾಂಡ್ ಸೆಟ್ಟುಗಳು   ಕೊಳಲು, ಸಂಗೀತಕ್ಕೆ ತಕ್ಕಂತ ಮಧ್ಯ ಮಧ್ಯ ಫಳ್ಳೆನಿಸುತ್ತಿದ್ದ ತಾಳ, ಬಣ್ಣ ಬಣ್ಣದ ಬಟ್ಟೆ, ತಲೆಗೊಂದು ಗರಿ.. ಹೀಗೆ ಹಲವಿಧದಲ್ಲಿ ನೊಡೋದಕ್ಕೆ , ಕೇಳೋದಕ್ಕೆ ನಮಗಿಂತಾ ಚೆನ್ನಾಗಿ ಕಾಣುತ್ತಿದ್ದರೂ ನಮ್ಮ ಹಳ್ಳಿಯಿಂದ ಪೇಟೆ ವೃತ್ತದ ವರೆಗಿನ ಪೆರೇಡಿನಲ್ಲಂತೂ ನಾವೇ ಎಲ್ಲರ ಕಣ್ಮಣಿಗಳಾಗಿರುತ್ತಿದ್ದೆವು. ರಸ್ತೆಯ ಅಕ್ಕ ಪಕ್ಕದ ಮನೆಗಳವರೆಲ್ಲಾ ಹೊರ ಬಂದು ನಮ್ಮನ್ನೇ ನೋಡುತ್ತಿದ್ದರೆ, ಅಮ್ಮಂದಿರ ಸೊಂಟ ಏರಿದ ಪಾಪುಗಳು ನಮ್ಮನ್ನೇ ನೋಡುತ್ತಿದ್ದರೆ, ಸ್ವಲ್ಪ ದೊಡ್ಡ ಆದರೆ ಇನ್ನೂ ಶಾಲೆಗೆ ಕಾಲಿಡದ ಮಕ್ಕಳು ಸ್ವಲ್ಪ ದೂರ ನಮ್ಮೊಂದಿಗೇ ಹೆಜ್ಜೆ ಹಾಕಿದಂತೆ ಕಂಡರೆ, ನಮ್ಮ ಬ್ಯಾಂಡ ತಾಳಕ್ಕೆ ಕೈಕಾಲು ಕುಣಿಸಿದಂತೆ ಕಂಡರೆ ಜೀವನವೇ ಧನ್ಯವಾದಂತೆ ನಮಗೆ!. ಲೆಪ್ಟ್ ರೈಟ್ ಲೆಫ್ಟ್, ಲೆಫ್ಟ್ ರೈಟ್ ಲೆಫ್ಟ್ ಅಂತ ಶಿಸ್ತು ಬದ್ದ ಹೆಜ್ಜೆ ಹಾಕೋ ಗೆಳೆಯರಿಗೂ ಬ್ಯಾಂಡ ತಾಳವೇ ಹಿಮ್ಮೇಳ. ಹೀಗೇ ಸಾಗಿದ ಶಾಲೆಯ ಪ್ರಭಾತ್ ಪೇರಿ ಚನ್ನಮ್ಮ ಸರ್ಕಲ್ ಎಂಬ ವೃತ್ತ ಸೇರುತ್ತಿತ್ತು . ಅಲ್ಲಿ ಹತ್ತಿರದ ಎಲ್ಲಾ ಶಾಲೆಗಳ ಹುಡುಗರು ಸೇರೋ ಸಂಭ್ರಮ. ಚೆನ್ನಮ್ಮ, ಒನಕೆ ಓಬವ್ವ, ಬಸವಣ್ಣ, ಶಿವಾಜಿ ಹೀಗೆ ಹಲ ವೇಶ ಹಾಕಿದ ಶಾಲಾ ಹುಡುಗರು ಅವರ ಶಾಲೆಯ ಲಗ್ಗೇಜ್ ಕ್ಯಾರಿಯರಲ್ಲೋ , ಲಾರಿಯಲ್ಲೋ ಹತ್ತಿ ನಿಂತಿರುತ್ತಿದ್ದರು. ಪ್ರತೀ ವರ್ಷವೂ ಬರೋ ಒಂದು ಆನೆಯನ್ನು ನೋಡೋದು ಇನ್ನೊಂದು ಸಂಭ್ರಮ. ಸರ್ಕಾರದವ್ರು ಇಲ್ಲಿ ಕೊಡೋ ಸ್ವೀಟನ್ನೋದು ಅಲ್ಲಿಯವರೆಗೆ ನಡೆದ ಮಕ್ಕಳ ದಣಿವನ್ನೇ ಮರೆಸಿಬಿಡುತ್ತಿತ್ತು. 

ಇಲ್ಲಿ ಸ್ವೀಟು ತಿಂದ ನಂತರ ಕೆಲವರ ಪಯಣ ಪೆರೇಡ್ ನಡೆಯುತ್ತಿದ್ದ ಮತ್ತೊಂದು ಮೈದಾನದತ್ತ ನಡೆದರೆ ಕೆಲವರು ಸುಸ್ತಾಗಿ ಮನೆಗೆ ಮರಳುತ್ತಿದ್ದರು. ಮನೆಯೆಂದರೆ ಮತ್ತೆ ಮೂರ್ನಾಲ್ಕು ಕಿಲೋಮೀಟರ್ ನಡೆದು ಹಳ್ಳಿಯತ್ತ ಸಾಗಬೇಕಲ್ಲವೇ ? ಮೈದಾನದಲ್ಲಿ ನಡೆಯುವ ಗಣರಾಜ್ಯೋತ್ಸವದ ಧ್ವಜಾರೋಹಣ ಅಷ್ಟರಲ್ಲಿ ಮುಗಿದಿದ್ದರೂ ಪೆರೇಡ್ ಮತ್ತು ವಿವಿಧ ಶಾಲೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿರುತ್ತಿದ್ದವು. ಕೆಲ ವರ್ಷ ದಣಿವನ್ನೂ ಮರೆತು ಅಲ್ಲಿಗೆ ನಡೆದರೆ ಕೆಲ ಸಲ ಮನೆಗೆ ಹಿಂದಿರುಗುತ್ತಿದ್ದೆವು. ಮನೆ ತಲುಪುವ ಹೊತ್ತಿಗೆ ದೆಲ್ಲಿಯಲ್ಲಿನ ಗಣರಾಜ್ಯೋತ್ಸವದ ಪೆರೇಡ್ ಟೀವಿಯಲ್ಲಿ ಶುರುವಾಗಿರುತ್ತಿತ್ತು. ಅಲ್ಲಿಗೆ ದೇಶ ವಿದೇಶಗಳಿಂದ ಬಂದ ಗಣ್ಯರು , ಪ್ರಧಾನಿ, ರಾಷ್ಟ್ರಪತಿ, ರಾಜಕೀಯ ನೇತಾರರನ್ನೆಲ್ಲಾ ಟೀವಿಯಲ್ಲಿ ನೋಡಿ ಕಣ್ ತುಂಬಿಕೊಳ್ಳುತ್ತಿದ್ದೆವು. ಅದಕ್ಕಿಂತ ಮುಖ್ಯ ಅಂಶ ಅಂದರೆ ದೇಶದ ಪ್ರತೀ ರಾಜ್ಯದ ಸ್ಥಬ್ದಚಿತ್ರಗಳು. ದೇಶದ ವಿವಿಧ ಭಾಗಗಳ ಸೈನ್ಯದ ತುಕಡಿಗಳು, ಅವರ ವಿಭಿನ್ನ ಸಮವಸ್ತ್ರ, ಪ್ರತಿಯೊಬ್ಬರ ವಿಭಿನ್ನ ಬ್ಯಾಂಡುಗಳನ್ನು ನೋಡೋದೇ ಒಂದು ಹಬ್ಬ. ಹೊಸ ಹೊಸ ವಿಮಾನಗಳು, ರಕ್ಷಣಾ ಟ್ಯಾಂಕರುಗಳನ್ನ ನೋಡಿ ಹೆಮ್ಮೆಯಾಗುತ್ತಿತ್ತು. ಆಮೇಲೆ ಬರೋ ಮೋಟಾರ್ ಬೈಕುಗಳಲ್ಲಿನ ಸಾಹಸಗಳ, ವಿಮಾನಗಳು ಮೈನವಿರೇಳಿಸುತ್ತಿತ್ತು. ಇವೆಲ್ಲಾ ಮುಗಿಯುವ ಹತ್ತು ಹತ್ತೂವರೆಯ ಹೊತ್ತಿಗೆ ನಮ್ಮ ದೇಶದ ಬಗ್ಗೆ ಎಷ್ಟು ಗೌರವ ಮೂಡುತ್ತಿತ್ತು. ದೊಡ್ಡವನಾದ ಮೇಲೆ ಇದಕ್ಕಾಗಿ ಏನಾದರೂ ಮಾಡುವ ಬಗ್ಗೆ ಒಂದು ನಿರ್ಧಾರ ಅರಿವಿಲ್ಲದೇ ಗಟ್ಟಿಯಾಗುತ್ತಿತ್ತು.. 

ಎಲ್ಲಿ ಹೋದವೋ ಆ ದಿನಗಳು.. ದೇಶ ದೇಶವೆಂದು ಮಿಡಿಯುತ್ತಿದ್ದ ಮನ ಈಗ ತಾಯಿ ಭಾರತೀಯೇ ಬಂದು ನನಗೇನಾದ್ರೂ ಗಿಫ್ಟು ತಂದಿದ್ದೀಯೇನೋ ಎಂದು ಕೇಳುವಂತಹ ಪರಿಸ್ಥಿತಿಗೆ ಬರುವಷ್ಟು ಸ್ವಾರ್ಥಿಯಾಯಿತೇ ? ಛೇ ಧಿಕ್ಕಾರವಿರಲಿ ನನಗೆ ಎಂದು ಶಪಿಸಿಕೊಳ್ಳತೊಡಗಿದ.. ಇದೇ ಶಪಿಸಿವಿಕೆಯಲ್ಲೇ ಯಾರೋ ಜೋರಾಗಿ ಅಲುಗಾಡಿಸಿದಂತಾಯಿತು. ಏ ಏಳೋ ಭಗತ್… ಅವಾಗಿಂದ ಎಬ್ಬಿಸ್ತಾನೇ ಇದ್ದೀನಿ. ಏಳ್ತಾನೆ ಇಲ್ಲ ನೀನು. ಏನೋ ಭಾರತೀ, ಧಿಕ್ಕಾರ ಅಂತ ಗೊಣಗ್ತಾ ಇದ್ದೀಯ ನಿದ್ರೇಲಿ. ಏಳಲ್ವೇನೋ. ರಾಷ್ಟ್ರಪತಿಯವರ ಗಣರಾಜ್ಯೋತ್ಸವದ ಮುನ್ನಾದಿನದ ಭಾಷಣ ಬಂದಾಗ ಎಬ್ಸು ಅಂದಿದ್ಯಲ್ಲೋ ಏಳೋ ಅನ್ನುತ್ತಿದ್ದ ರೂಂಮೇಟು.. ಕಣ್ಣು ತೆರೆದರೆ ತಾನು ತನ್ನ ರೂಮಲ್ಲೇ ಇದ್ದೇನೆ. ಅಂದರೆ ಗಣರಾಜ್ಯೋತ್ಸವ, ತಾಯಿ ಭಾರತಿಯೊಂದಿಗಿನ ಮಾತುಕತೆ ಎಲ್ಲಾ ಕನಸೇ ? 

ಇರಬಹುದೇನೋ. ಆದರೆ ಅವಳೆಂದ ಒಂದೊಂದು ಮಾತೂ ಸುಳ್ಳಲ್ಲ. ಇಂದಿನಿಂದಾದರೂ ಸಾಧ್ಯವಾದಷ್ಟು ವಿದೇಶಿ ವ್ಯಾಮೋಹ ಬಿಟ್ಟು ಭಾರತೀಯನಾಗುವತ್ತ, ಚುನಾವಣೆಗೆ ಕೊಟ್ಟ ರಜೆಗಳಲ್ಲೆಲ್ಲಾ ಹೊದ್ದು ಮಲಗುವಂತಹ ಸೊಂಬೇರಿತನ ಬಿಟ್ಟು. ಸದಾ ಸರ್ಕಾರದ ಹುಳುಕಗಳ ಟೀಕಿಸುತ್ತಾ ಏನಾದ್ರೂ ಮಾಡುವ ಸಂದರ್ಭ ತೆಪ್ಪುಗಿದ್ದುಬಿಡುವ ಜಾಣತನವ ಬಿಟ್ಟು ಇನ್ನಾದರೂ  ಭಾರತದ ಏಳಿಗೆಗೆ ಕೈಲಾದ ಸಹಾಯ ಮಾಡುವತ್ತ ಪ್ರಯತ್ನಿಸಬೇಕು ಅನ್ನೋ ತೀರ್ಮಾನ ಗಟ್ಟಿಯಾಗುತ್ತಿತ್ತು..

ಗೆಳೆಯರಿಗೆಲ್ಲಾ ೬೫ನೇ ಗಣರಾಜ್ಯೋತ್ಸವದ ಶುಭಾಶಯಗಳು. ಇಲ್ಲಿರೋ ಅವ್ಯವಸ್ಥೆಗಳ ದ್ವೇಷಿಸುವವರು ,  ಹುಳುಕಗಳ ಕೆದಕುವವರು , ಭ್ರಷ್ಟಾಚಾರವ ಬಯ್ಯುವವರು ಇದ್ದಿದ್ದೇ. ಅದಕ್ಕೆ ಭವ್ಯ ಭಾರತಿಯ ದಿವ್ಯ ಸಂಜಾತರಾದ ನಾವೇ ಆಗಬೇಕೆಂದಿಲ್ಲ. ಹೊರಗಿನವರೂ ಆಗಬಹುದು. ಈ ಪರಿಸ್ಥಿತಿಯನ್ನು ಸುಧಾರಿಸಲು ನಾವು ಮಾಡಬೇಕಾದ್ದೇನು ಅಂತ ಈಗಲಾದರೂ ಆಲೋಚಿಸಬೇಕಾಗಿದೆ. ಆ ನಿಟ್ಟಿನಲ್ಲಿ ನಡೆಯಬೇಕಾಗಿದೆ. ಆ ದಿಕ್ಕಿನಲ್ಲಿ ಇನ್ನಾದರೂ ಹೆಜ್ಜೆಗಳು ಮೂಡಲೆಂಬ ಹೆಬ್ಬಯಕೆಯೊಂದಿಗೆ

ನಿಮ್ಮ
ಪ್ರಶಸ್ತಿ..   

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x