ಪ್ರಶಸ್ತಿ ಅಂಕಣ

ಗಡ್ಡ: ಪ್ರಶಸ್ತಿ ಅಂಕಣ

ಹಾಡ್ತಾ ಹಾಡ್ತಾ ರಾಗ, ನರಳತಾ ನರಳಾತಾ ರೋಗ ಅಂದಗೇನೇ ನೆನಿತಾ ನೆನಿತಾ ನೆನಪು ಅಂತನೂ ಹೇಳ್ಬೋದೇನೋ. ಸುಮ್ನೆ ಎಲ್ಲೋ ಹೊಳೆದ ಎಳೆಯೊಂದು ಕತೆಯಾಗಿಯೋ, ಕವಿತೆಯಾಗಿಯೋ ರೂಪುಗೊಳ್ಳಬಹುದು. ಕೆಲವೊಂದು ಎಳೆಗಳು ನೆನಪಿನಾಳಕ್ಕಿಳಿದು ನೋವ ಅಲೆಗಳನ್ನ ಕೆದಕಬಹುದು. ತನ್ನನ್ನೇ ಹಾಸ್ಯವಾಗಿಸಿ ನಗುವ ಕಡಲಲ್ಲಿ ತೇಲಿಸಲೂಬಹುದು. ಆ ಕ್ಷಣಕ್ಕೆ ಅದೇ ದೊಡ್ಡ ಹಾಸ್ಯ. ಮಿಸ್ಸಾದರೆ ಏನೂ ಇಲ್ಲ.  ತೆರೆಗಳು ಸರಿದಾಗ ಮರಳ ತಡಿಯಲ್ಲಿ ಮೂಡೋ ಚಿತ್ರಗಳಂತೆ.. ಮತ್ತೊಂದು ಅಲೆ ಬಂದು ಅದನ್ನು ತೊಳೆದು ಹಾಕೋ ತನಕ..

ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮಾಂಡು ಅಂತೊಂದು ಹಾಡಿತ್ತು ಹಿಂದೆ..ರಾಜಕುಮಾರ್ ಚಿತ್ರಗಳ ಚಿಗುರು ಮೀಸೆ, ಗಿರಿಜಾ ಮೀಸೆ, ವೀರಪ್ಪನ್ ಮೀಸೆ, ಕಂಬಳಿಹುಳು ಮೀಸೆ(!), ಕುಡಿ ಮೀಸೆ ಹೀಗೆ ಬಗೆ ಬಗೆಯ ಮೀಸೆಗಳು ಆಗ. ಮೀಸೆ ಮಾಮ, ಮೀಸೆ ಭಟ್ಟರು ಅಂತಲೇ ಫೇಮಸ್ಸಾದವರಿದ್ದರು ಆಗ. ಕಾಲದಂತೆಯೇ ಮೀಸೆಯ ಟ್ರೆಂಡು ಬದಲಾಗ್ತಾ ಬಂತು.. ಜನಕ್ಕೆ ಕಡಿಮೆ ಆಗ್ತಿರೋ ಟೈಮಿಗೆ ಹೇಳಿ ಮಾಡಿಸಿದಂತೆಯೋ ಎಂಬಂತೆ ಮೀಸೆಯ ಟ್ರೆಂಡ್ ಬದಲಾಗಿ ಗಡ್ಡದ ಟ್ರೆಂಡ್ ಶುರು ಆಯ್ತಾ (? !) ಗೊತ್ತಿಲ್ಲ 🙂 ಫಾರಿನ್ನರ್ರುಗಳಿಗೆ ಮಾತ್ರ ಸೀಮಿತವಾಗಿದ್ದ, ಫೋಟೋ, ಫಿಲ್ಮುಗಳಲ್ಲಿನ ಋಷಿಮುನಿಗಳಿಗೆ ಮಾತ್ರ ಮೀಸಲಾಗಿದ್ದ ಗಡ್ಡದ ಮೇಲೆ ಎಲ್ಲರ ಕಣ್ಣು ಬೀಳೋಕೆ ಶುರು ಆಯ್ತು. ಪ್ರೆಂಚ್ ಗಡ್ಡ ಅನ್ನೋದು ಬುದ್ದಿಜೀವಿಗಳ ಕಾಯಂ ಮುಖಲಕ್ಷಣ ಅನ್ನೋ ತರ ಆಗೋಯ್ತು (!) 🙂

ಪ್ರೆಂಚಿಗೆ ಮಾತ್ರ ಸೀಮಿತವಾಗದೇ ಗೋಟಿ, ಸಿಂಗಮ್, ಹೋತನ ಗಡ್ಡ .. ಹೀಗೆ ತರ ತರದ ವೆರೈಟಿಗಳು. ಎಲ್ಲರದ್ದೂ ತಮ ತಮಗೆ ಸೂಟಾಗೋ ತರದ ಮಾಡಿಫಿಕೇಶನ್. ಇದು ಬರಿ ಜನಸಾಮಾನ್ಯರಲ್ಲಿ ಮಾತ್ರ ಸೀಮಿತವಾಗ್ದೇ ಫಿಲ್ಮುಗಳಲ್ಲೂ ಬರೋಕೆ ಶುರು ಆಯ್ತು.ಒಂದಾನೊಂದು ಕಾಲದಲ್ಲಿ ವಿಲನ್ಗಳ ಟ್ರೇಡ್ ಮಾರ್ಕ್ ಆಗಿದ್ದ ಗಡ್ಡ ಕ್ರಮೇಣ ಫಿಲ್ಮ್ ಹೀರೋಗಳ ಕಾಮನ್ ಲುಕ್ ಆಯ್ತು . ಒಂದಾನೊಂದು ಕಾಲದಲ್ಲಿ ಸೋಮಾರಿ, ನಿರ್ಗತಿಕ ಎಂಬ ಅರ್ಥ ಕೊಡ್ತಿದ್ದ ಗಡ್ಡ ಆಮೇಲಾಮೇಲೆ ಏನೋನೋ ಆಗೋಕೆ ಶುರು ಆಯ್ತು.. ದಿನಾ ಬೇಗೆದ್ದು ಕಾಲೇಜಿಗೆ ಓಡೋ ಗಡಿಬಿಡಿಯಲ್ಲಿ ಒಂದು ವಾರ ಗಡ್ಡಕ್ಕೆ ಕೈ ಹಾಕದವನಿಗೆ ಒಂದು ವಾರದ ನಂತರ ಮನೆಯಲ್ಲಿ ಮಂಗಳಾರತಿಯಾದರೂ ಕಾಲೇಜಲ್ಲಿ  ಸೂಪರ್ ಲುಕ್ಕು ಮಗ ಎಂಬ ಪ್ರಶಂಸೆಗಳು ಸಿಕ್ಕಿದ್ದು ಉಂಟು. ಹೃತಿಕ್ ರೋಷನ್ನಿನ ಗುಜಾರಿಷ್ ಚಿತ್ರ ಬಂದಾಗ ಹುಡುಗರೆಲ್ಲಾ ತಮ್ಮನ್ನು ತಾವು ಹೃತಿಕ್ ರೋಷನ್ ತರ ಅನ್ನಿಸ್ಕೊಳ್ಳೋಕೆ ಪೈಪೋಟೀಲಿ ಬಿದ್ದಿದ್ದೂ ಉಂಟು ! ಹಿಂಗೇ ಒಂದಿಷ್ಟು ಗಡ್ಡದ ನೆನಪುಗಳು.

ಒಬ್ಬ ಫೇಮಸ್ ಸಾಹಿತಿ. ಅವರು ಬರೆದಿದ್ದೆಲ್ಲಾ ಹಿಟ್. ಮಾತಾಡಿದ್ರೆ ಸೂಪರ್ ಹಿಟ್. ಗಡ್ಡದ ಬಗ್ಗೆಯೇ ಅವರೊಮ್ಮೆ ಬರೆದ ನೆನಪು.. ದಿನಾ ಅರ್ಧ ಘಂಟೆ ಗಡ್ಡಕ್ಕೆ ಅಂದ್ರೂನೂ ತಿಂಗಳಿಗೆ ಎಷ್ಟು ಗಂಟೆ ಅಂತ (!). ಅಬ್ಬಾ ಸಮಯದ ಬೆಲೆ ಎಷ್ಟು ತಿಳ್ಕೊಂಡಿದಾರಲ್ವಾ ಅನ್ಸಿತ್ತು. ಆಮೇಲೆ ಹಾಗೇ ಓದ್ತಿದ್ದಾಗ ಸರ್ ಎಂ ವಿಶ್ವೇಶ್ವರಯ್ಯನವರ ಬಗ್ಗೆ ಓದಿದೆ. ಅವರು ಒಂದು ದಿನಾನೂ ಶೇವ್ ಮಾಡದೇ ಕೆಲಸಕ್ಕೆ ಹೋಗ್ತಿರಲಿಲ್ಲ ಅಂತ. ಅಂತ ಮೇಧಾವಿಗಿಂತ ಈ ಪುಣ್ಯಾತ್ಮ ಬಿಸೀನೆ ಬಿಡಿ ಅನಿಸ್ತು ಆಮೇಲೆ. ಆಗಿನ್ನೂ ಗಡ್ಡ ಮೂಡದ ಸಮಯ ಬಿಡಿ 🙂 ಅಂತಹ ಮಹಾನ್ ಚಿಂತನೆಗಳು ಮೂಡುವಷ್ಟು ಬುದ್ದಿ ಇನ್ನೂ ಬೆಳೆದಿಲ್ಲವೇನೋ. .ಅದನ್ನೂ ಬಿಡಿ 🙂 ಈ ಬಿಡಿ ಬಿಡಿ ನೆನಪುಗಳಿಂದ ಮತ್ತೆ ಇಂಜಿನಿಯರ್ ದಿನಗಳ ಕಾಲಕ್ಕೆ ಹೋಗುತ್ತೇನೆ.

ಒಂದೆರಡು ವರ್ಷಗಳ ಹಿಂದಷ್ಟೇ.. ಹಾಗಾಗಿ ಕಾಲ ತೀರಾ ಏನೋ ಬದಲಾಗಿಲ್ಲ 🙂 ನೀಟಾಗಿ ಕಾಲೇಜಿಗೆ ಬರ್ತಿದ್ದ ಹುಡ್ಗ ಗಡ್ಡ ಬಿಟ್ಟ ಅಂದ್ರೆ ದೇವ್ದಾಸ ಅನ್ನೋ ಹೆಸ್ರು ದಕ್ಕೋದು ಗ್ಯಾರಂಟಿ ಆಗಿತ್ತು. ಮನಸಾರೆ, ಪಂಚರಂಗಿಯಂತ ಚಿತ್ರಗಳಲ್ಲಿ ಬಂದ ದಿಗಂತ್ ಗಡ್ಡದ ಲುಕ್ಕು ಸಿಕ್ಕಾಪಟ್ಟೆ ಫೇಮಸ್ ಆದ್ರೂ ಕಾಲೇಜಿನಲ್ಲಿದ್ದ ಅನಿರೀಕ್ಷಿತ ಗಡ್ಡಧಾರಿಗಳಿಗೆ ದೇವದಾಸನ ಹೆಸ್ರು ಪಕ್ಕಾ ಆಗ್ತಿತ್ತು. ಇನ್ನು ಸೆಮಿಸ್ಟರ್ ಪರೀಕ್ಷೆ, ಮುಖ್ಯ ಪರೀಕ್ಷೆಗಳು ಬಂತು ಅಂದ್ರೆ ಸಾಕು ಹುಡುಗರದ್ದೆಲ್ಲಾ ಗಡ್ಡದ ಲುಕ್ಕು ಪಕ್ಕಾ. ನಾವು ಓದುವುದು ಮತ್ತು ಪೇಪರ ಮೇಲಿಳಿಸಿದ ರೇಖೆಗಳಷ್ಟೇ ಮುಖ್ಯ. ಮುಖದ ಬದಲಾದ ರೂಪುರೇಖೆಯಲ್ಲ ಎಂಬ ನಿಲುವುಗಳಲ್ಲಿ ,ನೈಟೌಟುಗಳಲ್ಲಿ, ಎಕ್ಸಾಮು ದಿನ ಬೆಳಿಗ್ಗೆ ಕೊನೆ ಕ್ಷಣದ ತನಕವೂ ಓದುತ್ತಾ ಗಡಿಬಿಡಿಯ ಸ್ನಾನದ ಶಾಸ್ತ್ರದ ಮಧ್ಯೆ ಗಡ್ಡಕ್ಕೆಲ್ಲಿ ಟೈಮು ? 🙂 ಅಂತೂ ಸೆಮಿಸ್ಟರ್ ಎಕ್ಸಾಮುಗಳು ಸಾಗುತ್ತಾ ಹೋದಂತೆ ದೇವದಾಸರ ಸಂಖ್ಯೆ ಜಾಸ್ತಿ ಆಗ್ತಿತ್ತು.

ಹೀಗೆ ಒಂದು ಇಂಜಿನಿಯರಿಂಗ್ ಪರೀಕ್ಷಾ ಕಾಲ. ಅಜ್ಜನ ಮನೆಯಲ್ಲಿ ಇಬ್ಬರು ಮೊಮ್ಮಕ್ಕಳು. ಒಬ್ಬ ಇಂಜಿನಿಯರ್ ಓದ್ತಿರೋನಾದ್ರೆ ಇನ್ನೊಬ್ಬ ಐದನೇ ಕ್ಲಾಸು. ಮನೆಗೆ ಹೊಸದಾಗಿ ಕೆಲಸದವಳು ಬಂದಿದ್ಲು. ಈ ಇಂಜಿನಿಯರ್ ಗಡ್ಡಧಾರಿಗೆ ನಿಮ್ಮ ಮಗ ಇವತ್ತು ಶಾಲೆಗೆ ಹೋಗಲ್ವ ಬುದ್ದಿ ಅಂತ ಕೇಳಿದ್ಲು ಆ ಐದನೇ ಕ್ಲಾಸಿನ ಹುಡುಗನ್ನ ತೋರ್ಸಿ.!! ಎಲ್ಲಾ ಹೃತಿಕ್ ರೋಷನ್ ಅಂತ ಕರೀತಾರೆ ಅಂತ ಖುಷಿಯಾಗಿದ್ದ ಆ ಹುಡುಗನಿಗೆ ಒಮ್ಮೆ ಶಾಕ್ 🙂  ಈ ಹುಡುಗರ ಫ್ಯಾಷನ್ನು ಆ ಹಳ್ಳಿ ಕೆಲಸದಾಕೆಗೆ ಎಲ್ಲಿ ಗೊತ್ತಾಗಬೇಕು . ಎಂದೂ ಮನೆಯಲ್ಲಿರದ ಈ ಇಂಜಿನಿಯರ್ ಗಡ್ಡಧಾರಿಯನ್ನೂ ಐದನೇ ಕ್ಲಾಸ ಬಾಲನನ್ನೂ ಒಟ್ಟಿಗೆ ನೋಡೂ ಇರ್ಲಿಲ್ಲ ಅವಳು ಪಾಪ. ಏನೋ ಮುಖ ಲಕ್ಷಣ ನೋಡಿ ಅಪ್ಪ-ಮಗ ಅಂದ್ಕೊಂಡ್ಲು.. ಅವತ್ತೇ ಆತನ ಎರಡು ವಾರಗಳ ಶ್ರಮಕ್ಕೆ ಬ್ಲೇಡ್ ಬಿತ್ತು 🙂

ಮುಂಚೆ ಎಲ್ಲಾ ಮುಖಕ್ಷೌರ ಅನ್ನೋದೇ ಒಂದು ನಿತ್ಯ ಕ್ರಮವಾಗಿತ್ತು. ಅದಕ್ಕೂ ಅದೆಷ್ಟೋ ವಾರ, ತಿಥಿಗಳ ನಿಯಮಗಳು. ಆದರೆ ಈಗ ಬದಲಾಗ್ತಿರೋ ಕಾಲದಲ್ಲಿ ಎಲ್ಲಾ ಬದಲಾಗ್ತಿವೆ. ಪದ್ದತಿ, ನಿಲುವು ,ಯಂತ್ರಗಳೂ 🙂 ಅನಿವಾರ್ಯ , ಪರ್ಯಾಯ ಅನ್ನೋದು ಒಂದೇ ನಾಣ್ಯದ ಎರಡು ಮುಖಗಳಂತೆ. ಹಾಗಾಗಿ ಸಮಯದ ಅಭಾವ(!)ಕ್ಕೆ ನಿತ್ಯ ಗಡ್ಡಧಾರಿಯಾಗೋದೂ ಒಂದು ಪರ್ಯಾಯದಂತೆ (ಕೆಲವರಿಗಾದ್ರೂ) ಕಾಣ್ತಾ ಇದೆ.

ಈ ಹುಡುಗರು ಹುಚ್ಚುಚ್ಚಾಗಿ ಹೆಂಗೆಂಗೋ ಇದ್ದರೂ ಅಮ್ಮಂದಿರ ಬೈಗುಳಗಳು ತಪ್ಪಿದ್ದಲ್ಲ. ಒಂದು ಬ್ಲೇಡಿಗೂ ಗತಿ ಇಲ್ವೇನೋ ನಿಂಗೆ. ಈ ಮುಖ ಹೊತ್ಗೊಂಡು ನನ್ನ ಜೊತೆ ಫಂಕ್ಷನ್ಗೆ ಬಂದ್ರೆ ಎಷ್ಟು ಅಸಹ್ಯ ಕಾಣುತ್ತೆ ಗೊತ್ತಾ .. ಇತ್ಯಾದಿ ಮಾತುಗಳು ಮನೇಲಿದ್ದಾಗೆಲ್ಲಾ, ಊರಿಗೆ ಹೋದಾಗೆಲ್ಲಾ ಕಾಮನ್ನು 🙂 ಯಾರೇನೇ ಹೇಳ್ಲಿ. ನೋಡಿ ಸ್ವಾಮಿ ನಾವಿರೋದೆ ಹೀಗೆ ಅಂತಿರೋರೂ ಹಾಗಾಗಿ ಊರಿಗೆ, ಫಂಕ್ಷನ್ನುಗಳಿಗೆ ಹೋಗ್ಬೇಕಿದ್ರೆ ಸ್ವಲ್ಪ ಕ್ಲೀನಾಗ್ಬೇಕಾದ (?) ಅನಿವಾರ್ಯತೆ. ಕ್ಲೀನು ಅಂದಾಗ ಮತ್ತೊಂದು ಕತೆ ನೆನಪಾಗ್ತದೆ. ಒಬ್ಬ ಬ್ರಿಟಿಷ್ ಮತ್ತೊಬ್ಬ ಭಾರತೀಯನ ಕತೆ.. ಎಲ್ಲೋ ಓದಿದ ನೆನಪು. ಭಾರತೀಯ ವೈಯುಕ್ತಿಕ ಕಾರಣಗಳಿಂದ ಗಡ್ಡ ಬಿಟ್ಟುಕೊಂಡು ಆಫೀಸಿಗೆ ಹೋಗಿರುತ್ತಾನೆ. ಅವನ ಬಾಸು ಬ್ರಿಟಿಷ್ ಆಫೀಸರು. ಇವನ ಮುಖ ನೋಡಿ ಅವನಿಗೆ ರೇಗಿ ಹೋಗುತ್ತದೆ. ಏನಪ್ಪಾ ಹೀಗೆಲ್ಲಾ ಮನಸ್ಸಿಗೆ ಬಂದಂಗೆ ಬರೋದಾ, ಕ್ಲೀನಾಗಿ ಬರ್ಬೇಕು ಅಂತ ಗೊತ್ತಿಲ್ವಾ ಅಂತಾನೆ.ಕ್ಲೀನಾಗೇ ಬಂದಿದೀನಲ್ವಾ ಅಂತ ಗರಿಯಾದ ಬಟ್ಟೆ, ನೀಟಾಗಿ ಬಾಚಿದ ತಲೆಕೂದಲನ್ನು ತೋರಿಸುತ್ತಾನೆ. ತಾನು ಹೇಳಿದ್ದು ಅದಲ್ಲ, ಬಿಟ್ಟಿರೋ ಗಡ್ಡದ ಬಗ್ಗೆ ಅಂತಾನೆ ಆ ಆಫೀಸರು. ಗಡ್ಡವನ್ನು ನೀಟಾಗಿ ಸೋಪಾಗಿ ತೊಳೀತೇನೆ. ಅದು ಹೇಗೆ ಕೊಳೆ, ಅಶಿಸ್ತಾಗತ್ತೆ ಅಂತ ಭಾರತೀಯನೂ ಪಟ್ಟು ಬಿಡಲ್ಲ. ಕೊನೆಗೆ ಅದು ಅಶಿಸ್ತು ಅಂತ ಕೊನೆಗೂ ನಿರ್ಧಾರವಾಗಲ್ಲ.. ಈ ಕತೆ ಯಾಕಪ್ಪಾ ಬಂತು ಅಂದ್ರೆ ಈ ಗಡ್ಡ ಮತ್ತು ಈಗಿನ ಕಾರ್ಪೊರೇಟ್ ಸಂಸ್ಕೃತಿಯ ನೆನಪಾದಾಗ..

ಕಾಲೇಜಲ್ಲಿದ್ದಾಗ ಹೇಗೆ ಬೇಕಾದ್ರೂ ಇದ್ದ ಹುಡುಗರಿಗೆ ವಿದ್ಯಾಭ್ಯಾಸ ಮುಗಿದು ಏನೋ ಟ್ರೈನಿಂಗ್ ಅಂತ ಹಾಕಿದಾಗ ನಿಜವಾದ ಹಿಂಸೆ ಶುರು ಆಗೋದು ಅವರ ನಿಯಮಾವಳಿಗಳಿಂದ. ಕ್ಲೀನಿಂಗಿನ ಹೆಸರಲ್ಲಿ ದಿನಾ ಶೇವ್ ಮಾಡ್ಬೇಕು ಅನ್ನೋದು ದೊಡ್ಡ ಹಿಂಸೆ ಅನಿಸೋಕೆ ಶುರು ಆಗತ್ತೆ (!), ಕೆಲವರಿಗಂತೂ 🙂 ಹಾಗೇ ಹೋದರೆ ಟ್ರೈನಿಂಗ್ ಸೆಂಟರಲ್ಲಿ ಎಲ್ಲರೆದುರಿಗೆ ನಗೆಪಾಟಲಾಗುವ ಪ್ರಮೇಯ.. ಅದಕ್ಕೇ ಗೋಟಿ, ಪ್ರೆಂಚ್,ಹೋತನ ಗಡ್ಡ… ಹೀಗೆ ಎಲ್ಲದೂ ಕಾರ್ಪೋರೇಟ್.. ಅದಕ್ಕೆ ಪರ್ಮಿಷನ್ ಕೊಡ್ಬೇಕು ಅಂತ ವಾದ ಹುಡುಗರದ್ದು.. ಕೊನೆಗೂ ಅದಕ್ಕೆ ಪರ್ಮಿಷನ್ ಸಿಗತ್ತೆ. ಕೈ, ಕಾಲು, ಕುತ್ತಿಗೆ ಎಲ್ಲೆಡೆ ಬೇಡಿ ಹಾಕೋ ಬದ್ಲು ಕಾಲಿಗೊಂದೇ ಚೈನ್ ಹಾಕಿ, ಉಳಿದೆಲ್ಲಾ ಸ್ವಾತಂತ್ರ್ಯ ಕೊಡಿ ಅಂದಾಗೆ ಇದು.. ಆಫೀಸಿಗೆ ಸೇರಿದ ಮೇಲೆ ವಸ್ತ್ರಸಂಹಿತೆ ಪಾಲಿಸಿ ಹೇಗೆ ಹೋದರೂ ನಡೆಯುತ್ತೆ ಅನ್ನೋದು ಬೇರೆ ವಿಚಾರ. ಆದರೂ ಈ ಟ್ರೈನಿಂಗ್ ಮುಗಿಯೋ ತನಕ ಪ್ರತಿಯೊಂದನ್ನೂ ರೂಲ್ಸ್ ಅನ್ನೋ ತರಾವಳಿಗಳು ಕಿರಿಕಿರಿ ಅನ್ಸುತ್ತೆ.

ಮುಗಿಸೋ ಮೊದಲು ಕೆಲ ಮಾತುಗಳು..ಅಷ್ಟಕ್ಕೂ ತಾನು ಹೇಗಿರ್ಬೇಕು ಅನ್ನೋದು ಪ್ರತಿಯೊಬ್ಬನ ವೈಯುಕ್ತಿಕ ನಿಲುವು. ಬೇರೆ ಯಾರೋ ಚೆನ್ನಾಗಿ ಕಾಣ್ತಾರೆ. ಅದರಂತೆ ತಾನೂ ಹಾಗೇ ಅಗ್ಬೇಕು ಅಂತ ಆತ ಬಯಸಿದರೆ ಅದರಲ್ಲಿ ತಪ್ಪೂ ಇಲ್ಲ. ಆದರೆ, ಇದೇ ಶಿಸ್ತು. ನೀನು ಹೀಗೇ ಇರ್ಬೇಕು ಅನ್ನೋ ಹೇರುವಿಕೆ ಸರಿ ಅಲ್ಲ ಅನಿಸುತ್ತೆ. ಜನ ಬೇರೆ ಅವರು ಹೇಳಿದ್ದನ್ನೇ ಯಾವಾಗ್ಲೂ ಕೇಳ್ತಾರೆ ಅಂತೇನೂ ಇಲ್ಲ. ಆದರೂ..ಪ್ರೆಂಡ್ ಲೋ.. ನಿನಗೆ ಈ ಲುಕ್ಕು ಸೂಟಾಗಲ್ಲ ಕಣೋ ಅಂದ್ರೆ ಏನೂ ಅನ್ಸಲ್ಲ.. ಆದರೆ ಯಾವನೋ ಒಬ್ಬ ಲುಕ್ಕಿನ ಬಗ್ಗೆ ಕೀಳಾಗಿ ಮಾತಾಡೋದನ್ನ ನೋಡಿದ್ರೆ ಬೇಜಾರು, ಕೋಪಗಳು ಒಟ್ಟಿಗೆ ಬರತ್ತೆ. ಏ ಆ ಪ್ರೆಂಚು ನೋಡು. ಒಳ್ಳೆ ಕಳ್ಳನ ತರ ಇಲ್ವಾ ಅವನ್ನ ನೊಡಿದ್ರೆ, ಆ ಹೋತನ್ನ ನೊಡು.ಪಕ್ಕಾ ಕನ್ನಿಂಗ್, ಪಕ್ಕಾ ನರಿ ಅವ್ನು..ಆ ಗಡ್ಡ ನೋಡೋ. ಜೀವನದಲ್ಲಿ ಎಲ್ಲಾ ಕಳ್ಕೊಂಡ ಹಾಗಿದಾನೆ.. ರೀ.. ಒಬ್ಬನ ಮುಖ ನೋಡಿನೇ ಅವನ ಜನ್ಮ ಜಾಲಾಡ್ತೀರಲ್ಲ.. ಸ್ವಲ್ಪ ತಾಳ್ರಿ.. ಅವನ ಅನಿವಾರ್ಯತೆ , ಇಷ್ಟಾನಿಷ್ಟಗಳು ಏನೋ ಇರಬಹುದು. ಆತ ಇವತ್ತು ನಡೆದ ಹಾದಿಯಲ್ಲಿ ನಾವು ನಡೆಯದೆ ಇರೋ ಕಾರಣ ಹಾಗನ್ನಿಸ್ತಾ ಇರ್ಬೋದು. ಹಾಗಂತ ಆ ಕ್ಷಣದ ರೂಪದಿಂದ ಆತನ ಭವಿಷ್ಯ ನಿರ್ಧರಿಸಿ ಬಿಡ್ತೀರಾ ? ಪಕ್ಕಾ ದೇವದಾಸ, ಜೋಭದ್ರನ ತರ ಆಫೀಸಿಗೆ ಬರೋನು ಯಾವುದೋ ಪ್ರೆಸೆಂಟೇಷನ್ ಇದೆ ಅಂತ ನೀಟಾಗಿ ಶೇವ್ ಮಾಡಿ ಬಂದಾಗ.. ಇಲ್ನೋಡಿ.. ಶೇವ್ ಮಾಡೋದು ಮಾತ್ರ ನೀಟಾ ಅಂತ ಗಡ್ಡಾಭಿಮಾನಿಗಳು ಆಗ್ಲೇ ಅಪಸ್ವರ ಹಾಡೋಕೆ ಪ್ರಾರಂಭಿಸಿರ್ಬೋದು 🙂 ಅವ್ನು ಹಾಗೆ ಬಂದಾಗ ಏನು ನೀಟಾಗಿ ಬಂದಿದೀಯೋ ಅಂತಿರ್ತಾರೆ. ಅವತ್ತಿನ ಮರ್ಯಾದೆಯೇ ಬೇರೆ..

ಆತನ ವ್ಯಕ್ತಿತ್ವ, ನಿಲುವು, ಜಾಣ್ಮೆಗಳು ಬದಲಾಗಿ ಹೋಯಿತಾ ? ಇಲ್ವಲ್ಲಾ.. ಅವನು ಅವನೇ.. ಬದಲಾದ್ದು ನಮ್ಮ ನೋಟ ಅಷ್ಟೆ.. ಅಂದಾಗೆ ಹಳೆಯ ಫೋಟೋಗಳನ್ನ, ಹೀರೋಗಳನ್ನ ನೋಡಿದ್ರೆ ನೀಟು ಶೇವುಗಳನ್ನ ದೇವತ್ವಕ್ಕೆ, ಸೌಂದರ್ಯಕ್ಕೂ ಗಡ್ಡವನ್ನು ರಾಕ್ಷಸತ್ವಕ್ಕೂ ಹೋಲಿಸಲಾಗಿದೆ. ಅದೇ ಮನಸ್ಥಿತಿ ಇನ್ನೂ ಮುಂದುವರಿತಿದ್ಯಾ ? ಗೊತ್ತಿಲ್ಲ. ಅಷ್ಟಕ್ಕೂ  ಈ ಇಡೀ ಲೇಖನ ಹೆಂಗಳೆಯರಿಗೆ ಬೋರ್ ಹೊಡೆಸಿರ್ಬೋದು. ಆದ್ರೂ ತಡೆ ಹಿಡಿದು ಓದಿದವರಿದ್ರೆ ಅವರಿಗೆ ಏನನ್ನಿಸುತ್ತೆ ಅಂತ ಅವರೇ ಹೇಳ್ಬೇಕು 🙂 ಅಮ್ಮಂದಿರಿಗೆ ಅದೇ ಹಳೆ ದೇವರ ಲುಕ್ ಪಸಂದಾಗಿ ತಮ್ಮ ಮಗನ ಮುಖ ಅಲೆಮಾರಿ, ಸೋಂಬೇರಿಯಂತೆ ಕಂಡರೆ ಮಾಡರ್ನ್ ದಿಗಂತನ ಅಭಿಮಾನಿಗಳಿಗೆ ಗಡ್ಡಧಾರಿಗಳಲ್ಲಿ ಮತ್ತೊಬ್ಬ ದಿಗಂತೋ, ಗಣೇಶೋ ಇನ್ಯಾರೋ ಕಂಡಿರಬಹುದು .. 🙂 ಅಷ್ಟಕ್ಕೂ ಕ್ಲೀನು ಅಂದರೆ ಏನು.. ಅದರ ಬಗ್ಗೆ ನಾನೆಂತೂ ಏನೂ ಹೇಳಲಾರೆ. ತೀರ್ಮಾನ ನಿಮಗೇ ಬಿಟ್ಟಿದ್ದು.

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಗಡ್ಡ: ಪ್ರಶಸ್ತಿ ಅಂಕಣ

Leave a Reply

Your email address will not be published. Required fields are marked *