ಅಮರ್ ದೀಪ್ ಅಂಕಣ

ಗಡುವು ದಾಟಿದ ಪ್ರೀತಿ ಗಡಿ ದಾಟದ ಬದುಕು: ಅಮರ್ ದೀಪ್ ಪಿ.ಎಸ್.

ಇಂದಿಗೆ ಸರಿಯಾಗಿ ಎದೆಯಲ್ಲಿ ಒಂದು ಬಾಗಿಲು ಶಾಶ್ವತವಾಗಿ ಮುಚ್ಚಿ ಬರೋಬ್ಬರಿ ಹತ್ತೊಂಬತ್ತು ವರ್ಷ. ಅದರೊಂದಿಗೆ ಒಂದು ಸುಂದರವಾದ ನೆನಪಿನ ಬಿಳಿ ಗೋಡೆ ಮತ್ತು ಅದೊರೊಳಗಿನ ಖಾಲಿ ಖಾಲಿ ಭಾವನೆ.  ನನಗೊಬ್ಬನಿಗೆ ಕಾಣಿಸುವಂತೆ ಭಾಸ.  ಅದಕ್ಕೆ ಪ್ರತಿ ನಿತ್ಯ ನೀರು, ಗೊಬ್ಬರ ಹಾಕಬೇಕಿಲ್ಲ. ಬರಿಯ ಪ್ರೀತಿಯ ಮೆಚ್ಚುಗೆಯ ಪದವೊಂದನ್ನು ಎದೆಯೊಳಗೆ ಇಳಿ ಬಿಟ್ಟರೆ ಸಾಕು; ಅಲ್ಲೊಂದು ಬುಗ್ಗೆಯಂಥ ಮೊಗ್ಗು ಬೆಳೆಯುತ್ತದೆ. ದಿನವೂ ಬಂದು ಬಾಗಿಲಿಂದ, ಕಿಟಕಿಯೊಳಗಿಂದ ಇಣುಕಿ, ಕರೆದು ತಮ್ಮನ್ನು ಬಿತ್ತರಿಸಿಕೊಳ್ಳುವ ನಕ್ಷತ್ರಗಳಿಗೆ ಇಂದಿನ ರಾತ್ರಿಯ ಸಾಲು ಹಬ್ಬ.  ದಿವ್ಯಜ್ಯೋತಿ ದರ್ಶನ ಪಡೆದು ಬೀಗುವ ದೇವರ ಭಕ್ತನ ಮುಗ್ಧತೆಯಂತೆ   ಬೆಳಕನ್ನು ಹಿಂಬಾಲಿಸುತ್ತಲೇ ಇರುವ ನಾನು  .  ನನ್ನದು  ಮೆಚ್ಚಿಕೊಂಡು ಮುಚ್ಚಿ ಮುದ್ದಾಡುವ ನವಿರಾದ ಒಲವು. ರಚ್ಚೆ ಹಿಡಿದು ರಂಪ ಮಾಡದ, ತೋರಗೊಡದ ಅಲೆ ಮತ್ತು  ತೇವವಾಗಿರುವ ಮರಳು ದಂಡೆ.   ದಿನ ಕ್ಕೊಂದು ನಿಮಿಷವೂ ಮುನಿಸಿಕೊಂಡಿದ್ದರೂ ಈ ಹತ್ತೊಂಬತ್ತು ವರ್ಷಗಳಲ್ಲಿ ಒಂದಿಷ್ಟು ಗಂಟೆಗಳ, ದಿನಗಳ ಲೆಕ್ಕದಲ್ಲಿ ಕಳೆದು ಹೋದ ಕ್ಷಣಗಳೆಂದು ಮರೆಯಾಗುತ್ತಿದ್ದವು.  ಆದರೆ ಹಾಗಾಗಲಿಲ್ಲ.  ಅವಳು ನೀಡಿದ ಗಡುವು ಮುಗಿದು ವರ್ಷಗಳಾದರೂ ಗಡುವಿನ್ನು ಇನ್ನು ನಾಲ್ಕು ಹೆಜ್ಜೆ ಹಿಂದಷ್ಟೇ ಇತ್ತು ಅನ್ನಿಸಿದೆ.  
 
ಆ ದಿನ ಊರ ಹೊರವಲಯದಂತಿದ್ದ ಮೈಲುಗಳುದ್ದದ ದಾರಿ.  ಸವೆಸಿ ಪುಟ್ಟ ಮನೆಯ ಬಾಗಿಲ ಬಡಿದು ಎರಡು ಹೆಜ್ಜೆ ಹಿಂದೆ ಸರಿದೆ. ಅವಳು ಹಾಗೆ ಬಾಗಿಲು ತೆರೆದು ಎದುರಾಗುತ್ತಿದ್ದರೆ, ಕಾತರ, ಹರ್ಷ, ಭಯ, ಎಲ್ಲವೂ ಒಟ್ಟೊಟ್ಟಿಗೆ ವಕ್ಕರಿಸಿದ್ದವು.  ಸಂಜೆ ಹೊತ್ತಿನ ರಂಗೋಲಿ ಮುಖ ಅವಳ ಮನೆಯಂಗಳದಲ್ಲಿ ಅರಳಿದೆ. ಎಲ್ಲ ಹೆಂಗಸರಂತೆ ಕಂಫರ್ಟ್ ಕಪಡಾ ನೈಟಿ ಅವಳ ಮೈದುಂಬಿದರೆ, ಒಂದು ಟಾವೆಲ್ ಅವಳ ಕೊರಳ ಸುತ್ತಿ ಕೊಂಡಿದೆ.   ನನ್ನ ಒಳ ಕರೆಯದೇ ಅವಳಿಗೆ ಬೇರೆ ದಾರಿಯಿರಲಿಲ್ಲ.  ದೇವರ ಮುಂದೆ ದೀಪ ಬೆಳಗಿ ಊದುಬತ್ತಿ ಹೊಸ್ತಿಲಿಗೆ ಬೆಳಗಲು ಬಂದ ಅವಳ ಅಮ್ಮನಿಗೆ ಅನುಮಾನದ ಮೊನಚು.  ಪರಿಚಯಿಸಿದ ಎರಡು ನಿಮಿಷದಲ್ಲಿ ಖುದ್ದು ಅವರಮ್ಮನೇ ಕಾಫಿ ಕಪ್ಪಿನ ಸಮೇತ ಎದುರಿಗೆ ಬಂದು ನಿಂತಿದ್ದಳು.  ಕುಡಿದ ಮೂರನೇ ನಿಮಿಷಕ್ಕೆ ಸೆರಗಿನ ಮೂತಿಯನ್ನು ಪಕ್ಕೆಲುಬಿಗೆ ತಿವಿದು ಸಿಕ್ಕಿಸಿಕೊಳ್ಳುತ್ತಾ  ಖಾಲಿ ಕಪ್ಪಿನೊಂದಿಗೆ ಅಡುಗೆ ಮನೆ ಹೊಕ್ಕಳು.   
 
ಐದುವರೆ ಅಡಿಗಿಂತ ಎತ್ತರದವರು ಬಂದರೆ ಆ ಮನೆಯಲ್ಲಿ ಫ್ಯಾನ್ ತಿರುಗುವಂತಿಲ್ಲ.  ಅಪ್ಪಿ ತಪ್ಪಿ ಎದ್ದು ಬರುತ್ತೇನೆಂದು ಹೇಳಿ ಅಂಗಿಯ ತೋಳು ಸರಿ ಮಾಡಲು ಕೈ ಎತ್ತಿದರೆ ಅಷ್ಟೇ, ಅಷ್ಟು ಕಡಿಮೆ ಎತ್ತರದ ಹೆಂಚಿನ ಮನೆ ಅದು.   ಕುಟುಂಬ, ಓದು ಊರು ಪರಿಚಯ ಮಾಡುವುದರಲ್ಲಿ ಅವಳಮ್ಮನಿಗೆ ಖಾತರಿ ಆಗಿಬಿಟ್ಟಿತ್ತು. ತೋರಿಸಿಕೊಳ್ಳುವಂತಿಲ್ಲ.  "ಆಂಟಿ, ನೀವ್  ಪರ್ಮಿಶನ್  ಕೊಟ್ರೆ ನಮ್ ಲೆಕ್ಚರರ್ ಮನೇಲಿರೋ ಫಂಕ್ಷನ್ ಅಟೆಂಡ್ ಮಾಡ್ಕೊಂಡು ಬರ್ತೀವಿ" ಅಂದೆ.    ಖುಷಿಯಾಗಿ "ಹೋಗ್ಬನ್ನಿ" ಅಂದರು.   
 
ಮಲೆನಾಡ ಸೀಮೆಯ ತಂಪು ಸಂಜೆ ವಾತಾವರಣ; ಮೈ ಮನ ಮುದ್ದಿಸುತ್ತಿದೆ.  ಆಸ್ವಾದಿಸಿದಷ್ಟು ಆನಂದ ಹೆಚ್ಚುತ್ತೆ.  ಕೈ ಉಜ್ಜಿ ಮುಖ ಬೆಚ್ಚಗೆ ಮಾಡಿಕೊಂಡಷ್ಟು ಮತ್ತೇರಿಸುವ ತಂಗಾಳಿ.  ಪಕ್ಕದಲ್ಲಿರುವ ಅವಳ  ನಡಿಗೆ ಯಲ್ಲಿ ಜೊತೆಗೂಡಿ ಹೆಜ್ಜೆಗೆ ಹೆಜ್ಜೆ ಇಟ್ಟಷ್ಟು  ಹಿತ.  ಪರಿಚಯದ ಹೊಸತರಲ್ಲಿ ಯಾರೋ ನನ್ನ ಹೆಸರಲ್ಲಿ ಅವಳಿಗೆ ರಿಜಿಸ್ಟರ್ಡ್ ಪೋಸ್ಟ್ ಮೂಲಕ ಬರೆದು ಕಳಿಸಿದ  ಪ್ರೇಮ ಪತ್ರವನ್ನು ಅಂಚೆಯವನು ಕಾಲೇಜಿನ ಕ್ಲಾಸ್ ರೂಮಿ ನಲ್ಲಿ ಎಲ್ಲರೆದುರಲ್ಲೇ ಕೊಟ್ಟು ಹೋದದ್ದು, ಹುಡುಗಿಯರು ಗುಸುಗುಸು ಆಡಿಕೊಂಡ್ದದ್ದು, ಆಮೇಲೆ ಅದನ್ನು ಬರೆದದ್ದು ನಾನಲ್ಲವೆಂದು ಪುರಾವೆಗೆ ನನ್ನ ಹೊಲದ ಕಾಲುದಾರಿಯಂಥ ಬರಹದ ಸಾಲನ್ನು ತೋರಿಸುವ ಹೊತ್ತಿಗೆ ಅವಳೇ ನನ್ನ ಸ್ನೇಹಕ್ಕೆ, ಸಲುಗೆಗೆ  ಹತ್ತಿರವಾದದ್ದು, ಎಲ್ಲವೂ ಗೆಳೆಯ ಗೆಳತಿಯರೆದುರು  ನಕ್ಕು ಸುಮ್ಮನಾಗುವಷ್ಟು ಸಾಮಾನ್ಯವಾಗಿದ್ದು ಆ ಕ್ಷಣಕ್ಕೆ ಹಾದಿ ಸವೆಸಿದ ಹಾಯ್ಕುಗಳು.   ಆ ಹೊತ್ತಿನಲ್ಲಿ ನಗದೇ ನಮ್ಮಿಬ್ಬರನ್ನೂ ಹಿದಿದಿಟ್ಟದ್ದು ನಾವು "ಪ್ರೀತಿಸುತ್ತಿದ್ದೇವೆ" ಅನ್ನುವ ಫೀಲ್  ಮಾತ್ರ.   ಆ ದಿನವೇನೋ  ನಡೆದು ಹೋಗಿ ಬರಬಹುದಾದಷ್ಟು ದೂರವಿದ್ದ ಫಂಕ್ಷನ್ ಗೆ ಹೋಗಿ ಬಂದದ್ದಾಯಿತು.  
 
ಹೌದು, ಆ ಮೂರು ವರ್ಷಗಳಲ್ಲಿ ಓದಿದ್ದು ಓದನ್ನೋ ಅವಳನ್ನೋ?.  ತಲೆಗೆ ತುಂಬಿದ್ದು ಪಾಠವೋ ಕೇಳಿದ ಅವಳ ಮಾತೋ? ಯಾವುದು ಇಂತಿಷ್ಟೇ ಅಂದು ಹೇಳಲಾರೆ.   ಹಗಲು ಅವಳನ್ನು ಮತ್ತು ಗೆಳೆಯರನ್ನು  ತರಲೆಯಿಂದ ಕೇಳಿದೆ. ರಾತ್ರಿ ಪುಸ್ತಕಗಳ ಎದೆ ತಟ್ಟಿ ಜೋಗುಳ ಹಾಡಿ ನಾನೇ ಹಾಯಾಗಿ ನಿದ್ದೆ ಮಾಡಿದೆ.    "ಒಂದು ವೇಳೆ ಕೊನೆಯಲ್ಲಿ ನನ್ನ ಓದು ಕೈ ಹಿಡಿಯಲಿಲ್ಲ ಅಂತಾದರೆ  ಆಗಲೂ ನೀನು ಈಗಿನಂತೆ ಪಕ್ಕದಲ್ಲೇ ಇರುತ್ತೀಯಾ?"  ಕೈ ಹಿಡಿದು ಕೇಳಿದೆ.  "ಪೆದ್ದಾ,  ಜೀವನ ಎಷ್ಟೇ ಕಷ್ಟ, ಬದುಕು ಭಾರ, ಅಂತೆಲ್ಲಾ ಸುಳ್ಳು ಹೇಳಿಕೊಂಡು ನಡೆವಾಗಲೂ ಯಾರೂ ನಿನ್  ಜೊತೆ ಇರಲ್ಲ, ನಿನ್  ದೇಹದ್ ಭಾರ ಹೊರುವಂತೆ  ನಿನ್ನೆಲ್ಲಾ  ಹೊಣೆಯನ್ನು ನಿನ್  ಕಾಲ್ಮೆಲೇ  ಹಾಕ್ಕೊಂಡು ನಡೀಬೇಕು, ಅಫ್ಕೋರ್ಸ್ ನಾನ್ ನಿನ್ ಪಕ್ದಲ್ಲೇ ಇದ್ರೂ" ಅಂದಳು. 
 
 "ನೋಡು ಇಲ್ಲಿಂದ ಐದು ವರ್ಷ ನಿಂಗೆ ಟೈಮ್ ಕೊಡ್ತೀನಿ.  ನೀನು ಓದಿ, ಕೆಲ್ಸ ಮಾಡ್ತಾ, ಒಂದಿಷ್ಟು ಹೆಸ್ರು ಮಾಡಿ, ನಮ್ಮಪ್ಪನ್ನ ಹೆಣ್ ಕೇಳ್ತೀಯಾ?" ಅಂದಳು.   ವಯಸ್ಸಿನ ಹುಂಬತನ, ಅತಿಯಾದ ಆತ್ಮವಿಶ್ವಾಸ ಯಾವ್ದೂ ಒಳ್ಳೇದಲ್ಲ ಅಂತಾರೆ.   "ಅಲ್ಲಿವರ್ಗೂ ನಿಮ್ಮಪ್ಪ ಯಾವ್ದೇ ಗಂಡು ತೋರ್ಸೀದ್ರೂ  ಒಪ್ಕೊಂಡು ಮದ್ವೆ ಆಗಲ್ಲ ತಾನೇ?" ಅಂತ ನೇರವಾಗೇ ಮತ್ತು ಖಾರವಾಗೇ ಕೇಳಿದೆ.   ಆಣೆ, ಪ್ರಮಾಣ, ಆಹಾ,  ಆ ಹೊತ್ತಿಗೆ ಅವೆಲ್ಲಾ ಎಷ್ಟೆಲ್ಲಾ ತೃಪ್ತಿ ಕೊಟ್ಟವು.   
  
ಬಹಳ ದಿನಗಳು ಬೇಕಾಗಲಿಲ್ಲ.   ಬುದ್ಧಿವಂತೆ, ರೂಪವಂತೆಯಾದ ಆಕೆ ನನಗಿಂತ ಕಡಿಮೆ ದರ್ಜೆಯಲ್ಲಿ ಪಾಸಾ ಗಿದ್ದಳು.   ನಾನು ಯಥಾಪ್ರಕಾರ ಸಾವಿರಕ್ಕೋ ಎರಡು ಸಾವಿರಕ್ಕೋ ಸಿಗುವ ಕೆಲಸದ ನಿರೀಕ್ಷೆಯಲ್ಲಿದ್ದೆ.  ಕಡಿಮೆ ಮಾರ್ಕ್ಸ್ ಪಡೆದೂ ನನಗಿಂತ ಹೆಚ್ಚು ಸಂಬಳದ ನೌಕರಿಗೆ ಆಕೆ ಸೇರಿದಳು.   ಅದೊಂದು ದೊಡ್ಡ ಹಣ ಕಾಸಿನ ಸಂಸ್ಥೆ.   ಅವಳದಿನ್ನು ಲೈಫ್ ಸೆಟ್ಲ್ ಆದಂತೆಯೇ ಅನ್ನುವ ಜರ್ಪು.   ನಿವೃತ್ತಿಯಾಗಿ ಕೂಡಿಟ್ಟ ದುಡ್ಡನ್ನು  ಅವಳಪ್ಪ ಆ ಸಂಸ್ಥೆಯಲ್ಲಿ ಲಕ್ಷಗಟ್ಟಲೇ ಡಿಪಾಸಿಟ್ ಇಟ್ಟು ಆಕೆಗೆ ಕೆಲಸ ಸಿಕ್ಕುವಂತೆ ನೋಡಿಕೊಂಡಿದ್ದ.   ನನಗೆ  ಡೆಪಾಸಿಟ್ ಇರಲಿ ಅಕೌಂಟ್ ಓಪನ್ ಮಾಡಿ  ಮಿನಿಮಮ್ ಬ್ಯಾಲೆನ್ಸ್ ಮೆಂಟೈನ್ ಮಾಡುತ್ತೇನೋ ಇಲ್ಲವೋ ಎನ್ನುವ ಶಂಕೆ. 
 
ಒಂದಿನ ಆಕೆ ಕೆಲಸ ಮಾಡುತ್ತಿದ್ದ ಸಂಸ್ಥೆಯೊಳಕ್ಕೆ ಹೋಗಿ ಆಕೆ ಕೂತಿದ್ದ ಜಾಗದಲ್ಲಿ ನಿಂತೆ.   ತಲೆಯಿತ್ತಿದ ಆಕೆಗೆ ಶಾಕ್.   ಆಷ್ಟು ಬೇಗ ನಾನು ಆ ಮಟ್ಟಕ್ಕೆ ತಲುಪಿ, ಆಕೆಯ  ಐದು ವರ್ಷದ ಗಡುವನ್ನು ಮೂರು ವರ್ಷವೂ  ಕಡಿಮೆ ಮಾಡಲು ಗದರುವಂತ್ತಿತ್ತು ನನ್ನ ಭೇಟಿ.   ಆ ದಿನಕ್ಕೆ ಸರಿಯಾಗಿ ಆಕೆ ಗಡುವು ನೀಡಿ ಎರಡು ವರ್ಷವೂ ಕಳೆದಿದ್ದಿಲ್ಲ. "ಒಂದೈದು ನಿಮಿಷ ಹೊರಗೆ ಬಂದೆ , ಪ್ಲೀಜ್"  ಅಂದವಳೇ ಯಾವುದೋ ಫೈಲ್ ಹಿಡಿದು ಚೇಂಬರ್  ಒಂದನ್ನು ತೂರಿದಳು.   ನಾನಿನ್ನು ಸಂದರ್ಶಕರ ಕೊಠಡಿಯಲ್ಲೇ ಇದ್ದ ದಿನಪತ್ರಿಕೆಗಳಲ್ಲಿ ಮುಳುಗಿದ್ದೆ.   ಮಧ್ಯಾಹ್ನ ಒಂದೂವರೆ ಸಮಯ  ಎಲ್ಲರೂ ತಮ್ಮ ಸೀಟಿನಿಂದ ಊಟಕ್ಕೆ ಎದ್ದು ಹೊರಡುತ್ತಿದ್ದರು .  ನೋಡಿದೆ, ಅವಳ ಸೀಟು  ಖಾಲಿ.  ಪಕ್ಕದಲ್ಲಿದ್ದವರನ್ನು ಕೇಳಿದೆ; "ಅವರಾಗ್ಲೇ ಮಧ್ಯಾಹ್ನ ಹಾಫ್ ಡೇ ಲೀವ್ ಹಾಕಿ ಹೋಗಿಯೇ ಇಪ್ಪತ್ತು ನಿಮಿಷವಾಯ್ತು"ಅಂದರು.   ಹೋಗುವಾಗ ಒಂದು ಪತ್ರ  ಬರೆದು ಅದನ್ನು ಜೋಪಾನ ವಾಗಿ  ಕವರ್ ನಲ್ಲಿಟ್ಟು  ಗಮ್ ಹಚ್ಚಿ ಮೇಲೆ " ಡಿಯರ್ ……… "   ಅಂತ ಹೆಸರು ಬರ್ದು  ನನ್ನ ಕೈಗೆ ತಲುಪಿಸೋದಿಕ್ಕೆ ಹೇಳಿದ್ದಳಂತೆ.    
 
ಅದನ್ನು ಪಡೆದು  ಓಪನ್ ಮಾಡಿ ನೋಡಿದ್ರೆ, ಅದ್ರಲ್ಲಿ ಇದ್ದಿದ್ದು ಒಂದೇ ಸಾಲು "ಡಿಯರ್ ……..  ಇನ್ಮೇಲೆ ನನ್ನ ಭೇಟಿ ಮಾಡೋ ತ್ರಾಸು ತಗೋಬೇಡ … ".  ಸಲೀಸಾಗಿ ಅಲ್ಲೇ ಇದ್ದ ಕಸದ ಬುಟ್ಟಿಗೆ ಹರಿದು ಆ ಪತ್ರ ವನ್ನು ಹಾಕಿದರೆ ತ್ರಾಸಿಲ್ಲದೇ ತೇಲಾಡುತ್ತಾ ತಳ ಸೇರಿತು.  ನನ್ನ ಎಡಗಾಲ ಚಪ್ಪಲಿಯೂ ಆ ಕಡೆ ತಿರುಗಿ ನೋಡುವ ಯೋಚನೆ ಮಾಡದೇ ಮರಳಿದೆ. ನನಗಾಗ ನನ್ನ  ದುಡಿಮೆಯೊಂದೇ  ಅಲ್ಲ ಹೆಸರನ್ನೂ ಹೇಳಿಕೊಳ್ಳುಷ್ಟರ ಮಟ್ಟಿಗಿನ ಬದುಕು.  ಒಂದೆರಡು ವರ್ಷ ಕಳೆಯುವಷ್ಟರಲ್ಲಿ ಆಕೆ ಇದ್ದ ಹಣಕಾಸಿನ ಸಂಸ್ಥೆ ಜನಗಳ ದುಡ್ಡು ಮರು ಪಾವತಿ ಮಾಡಲಾಗದೇ ಏದುಸಿರು ಬಿಡುತ್ತಿತ್ತು.   ಆಕೆಯ ಅಪ್ಪ ಇಟ್ಟಿದ್ದ ಲಕ್ಷಗಳ ಹಣದ ನೆನಪಾಯಿತು.   ಇನ್ನು ಉಸಿರು ಕಟ್ಟುವ ಸರದಿ ಆಕೆ ಮತ್ತು ಆಕೆಯ ಅಪ್ಪನದಾಗಿತ್ತು.  ಅಂಥಹ ಹಲವು ಹಣಕಾಸು ಸಂಸ್ಥೆಗಳ ವಿರುದ್ಧ ನೂರಾರು ಪ್ರಕರಣಗಳು ದಾಖಲಾಗಿದ್ದು ಪದೇ ಪದೇ ಸುದ್ದಿ ಆದಾಗಲೆಲ್ಲಾ  "ಡಿಯರ್ ……..   " ನೆನಪಾಗುತ್ತಾಳೆ.  
 
ಕತ್ತಲಿನ  ಹೆಸರಿಟ್ಟುಕೊಂಡ ಬೆಳದಿಂಗಳಿನಂಥ ಹುಡುಗಿ ನೀಡಿದ ಗಡುವು ದಾಟಿದೆ.  ಇನ್ನು ನಾಲ್ಕಾರು ವರ್ಷ ದಾಟಿದರೆ, ನನ್ನ ಮಗನೂ "ವಯಸ್ಸಿಗೆ " ಬರುತ್ತಾನೆ.  ಇವತ್ತಲ್ಲ ನಾಳೆ ಕೊನೆ ಪಕ್ಷ ಒಮ್ಮೆ ಭೇಟಿಯಾದರೂ ಆದೇನು.  ಗಡುವು ನೀಡಿದ ಆಕೆಗೆ ಗಡಿಯಿರದ ಗೆಳೆತನ, ಆಡಂಬರವಿರದ ಬದುಕು, ಬೇಕಾದ್ದು ಇಷ್ಟು ಪಡೆದು, ಬೇಡವಾದ್ದಕ್ಕೆ  ದೂರವಿದ್ದು ಬದುಕುತ್ತಿರುವ ನನ್ನನ್ನು ಆಕೆಗೆ ಸ್ವಲ್ಪವೇ ಪರಿಚಯಿಸಬೇಕಿದೆ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

6 thoughts on “ಗಡುವು ದಾಟಿದ ಪ್ರೀತಿ ಗಡಿ ದಾಟದ ಬದುಕು: ಅಮರ್ ದೀಪ್ ಪಿ.ಎಸ್.

  1. ಕಪ್ಪು ಹೆಸರಿಟ್ಟುಕೊಂಡವಳು…ಬೆಪ್ಪಾದಳೇಕೋ..ಹಿಡಿಸಿತು.

  2. ತಮ್ಮ ಇದೆಲ್ಲಾ ಮುಗಿದು ಹೋದ ಕಥೆಯಾಯಿತು. ವಾಸ್ತವದ ಗಡಿಯೊಳಗೆ ಬರಲು ಯಾವುದೇ ವೀಸಾ ಪಾಸ್ ಪೋರ್ಟ್ ಅವಶ್ಯಕತೆಯಿಲ್ಲ. ಹೋಪ್ ಯು ಅಂಡರ್ ಸ್ಟ್ಯಾಂಡ್ ವೆಲ್ ಮರಿ

    ರಾಜ್

  3. ಜೀವನದಲ್ಲಿ ಇಷ್ಟಪಟ್ಟವರು ಕಳೆದುಹೋದಾಗ ನೆನಪು ಕಾಡುವುದು ಸಹಜ……….. ಯಾಕೆಂದರೆ ಪ್ರೀತಿ ಅನ್ನೋದು ಕೇವಲ ಪದವಲ್ಲ, ಅದು ಭಾವನೆ…….!!!!

Leave a Reply

Your email address will not be published. Required fields are marked *