ನಾನು ಚಿಕ್ಕವನಿದ್ದಾಗ ಅಪ್ಪನಿಂದ ಹಣವನ್ನಿಸಿದುಕೊಂಡು ಗಡಿಯಾರ ರಿಪೇರಿಯನ್ನು ಮಾಡಿಸಿಕೊಂಡು ಬಂದ ಪ್ರಸಂಗವನ್ನು ನಿಮ್ಮ ಮುಂದೆ ಹೇಳಬೇಕಿದೆ. ನನ್ನ ಹಾಗೂ ಗಡಿಯಾರದ ನಡುವೆ ಅನ್ಯೋನ್ಯತೆ ಅದು ಹೇಗೆ ಬೆಸೆದುಕೊಂಡಿತ್ತೊ ಏನೋ, ನಾನು ಚಿಕ್ಕವನಿದ್ದಾಗ ನಮ್ಮೂರಿನಿಂದ ಸಮೀಪದ ಊರಾದ ಬೈಲೂರಿಗೆ ಬಸವಣ್ಣನ ಜಾತ್ರೆಗೆಂದು ಅಪ್ಪನ ಭುಜವನ್ನೇರಿ ಎರಡೂ ಕಾಲುಗಳನ್ನು ಜೋತು ಬಿಟ್ಟು ಅಪ್ಪನ ತಲೆಯನ್ನು ಹಿಡಿದುಕೊಂಡು ಕುಳಿತು ಜಾತ್ರೆಗೆ ಹೋಗಿದ್ದೆ. ಅಂದರೆ ಅಪ್ಪನ ಸವಾರಿ ಮಾಡಿದ್ದೆ. ಆ ಜಾತ್ರೆಗೆ ಹೋದಾಗ ಆಸೆ ಪಟ್ಟು ಅಪ್ಪನಿಂದ ಕೊಡಿಸಿಕೊಂಡದ್ದು ಪುಟ್ಟ ವಾಚನ್ನು. ಅಪ್ಪ, ಪೀಪಿ, ಪುಗ್ಗಾ. ಪ್ಲ್ಯಾಸ್ಟಿಕ್ ಗಾಡಿ ಹೀಗೆ ಬೇರೆ ಏನನ್ನಾದರೂ ತೆಗೆದುಕೊ ಎಂದು ಹೇಳಿದ್ದರೂ, ನಾನು ಅದಾವುದನ್ನೂ ಬಯಸದೆ ಪ್ಲ್ಯಾಸ್ಟಿಕ್ ವಾಚವೊಂದನ್ನಷ್ಟೇ ಕೊಡಿಸಿಕೊಂಡಿದ್ದೆ. ಹೀಗೆ ಗಡಿಯಾರ ನನ್ನನ್ನು ಮೊದಲಿನಿಂದಲೂ ಆಕರ್ಷಿಸುತ್ತ ಬಂದಿತ್ತು. ಅದರಂತೆ ಗಡಿಯಾರದ ಅಂಗಡಿಯಂದರೆ ನನಗೆ ವಿಸ್ಮಯಲೋಕವಿದ್ದಂತೆ. ಅಲ್ಲಿರುವ ನೂರಾರು ಗಡಿಯಾರಗಳು ತಮ್ಮ ತಮ್ಮ ಕೆಲಸದಲ್ಲಿ ನಿರತವಾಗಿರುತ್ತಿದ್ದವು. ಅವುಗಳ ಕಾರ್ಯವೈಖರಿ ಅಚ್ಚರಿಯನುಂಟು ಮಾಡುತ್ತಲ್ಲಿತ್ತು. ಇದೇ ಕೆಲಸವನ್ನು ಮನುಷ್ಯರಿಗೆ ಒಪ್ಪಿಸಿದ್ದರೆ ಹೇಗಾಗುತ್ತದೆಂಬ ಕಲ್ಪನೆಯೇ ನಗೆ ತರಿಸುವಂತಹದ್ದು.
ನಾನು ಶಾಲೆಗೆ ಹೋಗುತ್ತಿರುವಾಗ ನನ್ನ ಮೆಚ್ಚಿನ ಹಾಡೆಂದರೆ ‘ಗಂಟೆಯ ನೆಂಟನೆ ಓ ಗಡಿಯಾರ, ಬೆಳ್ಳಿಯ ಬಣ್ಣದ ಗೋಲಾಕಾರಾ, ವೇಳೆಯ ತಿಳಿಯಲು ನೀನಾಧಾರ, ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್’. ಇದರಲ್ಲಿ ಬರುತಿದ್ದ ‘ಕಿವಿಯನು ಹಿಂಡಲು ನಿನಗದು ಕೂಳು’ ಎಂಬ ಸಾಲು ನನ್ನನ್ನು ವಿಚಾರಕ್ಕೆ ಹಚ್ಚಿತ್ತು. ಕಿವಿಯನ್ನು ಹಿಂಡಿಸಿಕೊಂಡು, ನಮಗೆ ಸರಿಯಾದ ಸಮಯವನ್ನು ತೋರಿಸುವ ಗಡಿಯಾರ, ಮೈಯನ್ನು ಸವಿಸಿಕೊಂಡರೂ ಪರಿಮಳ ನೀಡುವ ಗಂಧದ ಕೊರಡಿನಂತೆಯೋ ಅಥವಾ ಮೈಯನ್ನು ಹಿಂಡಿ ಹಿಪ್ಪೆಯಾದರೂ ಕೂಡ ನಮಗೆ ಸಿಹಿ ರಸವನ್ನು ನೀಡುವಂತಹ ಕಬ್ಬಿನಂತೆಯೋ ಎಂದು ನನಗನ್ನಿಸುತ್ತಿತ್ತು. ಪುಕ್ಕಟೆ ಯಾವ ಕೆಲಸವನ್ನು ಮಾಡದ ಇಂದಿನ ಕಾಲದಲ್ಲಿ ಗಡಿಯಾರಗಳೂ ಬದಲಾಗಿವೆ. ಗೋಡೆ ಗಡಿಯಾರವೇ ಆಗಲಿ, ಕೈಗಡಿಯಾರಗಳೇ ಆಗಲಿ ವರ್ಷಕ್ಕೆ ನೂರಿನ್ನೂರು ತೆತ್ತರೆ ಮಾತ್ರ ಸಮಯ ತೋರಿಸುತ್ತೇವೆನ್ನುತ್ತಿವೆ, ಇಂದಿನ ಗಡಿಯಾರಗಳು. ಕಾಲಕ್ಕೆ ತಕ್ಕಂತೆ ಅವು ಕೂಡ ಬದಲಾದುದರಲ್ಲಿ ಅಚ್ಚರಿಯೇನಲ್ಲ.
ನಮ್ಮೂರಲ್ಲಿ ಯಾವುದೇ ತಂಟೆ ತಗಾದೆಗಳ ನ್ಯಾಯ ನಿರ್ಣಯಗಳಾಗುತ್ತಿದ್ದುದು ನಮ್ಮ ಮನೆಯ ಮುಂದಿನ ದೊಡ್ಡ ಪ್ರಾಂಗಣದಲ್ಲಿಯೇ. ಆ ಸಮಯದಲ್ಲಿ ನಮ್ಮೂರಿನ ಶೆಟ್ಟರು, ಗೌಡರು, ನಮ್ಮ ತಂದೆಯೇ ಕುಲಕರ್ಣಿ ಅಲ್ಲದೆ ಊರಲ್ಲಿಯ ಅನೇಕ ಪ್ರಮುಖರೆಲ್ಲ ಈ ಸಂದರ್ಭದಲ್ಲಿ ಸೇರುತ್ತಿದ್ದರು. ಇದು ನಡೆಯುತ್ತಿದ್ದುದು ರಾತ್ರಿ ಎಲ್ಲರು ಊಟವನ್ನು ಮುಗಿಸಿಕೊಂಡ ನಂತರ ಅಂದರೆ, ರಾತ್ರಿ ಸುಮಾರು ಹನ್ನೊಂದು ಗಂಟೆಗೆ. ಆವಾಗ್ಯೆ ನಾನು ಏಳೆಂಟು ವರ್ಷದವ, ನಿದ್ದೆಯು ಕಣ್ಣು ತುಂಬಿ ಬರುತ್ತಿದ್ದರೂ ಕೂಡ ಅಪ್ಪನ ಪಕ್ಕದಲ್ಲಿಯೇ ಮುದ್ದೆಯಾಗಿ ಕುಳಿತುಕೊಳ್ಳುತಿದ್ದೆ. ಆವಾಗ್ಯೆ ನನ್ನನ್ನು ಆಕರ್ಷಿಸುತ್ತಿದ್ದುದು ಶೆಟ್ಟರ ಕೈಯಲ್ಲಿಯ ವಾಚು. ಕತ್ತಲೆಯಲ್ಲಿಯೂ ಮಿಂಚು ಹುಳುದಂತೆನ್ನಿಸುತಿದ್ದ, ಆ ವಾಚನ್ನೇ ನೋಡುತ್ತ ಕುಳಿತುಕೊಳ್ಳುತಿದ್ದೆ. ಆ ವಾಚನ್ನೊಮ್ಮೆ ಕೈಯಲ್ಲಿ ಕಟ್ಟಿಕೊಳ್ಳಬೇಕೆಂಬ ಆಸೆ ಮನಸ್ಸಿನಲ್ಲಿ ಚಿಗುರುತ್ತಲ್ಲಿತ್ತು. ಅದಕ್ಕಾಗಿ ಶೆಟ್ಟರ ಸ್ನೇಹ ಬೆಳಿಸಿಕೊಂಡರೆ ಸಾಧ್ಯ. ಅದಕ್ಕಾಗಿ ನಾನು ಮಾತನಾಡಿಸಬೇಕೆಂದರೆ ಧೈರ್ಯ ಸಾಲಲೊಲ್ಲದು, ಹಾಗೆ ನೋಡಿದರೆ ಶೆಟ್ಟರದ್ದೇನು ಅಂಜಿಕೆ ಬರುವಂತಹ ಅಜಾನುಭಾವ ದೇಹವಾಗಲಿ, ಮುಖದ ಮೇಲೆ ವೀರಪ್ಪನ್ನ ಮೀಸೆಯಾಗಲಿ ಇರಲಿಲ್ಲ. ಆದರೆ ಸಿಡುಬಿನಿಂದಲೋ ಏನೋ ಅವರ ಮುಖ ಹುಳುಕಾಗಿತ್ತು. ಕೆಂಡದುಂಡಿಯಂತಹ ಕಣ್ಣುಗಳಿಂದಾಗಿ ಅವರು ಬರಿ ನನ್ನನ್ನು ದಿಟ್ಟಿಸಿದರೂ ಸಾಕು ಹೆದರಿಕೆ ಬರುತ್ತಿತ್ತು. ಅದರಲ್ಲಿಯೇ ಧೈರ್ಯ ತಂದುಕೊಂಡು ಅವರನ್ನು ಮಾತನಾಡಿಸುವ ಧೈರ್ಯ ಮಾಡಿದ್ದೆ. ನನ್ನ ತಲೆಯಲ್ಲಿ ಗಡಿಯಾರವೇ ತುಂಬಿಕೊಂಡಿದ್ದರಿಂದ ಅದರದೇ ಮಾತು ಹೊರಬಂದಿತ್ತು. “ಟೈಮ್ ಎಷ್ಟ ಆಗೇತ್ರಿ…………” ಎಂದು ಕೇಳಿದ್ದೆ. ಅದಕ್ಕೆ ಶೆಟ್ಟರು ಗಡಿಯಾರವನ್ನು ದಿಟ್ಟಿಸಿ ನೋಡಿದಂತೆ ಮಾಡಿದರು. ಗಡಿಯಾರ ಕಣ್ಣ ಹತ್ತಿರ ಹಿಡಿದುಕೊಂಡು ನೋಡಿದರು, ದೂರ ಹಿಡಿದು ನೋಡಿದರು ಇಷ್ಟೆಲ್ಲ ಸರ್ಕಸ್ ಮಾಡಿದರೂ ಕೂಡ ಅವರು ನನಗೆ ಸಮಯವನ್ನೇನು ಹೇಳಲಿಲ್ಲ. ನನ್ನೊಂದಿಗೆ ಮಾತನ್ನೂ ಆಡದೆ, ಬೇರೆಯಡೆ ಮುಖ ಮಾಡಿಕೊಂಡು ಕುಳಿತುಕೊಂಡುಬಿಟ್ಟರು. ಶೆಟ್ಟರ ನಾಡಿಬಡಿತ ಗೊತ್ತಿದ್ದ ಅಪ್ಪ “ಒಳಗ ಹೋಗೊ ನಿದ್ದಿ ಬಂದದ ಮಲಕೋ ಹೋಗು, ಸಣ್ಣ ಹುಡಗಾಗಿ ಹಿರೇರೊಳಗ ಕೂಡತಾನ ದೊಡ್ಡ ಶಾಣ್ಯಾನಂಗ………….” ಎಂದು ನನ್ನ ಬೆನ್ನ ಮೇಲೆ ಜೋರಿನಿಂದ ಬಾರಿಸಿದ್ದರು. ನನ್ನ ಬೆನ್ನು ಚುರುಗುಟ್ಟಿತ್ತು.!
ಶೆಟ್ಟರು ನನಗೆ ಸಮಯವನ್ನೇಕೆ ಹೇಳಲಿಲ್ಲ, ಅಪ್ಪ ನನ್ನನೇಕೆ ಹಾಗೆ ಸಿಟ್ಟಿನಿಂದ ಹೊಡೆದರೆಂಬ ನಿಗೂಢತೆ ನನ್ನನ್ನು ಕಾಡುತ್ತಲಿತ್ತು. ಇದರಿಂದ ಕುತೂಹಲ ಒಂದೆಡೆಯಾದರೆ, ಕೈಯಲ್ಲಿ ಗಡಿಯಾರ ಕಟ್ಟಿಕೊಳ್ಳಲೇಬೇಕೆಂಬ ಉತ್ಸುಕತೆ ಇನ್ನೊಂದೆಡೆ. ಹೀಗಾಗಿ ಅಪ್ಪ, ದೊಡ್ಡ ಅಣ್ಣ ಯಾರೂ ಇಲ್ಲದ ಸಮಯವನ್ನು ಸಾಧಿಸಿಕೊಂಡು ಶೆಟ್ಟರೊಬ್ಬರೇ ಇದ್ದಾಗ ಕೇಳಿಯೇಬಟ್ಟಿದ್ದೆ “ಟೈಮ್ ಎಷ್ಟ ಆಗೇತ್ರಿ………” ಎಂದು. ಈ ಬಾರಿ ಶೆಟ್ಟರು ಮನಬಿಚ್ಚಿ, ಮುಜುಗರವನ್ನು ಬದಿಗಿಟ್ಟು “ನಂಗ ಟೈಮ ನೋಡಾಕ ತೀಳ್ಯಾಣಿಲ್ಲ ನೀನೂ ನೋಡಿಕೊ ನಂಗಷ್ಟ ಹೇಳು! ಎಲ್ರ ಎದುರಿನ್ಯಾಗ ಹಂಗ ಟೈಮ ಕೇಳಾಕ ಹೋಗಬ್ಯಾಡಪಾ” ಎಂದೆನ್ನುತ್ತ ಶೆಟ್ಟರು ತಮ್ಮ ಕೈಯಲ್ಲಿಯ ವಾಚನ್ನು ನನ್ನ ಕಣ್ಣಿಗೆ ಹಿಡಿದಿದ್ದÀರು.
ಅಪ್ಪನಿಗೂ ಕೈಗಡಿಯಾರ ಕಟ್ಟಿಕೊಳ್ಳಬೇಕೆಂಬ ಆಸೆ ಮನದಲ್ಲಿರುತ್ತಿತ್ತು. ಅದೇನೊ, ಅವರಿಗೆ ಆಡಂಬರದಂತೆ ಎಂದನ್ನಿಸುತ್ತಿತ್ತಂತೆ. ಅಲ್ಲದೆ, ಗಾಂಧೀಜಿಯವರ ಜೀವನ ಶೈಲಿ, ತತ್ವಗಳಿಂದ ಪ್ರಭಾವಿತರಾಗಿದ್ದ ಅವರು ಲಂಡಪಂಚೆ ಹಾಗೂ ಮೈಮೇಲೆ ಹೊದ್ದುಕೊಳ್ಳಲೊಂದು ಖಾದಿ ವಸ್ತ್ರವೊಂದಿರುತ್ತಿತ್ತು. ಊರು ಬಿಟ್ಟು ಹೊರಗೆ ಹೋಗುವ ಸಂದಂರ್ಭದಲ್ಲಿ ಮಾತ್ರ ಕಪ್ಪುತೋಳಿನ ಅಂಗಿ ಹಾಗೂ ಬಿಳಿಶುಭ್ರ ಧೋತರವನ್ನುಟ್ಟುಕೊಳ್ಳುತ್ತಿದ್ದರು. ಅದರಂತೆಯೇ ಅವರಿಗೆ ಟೊಂಕದಲ್ಲಿ ಕಟ್ಟಿಕೊಳ್ಳುವ ಗಾಂಧಿವಾಚ್ ಬೇಕಾಗಿತ್ತು. ಅದಕ್ಕಾಗಿ ವಾಚ ಅಂಗಡಿಗಳಲ್ಲಿ ವಿಚಾರಿಸಿ ನೋಡಿದಾಗ “ಗಾಂಧಿವಾಚ್ ಈಗೆಲ್ರಿ, ಅವರ ಜೋಡಿನ ಅವು ಹೊರಟಹೋದು’ ಎಂದು ಹೇಳಿದ ಅವರು ಮಾತಿನ ಕೊನೆಗೆ “ನೋಡೋಣ ಗುಜರಾಥದಲ್ಲೇನೋ ಆ ತರದ ವಾಚು ತಯಾರು ಮಾಡ್ತಾರಂತೆ, ವಿಚಾರ ಮಾಡಿ ನಿಮಗೆ ತಿಳಸ್ತೇನಂತ” ಎಂಬ ಆಶಾಬೀಜವೊಂದನ್ನು ಬಿತ್ತಿ ಕಳುಹಿಸಿದ್ದರು. ಮುಂದೆ ಅವರಿಂದ ಗಾಂಧಿವಾಚ್ ಬಗೆಗೆ ಯಾವುದೇ ಉತ್ತರ ಬರಲಿಲ್ಲ. ಅಪ್ಪನ ಆ ಆಶೆ ಕೊನೆಗೂ ಆಶೆಯಾಗಿಯೇ ಉಳಿದುಕೊಂಡಿತು. ಅವರೆಂದೂ ವಾಚನ್ನು ಕಟ್ಟಿಕೊಳ್ಳಲಿಲ್ಲ.
ನಾನು ಗಡಿಯಾರದಲ್ಲಿ ಮನುಷ್ಯರನ್ನು ಕಾಣುತಿದ್ದೆ. ಕೆಲವೊಮ್ಮೆ, ಗಡಿಯಾರದಲ್ಲಿಯ ಎರಡೂ ಮುಳ್ಳುಗಳು ಮನುಷ್ಯನ ಕೈಗಳಂತೆ ಭಾಸವಾಗುತ್ತಿತ್ತು. ಮತ್ತೊಮ್ಮೆ ದುಂಡಾದ ಗಡಿಯಾರಗಳು ಮನುಷ್ಯನ ಸುಂದರವಾದ ಮುಖದಂತೆ ಅನಿಸುತ್ತಿತ್ತು. ಮುಂಜಾನೆ ಒಂಬತ್ತು ಗಂಟೆ ಹದಿನೈದು ನಿಮಿಷವಾದಾಗ ಶಾಲೆಯಲ್ಲಿ ಹುಡುಗರು ‘ಏಕ್……..ದೋ…….ತೀನ……..ಚಾರ್” ಕವಾಯತ್ ಮಾಡುತ್ತಿರುವ ಹುಡುಗರಂತೆ, ಮತ್ತೊಮ್ಮೆ ಯಾವುದೊ ಸಮಯದಲ್ಲಿ ಸೆಲ್ಯೂಟ್ ಹೊಡೆದು ನಿಂತ ವೀರ ಸೈನಿಕನಂತೆ ಅನ್ನಿಸುತ್ತಿತ್ತು. ಗಡಿಯಾರ ನೋಡುತ್ತ ಕುಳಿತಿರುವಾಗ, ಹೀಗೆ ಏನೇನೊ ಕಲ್ಪನೆಗಳು ಗರಿಗೆದರಿ ಕುಣಿಯುತ್ತಿದ್ದವು. ಈ ವಿಚಾರವನ್ನೊಮ್ಮೆ ನನ್ನ ಸ್ನೇಹಿತನೊಂದಿಗೆ ಹಂಚಿಕೊಂಡಾಗ ಅರಸಿಕನಾದ ಅವನು “ನೀನು ಹೇಳುವದನ್ನು ನೋಡಿದರೆ ಇದೊಂದು ಮಾನಸಿಕ ಕಾಯಿಲೆಯ ಮುನ್ಸೂಚನೆಯೇ ಅನ್ನಿಸುತ್ತದೆ. ಒಳ್ಳೆಯ ಮಾನಸಿಕ ತಜ್ಞರಿಗೆ ತೋರಿಸುವದೊಳ್ಳೆಯದು!” ಎಂದು ನನ್ನ ಭಾವನೆಗಳಿಗೆ ಬರೆಯೆಳೆದಿದ್ದ. ಅಷ್ಟಕ್ಕೆ ಬಿಡದ ಆ ಸ್ನೇಹಿತ, ಮತ್ತೊಮ್ಮೆ ಭೇಟಿಯಾದಾಗ ‘ಮಾನಸಿಕ ತಜ್ಞರ ಹತ್ತಿರ ತೋರಿಸಿಕೊಂಡು ಬಂದೆ ತಾನೆ?’ ಎಂದು ನನ್ನ ಆರೋಗ್ಯದ ಬಗೆಗೆ ಕಾಳಜಿ ಮಾಡಿದ್ದ.
ಅಂದಿನಿಂದ ಬೆಸೆದುಕೊಂಡು ಬಂದ ಗಡಿಯಾರ ಹಾಗೂ ನನ್ನ ನಂಟು ಇಂದಿನವರೆಗೂ ಉಳಿದುಕೊಂಡು ಬಂದಿದೆ. ನನಗೆ ಸ್ನೇಹಿತರೇ ಆಗಲಿ ಸಂಬಂಧಿಕರೆ ಆಗಲಿ ಯಾರಿಂzಲಾದÀರೂ, ಯಾವುದೇ ತೆರನಾದ ಸಹಾಯ ಪಡೆದಾಗ, ಅದು ಪ್ರತ್ಯಕ್ಷವಾಗಿರಬಹುದು ಅಪ್ರತ್ಯಕ್ಷವಾಗಿರಲೂಬಹುದು ಅಂಥವರಿಂದ ಋಣಮುಕ್ತನಾಗಲು ಮನಸ್ಸು ಹವಣಿಸುತಿತ್ತು. ಅವರಿಗೆ ಏನಾದರೊಂದು ನೆನಪಿನ ಕಾಣಿಕೆಯನ್ನು ನೀಡುತ್ತಿದ್ದೆ, ಅದರಲ್ಲಿಯೂ ವಿಶೇಷವಾಗಿ ಗಡಿಯಾರಗಳÀನ್ನೇ ಕೊಡುತ್ತಿದ್ದೆ. ವೈಯಕ್ತಿಕವಾಗಿದ್ದರೆ ಕೈಗಡಿಯಾರವಿರಬಹುದು. ಸಂಘಸಂಸ್ಥೆಗಳಿಗಾದರೆ ದೊಡ್ಡ ಆಕಾರದ ಗೋಡೆ ಗಡಿಯಾರಗಳು. ಬೆಳಗಾವಿಯ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಲ್ಲದೇ ಲೋಕದರ್ಶನ ಕನ್ನಡ ದಿನಪತ್ರಿಕೆ ಕಚೇರಿಯಲ್ಲಿ ಸಾಕ್ಷಿ ನಿಂತಿರುವ ಗಡಿಯಾರಗಳನ್ನು ಈಗಲೂ ನೀವು ಗಮನಿಸಬಹುದು. ಇದರಲ್ಲಿ ಸ್ವಾರ್ಥವೂ ಇಲ್ಲದಿರುತ್ತಿರಲಿಲ್ಲ. ನಾನು ಜೀವವಿಮಾ ನಿಗಮದ ಪ್ರತಿನಿಧಿ. ನನ್ನ ಹೆಸರು ಹಾಗೂ ಮೊಬೈಲ್ ಸಂಖ್ಯೆ ಗಡಿಯಾರದ ಮೇಲೆ ಕಾಣಿಸಿದ್ದರಿಂದ ಯಾರಾದರೂ ಫೋನು ಮಾಡಿಯೋ, ಸಮಕ್ಷಮ ಭೇಟಿಯಾಗಿಯೋ ನನ್ನ ಹತ್ತಿರ ಜೀವವಿಮೆ ಮಾಡಿಸಬಹುದೇನೋ ಎಂಬ ಒಂದು ಆಶೆಯಿಂದ ಅಷ್ಟೆ. ಆದರೆ ಈವರೆಗೆ ಯಾರೊಬ್ಬರೂ ಫೋನು ಮಾಡಿ ವಿಮೆ ಮಾಡಿಸುವ ಹುಚ್ಚು ಸಾಹಸ ಮಾಡಿಲ್ಲ!
ಈಗ ನಿಮ್ಮ ಮುಂದೆ ಹೇಳಬೇಕಾಗಿರುವ ‘ಗಡಿಯಾರ ರಿಪೇರಿ’ ಮುಖ್ಯ ವಿಷಯಕ್ಕೆ ಬರುತ್ತೇನೆ. ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗ ಅಪ್ಪ ಟೇಬ¯ಕ್ಲಾಕ್ ಒಂದನ್ನು ತಂದಿದ್ದರು. ಅದರ ಹೆಸರು ಟೇಬಲಕ್ಲಾಕ್ ಆದರೂ ಅಪ್ಪ, ಅದನ್ನು ಇಡುತ್ತಿದ್ದುದು ಮಾತ್ರ ನಮಗಾರಿಗೂ ನಿಲುಕದಂತೆ ಅಡುಗೆಮನೆಯಲ್ಲಿ ಎತ್ತರದ ಮೇಲಿದ್ದ ಕಮಾನ ಸೆಲ್ಪನಲ್ಲಿ. ಅದನ್ನೆಂದೂ ಟೇಬಲ್ ಮೇಲೆ ಇಟ್ಟುದುದನ್ನು ನಾನು ನೋಡಲಿಲ್ಲ. ಗಡಿಯಾರದ ಬಗೆಗೆ ಅತಿಯಾದ ಪ್ರೀತಿ ಹೊಂದಿದ್ದ ನಾನು ಕೆಲವೊಂದು ಸಂದಂರ್ಭದಲ್ಲಿ ಅದನ್ನು ನೋಡಿದರೆ ಸಿಟ್ಟೂ ಬರುತ್ತಿತ್ತು. ಮುಂಜಾನೆ ನಾಲ್ಕು ಗಂಟೆಗೆ ಅಭ್ಯಾಸಕ್ಕೆಂದು ಏಳಬೇಕೆಂದಾಗ, ಎಚ್ಚರವಾಗಲಿಲ್ಲ ಎಂದು ಸುಳ್ಳು ಹೇಳಿ ಸುಖನಿದ್ರೆ ಮಾಡುವದರಿಂದ ಈಗ ವಂಚಿತನಾಗಿದ್ದೆ. ನಾನು ಮುಂಜಾನೆ ಏಳಬೇಕಾದ ಸರಿಯಾದ ಸಮಯಕ್ಕೆ ಅಪ್ಪನಿಗೆ ಕೇಳಿಸುವಂತೆ ಗಂಟೆ ಹೊಡೆದುಕೊಳ್ಳಲಾರಂಭಿಸುತ್ತಿತ್ತು. ಸಣ್ಣ ವಯಸ್ಸು ಸುಖನಿದ್ರೆ ಗಡಿಯಾರದ ಅಲಾರ್ಮ ಹಿಂಸೆಯನ್ನುಂಟು ಮಾಡುತ್ತಿತ್ತು. ಎದ್ದು ಅದನ್ನು ಆಫ್ ಮಾಡಿ ಮಲಗಿಕೊಳ್ಳಬೇಕೆಂದರೆ ಅದು ಎತ್ತರದಮೇಲಿನ ಕಮಾನ ಸೆಲ್ಪಿನಲ್ಲಿ, ನಮಗಾರಿಗೂ ನಿಲುಕದ ಸುರಕ್ಷಿತ ಆಶ್ರಯವನ್ನು ಹೊಂದಿತ್ತು. ಅಲ್ಲದೆ ಇದರ ಕರ್ಕಶ ಧ್ವನಿಗೆ ಅಪ್ಪ ಎದ್ದು ಬಿಟ್ಟಿರುತ್ತಿದ್ದರು. ಅವರು ಬಂದು ನಾನು ಹೊದ್ದುಕೊಂಡ ಚಾದರನ್ನು ತೆಗೆದು, ತಣ್ಣೀರನ್ನು ಮುಖಕ್ಕೆ ಗೊಜ್ಜಿ ಎಬ್ಬಿಸಿ ಅಭ್ಯಾಸ ಮಾಡಲು ಕೂಡ್ರಿಸುವಾಗ ನಾ ಮನಸ್ಸಿನಲ್ಲೆ ಗಡಿಯಾರಕ್ಕೆ ಹಿಡಿಶಾಪ ಹಾಕುತ್ತಿದ್ದೆ.
ಅಪ್ಪ ಗಡಿಯಾರ ತಂದಂದಿನಿಂದ ಕವಿ ದಿನಕರ ದೇಸಾಯಿಯವರು ಹೇಳುವಂತೆ ದಿನಾಲು ಅದಕ್ಕೆ ಕೂಳು ಹಾಕುವವರು ನನ್ನ ತಂದೆಯವರೇ. ಆ ಹಕ್ಕನ್ನು ಬೇರೆಯವರಿಗೆಂದಿಗೂ ಬಿಟ್ಟುಕೊಡಲಿಲ್ಲ. ಅದಕ್ಕೆ ಪ್ರತಿದಿನ ಹೆಚ್ಚೆಂದರೆ ಹತ್ತು ಸುತ್ತು ಕೀ ಕೊಡಬೇಕೆಂಬುದನ್ನು ನೋಡಿಟ್ಟುಕೊಂಡಿದ್ದರು. ಇವರು ಮತ್ತಷ್ಟು ಕಾಳಜಿ ವಹಿಸಿ ಅದಕ್ಕೆ ಅಪಚನವಾಗದಂತೆ ದಿನಾಲು ಮರೆಯದೆ, ‘ಒಂದೋ………ಎರಡೋ’ ಎಂದು ಎಣಿಸುತ್ತ ಒಂಭತ್ತು ಸುತ್ತನಷ್ಟೆ ಕೊಡುತ್ತಿದ್ದರು. ಅಷ್ಟೇ ಅಲ್ಲದೆ ಅದನ್ನು ಅದರದೆ ಆದ ವಸ್ತ್ರದಿಂದ ಒರಿಸಿ ಅದಕ್ಕಾಗಿಯೇ ಮಾಡಿಸಿದ್ದ ಕಟ್ಟಿಗೆಯ ಪೆಟ್ಟಿಗೆಯಲ್ಲಿಡುತ್ತಿದ್ದರು. ಮುಂದುಗಡೆ ಗಾಜಿನ ಬಾಗಿಲಿತ್ತು. ಹೀಗೆ, ಅಪ್ಪ ಹಾಗೂ ಗಡಿಯಾರದ ನಡುವೆ ಅನ್ಯೊನ್ಯ ಸಂಬಂಧವೇರ್ಪಟ್ಟಿತ್ತು. ಅದರಲ್ಲಿಯೇನಾದರೂ ವೆತ್ಯಾಸವಾದರೆ ಅಪ್ಪ ತಲೆಕೆಡಿಸಿಕೊಂಡುಬಿಡುತ್ತಿದ್ದರು. ಇದೇ ರೀತಿ ಸುಮಾರು ವರ್ಷಗಳು ಗತಿಸಿದ ನಂತರ ಅಪ್ಪನ ಸೇವೆಯಲ್ಲಿ ಅದೇನು ಲೋಪ ಕಂಡಿತೇನೋ ಮುನಿಸಿಕೊಂಡು ನಿಶ್ಚಲವಾಗಿ ನಿಂತುಬಿಟ್ಟಿತು. ಗಡಿಯಾರವನ್ನು ಕೈಯಲ್ಲಿ ತೆಗೆದುಕೊಂಡು, ಎಲ್ಲ ದಿಕ್ಕುಗಳಿಂದಲೂ ಅದನ್ನು ನೋಡಿದರು. ಅಲುಗಾಡಿಸಿ, ನಾಲ್ಕಾರು ಬಾರಿ ಕಿವಿಗೆ ಹಿಡಿದುಕೊಂಡು ನೋಡಿದರು. ಗಡಿಯಾರ ತನ್ನ ನಿರ್ಧಾರವನ್ನು ಬದಲಿಸಲಿಲ್ಲ. ನನ್ನನ್ನು ಕರೆದ ಅಪ್ಪ “ಈ ಗಡಿಯಾರಕ್ಕೇನ ಆಗೇದ ನೋಡೋ ಮದ್ದು……….” ಎಂದರು. ನಾನೂ ಅವರಂತೆ ಅದನ್ನು ಅಲುಗಾಡಿಸಿ ನೋಡಿ ಕೊನೆಗೆ ಅದನ್ನು ಬಿಚ್ಚಿಯಾದರೂ ನೋಡೋಣವೆಂದು ಸ್ಕ್ರೂ ಡ್ರೈವರ್ ತೆಗೆದುಕೊಂಡು ಕುಳಿತುಕೊಳ್ಳುತ್ತಲಿದ್ದೆ. ಅಷ್ಟರಲ್ಲಿ ಅಪ್ಪ ಜೋರಿನಿಂದ ಚೀರಿದ್ದರು. “ಅದ್ನ ಬಿಚ್ಚಬ್ಯಾಡೋ ಮಹರಾಯಾ, ರಿಪೇರಿ ಆಗದಂಗ ಕೆಡಿಸಿ ಇಡ್ತಿ ಅದ್ನ. ಗಡಿಯಾರ ರಿಪೇರಿ ಅಂಗಡಿಗೆ ತುಗೊಂಡ ಹೋಗು. ತುಗೋ ಈ ಐದ ರೂಪಾಯಿ ರೀಪರಿ ಮಾಡಿಸಿಕೊಂಡು ಉಳದ ಚಿಲ್ಲರ ಹೊಳ್ಳಿ ತಂದ ಕೊಡು” ಎಂದು ಐದು ರೂಪಾಯಿಯ ನೋಟನ್ನು ಸವರಿ ಸವರಿ ನೋಡಿ ಒಂದೇ ಇರುವುÀದನ್ನು ಖಚಿತಪಡಿಸಿಕೊಂಡು ನನ್ನ ಕೈಗೆ ಕೊಟ್ಟರು.
ಅಪ್ಪ ಹಣದ ವಿಷಯದಲ್ಲಿ ತುಂಬಾನೆ ಕಟ್ಟುನಿಟ್ಟು. ಅಪ್ಪನಿಂದ ಹಣ ನಮ್ಮ ಹತ್ತಿರ ಬಂದುದನ್ನು ಮರಳಿಸುವಾಗ ಪೈಸೆಗೆ ಪೈಸೆ ಲೆಕ್ಕ ಹೇಳಿ ಮರಳಿಸಬೇಕಾಗುತ್ತಿತ್ತು. ಬೆಳಗಾವಿಯಲ್ಲಿ ಮನೆಮಾಡಿಕೊಂಡಿದ್ದ ನಮಗೆ ಅಪ್ಪನ ಅನುಮತಿಯಿಲ್ಲದೆ ಸಿನೇಮಾ ಆಗಲಿ, ಹೊಟೇಲೆ ಆಗಲಿ ಕನಸಿನಮಾತಾಗಿತ್ತು. ಪಾಕೆಟ್‍ಮನಿ ಅಂದರೇನು ಎಂದು ಕೇಳುತ್ತಿದ್ದರು. ಬಹಳೇ ಲೆಕ್ಕಾಚಾರದ ಮನುÀಷ್ಯ. ಅನವಶ್ಯಕವಾಗಿ ಒಂದು ನಯ್ಯೆಪೈಸೆಯೂ ವ್ಯಯವಾಗಬಾರದೆಂಬುದು ಅವರ ವಾದ. ಅಪ್ಪನೊಂದಿಗೆ ಕಾಯಿಪಲ್ಲೆ – ಕಿರಾಣಿ ಸಾಮಾನುಗಳನ್ನು ತರಲೆಂದು ಹಿಂದವಾಡಿಯಲ್ಲಿರುವ ನಮ್ಮ ಮನೆಯಿಂದ ಹೊರಡುತ್ತಿತ್ತು ನಮ್ಮ ಪಾದಯಾತ್ರೆ. ಶಹಾಪೂರ-ಕಪಿಲೇಶ್ವರ ಮುಖಾಂತರ ಮಾರ್ಕೆಟ್ ಸೇರಿಕೊಳ್ಳುತ್ತಿದ್ದೆವು. ಕಡಿಮೆ ದರ, ಒಳ್ಳೆಯ ಗುಣಮಟ್ಟದ ಸಾಮಾನುಗಳು ಎಲ್ಲೆಲ್ಲಿ ಸಿಗುತ್ತವೆಯಂಬುದು ಅಪ್ಪನಿಗೆಲ್ಲ ಗೊತ್ತು. ಅಲ್ಲೆಲ್ಲ ತಿರುಗಿ ಸಾಮಾನುಗಳನ್ನು ತೆಗೆದುಕೊಂಡು ಬಂದು ನಾವು ಬರುತ್ತಿದ್ದುದು, ಮಾರ್ಕೆಟ್‍ನಲ್ಲಿರುವ ವೆಂಕಟೇಶದೇವರ ದೇವಸ್ಥಾನಕ್ಕೆ ಬರುತ್ತಿದ್ದೆವು. ಇಲ್ಲಿಗೆ ಬರುವ ಉದ್ದೇಶವೆಂದರೆ ಕೇವಲ ಭಕ್ತಿಯಿಂದ ದೇವರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವದಷ್ಟೆ ಆಗಿರದೆ. ಇಲ್ಲಿಯವರೆಗೆ ತಂದಂತಹ ಎಲ್ಲ ಸಾಮಾನುಗಳನ್ನು ಕೆಳಗೆ ಸುರುವಿ ಅವುಗಳಲ್ಲಿ ಆಯ್ಕೆ ಮಾಡಿ ಗಟ್ಟಯಾದಂತಹ ಬಟಾಟಿ, ಸೌತಿಕಾಯಿ, ಟೆಂಗಿನಕಯಿ ಮುಂತಾದವುಗಳನ್ನು ಕೈಚೀಲದ ಕೆಳಭಾಗ ಹಾಕಿ ಟೋಮೆಟೊ ಬಾಳಿಹಣ್ಣು ಮೃದುಪದಾರ್ಥಗಳನ್ನು ಮೇಲೆ ಹಾಕಿಕೊಳ್ಳುವದಾಗಿರುತ್ತಿತ್ತು. ಇಲ್ಲಿಯವರೆಗೆ ಸುಮಾರು ಐದಾರು ಕಿ.ಮಿ. ಓಡಾಟವಾಗಿರುವದರಿಂದಲೋ ಏನೋ ಹಸಿವೆಯಿಂದ ಹೊಟ್ಟೆ ಚುರಗುಟ್ಟುತ್ತಲಿತ್ತು. ಕಾಲುಗಳು ನಡೆದು ಸುಸ್ತಾಗಿ ಮುಂದೆ ಹೆಜ್ಜೆ ಇಡಲಾರೆ ಎನ್ನುತ್ತಲಿದ್ದವು. ಅಷ್ಟರಲ್ಲಿ ಅಪ್ಪ “ಈಗ ನಮ್ಮೆಲ್ಲ ಕೆಲಸ ಮುಗಿಯಿತು. ಹೋಟೆಲಿಗೆ ಹೋಗಿ ಏನನ್ನಾದರೂ ತಿನ್ನೋಣವೊ ಅಥವಾ ಅದೇ ಖರ್ಚಿನಲ್ಲಿ ಬಸ್ಸಿಗೆ ಹೋಗೋಣವೊ?” ಎಂಬ ಉತ್ತರಿಸಲಾಗದ ಕಠಿಣ ಪ್ರಶ್ನೆಯೊಂದನ್ನು ನನ್ನ ಮುಂದೆ ಇಡುತ್ತಿದ್ದರು. ಇದರಲಿ,್ಲ ಅಪ್ಪನದು ತಪ್ಪೆಂದಾಗಲಿ, ಅಪ್ಪ ಜೀಪುಣಾಗ್ರೇಸನೆಂದಾಗಲಿ ನಾನು ಹೇಳುವದಿಲ್ಲ. ಹೆಚ್ಚಿಗೆ ಹಣ ಕೈಯಲ್ಲಿ ಸಿಕ್ಕರೆ ಮಕ್ಕಳು ಎಲ್ಲಿ ಹಾಳಾಗುತ್ತಾರೊ, ಕಷ್ಟದ ಜೀವನವೇ ಮಕ್ಕಳನ್ನು ಮನುಷ್ಯನ ಮೂರ್ತಿರೂಪ ಕೊಡುತ್ತದೆಂದು ನಂಬಿದ್ದವರು ಅವರು.
ಇಂಥ ಕಟ್ಟುನಿಟ್ಟಿನ ಅಪ್ಪನಿಂದ ಐದು ರೂಪಾಯಿ ನೋಟು ನನ್ನ ಕೈಗೆ ಬಂದಿತ್ತು. ಗಡಿಯಾರವನ್ನು ತೆಗೆದುಕೊಂಡು, ಅಕ್ಕ ಹೆಣಿಕೆ ಹಾಕಿದ ಕೈಚೀಲದಲ್ಲಿ ಗಡಿಯಾರವನ್ನು ಹಾಕಿಕೊಂಡು ಖಡೆಬಝಾರದಲ್ಲಿ ಸಾಲಾಗಿದ್ದ ಗಡಿಯಾರ ರಿಪೇರಿ ಅಂಗಡಿಗಳೊಂದರಲ್ಲಿ ಒಳಹೊಕ್ಕೆ. ಕಣ್ಣಿಗೆ ರಾವ್‍ಗನ್ನಡಿ ಹಾಕಿಕೊಂಡು ಗಡಿಯಾರ ರಿಪೇರಿ ಮಾಡುವದರಲ್ಲಿ ತಲ್ಲೀನನಾಗಿದ್ದ. ಎರಡೆರಡು ಬಾರಿ ಕೆಮ್ಮಿದರೂ ಅವನು ತಿರುಗಿನೋಡಲಿಲ್ಲ. ಕೈಚೀಲದಲಿದ್ದ ಗಡಿಯಾರವನ್ನು ಹೊರಗೆ ತೆಗೆದಿಟ್ಟ ಸಪ್ಪಳಕ್ಕೆ ತಿರುಗಿನೋಡಿ ನನ್ನ ಕೈಯಲ್ಲಿದ್ದ ಗಡಿಯಾರವನ್ನಿಸಿದುಕೊಂಡು ಬಿಚ್ಚಿ ನೋಡಿ, ಧೂಳ ಝಾಡಿಸುತ್ತಿದ್ದ ಅದರಲ್ಲಿ ಅಡಗಿ ಕುಳಿತ್ತಿದ್ದ ಜೊಂಡಿಂಗವೊಂದು ಹೊರಬಂದು ಓಡಿಹೋಯಿತು. ಈಗ ಗಡಿಯಾರದ ಹೃದಯದ ಬಡಿತ ಮತ್ತೆ ಪ್ರಾರಂಭವಾಗಿತ್ತು! ಅಪ್ಪ ದಿನಾಲು ಅರಿವೆಯಿಂದ ವರಸಿ ನೀಟಾಗಿ ಇಡುತ್ತಿದ್ದ ಗಡಿಯಾರದಲ್ಲಿ ಅಪ್ಪನ ಕಣ್ಣ ತಪ್ಪಿಸಿ ಈ ಜೊಂಡಿಂಗ ಅದಾವಾಗ್ಯೆ ಒಳಗೆ ಹೋಗಿ ಕುಳಿತಿತ್ತೇನೊ. ಏಕಾಂತ ಬಯಸಿ ಹೀಗೆ ಒಳಗೆ ಕಳಿತಿರಬೇಕಾದರೆ ಇದಾವ ತಪಸ್ಸು ಮಾಡುತ್ತಿರಬಹುದು? ‘ಟಿಕ್……..ಟಿಕ್…….’ಸಂಗೀತವನ್ನಾಲಿಸುತ್ತ ಕುಳಿತಿರುವ ಇದು ಸಂಗೀತ ಪ್ರೇಮಿಯೇ ಇರಬಹುದೆಂದೂ ಅನ್ನಿಸಿತು. ಮತ್ತೊಮ್ಮೆ ಎಷ್ಟೋ ವರ್ಷ ಇದೇ ಗೂಡಿನಲ್ಲಿದ್ದರೂ, ಯಾವುದೇ ತಕರಾರಿಲ್ಲದೆ ಟೆನೆನ್ಸಿ ಕಾನೂನನ್ನು ಹಚ್ಚಿ ಬಡದಾಡದೆ ಮತ್ತೊಂದು ನೆಲೆ ಹುಡಿಕಿಕೊಂಡು ತನ್ನಷ್ಟಕ್ಕೆ ತಾನು ಓಡಿಹೋಗುತ್ತಿರುವ ಈ ಜೊಂಡಿಂಗ ಮನುಷ್ಯನಿಗಿಂತಲೂ ಎಷ್ಟೊ ಮೇಲಲ್ಲವೆ? ಮನಸ್ಸು ಏನನ್ನೊ ಮೆಲಕು ಹಾಕುತ್ತಿರುವಾಗ ಅಂಗಡಿಯವ “ಈ ಗಡಿಯಾರದ್ದು ಒವರಆಯಿಲಿಂಗ್À ಮಾಡಬೇಕು. ನಿಮ್ಮ ಮನ್ಯಾಗ ಅಪ್ಪಾನ್ನ ಕೇಳಿಕೊಂಡ ಬಾ” ಎಂದು ಗಡಿಯಾರವನ್ನು ನನ್ನ ಕೈಗಿಟ್ಟು ಮತ್ತೆ ತನ್ನ ಕೆಲಸದಲ್ಲಿ ನಿರತನಾದ ಗಡಿಯಾರ ವೈದ್ಯ.
ರಿಪೇರಿ ಅಂಗಡಿಯಿಂದ ಹೊರಬಿದ್ದ ನಾನು, ಗಡಿಯಾರವನ್ನು ಕಿವಿಗಚ್ಚಿಗೊಂಡು ಕೇಳಿದೆ ‘ಟಿಕ್….. ಟಿಕ್……..’ ಎಂದು ಗಡಿಯಾರ ಬಡಿದುಕೊಳ್ಳುತ್ತಲಿತ್ತು. ಜೇಬಿನಲ್ಲಿ ಐದು ರೂಪಾಯಿ ನೋಟು ಮುಕ್ಕಾಗದೆ ಹಾಗೆ ಕುಳಿತಿತ್ತು. ನಡೆಯುತ್ತ ಬಂದಿದ್ದರಿಂದಲೋ ಏನೋ ಹೊಟ್ಟೆ ಚುರುಗುಟ್ಟಲಾರಂಭಿಸಿತ್ತು. ಅವಶ್ಯಕತೆ ಹೊಸ ವಿಚಾರಕ್ಕೆ ಹಚ್ಚುತ್ತದೆಂಬುದು ಸುಳ್ಳಲ್ಲ, ನನಗೆ ಹೋಟೇಲಿಗೆ ಹೋಗಿ ಏನನ್ನಾದರೂ ತಿನ್ನಬೇಕಾಗಿತ್ತು. ರಿಪೇರಿಗೆ ಒಂದು ರೂಪಾಯಿ ತೆಗೆದುಕೊಂಡರೆಂದು ಸುಳ್ಳು ಹೇಳಿದರಾಯಿತೆಂದು, ಮನಸ್ಸು ಯೋಚಿಸುತಿತ್ತು. ಅಷ್ಟರಲ್ಲಿ ನನ್ನ ದೇಹ ‘ಸತ್ಯ ದರ್ಶಿನಿ’ ಉಪಾಹಾರ ಮಂದಿರದ ಕುರ್ಚಿಯೊಂದರಲ್ಲಿ ಕುಳಿತಿತ್ತು. ನಾಲಿಗೆಯ ಚಪಲ ತೀರಿತ್ತು, ಹೊಟ್ಟೆ ತುಂಬಿತ್ತು. ಆಸೆ ಅಂಬರಕೆ ಏಣಿ ಹಚ್ಚಿತ್ತು ಮನಸ್ಸು. ಹೇಗೊ ಅಪ್ಪನಿಗೆ ಸುಳ್ಳು ಹೇಳುತ್ತಿದ್ದೇನೆ ಅದರ ಜೊತೆಗೆ ಇನ್ನೊಂದು ಸುಳ್ಳು ಹೇಳಿದರೇನಾಗುತ್ತದೆಂದು ಚಂಚಲ ಮನಸ್ಸು ಸತ್ಯದ ದಾರಿಯನ್ನು ಬಿಟ್ಟು, ಸುಖಕರವಾದ ಸುಳ್ಳಿನ ದಾರಿಯತ್ತ ಆಕರ್ಷಿತವಾಗಿತ್ತು. ಹೇಗೋ ನನ್ನ ಮೆಚ್ಚನ ಜೋಡಿಯಾದ ರಾಜಕಪುರ – ನರ್ಗಿಸ್ ರ ಚಲನಚಿತ್ರ ಎದುರಿನ ಚಿತ್ರಮಂದಿರದಲ್ಲಿಯೇ ಪ್ರದರ್ಶನಗೊಳ್ಳುತ್ತಲಿತ್ತು. ಆ ಚಿತ್ರವನ್ನು ನೋಡಿ ಬಸ್ಸಿನಲ್ಲಿ ಮನೆಗೆ ಹೋದರಾಯಿತು ಹಾಗೂ ಅಪ್ಪನ ಮುಂದೆ ‘ಗಡಿಯಾರ ರಿಪೇರಿಗೆ ಮೂರು ರೂಪಾಯಿ ತೆಗೆದುಕೊಂಡರೆಂದು ಒಂದು ಸುಳ್ಳು ಹೇಳಿದರಾಯಿತೆಂದು ಚಲನಚಿತ್ರ ನೋಡಲು ಹೋಗಿ ಕುಳಿತೆ, ಚಿತ್ರ ನೋಡುವತ್ತ ಮನಸ್ಸೇ ಇಲ್ಲ. ಇನ್ನು ಮೇಲೆ ಗಡಿಯಾರ ಬಂದು ಬಿದ್ದರೆ ಅಪ್ಪನ ಮುಂದೆ ಹೇಳುವದೇನೆಂದು ಗಾಬರಿಯಾಗಲಾರಂಭಿಸಿತು. ಆಗಾಗ ಗಡಿಯಾರವನ್ನು ಕಿವಿಗಚ್ಚಿಕೊಂಡು ಹೃದಯ ಬಡಿತ ಪರೀಕ್ಷಿಸುತ್ತ ಕುಳಿತಿದ್ದೆ. ಚಿತ್ರಕಥೆ ಹಾಗೇ ಓಡುತ್ತಲಿತ್ತು.
ಚಿತ್ರ ನೋಡಿ ಮನೆ ಕಡೆಗೆ ಹೆಜ್ಜೆ ಹಾಕಿದ್ದೆ. ಬೇಕಾದರೆ ನನ್ನ ಅರ್ಧ ಆಯುಷ್ಯವನ್ನು ಗಡಿಯಾರಕ್ಕೆ ಹಾಕು ಗಡಿಯಾರ ಅಪ್ಪನ ಕೈ ಸೇರುವವರೆಗಾದರೂ ಜೀವಂತವಿರಲೆಂದು ದೇವರಲ್ಲಿ ಬೇಡಿಕೊಂಡೆ. ದೇವರಿಗೆ ನನ್ನ ಮೊರೆ ಕೇಳಿತೆಂದು ಕಾಣಿಸುತ್ತದೆ ಮನೆಗೆ ಹೋಗಿ ಅಪ್ಪನ ಕೈಯಲ್ಲಿ ಗಡಿಯಾರವನ್ನು ಹಾಗೂ ಉಳಿದಿದ್ದ ಎರಡು ರೂಪಾಯಿ ನೋಟನ್ನು ಕೊಟ್ಟೆ. ನಾಡಿ ಬಡಿತದೊಂದಿಗೆ ಬಂದಿದ್ದ ಗಡಿಯಾರವನ್ನು ನೋಡಿ ಅಪ್ಪನಿಗೆ ತುಂಬಾನೇ ಸಂತೋಷವಾಯಿತು. ಅತ್ಯಂತ ಪ್ರೀತಿಯಿಂದ ತಮ್ಮ ಕೈಯಲ್ಲಿ ಅದನ್ನು ತೆಗೆದುಕೊಂಡು ಅದೇ ಮೃದುವಾದ ವಸ್ತ್ರದಿಂದ ಅದರ ಮೈಯನ್ನೆಲ್ಲ ಒರಿಸಿ ನಮಗ್ಯಾರಿಗೂ ನಿಲುಕದಂತೆ ಮತ್ತೆ ಕಮಾನ್‍ಸೆಲ್ಫನಲ್ಲಿ ಇಟ್ಟರು. ಅದರ ‘ಟಿಕ್……ಟಿಕ್….’ ಸಪ್ಪಳ ಕೇಳಿದಂತೆಲ್ಲ, ಸಂತೋಷ ಕಳೆ ಅವರ ಮುಖದಲ್ಲಿ ಮೂಡಿದ್ದು ಎದ್ದು ಕಾಣುತ್ತಲಿತ್ತು.. ಮುಂದೆ ಅಪ್ಪ ತೀರಿಕೊಂಡ ನಂತರ ಹಲವಾರು ವರ್ಷಗಳ ಕಾಲ ಗಡಿಯರ ಸುರಕ್ಷಿತವಾಗಿಯೇ ಇತ್ತು. ಅಪ್ಪ ತೀರಿಕೊಂಡ ನಂತರದ ದಿನಗಳಲ್ಲಿ ಗಡಿಯಾರ ಅಪ್ಪನ ನೆನಪು ತರುತ್ತಲಿತ್ತು. ಅದರ ‘ಟಿಕ್…….ಟಿಕ್……’ ಸಪ್ಪಳ ನಾನು ಮಾಡಿದ ತಪ್ಪನ್ನು ನೆನಪಿಸುತ್ತಲಿತ್ತು. ಈಗ, ಸುಳ್ಳನ್ನೇ ನಿಜವೆಂದು ನಂಬಿದ್ದ ಅಪ್ಪನೂ ಇಲ್ಲ. ನನ್ನ ತಪ್ಪಿಗೆ ಸಾಕ್ಷಿಯಾಗಿ ನಿಂತಿದ್ದ ಗಡಿಯಾರವೂ ಇಲ್ಲ. ಖಾಲಿಯಾದ ಬೋಳು ಬೋಳು ಕಮಾನ ಸೆಲ್ಫನ್ನು ನೋಡಿದಾಗ ಮನಸ್ಸಿಗೆ ತುಂಬಾನೇ ನೋವಾಗುತ್ತದೆ. ನಾನೂ ಈಗ ಯಾವುದೇ ಸಾಕ್ಷಿ ಪುರಾವೆಗಳಿಲ್ಲದ ಸತ್ಯಹರಿಶ್ಚಂದ್ರನಾಗಿಬಿಟ್ಟಿದ್ದೆ.!!
-ಗುಂಡೇನಟ್ಟಿ ಮಧುಕರ, ಬೆಳಗಾವಿ.
ಗಡಿಯಾರದ ಜೊತೆಗಿನ ನಿಮ್ಮ ನಂಟು ಹಾಗೂ ಟಿಕ್ ಟಿಕ್ ಬಹಳ ಚೆನ್ನಾಗಿದೆ