ನಾಲ್ವರ ಗಜ಼ಲ್ ಗಳು

ಗಜ಼ಲ್

ಕಪ್ಪೆಂದು ಜರಿದು ದೂರ ಉಳಿಸಿದವರು ಕೆಲವರು
ಅಸಹ್ಯದಿಂದ ಮುಖ ಸಿಂಡರಿಸಿದವರು ಕೆಲವರು

ನನ್ನ ಬಣ್ಣ ನಿಮ್ಮ ಮುಖಕ್ಕೇನಾದರೂ ಮೆತ್ತಿಕೊಂಡೀತೇ?
ಕೇಳಬೇಕೆನಿಸಿತ್ತು ಕ್ಷಣ ಮಾತ್ರವೂ ನಿಲ್ಲದೇ ಹೋದವರು ಕೆಲವರು

ಬಣ್ಣದಲ್ಲೇನಿದೆ ಬಾ ಗೆಳೆಯ ಕೂಡಿ ಆಡೋಣವೆಂದ ಮಾತುಗಳು ಸಾಕಷ್ಟಿವೆ
ಅವುಗಳನ್ನೆಲ್ಲಾ ಗಣನೆಗೆ ತೆಗೆದುಕೊಳ್ಳದವರು ಕೆಲವರು

ದೂಷಿಸಿದವರ ಕೇಳಿದೆ ನಿಮ್ಮ ನೆರಳಿನ ಬಣ್ಣ ಯಾವುದು?
ಉತ್ತರಿಸಲಾಗದೆ ಗರಬಡಿದಂತೆ ನಿಂತವರು ಕೆಲವರು

ದೇಸು ಇದೇ ಬಣ್ಣ ಬೇಕೆಂದು ಬೇಡಿಕೊಂಡನೆ? ಇಲ್ಲವಲ್ಲಾ!!!
ಕೇಳಿದ್ದಕ್ಕೇ…ನಕ್ಕು ಅಪಹಾಸ್ಯ ಮಾಡಿ ಹೊರಟವರು ಕೆಲವರು

ದೇಸು ಆಲೂರು…

ಗಜಲ್

ಸರಿದು ಹೋಯ್ತು ಮತ್ತೊಂದು ಪ್ರೇಮಿಗಳ ದಿನ
ಮರೆಯಲಾರೆ ನಾವಿಬ್ಬರೂ ಸಂಧಿಸಿದ ಆ ಸುದಿನ

ಜೋರಾದ ಮಳೆ ಅಬ್ಬರಕ್ಕೆ ನಡುಗಿ ನಿಂತಿದ್ದೆ ಮರದ ಕೆಳಗೆ
ಸರಿ ಸಮಯಕೆ ಹಿತವಾಗಿ ಬಂದು ತುಂಬಿ ನಿಂತೆ ಮೈಮನ

ಪ್ರೀತಿ ದೇವನಿಟ್ಟ ವರ ಅದಕೆ ನೀ ನನಗೆ ದಕ್ಕಿದೆ
ನೀ ನಿಟ್ಟೆ ಹಣೆಗೆ ಚುಕ್ಕಿ ಅದಕೆ ಸಲ್ಲಿಸುವೆ ದೇವಗೆ ನಮನ.

ಪ್ರತಿ ಬಾರಿ ಈ ದಿನ ನಮ್ಮದೆ ಗುಲಾಬಿಯಲಿ ರಂಗಾಗಲು
ಹೊಸ ಚೈತನ್ಯ ತುಂಬಿ ಬರುತಿರಲು ಒಲವ ಗಾನ.

ನೋವು ನಲಿವುಗಳನ್ನು ಸಮನಾಗಿ ಸ್ವೀಕರಿಸುವ ನಾವು
ಬದುಕು ಬಂಡಿಯಲಿ ಅಪರಂಜಿಗಳಾಗಿ ಮಾದರಿಯಾಗೋಣ

ಪ್ರೇಮಿಗಳು ನಾವು ಪ್ರತಿದಿನ ಪ್ರತಿಕ್ಷಣ ಸಾಂಗತ್ಯದಲ್ಲಿ
ಒಂದೆ ದಿನದ ಆಚರಣೆ ಬೇಕಿಲ್ಲ ಈ ಜಯಳಿಗೆ
ಸದಾ ನಿನ್ನದೇ ಧ್ಯಾನ ನಿಶಾಪಾನ

ಜಯಶ್ರೀ.ಭ.ಭಂಡಾರಿ.

ಮೌನವೇಕಿದೆ

ಎಂದೂ ಇರದಂತೆ ನಿನ್ನ ಸನಿಹದಲ್ಲೂ ಮೌನವೇಕಿದೆ
ಜೊತೆಯಾಗಿಲೇ ಬೇಕಾದ ಕಾಲದಲ್ಲೂ ಮೌನವೇಕಿದೆ

ಹೊರಡುವಾಗಲೂ ಮುಖಕ್ಕೆ ಮುಖವಿಟ್ಟು ರಮಿಸುತ್ತದೆ ಇರುವೆ
ಜೊತೆಗಿದ್ದೂ ಇಲ್ಲದಂತೆ ವಿರಹದಲ್ಲೂ ಮೌನವೇಕಿದೆ

ಮಕರಂದಕ್ಕಾಗಿ ದಣಿಯುತ್ತದೆ ದುಂಬಿ ಹೂವನರಸುತ್ತ
ಮೊಗ್ಗು ಅರಳಿ ಹೂವಾಗುವ ಕಾಲದಲ್ಲೂ ಮೌನವೇಕಿದೆ

ಕವಿದ ಕಾರ್ಮೋಡದಲಿ ನರ್ತಿಸುವುದು ಬಿನ್ನಾಣದಲಿ ನವಿಲು
ಸುಳಿ ಮಿಂಚು ಅಬ್ಬರಿಸುವ ಆಗಸದಲ್ಲೂ ಮೌನವೇಕಿದೆ

ಸೂರ್ಯ, ಚಂದ್ರ ಭೂಮಿ ಎಲ್ಲವೂ ಸುತ್ತುತ್ತವೆ ತಮ್ಮನ್ನೇ
ಆಗಸದಂಗಳದ ಪರಿಭ್ರಮಣದಲ್ಲೂ ಮೌನವೇಕಿದೆ

ಉರಿಯುತ್ತಲೇ ಕಿಚ್ಚಾಗಿದೆ ಪ್ರಜ್ವಲಿಸುವ ಕೆಂಡದುಂಡೆ
ಕುದಿವ ಲಾವಾರಸದ ಒಡಲಾಳದಲ್ಲೂ ಮೌನವೇಕಿದೆ

ನಶೆಯೇರಿಸುವುದಿಲ್ಲ ಇತ್ತೀಚೆಗೆ ಒಂದೇ ಲೋಟ ಮದಿರೆ
ಹಾವುಗಳ ರುದ್ರ ನುಲಿತದ ಬೇಟದಲ್ಲೂ ಮೌನವೇಕಿದೆ

ಸಿರಿ, ರೂಢಿಯಾಗಿದೆ ನಿನಗೆ ಮತ್ತೆ ಮತ್ತೆ ತಿರಸ್ಕರಿಸುವುದು
ಕಣ್ಣಲಿ ತುಂಬಿದ ಮಾತಿನ ಕಣಜದಲ್ಲೂ ಮೌನವೇಕಿದೆ

ಶ್ರೀದೇವಿ ಕೆರೆಮನೆ

ಎದೆಯ ಅಂಗಳದಲಿ ಸಾಗಿದ
ಗರುತುಗಳಿವೆ ರವಿಯೆ||
ಮನದ ಮಾಮರದಲಿ ಮಾಗಿದ
ನೆನಪುಗಳಿವೆ ರವಿಯೆ||

ಹೃದಯ ಮಂದರದಲಿ ಮಾತಡಿದ
ಮಾತಿನ ಸೆಲೆಗಳಿವೆ|
ಕತ್ತಲೆಯ ಕಾನನದಲಿ ಕಾಡಿದ
ನಯನಗಳಿವೆ ರವಿಯೆ||

ಬಯಕೆಯ ತೋಟದ ಮನೆಯಲಿ
ಬಿಡಿಸದ ಅನುಭವಗಳಿವೆ|
ಮಮತೆಯ ಮಡಿಲಿನಲಿ ಮೂಡಿದ
ಕಿರಣಗಳಿವೆ ರವಿಯೆ||

ಪ್ರೀತಿಯ ಒಡಲಿನಲಿ ನವಿರಾದ
ಮಧುರ ಬಾವನೆಗಳಿವೆ|
ಕಲೆಯ ಕಲ್ಪನೆಯಲಿ ನಲಿದಾಡಿದ
ಸುಕ್ಷಣಗಳಿವೆ ರವಿಯೆ||

ಹಳೆಯ ದಾರಿಗೆ ಮಹರಾಜನ
ನವಿನ ಮಾರ್ಗಗಳಿವೆ|
ಗೆಜ್ಜೆಯ ಪೂಜೆಗೆ ಹೆಜ್ಜೆಯ
ಸವಾಲುಗಳಿವೆ ರವಿಯೆ||

-ರಾಜಶೇಖರ ಗೌಡರ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x