ಗಜ಼ಲ್-೧
ಎಂಥ ಸೋಗುಗಳಲ್ಲಿ ಬದುಕಿದ್ದೇನೆ ಯಾರ ಖುಷಿಗೋ ನುಡಿಯುತ್ತ
ಎಂಥ ನೋವಿನಲಿ ಮುಳುಗಿದ್ದೇನೆ ನನ್ನೊಡಲ ನಾನೇ ಬಗೆಯುತ್ತ
ಬಂದ ದಾರಿಯಲಿ ಸುರಿದ ಮಂಜು ಮುಂದಕ್ಕೂ ಚಾಚಿ ಮಬ್ಬು
ಯಾರಿಗೆ ದೂರು ಹೇಳಿದ್ದೇನೆ ಒಡಕು ತಮಟೆಯ ಬಡಿಯುತ್ತ
ಖಚಿತ ಚಹರೆಗಳೇ ಇಲ್ಲದೆ ಹೇಗೋ ಬರೆದಿದ್ದೇನೆ ಚಿತ್ರ
ಮುಖ ಮೀಸೆ ಬರಿದೆ ಮೆತ್ತಿದ್ದೇನೆ ಗೆರೆಯ ಎಳೆಯಲು ಸೋಲುತ್ತ
ಎಲ್ಲದು ಅಗಣಿತ ಸಂದಣಿಯಲ್ಲಿ ಕಳೆಯಿತು ಒಂಟಿದನಿ
ಬರಿದೇ ಸಂತೆ ತಿರುಗಿದ್ದೇನೆ ನನ್ನನೇ ನಾನು ಹುಡುಕುತ್ತ
ಕೈ ಕೈ ಹಿಡಿದು ಒಟ್ಟಿಗೆ ನಡೆದೂ ಕಳೆದೇ ಹೋದೆವು ಗೆಳೆಯ
ಕವಿದ ಕತ್ತಲಲಿ ತೆವಳಿದ್ದೇನೆ ಕರೆದ ದನಿಗಾಗಿ ತಡಕುತ್ತ
ಗಜ಼ಲ್-೨
ಎಲ್ಲವನು ಕಾಸಿಗೆ ಕೊಳ್ಳಬಹುದು ನಗುವಿನ ಹೊರತು
ಯಾವುದನ್ನೂ ಶಮನಿಸಬಹುದು ಹಸಿವಿನ ಹೊರತು
ನಡೆದಂತೆ ನಡೆದಂತೆ ಬುತ್ತಿ ಖಾಲಿಯಾಗುತ್ತ ಬಂತು
ಏನನ್ನೂ ಕೂಡಿ ಇಡಲಾಗದಲ್ಲ ನೆನಪಿನ ಹೊರತು
ಸಂತೆ ಹೊತ್ತಿಗೆ ಮೂರು ಮೊಳ ನೇಯ್ದಂತೆ ಎನ್ನುತ್ತಾರೆ
ಏನನ್ನು ಮಾರಬಹುದು ಹೇಳು ಕನಸಿನ ಹೊರತು
ಹಂಚಿ ಹಗುರಾಗೆಂದು ಹಠ ಹಿಡಿಯುವೆ ನೀನು ಸಖೀ
ನಿನ್ನ ತೋಳಲ್ಲಿ ನೀಗಿಕೊಳ್ಳುವದೇನು ಮುನಿಸಿನ ಹೊರತು
ಧೇನಿಸುತ್ತ ಧೇನಿಸುತ್ತ ಸರಿದು ಹೋಗುತ್ತದೆ ಹೊತ್ತು
ಬದುಕಿನಲಿ ಹಾಡಲೇನಿದೆ ಗೆಳೆಯ ಒಲವಿನ ಹೊರತು
-ಡಾ. ಗೋವಿಂದ ಹೆಗಡೆ
ಗಜಲ್..
ಪ್ರಕ್ಷುಬ್ಧ ಕಾಶ್ಮೀರ ಮತ್ತೇ ಪ್ರೇಮ ಕಾಶ್ಮೀರ ವಾಗಿ ಅರಳಲಿ ಇನ್ನಾದರೂ
ಕಲ್ಲು ತೂರುವ ಕೈಗಳಲಿ ಶಾಂತಿ ಹೂವುಗಳು ಅರಳಲಿ ಇನ್ನಾದರೂ
ಗುಂಡುಗಳ ಮೊರೆತಕ್ಕೆ ಗಾಯಗೊಂಡು ಚೀತ್ಕರಿಸುತ್ತೀವೆ ಪೈನ್ ಮರಗಳು
ಬೆಳ್ಳನೆ ಹಿಮಕ್ಕಂಟಿದ ರಕ್ತದ ಕಲೆ ಮಾಸಿಹೋಗಲಿ ಇನ್ನಾದರೂ
ಹೆಣಗಳ ಹೊತ್ತು ನಿರ್ಲಿಪ್ತತೆಯಿಂದ ಹರಿಯುತಿದೆ ಕಣಿವೆಯ ಝೇಲಂನದಿ
ಮರೀಚಿಕೆಯಾಗಿರುವ ಶಾಂತಿ ಅನುಕ್ಷಣದ ಹಾಡಾಗಲಿ ಇನ್ನಾದರೂ
ಮಾತಿನಲ್ಲೂ ದಿಗಿಲು ಮೌನದಲ್ಲೂ ಆತಂಕ ಹೆಪ್ಪುಗಟ್ಟಿದೆ ಕಾಶ್ಮೀರ
ಸ್ವರ್ಗದೊಳಗಿನ ನರಕ ಸುಟ್ಟು ಬೂದಿಯಾಗಲಿ ಇನ್ನಾದರೂ
ಕಣಿವೆಯ ಜನರ ಮನಸಿನಲ್ಲಿ ಕಟ್ಟಬೇಕಿದೆ ಪ್ರೀತಿ ವಿಶ್ವಾಸದ ಸೇತುವೆ
ರಕ್ತದೋಕುಳಿ ಹರಿಸುವ ಸೇಡಿನ ಕಿಡಿಗಳು ನಂದಿಹೋಗಲಿ ಇನ್ನಾದರೂ
ಸಂಘರ್ಷದ ಬದುಕಿಗೆ ರಂಗು ನೀಡಲಾಗದೆ ನಲುಗುತಿದೆ ಟುಲಿಪ್ ಹೂ
ಕಾಶ್ಮೀರಿ ಚರಿತ್ರೆಯ ರಕ್ತಸಿಕ್ತ ಅಧ್ಯಾಯಗಳಿಗೆ ಪೂರ್ಣವಿರಾಮ ಸಿಗಲಿ ಇನ್ನಾದರೂ..
-ಲಕ್ಷ್ಮಿಕಾಂತ ನೇತಾಜಿ ಮಿರಜಕರ. ಶಿಗ್ಗಾಂವ.
ಗೋವಿಂದ ಹೆಗಡೆಯವರ ಎರಡೂ ಗಜಲ್ ಗಳು ಮಾರ್ಮಿಕವಾಗಿವೆ. ಮೊದಲನೆಯ ಗಝ಼ಲ್ ಕಾಫಿಯಾನಾ ಚಂದದ ಅಭಿವ್ಯಕ್ತಿಯೊಂದಿಗೆ ಮೂಡಿ ಬಂದಿದೆ. “ಎಂಥ ಸೋಗುಗಳಲ್ಲಿ ಬದುಕಿದ್ದೇನೆ ಯಾರ ಖುಷಿಗೋ ನುಡಿಯುತ್ತ:
ಎಂಥ ನೋವಿನಲ್ಲಿ ಮುಳುಗಿದ್ದೇನೆ ನನ್ನೊಡಲ ನಾನೇ ಬಗೆಯುತ್ತ”
ಮತ್ಲಾದ ಈ ಸಾಲುಗಳು ಇಡೀ ಗಝ಼ಲ್ ನ ಜೀವಾಳ. ವಾಹ್!!
ನೈಸ್…
ಸುಜಾತಾ ಲಕ್ಮನೆ 28/10/2019
ಹೆಗಡೆಯವರ ಗಜಲ್ ಅಂದರೆ ಹದವರಿತ ಪಾಕ. ಆಕೃತಿ ಆಶಯಗಳನ್ನು ಪಾಲಿಸುವುದರ ಜೊತೆಗೆ ಭಾವಸ್ಪರಿಸುವ ಅದ್ಬುತ ಶೇರ್ ಗಳನ್ನು ಕಟ್ಟುತ್ತಾರೆ. ಓದಿ ಖುಷಿಪಟ್ಟೆ