ಗಜಲ್ ಹಾದಿಯಲ್ಲಿ: ‘ನೇರಿಶಾ’ಳ ಹೊಂಬೆಳಕು: ಯಲ್ಲಪ್ಪ ಎಮ್ ಮರ್ಚೇಡ್

ಪುಸ್ತಕ : ‘ನೇರಿಶಾ’ (ಗಜಲ್ ಸಂಕಲನ)
ಗಜಲ್ ಕವಿ: ನಂರುಶಿ ಕಡೂರು
ಬೆಲೆ : 180/-
ಸಂಪರ್ಕಿಸಿ: 8073935296, 8277889529

ಗಜಲ್ ಸಂಕ್ಷಿಪ್ತ ಪರಿಚಯ :

ಗಜಲ್‌ ಎಂದರೆ ಪ್ರೀತಿ–ಪ್ರೇಮ ಕುರಿತಾಗಿಯೇ ಬರೆಯಲಾಗಿರುವ ಮತ್ತು ಬರೆಯಬೇಕಾಗಿರುವ ಕಾವ್ಯ ಪ್ರಕಾರ ಎನ್ನುವುದು ಸರಿಯಲ್ಲ. ಸಾಂಪ್ರದಾಯಿಕ ವಸ್ತು ಮತ್ತು ವ್ಯಾಪ್ತಿ ಮೀರಿ ಗಜಲ್‌ ತುಂಬಾ ದೂರ ಕ್ರಮಿಸಿದೆ. ಇದರ ಗೇಯತೆ, ಲಯ, ಕೋಮಲ ವಿನ್ಯಾಸದಲ್ಲಿ ವರ್ತಮಾನಕ್ಕೆ ‘ಮುಖಾಮುಖಿ’ ಆಗುವುದಿಲ್ಲ ಎನ್ನುವ ಮತ್ತೊಂದು ಆಕ್ಷೇಪವಿದೆ. ಆದರೆ ಗಜಲ್‌ಗಳಲ್ಲಿ ಬಂಡಾಯ ಮತ್ತು ಸಾಮಾಜಿಕತೆಯ ಧ್ವನಿಯೂ ಇದೆ. ನವ್ಯಕಾವ್ಯದ ಪ್ರಮುಖ ಸ್ಥಾಯಿಭಾವವಾದ ಆತ್ಮಾವಲೋಕನ ಮತ್ತು ಆತ್ಮವಿಮರ್ಶೆಯೂ ಇದೆ.

ಗಜಲ್ ದ್ವಿಪದಿಯಲ್ಲಿರುತ್ತದೆ. ಒಂದು ಗಜಲ್ ನಲ್ಲಿ 5 ರಿಂದ 25 ಶೇರ( ದ್ವಿಪದಿ) ಗಳಿರಬಹುದೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ,

  • ಗಜಲ್ ನ ಒಂದು ಚರಣಕ್ಕೆ ’ಮಿಶ್ರ’ ಎನ್ನುತ್ತಾರೆ,
  • ದ್ವಿಪದಿಗೆ ’ಶೇರ್’ ಎನ್ನುತ್ತಾರೆ.

ಉರ್ದು ಸಾಹಿತ್ಯ ,ಸಂಸ್ಕೃತಿಯಿಂದ ಗಜಲ್ ಬಂದಿದೆ ಯಾದ್ದರಿಂದ ನಮ್ಮ ಕನ್ನಡ ಸಂಸ್ಕೃತಿಗೆ ಅವುಗಳನ್ನು ಒಗ್ಗಿಸಿಕೊಳ್ಳುವಾಗ ಉದು೯ ಸಾಹಿತ್ಯ ದ ಮಧುಶಾಲೆ, ಸಾಕಿಗಳ ಬಗ್ಗೆಯು ಇಲ್ಲಿ ಚಚಿ೯ಸಿದ್ದಾರೆ. (ಕೃಪೆ :ಇದು ಗೂಗಲ್ ನಲ್ಲಿ ಮಾಹಿತಿ ಲಭ್ಯವಿದೆ.)

ಶಿವಪ್ರಕಾಶ್ ರು ಕುಂಬಾರ(ನಂರುಶಿ) ಯುವ ಬರಹಗಾರರು, ಕ್ರಿಯಾಶೀಲ ಸಂಘಟನಾಕಾರರು, ಸಮಾಜಮುಖಿಯ ಕೆಲಸಗಳಿಗೆ ಎತ್ತಿದ ಕೈ, ಅಷ್ಟೇ ಅಲ್ಲದೆ ವೃತ್ತಿಯಿಂದ ಮೆಟ್ರೋ ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಜೊತೆಜೊತೆಗೆ ಪ್ರವೃತ್ತಿಯಿಂದ ಒಳ್ಳೆಯ ಕವಿಯಾಗಿ ನಾಡಿನಾದ್ಯಂತ ಹೆಸರುವಾಸಿಯಾಗಿದ್ದಾರೆ, ಈಗಾಗಲೇ ಸಾಹಿತ್ಯ ಲೋಕದೊಳಗೆ “ಅಮೃತಸಿಂಚನ ನಿಮಗಾಗಿ”, “ಕಾಮನಬಿಲ್ಲು ಬಣ್ಣ ಬೇಡುತ್ತದೆ”, ಹಾಗೂ ಇನ್ನಿತರ ಲೇಖನಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತರಾಗಿರುವದನ್ನು ಕಾಣಬಹುದು,

ಗೆಳೆಯ ಯುವ ಬರಹಗಾರ, ನಂರುಶಿ ರವರು ತಮ್ಮ ಗಜಲ್ ಸಂಕಲನ “ನೇರಿಶಾ” ಕೃತಿಯನ್ನು ಅಂಚೆ ಮೂಲಕ ತರಿಸಿಕೊಂಡು ಓದಿದಾಗ ತುಂಬಾ ತುಂಬಾ ವಿಶಾಲವಾಗಿ ಚಿಂತನೆ ಮಾಡುವಂತಹ ವ್ಯಕ್ತಿತ್ವವನ್ನು ಹೊಂದಿರುವಂತ ಕವಿ ಅಂತ ಅನಿಸುತ್ತಿದೆ, ಈ “ನೇರಿಶಾ” ಗಜಲ್ ಸಂಕಲನದಲ್ಲಿ ಸುಮಾರು 54 ಗಜಲುಗಳಿವೆ, ಪ್ರತಿ ಗಜಲ್ ಗೆ ಹೋಲಿಕೆಯಾಗುವ ರೇಖಾಚಿತ್ರಗಳು ಮನಸ್ಸೆಳೆದು ಏಕಾಗ್ರತೆ ಗಜಲ್ ಓದುವ ಕಡೆಗೆ ಕರೆದುಕೊಂಡು ಹೋಗುತ್ತವೆ, 150 ಪುಟಗಳನ್ನು ಹೊಂದಿರುವ ನೇರಿಶಾ ಗಜಲ್ ಸಂಕಲನವು ಎಲ್ಲಾ ಗಜಲ್ ಗಳು ಬರಹಗಾರರನ್ನು ಓದಿಸಿಕೊಂಡು ಈ ಪುಸ್ತಕ.

ಈ ಸಂಕಲನವನ್ನು ಓದಿದಾಗ ಪ್ರೀತಿ ವಿರಹ ಮೋಹ ವ್ಯಾಮೋಹ ಆಸೆ-ದುರಾಸೆ ಸಾಮಾಜಿಕ ಕಳಕಳಿ ಹೆಣ್ಣಿನ ಮೇಲೆ ಆಗುತ್ತಿರುವ ದೌರ್ಜನ್ಯ, ಶೋಷಣೆ ಅತ್ಯಾಚಾರ ಅಲ್ಲದೇ ಮಹಿಳೆಯನ್ನು ಬಲಪಡಿಸುವ ಕುರಿತು ಗಜಲ್ ಗಳನ್ನು ರಚಿಸಿದ್ದಾರೆ, ಧರ್ಮ-ಜಾತಿ ಮನೆತನ ಮೇಲು-ಕೀಳು ಮೂಡನಂಬಿಕೆ ರೈತರ ಗೋಳು ದೇವದಾಸಿ ಪದ್ಧತಿ ಕನ್ನಡ ನಾಡು ನುಡಿ ಪ್ರಕೃತಿ ಸೌಂದರ್ಯ ಸೊಬಗನ್ನು ಕುರಿತು ಗಜಲ್ ಗಳ ಮೂಲಕ ನಾಡಿನ ಸಾಹಿತ್ಯಾಸಕ್ತರಿಗೆ ಬಹುಸುಂದರವಾಗಿ ರಚಿಸಿ ಕೊಟ್ಟಿದ್ದಾರೆ,

ನನಗೆ ಇಷ್ಟವಾದ ಕೆಲವೊಂದು ಗಜಲ್ ಗಳನ್ನು ಇಲ್ಲಿ ವಿವರಣೆ ಮಾಡುತ್ತಾ ಹೋಗುತ್ತಿದ್ದೇನೆ

“ದೇವರ ಹೆಸರಲ್ಲಿ ಪೂಜಾರಿಗೆ ನೈವೇದ್ಯ ನೀಡಿರುವಳು ನಾನು ಗೆಳೆಯ
ಊರ ಗೌಡರ ತೀಟೆ ತೀರಿಸಲು ದಾಸಿ ಆಗಿರುವಳು ನಾನು ಗೆಳೆಯ”

ಕವಿಯು ಶೋಷಣೆಗೊಳಗಾಗಿರುವ ಹೆಣ್ಣಿಗೆ ಧ್ವನಿಯಾಗಿ, ಧೈರ್ಯವಾಗಿ, ಶಕ್ತಿಯಾಗಿ ನಿಲ್ಲುವುದರ ಜೊತೆಗೆ, ಗಜಲ್ ಮೂಲಕ ನಿಶಕ್ತಿ ಗೊಂಡಿರುವ ಹೆಣ್ಣಿನ ದನಿಗೆ ಸಾಂತ್ವನ ಹೇಳುವ ಮೂಲಕ ಇಲ್ಲಿ ಶಕ್ತಿ ತುಂಬಿದ್ದಾರೆ.

ಗಜಲ್ ಕವಿ ನಂರುಶಿ ರವರು ಸಮಾಜದ ಪಿಡುಗು ಎಂದು ಹೇಳುತ್ತಿರುವ ದೇವದಾಸಿ ಪದ್ಧತಿಯನ್ನು ಬೇರು ಸಮೇತವಾಗಿ ಈ ಸಮಾಜದಿಂದ ಕಿತ್ತುಹಾಕಬೇಕು ಸರ್ಕಾರ ಸಂಘ ಸಂಸ್ಥೆಗಳು ಸಮಾಜದ ಹಿತಕ್ಕಾಗಿ ಚಿಂತಿಸುವ ಮನಸುಗಳು ಹಲವಾರು ವರ್ಷಗಳಿಂದ ವಿವಿಧ ಯೋಜನೆಗಳನ್ನು ಜಾರಿ ಮಾಡುತ್ತಾ ಬಂದಿದೆ, ಜೊತೆಗೆ ನಮ್ಮ ಕವಿ ಸಹ ಈ ಸಮಸ್ಯೆ ಬಗ್ಗೆ ತನ್ನ ಗಜಲ್ ಮೂಲಕ ಧ್ವನಿಯೆತ್ತಿ ಜನತೆಗೆ ತಿಳಿಸುತ್ತಿರುವುದು ಕಂಡುಬರುತ್ತಿದೆ.

ಮತ್ತೊಂದು ಗಜಲ್ ನಲ್ಲಿ ಕವಿ ನಂರುಶಿ ರವರು ಪ್ರಕೃತಿಯ ಸೊಬಗನ್ನು ತನ್ನ ಒಲವಿನ ಸಖಿಗೆ ಲಜ್ಜೆಯೊಂದಿಗೆ ಬೇಗನೆ ಬಾರೇ ನನ್ನ ಸಖಿ ಎನ್ನುವ ಗಜಲ್

“ವನ ಹೂವು ಸುಗಂಧ ತುಂಬಿ ನಿನ್ನಿಂದ ಮುಡಿಯೇರಲು ಕಾಯುತ್ತಿದೆ
ಹೂವಿನ ಪರಿಮಳ ಜಗಕೆ ಸೂಸುತ ಬೇಗನೆ ಬಾರೆ ನನ್ನ ಸಖಿ”

ಎಂಥ ಅದ್ಭುತ ಗಜಲ್, ನಿಸರ್ಗದೊಂದಿಗೆ ಇರುವ ಕವಿಯ ಪ್ರೀತಿ, ನಿಸರ್ಗದ ಮಡಿಲಿನಲ್ಲಿ ತನ್ನ ಸಖಿಯನ್ನು ಕಾಣುತ್ತಿರುವ ಕವಿಯ ಕಲ್ಪನಾಲೋಕ ವಾವ್, ವನ ಮಾತೆಯು ತನ್ನ ಬಳ್ಳಿಯ ತುಂಬ ಹೂವುಗಳನ್ನು ತುಂಬಿಕೊಂಡು ನಿನ್ನ ಸಹಕಾರದೊಂದಿಗೆ ಮುಡಿಯೇರಲು ವನ ಮಾತೆ ಕಾಯುತ್ತಿದ್ದಾಳೆ, ಆ ಹೂವಿನ ಮಕರಂದ ಪರಿಮಳ ಜಗಕೆ ಸೂಸುವಂತೆ ನೀ ಬೇಗ ಬಾರೆ ನನ್ನ ಸಖಿ, ಎಂದು ತನ್ನ ಒಲುಮೆಯ ಸಖಿಯನ್ನು ಅತ್ಯಂತ ಪ್ರೀತಿಯಿಂದ ಪ್ರಕೃತಿಯ ಸೊಬಗಿನೊಂದಿಗೆ ಹೋಲಿಕೆ ಮಾಡುತ್ತಾ ಬರೆಯುತ್ತಿರುವ ಗಜಲ್ ಮೆಚ್ಚುವಂತದ್ದು,

ಸಮಾಜದ ಸಮಾನತೆಗಾಗಿ ಕವಿಯ ಮನ ಮಿಡಿಯುತ್ತಿರುವದನ್ನು ಈಗ ಗಜಲ್ ನಲ್ಲಿ ಕಾಣಬಹುದು

“ಆಡಂಬರದ ಪೂಜೆಗಾಗಿ ಕಾಯುವವರು ದೇವಮಾನವರೇನು
ಅರಮನೆಗಳಂತ ಮಠ-ಮಾನ್ಯ ಬೇಡುವವರು ದೇವಮಾನವರೇನು”

“ಸಮಾನತೆಗಾಗಿ ಹಬ್ಬಹರಿದಿನಗಳಾದರೇನು ಬದುಕಿನ ಜೊತೆಗೆ
ನಮ್ಮಲ್ಲಿ ಜಾತಿಭೇದದ ಬೀಜ ಬಿತ್ತುವವರು ದೇವಮಾನವರೇನು”

ದೇವತಾಪುರುಷ/ದೇವಮಾನವ ಯಾವುದೇ ರೀತಿ ಆಡಂಬರದ ಪೂಜೆಯನ್ನು ಬೆಡುವುದಿಲ್ಲ, ಅರಮನೆಗಳಂತ ಮಠಮಾನ್ಯಗಳನ್ನು ಕೇಳುವುದಿಲ್ಲ, ಆಡಂಬರದ ಪೂಜೆ ಬೇಡುವನು ದೇವರಾಗಲಾರ, ಅರಮನೆಗಳಂತಹ ಮಠಮಾನ್ಯಗಳ ಕಟ್ಟಡಗಳಿಂದ ಗುರುತಿಸಿಕೊಳ್ಳುವುದು ದೇವನಾಗಲಾರ, ದೇವನಾದವನಿಗೆ ಆಸೆ ಇರುವುದಿಲ್ಲ ಎಂದು ಕವಿ ಹೇಳುತ್ತಾನೆ.
ಮತ್ತೊಂದು ಕಡೆಗೆ ಸಮಾನತೆಗಾಗಿ, ಸಮಾನತೆಯ ಬದುಕು ಸಾಗಿಸಲು ಹಬ್ಬಹರಿದಿನಗಳು ಬೇಕು, ಆ ಹಬ್ಬ-ಹರಿದಿನಗಳ ಆಚರಣೆಯ ನೆಪದಲ್ಲಿ ನಮ್ಮ ನಮ್ಮಲ್ಲಿಯೇ ಜಾತಿಭೇದದ ಬೀಜ ಬಿತ್ತುವವರು ದೇವಮಾನವರೇನು? ಎಂದು ಕವಿ ನಂರುಶಿ ರವರು ಮುಕ್ತ ಮನುಷ್ಯನೊಂದಿಗೆ ಸಮಾಜಕ್ಕೆ ಪ್ರಶ್ನೆ ಮಾಡುತ್ತಿದ್ದಾರೆ.

ಮತ್ತೊಂದು ಕಡೆ ತನ್ನ ಮಡದಿಗೆ ನೆನೆಸಿಕೊಂಡು ಬರೆದಿರುವಂತಹ ಗಜಲ್ ನಂತೆ ಕಂಡುಬರುತ್ತಿದೆ.

“ಹಿಮಾಲಯ ಒಡಲೊಳಗಿನ ಹಿಮದಂತೆ ಬಂದವಳು ನನ್ನವಳು
ಬಾನಿಂದ ನಿತ್ಯ ಉದಯಿಸುವ ರವಿಯಂತೆ ಬಂದವಳು ನನ್ನವಳು”

ಕವಿಯು ತನ್ನ ಧರ್ಮಪತ್ನಿ ಮಡದಿಯ ಮೇಲೆ ಅಪಾರವಾದ ಪ್ರೀತಿಯನ್ನು ಇಟ್ಟುಕೊಂಡು, ಗಜಲ್ ಮೂಲಕ ಪತ್ನಿಯ ಮೇಲಿನ ಗೌರವ ಅಭಿಮಾನ ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ,
ನನ್ನ ಒಡಲಿನ ಬೆಂಕಿಗೆ ಹಿಮದಂತೆ ತಂಪಾಗಿ ಬಂದವಳು, ನನ್ನ ಕತ್ತಲೆ ಬದುಕಿನ ಆಟಕ್ಕೆ ನಿತ್ಯ ಬಾನಿನಿಂದ ಉದಯಿಸುವ ರವಿಯಂತೆ ಬಂದವಳು ನೀನು ನನ್ನವಳು ಎಂದು ಕವಿ ಶಬ್ದ ಬಂಡಾರದ ಮೂಲಕ ವರ್ಣನೆ ಮಾಡುತ್ತಾ ಹೇಳುತ್ತಿರುವ ಪರಿ ಇದಾಗಿದೆ.

ಮತ್ತೊಂದು ಕಡೆ ಗಜಲ್ ನ ಮೂಲಕ ತನ್ನ ಮಗಳು, ತನ್ನ ಜೀವನದ ಬೆಳಕು, ನೇರಿಶಾಳನ್ನು ಕುರಿತು ತುಂಬ ಸೊಗಸಾಗಿ ಜೇನು ಹನಿಯನ್ನು ಸವಿದಷ್ಟೇ ಸಿಹಿಯಾಗಿ ಗಜಲ್ ಮೂಲಕ ತಿಳಿಸಿದ್ದಾರೆ.

“ಕಾವೇರಿಯ ನೀರಿನಂತೆ ಹರಿದಿಹಳು ನನ್ನ ಮಗಳು ನೇರಿಶಾ
ಕೈಚಾಚಿ ಅಪ್ಪುಗೆಗಾಗಿ ಕರೆದಿಹಳು ನನ್ನ ಮಗಳು ನೇರಿಶಾ”

“ಕರುಳಬಳ್ಳಿಗೆ ಜೀವತುಂಬಿ ಉಡುಗೊರೆಯ ನೀಡಿದಳು ನನ್ನವಳು
ನಮ್ಮ ಇಬ್ಬರ ಮಡಿಲಿನಲ್ಲಿ ಬೆಳೆದಿಹಳು ನನ್ನ ಮಗಳು ನೇರಿಶಾ”

ನೇರಿಶಾ ಕವಿಯ ಮುದ್ದಿನ ಮಗಳು, ಕವಿಯ ಕಲ್ಪನೆಯ ಲೋಕದೊಳಗೆ ‘ನೇರಿಶಾ’ಳು ಕಾವೇರಿಯ ನೀರಿನಂತೆ ಬಳುಕುತ್ತ, ಝಾರಿಯಾಗಿ ಮನೆಯಂಗಳದ ತುಂಬಾ ಹರಿದಾಡುತ್ತಿದ್ದರೆ ಅದು ಕಾವೇರಿ ನೀರಿನಂತೆ ಕವಿಯ ಮನಕ್ಕೆ ತುಂಬಾ ಸಂತೋಷ ನೀಡುತ್ತಿರುವ ಅನುಭವದ ಮಾತಾಗಿದೆ,

ತನುಮನವಾ ಬೇರೆದು ಕರುಳಬಳ್ಳಿಗೆ ಜೀವ ತುಂಬಿದಂತೆ ಕವಿಗೆ ಎದೆಗಪ್ಪಿ ಕೊಳ್ಳಲು ಉಡುಗೊರೆಯಾಗಿ ನನ್ನ ನೇರಿಶಾಳನ್ನು ನೀಡಿದಳು ನನ್ನವಳು, ನಮ್ಮಿಬ್ಬರ ಮಧ್ಯೆ ಬೆಳೆಯುತ್ತಿರುವ ಬೆಳಕಾಗಿ ನನ್ನ ಮಗಳು ನೇರಿಶಾ ಎಂದು ಕವಿಯು ತುಂಬಾ ಸೊಗಸಾಗಿ ಮಗಳ ಮೇಲಿನ ಪ್ರೀತಿಯನ್ನು ತನ್ನ ಗಜಲ್ ಮೂಲಕ ವ್ಯಕ್ತಪಡಿಸಿರುವುದು ಅಲ್ಲದೆ, ಮುಖಪುಟ ಕ್ಕಿಂತ ಬೆನ್ನುಡಿಯ ಪುಟವೇ ತುಂಬಾ ಸುಂದರವಾಗಿ ನೇರಿಶಾಳ ಆಕರ್ಷಣೆಯ ಮುಖ ಭಾವ ಮನಸೆಳೆಯುವಂತೆ ಕಾಣುತ್ತಿರುವುದು ಸುಂದರ ಮುಖಪುಟ ಹೊಂದಿದೆ.

ತುಂಬಾ ಮುಗ್ಧತೆಯ ಮಗಳ ಮೇಲಿನ ಪ್ರೀತಿಯೊಂದಿಗೆ ಈ ಗಜಲ್ ಸಂಕಲನಕ್ಕೆ “ನೇರಿಶಾ” ಎಂದು ಮಗಳ ಹೆಸರನ್ನೇ ಇಟ್ಟು ಮಗಳ ಮೇಲಿನ ಅಪಾರವಾದ ಪ್ರೀತಿ ಗೌರವವನ್ನು ತೋರಿಸಿಕೊಡಲು ಪ್ರತ್ಯಕ್ಷ ಸಾಕ್ಷಿ ಯಾಗಿದೆ ಈ ಕೃತಿ.

ಒಟ್ಟಾರೆಯಾಗಿ ಕೃತಿಯಲ್ಲಿ ಬರುವ ಗಜಲ್ಗಳು, ಕವಿ “ನಂರುಶಿ” ಎನ್ನುವ ಕಾವ್ಯನಾಮದೊಂದಿಗೆ ಗಜಲ್ ಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯ ಲೋಕದೊಳಗೆ ಬೆಳಗುತ್ತಿದ್ದಾರೆ. ಕನ್ನಡ ಗಜಲ್ ರಚನಾಕಾರರ ಸಾಲಿನಲ್ಲಿ ಇವರ ಹೆಸರು ನಿಲ್ಲುವುದರಲ್ಲಿ ಎರಡು ಮಾತಿಲ್ಲ, ಗಜಲ್ ಮೂಲಕ ಸಮಾಜದ ಹಲವಾರು ವಿಷಯಗಳನ್ನು ಎತ್ತಿಹಿಡಿದು ಚಾಟಿಯೇಟು ನೀಡಿದ್ದಾರೆ. ಗಜಲ್ ಎಂದ ತಕ್ಷಣಕ್ಕೆ ಪ್ರೀತಿ ಪ್ರೇಮ ಎಂಬ ಒಂದೇ ವಿಷಯವನ್ನಿಟ್ಟುಕೊಂಡು ರಚಿಸಿರುವಂತಹ ಗಜಲ್ಗಳು ಕಾಣುತ್ತಿಲ್ಲ, ಅಧ್ಯಾತ್ಮಿಕ, ಸಾಮಾಜಿಕ ಕಳಕಳಿ, ಹೆಣ್ಣಿನ ಮೇಲಿನ ಆಗುತ್ತಿರುವ ದೌರ್ಜನ್ಯಗಳನ್ನು ಎತ್ತಿಹಿಡಿದು ಗಜಲ್ ಗಳ ಮೂಲಕ ಟೀಕಿಸಿರುವದನ್ನು ಕಾಣಬಹುದು.

ನಾಡು ನುಡಿ ಪ್ರಕೃತಿ, ತಾಯಿ ಮತ್ತು ಮಡದಿ, ಮಗಳು ಮುಂತಾದ ವಿಷಯಗಳನ್ನು ಕುರಿತು ತುಂಬಾ ಸೊಗಸಾಗಿ ಗಜಲ್ಗಳು ಗಜಲ್ ಗಳಲ್ಲಿನ ದ್ವಿಪದಿಗಳು ತುಂಬಾ ಸುಂದರವಾಗಿ ಮೂಡಿ ಬಂದಿದೆ. ಭವಿಷ್ಯತ್ತಿನ ದಿನಗಳಲ್ಲಿ ಕವಿ “ನಂರುಶಿ” ರವರ ಇನ್ನೂ ಉತ್ತಮವಾದ ಕೃತಿಗಳು ಸಾಹಿತ್ಯ ಲೋಕಕ್ಕೆ ಸೇರಲಿ ಎಂಬ ಆಶಯದೊಂದಿಗೆ.

-ಯಲ್ಲಪ್ಪ ಎಮ್ ಮರ್ಚೇಡ್

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x