ಅನಿ ಹನಿ

ಗಂಧದ ಘಮ..: ಅನಿತಾ ನರೇಶ್ ಮಂಚಿ


ತಲೆಬರಹ ನೋಡಿ ಇದರಲ್ಲೇನಿದೆ ವಿಶೇಷ, ’ತನ್ನನ್ನೇ ತೇದು ಪರಿಮಳವನ್ನು ಲೋಕಕ್ಕೆ ಕೊಡುವ ತ್ಯಾಗಜೀವಿ ತಾನೇ ಗಂಧ’ ಅಂತೀರಲ್ವಾ..ಹೌದು ಸ್ವಾಮೀ ನಾನು ಅದನ್ನು ಅಲ್ಲ ಅನ್ನಲಿಲ್ಲ.. ಆದ್ರೆ ಗಂಧ ತನ್ನನ್ನು ತೇಯಬೇಕಾದರೆ ಎಷ್ಟು ಜೀವ ತೇಯುತ್ತದೆ ಅಂತಾದ್ರು ನಿಮಗೆ ಗೊತ್ತಾ.. ಅದೊಂದು ದೊಡ್ಡ ಕಥೆ.. ಹೇಳ್ತೀನಿ ಕೇಳಿ..  

ನನ್ನಣ್ಣನ ಮನೆ ಅಂದರೆ ಅದೊಂದು ಸಸ್ಯ ಭಂಡಾರ. ನಮ್ಮೂರಾದ ಕರಾವಳಿಯಲ್ಲಿ ಬೆಳೆಯದ ಹಲವು ಸಸ್ಯಸಂಕುಲಗಳು ಮಲೆನಾಡಿನ ಅವನ ತೋಟದಲ್ಲಿ ನಳನಳಿಸುತ್ತಿರುತ್ತದೆ. ನಾನೋ ’ಕಂಡದ್ದೆಲ್ಲಾ ಬೇಕು…… ಭಟ್ಟನಿಗೆ’ ಅನ್ನೋ ಜಾತಿ. ನಿಮ್ಮೂರಲ್ಲಿ ಬದ್ಕೋದಿಲ್ಲ ಮಾರಾಯ್ತಿ ಯಾಕೆ ಸುಮ್ಮನೆ ತೆಗೊಂಡೋಗಿ ಸಾಯಿಸ್ತೀಯಾ ಅಂತ ಅವನು ಅಂದರೆ ’ಸತ್ತರೇನು ವಡೆ ಪಾಯ್ಸ ಮಾಡುವ ಖರ್ಚಿಲ್ಲ ತಾನೇ.. ಇರ್ಲಿ ಬಿಡು ಒಂದು ಗೆಲ್ಲು ತೆಗೊಂಡೋದ್ರೆ ನಿಂಗೇನು ನಷ್ಟ ಅಂದ ವಾದ ಮಾಡ್ತಿದ್ದೆ. 

ಹಾಗಾಗಿ ಅಣ್ಣನ ಮನೆಯಿಂದ ಬರುವಾಗ ಕಾರಿನ ಡಿಕ್ಕಿ ಭರ್ತಿ ಗಿಡಗಂಟಿಗಳು ತುಂಬಿ ತುಳುಕುತ್ತಿರುತ್ತವೆ. ಅದರಲ್ಲಿ ಅರ್ಧಕ್ಕರ್ಧ ನಮ್ಮೂರಿನ ಸೆಖೆಯ ಹವೆ ತಾಳದೆ ನೆಡುವ ಮೊದಲೇ ಸತ್ತರೆ ಮತ್ತೆ ಕೆಲವು ನೆಟ್ಟು ನಾಲ್ಕಾರು ದಿನ ಒಂದೆರಡು ಎಲೆ ಉಳಿಸಿಕೊಂಡು ನಾನು ಅಣ್ಣನಿಗೆ ಫೋನ್ ಮಾಡಿ  ನೀನು ಸಾಯ್ತದೆ ಅಂತ ಹೇಳಿದ ಗಿಡವನ್ನು ಬದುಕಿಸಿಬಿಟ್ಟೆ ನೋಡು.. ಇನ್ನೊಂದು ಸಲ ನೀನು ಬಂದಾಗ ಅದರಲ್ಲಿ ಹೂವಾಗೋದು ಗ್ಯಾರಂಟಿ ಅಂತ ಕೊಚ್ಚಿಕೊಳ್ಳುವಷ್ಟು ಕಾಲ ಜೀವ ಹಿಡಿದು ನಿಲ್ಲುತ್ತಿತ್ತು. ಹಾಗಂತ ನಾನು ತಂದ ಗಿಡಗಳೆಲ್ಲವೂ ಸಾರ್ವಜನಿಕ ವನಮಹೋತ್ಸವದಂತೆ ಬರುವ ವರ್ಷ ಖಾಲಿ ಗುಂಡಿ ತೋರಿಸುತ್ತಾ ಕುಳಿತುಕೊಂಡಿವೆ ಅಂತ ತಪ್ಪು ತಿಳಿಯಬೇಡಿ. ಕೆಲವು ಬದುಕಿ ಮತ್ತೆ ನಾನು ಅವನ ಮನೆಯಿಂದ ಮತ್ತಷ್ಟು  ಗಿಡ ತರಲು ಉತ್ಸಾಹ ಹೆಚ್ಚುವಂತೆ ಮಾಡುತ್ತಿತ್ತು.

ಈ ಸಲ ಹೋಗಿದ್ದಾಗ  ನನ್ನ ಕಣ್ಣಿಗೆ ಕಂಡ ಹೊಸ ಗಿಡಗಳ ಗೆಲ್ಲು, ಬೇರು ತುದಿ ಅಂತೆಲ್ಲಾ ಕೈಯಲ್ಲಿ ಹಿಡಿದು ಸಾಗುತ್ತಿದ್ದಾಗಲೇ ಆ ಗಿಡ ಕಣ್ಣಿಗೆ ಬಿದ್ದದ್ದು. ಪುಟ್ಟ ಎಲೆಗಳ ಚೆಂದದ ನಾಲ್ಕಾರು ಗಿಡಗಳು ಬೇರು ಸಮೇತ ಕೀಳಲ್ಪಟ್ಟು ಎಸೆದ ಸ್ಥಿತಿಯಲ್ಲಿ ಬಿದ್ದಿದ್ದವು.  ಎಲೆಗಳ ಹಸುರಿನ್ನೂ ಬಾಡಿರಲಿಲ್ಲವಾದ ಕಾರಣ ಬದುಕುವ ಅವಸ್ಥೆಯಲ್ಲಿರುವ ಗಿಡ ಎಂದು ನನ್ನ ಜೋಳಿಗೆಗೆ ಸೇರಿಸಿದೆ. ಮನೆಗೆ ಬಂದು ಕಾರಿನ ಡಿಕ್ಕಿಗೆ ತುಂಬಿಸುವಾಗ ಅಲ್ಲೇ ಇದ್ದ ಅಣ್ಣ  ಇದೆಂತಕ್ಕೆ ಮಾರಾಯ್ತಿ, ಈ ಕರ್ಮದ್ದನ್ನು ನಿಮ್ಮೂರಿಗೆ ಹೊರ್ತೀಯಾ ಅಂದ. 
ಎಂತ ಗಿಡ ಅದು ಅಂದೆ. 

ಇನ್ನೆಂತದು ಗಂಧದ್ದು.. ನಾನೇ ಬೆಳಗ್ಗೆ ಕಿತ್ತು ಬಿಸಾಡಿದ್ದು ಅದನ್ನು.. ನೋಡಿಲ್ಲಿ ಈ ಅಂಗಳದ ತುದಿಯಲ್ಲುಂಟಲ್ಲಾ ಅದೇ ಗಿಡ. ಹತ್ತು ವರ್ಷದಲ್ಲಿ ಲಕ್ಷ ಸಿಗುತ್ತೆ ಅಂತ ಯಾರೋ ಹೇಳಿದ ಮಾತು ಕೇಳಿ ಈ ಅನಿಷ್ಟವನ್ನು ತಂದಿದ್ದೆ. ಅದರ ಬೀಜದಲ್ಲಿ ಹುಟ್ಟಿತ್ತು ಇಲ್ಲೆಲ್ಲಾ.. ಅಂದ

ನನ್ನ ಕಣ್ಣುಗಳು ಮೇಲೇರಿತು. ಅಂದದ ಗುಡಿ, ಶ್ರೀಗಂಧದ ಗುಡಿ ಎಂದೆಲ್ಲಾ ಹಾಡಿ ಹೊಗಳುವ ನಾಡಿನಲ್ಲಿ ಗಂಧದ ಗಿಡಗಳಿಗೆ ಇಂತಹ ಅವಮಾನವೇ? ಛೇ.. ಛೇ.. ಕೂಡದು ಕೂಡದು.. ಜೊತೆಗೆ ಅಣ್ಣ ಹೇಳಿದ ಲಕ್ಷ ಹಣದ ಮೇಲೂ ನನ್ನ ಲಕ್ಷ್ಯ ಇದ್ದೇ ಇತ್ತು.  ಅದರಿಂದಲೋ ಏನೋ ನನ್ನ ಆತ್ಮಾಭಿಮಾನ ದಿಗ್ಗನೆ ಎದ್ದು ನಿಂತು, ಅವನು ಎಸೆ ಎಂದ ಗಿಡಗಳನ್ನು ಅವುಚಿ ಡಿಕ್ಕಿಯೊಳಗೆ ತಳ್ಳಿಯೇಬಿಟ್ಟಿತು. 

ಮನೆ ತಲುಪಿ ಅಣ್ಣನಿಗೆ ಸುರಕ್ಷಿತವಾಗಿ ತಲುಪಿದೆವು ಅನ್ನುವ ಫೋನ್ ಮಾಡಿದ ಕೂಡಲೇಹೇಳಿದ. ಆ ಗಂಧದ ಗಿಡವನ್ನು ಎಲ್ಲರಿಗೂ ಕಾಣುವ ಹಾಗೆ ನೆಡಬೇಡ ಮಾರಾಯ್ತಿ. ಸ್ವಲ್ಪ ತೋಟದ ಒಳಗೆ ನೆಡು.. ಹಾಗೆ ಇನ್ನೊಂದು ವಿಷಯ.. ಆ ಗಿಡ ನೆಡುವಾಗ ಒಟ್ಟಿಗೆ ಬೇರೆಂತದಾದ್ರು ಗಟ್ಟಿ ಗಿಡ ಬದುಕುವಂತದ್ದನ್ನು ಹತ್ತಿರದಲ್ಲೇ ನೆಟ್ಟಿಡು. ಅದು ನೆಲದಿಂದ ನೇರವಾಗಿ ಸತ್ವವನ್ನು ಹೀರುವಂತಹ ಸಾಮರ್ಥ್ಯ ಹೊಂದಿಲ್ಲ. ಬೇರೆ ಗಿಡದ ಬೇರುಗಳಿಂದ ತನಗೆ ಬೇಕಾದ್ದನ್ನು ಪಡೆದುಕೊಳ್ಳುತ್ತದೆ. ಪರಾವಲಂಭಿ  ಗಿಡ ಎಂದ. 

ನನಗೋ ಗಂಧದ ಗಿಡ ಎಂದರೆ ನನ್ನ ಗಿಡಗಳ ಸಂಗ್ರಹಕ್ಕೆ ಮುಕುಟಮಣಿ ಅದು ಅಂತಲೇ ಅನಿಸಿತ್ತು. ಹಾಗಾಗಿ ಅದನ್ನು ಅಲ್ಲಿಲ್ಲಿ ಯಾರಿಗೂ ಕಾಣದಂತೆ ನೆಡುವುದಕ್ಕೆ ಸಿದ್ಧಳಿರಲಿಲ್ಲ. ಮನೆಯ  ನೀರ ಟ್ಯಾಂಕಿನ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಎಲ್ಲರಿಗೂ ಕಾಣುವಂತೆ ನೆಟ್ಟೆ. ಮನೆಗೆ ಬಂದವರಿಗೆ, ದಾರಿಯಲ್ಲಿ ಸಿಕ್ಕಿದವರಿಗೆ, ಫೋನಿನಲ್ಲಿ ಮಾತನಾಡುವವರಿಗೆಲ್ಲಾ ನನ್ನ ಈ ಅಮೂಲ್ಯ ಗಿಡದ ಬಗ್ಗೆ ಕೊರೆದದ್ದೇ ಕೊರೆದದ್ದು. ಪ್ರತಿದಿನ ಅಣ್ಣನಿಗೆ ಫೋನ್ ಮಾಡಿ  ಈ ಗಿಡದ ಬಗ್ಗೆ ವರದಿ ಒಪ್ಪಿಸುವುದಂತೂ ಇದ್ದೇ ಇತ್ತು. 

ಆ ದಿನ ನಾನು ಫೋನ್ ಮಾಡಿದಾಗ ಅಣ್ಣನ ಸ್ವರದಲ್ಲೇನೋ ಆತಂಕ. ನಿನ್ನೆ ಮನೆಗೆ ರಾತ್ರೆ ಕಳ್ಳರು ಬಂದಿದು ಅಂದ. ಅಯ್ಯೋ… ಹೌದಾ.. ಏನಾಯ್ತು.. ಅಂದೆ. 
ಆಗೋದೇನಿಲ್ಲ ಬಿಡು..ಕಟ್ಟಿ ಹಾಕಿದ್ದ  ದಾಸು, ಅಪ್ಪಿ, ಸೋನಿ ಮೂರನ್ನೂ ಒಟ್ಟಿಗೆ ಬಿಟ್ಟೆ. ಇವು ಬೊಗಳಿ ಓಡಿಸಿಕೊಂಡು ಹೋದವು ಎಂದ.

ನಿಮ್ಮೂರಿನ ಅಡಿಕೆಗೆ ರೇಟ್ ಏರ್ತಾ ಇದೆಯಲ್ಲಾ.. ಕಳ್ಳರು ನುಗ್ಗದೇ ಇನ್ನೇನು ಮಾಡ್ತಾರೆ ಅಂದೆ.
ಅಡಿಕೆ ಮನೇಲಿ ಯಾರಿಟ್ಕೊಂಡು ಕೂತಿದ್ದಾರೆ ಬಿಡು.. ಅದಕ್ಕಲ್ಲ ಬಂದಿದ್ದು ಅವ್ರು.. ಅಂಗಳದ ಮೂಲೇಲಿ ಇದೆಯಲ್ಲಾ.. ಗಂಧದ ಮರ.. ಅದನ್ನು ಕಡೀಲಿಕ್ಕೆ ಬಂದವರು .. ಓಡಿ ಹೋಗುವಾಗ ಸಣ್ಣ ಗರಗಸ ಮನೆ ಗೇಟಿನ ಬದಿಯಲ್ಲಿ ಉದುರಿ ಬಿದ್ದಿತ್ತು.. ನೋಡು ನೀನು ಅಷ್ಟೇ.. ಗಂಧದ ಗಿಡನೆಟ್ಟಿದ್ದೀಯಲ್ಲ.. ಕಳ್ಳರ ಕಣ್ಣಿಗೆ ಬಿದ್ರೆ ಅಷ್ಟೇ.. ಜಾಗ್ರತೆ ಇರ್ಬೇಕು.  ನಿಮ್ಮ ನಾಯಿ ಟೈಗರ್ ಎಂತ ಪ್ರಯೋಜನ ಇಲ್ಲ ಮಾರಾಯ್ತಿ.. ಇಲ್ಲಿ ನಮ್ಮ ಪಕ್ಕದ ಮನೆ ರಾಘು ಮಾಮನಲ್ಲಿ ಒಳ್ಳೇ ಡಾಬರ್ ಮನ್ ಮರಿ ಇದೆ. ತೆಗೊಂಡು ಹೋಗು.. ಒಂದು ಮರಿಗೆ ನಾಲ್ಕು ಸಾವಿರ ಅಷ್ಟೇ.. ಬರೋ ವಾರ ನಾನು ಬರೋದಿದೆಯಲ್ಲಾ.. ಬೇಕಿದ್ರೆ ತೆಗೊಂಡು ಬರ್ತೀನಿ ಅಂದ. 

ಅಯ್ಯೋ.. ಬಿಟ್ಟೀ ತಂದ ಗಂಧದ ಗಿಡವನ್ನು ಕಾಯಲು ನಾಲ್ಕು ಸಾವಿರ ಖರ್ಚು ಮಾಡಬೇಕೇ ಅಂತನ್ನಿಸಿ  ನಿಲ್ಲೋ.. ಒಂದು ಸ್ವಲ್ಪ ದಿನ ಕಳೀಲಿ ಆಮೇಲೆ ನೋಡೋಣ ಅಂದೆ. 
ಮತ್ತಿನವಾರ ಬಂದ ಅಣ್ಣನ ಮುಖ ಮ್ಲಾನವಾಗಿತ್ತು. 
ಯಾಕೋ.. ಏನಾಯ್ತು ಅಂದೆ. 

ಏನಿಲ್ಲಾ ಮಾರಾಯ್ತಿ.. ನಮ್ಮನೆ ಅಪ್ಪಿ, ದಾಸು, ಎರಡೂ ಸತ್ತು ಹೋಯ್ತು.. ಬಾಳಾ ಬೇಜಾರು .. ಮನೆ ಮಕ್ಳ ಹಾಗಿತ್ತು..  ನಾಯಿಗೆ ಮಾಂಸದಲ್ಲಿ ವಿಷ ಬೆರೆಸಿ ಇಟ್ಟು ಕೊಂದ್ಬಿಟ್ರು.. ಅವ್ರೆಲ್ಲಾದ್ರು ನನ್ನ ಕೈಗೆ ಸಿಕ್ಕಿದ್ರೆ ಒಬ್ಬೊಬ್ರನ್ನು ಕೋವಿ ತೆಗೆದು ಹೊಡೆದು ಕೊಲ್ತೀನಿ  ಅಂದ. ನನಗೂ ಆ ಮುದ್ದಾದ ನಾಯಿಗಳ ಒಡನಾಟದ ಸವಿ ನೆನಪಾಗಿ ಕಣ್ಣ ಹನಿ ಜಾರಿತು. ಅಯ್ಯೋ.. ಯಾರೋ ಅವ್ರು ಅಂದೆ.

ಅವ್ರೇ.. ಅವತ್ತು ಬಂದಿದ್ರು ಅಂದ್ನಲ್ಲಾ ಗಂಧದ ಮರ ಕಡಿಯಕ್ಕೆ.. ಅವ್ರದ್ದೇ ಕೆಲ್ಸ ಇದು.. ಅಂದ.
  ದಿನವಿಡೀ ಯಾರ್ಯಾರ ಮನೇಲಿದ್ದ ಗಂಧದ ಗಿಡವನ್ನು ಯಾವುದೆಲ್ಲಾ ಉಪಾಯದಿಂದ ಕಡಿದು ತೆಗೊಂಡು ಹೋದ್ರು ಕಳ್ಳರು ಅಂತ ವಿವರಿಸುತ್ತಾ ಹೋದ. ನನಗ್ಯಾಕೋ ನನ್ನ ಮನೆಯ ಹತ್ತಿರವೇ ಮೃತ್ಯುವಿನ ದರ್ಶನವಾದಂತಾಯಿತು. ಹೊರಗೆ ಒಂದೆರಡು ಸಣ್ಣ ಎಲೆ ಹೊರಡಿಸಿದ್ದ  ಗಂಧದ ಗಿಡವ್ಯಾಕೋ ಹೆದರಿಕೆ ತರಿಸಲು ಶುರು ಆಯ್ತು. 

ಮತ್ತೆರಡು ದಿನ ಕಳೆದ ಮೇಲೆ ಅಣ್ಣ ಫೋನ್ ಮಾಡಿದಾಗ ಹೊಸ ಸುದ್ದಿ ಹೇಳಿದ. ಅವನಿಲ್ಲದಾಗ ಯಾರೋ ಗಿಡ ಕಡಿದು ಹೋದ್ರಂತೆ. ಇಲ್ಲಿಯವರೆಗೆ ಸುದ್ದಿಗೇ ಬಾರದಿದ್ದ ಫಾರೆಸ್ಟಿನವರು ಈಗ ಬಂದು ಗಂಧದ ಗಿಡ ಕಡಿಯಕ್ಕೆ ಪರ್ಮಿಷನ್ ತೆಗೊಂಡಿದ್ದೀರಾ.. ನಿಮ್ಮ ಮೇಲೆ ಕೇಸ್ ಆಗುತ್ತೆ ಅಂತ ಹೆದರಿಸ್ತಾ ಇದ್ದಾರೆ. ’ಒಟ್ಟಿನಲ್ಲಿ ಲಕ್ಷದ ಆಸೆಗೆ ಅದನ್ನು ನೆಟ್ಟು ನಾಯಿ ಪಾಡಾಯಿತು ನೋಡು. ಸುಲಭದಲ್ಲಿ ಬರೋ ದುಡ್ಡು ನಮ್ಮಂತ ರೈತರಿಗಲ್ಲ.. ಅದೂ ಬರೀ ಕಳ್ಳಕಾಕರಿಗೆ ಮಾತ್ರ.. ಅದೂ ತನ್ನ ಸ್ವಂತ ಬೇರಿನ  ಬಲದ ಮೇಲೇ ಬದುಕದ ಗಿಡ ಉಳಿದವರಿಗೆ ಬದುಕು ನೀಡೋದಿದೆಯೇ? ನಮ್ಮದೇನಿದ್ರೂ ನಾವೇ ಸಾಯ್ಬೇಕು ಸ್ವರ್ಗ ಬೇಕಿದ್ರೆ’ ಅಂತ ವೇದಾಂತ ಮಾತಾಡಿದ.

ಯಾಕೋ ಆ ರಾತ್ರಿ ಪೂರಾ ಕೆಟ್ಟ ಕನಸುಗಳೇ.. ನಮ್ಮನೆಯ ಗಂಧದ ಗಿಡ ದೊಡ್ಡದಾಗಿ ಮರವಾದಂತೇ.. ಕಳ್ಳರು ಬಂದು ನನ್ನ ಕಣ್ಣೆದುರೇ ಮರ ಕಡಿದಂತೆ.. ಬೊಗಳಲು ಹೊರಟ ನಮ್ಮ ನಾಯಿಯನ್ನು ಶೂಟ್ ಮಾಡಿದಂತೇ.. ನಿದ್ರೆಯಲ್ಲೇ ಬೆವೆತಿದ್ದೆ. 

ಮತ್ತೆ ಕೆಲವು ದಿನಗಳು ನನ್ನದೇ ಬೇರೆ ಜಂಜಾಟಗಳಲ್ಲಿ ಗಂಧದ ಗಿಡದ ಪ್ರಕರಣ ಅಡಿಗೆ ಬಿದ್ದಿತ್ತು.  
ಬೆಳಗ್ಗಿನ ಹೊತ್ತು  ಗಿಡಕ್ಕೆ ನೀರು ಹಾಕುತ್ತಿದ್ದವಳು ಯಾಕೋ ಗಂಧದ ಗಿಡದ ಕಡೆಗೆ ನೋಡಿದೆ. ಎಲೆಗಳು ಉದುರಿ ಗಿಡದ ತುದಿ ಕಪ್ಪಗಾಗಿ ಬಾಡಿತ್ತು.. ಮೆಲ್ಲನೆ ಕಾಂಡವನ್ನು ಮುಟ್ಟಿದೆ. ಒಣಗಿದಂತಾಗಿತ್ತು. ಜೀವ ಇರುವ ಯಾವ ಲಕ್ಷಣಗಳೂ ಕಾಣಿಸಲಿಲ್ಲ.. ನನ್ನನ್ನು ಜೀವ ಭಯದಿಂದ ಪಾರು ಮಾಡಲೆಂಬಂತೆ ಅದು ಸತ್ತಿತ್ತು. 
ಅಣ್ಣನಿಗೆ ಫೋನ್ ಮಾಡಿ ಹೇಳಿದೆ.. 

ಅವನು ನನಗೆ  ಸಾಂತ್ವನ ಹೇಳುವವನಂತೆ ಇನ್ನೊಂದು ಸಲ ಬಂದಾಗ ತೆಗೊಂಡು ಹೋಗು.. ತುಂಬಾ ಗಿಡ ಇದೆ ಇಲ್ಲಿ ಕೊಡ್ತೀನಿ.. ನಿಂಗೆ ಹೇಳಲೇ ಮರೆತಿದ್ದೆ ನೋಡು.. ನಮ್ಮ  ಅಂಗಳದಲ್ಲಿದ್ದ ಗಂಧದ ಗಿಡ ಕಡಿದಲ್ಲಿಂದ ಮತ್ತೆ ಚಿಗುರಿದೆ..ಕೊಲ್ಲುವ ಕೈಗಳಿಂದ ಬದುಕಿಸುವ ಕೈಗಳು ಯಾವತ್ತೂ ದೊಡ್ಡದೇ ಆಗಿರುತ್ತೆ ಬಿಡು.. ನಾನೂ ಒಂದಿಪ್ಪತ್ತು ಹೊಸ ಗಿಡ ನೆಟ್ಟಿದ್ದೀನಿ..ನಾವು ರೈತರ ಕೆಲಸ ಬೇರನ್ನು ಮಣ್ಣಿಗೆ ತಾಗಿಸಿ ಬಿಡುವುದು.. ಲಾಭವೋ ನಷ್ಟವೋ.. ಕೃಷಿ ವ್ಯವಹಾರ ಅಲ್ಲ.. ಜೀವನ ಅಲ್ವಾ.. ಎಂದ.

ನಾನೀಗ ಅಣ್ಣನ ಮನೆಗೆ ಹೋಗೋದು ಯಾವಾಗ ಅಂತ ಕಾಯ್ತಾ ಇದ್ದೀನಿ.. 
-ಅನಿತಾ ನರೇಶ್ ಮಂಚಿ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

8 thoughts on “ಗಂಧದ ಘಮ..: ಅನಿತಾ ನರೇಶ್ ಮಂಚಿ

 1. ಈ ಗಂಧದ ಮರದ ಬಗ್ಗೆ ನನಗೂ ಇಂಥದೇ ಅನುಭವ ಆಗಿದೆ, ಕಾಂಪೌಂಡ ಒಳಗಡೆಯಲ್ಲಿ ರಾತ್ರಿ ಕಳ್ಳರೆದುರೇ ನಾನು ಹಾದು ಬಂದರೂ ನನಗೆ ಸ್ವಲ್ಪವೂ ಸುಳಿವು ನೀಡದಂತೆ ಬಚ್ಚಿಟ್ಟುಕೊಂಡು ಇಡೀ ಮರವನ್ನೇ ಒಯ್ದಿದ್ದು ಬೆಳಗಾದಮೇಲೆಯೇ ಗೊತ್ತಾಗಿದ್ದು. ಇಂತಹ ಕಳ್ಳರಿಗೆ ಕಠಿಣಾತಿ ಕಠಿಣಾತಿ ಶಿಕ್ಷೆ ವಿಧಿಸಬೇಕು ಅನ್ನಿಸುತ್ತದೆ, ಯಾರೋ ಪರಿಶ್ರಮ ಪಟ್ಟು ಬೆಳೆದ ಫಸಲುಗಳನ್ನು ಇದೇ ರೀತಿ ಕದಿಯುವವರಿದ್ದಾರೆ ಮಾರಾಯ್ರೇ, … ಉತ್ತಮ ಲೇಖನ ವಂದನೆಗಳು

 2. ಮೇಡಂ, ಗಂಧದ ಗಿಡ ಪೋಷಿಸುವ ನಿಮ್ಮ ಪ್ರಯತ್ನ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ…. ಚೆನ್ನಾಗಿದೆ ಲೇಖನ..

 3. ನಮ್ಮ ಊರಿನ ಹತ್ತಿರ ಗೌಡರ ನಾಯಿಯನ್ನು
  ಕೊಂದು ಗಂಧ ಅಪಹರಿಸಲು ಹೊಂಚು ಹಾಕಿದ್ದರು.
  ಪ್ರೀತಿಯ ನಾಯಿಯನ್ನು ಕೊಂದವರನ್ನು
  ಗೌಡರು ಹಿಡಿದು ಕೈ-ಕಾಲು ಮುರಿದರು.
  ಗೋಪಾಲ ಎನ್ನುವವನೊಬ್ಬನಿಗೆ ಮೂಳೆ ಕೂಡದೆ
  ನರಳಿ-ನರಳಿ ಕಡೆಗೆ ಬಾವಿ ಹಾರಿ ಸತ್ತ.
  ಲೇಖನ ಚೆನ್ನಾಗಿದೆ.

 4. ಈ ಗಂಧದ ಮರ ಕಡಿಯೋ ಕೆಲ್ಸ ಎಲ್ಲ ಕಡೆಗೂ ಕಾಮನ್ನಾಗಿಬಿಟ್ಟಿದ್ಯಾ ಅಂತ 🙁

Leave a Reply

Your email address will not be published. Required fields are marked *