ಗಂಡ ಒಬ್ಬ ಸೆನ್ಸಿಟಿವ್ ಗೆಳೆಯನಂತೆ ಯಾಕಿರೋಲ್ಲ/ಯಾಕಾಗೋಲ್ಲ?: ಸುಮನ್ ದೇಸಾಯಿ


ಕಪ್ಪುಗಟ್ಟಿರುವ ಆಕಾಶ, ಹೆಪ್ಪುಗಟ್ಟಿರುವ ವಿಷಾದವನ್ನು ಹೆಚ್ಚಿಸುವ ಬಣ್ಣ. ಟೆರೇಸ್ ಮೇಲೆ ಒಬ್ಬಳೇ ಕುಳಿತಿದ್ದೇನೆ. ಮಾತನಾಡುವಾಸೆ. ಅವನು ಜತೆಗಿಲ್ಲ. ಮತ್ತದೇ ಬೇಸರ. ಅದೇ ಸಂಜೆ, ಅದೇ ಏಕಾಂತ. ಅದೇನೋ ಗೊತ್ತಿಲ್ಲ, ಸಂಜೆಗೂ ಬೇಸರಕ್ಕೂ ಎಲ್ಲಿಲ್ಲದ ನಂಟು. ಸಂಜೆಯಾಗುತ್ತಿದ್ದಂತೆ ಮನಸ್ಸು ಮಾತನಾಡಲು ಹಾತೊರೆಯುತ್ತದೆ. ಮನಸ್ಸಿನ ಮಾತು ಕೇಳಿಸಿಕೊಳ್ಳುವವರಿಗಾಗಿ ಹುಡುಕಾಡುತ್ತದೆ. ಮೊಬೈಲ್ನಲ್ಲಿರೋ ಕಾಂಟ್ಯಾಕ್ಟ್ ನಂಬರುಗಳನ್ನೆಲ್ಲಾ ತಡಕಾಡುತ್ತೇನೆ. ಒಬ್ಬರೂ ಸಿಗಲೊಲ್ಲರು. ಹಾಗೆ ಸಿಕ್ಕಿದವರೆಲ್ಲರ ಜತೆ, ಇದ್ದಬದ್ದವರ ಜತೆ ಮನಸ್ಸನ್ನ ಬಿಚ್ಚಿಡಲಾಗುತ್ತದಾ, ಹಂಚಿಕೊಂಡು ಹಗುರಾಗಬಹುದಾ? ಇಲ್ಲವೇ ಇಲ್ಲ. ಅದಕ್ಕೂ ಒಂದು ವಿಶ್ವಾಸಾರ್ಹತೆ ಬೇಕು. ಸ್ನೇಹದ ಆತ್ಮೀಯತೆ, ಆಪ್ಯಾಯಮಾನತೆ ಇರಬೇಕು. ಕಂಡಕಂಡವರ ಮುಂದೆ ಬೆತ್ತಲಾಗುವುದು ಹೇಗೆ ಸಾಧ್ಯವಿಲ್ಲವೋ ಇದೂ ಹಾಗೆ.

ನನ್ನ ಮನಸ್ಸೇ ಒಂದು ವಿಚಿತ್ರ. ಗುಂಪಲ್ಲಿದ್ದಾಗ ಒಂಟಿತನಕ್ಕಾಗಿ ಹಬಲಿಸುತ್ತದೆ. ಒಂಟಿಯಾಗಿದ್ದಾಗ ಜತೆ ಬೇಕು ಎನಿಸುತ್ತದೆ. 'ಅರ್ಥವಿಲ್ಲದ ಅಶಾಂತಿ, ಧಗಧಗಿಸುವ ಅಸಂತೃಪ್ತಿ, ಏನನ್ನೋ ಹೊಂದಬೇಕು ಎನ್ನುವ ತೀವ್ರ ತಪನೆ… ಏನಿದ್ದರೆ, ಯಾವ ಪರಿಸ್ಥಿತಿಯಲ್ಲಿ, ಯಾವ ಪರಿಸರದಲ್ಲಿ ನಾನು ಬಯಸುವುದು ಸಿಗುತ್ತದೋ ಗೊತ್ತಿಲ್ಲ' ವಿಕ್ಷಿಪ್ತ ಮನಸ್ಸಿನ ಬಗ್ಗೆ ಹೇಳಿಕೊಂಡಿದ್ದು ನನಗೂ ಅನ್ವಯವಾಗುತ್ತದಲ್ಲ ಅನ್ನೋ ಭಾವ. ಒಟ್ಟಿನಲ್ಲಿ ಇದ್ದಿದ್ದು ಬಿಟ್ಟು ಇಲ್ಲದ್ದರ ಕಡೆಗೇ ತುಡಿತ. ಮದುವೆಗೂ ಮುಂಚೆ ಯಾರೋ ಹೇಳಿದ್ದರು; 'ಜೀವನಪೂರ್ತಿ ಹೀಗೆ ಒಂಟಿಯಾಗಿರೋದು ಕಷ್ಟ, ಮದುವೆಯಾಗು' ಅಂತ. ಈಗರ್ಥ ಆಗಿದೆ, ಮದುವೆಯಾದ್ರೆ ಒಂಟಿತನ ಹೋಗತ್ತೆ ಅನ್ನೋದು ಶುದ್ಧ ಸುಳ್ಳು ಅಂತ. ಸತ್ಯ ಆಗಿದ್ದಿದ್ರೆ ನನ್ನ ಬಹುತೇಕ ಸಂಜೆಗಳೇಕೆ ಹೀಗೆ ಖಾಲಿ ಖಾಲಿ?

ಈ ಗಂಡಸರೇ ಇಷ್ಟು! ಮದುವೆಯಾದ ಹೊಸತರಲ್ಲಿ 'ನೀನೇ ಇಂದ್ರ, ನೀನೇ ಚಂದ್ರ.' ಉಪಭೋಗ ಜಾಸ್ತಿಯಾದಷ್ಟೂ ರುಚಿ ಕಡಿಮೆಯಾಗುತ್ತಾ ಹೋಗತ್ತೆ ಅನ್ನೋ ಅರ್ಥಶಾಸ್ತ್ರದ ಸಿದ್ಧಾಂತ ಹೆಚ್ಚು ಕಡಿಮೆ ಗಂಡ-ಹೆಂಡತಿ ಸಂಬಂಧಕ್ಕೂ ಅಪ್ಲೈ ಆಗುತ್ತೆ! ಮೊದಲಿದ್ದ ಆಸಕ್ತಿ, ಆಕರ್ಷಣೆ ನಂತರ ಇರೋದೇ ಇಲ್ಲ ಅನ್ನೋದು ಎಲ್ಲಾ ದಾಂಪತ್ಯದ ಸತ್ಯ. ಒಡನಾಟದಲ್ಲಿ ಮೊದಲಿನ ಒನಪು ಕಡಿಮೆಯಾಗುತ್ತಾ ಆಗಾಗ್ಗೆ ಹಳಸಲು. ಮದುವೆಯ ನಂತರ ಹೆಣ್ಣು ಗಂಡ-ಮನೆ-ಮಕ್ಕಳೇ ಸರ್ವಸ್ವವಾಗಿ ಆ ಪ್ರಪಂಚದಲ್ಲಿ ಮೇಲೇಳದಂತೆ ಮುಳುಗಿದ್ದರೆ, ಗಂಡಸು ಅಷ್ಟರಲ್ಲಾಗಲೇ ತೆಕ್ಕೆಯಿಂದ ಬಿಡಿಸಿಕೊಂಡು ಇನ್ನೊಂದು ಪ್ರಪಂಚದತ್ತ ಮುಖ ಮಾಡಿರುತ್ತಾನೆ. ಅವನ ಆಯ್ಕೆಗಳು, ಆದ್ಯತೆಗಳು ಬದಲಾಗಿರುತ್ತವೆ.

ಹಾಗಂಥ ನನ್ನವನು ಕೆಟ್ಟವನೇನಲ್ಲ. ನನ್ನಷ್ಟು ಭಾವುಕನಲ್ಲ ಅಷ್ಟೆ. ನಾನು ಹತ್ತು ಮಾತಾಡಿದ್ರೆ ಒಂದು ಮಾತಾಡುವಷ್ಟು ಮಹಾಮೌನಿ. ಗಂಡನಾಗಲು ಬೇಕಾದ ಅರ್ಹತೆಗಳೆಲ್ಲಾ ಇವೆ. ಆದ್ರೆ, ಅಂತರಂಗದ ಗೆಳೆಯನಾಗ್ತಾನಾ? ಅತಿ ಭಾವುಕಳಾದ ನನಗೆ ಆಗಾಗ್ಗೆ ಮನಸ್ಸಿನಾಳ ಹೊಕ್ಕು ಅಲ್ಲಿರೋ ದುಗುಡ-ದುಮ್ಮಾನವನ್ನೆಲ್ಲ ಬಗೆದು ಮುಲಾಮು ಹಚ್ಚಿ ಇಲಾಜು ಮಾಡುವಂಥ ಗೆಳೆಯ ಬೇಕು. ನೆನಪು, ಕನಸು, ಕಲ್ಪನೆ, ಯೋಚನೆ, ಪ್ರಶ್ನೆ, ಹುಡುಕಾಟ, ಆತಂಕ, ಸೋತಿದ್ದು, ಗೆದ್ದಿದ್ದು, ಕಳೆದುಕೊಂಡಿದ್ದು, ಪಡೆದುಕೊಂಡಿದ್ದು, ಅಸಹಾಯಕತೆ, ಅವಮಾನ, ಹತಾಶೆ, ದ್ವಂದ್ವ, ಎಲ್ಲ ಎಲ್ಲ ಭಾವಗಳೂ ತೆರೆದುಕೊಂಡು ಭೋರ್ಗರೆವ ನದಿಯಾಗಿ ಸೇರಲೊಂದು ಸಮುದ್ರ ಬೇಕು. ಮಾತಿಲ್ಲದಿದ್ದಾಗಲೂ ಸುಮ್ಮನೆ ಹತ್ತಿರ ಕುಳಿತುಕೊಂಡಿರಬೇಕು. ಸೋತು ಸುಸ್ತಾದಾಗ ಇನ್ನೂ ಹತ್ತಿರ ಸರಿದು ಒರಗಲೊಂದು ಭುಜ ಬೇಕು. ನನಗೂ ಒಬ್ಬ ಗೆಳೆಯ ಬೇಕು.

ಮೊದಲು ನಾವಿದ್ದ ಮನೇಲಿ ಬಾಲ್ಕನಿ ಇರಲಿಲ್ಲ. ಅವಾಗೆಲ್ಲಾ ಸಂಜೆ ಹೊತ್ತು, ಬಾಲ್ಕನಿಯಲ್ಲಿ ನಾನು ಅವನು ಕುಳಿತು ಬಿಸಿ ಟೀ ಹೀರುತ್ತಾ ಹೀಗೇ ಲೋಕಾಭಿರಾಮ ಮಾತಾಡೋ ಕನಸು ಕಾಣ್ತಿದ್ದೆ. ಈಗ ನಾವಿರೋ ಮನೇಲಿ ಬಾಲ್ಕನಿ ಇದೆ; ಆದ್ರೆ, ಬಾಯಿ ತುಂಬ ಹರಟೋಕೆ ಅವನಿಗೆ ಟೈಮೇ ಇರಲ್ಲ. ಹಲ್ಲಿದ್ದಾಗ ಕಡ್ಲೆ ಇರಲ್ಲ, ಕಡ್ಲೆ ಇದ್ದಾಗ ಹಲ್ಲಿಲ್ಲ! ನಾವು ಹೆಂಗಸರೇ ಹೀಗೆ… ಬದುಕಿನ ಸಣ್ಣಪುಟ್ಟ ವಿಷಯಗಳನ್ನೂ ಎಂಜಾಯ್ ಮಾಡ್ತೀವಿ. ಗಂಡ ತರಕಾರಿ ಹೆಚ್ಚಿಕೊಟ್ಟು ಅಡುಗೆಗೆ ಸಹಾಯ ಮಾಡಿದ್ರೆ ಒಳಗೊಳಗೇ ಸಂಭ್ರಮಿಸ್ತೀವಿ. ಹೊಸರುಚಿಯೊಂದನ್ನೇನೋ ಕಲಿತು ಮಾಡಿದಾಗ ಗುಮ್ಮನಗುಸುಕನ ಹಾಗೆ ಸುಮ್ಮನೆ ತಿಂದು ಎದ್ದುಹೊಗೋ ಬದಲು, ಅದನ್ನು ಗುರುತಿಸಿ ಮೆಚ್ಚಿಕೊಳ್ಳಲಿ ಎಂದು ಆಶಿಸ್ತೀವಿ. ಸಿನೆಮಾಕ್ಕೋ, ಶಾಪಿಂಗ್ಗೋ ಕರ್ಕೊಂಂಡು ಹೋದ್ರೆ ಕೈ ಒಳಗೆ ಕೈ ಬೆಸೆದು ತಿರುಗ್ತಾ, ಗತವೈಭವ ಕೆಲವು ಕ್ಷಣಗಳಾದ್ರೂ ಮರುಕಳಿಸಿದ್ದಕ್ಕೆ ಇನ್ನಿಲ್ಲದಂತೆ ಖುಷಿಪಡ್ತೀವಿ.

ಹೌದು, ಗಂಡ ಒಬ್ಬ ಸೆನ್ಸಿಟಿವ್ ಗೆಳೆಯನಂತೆ ಯಾಕಿರೋಲ್ಲ/ಯಾಕಾಗೋಲ್ಲ? ಹುಚ್ಚು ಮನಸ್ಸಿನ ಸೂಕ್ಷ್ಮಾತಿ ಸೂಕ್ಷ್ಮ ಭಾವತರಂಗಗಳನ್ನೂ ಉಬ್ಬರವಿಳಿತಗಳನ್ನೂ ಹೇಳದೆಯೂ ಯಾಕ್ ಅರ್ಥ ಮಾಡಿಕೊಳ್ಳಲ್ಲ? ಪಕ್ಕದ್ಮನೆ ಹೆಂಗಸಿನ ಕಷ್ಟಕ್ಕೆ ಮರುಗೋ ಬಹುತೇಕ ಗಂಡಸರಿಗೆ ಪಕ್ಕದಲ್ಲಿರೋ ಹೆಂಡತಿ ನಿಟ್ಟುಸಿರು ಕೇಳ್ಸೋದೇ ಇಲ್ವಲ್ಲ! ಸಹಾಯವನ್ನೋ, ಮಾಹಿತಿಯನ್ನೋ ಕೇಳಿಕೊಂಡು ಫೋನ್ ಮಾಡುವವರ ಜತೆ ಅರ್ಧ ಗಂಟೆಗೂ ಮಿಕ್ಕಿ ಮಾತಾಡೋ ಔದಾರ್ಯ, ಹೆಂಡತಿಗೆ ಅರ್ಧ ಗಂಟೆ ಸಮಯ ಮೀಸಲಿಡೋ ವಿಷಯದಲ್ಲಿ ಮರೆಯಾಗಿಬಿಡುತ್ತದೇಕೆ? ಗಂಡ-ಗೆಳೆಯ ಇಬ್ಬರೂ ಒಬ್ಬನೇ ವ್ಯಕ್ತಿಯಾಗಿ ಸಿಕ್ಕಿದರೆ, ದಕ್ಕಿದರೆ ಅಥವಾ ಗೆಳೆಯನೇ ಗಂಡನಾಗಿಯೂ, ಗೆಳೆಯನಾಗಿ ಉಳಿದರೆ ಬಹುಶಃ ಅಂಥ ಹೆಂಗಸಿನಷ್ಟು ಭಾಗ್ಯಶಾಲಿ ಮತ್ತೊಬ್ಬರಿರಲಿಕ್ಕಿಲ್ಲ. ಹಾಗೆ ಘಟಿಸುವುದು ಕಥೆ, ಕಾದಂಬರಿ, ಕಲ್ಪನೆಗಳಲ್ಲಿ ಮಾತ್ರ ಸಾಧ್ಯವೇನೋ!

ನನಗೂ ಒಬ್ಬ ಗೆಳೆಯ ಬೇಕು ಎಂದು ಮನಸ್ಸು ಹಾಡುತ್ತದೆ, ಗಂಡನನ್ನೇ ಗೆಳೆಯನನ್ನಾಗಿ ಮಾಡಿಕೊಳ್ಳುವಲ್ಲಿ ಹೆಣಗುತ್ತದೆ. ಪರಿ ಪರಿಯಾಗಿ ಬೇಡುತ್ತದೆ. ಕೂಗಿ ಕೂಗಿ ಕಂಗಾಲಾಗಿ ಕಣ್ಣೀರು ಕೆನ್ನೆ ತೋಯಿಸುತ್ತದೆ. ಒರೆಸಿದ ಕೈಗಳಲ್ಲಿ ಗೆಳೆಯನನ್ನು ಹುಡುಕುತ್ತದೆ.

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
amardeep.p.s.
amardeep.p.s.
10 years ago

ಸ್ವಗತವೂ ಹೌದು… ವಾಸ್ತವವೂ ಹೌದು…. ಇಷ್ಟವಾಯಿತು ನಿಮ್ ಬರಹ…

mamatha keelar
mamatha keelar
10 years ago

ವಾಸ್ತವ…..ತುಂಬಾ ಚನ್ನಾಗಿ ಬರೆದಿದ್ದೀರಿ…

umesh desai
umesh desai
10 years ago

ಜನರಲ್ ಆಗಿ ಓದಿದಾಗ ನಿಮ್ಮ ಲೇಖನ ಅನೇಕ ಪ್ರಶ್ನಿ ಎತ್ತತದ

ಒಂದು ಶಾಂತವಾದ ಏನ ಅನಲಿ..ಆಕ್ರಂದನ ಕೇಳುವವರಿಗೆ ಕೇಳಸತದ..

ಮೇಡಮ್ ಸಿಕ್ಸರ್ ಹೊಡದೀರಿ..!!

lakshmishankarjoshi.
lakshmishankarjoshi.
10 years ago

e varada sudhadalli ide tarahada kate ide,odi……………….

ಶ್ರೀವತ್ಸ ಕಂಚೀಮನೆ.

ತುಂಬಾನೇ ಇಷ್ಟವಾಯಿತು…

"ಒರೆಸಿದ ಕೈಗಳಲ್ಲಿ ಗೆಳೆಯನನ್ನು ಹುಡುಕುತ್ತದೆ…" ಎಂಬ ಕೊನೆಯ ಸಾಲಿಂದ ಆರಂಭಿಸಿದರೆ ಇನ್ನಷ್ಟು ವಿಚಾರಗಳ ಇನ್ನೊಂದು ಹೊಸ ಬರಹ ಹುಟ್ಟೀತು…. 

5
0
Would love your thoughts, please comment.x
()
x