ಗುಂಡ ಗರಂ…..
“ಯಾಕೋ?!!” ಅಂತ ಕೇಳಿದ್ದಕ್ಕೆ ಏನ್ ಹೇಳ್ದ ಗೊತ್ತಾ..??
“ಅಲ್ಲಾ ಸಾ… ಯಾವೋನು ಕಳ್ ನನ್ ಮಗ – ಎಂಡ, ಸಾರಾಯಿ ಬ್ರಾಂದಿ, ಬೀರು, ರಮ್ಮು, ಜಿನ್ನು, ಫೆನ್ನಿ, ಓಡ್ಕಾ ಎಲ್ಲಾದ್ಕೂ ಒಂದೇ ಕಲೆಕ್ಟಿವ್ ನೌನ್ “ಗುಂಡು” ಅಂತ ನಾಮಕರಣ ಮಾಡಿದ್ದು…??”
ಅಬ್ಬಬಬಾ… ವ್ಯಾಕರಣದಲ್ಲಿ ತನಗೆ ಗೊತ್ತಿರೋ ಒಂದೇ ಒಂದು ಪಾರ್ಟ್ಸ್ ಅಫ್ ಸ್ಪೀಚ್ ನ ಎಷ್ಟು ಚನ್ನಾಗಿ ಉಪಯೋಗಿಸ್ದ..ಗುಂಡ…ವಾ.. ಎಂದುಕೊಂಡು…
“ಅದ್ಸರಿ ..ಅದಕ್ಕೂ ನೀನು ಗರಂ ಆಗೋಕೂ ಏನಪ್ಪಾ ಸಂಬಂಧ?” ಅಂದೆ
“ನಾಳೆ ನಮ್ಮ ಆಫಿಸಿನವರು ನ್ಯೂ ಇಯರ್ಸ್ ಡೇ ಸೆಲೆಬ್ರೇಟ್ ಮಾಡಾಕೆ ಪಾರ್ಟಿ ಇಟ್ಕಂವ್ರಂತೆ, ಅದನ್ನ ಬಂದು ನನ್ ಮನ್ಯಾಗ್ ಹೇಳೋದಾ..??”… ನನ್ ತಲೆ ಚಿಟ್ ಹಿಡೀತು… ಉಪ ಕಥೆಗಳಲ್ಲೇ ಅರ್ಧ ಕಳೆದ್ರೂ ಮೂಲ ಕಥೆಗೆ ಬರದ ಹರಿಕಥಾ ದಾಸರನ್ನ ನೋಡಿದಾಗ ಆಗೋ ಅಸಹನೆ ಥರದ್ ಮೂಡಲ್ಲೇ ….
“ಅಲ್ಲಯ್ಯಾ…ಅದಕ್ಕೂ ನೀನು ಗರಂ ಆಗೋದಕ್ಕೂ ಏನಯ್ಯಾ ಕಾರಣ ಅಂದ್ರೆ.. ಕೊಂಕಣ ಸುತ್ಕೊಂಡೇ ಕುಂತಿದ್ದೀಯಾ..ಬಾ..ಮೈಲಾರಕ್ಕೆ…” ಅಂದೆ.
“ಏನ್ ಸಾ ನೀವು… ನಾನೆಲ್ಲಿ ಕೊಂಕಣ ಸುತ್ತೋಕೆ ಹೋಗಿದ್ದೆ…??” ಆಕ್ಷೇಪಣೆ ಅನ್ನೋದಕ್ಕಿಂತಾ ಮಾಡದ ತಪ್ಪಿಗೆ ಬೆತ್ತದ ಏಟು ತಿನ್ನೋಕೆ ಹಿಂಜರಿಯೋ ವಿದ್ಯಾರ್ಥಿ ಥರ ಮುಖ ಮಾಡ್ಕಂಡು ಕೇಳ್ದ…
ಛೇ..ನನ್ನ ಬುದ್ಧಿಗಿಷ್ಟು.. ಅಲ್ಲ ನೇರ ಪ್ರಶ್ನೆನೇ ಅರ್ಥ ಮಾಡ್ಕೊಳ್ದೇ ಏಳ್ನೇ ಕ್ಲಾಸಲ್ಲೇ ಏಳು ಸುತ್ತು ಹಾಕಿದ ಗುಂಡನಿಗೆ ಗಾದೆ ಬಳಸಿ ಪಾಠ ಮಾಡಿದ್ದು ನನ್ನದೇ ತಪ್ಪು..ಅನ್ನಿಸಿ…
“ಅಲ್ಲಾ ಕಣ್ ಗುಂಡಾ.., ನಿನ್ನ ಆಫೀಸಿನವರು ಪಾರ್ಟಿ ಬಗ್ಗೆ ನಿನ್ನ ಮನೆಲಿ ಹೇಳಿದ್ರಿಂದ ನಿನಗೆ ಯಾಕೆ ಕೋಪ ಬರಬೇಕು,,?” ಅಂದೆ ಸಮಾಧಾನದಿಂದ.
ಅಂಗ್ ಕೇಳಿ ಮತ್ತೆ…, ನನ್ ಎಸ್ರೇನ್ ಯೋಳಿ…??
ಅಲೆ ಇವನಾ.. ಪ್ರಶ್ನೆ ಕೇಳಿ ಕೇಳಿ ಫೇಲ್ ಮಾಡಿದೆ ಅಂತ ನನ್ನೇ ಪ್ರಶ್ನೆ ಕೇಳೋದಾ..?? ಅಂದ್ಕೊಂಡು… ನಿದಾನಕ್ಕೆ..
“ಗುಂಡ”….., ಅಂದೆ, ಎಲ್ಲಾ ಗೊತ್ತಿರೋ ಚಾಣಾಕ್ಷ ವಿದ್ಯಾರ್ಥಿ ತಡ್ಕಲಾಂಡಿ ಪ್ರಶ್ನೆಗೆ ಉದಾಸೀನನಾಗಿ ಆನ್ಸರ್ ಕೊಡೋಹಾಗೆ
“ಅಲ್ವಾ..?, ನನ್ ಎಂಡ್ರ್ ತಾವ ನಮ್ ಆಪೀಸ್ನಾಗೆ ನಾಳೆ ರಾತ್ರಿಗೆ ಗುಂಡ್ಪಾರ್ಟಿ ಇಟ್ಕಂಡವ್ರೆ” ಅಂತ ಯೋಳಾದಾ ಬಡ್ಡೆತ್ತವು..??
ತಕಳಪ್ಪಾ… ಇದು ಸಮಸ್ಯೆ…
ಗುಂಡನ್ ಜೊತೆಲೇ ಅವನಿಗೆ ಏಳೂ ವರ್ಷ ಏಳನೇ ಕ್ಲಾಸಲ್ಲಿ ಸಾಥ್ ನೀಡಿ ಕಡೆಗೂ ಮುಂದಕ್ಕೆ ಹೋದಾಗ, ಸಾಕು ಇದ್ಯಾಬ್ಯಾಸ ನಿಮ್ದು ಅಂತ ’ಗುಂಡಿ’ನ…ಗುಂಡಂಗ್ಕೊಟ್ ಮದ್ವೆ ಮಾಡಾಕಿದ್ದ ಸಿದ್ರಾಮಣ್ಣ ಗುಂಡನ್ ಸೋದ್ರ್ ಮಾವ.
ಅವಳಿಗೂ ಅಷ್ಟ್ ಸಡನ್ನಾಗಿ ..ಅವರು ಹೇಳಿದ ಪದ “ಗುಂಡ್ಪಾರ್ಟಿ” ಗುಂಡು ಹಾಕೋ ಪಾರ್ಟಿ ಅನ್ನೊದಕ್ಕಿಂತ ಗುಂಡ ಕೊಡುಸ್ತಿರೋ ಪಾರ್ಟಿ ಅಂತ ಕಂಪೂಜ್ ಆಗಿದೆ ಅನ್ನಿಸ್ತು… ಮುಂದೇನಾಯ್ತೋ ತಿಳ್ಕೊಳ್ಳೋ ಕುತೂಹಲ ನನಗೆ.. ಕೇಳ್ದೆ
“ಏನಾಯ್ತು ಆಮೇಲೆ…??
“ನನ್ ಎಂಡ್ರು ಗುಂಡಿ. ಅಲ್ ಮೂದೇವಿ ಬಂಗಾರ್ದ್ ರೇಟು ಕಮ್ಮಿ ಆಗದೆ..ಕಮ್ಮಿ ಆಗದೆ..ಒಂದ್ನಾಕ್ ತೊಲ ಒಡ್ವೆ ಕೊಡ್ಸು ಅಂತ ಗೋಗರ್ದೆ… ಊಂ ಹೂಂ…ಜಪ್ಪಯ್ಯಾ ಅನ್ಲಿಲ್ಲ…ಅಂತಾದ್ರಾಗೆ ನಿಮ್ಮಾಪಿಸ್ನಾಗೆ ಪುಟ್ಗೋಸಿ ಗುಮಾಸ್ತ ನೀನು… ಎಲ್ಲಾರ್ಗೂ ಪಾಲ್ಟಿ ಕೊಡ್ಸೀಯಾ…?? ನಾನ್ನೋಡ್ತೀನಿ ಅಂದೆಂಗ್ ಕೊಡ್ಸೀಯೋ…” ಅಂತ ನಿಂತೇ ಬುಡೋದಾ ದುರ್ಯೋದ್ನ್ ಒಟ್ಟೆ ಬಗ್ದು, ದುಸ್ಯಾಸನ್ ತೊಡೆ ಮುರಿಯೋಕ್ ನಿಲ್ಲೋ ಬೀಮ್ನಂಗೆ…??
ಅಯ್ಯೋ ನಿನ್ ಮುಂಡಾ ಮೋಚ್ತು… ಲೇ ಗುಂಡಾ.. ದುಶ್ಯಾಸನ ಹೋಟ್ಟೆ..ದುರ್ಯೋಧನ ತೊಡೆ ಕಣೋ…
ಊಂ ಕಣ್..ಸಾ ಯಾವ್ದೋ ಒಂದು…ಇಬ್ರೂ ಸತ್ರಲ್ಲಾ ಒಟ್ನಾಗೆ…?? ಅಂಗೆ ನಿಂತ್ಬುಡೋದಾ..ನನ್ನೆಂಡ್ರು…???
ಸರಿ ಆಮೇಲೆನಾಯಿತು… ಮತ್ತೆ ಕೇಳಿದೆ..
ಅವಳಿಗೆ ಸಮಾದಾನ ಮಾಡೋ ಒತ್ಗೆ.. ನರಸಿಮ್ಮನ್ ಸಮಾದಾನ ಮಾಡೋ ಪಲ್ಲಾದನ್ ಸುಸ್ತಾದಂಗೆ ಸುಸ್ತೋ ಸುಸ್ತು….,
ಆಮೇಲೆ… ..ಕೇಳಿದೆ, ಅಜ್ಜಿಯ ಸ್ವಾರಸ್ಯಕರ ಕಥೆ ಕೇಳೋ ಮಕ್ಕಳ ತರಹ ಗುಂಡು ಪಾರ್ಟಿ ಕಣೇ ಅದು… ಅಂದ್ರೆ ಬೀರು, ಬ್ರಾಂದಿ ಕುಡ್ಕೊಂಡು ಕೋಳಿ ಸಾರು ಪರೋಟಾ ತಿನ್ನೋ ಪಾಲ್ಟಿ ಕಣೆ.. ಕೋಳಿ ಸಾರು ಪರೋಟ..ನಿನಗೂ ತರ್ತೀನಿ… ಅಂದೆ
ನೀವ್ಯಾಕ್ರೀ ಓಗ್ಬೇಕು ಆ ಪಾಲ್ಟೀಗೆ… ?? ಅಂತ ಕೊಶ್ನೆ ಆಕುದ್ಲು..? ಅದ್ಕೆ.. ನಮ್ಮಾಪೀಸರುಗಳನ್ನ ಜ್ವಾಪಾನ್ವಾಗಿ ಮನೇಗ್ ತಲ್ಪ್ಸೋಕೆ ಕುಡೀದೇ ಇರೋರು ಒಬ್ರು ಬೇಕಲ್ಲಾ..ಅದ್ಕೇ ಕಣೇ ನಾನೋಗೋದು.. ಅದ್ಕೇಯ ….
ಅಂತೂ ಸಾರ್ಥಕ ಕೆಲಸ ಗುಂಡಂದು ಅಂದ್ಕೊಂಡು…
ನಿನ್ನೆಂಡ್ರು ಒಪ್ಕೊಂಡ್ಲಾ ನಿನ್ ಕಳ್ಸಾಕೆ..?? ಅಂದೆ
ಊಂಸಾ… ಏನಂದ್ಲು ಗೊತ್ತಾ…. ಸಾ??
ರೀ ಅವರು ಕುಡಿಯೋದು ನೀವು ಎಲ್ಪ್ ಮಾಡೋದು ನಡೀತಾ ಇರೋದ್ಕೆ ಅಲ್ವಾ .. ಅವ್ರೂ ನಿಮ್ಗೆ ಜವಾನ್ ನಿಂದ ಗುಮಾಸ್ತೆಗೆ ಬಡ್ತಿ ಕೊಟ್ಟಿದ್ದು…ಓಗ್ಬನ್ನಿ,,, ಅಂಗೇಯಾ ಕೋಳಿ ಸಾರು ಪರೋಟಾ ಎತ್ಕಂಬನ್ನಿ…ಅವ್ರು ಕುಡ್ದು ತಿನ್ನೋದಕ್ಕಿಂತಾ ಚೆಲ್ಲಿ ಆಳ್ಮಾಡೋದೇ ಎಚ್ಚು…” ಅಂದ್ಲು ಸಾ…
ನನಗನ್ನಿಸ್ತು… ನಶೆಯ ಅಮಲಿನ ಅಮಲ್ದಾರರು ಬುದ್ಧಿವಂತರೋ.. ತನಗಿರೋ ಬುದ್ಧಿವಂತಿಕೆಯನ್ನು ಅಮಲಿಗೆ ತರೋ ಗುಂಡನ ಎಂಡ್ತಿ ಗುಂಡಿನೋ…??
******
ಸಂದಾಗೈತೆ ಸಾ…. ಗುಂಡ್ ಪಾಲ್ಟಿ….ನಾವು ಒಗಾಮಾ…..
Nice story
Difficult to understand…..
Goood…..