ಬೆಳಗು, ಮಧ್ಯಾಹ್ನ, ಸಂಜೆ ಇವೆಲ್ಲಾ ಕಾಲದ ಅಣತಿಯಂತೆ ನಿಯಮಾನುಸಾರ ನಡೆಯುವ ಸಂಗತಿಗಳು, ಇದು ಯಾವೊತ್ತೂ ಏರು ಪೇರಾಗುವುದಿಲ್ಲ, ಒಂದು ದಿನವೂ ಶೀತ, ನೆಗಡಿ, ಜ್ವರ ಅಂತ ರಗಳೆಗಳನ್ನು ನೀಡಿ ನುಣುಚಿಕೊಂಡು ಗೈರು ಹಾಜಾರಾಗುವುದಿಲ್ಲ, ಅತೀ ಹೊಂದಾಣಿಕೆಯಿಂದ ಹಗಲು ಪಾಳಿ ರಾತ್ರೆ ಪಾಳಿಯನ್ನು ಯಾವೊತ್ತೂ ಅದಲು ಬದಲು ಮಾಡಿಕೊಳ್ಳುವುದಿಲ್ಲ, ಅಸಲಿಗೆ ಅವರಿಬ್ಬರೂ ಯಾವೊತ್ತೂ ಮುಖಾ ಮುಖಿ ಸಂಧಿಸಿಕೊಳ್ಳುವುದಿಲ್ಲವೆಂಬ ಸತ್ಯ ಎಳೆ ಮಕ್ಕಳಿಗೂ ಗೊತ್ತಿರಬಹುದಾದ ವಿಚಾರ.
ಕಾಲ ನಮಗೆ ಏನೆಲ್ಲಾ ಸಾವಕಾಶಗಳನ್ನು, ಅವಕಾಶಗಳನ್ನು, ಮಾನ ಮರ್ಯಾದೆಯನ್ನು, ಸೋಲು ಗೆಲುವುಗಳನ್ನು ತಂದು ಕೊಟ್ಟರೂ, ಆ ಕ್ಷಣದಲ್ಲಿ ನಾವು ಈ ಸಮಯ ನನ್ನ ಅದೃಷ್ಟದ ಕಾಲ ಅಂತ ಹಾಡಿ ಹೊಗಳಿ ಅಟ್ಟಕ್ಕೇರಿಸಿದರೂ, ಇದು ನನ್ನ ಕೆಟ್ಟ ದಿನಗಳು ಅಂತ ಮುಖ ಕಿವುಚಿಕೊಂಡು ಅವಲತ್ತುಕೊಂಡರೂ ಕಾಲ ನಿರ್ಲಿಪ್ತ. ನಿರ್ಧಾಕ್ಷಿಣ್ಯ. ನಿರ್ಧಯಿ ಎಂದರೂ ತಪ್ಪಿಲ್ಲ. ಕಾಲ ಹಾಗೆ ಮಾಡದೆ ವಿಧಿ ಇಲ್ಲ ಕೂಡ. ಹೊಗಳಿಕೆ, ತೆಗಳಿಕೆಗೆ ಒಂದಷ್ಟು ಕಿವಿ ತೆರೆದು ಹೃದಯ ಮಿದುಗೊಳಿಸಿ ಬಿಟ್ಟರೆ ತನ್ನ ಕತೆ ಮುಗಿಯಿತು ಅಂತ ಕಾಲಕ್ಕೆ ಚೆನ್ನಾಗಿ ಗೊತ್ತಿದೆ. ತಮಾಷೆಯೆಂದರೆ, ಕಾಲ ಅದಕ್ಕೇ ಇರಬೇಕು ತನ್ನೆರಡು ಕಿವಿಗಳನ್ನು ಕಿವುಡು ಮಾಡಿಕೊಂಡು, ಬಾಯಿಗಳನ್ನು ಹೊಲಿದುಕೊಂಡು ಬರೇ ಕಣ್ಣು, ಕಾಲುಗಳಿಗಷ್ಟೇ ಚಾಲನೆ ಕೊಡುತ್ತಿರಬೇಕು. ಇಂತಹ ನಿಷ್ಠುರತೆಯನ್ನು ಕಾಯ್ದುಕೊಂಡ ಮೇಲಷ್ಟೇ ಅತೀ ಬುದ್ಧಿವಂತ ಅನ್ನಿಸಿಕೊಂಡ ನಮ್ಮಂತಹ ಮನುಷ್ಯ ಪ್ರಾಣಿ ಬೆಪ್ಪು ತಕ್ಕಡಿಯಂತೆ ಕಾಲದ ದಾಸಾನು ದಾಸನಾಗಿ, ಅದಕ್ಕಷ್ಟೇ ಅಧೀನನಾಗಿ ತಲೆಬಾಗುವ ಸೌಜನ್ಯವನ್ನು ತೋರಿಸಿಕೊಂಡು ಬಂದದ್ದು ವಿಶೇಷವೇ ಸರಿ. ಅದಕ್ಕಾಗಿಯೇ ಇರಬೇಕು ಮನುಜ, ಕಾಲ ಕಾಲಕ್ಕೆ ಏನೆಲ್ಲಾ ಆಗಬೇಕೋ ಅದನ್ನು ತುಸು ಹೆಚ್ಚು ಕಡಿಮೆಯಾದರೂ ಕೂಡ ಎಚ್ಚರಿಕೆಯಿಂದ ಪಾಲಿಸುತ್ತಾ ಬರುತ್ತಿರುವುದು. ಎಲ್ಲಾದರೂ ಮರೆಗುಳಿ ಮನಸು ಎಡವಟ್ಟು ಮಾಡಿ ಕಾಲ ಮಿಂಚಿ ಹೋಗಬಹುದೆಂಬ ದೂರಾಲೋಚನೆಯೋ, ದುರಾಲೋಚನೆಯೋ. . ಅಂತು ಇಂತು ಯಾವುದೋ ಒಂದು ಮುಂದಾಲೋಚನೆಯಿಂದ ಗಡಿಯಾರವನ್ನು ತಯಾರಿಸಿ, ಎಚ್ಚರಿಕೆಯಿಂದ ಗಂಟೆಯನ್ನು ಕರಾರುವಕ್ಕಾಗಿ ಬಾರಿಸುತ್ತಿರಬೇಕೆಂದು ತಾಕೀತು ಮಾಡಿದ್ದು. ಹಾಗಾಗಿ ಮಾಯದ ಕಣ್ಕಟ್ಟು ಕಾಲವನ್ನು, ಕಾಣುವಂತೆ ಕೇಳುವಂತೆ ನಮ್ಮ ನಮ್ಮ ಮನೆಯ ಗೋಡೆಗಳ ಮೇಲೆ ಅದನ್ನು ಶಾಶ್ವತವಾಗಿ ಅಂಟಿಸಿ ಬಿಟ್ಟದ್ದು. ಪಾಪ!ಗಡಿಯಾರವಂತೂ ನಿಯತ್ತಿನ ಸೇವಕ. ಹೇಳಿದ ಕೆಲಸವನ್ನು ಚಾಚು ತಪ್ಪದೆ ಮಾಡುತ್ತಾ ಬರುತ್ತದೆ. ಕೆಲವೊಮ್ಮೆ ಅದಕ್ಕೂ ಟಿಕ್. ಟಿಕ್ ಅಂತ ಸುತ್ತು ಹೊಡೆದು ಸುಸ್ತಾಗಿರುತ್ತದೆ. ಡಣ್ ಡಣ್ ಅಂತ ಅದೇ ಶಬ್ದವನ್ನು ಹೊರಡಿಸಿ ಅದಕ್ಕೂ ಬೇಸರ ಬಂದಿರುತ್ತದೆ. ಎಷ್ಟಾದರೂ ಅದು ಮನುಷ್ಯನ ಕೈಗೂಸು ತಾನೇ?. ಹಾಗಾಗಿ ಅದರ ಆಗಾಗ್ಗೆ ಮೈದಡವಿ, ಪುಸಲಾಯಿಸುತ್ತಾ, ಪ್ರೀತಿಯಿಂದ ಕಿವಿ ಹಿಂಡುತ್ತಾ, ಹೊಸ ಬ್ಯಾಟರಿ ಇಟ್ಟು ಖುಷಿ ಪಡಿಸಿದರೆ ಮತ್ತೆ ಅದಕ್ಕೆ ಹೊಸ ಹುರುಪು ಲವಲವಿಕೆ ಬಂದು ಬಿಡುತ್ತದೆ. ಇಲ್ಲದಿದ್ದರೆ ಅದೂ ಜಡ ಗೊಂಡು ಸದ್ದಿಲ್ಲದೆ ನಿದ್ದೆ ಮಾಡಿಬಿಡುತ್ತದೆ. ಚುರುಕಿನ ಗಡಿಯಾರದ ಗಂಟೆಯನ್ನು ಆಗಾಗ್ಗೆ ನೋಡುತ್ತಾ, ನಿಮಿಷ ಸೆಕೆಂಡುಗಳ ಲೆಕ್ಕ ಹಾಕುತ್ತಾ ನಾವೂ ಪಕ್ಕಾ ಕಾಲಿಗೂ ಮನಸ್ಸಿಗೂ ಚುರುಕು ಮುಟ್ಟಿಸಿಕೊಂಡು, ನಮ್ಮ ಕೆಲಸವನ್ನು ಗುಡ್ಡೆಹಾಕಿಕೊಂಡು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ರಭಸದ ಹೆಜ್ಜೆ ಹಾಕುತ್ತೇವೆ. ಹಾಗಾಗಿ ಗಡಿಯಾರ ಇಲ್ಲದೆ, ಪದೇ ಪದೇ ಗಡಿಯಾರದತ್ತ ಕಣ್ಣು ಹಾಯಿಸದೇ ನಮ್ಮ ಕೆಲಸವೇ ಸಾಗುವುದಿಲ್ಲ ಅನ್ನುವಷ್ಟರಮಟ್ಟಿಗೆ ನಾವು ಅದರ ದಾಸಾನುದಾಸರಾಗಿಬಿಟ್ಟಿದ್ದೇವೆ.
ಶಾಲೆಗೆ ಹೋಗುತ್ತಿರುವ ಮಕ್ಕಳನ್ನು, ಹಾಗೋ ಹೀಗೋ ಪುಸಲಾಯಿಸಿ, ರಮಿಸಿ, ಕಡೇ ಪಕ್ಷ ಏಳು ಗಂಟೆಗಾದರೂ ಎಬ್ಬಿಸಿ ಶಾಲೆಗೆ ಹೊರಡಿಸಬೇಕೆಂದರೆ ಹೆತ್ತವರಿಗೆ ಸಾಕು ಬೇಕಾಗಿಬಿಡುತ್ತದೆ. ಎಲ್ಲಾದರೂ ಐದು ನಿಮಿಷ ಮುಂಚಿತವಾಗಿ ಎಬ್ಬಿಸಿಬಿಟ್ಟೆವೆಂದರೆ ಅಷ್ಟೇ. ನಮ್ಮ ಮಕ್ಕಳು ಹೆತ್ತವರಿಗಿಂತ ಚಾಣಾಕ್ಷ್ಯರು. ಕಣ್ಣುಜ್ಜಿಕೊಂಡೇ ನಿದ್ದೆಗಣ್ಣಲ್ಲೇ ಗಡಿಯಾರ ನೋಡುತ್ತಾ, ನಿಗದಿತ ಸಮಯಕ್ಕೆ ಇನ್ನು ಐದು ನಿಮಿಷ ಬಾಕಿ ಇದೆ ಅಂತ ಗೊಣಗಿಕೊಳ್ಳುತ್ತಾ ಕಂಬಳಿಯೊಳಗೆ ನುಸುಳಿ ಬಿಡುತ್ತಾರೆ. ಇನ್ನು ಉದ್ಯೋಗಸ್ಥರನ್ನು ಕೇಳಬೇಕೇ?. ಅವರಿಗೆ ಗಂಟೆ ನೋಡದೆ ಯಾವ ಕೆಲಸವೂ ಸಾಗಲಾರದು. ಕೆಲ ಗಂಟೆ ಹೆಚ್ಚುವರಿ ಕೆಲಸ ಮಾಡಿದರೆ ಅವರಿಗೆ ಅಂತಹ ಶಹಭಾಶ್ಗಿರಿ ಏನೂ ಸಿಗದು. ಆದರೆ ಒಂದಷ್ಟು ಹೊತ್ತು ಕೆಲಸ ಶುರು ಮಾಡೋಕೆ ತಡವಾಯಿತು ಅಂದರೆ ಅವರ ಗ್ರಹಚಾರ ಕೆಟ್ಟಿತು ಅಂತನೇ ಅರ್ಥ. ಹೀಗೇ ಓಡುವ ಕಾಲದ ಜೊತೆಗೆ ಬೀಡು ಬೀಸಾಗಿ ಓಡುತ್ತಾ, ಓಡುತ್ತಾ, ಏಗಲಾರದೆ ಏದುಸಿರು ಬಿಡುತ್ತಾ ಹೈರಾಣಾಗಿ ಬಿಟ್ಟಿರುತ್ತೇವೆ.
ಆದರೆ ನಮ್ಮ ಅಜ್ಜಿ ಕಾಲದಲ್ಲಿ, ಗಡಿಯಾರ ನೋಡದೇ ಅದೆಷ್ಟೋ ಶ್ರಮದ ಕೆಲಸಗಳನ್ನು ನಿರಾಯಾಸವಾಗಿ, ತಾಳ್ಮೆಯಿಂದ ಮಾಡುತ್ತಿದ್ದರೆಂಬುದು ಇನ್ನೂ ನನ್ನ ಕಣ್ಣಿಗೆ ಕಟ್ಟುವಂತಿದೆ. ನಸುಕಿನ ಕೋಳಿಯ ಕೂಗೇ ಅವರಿಗೆ ಅಲಾರಂ ಗಂಟೆ. ಇನ್ನು ನಸುಕು ಹರಿದು ಬೆಳಕು ಹರಡಿತು ಅಂದ ಮೇಲೆ, ನನ್ನಜ್ಜಿ ಆಗಾಗೆ ಮೆಟ್ಟು ಬಾಗಿಲಿಗೆ ಬಂದು ಅಂಗಳಕ್ಕೆ ಚಾಚಿಕೊಂಡ ನೆರಳನ್ನು ನೋಡುತ್ತಾ ಸಮಯ ಗೊತ್ತು ಮಾಡಿಕೊಂಡು ಮತ್ತೊಂದು ಕೆಲಸಕ್ಕೆ ಕೈ ಹಚ್ಚಿಕೊಳ್ಳುತ್ತಿದ್ದಳು. ನಿಮಿಷ, ಸೆಕೆಂಡಿನ ಗೊಡವೆ ಅವರಿಗೆ ಇದ್ದಂತಿಲ್ಲ. ನಾವು ಇವತ್ತು ಪ್ರತೀ ನಿಮಿಷ, ಸೆಕೆಂಡುಗಳಿಗೆ ಚಿನ್ನದ ಬೆಲೆಯನ್ನು ಕಟ್ಟುವುದನ್ನ ಅಜ್ಜಿ ನಮ್ಮೆದುರಿಗೇ ಕಣ್ ಕಣ್ ಬಿಟ್ಟು ನೋಡುತ್ತಿದ್ದಾಳೆ. ಒಂದು ಗಂಟೆ ಭಾಷಣಕ್ಕೆ ಅಥಿತಿಗಳನ್ನ ಆಹ್ವಾನಿಸಿದರೆ ಇಷ್ಟು ಹಣ, ಅರ್ಧಗಂಟೆ ನಗಿಸಿ ಹೋದರೆ ಇಷ್ಟು ಹಣ, ಯಾವುದೋ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಹೋದರೆ ಇಂತಿಷ್ಟು ಅಂತ ಮುಲಾಜಿಯೇ ಇಲ್ಲದೆ ಬೆಲೆ ಕಟ್ಟಿಬಿಡುತ್ತೇವೆ. ಅಬ್ಭಾ! ಸ್ವಲ್ಪ ಪರಿಶ್ರಮ, ಬುದ್ಧಿವಂತಿಕೆ, ಚಾಣಕ್ಷ್ಯತನ ಇದ್ದರೆ ನಿಮಿಷದೊಳಗೆ ಹಣವನ್ನು ಝಣ ಝಣ ಅಂತ ತೂಗಿ ಅಳೆಯಬಹುದೆಂಬ ಸತ್ಯಕ್ಕೆ ಸಣ್ಣಗೆ ಹೆದರಿಕೆ ಕೂಡ ಆಗುತ್ತದೆ.
ಮೊನ್ನೆ ಮೊನ್ನೆಯವರೆಗೂ ಅಂದರೆ ನಮ್ಮ ಪ್ರಾಥಮಿಕ ಶಾಲಾ ದಿನಗಳಲ್ಲಿ ನಮಗೆ ಗಂಟೆ ಬಗ್ಗೆ ಅಷ್ಟೊಂದು ತಲೆಬಿಸಿಯಾಗಲಿ, ಕುತೂಹಲವಾಗಲೀ ಇರಲಿಲ್ಲ. ಗಂಟೆಯ ನೆಂಟನೇ ಓ ಗಡಿಯಾರ. . ಅಂತ ಶಾಲೆಯಲ್ಲಿ ರಾಗವಾಗಿ ಪದ್ಯವನ್ನು ಕಂಠಪಾಟ ಮಾಡಿ ಒಪ್ಪಿಸುತ್ತಿದ್ದೆವಷ್ಟೆ. ನಂತರ ಗಂಟೆ ಗಂಟೆಯ ಪಾಡಿಗೆ, ನಾವು ನಮ್ಮ ಪಾಡಿಗೆ. ಶಾಲೆಯ ಢಣ ಢಣ ಗಂಟೆಯ ಸದ್ದು ದೂರದಲ್ಲಿಕೇಳಿಸಿದರೆ ಸಾಕು ಒಂದೇ ಉಸುರಿಗೆ ಓಡಿ ಶಾಲೆ ಮುಟ್ಟಿಬಿಡುತ್ತಿದ್ದೆವು. ಸಂಜೆ ಮತ್ತೊಂದು ಗಂಟೆ ಹೊಡೆಯುವುದನ್ನೇ ಕಾಯುತ್ತಿದ್ದವರಂತೆ ಸರಸರನೇ ಹೆಗಲಿಗೆ ಬ್ಯಾಗು ಏರಿಸಿ ಊರು ಪೂರಾ ಸುತ್ತು ಹಾಕಿ ಹೊತ್ತು ಗೊತ್ತಿಲ್ಲದೆ ಮನೆ ಬಂದು ಮುಟ್ಟುತ್ತಿದ್ದೆವು. ಆದರೆ ಯಾಕೋ ಆರನೇ ತರಗತಿ ದಾಟಿದೊಡನೇ ನನಗೂ ಕೈಗೊಂದು ವಾಚು ಕಟ್ಟಬೇಕೆಂಬ ಆಸೆ ಮೆಲ್ಲಗೆ ಅಮರಿಕೊಂಡಿತ್ತು. ಈಗ ನಮ್ಮ ಮಕ್ಕಳು ಮೊಬೈಲಿಗೆ ಆಸೆ ಪಡುವಂತೆ ನಮಗೆಲ್ಲಾ ವಾಚು ಧರಿಸಬೇಕೆಂಬ ಹುಚ್ಚು. ಆದರೆ ಹಾಗೆಲ್ಲಾ ಪುಟ್ಟು ಮಕ್ಕಳಿಗೆ ಕೇಳಿದೊಡನೆ ವಾಚು ಗಿಟ್ಟುತ್ತಿರಲಿಲ್ಲ. ಆಗ ವಾಚಿಗೇ ಅದರದೇ ಆದ ತೂಕ, ಘನತೆ, ಗಾಂಭಿರ್ಯ ಇತ್ತು. ದೊಡ್ಡವರ ಎದುರು ಮಕ್ಕಳು ವಾಚ್ ಧರಿಸುವುದು ಆಡಂಬರದ ತೋರಿಕೆಯಾಗಿ ಬಿಡುತ್ತಿತ್ತು. ಹಾಗಾಗಿ ಯಾರು ಕಟ್ಟಬೇಕು?ಯಾವಾಗ ಕಟ್ಟಬೇಕು?ಎಲ್ಲಿ ಕಟ್ಟಬೇಕು?ಎಂಬುದರ ವಸ್ತುಸ್ಥಿತಿಯ ಮೇಲೆ, ವಾಚ್ನ ಉಪಸ್ಥಿತಿ ನಿರ್ಧಾರವಾಗುತ್ತಿತ್ತು. ನನ್ನ ವಾಚ್ನ ಕನವರಿಕೆಗೆ ಕಾರಣವಿಲ್ಲದಿಲ್ಲ. ಯಾಕೆಂದರೆ ಏಳನೇ ತರಗತಿಗೆ ಬರುತ್ತಿದ್ದ ಹೇಮಮಾಲಿನಿ, ಬಂಗಾರದ ಬಣ್ಣದ ವಾಚ್ನ್ನು ಗತ್ತಿನಲ್ಲಿ ಕಟ್ಟಿಕೊಂಡು ಬರುವುದ ನೋಡಿ ನಂಗಂತೂ ಸಿಕ್ಕಾಪಟ್ಟೆ ಆಸೆಯಾಗಿ ಹೋಗಿತ್ತು. ಇಷ್ಟು ದಿನ ಗೊಡವೇ ಇರದ ಗಂಟೆಯ ಬಗ್ಗೆ ತಲೆಕೆಡಿಸಿಕೊಂಡು ಅವಳ ಜೊತೆ ಸಿಕ್ಕಾಗಲೆಲ್ಲಾ, ಗಂಟೆ ಎಷ್ಟಾಯ್ತೇ. . ಅಂತ ಏನೋ ರಾಜ್ಯಕಾರ್ಯ ಇರುವರ ರೀತಿ ಅವಳನ್ನು ಗೋಳು ಹುಯ್ದುಕೊಳ್ಳುತ್ತಿದ್ದೆವು. ಅಸಲಿಗೆ ಅವಳಿಗೆ ಗಂಟೆ ನೋಡಲು ಗೊತ್ತಿದೆಯೋ? ಇಲ್ಲವೋ? ಎಂಬುದನ್ನು ತಿಳಿದುಕೊಳ್ಳುವ ಉದ್ದೇಶ ನಮ್ಮದಾಗಿತ್ತು. ಯಾಕೆಂದರೆ, ನನಗೆ ದೊಡ್ಡ ಮುಳ್ಳಿನ ದೊಡ್ಡಗಡಿಯಾರದಲ್ಲಿ ನನ್ನ ಸಣ ್ಣಕಣ್ಣನ್ನು ದೊಡ್ಡದಾಗಿ ಬಿಟ್ಟು, ಗಂಟೆ ಎಷ್ಟು ಅಂತ ಪತ್ತೆ ಹಚ್ಚೋಕೆ ಒಂದಷ್ಟು ಹೊತ್ತು ವ್ಯಯಿಸುತ್ತಾ ನನ್ನ ದಡ್ಡತನವನ್ನು ಪ್ರದರ್ಶಿಸುವವಳಿಗೆ, ಇನ್ನು ಅಂತಹುದರಲ್ಲಿ ಪುಟ್ಟ ಬಿಲ್ಲೆಯಂತ ಪುಟಾಣಿ ಗಡಿಯಾರದೊಳಗೆ, ಕಣ್ಣುಮಿಟುಕಿಸುವುದರೊಳಗೆ ಕುಣಿಯುತ್ತಾ ಓಡುವ ಸೆಕೆಂಡು ಮುಳ್ಳು ಗೊಂದಲ ಹುಟ್ಟಿಸಿ, ಜಾಗೂರುಕತೆಯಿಂದ ಎಣಿಸಿದರೂ ಗಂಟೆ ಎಡವಟ್ಟಾಗಿ ಬಿಡುತ್ತಿತ್ತು. ಆದರೂ ಮನದ ಮೂಲೆಯಲ್ಲಿ ನನಗೂ ಚೈನ್ ವಾಚ್ ಕಟ್ಟಬೇಕೆಂಬ ಕನವರಿಕೆ ಬಿಡದೇ ಕಾಡುತ್ತಿತ್ತು. ತಡೆಯಲಾರದೆ ಮೆಲ್ಲಗೆ ಅಪ್ಪನ ತಲೆಯಲ್ಲಿ ವಾಚ್ನ ಬಗ್ಗೆ ಹುಳ ಬಿಟ್ಟದ್ದೂ ಆಯಿತು. ದಯಾಮಯಿ ಅಪ್ಪ, ಏಳನೇ ತರಗತಿಯಲ್ಲಿ ನೀ ಮೊದಲ ಸ್ಥಾನ ಗಿಟ್ಟಿಸಿಕೊಂಡರೆ ನಿನಗೆ ವಾಚ್ ಗ್ಯಾರಂಟಿ ಅಂತ ಆಶ್ವಾಸನೆ ಕೂಡ ಕೊಟ್ಟು ಬಿಟ್ಟರು. ಅಳಿದುಳಿದ ಊರಿಗೆ ಉಳಿದವನೇ ಜಾಣ ಎಂಬಂತೆ, ಅಲ್ಲಿಯ ಹಳ್ಳಿ ಶಾಲೆಯಲ್ಲಿ ನಾನೊಬ್ಬಳೇ ಪರವಾಗಿಲ್ಲ ಅನ್ನುವಷ್ಟರ ಮಟ್ಟಿಗೆ ಹುಷಾರಿದ್ದೆ. ನನ್ನ ಅಜ್ಜಿ ಪುಣ್ಯ ಒಂದು ಕಡೆಯಿಂದ ಇತ್ತೋ ಏನೋ, ನಾನೋ ಫಸ್ಟ್ ಬಂದು, ಮಾತು ಉಳಿಸಿಕೊಂಡು ವಾಚ್ ಗಿಟ್ಟಿಸಿಕೊಂಡದ್ದು ಈಗ ಹಳೇ ಕತೆ. ಆದರೆ ಅಪ್ಪ ತಂದ ವಾಚ್ ಬೆಲ್ಟಿದ್ದಾಗಿತ್ತು. ನಂಗೆ ಚೈನ್ ವಾಚೇ ಬೇಕಿತ್ತು. ಹಾಗಾಗಿ ನಂಗಂತೂ ತುಂಬಾ ನಿರಾಸೆಯಾಗಿತ್ತು. ನನ್ನ ಅನ್ಯಮನಸ್ಕತೆಯನ್ನು ಗಮನಿಸಿ, ಬೆಲ್ಟ್ ಬದಲಾಯಿಸಿ, ಬೆಳ್ಳಿ ಬಣ್ಣದ ಚೈನ್ ಅದಕ್ಕೆ ಹೊಂದಿಸಿ, ನನ್ನ ಕೈಯ ಮಣಿಗಂಟಿಗೆ ಕಟ್ಟಿ ಸಂಭ್ರಮಿಸಿದ ಅಪ್ಪ, ಅದೇ ವರ್ಷ ಕಾಲನ ಕರೆಗೆ ಓಗೊಟ್ಟು ಸದ್ದಿಲ್ಲದೇ ಕಾಲವಶವಾದದ್ದು ನೆನಪಿಗೆ ಬಂದಾಗ ಪ್ರತೀ ಭಾರಿ ವಾಚ್ ಕಟ್ಟುವಾಗಲೂ ಕಣ್ಣಂಚು ಸಪ್ಪಗಾಗುತ್ತದೆ. ಎಷ್ಟು ಹೊತ್ತು ನೀವು ನನ್ನ ಕೈಗಂಟಿಗೆ ಕಟ್ಟಿ ಹಾಕಿದರೂ ಅಷ್ಟೇ. . ! ಅಂತ ನನ್ನನ್ನು ಕಾಲ ಅಣಕಿಸಿದಂತಾಗುತ್ತದೆ. ಆಗೆಲ್ಲಾ ಮನಸು ಮರೆಯಲ್ಲಿ ಮುದುಡಿಕೊಳ್ಳುತ್ತದೆ. ಮತ್ತೆ ಎಲ್ಲ ಮರೆತವಂತೆ ವಾಚ್ ಕೈಯಲ್ಲಿ ವಿರಾಜಮಾನವಾಗಿ ಬಿಡುತ್ತದೆ.
ವಾಚ್ ಸಿಕ್ಕದ ಮೇಲಂತೂ, ಆ ಪುಟ್ಟ ಗಡಿಯಾರ ಬದುಕಿನ ಅವಿಭಾಜ್ಯ ಅಂಗದಂತಾಗಿ ಹೋಗಿತ್ತು. ಪೆನ್ನು ಪುಸ್ತಕ ಮರೆತು ಹೋದರೂ ವಾಚೊಂದು ಧರಿಸಲು ಮರೆತು ಹೋಗುತ್ತಿರಲಿಲ್ಲವೆಂಬುದು ಮಾತ್ರ ಈಗ ನೆನೆದರೆ ತುಂಬಾ ತಮಾಷೆಯ ಸಂಗತಿಯಂತೆ ಅನ್ನಿಸುತ್ತದೆ. ಒಂದು ಸಲ ಉರಿ ಬಿಸಿಲಲ್ಲಿ ಯಾರು ಬಸವಳಿದು ಹೈರಾಣಾಗುವುದೆಂದು ನಾವೆಲ್ಲರೂ ಗೈರು ಹಾಜರಾಗಿ ತರಗತಿಯೊಳಗೆ ಪಟ್ಟಾಂಗ ಹೊಡೆಯುತ್ತಾ ಕಾಲ ಕಳೆದು ಬಿಟ್ಟಿದ್ದೆವು. ಮಾರನೇಯ ದಿನ ದಪ್ಪ ಮೀಸೆಯ ಪಿ. ಟಿ. ಮೇಷ್ಟ್ರು ಬಂದು ನಮ್ಮ ಮೇಲೆ ಹಿಗ್ಗಾ ಮುಗ್ಗಾ ರೇಗಾಡಿ ಬಿಟ್ಟಿದ್ದರು. ನೀವು ಎಷ್ಟು ದೊಡ್ಡವರ ಮಕ್ಕಳೇ ಆಗಲಿ ನಾನು ಹೆದರಲ್ಲ. ನಿಮ್ಮ ಕೈಯಲ್ಲಿ ವಾಚ್ ಬೇಕಾದರೂ ಕಟ್ಟಿಕೊಂಡಿರಿ ನಾನು ಕೇರ್ ಮಾಡಲ್ಲ ಅಂದಾಗ. . ಹೋ! ನಾನು ಕಟ್ಟಿದ ವಾಚ್ ಮೇಲೂ ಮೇಷ್ಟ್ರ ಕೋಪದ ನೋಟ ಬಿದ್ದಿದೆ ಅಂತ ಗೊತ್ತಾಗಿ, ಮೆಲ್ಲಗೆ ಉದ್ದ ಕೈಯ ಸ್ವೆಟ್ಟರಿನೊಳಗೆ ನನ್ನ ವಾಚನ್ನು ತೂರಿಸಿಕೊಂಡಿದ್ದೆ. ಬಹುಷ: ವಾಚ್ ಕಟ್ಟಿದ ಒಂದಷ್ಟು ಮಕ್ಕಳು ನಾನು ಮಾಡಿದ ಕೆಲಸವನ್ನೇ ಮಾಡಿರಬಹುದು ಅನ್ನಿಸುತ್ತದೆ. ಅಂತು ಶಾಲೆಯ ದೊಡ್ಡ ಗಂಟೆ ಭಾರಿಸಿ, ಪಿ. ಟಿ. ಮೇಷ್ಟ್ರು ಹೊರ ಹೋದ ಮೇಲೆಯೇ ನಾವು ನಿರಾಳರಾಗಿ, ಒಳಹೊಕ್ಕಿದ್ದ ನಮ್ಮ ವಾಚ್ ಮತ್ತೆ ಹೊರ ಇಣುಕಿದ್ದು. ಮತ್ತೆ ಪಿ. ಟಿ. ಮೇಷ್ಟ್ರ ಕಾಣುವಾಗಲೆಲ್ಲಾ ನಮ್ಮ ವಾಚ್ ಬೆದರಿ ಅಣಗಿಕೊಳ್ಳುತ್ತಿದ್ದದ್ದು. ಆದರೆ ನಮ್ಮ ದೇಹದ ಅಗತ್ಯದ ಧಿರಿಸೇನೋ ಎಂಬಂತೆ ಪುಟ್ಟ ಗಡಿಯಾರವನ್ನು ನಾವು ಅನವರತ ಕಟ್ಟಿಕೊಂಡು ಅದೇನು ಅವಿರತವಾದ ಕಾರ್ಯ ಸಾಧನೆ ಮಾಡಿದ್ದೇವೋ ಎಂಬುದು ಮಾತ್ರ ಆ ಪುಟ್ಟ ಗಡಿಯಾರಕ್ಕಷ್ಟೇ ಗೊತ್ತಿರಬಹುದಾದ ಸತ್ಯ.
ಇನ್ನು ವೇಗದ ಬದುಕಿನೊಳಗೆ ಗಡಿಯಾರದ ನಂಟಿಗೆ ನಗರವಾಸಿಗಳು ಮಾತ್ರ ಅಂಟಿಕೊಂಡಿದ್ದಾರೆಂದು ನಾವು ಅಂದುಕೊಂಡರೆ ಅದು ಭ್ರಮೆಯಷ್ಟೆ. ನಮ್ಮ ಹಳ್ಳಿ ಮೂಲೆ ಕಡೆ ಕೆಲಸಕ್ಕೆಂದು ಬರುವ ಕೆಲಸಗಾರರನ್ನು ನೋಡಿ ನಾವು ಸಮಯ ಪರಿಪಾಲನೆ ಕಲಿತುಕೊಳ್ಳಬೇಕೆನ್ನಿಸುತ್ತದೆ. ಸರೀ ಸಮಯಕ್ಕೆ ನಮ್ಮ ಮನೆಗಳ ಮುಂದೆ ಹಾಜರಾಗಿಬಿಡುತ್ತಾರೆ. ಹೊರಡುವಾಗಲೂ ಅಷ್ಟೆ, ನಾವು ಸಮಯ ನೋಡಿ ಅವರನ್ನು ಕರೆಯುವ ಪ್ರಸಂಗವೇ ಬರುವುದಿಲ್ಲ. ಅದಾಗಲೇ ಒಂದು ನಿಮಿಷ ಹೆಚ್ಚು ಕಮ್ಮಿ ಇಲ್ಲದಂತೆ ಅವರುಗಳು ನಮ್ಮ ಮುಂದೆ ಹಾಜಾರಾಗಿ ಬಿಡುತ್ತಾರೆ. ನಾವು ಕೈಗಂಟಿಗೆ ಕಟ್ಟುವ ವಾಚ್ ಅನ್ನು ಅವರುಗಳು ಸೊಂಟದ ನಡುವೆ ಬಂಧಿಸಿಟ್ಟು ಕೆಲಸಮಾಡುವುದಕ್ಕಿಂತ ಹೆಚ್ಚಿಗೆ ಗಂಟೆ ನೋಡುವುದರಲ್ಲೇ ಸಮಯ ಕೊಲ್ಲುತ್ತಾರೆಂಬ ಸಂಗತಿ, ಈಗ ಅವರ ಸೊಂಟದ ಪಟ್ಟಿಯ ನಡುವೆ ಬಂಧಿಯಾಗಿ ಉಳಿದಿಲ್ಲ. ಆದರೆ ನಮ್ಮ ಸಮಯ ಈಗ ತೀರ ಕೆಟ್ಟುಹೋಗಿರುವುದರಿಂದ ಅವನ್ನೆಲ್ಲಾ ಸಹಿಸಿಕೊಳ್ಳುವುದು ಈ ಕಾಲದ ನಮ್ಮ ಅನಿವಾರ್ಯತೆಯಾಗಿ ಬಿಟ್ಟಿದೆ. ವಿಶೇಷವೆಂದರೆ ನಮ್ಮಲ್ಲಿ ಎಂತ ಪೆದ್ದು ಬೋಳರಿಗೂ, ಅನಕ್ಷರಸ್ಥರಿಗೂ, ದುಡ್ಡು ಎಣಿಸಲು, ಗಂಟೆ ನೋಡಲು ಬರುವುದು ಮಾತ್ರ ಬಹು ದೊಡ್ಡ ವಿಸ್ಮಯ.
ಇವತ್ತು ಮಣಿಗಂಟಿಗೆ ಅಂಟಿದ ಪುಟ್ಟ ಕೈ ಗಡಿಯಾರ, ಅಥವಾ ಮನೆಯ ಹಾಲಿನಲ್ಲಿ ಗೋಡೆಗೆ ಅಂಟಿಕೊಂಡ ದೊಡ್ಡ ಗಂಟೆ ಗಡಿಯಾರ ಈಗ ಬರೇ ತೋರಿಕೆಯ ಅಲಂಕಾರಿಕ ಸಾಧನವಾಗಿಯಷ್ಟೇ ಉಳಿದುಕೊಂಡಿದೆ. ಯಾಕೆಂದರೆ ನಿಂತಲ್ಲಿ, ಕೂತಲ್ಲಿ, ನಾವು ಬಳಸುವ ಹೆಚ್ಚಿನ ಸಾಮಾನುಗಳಲ್ಲಿ ಸಮಯವೊಂದು ತೋರಿಸುತ್ತಾ ಹೋಗುತ್ತದೆ. ಮೊಬೈಲ್ ತೆರೆದರೆ ಗಂಟೆ, ಟಿ. ವಿ. ನೋಡಿದರೆ ಗಂಟೆ, ಕೀಲಿಮಣೆ ತೆರೆದರೆ ಅಲ್ಲಿ ಗಂಟೆ. ಹಾಗಾಗಿ ಎಲ್ಲಾ ಸಾಧನಗಳಲ್ಲೂ ಪುಟಾಣಿ ವಾಚೊಂದು ಕುಳಿತುಕೊಂಡು ಕಾಲದ ಅರಿವನ್ನು ಮೂಡಿಸುತ್ತಲೇ ಇರುತ್ತದೆಯೇನೋ. ಅಥವ ಸಮಯದ ಜೊತೆಗೆ ಹೆಜ್ಜೆ ಹಾಕುವ ಪ್ರಜ್ಞೆಯನ್ನು ಕಲಿಸುತ್ತದೆಯೇನೋ. ಆದರೆ ಇದಕ್ಕೆ ತದ್ವಿರುದ್ದವೆಂಬಂತೆ ಯಾವುದಾದರೂ ಒಂದು ಸಮ್ಮೇಳನವೋ, ಕಾರ್ಯಕ್ರಮವೋ ಆಯೋಜಿಸಿ ನೋಡಿ. ಅದು ನಿರ್ಧರಿತ ನಿಗಧಿತ ಸಮಯಕ್ಕೆಂದೂ ಆರಂಭವೂ ಆಗುವುದಿಲ್ಲ. ಅಂತ್ಯವೂ ಕಾಣುವುದಿಲ್ಲ. ಬಹುತೇಕ ಎಲ್ಲಾ ಕಾರ್ಯಕ್ರಮಗಳಲ್ಲಿ ಸಮಯ ಏರುಪೇರಾಗುವುದು ಮಾಮೂಲಿ ಸಂಗತಿ. ಬರಬೇಕಾದ ಮುಖ್ಯ ಅಥಿತಿಯನ್ನು ನಿಮಿಷ, ಗಂಟೆಗಳ ಪರಿವೆಯೇ ಇಲ್ಲದೆ ಕಾಯುತ್ತಾ ಕಾಯುತ್ತಾ ನಾವುಗಳು ಕಾಲಕಳೆಯುವುದು ಸರ್ವೇ ಸಾಮಾನ್ಯ. ಬಹುಷ:ಮುಖ್ಯ ಅಥಿತಿಗಳ ಗಡಿಯಾರ ಕೆಟ್ಟು, ಕಾಲ ನಿಂತೇ ಹೋಗಿದೆಯೇನೋ ಎಂಬ ಗುಮಾನಿ ಹಾದು ಹೋಗುವುದು ಕೂಡ ಸುಳ್ಳಲ್ಲ.
ಇಷ್ಟೆಲ್ಲದರ ನಡುವೆಯೂ ಕತ್ತಲು-ಬೆಳಗು ಗಡಿಯಾರದ ಹಂಗಿಲ್ಲದೇ ಸರಿದು ಹೋಗುತ್ತಲೇ ಇದೆ. ಅಂಬೆಗಾಲಿನ ಮಗು, ನೋಡ ನೋಡುತ್ತಿದ್ದಂತೆಯೇ ಎದೆಯೆತ್ತರಕ್ಕೆ ಬೆಳೆದು ನಿಂತು ಬಿಟ್ಟಿರುತ್ತದೆ. ಇನ್ನೇನು ಬದುಕು ಶುರುವಾಯಿತು ಅಂತ ಅಂದುಕೊಳ್ಳುವಷ್ಟರಲ್ಲಿ, ಹಣೆಯಲ್ಲಿ ನೆರಿಗೆ ಮೂಡಿ ಎದುರಿಗೆ ಮೇಕಪ್ ಕಿಟ್ ಕೂತಿರುತ್ತದೆ, ಕೂದಲಿಗೆ ಡೈ ಸವರಲು ಕಾಲನ ಜೋಳಿಗೆಯಿಂದ ಮತ್ತೊಂದಷ್ಟು ಸಮಯ ಸೋರಿ ಹೋಗಿರುತ್ತದೆ. ಸಂಜೆ ಹೊತ್ತಲ್ಲಿ, ಮೆಟ್ಟು ಬಾಗಿಲಲ್ಲಿ ಕುಳಿತುಕೊಂಡು ಆಗಸ ನೋಡುತ್ತಾ ಮನಸು ಗತಕಾಲದ ಸ್ಮರಣೆಯಲ್ಲಿ ತೊಡಗುತ್ತಾ ಕಾಲದ ಲೆಕ್ಕಚಾರ ಹಾಕಿದಷ್ಟು ಎಣಿಕೆ ತಪ್ಪಿ ಹೋಗುತ್ತದೆ. ಕಾಲವನ್ನು ತಡೆಯೋರು ಯಾರೂ ಇಲ್ಲ. . ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ. . . . . ಯಾವೊತ್ತೋ ಕೇಳಿ ಮರೆತ್ತಿದ್ದ ಪದ್ಯವೊಂದು ಮತ್ತೆ ಮತ್ತೆ ಕಿವಿಯ ಸವರಿ ಹಾದು ಹೋಗುತ್ತಿದೆ. ಕಾಲದ ಅದೃಶ್ಯ ಗಾಲಿ ನಮ್ಮನ್ನು ಎಲ್ಲಿಂದ ಎಲ್ಲಿಗೋ ಹೊತ್ತೊಯ್ಯುತ್ತಲೇ ಇದೆ. ಇದ್ಯಾವುದರ ಪರಿವೆಯೇ ಇಲ್ಲದೆ ಕೈ ಗಡಿಯಾರ ಟಿಕ್, ಟಿಕ್ ಸದ್ದು ಮಾಡುತ್ತಲೇ ಇದೆ.
–ಸ್ಮಿತಾ ಅಮೃತರಾಜ್. ಸಂಪಾಜೆ
Well written and always its a treat to read your writing….Keep it up
Regrads,
Aparna
tumba chennagide madam