ಮಲೆನಾಡಿನ ಬೆಟ್ಟಗುಡ್ಡಗಳ ಮಡಿಲಿನಲ್ಲಿ ಕಾಫಿತೋಟಗಳಿಂದ ಆವರಿಸಲ್ಪಟ್ಟ ಒಂದು ಹಳ್ಳಿ.ಆ ಹಳ್ಳಿಯಲ್ಲೊಂದು ಅನುಧಾನಿತ ಪ್ರೌಢಶಾಲೆ. ಈ ಶಾಲೆ ಒಂದು ರೀತಿ ಹಳ್ಳಿಗೆ ದಾರಿದೀಪವಿದ್ದಂತೆ. ಹಿಂದೆ ಅದೆಷ್ಟೋ ಮಂದಿ ಈ ಜ್ನಾನದೇಗುಲದಲ್ಲಿ ಕಲಿತು ವಿದ್ಯಾವಂತರಾಗಿ ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಹಿಂದೆಲ್ಲಾ ಶಾಲೆಗೆ-ಗುರುಗಳಿಗೆ ಅಪಾರ ಗೌರವವಿತ್ತು,ದೊಡ್ಡದೊಡ್ಡ ಸಾಹುಕಾರರ ಮಕ್ಕಳೂ ಸರಕಾರಿ ಶಾಲೆಯಲ್ಲಿ ಓದುತ್ತಿದ್ದರು.ಈಗ ಕಾಲ ಬದಲಾಗಿಬಿಟ್ಟಿದೆ.ಸರಕಾರದಿಂದ ಅನುದಾನ ಬರಲು ಆರಂಬಗೊಂಡದ್ದೇ ರಾಜಕೀಯವೂ ಶಾಲೆಯ ವಠಾರಕ್ಕೆ ವಕ್ಕರಿಸಿಕೊಂಡಿದೆ. ಶಾಲೆಯ ಆಡಳಿತ ಮಂಡಳಿಯೂ,ಶಿಕ್ಷಕ ವರ್ಗವೂ ಕೆಲವೊಮ್ಮೆತಮ್ಮತಮ್ಮೊಳಗೇ ಮುಸುಕಿನ ಗುದ್ದಾಟ ನಡೆಸುತ್ತವೆ. ಹಿಂದೆ ವಿದ್ಯೆ ಹಾಗು ವಿನಯವೇ ಧೈಯವಾಗಿದ್ದ ಶಾಲೆಗಳಲ್ಲಿ ಹಣ ಹಾಗು ಪ್ರತಿಷ್ಟೆಯೇ ಧೈಯವಾಗಿ ಬಿಟ್ಟಿದೆ.
***
" ಬಿದ್ದಪ್ಪ….ಏ…. ಬಿದ್ದಪ್ಪ ಆ ರಿಜಿಸ್ಟರ್ ಎಡ್ತ ಬಾರಾ….." ದ್ವಜಸ್ತಂಬದ ಕಟ್ಟೆಯ ಬಳಿ ಬಿಸಿಲು ಕಾಯಿಸಿಕೊಳ್ಳುತ್ತಿದ್ದ ಅಟೆಂಡರ್ ಬಿದ್ದಪ್ಪ ಎಚ್ಚೆತ್ತು ಆಫೀಸಿನೊಳಗೆ ಓಡಿದ.ಈ ಅಡಳಿತ ಮಂಡಳಿಯ ಪ್ರತಿಷ್ಟೆಯೂ, ಹೊಸದಾಗಿ ಮುಖ್ಯಶಿಕ್ಷಕರಾಗಿ ಬಡ್ತಿ ಪಡೆದ ಶೇಖರ ಮಾಸ್ತರರ ದರ್ಪವೂ , ಅದೇ ಊರಿನ ಕಾಫಿಬೆಳೆಗಾರರಾದ ಕೆಲವು ಶಿಕ್ಷಕರ ತಿಕ್ಕಲುತನವೂ ಎಲ್ಲಾ ಸೇರಿ ಈ ಪಾಪದ ಅಟೆಂಡರ್ ಬಿದ್ದಪ್ಪ ಫುಟ್ಬಾಲಿನಂತಾಗಿದ್ದ. ಎಲ್ಲರೂ ಒದೆಯುವವರೇ. ಮೇಲ್ವರ್ಗದವರಿರುವ ಕಛೇರಿಗಳಲ್ಲಿ ಈ ಅಟೆಂಡರ್ ಕೆಲಸ ಕೆಳವರ್ಗದವರಿಗೇ ಮೀಸಲಾಗಿರುತ್ತದೆ. ಏಕೆಂದರೆ ತುಳಿಸಿಕೊಳುವುದು ಒದೆಸಿಕೊಳ್ಳುವುದು ಈ ಬಡಪಾಯಿಗಳ ರಕ್ತದಲ್ಲೇ ಬಂದಿರುತ್ತೆ ನೋಡಿ!
ರಿಜಿಸ್ಟರನ್ನು ಕೈಗಿತ್ತು ಬಂದ ಬಿದ್ದಪ್ಪ ಧ್ವಜಸ್ತಂಬದ ಕಟ್ಟೆಯ ಮೇಲೆ ನಿಧಾನವಾಗಿ ಬಂದು ಕೂತ, ಅವನ ಮುಖ ಬಾಡಿತ್ತು. ಧ್ವಜಸ್ತಂಬದ ತುದಿಯನ್ನೇ ದಿಟ್ಟಿಸಿ ನೋಡಿದ ಬಿದ್ದಪ್ಪ. ದೇಶಪ್ರೇಮ , ಸಮಾನತೆ ಸ್ವಾತಂತ್ರ್ಯದ ಸಂಕೇತವಾದ ತ್ರಿವರ್ಣಧ್ವಜ ಹಾರಾಡುವ ಈ ಪವಿತ್ರ ಸ್ಥಳ ಈಗ ಮಲಿನಗೊಂಡಿದೆ. ಜೋರಾಗಿ ಒಮ್ಮೆ ಕೆಮ್ಮಿ ಕಫವನ್ನು ಮೈದಾನಕ್ಕೇ ಉಗಿದ ಬಿದ್ದಪ್ಪ ಎದುರಿಗಿದ್ದ ಆಫೀಸಿನ ಗೋಡೆಯ ಮೇಲೆ ಕಣ್ಣಾಡಿಸಿದ. ' ಜ್ನಾನದೇಗುಲವಿದು ಕೈಮುಗಿದು ಒಳಗೆ ಬಾ ' ಎಂದು ಬರೆದಿತ್ತು. ಇದನ್ನು ನೋಡಿ ಬಿದ್ದಪ್ಪನಿಗೆ ತಡೆಯಲಾಗಲಿಲ್ಲ. ಬೇಕಾದರೆ ಯಾರಾದರೂ ತನ್ನನ್ನು ಕರೆದಾರು ಇಲ್ಲೇ ಮೈದಾನದಲ್ಲಿ ಅಡ್ಡಾಡಿಕೊಂಡಿರೋಣವೆಂದು ಶಾಲೆಯ ಎದುರಿನ ಮೈದಾನದಲ್ಲಿ ಹೆಜ್ಜೆ ಹಾಕಲಾರಂಭಿಸಿದ. ಘಂಟೆ ಬಾರಿಸಲು ಇನ್ನೂ ಸಮಯವಿತ್ತು. ಇತ್ತೀಚಿನ ಕೆಲವು ಬೆಳವಣಿಗೆಗಳು ಅವನ
ನಂಬಿಕೆ- ಆದರ್ಶಗಳಿಗೆ ಚಪ್ಪಲಿಯೇಟನ್ನೇ ನೀಡಿದ್ದವು.
***
ಅನುದಾನಿತ ಪ್ರೌಢಶಾಲೆಯಲ್ಲಿ ಶಿಕ್ಷಕರ ಹುದ್ದೆಯನ್ನು ಸೃಷ್ಟಿಸುವುದು,ವೇತನ ನೀಡುವುದೆಲ್ಲಾ ಶಿಕ್ಷಣ ಇಲಾಖೆಯ ಕೆಲಸ. ಈ ಶಾಲೆಯಲ್ಲಿ ಗಣಿತದ ಶಿಕ್ಷಕರಿಲ್ಲ.ಖಾಯಂ ಹುದ್ದೆಯ ನೇಮಕಾತಿಗಾಗಿ ಪೋಷಕರು ಇಲಾಖೆಗೆ ಹಲವಾರು ಬಾರಿ ಅಹವಾಲು ಸಲ್ಲಿಸಿದರೂ ಶಿಕ್ಷಣ ಇಲಾಖೆ ಮಾತ್ರ ಕಣ್ಣು ಮುಚ್ಚಿ ಕುಳಿತಿತ್ತು.ಅವರ ಉತ್ತರವಿಷ್ಟೇ, ಶಾಲೆಯಲ್ಲಿ ಈಗಾಗಲೇ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರಿದ್ದಾರೆ, ಹೊಸ ಶಿಕ್ಷಕರ ನೇಮಕ ಬೇಕಾದಲ್ಲಿ ಹೆಚ್ಚಿನ ಮಕ್ಕಳ ದಾಖಲಾತಿಯಾಗಬೇಕಷ್ಟೇ. ಮಕ್ಕಳ ಸಂಖ್ಯೆಯಲ್ಲಿ ಕಡಿಮೆಯಾದರೆ ಇರುವ ಶಿಕ್ಷಕರನ್ನೂ ದೂರದೂರಿಗೆ ವರ್ಗಾವಣೆಗೊಳಿಸಬೇಕಾದೀತು ಎಂಬ ಎಚ್ಚರಿಕೆಯೂ ಬಂದುಬಿಟ್ಟಿತು.ತೋಟಗದ್ದೆ ನೋಡಿಕೊಂಡು ಸುಖವಾಗಿದ್ದ ಅಲ್ಲಿನ ಖಾಯಂ ಶಿಕ್ಷಕರಿಗೆ ಇದರಿಂದ ಮಂಡೆಬೆಚ್ಚವಾಗಿ ಈ ತಲೆಬಿಸಿ ಆಡಳಿತಮಂಡಳಿಗೂ ತಲುಪಿ ಒಳಗೊಳಗೇ ಮಸಲತ್ತಾಗಿ ಕಡೆಗೆ ಹೆಚ್ಚಿನ ದಾಖಲಾತಿ ತೋರಿಸುವುದೆಂದು ಮಾತಾಗಿ ಆ ವರ್ಷದ ಜೂನ್ ತಿಂಗಳಲ್ಲೇ ಸಿಕ್ಕಾಪಟ್ಟೆ ದಾಖಲಾತಿ ಆಗೇಬಿಟ್ಟಿತು.ಆ ಅಡಿಯರ ಕಾಲೋನಿಯ ಬೊಳ್ಳು,ಚಿಪ್ಪ,ಚೀರ,ಬೊಳ್ಳಚ್ಚಿ,ಲೀಲಾ ಎಂಟನೇ ಈಯತ್ತೆಗೆ ದಾಖಲಾಗೇಬಿಟ್ಟರು.ಮಾಪಿಳ್ಳೆ ಮಕ್ಕಳಾದ ಹುಸೇನಿ,ಇಸ್ಮಾಯಿಲ,ರಝಾಕು ಇವರೆಲ್ಲಾ ಅಂತೂ ಮತ್ತೆ ಶಾಲೆ ರಿಜಿಸ್ಟರಿಗೆ ಬಂದುಬಿಟ್ಟರು. ಇವರೆಲ್ಲ ಕಾಫಿ ತೋಟಗಳಲ್ಲಿ ದುಡಿಯುವ ಯುವಕರು, ಒಬ್ಬಳಿಗಂತೂ ಮಗುವಿದೆ. ಆ ಇಲಾಖೆಯೂ ಎಲ್ಲಾ ಸರಿಯಾಗಗಿದೆಯೆಂದು ಕಣ್ಣುಮುಚ್ಚಿ ಷರಾ ಬರೆದು ಒಂದು ಹುದ್ದೆಯನ್ನು ಮಂಜೂರು ಮಾಡೇಬಿಟ್ಟಿತು.
***
ಖಾಲಿ ಹುದ್ದೆಯ ನೇಮಕಾತಿಗಾಗಿ ಶಾಲಾಆಡಳಿತ ಮಂಡಳಿ ದಿನಪತ್ರಿಕೆಗಳಲ್ಲಿ ಜಾಹಿರಾತು ನೀಡಬೇಕು, ಬಂದ ಅಭ್ಯರ್ಥಿಗಳ ಅಂಕಪಟ್ಟಿ ಪರಿಶೀಲನೆಯಾಗಬೇಕು, ಸಂದರ್ಶನ ನಡೆಸಿ ಯೋಗ್ಯತೆಗನುಸಾರ ಅರ್ಹವಾದ ಒಬ್ಬ ಅಭ್ಯರ್ಥಿಯ ಹೆಸರನ್ನು ಇಲಾಖೆಗೆ ಶಿಫಾರಸ್ಸು ಮಾಡಬೇಕು, ಆ ಶಿಫಾರಸನ್ನು ಇಲಾಖೆ ಒಪ್ಪಬೇಕು. ಈ ನಿಯಮದಂತೆಯೇ ಜಾಹಿರಾತು ನೀಡಲಾಯಿತು, ಬರುವ ಅಭ್ಯರ್ಥಿಗಳ ಯೋಗ್ಯತೆಯನ್ನು ಮೊದಲೇ ತೀರ್ಮಾನಿಸಲಾಯಿತು. ಅಂಕಪಟ್ಟಿ,ಪ್ರತಿಭೆಯನ್ನು ಕಾಲಕಸವಾಗಿಸಿ ಐದು ಲಕ್ಷ ರೂಪಾಯಿಯನ್ನು ಅಭ್ಯರ್ಥಿಯ ಯೋಗ್ಯತೆಯೆಂದು ತೀರ್ಮಾನಿಸಲಾಯಿತು. ಈ ಆಡಳಿತ ಮಂಡಳಿಯ ಯೋಗ್ಯತೆ ಮೀರಿ ಆರು ಲಕ್ಷ ರೂಪಾಯಿ ಕೊಡಲು ಸಿದ್ಧವಾದ ಒಬ್ಬನ ಹೆಸರನ್ನು ಅಂತಿಮಗೊಳಿಸಿ ಇಲಾಖೆಗೆ ಶಿಫಾರಸ್ಸು ಮಾಡಲಾಯಿತು, ಶಾಲೆಯೂ ಇಲಾಖೆಯೂ ನೀಟಾಗಿ ಈ ಬೇಟೆಯ ಹಣವನ್ನು ಹಂಚಿ ಕೊಳ್ಳೆಹೊಡೆದದ್ದೂ ಆಯಿತು, ಆ ಯೋಗ್ಯತೆ ಹೊಂದಿದ ಮಾಸ್ತರ ಈ ಶಾಲೆಗೆ ಗಣಿತ ಮಾಸ್ತರನಾಗಿ ಬಂದದ್ದೂ ಆಯಿತು.
***
ಎಲ್ಲರ ದೃಷ್ಠಿಯಲ್ಲಿ ಈ ಅಸಾಮಾನ್ಯ ಘಟನೆ ಸಾಮಾನ್ಯವಾಗಿ, ಏನೂ ನಡೆದೇ ಇಲ್ಲವೆಂಬಂತೆ ಕಾಲಕಳೆದುಬಿಟ್ಟರೆಈ ಬಿದ್ದಪ್ಪನೆಂಬ ಕೆಳವರ್ಗದ ಅಟೆಂಡರು ಮಾತ್ರ ಆಕಾಶ ಕಳಚಿ ತಲೆ ಮೇಲೇ ಬಿದ್ದಂತಾಗಿ ಇರತೊಡಗಿದ. ಯಾವುದೋ ಊರಿನಿಂದ ಬಂದ ಆ ದರಿದ್ರ ಮಾಸ್ತರ ಈ ಊರಿನ ಮಕ್ಕಳಿಗೆ ಅದು ಹೇಗೆ ಪಾಠ ಮಾಡಿಯಾನು? ಅದು ಹೇಗೆ ನಮ್ಮ ಮಕ್ಕಳು ಹತ್ತನೇ ತರಗತಿಯಲ್ಲಿ ಪಾಸಾದಾರು? ಈ ಆಡಳಿತ ಮಂಡಳಿ ಅದು ಯಾವ ಮುಖವಿಟ್ಟುಕೊಂಡು ಈಯಪ್ಪನಿಗೆ ಸರಿಯಾಗಿ ಪಾಠಮಾಡೆಂದು ಹೇಳಿಯಾರು? ಜ್ನಾನದೇಗುಲಗಳೆಂಬ ಶಾಲೆಗಳ ಇಲಾಖೆಯಲ್ಲೇ ಈ ಮಾದರಿ ಹೊಲಸಿದ್ದರೆ, ಇನ್ನು ಬೇರೆ ಇಲಾಖೆಗಳ,ಸರಕಾರದ,ದೇಶದ ಕತೆಯೇನು ? ಎಲ್ಲಾ ಪ್ರಶ್ನೆಗಳೂ ತಲೆಯೊಳಗೆ ಒಂದೇ ಸಮನೆ ನುಗ್ಗಿದಂತಾಗಿ ಬಿದ್ದಪ್ಪ ಒಂದೆರಡು ಬಾರಿ ಕೆಮ್ಮಿ ಕಫವನ್ನುಗುಳಿದ, ಏನನ್ನಿಸಿತೋ ಕಾಣೆ ಬಿರಬಿರನೆ ಆಫೀಸಿನೆಡೆ ನಡೆದು ಹೊರಗಿಟ್ಟ ಫಿಲ್ಟರಿನಿಂದ ಎರಡು ಲೋಟ ನೀರನ್ನು ಗಟಗಟನೆ ಕುಡಿದ,ಮೈಮೇಲೆ ಆವೇಶ ಬಂದಂತಾಗಿ ಭುಜವನ್ನು ಕುಣಿಸುತ್ತಾ ಲಯಬದ್ದವಾಗಿ ನೆಗೆಯುತ್ತಾ ನಾಲಗೆ ಹೊರಚಾಚಿ ಕುಣಿಯತೊಡಗಿದ. " ಬುಳಬುಳಬುಳ…… ಹುರ್ರ…. ಬುಳಬುಳಬುಳ…..ಹುರ್ರ….." ಎಂದು ಅಬ್ಬರಿಸುತ್ತಾ ಕುಣಿಯತೊಡಗಿದ. ತರಗತಿಗಳಲ್ಲಿದ್ದ ಮಕ್ಕಳೆಲ್ಲಾ ಹೋ…. ಎಂದು ಹೊರಗೋಡಿ ತಮಾಷೆ ನೋಡತೊಡಗಿದರು.ಹೆಡ್ ಮಾಸ್ತರರಿಗೂ,ಇತರ ಶಿಕ್ಷಕರಿಗೂ ಇದರಿಂದ ಕಸಿವಿಸಿಯಾಗಿ ಹತ್ತಿರ ಬರಲೂ ಬೆದರಿ ದೂರದಿಂದಲೇ " ಬಿದ್ದಪ್ಪ…. ಏ…. ಬಿದ್ದಪ್ಪ…..ಎಂತ್ ಆಚಿರಾ ( ಏನಾಯ್ತೋ) ? " ಎಂದು ಬಡಬಡಿಸತೊಡಗಿದರು. ಅಕ್ಷರದಾಸೋಹದ ಅಡುಗೆಯ ಪಾರೂಅಕ್ಕ ಓಡಿ ಬಂದು ಅಟೆಂಡರ್ ಬಿದ್ದಪ್ಪನ ಈ ಹೊಸ ಅವತಾರ ಕಂಡು " ದಮ್ಮಯ್ಯ… ಇದ್ ನಂಗಡ ಕುಂಞಬೊಳ್ತು ಚಾಮಿನೇ ಇಕ್ಕು…" ಎಂದು ಕೈಮುಗಿದು ನಿಂತುಬಿಟ್ಟಳು. ಇಡೀ ನಾಟಕವನ್ನು ಹೇಗೋ ಸುಧಾರಿಸಿ ತಲೆತಿರುಗಿ ಬಿದ್ದ ಬಿದ್ದಪ್ಪನನ್ನು ಮತ್ತೆ ಎಚ್ಚರಗೊಳಿಸುವಷ್ಟರಲ್ಲಿ ಎಲ್ಲರಿಗೆ ಸಾಕುಸಾಕಾಗಿ ಬಿಟ್ಟಿತು. ಅಷ್ಟರಲ್ಲಿ ವಿರಾಮದ ವೇಳೆಯಾಗಿ ಹುಡುಗರೂ-ಹುಡುಗಿಯರೂ ಉಚ್ಚೆ ಹೊಯ್ಯುವುದನ್ನೂ , ನೀರು ಕುಡಿಯುವುದನ್ನೂ ಮರೆತು ಅಟೆಂಡರ್ ಬಿದ್ದಪ್ಪನ ಮೈಮೇಲೆ ಬಂದ್ದದ್ದು ಕುಂಞಬೊಳ್ತುವೋ, ಬೀರನೋ, ಅಜ್ಜಪ್ಪದೇವರೋ ಎಂದು ತಮ್ಮತಮ್ಮೊಳಗೇ ವಾದಿಸುತ್ತಾ ತರಗತಿಗೆ ನಡೆದರು.
– ಜಾನ್ ಸುಂಟಿಕೊಪ್ಪ.