ಖಾಲಿ: ಪ್ರಶಸ್ತಿ

ಕನಸ ಕಲ್ಪನೆಗಳೆಲ್ಲಾ ಕರಗಿಹೋಗಿ, ಮನದ ಭಾವಗಳೆಲ್ಲಾ ಬತ್ತಿಹೋಗಿ ಖಾಲಿತನ ಕಾಡುತ್ತಿತ್ತು. ಬರೆಯೋಣವೆಂದರೆ ಬರೆಯಲೇನನ್ನ, ಹಾಡೋಣವೆಂದರೆ ಹಾಡಲೇನನ್ನ ಅನ್ನೋ ದ್ವಂದ್ವ. ಸಖತ್ ಚೆನ್ನಾಗಿ ಬರೆದು ಅದಕ್ಕೇನಾದ್ರೂ ಪುರಸ್ಕಾರಗಳ ಸುರಿಮಳೆಯಾಗಿ ಕೊನೆಗೊಂದು ದಿನ ಅದನ್ನು ವಾಪಾಸ್ ಮಾಡಬೇಕಾಗಬಹುದೆನ್ನೋ ಭಯ ಬರೆಯಲೇ ಬಿಡುತ್ತಿರಲಿಲ್ಲ! ಹೊಸದೇನನ್ನಾದ್ರೂ ಬರೆಯೋ ಬದಲು ಬರೆದುದರ ಬಗ್ಗೆಯೇ ಮತ್ತಿನ್ನೇನ್ನಾದ್ರೂ ಬರೆಯೋಣವಾ ಅನ್ನಿಸಿತು. ವಿಶ್ವವಿದ್ಯಾಲಯಗಳಲ್ಲಿರುವ ಕೃತಿಚೌರ್ಯ ತಂತ್ರಜ್ಜಾನ ಎಲ್ಲಾ ಲೇಖಕರ, ಓದುಗರ ಬಳಿಯೂ ಸದ್ಯಕ್ಕಿಲ್ಲದೇ ನಾ ಕದ್ದಿದ್ದು ಗೊತ್ತಾಗದಿಲ್ಲದಿದ್ದರೂ ಮುಂದೊಂದು ದಿನ ಜನರ ಬಾಯಲ್ಲಿ ಛೀ, ಥೂ ಅನ್ನಿಸಿಕೊಳ್ಳೋ ಬದಲು ಅಂತಹಾ ಪ್ರಯತ್ನ ಮಾಡದೇ ಇರುವುದೇ ಒಳ್ಳೆಯದೆನಿಸಿತು. ಯಾರಿಗಾದರೂ ಒಂದಿಷ್ಟು ಬಯ್ದು  ಬಿಡಲಾ ಅನ್ನಿಸಿತೊಮ್ಮೆ. ಸಖತ್ ಸುಲಭದ ಕೆಲಸ ಅದು. ಅವರು ಆ ಅಧ್ಯಯನ ಮಾಡಿಲ್ಲ,  ಈ ಅಧ್ಯಯನ ಮಾಡಿಲ್ಲ. ಮಾಡಿಲ್ಲದೇ ಈ ಬಗ್ಗೆ ಮಾತನಾಡುತ್ತಿದ್ದಾರೆ ಅಂತ ಅವರು ಮಾತನಾಡಿದ ವಿಷಯದ ಬಗ್ಗೆ ಬಿಟ್ಟು ಅವರ ಬಗ್ಗೆಯೇ ಒಂದು ಘಂಟೆ ಮಾತಾಡಿಬಿಡಬಹುದು.  ಪುಟಗಟ್ಟಲೇ ಬರೆದೂ ಬಿಡಬಹುದು. ಅವರು ಅಧ್ಯಯನ ಮಾಡಿದ್ದಾರಾ ? ಇಲ್ಲವಾ ಅನ್ನೋದನ್ನೂ ಅಧ್ಯಯನ ಮಾಡದೇ. ಅವರ ಮಾತಲ್ಲಿನ, ಬರಹದಲ್ಲಿನ ಯಾವುದೋ ಕೆಲವು ತಪ್ಪುಗಳ ಹಿಡಿದು. ಆದರೆ ಓದೋಕೆ ಬೇಕಷ್ಟಿರುವಾಗ, ನೋಡೋಕೆ ಸಾಕಷ್ಟಿರುವಾಗ, ಕಲಿಯೋಕೆ ಆಯಸ್ಸೇ ಸಾಲದಿಷ್ಟಿರುವಾಗ ನನ್ನ, ನನ್ನೋದುವ, ನೂರಕ್ಕೆ ಒಂದು ಪ್ರತಿಶತವಷ್ಟಾದರೂ ಗೌರವವಿಟ್ಟಿರುವ, ಸ್ನೇಹ, ಸಲಿಗೆಯಿಟ್ಟಿರುವ ಜನರ ಸಮಯ ಹಾಳುಮಾಡಬೇಕೇ ಅನಿಸಿ ಆ ಪ್ರಯತ್ನವನ್ನೂ ಕೈಬಿಟ್ಟೆ. ಮೂಲೆಯಲ್ಲಿ ಗುಡ್ಡೆಬಿದ್ದಿದ್ದ ಕಾಲುಚೀಲಗಳು ನನ್ನೇ ನೋಡುತ್ತಾ ನಗುತ್ತಿದ್ದಂತನಿಸಿತು !

ಸುತ್ತಲೊಮ್ಮೆ ಕಣ್ಣಾಡಿಸಿದೆ. ತೊಳೆಯದೇ ಬಿದ್ದಿದ್ದ ಕಾಲುಚೀಲಗಳು, ಬಟ್ಟೆಗಳು ತಮ್ಮ ಅಸಹಾಯಕತೆಯನ್ನು ನೇತು ಬಿದ್ದಿದ್ದ ಮೊಳೆಯ ಮೇಲೆಯೂ, ಧೂಳು ತುಂಬಿದ್ದ ನೆಲದ ಮೇಲೆಯೋ ತೋರಿಸುವಂತಿದ್ದವು. ಅವುಗಳ ಕಡೆಗೆ ಗಮನ ಹರಿಸಿ ಅದೆಷ್ಟು ದಿನಗಳಾದವು. ಭಗವದ್ಗೀತೆ ಸುಡುವವರ, ಪುರಸ್ಕಾರಗಳ ವಾಪಾಸ್ ಮಾಡುವವರಂತಹ ಸುದ್ದಿಗಳೇ ದೇಶದ ಅತೀ ದೊಡ್ಡ ಸುದ್ಧಿಯೆಂಬಂತೆ ಅದರಲ್ಲೇ ಮೈಮರೆತು ದಿನಗಳಾಗಿ ಹೋಗಿ ಸುತ್ತಣ ವಾಸ್ತವವನ್ನು ಮರೆತ ಮೂರ್ಖತನವನ್ನು ನೆನಪಿಸುತ್ತಿತ್ತವು ! ಅಮ್ಮಾ ಅಮ್ಮಾ, ನಂಗೆ ಶಾಲಾ ಸ್ಪರ್ಧೆಯಲ್ಲಿ ಬಹುಮಾನ ಬರಲಿಲ್ಲ ಅಂತ ಅಳುತ್ತಾ ಬಂದ ಮಗುವಿಗೆ ಸ್ಪರ್ಧಾ ಮನೋಭಾವವನ್ನು ತುಂಬಬೇಕಾದ ತಾಯಿ ಆ ಮಗುವನ್ನು ಹೊತ್ತು ಯಾವುದಾದರೂ ಪುರಸ್ಕಾರ ಕೊಡೋ ಮಂಡಳಿಗೆ ಕರೆದುಕೊಂಡು ಹೋಗೋ ದಿನಗಳು ಬಂದರೆ ಅಚ್ಚರಿಯಿಲ್ಲವೇನೋ ಅನಿಸಿತು ! ಹೇಗಿದ್ದರೂ ವಾಪಾಸ್ ಮಾಡಿದ ಪುರಸ್ಕಾರಗಳಿರುತ್ತದೆಯಲ್ಲ. ಆ ಪುರಸ್ಕಾರಗಳಲ್ಲಿ ಒಂದನ್ನು ಪಡೆದ ಮಗುವಿನ ಅಳುವಾದರೂ ನಿಂತೀತೇನೋ ! 

ತೀರಾ ಅಸಂಬದ್ದವೆನಿಸುತ್ತಿದೆಯಾ ಕಲ್ಪನೆ ? ನಿಮಗಿತ್ತ ಗೌರವಗಳು, ಪುರಸ್ಕಾರ ಯಾವುದೋ ಒಂದು ಮಂಡಳಿ, ಸಂಸ್ಥೆ ಕೊಟ್ಟದ್ದೇ ಇರಬಹುದು. ಆದರೆ ಅದರ ಹಿಂದಿನ ಪ್ರೀತಿ, ಸಂತೋಷಗಳು ಆ ಸಂಸ್ಥೆಯ ಸ್ವತ್ತಲ್ಲ. ಇಡೀ ನಾಡಿನದು, ದೇಶದ್ದು. ಕಂಬಾರರಿಗೆ ಜ್ಞಾನಪೀಠ ಬಂತು ಅಂದಾಗ, ಭೈರಪ್ಪನವರಿಗೆ ಸರಸ್ವತಿ ಸನ್ಮಾನ್ ಸಿಕ್ಕಿತು ಅಂದಾಗ ರಾಜ್ಯಕ್ಕೆ ರಾಜ್ಯವೇ ಖುಷಿ ಪಟ್ಟಿದ್ದಿದೆ. ವಿಚಾರಧಾರೆಗಳಲ್ಲಿ ಎಡಬಲಗಳೆಂಬ ಬೇಧವಿರಬಹುದು, ನವ್ಯ, ನವೀನ, ಬಂಡಾಯಗಳೆಂಬ ಭಿನ್ನ ಪಂಥಗಳೇ ಇರಬಹುದು. ಅದೇನೇ ಇದ್ದರೂ ಭೈರಪ್ಪನವರ ಮಂದ್ರ ಓದಿದವರು ಯು.ಆರ್. ಅನಂತಮೂರ್ತಿಯವರ ಭವ, ಸಂಸ್ಕಾರಗಳನ್ನು ಓದಬಾರದೆಂದೇನಿಲ್ಲ! ಲೇಖಕನ ಸಾರ್ವಜನಿಕ ಜೀವನದ ನಿಲುವುಗಳು ಇಷ್ಟವಾಗದ ಕಾರಣಕ್ಕೆ ಅವನ ಸಾಹಿತ್ಯವನ್ನೇ ದ್ವೇಷಿಸಬೇಕಂತಲೂ, ಅವನ ಸಾಹಿತ್ಯದಲ್ಲಿನ ಅಂಶಗಳು ಇಷ್ಟವಾಗದಿದ್ದ ಮಾತ್ರಕ್ಕೆ ಅವ ನಿಜಜೀವನದಲ್ಲೂ ಖಳನಾಗಬೇಕಂತಿಲ್ಲ. ಲೇಖಕನ ನಿಲುವುಗಳ, ಪೂರ್ವಾಪರಗಳ ಯೋಚಿಸದೇ ಬರೀ ಅವರ ಸಾಹಿತ್ಯವನ್ನೇ ಪ್ರೀತಿಸೋ ಅದೆಷ್ಟೋ ಜನರ ಪ್ರೀತಿಯ ಮೂರ್ತರೂಪ ಆಯಾ ಸಾಹಿತಿಗೆ ಸಿಕ್ಕ ಪುರಸ್ಕಾರಗಳು ! ಅಂತಹ ಪುರಸ್ಕಾರವನ್ನು ವಾಪಾಸ್ ಮಾಡುತ್ತಾರೆಂದರೆ ಅದು ನಾಡಿನ ಜನ ಅವರ ಮೇಲಿಟ್ಟ ಪ್ರೀತಿಯನ್ನು ಧಿಕ್ಕರಿಸಿದಂತಲ್ಲವೇ ? 

ಪ್ರತಿಭಟನೆ ಅವರವರ ಹಕ್ಕು. ಪ್ರತಿಭಟಿಸೋ ಸಲುವಾಗಿ ತೋಚಿದ್ದ ಗೀಚಬಹುದು.ಬಾಯಿಗೆ ಬಂದ ಹೇಳಿಕೆಯನ್ನೂ ಕೊಡಬಹುದು. ಅಭಿವ್ಯಕ್ತಿ ಸ್ವಾತಂತ್ರ್ಯದ ಯುಗವಲ್ಲವೇ ಇದು ! ಯಾಕೆ ವಾಪಾಸ್ ಅಂದರೆ ನಿರ್ಲಿಪ್ತ ಸರ್ಕಾರದ ವಿರುದ್ದ. ಕಲುಷಿತ ಸಮಾಜದ ವಿರುದ್ದ, ಲೇಟಾಗುತ್ತಿರುವ ಪೋಲೀಸ್ ಕಾರ್ಯವಿಧಾನದ ವಿರುದ್ದ, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣದ ವಿರುದ್ದ.ಹೀಗೆ ಹಲವಾರು ಕಾರಣಗಳು. ಯಾವ ಕಾರಣ ?ರಾಜಕಾರಣ ?  ಯಾವ ಸರ್ಕಾರ ? ರಾಜ್ಯ ಸರ್ಕಾರವಾ ? ಕೇಂದ್ರವಾ ? ಇಲ್ಲಾ ಹೋಲ್ ಸೇಲ್ ಎಲ್ಲಾ ಸರ್ಕಾರಗಳಾ ? ಭಿನ್ನ ಭಿನ್ನ ಉತ್ತರಗಳಿಲ್ಲಿ. ಟಿಪ್ಪು ಸುಲ್ತಾನನ ಕೃತಿಯ ಬಗ್ಗೆ, ತುಘಲಕ್ಕಿನ ಬಗ್ಗೆ ಪತ್ರಿಕೆಗಳಲ್ಲಿ ಚರ್ಚೆಯಾದಾಗ ಶುರುವಾದ ಉದ್ದೇಶವನ್ನೇ ಮರೆತು ವ್ಯಕ್ತಿಯ ವೈಯುಕ್ತಿಕ ವಿಚಾರಗಳ ಮಟ್ಟದವರೆಗೂ ಎದ್ದೂ ಬಿದ್ದು ಚರ್ಚೆಯಾಯಿತು. ಅದೇ ಪರಿ, ಈ ಬಾರಿಯೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಖಂಡಿಸಿ ಪತ್ರಿಕೆಗಳಲ್ಲಿ ಚರ್ಚೆ, ಟಿವಿಗಳಲ್ಲಿ ಚರ್ಚೆ, ಸ್ವಾತಂತ್ರ್ಯ ಉದ್ಯಾನದಲ್ಲಿ ಒಂದು ಪ್ರತಿಭಟನೆ, ಒಂದು ರ್ಯಾಲಿ ? ಸಾಹಿತಿಗಳು, ಹಂಗೆಲ್ಲಾ ಬೀದಿಗಳಿದು ಪ್ರತಿಭಟಿಸೋಲ್ಲವಪ್ಪ. ನಮ್ಮದೇನಿದ್ದರೂ ಮೂಖ ಪ್ರತಿಭಟನೆ , ಪ್ರಚಾರಪ್ರಿಯರಲ್ಲ ನಾವು ಅನ್ನುವಂತಹ ಧೋರಣೆ. ಸರಿ, ಪುರಸ್ಕಾರ ವಾಪಾಸ್ ಮಾಡೋದು ವೈಯುಕ್ತಿಕ ತೀರ್ಮಾನ ಪ್ರತಿಭಟನೆ ಅಂದುಕೊಂಡರೂ ಅದರ ಬಗ್ಗೆ ಪತ್ರಿಕೆಗಳಲ್ಲಿ ಬರೋ ಫೋಟೋಗಳನ್ನೂ, ಸುದ್ದಿಗಳನ್ನೂ ಹಾಕಬೇಡಿ ಅಂತ ವಿನಂತಿಸಿಕೊಳ್ಳಬಹುದಲ್ಲಾ ! ಪ್ರಚಾರ ಬೇಡ ಬೇಡ ಎಂದೇ ಪ್ರಚಾರ ಗಿಟ್ಟಿಸೋ ಪರಿಯೇ ಇದು ಎಂದೂ ಒಮ್ಮೊಮ್ಮೆ ಅನುಮಾನ ಹುಟ್ಟುತ್ತೆ ಈ ನಡುವಳಿಕೆಗಳಿಂದ. ನನಗೆ ದಕ್ಕಿದ ಪುರಸ್ಕಾರ ಸಮಸ್ತ ಕನ್ನಡಿಗರಿಗೆ ಸಿಕ್ಕ ಸನ್ಮಾನ ಅಂತ ಹೇಳಿಕೊಳ್ಳೋ ಸಾಹಿತಿ ಅದರ ವಾಪಾಸ್ ಮಾಡೋದರಿಂದ ಆ ಸಮಸ್ತ ಕನ್ನಡಿಗರಿರೂ ತನಗಾದಷ್ಟೇ ನೋವುಂಟಾಗುತ್ತೆ ಅಂತ ಅರಿಯೋಲ್ಲವೇಕೆ ? ಪ್ರಪಂಚದಲ್ಲಿರೋ ಬುದ್ದಿಯೆಲ್ಲಾ ತಮ್ಮಲ್ಲೇ ಇದೆ ಎಂದುಕೊಳ್ಳೋ ಬು.ಜೀಗಳಿಗೆ ಬುದ್ದಿ ಹೇಳುವಷ್ಟು ಬುದ್ದಿ ಯಾರಲ್ಲೂ ಇಲ್ಲ ಬಿಡಿ!

 ಕಾವೇರಿ ನೀರಲ್ಲಿ ರಾಜ್ಯಕ್ಕೆ ಅನ್ಯಾಯವಾಯಿತೆಂದಾಗ, ರೈತರು ಫಸಲಿಲ್ಲದೇ, ಬೆಳೆದಿದ್ದಕ್ಕೆ ಬೆಲೆ ಸಿಗದೇ ಸಾಲು ಸಾಲು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಗ ಸರ್ಕಾರಗಳ ನಿರ್ಲಕ್ಷ್ಯವನ್ನು ಖಂಡಿಸಿ ವಾಪಾಸ್ ಚಳುವಳಿ ನಡೆಯಿತೇ ? ಧಕ್ಷ ಅಧಿಕಾರಿಗಳ ಹಠಾತ್ ವರ್ಗಾವರ್ಗಿ ನಡೆದಾಗ, ಹತ್ಯೆಯೇ ನಡೆದಾಗ ? ಅದರ ವಿರುದ್ದ ಜನಸಾಮಾನ್ಯರೇ ಧಂಗೆಯೆದ್ದಿದ್ದರೂ ಸಾಹಿತಿಗಳು ?. ಸಾಹಿತಿಯೊಬ್ಬ ತನ್ನ ಪಾಡಿಗೆ ತಾನು ಬರೆಯುತ್ತಾ ಇರುತ್ತಾನಪ್ಪಾ. ಸಮಾಜದ ಆಗುಹೋಗುಗಳಿಗೂ ಅವನಿಗೂ ಸಂಬಂಧ ಇರಲೇಬೇಕಂತಿಲ್ಲ !  ಪ್ರವಾಹ ಪರಿಹಾರ ನಿಧಿಗಳಿಗೆ ಸಂಗ್ರಹ ನಡೆಯುತ್ತಿದ್ದಾಗ , ರಕ್ತದಾನ ಶಿಬಿರಗಳು ನಡೆದಾಗ ಅದನ್ನ ಬೆಂಬಲಿಸಿ ? ಊಹೂಂ. ಸಾಹಿತಿಗಳು ತೆರೆ ಮರೆಯಲ್ಲಿರುತ್ತಾರಪ್ಪಾ. ಪತ್ರಿಕೆಗಳ ಮುಖಪಟದಲ್ಲಿ ಫೋಟೋ ಬಂದರೆ ಮಾತ್ರ ನಿಮಗೆ ಗೊತ್ತಾಗುತ್ತೆ. ಬಾರದಿದ್ದ ಮಾತ್ರಕ್ಕೆ ಸಾಹಿತಿಗಳು ಏನೂ ಮಾಡುತ್ತಿಲ್ಲವೆಂದೇ ? ಅವೆಲ್ಲಾ ಹೋಗಲಿ. ಸಾಹಿತ್ಯ ಕ್ಷೇತ್ರಕ್ಕೇ ಸಂಬಂಧವಿಲ್ಲದ ಘಟನೆಗಳು ಅಂದುಕೊಳ್ಳೋಣ.  ಹಿಂದೆ ಖ್ಯಾತ ಸಾಹಿತಿಯೋರ್ವರ ಮನೆಯ ಮೇಲೆ ಕಲ್ಲುಗಳು ಬೀಳುತ್ತಿದ್ದರೆ, ಅವರ ಮೇಲೆ ಧಾಳಿಗಳು ನಡೆಯುತ್ತಿದ್ದರೆ ಅದನ್ನು ವಿರೋಧಿಸಿ ಈ ಪರಿಯ ವಾಪಾಸ್ ಚಳುವಳಿಗಳು ನಡೆದಿದ್ದವಾ ? ಬಾಂಗ್ಲಾ ಮೂಲದ ಬ್ಲಾಗರ್ಗಳನ್ನ ಮತಾಂಧ ಐಸಿಸ್ ಉಗ್ರರು ಕೊಲ್ಲುತ್ತಿದ್ದರೆ ಅದನ್ನು ವಿರೋಧಿಸಿ ಈ ವಾಪಾಸ್ ಚಳುವಳಿ ನಡೆಯಿತೆ ? ಈ ವರ್ಷವೇ ಮೂರ್ನಾಲ್ಕು ಲೇಖಕರನ್ನು ಕೊಂದದ್ದು ಒಂದಿಷ್ಟು ಪತ್ರಿಕೆಗಳಲ್ಲಿ ಮೂಲೆಯೊಂದರ ಸುದ್ದಿಯಾಯಿತಷ್ಟೆ. ಅಷ್ಟಕ್ಕೂ ಪ್ರಪಂಚದಲ್ಲಿ ಎಲ್ಲೋ ನಡೆದ ಘಟನಾವಳಿಗಳಿಗೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು ಬಿಡಿ !

ತುಂಬಿದ ಕೊಡ ತುಳುಕುವುದಿಲ್ಲ ಅನ್ನೋ ಗಾದೆಯೇ ಇದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಖಾಲಿಯಾಗದ ಮನಸ್ಸು ಬೆಳೆಯೋದಿಲ್ಲ ಅಂತಲೂ ಗಾದೆ ಸೃಷ್ಠಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಇಂಗ್ಲೀಷಿನಲ್ಲಿ ವಿಶ್ವದಾದ್ಯಂತ ಬರೀತಾರೆ, ಹಿಂದಿಯಲ್ಲಿ ಭಾರತದಾದ್ಯಂತ ಬರೀತಾರೆ. ಅಲ್ಲೆಲ್ಲೂ ಇಲ್ಲದಷ್ಟು ಗುದ್ದಾಟಗಳು ಕನ್ನಡದಲ್ಯಾಕೆ ಅಂತ ಗೆಳೆಯರು ಪ್ರಶ್ನಿಸಿದಾಗ ನಿರುತ್ತರ ನಾನು. ವಿಶ್ವದಲ್ಲೆಲ್ಲಿಯೂ ಇಲ್ಲದ ವಾಪಾಸ್ ಚಳುವಳಿ ಭಾರತದಲ್ಲಿ ಮಾತ್ರ ಯಾಕೆ ನಡೀತಿದೆ ? ಇಲ್ಲಿನ ಸರ್ಕಾರ ವಿಶ್ವದಲ್ಲೇ ಅತ್ಯಂತ ಹೆಚ್ಚು ಸೋಂಬೇರಿ, ನಿದ್ದೆ ಮಾಡೋ ಸರ್ಕಾರವೇ ಅಂತ ಯಾರಾದರೂ ಪ್ರಶ್ನಿಸಿದರೆ ತಲೆತಗ್ಗಿಸಬೇಕಾಗುತ್ತದೆ. ಏನೋ, ಬರೀತೀಯಂತೆ ನೀನು, ಹಂಗಾದ್ರೆ ನೀನೂ ಒಬ್ಬ ಸಾಹಿತಿ ಅಂತಾಯ್ತು ಅಂತ ಪರಭಾಷಾ ಗೆಳೆಯರು ಹೇಳಿದ್ರೆ ಹೇ, ಖಂಡಿತಾ ಇಲ್ಲಪ್ಪ. ಸುಮ್ನೆ ಎಲ್ಲಾದ್ರೂ ಒಂದಿಷ್ಟು ಗೀಚುತ್ತಿರುತ್ತೇನೆ ಅಂತ ತಪ್ಪಿಸಿಕೊಳ್ಳಬೇಕಾದ ಪರಿಸ್ಥಿತಿಯೂ ಬಂದಿದೆ. ಅಷ್ಟಕ್ಕೂ ವಾಪಾಸ್ ಚಳುವಳಿಯ ಮುಂದಾಳತ್ವ ವಹಿಸಿರುವ ಬು.ಜೀಗಳ ಬಗ್ಗೆ ವಿಮರ್ಷೆ ಮಾಡುವಷ್ಟು ಅಧ್ಯಯನ, ಅರ್ಹತೆ ಖಂಡಿತಾ ನನ್ನಲ್ಲಿಲ್ಲ ಬಿಡಿ !

ಪರಸ್ಪರರೆಡೆಗಿನ ಅಸೂಹೆ, ಅಸಹಿಷ್ಣುತೆಯೇ ನಮ್ಮಲ್ಲಿನ ಅದೆಷ್ಟೋ ಕಚ್ಚಾಟಗಳಿಗೆ ಕಾರಣವಲ್ಲವಾ ಎಂದನಿಸುತ್ತೆ ಎಷ್ಟೋ ಸಲ. ನಾ ಸರಿ ಅನ್ನೋದು ಸರಿ. ಆದ್ರೆ ಅವನೂ ಸರಿಯಾಗಿರಬಹುದಲ್ವಾ ಅಂತ್ಯಾಕೆ ಯೋಚಿಸೋದಿಲ್ಲ ನಾವು. ನಾವು ಸದಾ ನಮ್ಮ ಆಲೋಚನಾ ಸಮುದ್ರದಲ್ಲೇ ಮುಳುಗಿ ಹೋಗಿರುತ್ತೇವೆ. ಹೊರಗಿನದಕ್ಕೆ ಜಾಗವಿಲ್ಲವಿಲ್ಲಿ. ಒಂಥರಾ ಸದಾ ತುಂಬಿದ ಹೊಟ್ಟೆಯ ಜೀವನ. ಕಣ್ಣು ಕಟ್ಟಿದ ಕುದುರೆಯಂತೆ ತನ್ನ ಕಣ್ಣೆದುರಿಗಿದ್ದದ್ದು ಮಾತ್ರವೇ ಸತ್ಯವೆಂಬ ಭ್ರಮೆಯಲ್ಲಿ ಅತ್ತಲೇ ನಮ್ಮ ನಾಗಾಲೋಟ. ಆದರೆ ಒಂದಂತೂ ಸತ್ಯ. ಅದೊಂದೇ ಸತ್ಯ ಅಂತಲ್ಲ ! ಹೊಟ್ಟೆ ಖಾಲಿಯಾಗದೇ ಹಸಿವಾಗೋದಿಲ್ಲ, ಹಸಿವಾಗದೇ ನಾವು ಹೊಟ್ಟೆಗಾಗಿನ ಒದ್ದಾಟ, ದುಡಿಮೆ ನಡೆಸೋದಿಲ್ಲ. ಒಂದಲ್ಲ ಒಂದು ರೀತಿಯ ದುಡಿಮೆಯಿಲ್ಲದ ಖಾಲಿ ಜೀವನವನ್ನು ಕಲ್ಪಿಸಿಕೊಳ್ಳೋದಕ್ಕೂ ಆಗೋದಿಲ್ಲ..ಇತ್ಯಾದಿ, ಇತ್ಯಾದಿ.ಅದೇ ತರಹ ಪೂರ್ವಾಗ್ರಹಗಳಿಂದ ಪೀಡಿತ ಮನ. ನಾನು ಇವರದ್ದನ್ನು ಮಾತ್ರವೇ ಓದುತ್ತೇನೆ , ಉಳಿದವರದ್ದೆಲ್ಲಾ ಠೀಕಿಸುತ್ತೇನೆ ಅಂತ ಮುಂಚೆಯೇ ನಿರ್ಧರಿಸಿಕೊಳ್ಳೋ ಮನಕ್ಕೆ ಹೊಸತನಕ್ಕೆ ತುಡಿಯೋಕೆ ಯಾವತ್ತೂ ಸಾಧ್ಯವಾಗೋದಿಲ್ಲ. ಕಾಲ ಕ್ರಮೇಣ ಅದೇ ಏಕತಾನತೆ ಕಾಡೋಕೆ ಶುರುವಾಗುತ್ತೆ. ಕನಸುಗಳೆಲ್ಲಾ ಖಾಲಿಯಾದ ಹಾಗೆ, ಭಾವನೆಗಳೆಲ್ಲಾ ಬತ್ತಿ ಹೋದ ಹಾಗೆ !

ಮಣ್ಣಾದ ಸಾಕ್ಸಿಗೆ, ಬಟ್ಟೆಗಳಿಗೆ ಸೋಪು ನೀರು ಹೇಗೆ ಒಂದು ಹೊಸ ಜೀವ ಕೊಡತ್ತೋ ಹಾಗೇ ನಮ್ಮ ಮನದ ಭಾವಗಳೂ ಸಹ. ಒಂದಿಷ್ಟು ಹಳೆಯ ಕೊಳೆಗಳನ್ನು, ದ್ವೇಷ, ಸಿಟ್ಟು ಅಸೂಹೆಗಳನ್ನ ನಮ್ಮಲ್ಲಿಂದ ಹೊರದಬ್ಬೋ ತನಕ ಹೊಸತನಕ್ಕೆ ಜಾಗವಿಲ್ಲವಿಲ್ಲಿ.  ಹಿಮಾಲಯದಲ್ಲೇನಿದೆ ಬೋರು ? ಬರೀ ಬಿಳೀ ಮುದ್ದೆಗಳು, ಬರೀ ಮರುಭೂಮಿ , ಎಲ್ಲೋ ಒಂದಿಷ್ಟು ಹಸಿರಷ್ಟೇ ಅಂತ ಬೇಸರಿಸೋ ಮನಕ್ಕೇ ಹೊಸತನದ ತುಡಿತ ಹತ್ತಿದಾಗ  ಬೆಳಗ್ಗೆ ಪೇಪರ್ ಟೌನ್ ಅನ್ನೋ ಇಂಗ್ಲೀಷು, ಮಧ್ಯಾಹ್ನ ತೆಲುಗಿನ ರುದ್ರಮಾ ದೇವಿ, ಸಂಜೆ ಹಿಂದಿಯ ಜಜ್ಬಾ ಚಿತ್ರ ನೋಡಿದೆ ಅಂತ ತನ್ನ ಪಾಡಿಗೆ ಒಂದು ಸ್ಟೇಟಸ್ ಹಾಕಿಕೊಳ್ಳೋ ಹುಡುಗನೊಬ್ಬನ ಸ್ಟೇಟಸ್ಸೂ ಆಕರ್ಷಕವೆನಿಸುತ್ತೆ. ಅಲ್ಲೊಂದು ಸಾಧ್ಯತೆಗಳ ಸೌಧವಿರಬಹುದಾ ಅನಿಸುತ್ತೆ. ಹರುಕು ಕಾಲುಚೀಲವೂ ಒಂದು ಹೊಸ ಕತೆ ಹೇಳತೊಡಗುತ್ತೆ. ಅದಿಲ್ಲದಿದ್ದರೆ ಕತ್ತೆತ್ತಿದತ್ತೆಲ್ಲ ಖಾಲಿಯೋ ಖಾಲಿ. 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
8 years ago

ತುಂಬಿದ ಕೊಡ ತುಳುಕುವುದಿಲ್ಲ. ಹಾಗೆಯೇ ಖಾಲಿ ಕೊಡವೂ ಕೂಡ.ಹರುಕು ಕಾಲುಚೀಲವೂ ಒಂದು ಹೊಸ ಕತೆ ಹೇಳತೊಡಗುತ್ತೆ. ಅದಿಲ್ಲದಿದ್ದರೆ ಕತ್ತೆತ್ತಿದತ್ತೆಲ್ಲ ಖಾಲಿಯೋ ಖಾಲಿ. 

1
0
Would love your thoughts, please comment.x
()
x