ಮುದ್ದು ರಾಜಕುಮಾರ….
ಪ್ರೀತಿಯ ಹೊರತಾಗಿ ನಿನ್ನಿಂದ ನನಗೆ ಯಾವ ನಿರೀಕ್ಷೆಗಳು ಇಲ್ಲ. ನೀನು ಸಿರಿವಂತನಲ್ಲ ಎಂಬ ಸತ್ಯವು ಗೊತ್ತಾದ ಮೇಲೆಯೇ ನಾನು ನಿನ್ನನ್ನು ಮೆಚ್ಚಿದ್ದು. ನಿನ್ನನ್ನು ಪ್ರೀತಿಸಿದ್ದು. ನಿನ್ನಲ್ಲಿ ನನಗೆ ತುಂಬಾ ಇಷ್ಟವಾದ ಗುಣವೇನು ಗೊತ್ತಾ? ನೀನು ಇರುವುದನ್ನ ಇರುವಂತೆಯೇ ಹೇಳಿಬಿಡುತ್ತೀಯ. ಯಾವ ಮಾತಿಗೂ ಕೂಡ ಸುಳ್ಳು ಕಪಟತೆಗಳ ಬಣ್ಣ ಲೇಪಿಸುವುದಿಲ್ಲ. ಸುಳ್ಳು ಸುಳ್ಳೇ ಆಡಂಬರದ ಮಾತುಗಳನ್ನಾಡಿ ಒಂದು ಹೆಣ್ಣಿನ ಮನವೊಲಿಸಿಕೊಳ್ಳುವ ಪ್ರಯತ್ನವನ್ನು ನೀನು ಮಾಡಲಿಲ್ಲ. ಮಾಡುವುದಿಲ್ಲ. ಇರುವುದರಲ್ಲಿಯೇ ಸಂತೃಪ್ತಿಯಿಂದ ಬದುಕುವ ನಿನಗೆ ಸೋತುಬಿಟ್ಟೆ. ನಾ ನಿನ್ನ ಪೀತಿಯ ದಾಸಳಾದೆ.
ಇನ್ನೊಂದು ವಿಷಯ ಈ ಮೇಲೆ ಹೇಳಿದ ನಿನ್ನೆಲ್ಲ ಗುಣಗಳು ನನ್ನಪ್ಪನಲ್ಲೂ ಇದ್ದವು. ಆದರೆ ಈಗ ಅವರಿಲ್ಲ ಕಣೋ. ನಾನೀಗ ಕಳೆದುಕೊಂಡಿರುವ ಅಪ್ಪನನ್ನ ನಿನ್ನಲ್ಲಿ ಕಾಣುತ್ತಿರುವೆ. ನೀನೂ ಸಹ ನನ್ನನ್ನು ಅಷ್ಟೇ ಪ್ರೀತಿಸುವೆ. ಕಾಳಜಿ ತೋರುವೆ. ನಿಜಕ್ಕೂ ನಿನ್ನ ಪ್ರೀತಿ ಸಿಕ್ಕಿದ್ದು ನನ್ನ ಪುಣ್ಯ.
ನಿನ್ನ ಪರಿಚಯವಾಗುವ ಮೊದಲು ನನಗೆ ತುಂಬಾನೇ ಸ್ನೇಹಿತರು ಮತ್ತು ಪರಿಚಿತರಿದ್ದರು. ಅವರೊಟ್ಟಿಗೆ ಖುಷಿಯಿಂದಲೇ ನಾನಿದ್ದೆ. ಆದರೆ ನೀನು ಸಿಕ್ಕಿದ ಮೇಲೇ ಬರೀ ನೀನಷ್ಟೇ ನನ್ನ ಜಗತ್ತು. ನಿನ್ನ ಹೊರತು ಮತ್ತೇನು ಬೇಡ ಅನ್ನಿಸಲಾರಂಭಿಸಿದೆ…
ಆಗಾಗ ನಿನ್ನನ್ನು ತುಂಬಾನೇ ಕಾಡಿಸಿದೆ, ಪೀಡಿಸಿದೆ, ನೋಯಿಸಿದ್ದೇನೆ. ಆದರೂ ನೀನು ಅದ್ಯಾವುದನ್ನೂ ಮನಸಿಗೆ ಹಚ್ಚಿಕೊಳ್ಳದೇ ಮನಸಾರೆ ಪ್ರೀತಿಸುತ್ತಿರುವೆ. ಸದಾ ನನ್ನನ್ನು ನಗಿಸುವೆ, ಧ್ಯಾನಿಸುವೆ. ನಿಜಾ ಹೇಳಬೇಕೆಂದರೆ ನಿನ್ನದು ಬರೀ ಪ್ರೀತಿಯಲ್ಲ ಕಣೋ.. ಬರೀ ಪ್ರೀತಿಯೆನ್ನಲು ಮನಸೇಕೋ ಒಪ್ಪುತ್ತಿಲ್ಲ. ನಿಜಾ ನಿನ್ನದು ಬರೀ ಪ್ರೀತಿಯಲ್ಲ, ಪ್ರೀತಿ ತುಂಬಿರುವ ಆರಾಧನೆ.
ಮನೆಯಲ್ಲಿ ಒಬ್ಬಳೇ ಮಗಳೆಂಬ ಕಾರಣಕ್ಕೆ ತುಂಬ ತುಂಬಾ ಮುದ್ದಿನಿಂದಲೇ ಬೆಳೆಸಿದ್ದಾರೆ. ಅದಕ್ಕೆ ಚಿಕ್ಕವಳಿಂದಲೂ ನಾ ಸ್ವಲ್ಪ ಹಟಮಾರಿ. ಇದನ್ನ ಹೇಳುವ ಮೊದಲೇ ಅರ್ಥ ಮಾಡಿಕೊಂಡೆ. ನಾನೆಷ್ಟೇ ಜಗಳವಾಡಿ ಹಟ ಮಾಡಿದರೂ ಮಗುವಿನಂತೆ ಮುದ್ದಿಸುವ ನೀನು ನನಗೆ ಅಮ್ಮನಾಗುವೆ.
ನನ್ನ ತಲೆಯನ್ನು ನಿನ್ನ ಹೆಗಲಿಗಿಟ್ಟ ಕ್ಷಣ ಜಗದ ನೋವುಗಳನ್ನೆಲ್ಲ ಮರೆತುಬಿಡುವೆ ಕಣೋ. ನಿನ್ನ ನಿಸ್ವಾರ್ಥ ಪ್ರೀತಿ, ಸಹನಶೀಲತೆಗಳು ನನ್ನಲ್ಲಿ ನಿನ್ನ ಮೇಲಿನ ಪ್ರೀತಿಯ ಜೊತೆಗೆ ಗೌರವಗಳನ್ನೂ ಮೂಡಿಸಿವೆ..
ಮುದ್ದಿನ ಹುಡುಗ ಆದಷ್ಟು ಬೇಗ ನಮ್ಮ ಮನೆಗೆ ಬಂದು ಅಮ್ಮನೊಂದಿಗೆ ಮಾತಾಡಿ ಒಪ್ಪಿಸು. ಹೆಚ್ಚು ದಿನ ನಿನ್ನಿಂದ ದೂರವಿರಲು ಸಾಧ್ಯವಿಲ್ಲ. ಕದ್ದು ಭೇಟಿಯಾಗುವುದು, ಜೊತೆಗೆ ನೀನಿಲ್ಲದ ವಿರಹದ ಕ್ಷಣಗಳು ಸಾಕೆನಿಸಿವೆ. ನನ್ನ ಕೊನೆಯುಸಿರವರೆಗೂ ನಿನ್ನ ಪ್ರೀತಿಯನ್ನ ಅನುಭವಿಸಬೇಕು. ನಿನ್ನ ಕಾಳಜಿಯಲ್ಲಿ ನೆಮ್ಮದಿಯಿಂದ ಬದುಕಬೇಕು. ಮದುವೆಯಾದ ಮೇಲೆ ನಿನ್ನನ್ನೂ ಸಹ ಚೆನ್ನಾಗಿ ನೋಡಿಕೊಳ್ಳಬೇಕೆಂದೇ ಕಾಫೀ, ಟೀ, ತಿಂಡಿ, ಅಡುಗೆಗಳ ಮಾಡುವುದನ್ನೆಲ್ಲ ಕಲಿತಿದ್ದೇನೆ. ಹೇಳಬೇಕಾದ್ದನ್ನೆಲ್ಲ ಹೇಳಿಯಾಗಿದೆ. ನಿನಗರ್ಥವಾಗಿದೆ ಅಂದುಕೊಂಡು, ಕೊನೆಯಲ್ಲಿ ಹಣೆಗೊಂದು ಹೂಮುತ್ತನಿಡುವ ಮೂಲಕ ಪತ್ರವನ್ನು ಮುಗಿಸುತ್ತಿರುವೆ…
ನಿನ್ನ ಮನೆ ಮನದ ರಾಣಿಯಾಗುವ ಕನಸಿನೊಂದಿಗೆ ಕಾತರದಿಂದ ಕಾಯುತ್ತಿರುವ….
-ನಿನ್ನ ಪೆದ್ದು ರಾಜಕುಮಾರಿ
ಆದಷ್ಟು ಬೇಗ … ರಾಜಕುಮಾರ ಸಿಗಲಿ ಎಂದು ಹಾರೈಸುತ್ತೇನೆ. ಪ್ರೇ(ಹೇ)ಮ ಪತ್ರ…… ಚೆನ್ನಾಗಿದೆ…..
manada mathugalu patrada moolaka heliyaagide.. bega ondaagi..
shubhavaagali…
chendada baraha…