ತಿಂಗಳಿಗೋ ಎರಡು ತಿಂಗಳಿಗೋ ಒಮ್ಮೆ ಹೇರ್ ಕಟ್ ಮಾಡಿಸುವುದು, ವಾರಕ್ಕೋ ಹದಿನೈದು ದಿನಕ್ಕೋ ಟ್ರಿಮ್ ಅಥವಾ ಶೇವ್ ಮಾಡಿಸೋದು ಅಂದ್ರೆ ಸುಮ್ನೆ ಅಲ್ಲ. ಅನುಭವಿಸಿದವರಿಗೇ ಗೊತ್ತು ಅದರ ಸುಖ-ದುಃಖ.
ಬೆಳಿಗ್ಗೆ ಎದ್ದು ಮುಖಕ್ಕೆ ಮತ್ತು ……ಕ್ಕೆ ನೀರು ಹಾಕಿಕೊಂಡು(ಪಾಶ್ಚಿಮಾತ್ಯ ಸಂಸ್ಕøತಿ ಅಳವಡಿಸಿಕೊಂಡವರು ಟಿಶ್ಯೂ ಪೇಪರ್ ಬಳಸಬಹುದು!) ಹೇರ್ ಡ್ರೆಸಸ್ ಎಂಬ ಜಗತ್ತಿನೊಳಗಿನ ಜಗತ್ತಿಗೆ ಪ್ರವೇಶಿಸಿದರೆ ಸಾಕು, ಅಲ್ಲಿ ನಾನಾ ನಮೂನೆಯ ವಿಚಾರಗಳು ಮೈ ಕೊಡವಿ ಮೇಲೇಳುತ್ತವೆ. ಒಬಾಮಾ ನ್ಯೂಸ್‍ನಿಂದಿಡಿದು ಹೊಸ ಲೋಕಲ್ ಲವ್ ಸ್ಟೋರಿಯವರೆಗೆ ಎಲ್ಲವೂ ಮುಕ್ತ ಚರ್ಚೆಗೆ ಒಳಪಡುತ್ತವೆ.
ಬಿಸಿ ಬಿಸಿ ಚರ್ಚೆ ನಡೆಯುವ ಸಂದರ್ಭದಲ್ಲೇ ದೊಡ್ಡ ಮನುಷ್ಯನೆಂಬಂತೆ ಬಿಲ್ಡಪ್ ಕೊಡುತ್ತ ಆಸಾಮಿಯೊಬ್ಬ ಎಂಟ್ರಿ ನೀಡುತ್ತಾನೆ. ಕ್ಷೌರ ಮಾಡುವವರಿಗೆ ರಶ್ಶೇನ್ರಿ… ಅರ್ಜೆಂಟ್ ಕೆಲ್ಸ ಇತ್ತು… ಎಷ್ಟೊತ್ತಾಗುತ್ತೆ ಅಂತ ಒಂದೇ ಸಮನೆ ಕೇಳುತ್ತಾನೆ. ಅದಕ್ಕವರು ಬಂದು ಕೂರಿ ಸರ್, ಇನ್ನೇನು ಒಂದಿಬ್ಬರಷ್ಟೇ ಎಂದು ಪೂಸಿ ಹೊಡೆದು ತೆಪ್ಪಗೆ ಬಂದು ಕುಳಿತುಕೊಳ್ಳುವಂತೆ ಮಾಡುತ್ತಾರೆ.
ಕೃಷ್ಣ ಸುಂದರರು ಮುಖಕ್ಕೆ ಫೇಶಿಯಲ್ ಮಾಡಿಸಿಕೊಂಡು, ಜಾಹಿರಾತುಗಳಲ್ಲಿ ಕಂಡಂತೆ ಬೆಳ್ಳಗಾಗುವೆವೆಂದುಕೊಂಡು ಭಾವಿಸಿ ಒಳಗೊಳಗೇ ಸಂಭ್ರಮಿಸುತ್ತಿರುತ್ತಾರೆ. ನಿರೀಕ್ಷೆ ಸುಳ್ಳಾದ ಮೇಲೆ ‘ಕರಿಯಾ ಐ ಲವ್ ಯೂ…’ ಹಾಡು ನೆನಪಾಗಿ ತಮಗೆ ತಾವೇ ನಗುವಂತೆ ಅಳುತ್ತ ಸಂತೈಸಿಕೊಳ್ಳುತ್ತಾರೆ.
ವಯೋಮಾನದಲ್ಲಿ ಹಾಫ್ ಸೆಂಚುರಿ ಬಾರಿಸುವ ಮುನ್ನವೇ ಬಾಂಡ್ಲಿಯಾದವರು, ಇರುವ ನಾಲ್ಕಾರು ಕೂದಲುಗಳನ್ನೇ ಉಳಿಸಿಕೊಳ್ಳುವ ಸಲುವಾಗಿ ಕ್ಷೌರಿಕರ ಸಲಹೆ ಕೇಳುತ್ತಿರುತ್ತಾರೆ. ಕೂದಲಿದ್ದೂ ಬೆಳ್ಳಗಾದವರು ಬಣ್ಣ ಬಳಿಸಿಕೊಂಡು ತಮ್ಮ ಯೌವನ ಕಾಪಾಡಿಕೊಳ್ಳುವ ಕಸರತ್ತು ನಡೆಸುತ್ತಿರುತ್ತಾರೆ. ಹಾಗೇ ಒಂದೇ ಸಮನೆ ನುಣ್ಣಗೆ ಕೆತ್ತುವ ಮತ್ತು ಕೆತ್ತಿಸಿಕೊಳ್ಳುವ ಮನಸ್ಥಿತಿಯೂ ಮರೆಯಾಗಿದೆ.
ಲವ್ ಮಾಡಲು ಹುಡುಗಿಯರನ್ನು ಇಂಪ್ರೆಸ್ ಮಾಡುವ ರೀತಿಯಲ್ಲಿ ಹೇರ್‍ಸ್ಟೈಲ್ ಇರಬೇಕೆಂದು ಮೊದಲೇ ಡಿಸೈಡ್ ಮಾಡಿಕೊಂಡು ಬಂದ ಹುಡುಗರು ನಾನಾ ಸ್ಟೈಲ್‍ಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅವರ ಆಸೆಗೆ ಒಂಚೂರು ಮಸಾಲೆ ಬೆರೆಸುವ ಕ್ಷೌರಿಕರು ಆ ಸ್ಟೈಲ್ ಮಾಡ್ಸಿದ್ರೆ ಹಂಗೆ ಕಾಣ್ತೀರ ಸರ್, ಈ ಸ್ಟೈಲ್ ಮಾಡ್ಸಿದ್ರೆ ಹಿಂಗೆ ಮಿಂಚ್ತೀರ ಸರ್ ಅಂತ ರೈಲು ಹತ್ತಿಸಿ ಒಳಗೊಳಗೇ ನಗ್ತಾರೆ.
ಈ ನಡುವೆ ಫೆಮಿನಾ, ವುಮೆನ್ ಎರಾ ಮ್ಯಾಗಜೀನ್‍ಗಳ ಮೇಲೆ ಕಣ್ಣಾಡಿಸುತ್ತ ಅದರೊಳಗೆ ಮುಳುಗಿದ್ದವರು ಇದ್ದಕ್ಕಿದ್ದಂತೆ ಜ್ಞಾನೋದಯವಾದಂತೆ ವಾಚ್‍ನಲ್ಲಿ ಟೈಮ್ ನೋಡಿ ಅಯ್ಯೋ ಲೇಟಾಯ್ತು. ಅರ್ಜೆಂಟ್ ಕೆಲ್ಸ ಇತ್ತು ಅಂತೇಳಿ ಹಳೆ ರಾಗದಲ್ಲೇ ಹಾಡೋಕೆ ಶುರು ಮಾಡ್ತಾರೆ. ಅವರೊಂದಿಗೆ ಮತ್ತಷ್ಟು ಮಂದಿ ದನಿಗೂಡಿಸುತ್ತಾರೆ. ಅವರಿಗೆ ಸಪೋರ್ಟ್ ಮಾಡುವ ಸಲುವಾಗಿ ಅಲ್ಲ, ತಮ್ಮ ಬೇಳೆ ಬೇಯಿಸಿಕೊಳ್ಳಲು!
ಹೇರ್ ಡ್ರೆಸಸ್ ಅಂದ್ರೆ ಅನುಭವ ಮಂಟಪ, ಬಯಲು ರಂಗಮಂದಿರವಿದ್ದಂತೆ. ಕ್ಷಣಕ್ಷಣಕ್ಕೂ ಪಾತ್ರಗಳು ಒಳಪ್ರವೇಶಿಸುತ್ತಿರುತ್ತವೆ, ತಮ್ಮ ಪಾಡಿಗೆ ತಾವು ಸೈಲೆಂಟಾಗಿ ನಿರ್ಗಮಿಸುತ್ತಿರುತ್ತವೆ. ಅಲ್ಲಿ ನಿರ್ದೇಶಕರಿರುವುದಿಲ್ಲ. ಯಾರೊಬ್ಬರೂ ನಾಟಕ ರಚಿಸುವುದಿಲ್ಲ. ಎಲ್ಲವನ್ನೂ ನಟರೇ(ಕ್ಷೌರ ಮಾಡಿಸಿಕೊಳ್ಳಲು ಹೋಗುವವರು) ನಿಭಾಯಿಸುತ್ತಾರೆ.
*****
Good Observation
ಒಳ್ಳೆಯ ಬರಹ.