ಅದೊಂದು ಸಾದಸೀದಾ ಬಿಲ್ಡಿಂಗು. ಹಗಲಲ್ಲಿ ಹಾಗೆ ಸುಮ್ಮನಿರುತ್ತೆ. ಬೆಳಕು ತೆರೆಮರೆಗೆ ಸರಿದು ಕತ್ತಲ ಕಾರುಬಾರು ಶುರುವಾದರೆ, ಅದು ವಿಶಿಷ್ಟ ಬಣ್ಣ ಬಳಿದುಕೊಂಡು ಬಿಡುತ್ತೆ. ಆ ಬಣ್ಣ ಹಗಲಿಗೆ ಅಪರಿಚಿತ.
ಆ ಬಿಲ್ಡಿಂಗಿನ ಕಾಂಪೌಂಡಿನೊಳಕ್ಕೆ ಕತ್ತಲು ಕವಿದಂತೆಲ್ಲಾ ವಾಹನಗಳು ಬಂದು ನಿಲ್ಲುತ್ತವೆ. ವಯಸ್ಸಾದರೂ ಮನೆಯಲ್ಲಿ ಮುದುರಿಕೊಂಡು ಕೂರಲು ಬಯಸದ ಅಥವಾ ಹಾಗೆ ತೆಪ್ಪಗಿರುವುದು ತಮ್ಮ ಜಾಯಮಾನಕ್ಕೆ ಒಗ್ಗುವುದಿಲ್ಲ ಎಂದು ತೀರ್ಮಾನಿಸಿದ ವಯೋವೃದ್ಧರು ವಾಹನಗಳ ಮೇಲೇರಿ ಅಲ್ಲಿಗೆ ಬರುತ್ತಾರೆ.
ತುಂಬಾ ಗೌರವಾನ್ವಿತರಂತೆ ಕಾಣುವ ದಿರಿಸು ತೊಟ್ಟುಕೊಂಡು ಬಂದಿರುವ ಅವರು, ಹೊರಜಗತ್ತಿಗೆ ಅಪರಿಚಿತವಾದ ಹಲವು ಅವತಾರಗಳನ್ನು ಆ ಬಿಲ್ಡಿಂಗಿನೊಳಗೆ ಪ್ರದರ್ಶಿಸುತ್ತಾರೆ.
ಅಷ್ಟಕ್ಕೂ ಆ ಬಿಲ್ಡಿಂಗಿನೊಳಗೆ ಅವರು ಮಾಡುವುದೇನು ಗೊತ್ತಾ?
ಎಲೆ ಹಾಕೋದು ಯಾನೆ ಒಬ್ಬಟ್ಟು ತಟ್ಟೋದು ಉರುಫ್ ಇಸ್ಪೀಟು ಆಡೋದು.
ಒಳಗೆ ಒಬ್ಬಟ್ಟು ತಟ್ಟೋದು ಶುರುವಾದ ಕೆಲವೇ ಕ್ಷಣಗಳಲ್ಲಿ ಅಲ್ಲಿನ ವಾತಾವರಣ ಕಾವೇರುತ್ತದೆ. ಚಾಲಾಕಿ ಅಜ್ಜಂದಿರು ಆಟ ಆಡುವಾಗ ಎದುರಾಳಿಗಳ ಆಯ ತಪ್ಪಿಸಿ ಕಾಸು ಜೇಬಿಗಿಳಿಸಿಕೊಂಡು ಬಿಡುತ್ತಾರೆ. ಸೋತವರು ಅಷ್ಟಕ್ಕೇ ಸುಮ್ಮನಾಗದೆ ಅವರೊಂದಿಗೆ ಕಾದಾಟಕ್ಕಿಳಿಯುತ್ತಾರೆ. ಒಂದು ಗುಂಪಿನ ಪರ ಒಂದಷ್ಟು, ಮತ್ತೊಂದರ ಪರ ಮತ್ತೊಂದಷ್ಟು ಮಂದಿ ವಕಾಲತ್ತು ವಹಿಸಿಕೊಳ್ಳುತ್ತಾರೆ. ಪರಿಸ್ಥಿತಿ ಪ್ರಕೋಪಕ್ಕೆ ಹೋಗುವ ಮುನ್ನ ಆ ಕ್ಲಬ್ಬಿನ ಉಸ್ತುವಾರಿ ನೋಡಿಕೊಳ್ಳುವ ವ್ಯಕ್ತಿ ಎಂಟ್ರಿ ಕೊಡುತ್ತಾನೆ. ತನ್ನ ವಾದ ಮಂಡಿಸಿ ಎಲ್ಲವನ್ನೂ ತಿಳಿಗೊಳಿಸುತ್ತಾನೆ.
*****
ಅಲ್ಲೊಂದು ಟೀವಿ ಇದೆ. ಅದರಿಂದ ಬ್ರೇಕಿಂಗ್ ನ್ಯೂಸ್‌ಗಳು ನಿರಂತರವಾಗಿ ಹೊರಹೊಮ್ಮುತ್ತಿರುತ್ತವೆ. ತಮ್ಮ ಕಿವಿ ಮೇಲೆ ಬೀಳುವ ಸುದ್ದಿಗಳಿಗೆ ಮಸಾಲೆ ಬೆರೆಸಿ ಒಂದು ಹದಕ್ಕೆ ತಂದು ಎಲ್ಲರೆದುರು ತಮ್ಮ ಪಾಂಡಿತ್ಯ ಪ್ರದರ್ಶಿಸುವ ಖಯಾಲಿ ಅಲ್ಲಿ ನೆರೆದಿರುವ ಅನೇಕರಲ್ಲಿ ಜೀವಂತವಾಗಿದೆ.
ಅವರ ಮಾತಿಗೆ ಯಡ್ಡಿ-ರೆಡ್ಡಿಯಿಂದಿಡಿದು ಹಂಚಿನ ಕಡ್ಡಿವರೆಗೆ ಎಲ್ಲರೂ ಎಲ್ಲವೂ ಆಹಾರ. ಹೊಲಸಾಗಿರುವ ರಾಜಕಾರಣದ ಕುರಿತು ಕೈಯಲ್ಲಿ ಕಾರ್ಡು ಹಿಡಿದು ಆಡುತ್ತಲೇ ಬೇಸರ ಪಟ್ಟುಕೊಂಡು ಮಾತನಾಡುತ್ತಾರೆ. ತಾವು ಮಾತ್ರ ಪೂರಾ ಸಾಚಾ ಅನ್ನುವ ರೀತಿಯಲ್ಲಿ ಅಣಿಮುತ್ತುಗಳನ್ನು ಉದುರಿಸುತ್ತಾರೆ.
ಅವರ ಮಾತುಗಳು ಎಲ್ಲೆಗಳನ್ನು ಮೀರುತ್ತಾ ಸಾಗುತ್ತವೆ. ಕೈಯಲ್ಲಿಡಿದಿರುವ ಕಾರ್ಡುಗಳು ಬದಲಾದಂತೆ ಅವರ ಬಾಯಿನಿಂದ ಹೊರಡುವ ಮಾತುಗಳ ಹಿನ್ನೆಲೆಯೂ ಬದಲಾಗುತ್ತದೆ.
*****
ಆಟ ಆಡಿ ಸೋತು ಹಣ ಕಳೆದುಕೊಂಡವನೊಬ್ಬ ಇದ್ದಕ್ಕಿದ್ದಂತೆ ಎಲ್ಲರ ವಿರುದ್ಧ ರೊಚ್ಚಿಗೇಳುತ್ತಾನೆ. ವಾಟಾಳ್ ನಾಗರಾಜ್‌ಗೆ ಸೈಡು ಹೊಡೆಯುವ ರೀತಿಯಲ್ಲಿ ಚಿತ್ರ ವಿಚಿತ್ರವಾಗಿ ಆ ಕ್ಲಬ್ಬಿನ ಎಲೆ ಹಾಕುವ ಆಟದ ರೂಲ್ಸುಗಳ ವಿರುದ್ಧ ಘೋಷಣೆ ಕೂಗುತ್ತಾನೆ. ಅವನ ತಲೆ ಕೆಟ್ಟಿದೆ ಎಂದು ಕ್ಲಬ್ಬಿನೊಳಗಿರುವ ಎಲ್ಲರೂ ಕೆಲವೇ ಕ್ಷಣಗಳಲ್ಲಿ ತೀರ್ಮಾನಿಸಿ ಬಿಡುತ್ತಾರೆ. ಆ ಬಿಲ್ಡಿಂಗಿನ ಹೊರಗೆ ನಿಂತು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವವನ ದೃಷ್ಟಿಯಲ್ಲಿ ಕ್ಲಬ್ಬಿನೊಳಗೆ ಕಾರ್ಡ್ಸ್ ಆಡುತ್ತಿರುವ ಎಲ್ಲರೂ ಅರೆಹುಚ್ಚರೇ!
*****
ಟೈಮು ರಾತ್ರಿ ಹತ್ತಾಗಿದೆ. ಕ್ಲಬ್ಬಿನ ಕಲರವ ನಿಂತಿದೆ. ಹೊರಗೆ ಗಾಡಿಗಳು ಸ್ಟಾರ್‍ಟ್ ಆಗುತ್ತಿವೆ. ಸ್ವಲ್ಪ ಸಮಯದ ನಂತರ ಅಲ್ಲಿ ಉಳಿದಿರುವುದು ನೀರವ ಮೌನ, ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಇಸ್ಪೀಟಿನ ಎಲೆಗಳು ಮಾತ್ರ.
ಮತ್ತೊಂದು ಮುಂಜಾನೆ ಕಣ್ತೆರೆಯುತ್ತದೆ. ಹಗಲು ಆ ಬಿಲ್ಡಿಂಗಿನ ಮೇಲೆ ಶಾಂತ ದಿರಿಸು. ಮತ್ತೊಮ್ಮೆ ಕತ್ತಲು ಕವಿದಂತೆ ಶಾಂತಿಯೊಂದಿಗೆ ಜಾರಿಯಲ್ಲಿರುವುದು ಮುನಿಸು.
*****