ಕ್ರಾಂತಿಯೆಂಬ ಭ್ರಾಂತಿ: ಅಖಿಲೇಶ್ ಚಿಪ್ಪಳಿ


ರೈತನಿಗೆ ಮಣ್ಣಿನ ಮಗ ಎನ್ನುತ್ತಾರೆ. ರೈತ ದೇಶದ ಬೆನ್ನೆಲುಬು ಎಂದು ಹೊಗಳಿದ್ದಾರೆ. ಈ ದೇಶದಲ್ಲಿರುವ ೧೨೦ ಕೋಟಿ ಜನಸಂಖ್ಯೆಯ ಸಿಂಹಪಾಲು ಮಂದಿ ರೈತಾಪಿ ವೃತ್ತಿಯನ್ನೇ ಅವಲಂಬಿಸಿಕೊಂಡು ಬದುಕುತ್ತಿದ್ದಾರೆ. ಆದರೆ ಅನ್ನದಾತನ ಬದುಕು ಹೇಗಿದೆ? ಗ್ರಾಮೀಣ ಭಾರತದ ರೈತ ಹೇಗಿದ್ದಾನೆ? ಪ್ರಪಂಚದ ಎಲ್ಲಾ ಸಾಂಪ್ರಾದಾಯಿಕ ರೈತರ ಬದುಕು ವಾತಾವರಣವನ್ನು ಅವಲಂಭಿಸಿದೆ. ಭಾರತದ ಕೃಷಿ ಪ್ರದೇಶದ ೭೦% ಪ್ರದೇಶ ಮಳೆಯಾಧಾರಿತವಾಗಿದೆ. ಕಾಲ-ಕಾಲಕ್ಕೆ ಮಳೆಯಾದರೆ ಮಾತ್ರ ರೈತನ ಬದುಕು ತುಸು ಹಸನಾಗುತ್ತದೆ. ಬೀಜ ಬಿತ್ತುವಾಗ ಬರಗಾಲ, ಕೊಯ್ಲಿನ ಸಂದರ್ಭದಲ್ಲಿ ಅತಿವೃಷ್ಟಿಯಾದಲ್ಲಿ ರೈತನ ಪಾಡು ಯಾರಿಗೂ ಬೇಡ. ಸ್ವಾತಂತ್ರ್ಯಪೂರ್ವದಲ್ಲೂ ಹಾಗೂ ಸ್ವಾತಂತ್ರ್ಯನಂತರದಲ್ಲೂ ಕೂಡ ರೈತರನ್ನು ಆಳುವವರು ಶೋಷಿಸುತ್ತಲೇ ಬಂದಿದ್ದಾರೆ. ರೀತಿ ಮಾತ್ರ ಬೇರೆ-ಬೇರೆ. ಅಲ್ಪಾವಧಿ ಬೆಳೆಗಳಿರಲಿ ಅಥವಾ ಬಹುವಾರ್ಷಿಕ ಬೆಳೆಗಳಿರಲಿ, ಉತ್ತಮ ಫಸಲು ಸಿಗಬೇಕಾದರೆ ಸ್ಥಿಮಿತವಾದ ವಾತಾವರಣ ಅವಶ್ಯವಾಗಿರುತ್ತದೆ. ಹೆಚ್ಚಿಗೆ ಒಳಸುರಿಗಳನ್ನು ಬೇಡದೆ, ಸಾವಯವ ಪದ್ಧತಿಯಿಂದ ಬೆಳೆಯುವ ಫಲಸು ಮಣ್ಣಿಗೂ ಮತ್ತು ಮಾನವನ ಆರೋಗ್ಯಕ್ಕೂ ಪೂರಕವಾಗಿರುತ್ತದೆ. ಪ್ರತಿಕೂಲ ಹವಾಮಾನದಿಂದಾಗಿ ಫಸಲು ಪಡೆಯದ ರೈತ ಅನಿವಾರ್ಯವಾಗಿ ಆತ್ಮಹತ್ಯೆ ಮಾಡಿಕೊಂಡು ಹುತಾತ್ಮನಾಗುತ್ತಿದ್ದಾನೆ. ನಮ್ಮ ಇಂದಿನ ಅಭಿವೃದ್ಧಿಯ ಹಸಿವನ್ನು ನೋಡಿದರೆ, ಒಟ್ಟಾರೆ ಹವಾಮಾನದಲ್ಲಿ ಇನ್ನೂ ಹೆಚ್ಚಿನ ಏರುಪೇರಾಗುವುದು ನಿಶ್ಚಿತವಾಗಿದೆ. ರೈತನ ಬದುಕು ಇನ್ನಷ್ಟು ದುರ್ಭರವಾಗಲಿದೆ. ನಮ್ಮ ದೇಶದ ಪ್ರಸ್ತುತ ಅಭಿವೃದ್ದಿಯ ಆಯಾಮಗಳು ಮತ್ತು ಇದರಿಂದಾಗುವ ವಿಪರೀತಗಳನ್ನು ಕೊಂಚ ನೋಡೋಣ. 

ಪತ್ನಿಯ ಹುಟ್ಟುಹಬ್ಬಕ್ಕೆ ವಿಮಾನವನ್ನೇ ಉಡುಗೊರೆಯಾಗಿ ನೀಡುವ, ಒಂದು ಮದುವೆಗೆ ಕೋಟಿಗಟ್ಟಲೆ ಖರ್ಚು ಮಾಡುವ, ವಾಸಿಸುವ ಮನೆಯಲ್ಲೇ ಹೆಲಿಕಾಪ್ಟರ್ ನಿರ್ಮಾಣ ಮಾಡಿಕೊಳ್ಳುವ ಹೀಗೆ ವೈಭವೋಪಿತ, ಐಷಾರಾಮಿಯಾಗಿ ಬದುಕುವ ಶ್ರೀಮಂತರಿದ್ದಾರೆ. ಬಡತನದ ಕನಿಷ್ಟ ರೇಖೆಗಿಂತ ಕೆಳಗಿರುವ ೪೦% ಜನರಿಗೆ ಮೂರೊತ್ತಿನ ತುತ್ತಿಗೂ ಗತಿಯಿಲ್ಲದವರ ಮಧ್ಯೆ ಮೆರೆಯುವ ಸಿರಿವಂತಿಕೆಗೆ ಗರಿಷ್ಟ ರೇಖೆ ಯಾಕಿಲ್ಲ. ಓಟಿಗಾಗಿ ನೋಟು ನೀಡಿ ವಿಜೃಂಭಿಸುವ ರಾಜಕಾರಣ ಯಾವತ್ತೂ ಬಲ್ಲಿದರ ಪರವಾಗಿ ನಿಲ್ಲುತ್ತದೆ ಎಂಬುದು ವರ್ತಮಾನದ ಸತ್ಯ. ಬಲ್ಲಿದರಿಗಾಗಿಯೇ ಕಾನೂನುಗಳು ಬದಲಾಗುತ್ತವೆ. ಬಲ್ಲಿದರಿಗಾಗಿಯೇ ಹೊಸ-ಹೊಸ ಕಾನೂನುಗಳು ರೂಪುಗೊಳ್ಳುತ್ತವೆ. ಇದರ ಜೊತೆಯಲ್ಲಿಯೇ ಬಡವರ ಸ್ವಾಭಿಮಾನವನ್ನು ಪರೋಕ್ಷವಾಗಿ ಹತ್ತಿಕ್ಕಿ, ನೊಣೆಯುವ ಜನಪ್ರಿಯ ಯೋಜನೆಗಳು ಜಾರಿಯಾಗುತ್ತವೆ. ರೈತ = ಬಡವ ಎಂಬ ಹೊಸ ಸೂತ್ರವನ್ನೇ ತಯಾರು ಮಾಡಲಾಗಿದೆ. ಸಣ್ಣ ಹಿಡುವಳಿ ರೈತರಿಗೂ ಅನುಕೂಲವಾಗಲಿದೆ ಎಂದು ಬಿಂಬಿಸುವ ಭ್ರಾಮಕ ಲೋಕವನ್ನು ಆಳುವವರು ಸೃಷ್ಟಿಸುತ್ತಾರೆ. ರೈತರಿಗೆ ಕೊಡಮಾಡುವ ಸಬ್ಸಿಡಿಗಳು ಅಂತಾರಾಷ್ಟ್ರೀಯ ಕಂಪನಿಗಳ ರಾಕ್ಷಸ ಹೊಟ್ಟೆಯನ್ನು ಸೇರುತ್ತವೆ. ಈ ಮೊದಲೇ ಹೇಳಿದಂತೆ ರೈತರು ಸುಖವಾಗಿರಬೇಕು ಎಂದರೆ ನಿಸರ್ಗ ನಿಯಮಗಳು ಪೂರಕವಾಗಿರಬೇಕು. ವನಸಂಪತ್ತು ಸಾಕಷ್ಟು ಪ್ರಮಾಣದಲ್ಲಿದ್ದಾಗ ಮಾತ್ರ ಕಾಲ-ಕಾಲಕ್ಕೆ ಮಳೆ ಸುರಿಯುತ್ತದೆ. ಇದೀಗ ನಮ್ಮನ್ನಾಳುವವರು ತಮ್ಮ ಅಭಿವೃದ್ಧಿಗಾಗಿ ಕಾಡಿನ ಪ್ರಮಾಣವನ್ನೇ ಕಡಿಮೆ ಮಾಡಲು ಹೊರಟಿದ್ದಾರೆ. ೨೦೧೦ರಲ್ಲಿ ಒಂದು ನೀತಿಯನ್ನು ರೂಪಿಸಲಾಗಿತ್ತು. ದೇಶದಲ್ಲಿ ಲಭ್ಯವಿರುವ ಪರಿಶುದ್ಧ ಅರಣ್ಯ ಪ್ರದೇಶಗಳಲ್ಲಿ ಯಾವುದೇ ಗಣಿಗಾರಿಕೆ ಅಥವಾ ಕೈಗಾರಿಕಾ ವಸಾಹತುಗಳನ್ನು ನಿರ್ಮಿಸಬಾರದು. ಮನುಷ್ಯ ಹೋಗಲೇ ಬಾರದ ಅರಣ್ಯಪ್ರದೇಶಗಳನ್ನು ಪಟ್ಟಿಮಾಡಿ ಗೋ – ನೋ ಗೋ ಎಂಬ ಸೂತ್ರವನ್ನು ರೂಪಿಸಲಾಗಿತ್ತು. ಇಲ್ಲಿ ಗೋ ಎಂದರೆ ಅಭಿವೃದ್ಧಿಗಾಗಿ ಕಡಿಮೆ ಅರಣ್ಯವಿರುವ ಪ್ರದೇಶಗಳನ್ನು ಬಳಸಬಹುದಾಗಿದೆ ಹಾಗೂ ನೋ ಗೋ ಎಂದರೆ ಯಾವುದೇ ಕಾರಣಕ್ಕೂ ಇಲ್ಲಿ ಪ್ರವೇಶವಿಲ್ಲ.  ೨೦೧೨ರಲ್ಲಿ ಮಾಜಿ ಪರಿಸರ ಕಾರ್ಯದರ್ಶಿಯಾದ ಟಿ.ಚಟರ್ಜಿ ನೇತೃತ್ವದ ಸಮಿತಿ ಗೋ-ನೋ ಗೋ ಸೂತ್ರವನ್ನು ಮಾರ್ಪಾಡು ಮಾಡಿ ಅನಿರ್ಭಂದಿತ (violate) ಹಾಗೂ ನಿರ್ಭಂದಿತ (inviolate) ಪ್ರದೇಶಗಳೆಂದು ವಿಂಗಡಿಸಲಾಯಿತು. ಅರಣ್ಯ ಪ್ರದೇಶಗಳನ್ನು ಗುರುತಿಸುವುದಕ್ಕೂ ೬ ಅಂಶಗಳನ್ನು ಪರಿಗಣಿಸಬೇಕೆಂದು ಶಿಪಾರಸ್ಸು ಮಾಡಲಾಯಿತು. ಪರಿಗಣಿಸಬೇಕಾದ ಅಂಶಗಳೆಂದರೆ, ಅರಣ್ಯದ ವಿಧ, ಜೈವಿಕ ಶ್ರೀಮಂತಿಕೆ, ವನ್ಯಜೀವಿಗಳ ಮಹತ್ವ, ಅರಣ್ಯ ಪ್ರಮಾಣ, ಭೌಗೋಳಿಕ ಅನುಕಲನ ಹಾಗೂ ಜಲಸಾಂದ್ರತೆ. ಫಾರೆಸ್ಟ್ ಸರ್ವೆ ಆಫ್ ಇಂಡಿಯಾ ೨೦೧೩ರಲ್ಲಿ ಅರಣ್ಯಕ್ಕೆ ಸಂಬಂಧಿಸಿದಂತೆ ಒಂದು ವರದಿಯನ್ನು ಬಿಡುಗಡೆ ಮಾಡಿದೆ. ಭಾರತದ ಒಟ್ಟೂ ಬೌಗೋಳಿಕ ಪ್ರದೇಶದಲ್ಲಿ ೨೧.೨೩% ಅರಣ್ಯವಿದೆ. ಇದರಲ್ಲಿ ದಟ್ಟಾರಣ್ಯವಿರುವುದು ೨.೫೪% ಮಾತ್ರ. ೯.೭% ಸಾಧಾರಣ ಮಟ್ಟಿನ ಅರಣ್ಯ ಪ್ರದೇಶವಾಗಿದ್ದು ಇನ್ನುಳಿದ ೮.೯೯%ನಲ್ಲಿ ವಿರಳವಾದ ಅರಣ್ಯಗಳಿವೆ. ನಿಶ್ಚಿತವಾಗಿ ದಟ್ಟಾರಣ್ಯಗಳು ನಿರ್ಭಂದಿತ ಪ್ರದೇಶಕ್ಕೆ ಸೇರುತ್ತವೆ. ೭೦% ಹಸಿರು ಚಾವಣಿಯಿರುವ ಪ್ರದೇಶಗಳನ್ನು ಕೂಡಾ ನಿರ್ಭಂದಿತ ಅರಣ್ಯ ಪ್ರದೇಶಗಳೆಂದು ಪರಿಗಣಿಸಬಹುದು. ವಿರಳ ಅರಣ್ಯ ಪ್ರದೇಶಗಳನ್ನು ಅನಿರ್ಭಂದಿತ ಅರಣ್ಯ ಪ್ರದೇಶವೆಂದು ಸಾರಿದರೆ ಮಾತ್ರ ಅಪಾಯ ತಪ್ಪಿದ್ದಲ್ಲ. ಅನಿರ್ಭಂದಿತ ಪ್ರದೇಶಗಳಲ್ಲಿ ಯಾವುದೇ ತರಹದ ಗಣಿಗಾರಿಕೆ, ಕೈಗಾರಿಕೆಯನ್ನು ನಡೆಸಬಹುದು ಎಂದು ಅರ್ಥ. ಅಲ್ಲದೆ ಅರಣ್ಯ ಪ್ರದೇಶಗಳನ್ನು ಗುರುತಿಸುವಾಗ ಪರಿಗಣಿಸಬೇಕಾದ ೬ ಅಂಶಗಳಲ್ಲಿ ೨ ಅಂಶಗಳನ್ನು ತೆಗೆಯಲು ಕೂಡ ಪರಿಸರ ಇಲಾಖೆಯ ಮೇಲೆ ಒತ್ತಡವಿದೆ. ಈ ತರಹದ ಅಭಿವೃದ್ಧಿ ನಿರ್ಭಂದಿತ ಪ್ರದೇಶಗಳ ಅರ್ಧಭಾಗದಷ್ಟು ಅರಣ್ಯಗಳಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಸಲು ಈಗಿನ ಆಡಳಿತ ಅನುಮತಿ ನೀಡಲು ಹೊರಟಿದೆ. ಅನುಮತಿ ನೀಡಲು ತೊಡಕಾಗಿರುವ ಅರಣ್ಯ ನೀತಿಗಳನ್ನೇ ಬದಲಿಸಲು ಹೊರಟಿದೆ. ಆರು ರಾಜ್ಯಗಳಲ್ಲಿ ಹರಡಿಕೊಂಡಿರುವ ಪಶ್ಚಿಮಘಟ್ಟಗಳ ಸೂಕ್ಷ್ಮ ಪ್ರದೇಶ ಪ್ರಮಾಣವನ್ನು ೬೪%ನಿಂದ ೩೭%ಗೆ ಇಳಿಸಲು ಶಿಪಾರಸ್ಸು ಮಾಡಲಾಗಿದೆ. ಮಾಧವ ಗಾಡ್ಗಿಳ್ ಹಾಗೂ ಕಸ್ತೂರಿ ರಂಗನ್ ವರದಿಯನ್ನು ಮೂಲೆಗೆಸೆದು, ಹೊಸದಾಗಿ ಅರಣ್ಯ ಪ್ರದೇಶವನ್ನು ಮೋಜಣಿ ಮಾಡಲು ಆಯಾ ರಾಜ್ಯಸರ್ಕಾರಗಳಿಗೆ ವಹಿಸಲಾಗಿದೆ. 

ಅತಿಯಾದ ಮಾಲಿನ್ಯ ಪ್ರದೇಶವೆಂದು ಗುರುತಿಸಿದ ಗುಜರಾತ್‌ನ ವಪಿ ಪ್ರದೇಶದಲ್ಲಿ ನಡೆಯುತ್ತಿರುವ ಎಲ್ಲಾ ಕೈಗಾರಿಕೆಗಳು ನಿಷೇಧಕ್ಕೊಳಗಾಗಿದ್ದವು. ಇದೀಗ ಯಾವುದೇ ಹೊಸ ನಿರ್ಭಂದನೆಯಿಲ್ಲದೆ ನಿಷೇಧವನ್ನು ಹಿಂದೆ ಪಡೆಯಲಾಗಿದೆ. ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಒಟ್ಟೂ ಸದಸ್ಯರ ಸಂಖ್ಯೆಯನ್ನು ೧೫ರಿಂದ ೩ಕ್ಕೆ ಇಳಿಸಲಾಗಿದೆ. ಹೊಸ ಮಂಡಳಿ ಅಸ್ತಿತ್ವಕ್ಕೆ ಬರುತ್ತಿದ್ದಂತೆ ೧೪೦ ಪರಿಸರ ವಿರೋಧಿ ಯೋಜನೆಗಳಿಗೆ ಅನುಮತಿ ನೀಡಿತ್ತಾದರೂ, ಸವೋಚ್ಛ ನ್ಯಾಯಾಲಯ ಹೊಸ ವನ್ಯಜೀವಿ ಮಂಡಳಿಯ ಶಿಪಾರಸ್ಸುಗಳಿಗೆ ತಡೆ ನೀಡಿದೆ. ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ನ್ಯಾಯಾಂಗ ಅಧಿಕಾರವನ್ನು ಬದಲಿಸಿ ಆಡಳಿತಾತ್ಮಕ ಅಧಿಕಾರ ನೀಡಲು ಉದ್ದೇಶಿಸಲಾಗಿದೆ. ಅರಣ್ಯ ಹಕ್ಕು ನೀತಿ ಕುರಿತಾದ ಗ್ರಾಮಸಭೆಗಳ ಅಧಿಕಾರವನ್ನು ಕಿತ್ತು ಜಿಲ್ಲಾಧಿಕಾರಿಗಳಿಗೆ ನೀಡುವ ಪ್ರಸ್ತಾವನೆ ಇದೆ. ಬುಡಕಟ್ಟು ಜನಾಂಗಗಳ ಹಿತದೃಷ್ಟಿಯಿಂದ ತಡೆಹಿಡಿಯಲ್ಪಟ್ಟ ಯಾವುದೇ ಹೊಸ ಕೈಗಾರಿಕೆಗಳಿಗೆ ಸಂಭಂದಿಸಿದ ಪ್ರಸ್ತಾವನೆಯನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ೬೦ ದಿನಗಳ ಒಳಗಾಗಿ ಸಲ್ಲಿಸಬೇಕೆಂದು ಸೂಚಿಸಲಾಗಿದೆ. ವರ್ಷಕ್ಕೆ ೧.೬೦ ಲಕ್ಷ ಟನ್‌ಗೂ ಅಧಿಕ ಕಲ್ಲಿದ್ದಲ್ಲನ್ನು ಉತ್ಪಾದಿಸುವ ಯಾವುದೇ ಕಂಪನಿಗಳ ವಿರುದ್ದ ಸಾರ್ವಜನಿಕ ಅಹವಾಲು ಸಲ್ಲಿಸುವ ಪದ್ಧತಿಗೆ ಬ್ರೇಕ್ ಹಾಕಿ, ಬರೀ ೫೦ ಲಕ್ಷ ಟನ್‌ಗಳನ್ನು ಹಂತ-ಹಂತವಾಗಿ ಉತ್ಪಾದಿಸಲು ಕಂಪನಿಗಳ ಪರವಾಗಿ ಆದೇಶ ನೀಡಲಾಗಿದೆ. ರೈತರ ಜಮೀನನ್ನು ದೊಡ್ಡ ಉದ್ಯಮಿಗಳಿಗಾಗಲಿ ಅಥವಾ ಸಾರ್ವಜನಿಕ ಉಪಯೋಗಕ್ಕಾಗಲಿ ಪಡೆಯುವಾಗ ಪಾಲಿಸುವ ನಿಯಮವನ್ನು ಸಡಿಲಿಸಲಾಗಿದೆ. ಕೆನ್ ಮತ್ತು ಬೆತ್ವಾ ನದಿಗಳ ಜೋಡಣೆಗೆ ಅಡಚಣೆಯಾಗಿದ್ದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದ ೪೦ ಚದರ ಕಿ.ಮಿ.ಯನ್ನು ಮುಳುಗಿಸಲೂ ಅನುಮತಿ ನೀಡಲಾಗಿದೆ. 

೧೯೬೦-೭೦ರ ದಶಕದಲ್ಲಿ ’ಹಸಿರು ಕ್ರಾಂತಿ’ಯಾಗಿ ದೇಶದ ರೈತರು ಸಮೃದ್ಧಿಯಾದರು ಎಂದು ಭಾವಿಸಲಾಗಿತ್ತು. ಆದರೆ ಆ ದಶಕಗಳಲ್ಲಿ ಯಾವುದೇ ರೈತ ಆತ್ಮಹತ್ಯೆಗೆ ಶರಣಾದ ಉದಾಹರಣೆಯಿರಲಿಲ್ಲ. ನಂತರದಲ್ಲಿ ಕ್ಷೀರ ಕ್ರಾಂತಿ ಬಂತು. ಇದೀಗೆ ’ನೀಲಿ ಕ್ರಾಂತಿ’ ಅಂದರೆ ಸಾರ್ವಬೌಮ ಭಾರತದ ವ್ಯಾಪ್ತಿಯಲ್ಲಿ ಬರುವ ಸಮುದ್ರಗಳಲ್ಲಿ ಅಂತಾರಾಷ್ಟ್ರೀಯ ಉದ್ಯಮಿಗಳಿಗೆ ಮೀನುಗಾರಿಕೆಗೆ ಅವಕಾಶ ನೀಡುವುದು. ಈಗಾಗಲೇ ಅತಿಯಾದ ಮೀನುಗಾರಿಕೆಯಿಂದಾಗಿ ಸಮುದ್ರಜೀವಿಗಳಿಗೆ ಕುತ್ತು ಬಂದಿದೆ. ಭಾರತಕ್ಕೆ ಸಂಬಂಧಿಸಿದ ಸಾಗರದಾಳದಲ್ಲಿ ಅತಿಹೆಚ್ಚು ಜಲಚರಗಳಿವೆ. ಇವುಗಳನ್ನು ಪೂರ್ಣ ಪ್ರಮಾಣದಲ್ಲಿ ದೇಶ ಉಪಯೋಗಿಸಿಕೊಳ್ಳುತ್ತಿಲ್ಲ. ಏಕೆಂದರೆ, ಸಧ್ಯಕ್ಕೆ ನಮ್ಮಲ್ಲಿರುವ ಯಂತ್ರಜ್ಞಾನ ಗುಣಮಟ್ಟ ಕೆಳಮಟ್ಟದ್ದಾಗಿದೆ. ಆದ್ದರಿಂದ ಅಂತಾರಾಷ್ಟ್ರೀಯ ಉದ್ಯಮಿಗಳನ್ನು ಈ ಕೆಲಸಕ್ಕೆ ತೊಡಗಿಸಿದರೆ, ದೇಶಕ್ಕೆ ಅಪಾರ ಸಂಪತ್ತು ಹರಿದುಬರುತ್ತದೆ ಎನ್ನುವುದೇ ’ನೀಲಿ ಕ್ರಾಂತಿ’ಯ ತಿರುಳು. ಭಾರತದ ಮೀನುಗಾರರು ಹೊಂದಿರುವ ಯಾಂತ್ರಿಕೃತ ದೋಣಿಗಳಿಂದ ೨೦೦ ಮೀಟರ್‌ಗಿಂತ ಕೆಳಗಿನ ಜಲಚರಗಳನ್ನು ಹಿಡಿಯಲು ಸಾಧ್ಯವಿಲ್ಲ. ಹಾಗಾಗಿ ೫೦೦ ಮೀಟರ್ ಆಳದವರೆಗೂ ಸಾಗಿ ಮೀನುಗಳನ್ನು ಹಿಡಿದು ತರುವುದು ಸೂಕ್ತ ಈಗಿನ ಆಡಳಿತದ ಅಭಿಮತ. ಈಗಾಗಲೇ ಟಾಟಾ, ಐಟಿಸಿ ಹಾಗೂ ಡನ್‌ಲಪ್‌ಗಳಂತಹ ದೇಶಿ ಕಂಪನಿಗಳು ವಿದೇಶದಿಂದ ದೊಡ್ಡ ಹಡಗುಗಳನ್ನು ತರಿಸಿಕೊಂಡು ಮೀನುಗಾರಿಕೆಯನ್ನು ಲಾಭದಾಯಕವಾಗಿ ಮಾಡಿಕೊಂಡಿದ್ದಾರೆ. ವಿದೇಶಿ ಹಡಗುಗಳು ಮೀನುಗಾರಿಕೆಯ ನಂತರದಲ್ಲಿ ನಮ್ಮ ದೇಶದ ಬಂದರುಗಳಿಗೆ ಬರುವುದಿಲ್ಲ. ಹಾಗಾಗಿ ಸದರಿ ಹಡಗು ಎಷ್ಟು ಟನ್ ಮೀನು ಸಂಗ್ರಹ ಮಾಡಿ ತನ್ನ ದೇಶಕ್ಕೆ ಸಾಗಿಸುತ್ತದೆ ಎಂಬುದಕ್ಕೆ ಲೆಕ್ಕವೇ ಸಿಗುವುದಿಲ್ಲ. ಇನ್ನು ಸರ್ಕಾರಕ್ಕೆ ಆದಾಯ ಬರುವುದೆಂದು. ಬಂದರಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಅದಿರನ್ನೇ ಕದ್ದು ಸಾಗಿಸಿದ ಉದಾಹರಣೆ ನಮ್ಮೆಗೆದುರಿಗಿರಬೇಕದಾರೆ ಇನ್ನು ಮೀನಿನ ಲೆಕ್ಕವಿಡುವವರು ಯಾರು. ಇದಕ್ಕಾಗಿ ಸರ್ಕಾರ ಯಾವ ರೀತಿಯ ಸೂಕ್ತ ನೀತಿಯನ್ನು ರೂಪಿಸುತ್ತದೆ ಎಂದು ಕೇಳುತ್ತಾರೆ ಕೇರಳದ ಮೀನುಗಾರರ ಸಂಘಟನೆಯ ಅಧ್ಯಕ್ಷ ಚಾರ್ಲ್ಸ್ ಜಾರ್ಜ್.

೧೯೯೯ರಲ್ಲಿ ಗಂಗಾನದಿಯ ತಟದಲ್ಲಿರುವ ವಾರಣಾಸಿಯ ಮೆಹದಿಗಂಜ್‌ನಲ್ಲಿ ಕೋಕ-ಕೋಲಾ ತನ್ನ ಬಾಟ್ಲಿಂಗ್ ಉದ್ಯಮವನ್ನು ಆರಂಭಿಸಿತ್ತು. ಬಾಟಲಿಗೆ ಹನಿ ಕರಿವಿಷ ಹಾಕಿ ಮೇಲೆ ಗಂಗೆಯಿಂದ ಬಸಿದ ಅಂತರ್ಜಲವನ್ನು ತುಂಬಿ ಮಾರುತ್ತಿತ್ತು. ಇದರಿಂದಾಗಿ ಅಲ್ಲಿನ ಸ್ಥಳೀಯರಿಗೆ ನೀರಿನ ಅಭಾವ ಶುರುವಾಯಿತು. ಅಲ್ಲಿನ ಅಂತರ್ಜಲ ಬತ್ತುತ್ತಲೇ ಹೋಯಿತು. ೨೦೦೯ರ ಹೊತ್ತಿಗೆ ಅಲ್ಲಿನ ಜನರಿಗೆ ಕುಡಿಯಲೂ ನೀರಿಲ್ಲದ ಪರಿಸ್ಥಿತಿ ಉದ್ಭವಿಸಿತು. ಇದೇ ಹೊತ್ತಿನಲ್ಲಿ ಬಹಳಷ್ಟು ಲಾಭ ಮಾಡಿಕೊಂಡ ಕೋಕ-ಕೋಲ ಕಂಪನಿ ತನ್ನ ಕಾರ್ಖಾನೆಯನ್ನು ಮೇಲ್ದಜೆಗೆ ಏರಿಸಲು ಸರ್ಕಾರದಿಂದ ಅನುಮತಿ ಕೇಳಿತು. ಸುಮಾರು ೧೫೦ ಕೋಟಿ ಹೆಚ್ಚುವರಿ ಬಂಡವಾಳವನ್ನು ಹೂಡಿ ಕಾರ್ಖಾನೆಯ ಕಟ್ಟಡಗಳನ್ನು ಕಟ್ಟಿ ತಯಾರಾಗಿ ಅನುiತಿಗಾಗಿ ಕಾಯುತ್ತಿತ್ತು. ಸ್ಥಳೀಯ ಸಂಘಟನೆಗಳು ಕೋಕ-ಕೋಲಾದ ವಿರುದ್ಧ ಬೀದಿಗಿಳಿದರು. ಹೋರಾಟ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿತು. ನ್ಯಾಯಾಲಯ ಯಾವಾಗ ಮಧ್ಯಪ್ರವೇಶ ಮಾಡಿತೋ, ಆಗ ಉತ್ತರಪ್ರದೇಶದ ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚೆತ್ತುಕೊಂಡು, ಅನುಮತಿ ನೀಡಲು ನಿರಾಕರಿಸಿತು. ಇದೀಗ ಸವೋಚ್ಛ ನ್ಯಾಯಾಲಯ ಕೋಕ-ಕೋದ ವಿರುದ್ಧ ತೀರ್ಪು ನೀಡಿದೆ. ಸತತ ೧೫ ವರ್ಷಗಳ ಹೋರಾಟದ ಫಲವಾಗಿ ಹೊರಬಂದ ಸರ್ವೋಚ್ಛ ನ್ಯಾಯಾಲಯ ತೀರ್ಪು ಅಲ್ಲಿನ ರೈತರಿಗೆ ಮತ್ತು ಸ್ಥಳೀಯರಿಗೆ ನೆಮ್ಮದಿ ತಂದಿದೆ. ಛತ್ತೀಸ್‌ಗಡದ ಉತ್ತರ ಭಾಗದಲ್ಲಿರುವ ಅಂಬಿಕಾಪುರ ಪರ್ಸಾ ಮತ್ತು ಕಾಂಟೇ ಪ್ರದೇಶದಲ್ಲಿ ಬುಡಕಟ್ಟು ಜನಾಂಗವಿದೆ. ಇಲ್ಲಿನ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶದಲ್ಲಿ ಅಪಾರ ಕಲ್ಲಿದಲ ನಿಕ್ಷೇಪವಿದೆ. ಇದನ್ನು ಕಂಡುಕೊಂಡ ಅದಾನಿ ಗ್ರೂಪ್ ೨೦೦೭ರಲ್ಲೆ ಇಲ್ಲಿ ಗಣಿಗಾರಿಕೆ ಮಾಡುವ ಪ್ರಸ್ತಾಪವನ್ನು ಇಟ್ಟಿತ್ತು. ಈಗ ಗಣಿಗಾರಿಕೆ ಪ್ರಾರಂಭಿಸುವ ಹೊತ್ತಿನಲ್ಲಿ ಅಲ್ಲಿನ ಬುಡಕಟ್ಟು ಜನಾಂಗದವರು ತಕರಾರು ತೆಗೆದಿದ್ದಾರೆ. ರಾಜಿ ಪಂಚಾಯ್ತಿ ಮಾಡಲು ಅದಾನಿ ಕಂಪನಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನುರಾಗ್ ತ್ಯಾಗಿ ಹರಸಾಹಸಪಡುತ್ತಿದ್ದಾನೆ. ನಿಮಗೆ ಮೂಲಭೂತ ಎಲ್ಲಾ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು ಎಂಬ ಭರವಸೆ ನೀಡುತ್ತಿದ್ದಾನೆ. ನಿಮಗೆಲ್ಲಾ ಕೈತುಂಬಾ ಕೆಲಸ ಮತ್ತು ಸಂಬಳ ನೀಡುವುದಾಗಿ ಆಮಿಷವೊಡ್ಡುತ್ತಿದ್ದಾನೆ. ಇದರ ಜೊತೆಯಲ್ಲೇ ಈ ಮೊದಲೇ ಹೇಳಿದಂತೆ ಈ ಪ್ರದೇಶವು ’ನಿರ್ಭಂದಿತ ಅರಣ್ಯ ಪ್ರದೇಶದ ವ್ಯಾಪ್ತಿಗೆ ಸೇರುತ್ತದೆ ಎಂದು ಖುದ್ದು ಪರಿಸರ ಸಚಿವಾಲಯವೇ ವರದಿ ಸಲ್ಲಿಸಿದೆ ಎಂದು ದೇಶದ ಹಸಿರು ನ್ಯಾಯಾಧಿಕರಣ ಪೀಠ ಹೇಳಿದೆ. ಬರೀ ೨೫೦-೩೦೦ರ ಸಂಖ್ಯೆಯಲ್ಲಿರುವ ಬುಡಕಟ್ಟು ಜನರನ್ನು ಏಮಾರಿಸುವುದು ಅದಾನಿಗಾಗಲೀ ಅಥವಾ ಆಡಳಿತಕ್ಕಾಗಲಿ ಕಷ್ಟವಲ್ಲ. 

ಗೋಡೆಯ ಮೇಲಿನ ಹಲ್ಲಿಯನ್ನು ಹಿಡಿಯಲು ಬೆಕ್ಕು ಹಾರಿದಾಗ, ಹಲ್ಲಿ ತನ್ನ ಪ್ರಾಣ ರಕ್ಷಣೆಗಾಗಿ ತನ್ನ ಬಾಲವನ್ನು ಕಳಚುತ್ತದೆ. ಬಾಲ ವಿಲಿ-ವಿಲಿ ಒದ್ದಾಡುತ್ತಾ ಕೆಳಗೆ ಬೀಳುತ್ತದೆ. ಬೆಕ್ಕಿನ ನಿಗಾ ಬಾಲದತ್ತ, ಅತ್ತ ಹಲ್ಲಿ ಜೀವ ಸಹಿತ ಪರಾರಿಯಾಗಿ ತನ್ನ ಪ್ರಾಣ ಉಳಿಸಿಕೊಳ್ಳುತ್ತದೆ. ಹಿಂದೆಂದೂ ಚರ್ಚೆಯಾಗದಷ್ಟು ಚರ್ಚೆ ಇವತ್ತು ಪರಿಸರದ ಮೇಲೆ ಆಗುತ್ತಿದೆ. ಈಗಿನ ಸರ್ಕಾರ ಜನರ ಗಮನವನ್ನು ಬೇರೆಡೆಗೆ ಸೆಳೆಯಲು (ಚುನಾವಣ ಪ್ರಣಾಳಿಕೆಯ ಅಂಶಗಳನ್ನು ಜಾರಿ ಮಾಡಲು ಸಾಧ್ಯವಾಗದೇ ಇರುವುದಕ್ಕೆ) ಈ ತಂತ್ರವನ್ನು ಉಪಯೋಗಿಸುತ್ತಿದೆ ಎಂದು ಖ್ಯಾತ ಪರ್ತಕರ್ತರಾದ ಗೋಪಾಲಕೃಷ್ಣ ವಾರಿಯರ್ ಹೇಳುತ್ತಾರೆ. ಏನೇ ಆಗಲಿ ದೇಶದ ರೈತರನ್ನು ಮತ್ತು ಕಷ್ಟಜೀವಿಗಳನ್ನು ಮೂಲೆಗುಂಪು ಮಾಡುವ ಮೂಲಕ ಕೆಂಪು ಕ್ರಾಂತಿಗೆ ನಾಂದಿ ಹೇಳದಿದ್ದರೆ ಸಾಕು. 

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Guruprasad Kurtkoti
10 years ago

ಅಖಿಲೇಶ್, ಇಷ್ಟೊಂದು ನಿಖರ ಅಂಕಿ ಅಂಶಗಳೊಂದಿಗೆ ಮೂಡುವ ನಿಮ್ಮ ಲೇಖನ ಓದಲು ನಿಜಕ್ಕೂ ಖುಷಿಯಾಗುತ್ತದೆ. ಆದರೆ, ಮಾನವನ ದುರಾಸೆಯ ಬಗ್ಗೆ ಓದಿದಾಗ ಅಷ್ಟೆ ಬೇಸರವೂ ಆಗುತ್ತದೆ :(.

ಧನ್ಯವಾದಗಳು

1
0
Would love your thoughts, please comment.x
()
x