ಹಬ್ಬಕ್ಕೊಂದು ಹೊಸ ಕ್ಯಾಮೆರಾ ಖರೀದಿಸಬೇಕೆಂಬ ಹಂಬಲ ಸ್ವಲ್ವ ಜಾಸ್ತಿಯೇ ಅನ್ನುವಷ್ಟು ಮೂಡತೊಡಗಿತ್ತು.ಹೊಸ ಕ್ಯಾಮೆರಾ ಅಂದ ತಕ್ಷಣ ಈಗೊಂದು ಕ್ಯಾಮೆರಾ ಇತ್ತೆಂದಲ್ಲ. ಮುಖಹೊತ್ತಿಗೆಯಲ್ಲಿ. ಟ್ರಿಪ್ಪು, ಗ್ರೂಪುಗಳಲ್ಲಿ ಎಲ್ಲರ ಕೈಯಲ್ಲೂ ತರಾವರಿ ಥಳಥಳಿಸೋ ಕ್ಯಾಮೆರಾ ಕಂಡು ಕರುಬುವ ಮನಕ್ಕೆ ಸ್ವಂತದ್ದೊಂದು ಡಿಜಿಟಲ್ ಕ್ಯಾಮೆರಾ ಕೊಳ್ಳಬೇಕೆಂಬ ಆಸೆ ನಿಧಾನಕ್ಕೆ ಮೂಡಿತ್ತು. ಪದವಿಯ ಕೊನೆಯ ವರ್ಷದಿಂದಲೂ ಪದವಿಯಾಗಿ ಎರಡು ವರ್ಷವಾಗೋವರೆಗೂ ಇದ್ದ ನೋಕಿಯಾ ೨೭೦೦ ಕ್ಲಾಸಿಕ್ ಮೊಬೈಲಿನ ೨ ಮೆಗಾಪಿಕ್ಸಲ್ ಕ್ಯಾಮೆರಾದಲ್ಲೇ ಸಂತೃಪ್ತವಾಗಿದ್ದ ಮನಸ್ಸು ಇದ್ದಕ್ಕಿದ್ದಂತೆ ಡಿಜಿಟಲ್ ಕ್ಯಾಮೆರಾದತ್ತ ಹೊರಳಿದ್ದೇಕೆ ? ಅದರ ಹಿಂದೊಂದು ಫ್ಲಾಷ್ ಬ್ಯಾಕ್..
ಮಾಧ್ಯಮಿಕ ಶಾಲಾ ಹಂತದ ಕೊನೆಯ ದಿನಗಳು. ಅಲ್ಲಿಯವರೆಗೆ ಕ್ಯಾಮೆರಾ ಅಂದರೆ ದೂರದಿಂದ ನೋಡಿ ಮಾತ್ರ ಗೊತ್ತಿದ್ದ ನನಗೆ ಅದನ್ನ ಮುಟ್ಟೋ ಭಾಗ್ಯ ಸಿಕ್ಕ ದಿನಗಳವು. ಅಬ್ಬಾ, ಕ್ಯಾಮೆರಾ ಅಂದ್ರೆ ಸ್ಟುಡಿಯೋದಲ್ಲಿ ಇಸ್ಮಾಯಿಲ್ ಅಂತ ಹಲ್ಲು ಕಿರಿಯೋದು, ಶಾಲೆಯೆದುರು ವರ್ಷದ ಕೊನೆ ಗೆ ಬರ್ತಾ ಇದ್ದ ಗ್ರೂಫ್ ಫೋಟೋಕ್ಕೆ ಪೋಸು, ಯೂನಿಯನ್ ಡೇಗಳಲ್ಲಿ ನಮ್ಮ ಡ್ಯಾನ್ಸಿನ ಮಧ್ಯೆ ಎಲ್ಲಿಂದಲೋ ಬರಬಹುದಾದ ಕ್ಯಾಮೆರಾ ಫ್ಲಾಷಿಗೆ ಅಂತಲೇ ಓರೆಗಣ್ಣಿಂದ ಹುಡುಕುತ್ತಾ ಡ್ಯಾನ್ಸ್ ಮಾಡುತ್ತಿದ್ದ ಮುಗ್ದ ಮನಗಳು, ಮದುವೆ ಮನೆಯಲ್ಲಿ ಬರುತ್ತಿದ್ದ ದೊಡ್ಡ, ಭಾರದ ಕ್ಯಾಮೆರಾದ ಫೋಟೋ ಅಂಕಲ್ಲು, ಫೋಟೋದಲ್ಲಿ ನಾವೂ ಬರಬೇಕೆಂದು ಫೋಟೋಗ್ರಾಫರ್ ಹೋದಲ್ಲೆಲ್ಲಾ ಹೋಗಿ ಮುಖ ತೂರಿಸುತ್ತಿದ್ದ ಆ ದಿನಗಳ ನೆನಪು.. ಹೆ.ಹೆ ನೆನೆಸ್ಕೊಂಡ್ರೆ ಎಷ್ಟು ಮಜಾ ಅನ್ಸುತ್ತೆ. ಜೋಗ ಜಲಪಾತದೆದುರು, ಮೈಸೂರು ಅರಮನೆಯೆದುರು ಹೀಗೆ ಪ್ರಸಿದ್ದ ಸ್ಥಳಗಳಲ್ಲಿ ಕ್ಷಣದಲ್ಲೇ ಪ್ರಿಂಟ್ ಹಾಕಿ ಕೊಡೋ ಕ್ಯಾಮೆರಾಗಳೂ ಬಂದಿದ್ದರೂ ಅವಷ್ಟು ಕಾಡಿರಲಿಲ್ಲ. ಆದರೆ ಯಾವಾಗ ನೆಂಟರ ಕೈಯಲ್ಲಿ ಕ್ಯಾಮೆರಾಗಳು ಓಡಾಡತೊಡಗಿದವೋ ನೋಡಿ. ಅವನ್ನು ನೋಡಿ ನೋಡೇ ಕ್ಯಾಮೆರಾ ಜ್ವರ ಗೊತ್ತಿಲ್ಲದಂತೆ ಹತ್ತಿ ಬಿಟ್ಟಿತು.
ನಮ್ಮನೆಗ ಬಂದ ನೆಂಟರಿಗೆ ನಮ್ಮೂರ ಸುತ್ತಲ ಕೆಳದಿ, ಇಕ್ಕೇರಿ, ವರದಳ್ಳಿ, ಜೋಗ ಮೊದಲಾದ ಸ್ಥಳ ತೋರಿಸೋಕೆ ನಾನೇ ಮರಿಗೈಡು. ಪೇಟೆಯಿಂದ ಬಂದ ಅವರ ಕೈಯಲ್ಲೆಲ್ಲಾ ತರಾವರಿ ಕ್ಯಾಮೆರಾಗಳು. ಆಗಿನ್ನೂ ಡಿಜಿಟಲ್ ಕ್ಯಾಮೆರಾಗಳ ಹವಾ ಈಗಿನಷ್ಟು ಏರಿರಲಿಲ್ಲ. ಎಲ್ಲೆಡೆ ಕೊಡ್ಯಾಕ್ ಹಾವಳಿ. ಐನೂರಕ್ಕೆ ಒಂದು ಕ್ಯಾಮೆರಾ, ೬೯೯ ಕ್ಕೆ ಒಂದು ಕ್ಯಾಮೆರಾ ಎರಡು ರೀಲು ಹೀಗೆ ಹಲವು ಆಫರುಗಳು ಬಂದಿದ್ದವು. ಒಂದು ರೀಲಿಗೆ ೫೦ ರೂ, ಅದರಲ್ಲಿನ ಫೋಟೋ ತೊಳೆಯೋಕೆ ನೂರರ ಹತ್ತಿರ ಇತ್ತೆಂದು ನೆನಪು. ಅವರಿಗೆಲ್ಲಾ ತೋರಿಸ್ತಾ ತೊರಿಸ್ತಾ ಒಮ್ಮೆ ನನ್ನ ಕುತೂಹಲ ಅತಿಯಾಗಿ ಇದರಲ್ಲಿ ಫೋಟೋ ತೆಗೆಯೋದು ಹೇಗೆ, ನಾನೊಂದ್ಸಲ ನೋಡ್ಲಾ ಅಂತ ನಮ್ಮ ಮಾಮನ್ನ ಕೇಳಿಬಿಟ್ಟಿದ್ದೆ. ಅವರು ನಗುತ್ತಾ ಆ ಕ್ಯಾಮೆರಾ ನನ್ನ ಕೈಗೆ ಕೊಟ್ಟಿದ್ರು. ಅದು ಬೀಳದಂತೆ ಇರೋ ರಕ್ಷಣಾ ದಾರ(protective strip)ದೊಳಗೆ ನನ್ನ ಪುಟ್ಟ ಕೈ ತೂರಿಸಿ ಅದ್ರಲ್ಲಿದ್ದ ಖಾಲಿ ಜಾಗ ,ಅದೇ ವೀವ್ ಪಾಯಿಂಟಿನಲ್ಲಿ ಸುತ್ತಲಿನ ಪ್ರಕೃತಿಯನ್ನೇ ನೋಡ್ತಾ ಕೂತಿದ್ದೆ.
ದಿನಾ ನೋಡೋದಕ್ಕೂ ಆ ಕ್ಯಾಮೆರಾದ ಪ್ಲಸ್ಸು, ಚೌಕಗಳ ಬೌಂಡರಿಯಲ್ಲಿ ನೋಡೋದಕ್ಕೂ ಎಷ್ಟು ವ್ಯತ್ಯಾಸ. ಹಾಗೇ ಸುತ್ತ ತಿರುಗಿಸಿ ನೋಡ್ತಾ ನಿಂತು ಬಿಟ್ಟಿದ್ದೆ. ಹೇ, ಇದಿದ್ಯಲ್ಲ. ಇದು ಫ್ಲಾಷು ಅಂತ, ಎಲ್ಲಿ ಅದರ ಎದುರಿಂದ ಕೈ ತೆಗಿ, ನೀ ತೆಗಿಬೇಕಿದ್ದ ಜಾಗ ಇಲ್ಲಿ ಕಾಣ್ತಿದೆಯಲ್ಲಾ, ಆ ಚೌಕಟ್ಟಿನೊಳಗೆ ಬರ್ಬೇಕು ನೋಡು ಅನ್ನೋ ತರ ತೋರ್ಸಿದ್ರು ಮಾವ. ಪ್ಲಸ್ಸು, ಅದರ ಹೊರಗಿದ್ದ ಚೌಕದ ಒಳಗೆ ನನಗೆ ತೆಗಿಯಬೇಕಿದ್ದ ಚಿತ್ರವನ್ನು ಕೂರಿಸೋದ್ರೊಳಗೆ ಸುಮಾರು ತ್ರಾಸಾಗಿತ್ತು. ಮೊದಲ ಚಿತ್ರವಲ್ಲವೇ. ಹೇಗೋ ಧೈರ್ಯ ಮಾಡಿ ತೆಗೆದ ಆ ಚಿತ್ರ ತೊಳೆಸೋವರೆಗೂ ಏನೋ ಕುತೂಹಲ.. ಪರೀಕ್ಷೆ ಮುಗಿದು ರಿಸಲ್ಟಿಗೆ ಕಾಯೋ ತರ, ಇದ್ದ ಬದ್ದ ಫ್ರೀ ಮೆಸೇಜುಗಳೆಲ್ಲಾ ಖಾಲಿಯಾಗಿ ಮಾರನೇ ದಿನದ ಫ್ರೀ ಮೆಸೇಜು ಎಷ್ಟೊತ್ತಿಗೆ ಸಿಗುತ್ತೋ ಅಂತ ಹನ್ನೆರಡು ಗಂಟೆಯಾಗೋದ್ನೇ ಕಾಯೋ ತರ.. ಭಯಂಕರ ನಿರೀಕ್ಷೆ. ಅದ್ರೆ ಒಂದು ರೀಲಿನಲ್ಲಿ ೩೬ ಫೋಟೋ ತೆಗಿಬಹುದಿತ್ತು. ಆ ಎಲ್ಲಾ ೩೬ ಫೊಟೋ ಖಾಲಿಯಾಗಿ ರೀಲು ತೊಳೆಸೋವರೆಗೂ ಫೋಟೋ ಹೆಂಗೆ ಬಂದಿದೆಯಂದು ಗೊತ್ತಾಗೋ ಹಾಗಿಲ್ಲ. ಯಪ್ಪಾ, ಕೊನೆಗೂ ಆ ಫೋಟೋ ತೊಳೆಸಿದಾಗ ಖುಷಿಯೋ ಖುಷಿ.. ಎಷ್ಟಂದ್ರೂ ಮೊದಲ ಫೋಟೋವಲ್ಲವೇ ..
ಹೈಸ್ಕೂಲಿಗೆ ಕಾಲಿಟ್ಟ ಮೇಲೆ ನೆಂಟರ ಜೊತೆ ಅಲ್ಲಿಲ್ಲಿ ಹೋದಾಗ ನಾನು ಒಳ್ಳೇ ಫೋಟೋಗ್ರಾಫರ್ ಅಂತ ಪೋಸು ಕೊಡದಿದ್ದರೂ ನಾನು ತೆಗೀತೇನೆ ನೀವು ನಿತ್ಕೋಳಿ ಅಂತ ಅವರನ್ನೆಲ್ಲಾ ನಿಲ್ಲಿಸೋದು, ಯಾವ ಕಡೆ ನಿಲ್ಲಿಸಿದ್ರೆ ಸೂರ್ಯನ ಬೆಳಕು ಚೆನ್ನಾಗಿ ಬೀಳದೇ ಫೋಟೋ ಕಪ್ಪುಕಪ್ಪಾಗತ್ತೆ, ಎಷ್ಟು ದೂರದಿಂದ ತೆಗೆದ್ರೆ ಚೆನ್ನಾಗಿ ಬರುತ್ತೆ ಅಂತ ಹತ್ತಿರ, ದೂರ ಹೋಗೋದು ಇಂತ ಹಲವಾರು ಸರ್ಕಸ್ ಮಾಡ್ತಾ ಇದ್ದೆ. ಆಗ ಕೆಲ ಕಮ್ಮಿ ರೇಟಿನ ಕ್ಯಾಮೆರಾಗಳಲ್ಲಿ ಮಧ್ಯದಲ್ಲಿ ಪ್ಲಸ್ಸು, ಕೊನೆಗೆ ಬೌಂಡರಿ ಇಲ್ಲದೆ ಫೋಟೋ ತೆಗೆಯೋದೇ ಒಂದು ದೊಡ್ಡ ಸಾಹಸವಾಗಿತ್ತು. ತೆಗೆದ ಎಷ್ಟೋ ಫೋಟೋಗಳಲ್ಲಿ ತಲೆಯೇ ಹಾರಿಹೋಗೋದು. ಬರುತ್ತೆ ಅಂದುಕೊಂಡಿದ್ದ ಜಾಗದ ಹೊರಗಡೆಯೆಲ್ಲಾ ಬಂದು, ಬರಬೇಕಿದ್ದ ದೃಶ್ಯಗಳೇ ಮಿಸ್ ಆಗೋದು ಇಂತ ಕಾಮಿಡಿಗಳೆಲ್ಲಾ ಆಗ್ತಿದ್ವು. ಉದಾಹರಣೆಗೆ ಬೇಲೂರು ಹಳೇಬೀಡಿಗೆ ಹೋಗಿ ಅಲ್ಲಿನ ದೇವಸ್ಥಾನದೆದುರು ತೆಗೆದ ದೃಶ್ಯದಲ್ಲಿ ಅಮ್ಮನ ಮುಖ, ಹಿಂಬದಿಯಲ್ಲಿದ್ದ ದೇವಸ್ಥಾನ ಬರುವ ಬದಲು ಎದುರಿಗಿದ್ದ ಕಟ್ಟಿಗೆ ರಾಶಿ, ಅದರ ಎದುರಿಗಿದ್ದ ಅಮ್ಮನ ಕಾಲುಗಳು ಬಂದಿದ್ದು, ಜೋಗ ಜಲಪಾತ ಬರುವ ಬದಲು ಅದರ ಎದುರಿಗೆ ನಿಂತಿದ್ದ ಗೆಳೆಯನ ತಲೆ ಬಿಟ್ಟು ಅದರ ಕೆಳಗಿನ ದೇಹ, ಕೆಳಗಿದ್ದ ಬಂಡೆ.. ಹೀಗೆ ಹಲತರದ ಅವಾಂತರಗಳಾಗಿದ್ದವೆನ್ನೋದು ತೊಳೆಸಿದ ಮೇಲೇ ಗೊತ್ತಾಗಿದ್ದು. ಇದನ್ನೆಲ್ಲಾ ತಪ್ಪಿಸೋಕೆ ಅಂತಲೇ ತೆಗಿಯಬೇಕಿದ್ದ ದೃಶ್ಯನ ಆದಷ್ಟೂ ಕ್ಯಾಮೆರಾ ಮಧ್ಯದಲ್ಲಿ ಕೂರಿಸೋಕೆ ಪ್ರಯತ್ನ ಪಡಬೇಕಿತ್ತು. ಅಂತೂ ಇಂತೂ ಹೀಗೆ ಪರರ ಕ್ಯಾಮೆರಾದಲ್ಲೇ ತೆಗೀತಾ ತೆಗೀತಾ ಶುರುವಾದ ಹವ್ಯಾಸ ಯಾರ ತಲೆಗಳೂ ಹಾರಿಸದಷ್ಟು ಚೆನ್ನಾಗಿ ತೆಗೆಯೋ ನೈಪುಣ್ಯತೆ ಕೊಡಿಸಿ ಹಾಗೇ ಬೆಳಿತಾ ಬಂತು.
ಹೈಸ್ಕೂಲ ಕೊನೆ ವರ್ಷದಲ್ಲಿ ಮೈಸೂರ ಟ್ರಿಪ್ಪಿಗೆ ಹೋಗಿದ್ವಿ. ಅಲ್ಲಿ ಅನೇಕ ಗೆಳೆಯರು ಕ್ಯಾಮೆರಾ ತಂದಿದ್ರು. ಅದರಲ್ಲೆಲ್ಲಾ ನಂದೊಂದು ನಂದೊಂದೆಂದು ಫೋಟೋ ತೆಗೆದಿದ್ದೇ ತೆಗೆದಿದ್ದು. ನಾಣು ಫೋಟೋದಲ್ಲಿ ಬರಬೇಕೆಂಬ ಕ್ರೇಜ್ ಬೇರೆ, ಫೋಟೊ ತೆಗೆಯಬೇಕೆಂಬ ಕ್ರೇಜ್ ಬೇರೆ. ಮೊದಲ ಕ್ರೇಜ್ ಅಷ್ಟಿರದಿದ್ರೂ ಎರಡನೆಯದು ಸ್ವಲ್ಪ ಮಟ್ಟಿಗೆ ಹುಟ್ಟಿ ಬಿಟ್ಟಿತ್ತಲ್ಲ. ಹಾಗಾಗಿ ಹಲವರ ಕ್ಯಾಮೆರಾಕ್ಕೆ ನಾಣು ಕಣ್ಣಾಗಿದ್ದೆ ಆ ಟ್ರಿಪ್ಪಲ್ಲಿ. ಆಮೇಲೆ ಪೀಯು ಹೊತ್ತಿಗೆ ಮಾವ ಅದೆಂತದೋ ಡಿಜಿಟಲ್ ಅನ್ನೋ ಕ್ಯಾಮೆರಾ ಖರೀದಿಸಿದ್ದಕ್ಕೆ ಊರಿಗೆ ಬಂದಾಗ ಅವನ ಹಳೆ ಕೊಡ್ಯಾಕ್ ಕ್ಯಾಮೆರಾ ನಂಗೆ ಕೊಟ್ಟು ಹೋಗಿದ್ದ. ತಗಳ್ಳಪ್ಪ. ಮೊದಲ ರೀಲು ಖಾಲಿಯಾಗೋವರೆಗೋ ಆ ಕ್ಯಾಮೆರಾ ಹಿಡಿದು ಸುತ್ತಿದ್ದೇ ಸುತ್ತಿದ್ದು. ವರದಳ್ಳಿ, ಅಲ್ಲಿ ಇಲ್ಲಿ ಅಂತ ಸುಮಾರು ಕಡೆ ತೆಗೆಯೋ ಮನಸ್ಸಾದ್ರೂ ಕೆಲವೇ ಕೆಲವು ಅತ್ಯುತ್ತಮ ಅನಿಸೋ ದೃಶ್ಯಗಳನ್ನು ಮಾತ್ರ ತೆಗಿದಿದ್ದು. ರೀಲಿಗೆ ಮೂವತ್ತಾರೇ ಫೋಟೋವಲ್ಲವೇ.. ಮತ್ತೆ ಅದಕ್ಕೆ ಬ್ಯಾಟರಿ, ರೀಲು ತೊಳೆಸೋ ಖರ್ಚು.. ಹೀಗೆ ಇದೊಂದು ದುಬಾರಿ ಹವ್ಯಾಸ ಅನಿಸಿ ಅದರ ಹೊಟ್ಟೆ ತುಂಬಿಸುವಷ್ಟು ಅನುಕೂಲ ಮನೆಯಲ್ಲಿರದ ಕಾರಣ ಕ್ಯಾಮೆರಾ ಮೂಲೆಗೆ ಬಿದ್ದಿತ್ತು.
ಹಾಗೇ ಡಿಗ್ರಿಗೆ ಕಾಲಿಟ್ಟಿದ್ದೆ. ಮೊಬೈಲು ತಗೊಳೋ ಅಂತ ಮನೇಲಿ.ನನಗೆ ಅಷ್ಟೇನೂ ಮನಸ್ಸಿಲ್ಲ. ಇರೋದು ಅಜ್ಜಿ ಮನೇಲಿ, ಯಾವದಾದ್ರೇನೂ, ಅಷ್ಟಕ್ಕೂ ಅಲ್ಲೊಂದು ಫೋನಿದೆಯಲ್ಲ ಅನ್ನೋ ಭಾವ. ಕೊನೆಗೆ ನಮ್ಮಜ್ಜಿ ನಂಗೊಂದು ಫೋನು ಬೇಕು, ನೀನೇ ತಗೊಂಡು ಬರ್ಬೇಕು ಅಂತ ನಮ್ಮಮ್ಮನ ಹತ್ತಿರ ಹೇಳಿದ್ರಂತೆ. ಸರಿ ಆರಿಸೋಕೆ ಹೋಗಿದ್ದು ನಾನೇ ಅಮ್ಮನ ಜೊತೆ. ಅಜ್ಜಿಗೆ ತಾನೇ, ಸಾಧಾರಣದ್ದು ಸಾಕು ಅಂತ ನೋಕಿಯಾ ೧೬೦೦ ಆರಿಸಿದ್ದಾಯ್ತು. ಶಿವಮೊಗ್ಗಕ್ಕೆ ತಗೊಂಡು ಹೋಗಿ ಅಜ್ಜಿಗೆ ಕೊಟ್ರೆ ಒಳ್ಳೇದು ತಗೊಳ್ಳೋದಲ್ವೇನೋ ಮೊಮ್ಮಗನೇ, ಅದೇನೋ ಕ್ಯಾಮೆರಾ ಎಲ್ಲಾ ಬರುತ್ತಲ್ಲ ಅಂತದ್ದು. ಇದೇನು ಇದು ಅಂದ್ರು. ನಂಗೆ ಅರ್ಥ ಆಗ್ಲಿಲ್ಲ. ನಿಂಗೇ ಅಂತನೇ ತರೋಕೆ ಹೇಳಿದ್ದು ಕಣೋ. ನೀನಂತು ತಗೋಳಲ್ಲ ಅಂತ ನಾನೇ ತೆಗೆದುಕೊಟ್ತಿರೋದು ಅಂದಾಗ ನನ್ನ ಕಣ್ಣಂಚಲ್ಲಿ ನೀರು. ಆ ಮೊಬೈಲು ಇನ್ನೂ ನನ್ನ ಫೇವರೆಟ್ಟಾಗೇ ಇದೆ ಅನ್ನೋದು ಬೇರೆ ಮಾತು ಬಿಡಿ. ಪದವಿಯ ನಾಲ್ಕು ವರ್ಷದ ಟ್ರಿಪ್ಪುಗಳಲ್ಲೇ ತರಾವರಿ ಡಿಜಿಟಲ್ ಕ್ಯಾಮೆರಾಗಳ ಪರಿಚಯವಾಗಿದ್ದು. ಫೋಟೋ ತೆಗೆಯೋದು ಎಷ್ಟು ಸುಲಭವಲ್ವಾ ಅನಿಸಿಬಿಟ್ಟಿತ್ತು ಡಿಜಿಟಲ್ ಕ್ಯಾಮೆರಾಗಳ್ನ ನೋಡಿ. ಆದ್ರೆ ಅವುಗಳ ದುಬಾರಿ ಬೆಲೆ ಕೇಳಿ ಒಮ್ಮೆಯೂ ತಗೋಬೇಕು ಅನ್ನೋ ಆಸೆಯಂತೂ ಮೂಡಿರ್ಲಿಲ್ಲ.
ಪದವಿಯ ಕೊನೆ ವರ್ಷ. ಪ್ರಾಜೆಕ್ಟಿಗೆ ಇಂಟರ್ನೆಟ್ಟು ಬೇಕು ಅಂದ್ರು ಗೆಳೆಯರು. ಆದ್ರೆ ಬ್ರಾಡ್ ಬ್ಯಾಂಡ್ ಹಾಕಿಸೋದು ದುಬಾರಿ. ಇನ್ನೇನ್ ಮಾಡೋದು ? ಮೊಬೈಲಲ್ಲಿ ಕನೆಕ್ಟ್ ಮಾಡಿದ್ರೆ ? !! ಸೂಪರ್ ಐಡಿಯಾ. ಆದರೆ ಅದಕ್ಕೆ ಮೊಬೈಲ್ ಬೇಕಲ್ಲಾ .. ಇದ್ದಿದ್ರಲ್ಲಿ ಚೀಪ್ ರೇಟಿಂದು ಯಾವುದಪ್ಪಾ ? ಆಗಲೇ ಕಾರ್ಬನ್ನು, ಮೈಕ್ರೋಮ್ಯಾಕ್ಸ್ ಬಂದಿದ್ರೂ ಅದಕ್ಕೆ ಹೋಗೋ ಮನಸ್ಸಾಗ್ಲಿಲ್ಲ .ಹಿಡಿಸಿದ್ದು ನೋಕಿಯ ೨೭೦೦ ಕ್ಲಾಸಿಕ್ಕು. ಅದರಲ್ಲಿ ಇಂಟರ್ನೆಟ್ಟು ಬಳಸಿದ್ದಕ್ಕಿಂತ ಅದರಿಂದ ನನ್ನ ಫೋಟೋಗ್ರಫಿ ಹವ್ಯಾಸಕ್ಕೆ ನೀರೆರೆದಿದ್ದೇ ಹೆಚ್ಚು ಎಂದೆನ್ನಬಹುದೇನೋ. ಎಲ್ಲೋ ಬತ್ತಿ ಹೋಗಿದ್ದ ಆಸೆ ಆ ಕ್ಯಾಮೆರಾದಿಂದ ಮತ್ತೆ ಚಿಗುರಿ ಇಲ್ಲಿಯವರೆಗೆ ಏಳೆಂಟು ನೂರು ಫೋಟೋ ತೆಗೆಸಿರಬಹುದು ಅದರಿಂದ..
ಅದರಲ್ಲೇ ತೆಗಿತಾ ತೆಗಿತಾ ಸಂತೃಪ್ತನಾಗಿದ್ದ ಮನಕ್ಕೆ ಬೆಂದಕಾಳೂರಿಗೆ ಬಂದು ಒಂದು ವರ್ಷವಾಗೋವಷ್ಟರಲ್ಲಿ ಇಲ್ಲಿನ ತಳುಕು ಬಳುಕಿನ, ಬಣ್ಣದ ಜಗಕ್ಕೆ ಹೊಂದಿಕೊಳ್ಳೋದು, ಸಂತೃಪ್ತವಾಗಿರೋದು ಸಾಧ್ಯವೇ ಆಗ್ತಿರಲಿಲ್ಲ. ಅದೆಷ್ಟು ಅದುಮಿಟ್ರೂ ಕ್ಯಾಮೆರಾ ತಗೋಬೇಕೆಂಬ ಆಸೆ ಭುಗಿಲೇಳ್ತನೇ ಇತ್ತು. ಕ್ಯಾಮೆರಾ ಬದ್ಲು ಆಂಡ್ರಾಯ್ಡ್ ಮೊಬೈಲ್ ತಗೊಂಡ್ರೆ ಹೇಗೆ ಅನ್ನೋ ಪ್ರಶ್ನೆ ಮೂಡಿದ್ರೂ ಅದ್ಯಾಕೋ ಇಷ್ಟವಾಗ್ತಿರಲಿಲ್ಲ. ಸಂನ್ಯಾಸಿ ಇಲಿಯ ಕಾಯೋ ಆಸೆಗೆ ಬೆಕ್ಕನ್ನು ಸಾಕಿ, ಅದರ ಹಾಲಿಗೆಂತ ದನ ಸಾಕಿ.. ಕೊನೆಗೆ ಸಂಸಾರಿಯಾದ ಕತೆ ನೆನಪಾಗ್ತಿತ್ತು. ಕ್ಯಾಮೆರಾ ತಗೋಬೇಕು ಸರಿ, ಆದ್ರೆ ಯಾವುದು ? ಡಿಎಸ್ ಎಲ್ ಆರ್, ಎಸ್ ಎಲ್ ಆರ್ ಎಲ್ಲಾ ಕಾಸ್ಟ್ಲಿ, ಒಂದು ಐದು ಸಾವಿರದ ಒಳಗಿನದ್ದಾದ್ರೆ ತಗೋಬಹುದು ಅನ್ನಿಸ್ತು. ಸರಿ, ಅಂತ ಒಂದು ಶುಭದಿನ ನೆಟ್ಟಲ್ಲಿ ಹುಡುಕೋಕೆ ಶುರು ಮಾಡಿದೆ. ಆದರೆ ಕ್ಯಾಮೆರಾಗಳನ್ನು ಹೋಲಿಸೋಕೆ ಬಳಸ್ತಿದ್ದ ಪದಗಳ್ಯಾವುವು ಅರ್ಥ ಆಗ್ತಿರಲಿಲ್ಲ. ಅದರಲ್ಲಿದ್ದ ಫೋಕಲ್ ಲೆಂತ್, ಎಕ್ಸ್ ಪೋಷರ್, ಪನೋರಮ, ವೀಡಿಯೋ ಮೋಡ್, ಶಟ್ಟರ್ ಸ್ಪೀಡ್.. ಹೀಗೆ ಹಲವು ಪದಗಳ ಅರ್ಥವನ್ನ ಗೆಳೆಯರ ಹತ್ತಿರ ಕೇಳೋದು, ಗೂಗಲ್ ಮಾಡೋದು.. ಹೀಗೆ ನಿಧಾನಕ್ಕೆ ತಿಳೀತಾ ನನಗೆ ಹೊಂದೋ ಕ್ಯಾಮೆರಾ ಯಾವುದೆಂದು ಹುಡುಕೋಕೆ ಶುರು ಮಾಡಿದೆ.
ಸರಿ,ಒಂದು ಶನಿವಾರ ಹತ್ತಿರದಲ್ಲಿದ್ದ ಕಾಸ್ಮೋಸ್ ಮಾಲಿಗೆ ಹೋದ್ವಿ. ಅಲ್ಲೊಂದು ಕ್ಯಾಮೆರಾ ಜೋನ್ ಇದ್ದ ನೆನಪು. ಆದರೆ ನಮ್ಮ ಗ್ರಹಚಾರವೇ. ಮಾಲು ಲಾಸಲ್ಲಿರೋ ಲಕ್ಷಣವೆಂಬಂತೆ ಆ ಜೋನನ್ನೇ ಮುಚ್ಚಿ ಬಿಟ್ಟಿದ್ರು. ಹ್ಯಾಪು ಮೋರೆಯಿಂದ ವಾಪಾಸ್ಸಾದ್ವಿ. ಹೀಗೆ ಹುಡುಕುತ್ತಾ ಹುಡುಕುತ್ತಾ ನಿಕಾನ್ lx 28 ,ಕೆನಾನ್ a2400, ಕೆನಾನ್ a3200 ಸಖತ್ ಇಷ್ಟ ಆದ್ವು. ಅವುಗಳಲ್ಲಿದ್ದ ಫೀಚರ್ಗಳು ನನ್ನ ಐದು ಸಾವಿರದ ಬೌಂಡರಿಯೊಳಗೆ ಬರುತ್ತಿದ್ವು ಅಂತ ಬೇರೆ ಹೇಳೋದು ಬೇಕಿಲ್ಲ ತಾನೆ.. ೧೬ ಮೆಗಾ ಪಿಕ್ಸೆಲ್ , 5x zoom ಅಂದ್ರೆ ಒಳ್ಳೆ ಆಯ್ಕೆಯೇ ಅಂದ್ದು ಗೆಳೆಯರು.. ಇನ್ನೂ ಹೆಚ್ಚು ಬೇಕೆಂದ್ರೆ ಹೆಚ್ಚು ಕೊಡಬೇಕೆನ್ನೋದ್ರ ಜೊತೆಗೆ ಮೊದಲ ಕ್ಯಾಮೆರಾಕ್ಕೆ ಹೆಚ್ಚು ದುಡ್ಡು ಸುರಿಯೋಕೆ ಮನಸ್ಸು ಬರಲಿಲ್ಲ. ಫ್ಲಿಪ್ ಕಾರ್ಟಲ್ಲಿ ಆರ್ಡರ್ ಮಾಡೇ ಬಿಡ್ಬೇಕು ಅಂತ ಎರಡು ದಿನ ಪ್ರಯತ್ನ ಪಟ್ರೂ ನೆಟ್ಟು ಕೈಕೊಟ್ಟಿತ್ತು. ಮೂರನೇ ದಿನದ ಹೊತ್ತಿಗೆ ಎಲ್ಲಾ ಸ್ಟಾಕ್ ಖಾಲಿ. ಎಂದಿನಂತೆ ಮಲಗೋ ಹಂತದಲ್ಲಿದ್ದ ಕ್ಯಾಮೆರಾ ಖರೀದಿ ಆಸೆ ಮತ್ತೆ ಚಿಗುರಿದ್ದು ನಮ್ಮ ಊರಿಗೆ ಬಂದಾಗ. ಊರಲ್ಲಿ ಬಿಟ್ಟಿದ್ದ ಬಣ್ಣ ಬಣ್ಣದ ಹೂವುಗಳು.. ಚೆಂಡು, ಸೇವಂತಿಗೆ, ತುಂಬೆ.. ಇವೆಲ್ಲಾ ನನ್ನ ೨ಮೆಗಾ ಪಿಕ್ಸೆಲ್ ಕ್ಯಾಮೆರಾದಲ್ಲಿ ಅಂದುಕೊಂಡಷ್ಟು ಚೆನ್ನಾಗಿ ಬರದೇ ಮುಂದಿನ ಸಲ ಊರಿಗೆ ಬರುವಾಗ ಒಂದು ಡಿಜಿಟಲ್ ಕ್ಯಾಮೆರಾ ತಗೊಳ್ಳಲೇ ಬೇಕೆಂಬ ಬಲವಾದ ಆಸೆ ಹುಟ್ಟಿಸಿದವು.
ನೋಡ್ತಾ ನೊಡ್ತಾ ಒಂದು ತಿಂಗಳಾಗಿ ಹೋಯ್ತು. ದೀಪಾವಳಿ ಬಂದೆ ಬಿಟ್ತು. ಹೇ ಈ ದೀಪಾವಳಿಗಾದ್ರೂ ಕ್ಯಾಮೆರಾ ತಗೊಳ್ಲೇ ಬೇಕು ಅಂದ್ಕೊಂಡೆ. ಸರಿ ಒಂದು ದಿನ ಅಲ್ಲೇ ಹತ್ತಿರದಲ್ಲಿದ್ದ ಹೈಪರ್ ಸಿಟಿ ಮಾಲಿಗೆ ಹೋದಿ ನೋಡಿದೆ. ಅಲ್ಲಿ ೨೦ ಮೆಗಾ ಪಿಕ್ಸಲ್ಲಿನ ನಿಕಾನ್ lx 28 ಕ್ಕಿಂತ ಸಖತ್ತಾದ ಕ್ಲೋಸ್ ಅಪ್ ಬರೋ ಕೆನಾನ್ ೩೨೦೦ ಮೇಲೇ ಮನಸ್ಸು ಹತ್ತಿತು. ಆದ್ರೆ ಕೆನಾನಿಂದು ೧೬ ಮೆಗಾ ಪಿಕ್ಸೆಲ್ಲು. ಅದೇ ದ್ವಂದ್ವದಲ್ಲಿ ಮನೆಗೆ ಬಂದು ನನ್ನ ಫೋಟೋಗ್ರಾಫರ್, ಕವಿ ಮಿತ್ರ ಆದಿಗೆ ದುಂಬಾಲು ಬಿದ್ದೆ. ಒಂದಿನ ಹೋಗೋಣ ನಡಿ. ಅವನಿಗೆ ಫ್ರೀಯಾಗೋ ಹೊತ್ತಿಗೆ ಹಬ್ಬದ ಹಿಂದಿನ ಗುರುವಾರ ಬಂದುಬಿಟ್ಟಿತ್ತು. ಅಂದರೆ ಸೆಪ್ಟೆಂಬರ್ ೩೦. ಮಾರತ್ತಳ್ಳಿ ಪೇಟೇಲಿ ಸಂಜೆ ಆರರಿಂದ ಒಂಭತ್ತೂವರೆವರ್ಗೆ ಸುತ್ತಿದ್ದೇ ಸುತ್ತಿದ್ದು. ಬಟ್ಟೆ ಅಂಗಡಿ, ಚಪ್ಪಲಿ ಅಂಗಡಿಗಳು ಬೇಜಾನ್ ಸಿಕ್ಕಿದ್ವೇ ಹೊರ್ತು ಒಂದು ಕ್ಯಾಮೆರಾ ಅಂಗಡಿ ಬಿಟ್ರೆ ಬೇರೇನೂ ಸಿಗಲಿಲ್ಲ. ಅದರಲ್ಲಿ ನಮಗೆ ಬೇಕಾಗಿದ್ದ ಕೆನಾನ್ ಇರದಿದ್ರೂ ನಿಕಾನ್ s2700 ಅನ್ನೋದು ಸಿಕ್ಕಾಪಟ್ಟೆ ಇಷ್ಟ ಆಗೋಯ್ತು. ಸರಿ ಅಂತ ಮುಂದೆ ಬೇರೆ ಅಂಗಡಿ ಹುಡುಕಿ ನಡೆದ ನಮಗೆ ಬೇರೆ ಯಾವ್ದೂ ಸಿಗಲಿಲ್ಲ. ನಡೆದಿದ್ದೇ ನಡೆದಿದ್ದು. ಕಾಲೆಲ್ಲಾ ಬತ್ತಿ ಬರೋ ಹೊತ್ತಿಗೆ ವಾಪಾಸ್ ಬಂದು ಮನೆಯ ಹತ್ತಿರವಿದ್ದ ಹೈಪರ್ ಸಿಟಿಗೆ ಹೊಕ್ವಿ. ಅಲ್ಲಿ ಕೊನೆಗೆ ಕೆನಾನ್ 3200 ತಗೋಳ್ಳೊದು ಅಂತಂತ್ಕೊಂಡ್ವಿ. ಆದ್ರೆ ಟ್ರಯಲ್ ಮಾಡೋಕೆ ಅದ್ರ ಬ್ಯಾಟ್ರಿ ಖಾಲಿ ಆಗಿತ್ತು.
ಮಾರ್ನೆ ದಿನ ಅಂದ್ರೆ ಶುಕ್ರವಾರ. ಅಂದ್ರೆ ನವೆಂಬರ್ ೧. ಊರಿಗೆ ಹೊರಡೋ ದಿನ.ಮಾರ್ನೇ ದಿನದೊಳಗೆ ಕ್ಯಾಮೆರಾ ತಗೊಳ್ಲೇ ಬೇಕು.ಸರಿಯಪ್ಪ, ಕೆನಾನಿಂದೇ ಒಳಗಡೆ ಪೀಸಿದ್ರೆ ಅದ್ನೇ ಕೊಡು. ತಗೊಂಡು ಬಿಡ್ತೇನೆ ಅಂದೆ. ಇದ್ರ ಪೀಸಿಲ್ಲ ಸಾರ್. ಬರೀ ಡಿಸ್ ಪ್ಲೇ ಮಾತ್ರ ಅನ್ಬೇಕಾ !! ಇದ್ದ ಸಿಟ್ಟೆಲ್ಲಾ ನೆತ್ತಿಗೇರಿತ್ತು. ಮುಂಚೆ ಹೇಳೋದಲ್ವಾ . ಪೀಸಿಲ್ಲ ಅಂದ್ರೆ ಶೋಕೆ ಯಾಕಿಡ್ತಾರಪ್ಪಾ ಅಂತ ಬೈಕೊಳ್ತಾನೆ ಒಳಗೆ ಬಂದ್ವಿ. ಮುಂಚೆ ಇಷ್ಟ ಆದ ಅಂಗಡಿಗೆ ವಾಪಾಸ್ ಹೋಗೋಣ್ವೇಣೋ ಅಂದೆ. ಕಾಲೆಲ್ಲಾ ವಿಪರೀತ ನೋಯ್ತಾ ಇದ್ರೂ ಅವ್ನೂ ಸರಿ ಅಂದ. ಒಂಭತ್ತೂಕಾಲು. ನಾವು ಆ ಅಂಗಡಿಗೆ ಹೋಗಿ ಮುಟ್ಟೋಕೂ ಅವ್ರ್ ಬಾಗ್ಲು ಹಾಕೋಕೂ ಸರಿ ಹೋಯ್ತು. ಎಷ್ಟು ರಿಕ್ವೆಸ್ಟ್ ಮಾಡಿದ್ರೂ ಊಹೂ. .ನಾಳೆ ಬೆಳಗ್ಗೆ ಒಂಭತ್ತೂವರೆಗೆ ಓಪನ್ ಆಗತ್ತೆ ಸಾರ್. ಬೆಳಗ್ಗೇನೆ ಬಂದು ಬಿಡಿ ಅಂದ.. ಅವತ್ತಿನ ಮೂರೂವರೆ ಘಂಟೆ ನಡೆದ ಶ್ರಮವೆಲ್ಲಾ ನೀರ ಮೇಲಿನ ಹೋಮ ಮಾಡಿದಂತಾಗಿದ್ದ ಬೇಜಾರು, ನೋಯುತ್ತಿದ್ದ ಕಾಲುಗಳೂ ವಿಪರೀತ ಬೇಜಾರ್ ಉಂಟು ಮಾಡಿದ್ವು. ಆದ್ರೂ ಏನೂ ಮಾಡೋ ಹಾಗಿಲ್ಲ. ಯಾರ ಮೇಲೂ ತಪ್ಪು ಹೊರಿಸೋಹಾಗಿಲ್ಲ. ಇವತ್ತು ಕ್ಯಾಮೆರಾ ತಗೊಳ್ಳೋ ಯೋಗವಿಲ್ಲ ಬಿಡು ಅಂತ ಮತ್ತೆ ಪೀಜಿಗೆ ವಾಪಾಸ್ಸಾದ್ವಿ. ಮಾರನೇ ದಿನ ಮನೆಗೆ ಹೋಗೋ ಹೊತ್ತಿಗೆ ಇಲ್ಲೇ ಮಾರತ್ತಳ್ಳಿಲಿ ಇಳಿದು ಕ್ಯಾಮೆರಾ ತಗೊಂಡೇ ಮನೆಗೆ ಹೋಗಬೇಕೆಂಬ ನಿಶ್ಚಯ ಹಸಿಯುತ್ತಿದ್ದ ಹೊಟ್ಟೆ, ನೋಯುತ್ತಿದ್ದ ಕಾಲುಗಳ ಮಧ್ಯೆಯೂ ಧೃಢವಾಗಿ ಮೂಡಿತ್ತು..
canon powershot a3200 ಒಳ್ಳೇ ಆಯ್ಕೆ ನನ್ನ ಬಳಿ ಅದೇ ಇರೋದು !!
ಧನ್ಯವಾದಗಳು ವೆಂಕಟೇಶ್.. ಆದ್ರೆ ೩೨೦೦ ಖಾಲಿ ಆಗಿರ್ಬೇಕ.. ಕೊನೆಗೆ ಅದ್ನ ತಗೊಳ್ಲಿಲ್ಲ ಬಿಡಿ ನಿಕಾನ್ ೨೭೦೦ ತಗೊಂಡೆ.. 🙂
konegu camera tagoondilva?
ಹೆ ಹೆ.. ಮಾರ್ನೆ ದಿನ ಕೊನೆಗೂ ಕ್ಯಾಮ್ರ ತಗೊಂಡೆ ಮಾರ್ರೆ 🙂
Balyad dinagalanna nenapu madidri………………….