ಕ್ಯಾಮೆರಾಮ್ಯಾನ್: ದಯಾನಂದ ರಂಗದಾಮಪ್ಪ

ಕ್ಯಾಮೆರಾ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಾ ಅರಿವಿಲ್ಲದೆ ನಿದ್ರೆಗೆ ಜಾರಿದ್ದೆ. ಸ್ಟುಡಿಯೋದಲ್ಲಿನ ಫೋನಿನ ರಿಂಗಿನ ಸದ್ದು ನನ್ನನ್ನು ಎಚ್ಚರಿಸಿತು. ನಿದ್ದೆಗಣ್ಣಲ್ಲೇ ಫೋನ್ ಸ್ವೀಕರಿಸಿದೆ. ಅತ್ತ ಕಡೆಯಿಂದ Is this Colors Studios? May I speak to Saurabh ಅಂದ. ನಾನು yes Speaking ಅಂದೆ. ನಾನು ಡೇನಿಯಲ್ ಅಂತ, ನಾಳೆ ಮಧುವೆಗೆ ಒಂದು ಫೋಟೋಶೂಟ್ ಮಾಡಿಕೊಡ್ತಿರಾ ಪ್ಲೀಸ್. ಮುಂದಿನ ವಾರ ನನ್ನ ಮದುವೆ. ಸುಮಾರು ಸ್ಟುಡಿಯೊಸ್ ಗೆ ಕರೆ ಮಾಡಿದೆ ಆದರೆ ಎಲ್ಲ ಸ್ಟುಡಿಯೊಸ್ ಬುಕ್ ಆಗಿವೆ ಅಂದರು.

ನನ್ನ ಸ್ಟುಡಿಯೋ ದಲ್ಲಿನ ಎಲ್ಲ assistant ಗಳು ಅದಾಗಲೇ ಬುಕ್ ಆಗಿದ್ದರು. ಸಾರೀ ಸರ್ ನಮ್ಮ ಸ್ಟುಡಿಯೋದಲ್ಲಿನ ಎಲ್ಲ assistant ಗಳು ಅದಾಗಲೇ ಬುಕ್ ಆಗಿದ್ದರೆ, ಈಗ ಯಾರು ಸಿಗೋದಿಲ್ಲ. ನೀವು ಒಂದು ಅಥವಾ ಎರಡು ತಿಂಗಳ ಮುಂಚೆನೇ ಬುಕ್ ಮಾಡಬೇಕಿತ್ತು ಅಂದೆ. ಅದಕ್ಕೆ ಡೇನಿಯಲ್, ಮೊನ್ನೆ ತಾನೇ ನಾನು ಮತ್ತು ನನ್ನ ಹುಡುಗಿ ಅಮೇರಿಕಾ ನಿಂದ ಬಂದದ್ದು. ಹೀಗಾಗಿ ಮುಂಚಿತವಾಗಿ ಬುಕ್ ಮಾಡಲು ಸಾಧ್ಯವಾಗಲಿಲ್ಲ ಎಂದ. ಯಾಕೋ ಅವನಿಗೆ ಇಲ್ಲ ಅನ್ನಲು ಮನಸ್ಸು ಒಪ್ಪಲಿಲ್ಲ. ಮನುಷ್ಯ ಒಂದೇ ಬಾರಿ ಮದುವೆಯಾಗೋದು ಹಾಗು ಅದು ಅವರ ಜೀವನದ ಮಧುರ ಕ್ಷಣಗಳು ಎಂದರಿತು ಸರಿ ಡೇನಿಯಲ್ ನಾಳೆ ನಾನೇ ಬರ್ತೀನಿ ಅಂದೆ. ತುಂಬಾ ಖುಷಿಯಾದ ಡೇನಿಯಲ್, ಥಾಂಕ್ ಯು ಸೌರಭ್, ನಾಳೆ ಬೆಳಿಗ್ಗೆ 8.30 ಗೆ ಕಬ್ಬನ್ ಪಾರ್ಕ್ಗೆ ಬಂದು ಬಿಡಿ. ಅಲ್ಲೇ ಫೋಟೋಶೂಟ್ ಮಾಡೋಣ ಎಂದ. ನಾನು ಖಂಡಿತ ಎಂದು ಫೋನ್ ಇಟ್ಟೆ.

ಸ್ಟುಡಿಯೋ ಶುರು ಮಾಡಿದ ದಿನಗಳಲ್ಲಿ ನಾನು ಈ ರೀತಿ ಫೋಟೋಶೂಟ್, ಮದುವೆ ಸಮಾರಂಭಗಳಿಗೆ ಹೋಗ್ತಾ ಇದ್ದಿದ್ದು. ಸ್ಟುಡಿಯೋ ಒಂದು ಹಂತಕ್ಕೆ ಬಂದ ಮೇಲಂತೂ ಎಲ್ಲಿಯೂ ಹೋಗದೆ ಸ್ಟುಡಿಯೋದಲ್ಲೇ ಕೂತು ಸೋಂಬೇರಿ ಹಾಗಿದ್ದೇನೆ. ನಾನೊಬ್ಬನೇ ಶುರು ಮಾಡಿದ ಸ್ಟುಡಿಯೋ ಈಗ ನನ್ನ ಕೈ ಕೆಳಗೆ 30 ಕ್ಕೂ ಹೆಚ್ಚು ಜನ ಕೆಲಸ ಮಾಡ್ತಾರೆ ಅನ್ನೋದೇ ಖುಷಿ ವಿಚಾರ.

ಬೆಳಿಗ್ಗೆ ರೆಡಿಯಾಗಿ ಕ್ಯಾಮೆರವನ್ನೆಲ್ಲ ಎತ್ತಿ ಇನ್ನೇನು ಹೊರಡುವಾಗ ನಮ್ಮ ಸ್ಟುಡಿಯೋದಲ್ಲೇ ಕೆಲಸ ಮಾಡುವ ನಿಂಗ ನಾನು ಬರ್ತೀನಿ ಕಣಣ್ಣ ಅಂದ. ನನಗೂ ಒಬ್ಬ ಸಹಾಯಕ ಬೇಕಾಗಿತ್ತು, ಸರಿ ಬಾ ಅಂತ ಅವನನ್ನು ಕರಕೊಂಡು OLA CAB ಹತ್ತಿದೆವು.

ನಿಂಗ ನನಗೆ ಪರಿಚಯವಾದದ್ದು ಬನಶಂಕರಿ ದೇವಸ್ಥಾನದ ಬಳಿಯಲ್ಲಿ. ನಾನು ನನ್ನ ಸ್ಟುಡಿಯೋ ಶುರು ಮಾಡಿದ ದಿನಗಳವು. ಒಂದಷ್ಟು ವಿಸಿಟಿಂಗ್ ಕಾರ್ಡ್ ಗಳನ್ನೂ ಕೈಯಲ್ಲಿ ಇಟ್ಟುಕೊಂಡು ಬೆಂಗಳೂರಿನ ಮದುವೆ ಮಂಟಪಗಳ ಬಳಿ ಕೊಟ್ಟು ಬರುತ್ತಿದ್ದೆ. ಆಗ ನಿಂಗ ಕಸದ ತೊಟ್ಟಿಯಲ್ಲಿ ಬೀಸಾಡಿ ಹೋಗಿದ್ದ ಊಟವನ್ನು ತಿನ್ನುತ್ತಿದ್ದದನ್ನು ನೋಡಿ ನನ್ನ ಮೈ ಕುಲುಕಿದಂತಾಯ್ತು. ಕೂಡಲೇ ಅವನ್ನು ಕರೆದೊಯ್ದು ಸ್ನಾನ ಮಾಡಿಸಿ, ಬೆಳೆದ ಕೂದಲು, ಉಗುರುಗಳನ್ನು ಕತ್ತರಿಸಿ ನನ್ನ ಸ್ಟುಡಿಯೋದಲ್ಲೇ ಕಸ ಗುಡಿಸುವ ಕೆಲಸ ಕೊಟ್ಟೆ. ನನ್ನ ಜೊತೆ ನಿಂಗ ಕೆಲಸ 8 ವರ್ಷಗಳೇ ಆಯಿತು. ಇಲ್ಲಿಯವರೆಗೆ ಒಂದು ರೂಪಾಯಿನೂ ಸಂಬಳ ಅಂತ ಸ್ವೀಕರಿಸಿಲ್ಲ. ತುಂಬಾ ಬಲವಂತ ಮಾಡಿ ಕೊಡೋಕೆ ಹೋದ್ರೆ “ಇಷ್ಟೇನಾ ಸಾಮಿ ನಮ್ದು ನಿಮ್ದು ಸಂಬಂಧ ” ಅಂತಾನೆ. ನನಗೂ ಗೊತ್ತಿಲ್ಲ, ಅವನೇ ಹೇಳ್ಬೇಕು ನಂದು ಅವನದ್ದು ಯಾವ ರೀತಿ ಸಂಬಂಧ ಅಂತ!!!!!!.

ನಾನು ಎಷ್ಟೇ ಹೇಳಿದರು ಕೇಳದ ನಿಂಗ ತಲೇನ ಕಾರಿಂದ ಆಚೆ ಹಾಕಿ ರೋಡಲ್ಲಿ ಸಿಕ್ಕ ಕಸದ ಬುಟ್ಟಿಗಳನೆಲ್ಲ ನೋಡುತ್ತಾ “ಅಣೋ ಇಲ್ಲೂ ತಿಂದಿದ್ದೀನಿ ಊಟ…ಇಲ್ಲೂ ಕೂಡ ” ಅಂತ ರೋಡಲ್ಲಿ ಹಾದು ಹೋಗುತ್ತಿದ್ದ ಕಸದ ಬುಟ್ಟಿಗಳನ್ನ ಫೈವ್ ಸ್ಟಾರ್ ಹೋಟೆಲ್ ನಲ್ಲಿ ತಿಂದ ರೇಂಜಿಗೆ ಬಿಲ್ಡ್ ಅಪ್ ಕೊಡ್ತಾ ಇದ್ದ. ನಾನು ನಗುತ್ತ ಹೇಗಿರುತ್ತಿತ್ತೋ ಊಟ ಅಂದ್ರೆ ” ಮೇಘನ ಬಿರಿಯಾನಿ ” ನಲ್ಲೂ ಆ ರುಚಿ ಸಿಗಲ್ಲ ಬಿಡಣೋ ಅಂದ. ಆಮೇಲೆ ಯಾಕೋ ಮಂಕು ಕವಿದವನಾಗಿ ಕಾರಿನ ಆಚೆ ಇದ್ದ ತಲೆಯನ್ನು ಒಳಗೆ ಸರಿಸಿ ನನ್ನ ತಬ್ಬಿ ಜೋರಾಗಿ ಎರಡು ನಿಮಿಷ ಅತ್ತು ಸುಮ್ಮನಾದ. ನಾನು ಯಾಕೆ ಅಂತ ಕೇಳಲು ಹೋಗಲಿಲ್ಲ. ನಾನು ಸ್ವಲ್ಪ ಭಾವುಕನಾಗಿದ್ದೆ ಆದರೆ ಕ್ಯಾಬ್ ಡ್ರೈವರ್ ಮುಂದೆ ಸೀನ್ ಕ್ರಿಯೇಟ್ ಮಾಡೋದು ಬೇಡ ಅಂತ ಸುಮ್ಮನಾದೆ.

ಕಬ್ಬನ್ ಪಾರ್ಕ್ನಲ್ಲಿ ಕಾರಿಂದ ಕೆಳಗೆ ಇಳಿದು ಡೇನಿಯಲ್ ಗಾಗಿ ಹುಡುಕಾಟ ನಡೆಸಿದ್ವಿ. ಅಷ್ಟರಲ್ಲಿ ಡೇನಿಯಲ್ ದೂರಿಂದ ಹಲೋ ಅಂತ ಕೈ ಸನ್ನೆ ಮಾಡಿದ. ನಾನು ಮುಗುಳ್ನಕ್ಕು ಹಯ್ ಎಂದು ಅವನ ಬಳಿಗೆ ಹೋದೆ. ಅವನನ್ನು ಮದುವೆ ಹಾಗೋ ಹುಡುಗಿ ಕನ್ನಡೀಲಿ ಕೂದಲು ಸರಿ ಮಾಡಿಕೊಳ್ತಾ ಇದ್ದಳು. ಸಾಗರಿಕ, meet Saurabh ಅಂತ ಡೇನಿಯಲ್ ನನ್ನನು ಪರಿಚಯಿಸಿದ. ಅವಳು ಹಯ್ ಅಂತ ನನ್ನ ಕಡೆ ತಿರುಗಿದಳು.

ಲೋಕವೇ ಒಂದು ನಿಮಿಷ ಕಳಚಿ ಬಿದ್ದಂತಾಯಿತು. ಯಾರನ್ನು ನಾನು ಮತ್ತೆಂದೂ ನನ್ನ ಜೀವನದಲ್ಲಿ ನೋಡಬಾರದೆಂದು ಅಂದುಕೊಂಡಿದ್ದೇನೋ ಅವಳನ್ನು ನೋಡಿದ ಈ ಘಳಿಗೆಯನ್ನು ವಿಚಾರಿತ ಬೈದುಕೊಂಡೆನು. ಅವಳೇ ನನ್ನ 9 ವರ್ಷದ ಹಿಂದಿನ ಸಾಗರಿಕ. ನನ್ನ ದೇವತೆ!!!!!

ನಾನು puc ಮಾಲೂರಿನಲ್ಲಿ ಮುಗಿಸಿ B.E ಗೆಂದು ಬೆಂಗಳೂರಿನ B.I.T ಕಾಲೇಜಿಗೆ ಸೇರಿದ್ದೇ. ಕನ್ನಡ ಮಾದ್ಯಮದಲ್ಲಿ ವ್ಯಾಸಂಗ ಮಾಡಿ ಬಂದ ಕಾರಣ ನನಗೆ ಕಾಲೇಜು ಕರಿಡಾರುಗಳಲ್ಲಿ ಓಡಾಡಲು ಭಯಪಡುತ್ತಿದ್ದ ದಿನಗಳವು. ಕಾಲೇಜು ID ಕಾರ್ಡ್ ಪಡೆದುಕೊಳ್ಳಲು ಸಾಲಿನಲ್ಲಿ ನಿಂತಿದ್ದೆ. ನನ್ನ ಮುಂದೆ ಸಾಗರಿಕ ನಿಂತಿದ್ದಳು. ಅವಳಿಗೆ ಕಾಲೇಜಿನ peon ID ಕಾರ್ಡ್ ಕೊಟ್ಟ. ಸಾಗರಿಕ ID ಕಾರ್ಡ್ ನಲ್ಲಿ ಅವಳ ಫೋಟೋ ನೋಡಿ peon ಮೇಲೆ ಜಗಳಕ್ಕೆ ಬಿದ್ದಳು. ನಾನಿನ್ನು ಚೆನ್ನಾಗಿ ಕಾಣಿಸ್ತೀನಿ ನೀವು ಸರಿಯಾಗಿ ಫೋಟೋ ತೆಗಿದಿಲ್ಲ ಅಂತ ಗೋಗರೆದಳು. peon ಇಲ್ಲ ಕಣಮ್ಮ ಚೆನ್ನಾಗಿಯೇ ಇದೆ ಫೋಟೋ ಪಾರಾಗಲು ಯತ್ನಿಸಿದ. ಸಾಗರಿಕ ನನ್ನ ಕಡೆ ತಿರುಗಿ ” ಸರಿಯ್ಯಾಗಿ ನೋಡಿ ಹೇಳೋ, ಈ ಫೋಟೊಗಿಂತ ನಾನು ನೋಡೋಕೆ ಚೆನ್ನಾಗಿ ಕಾಣಿಸಲ್ವೇನೋ ? ಅಂದಳು. ನಾನು ಅವಳ ಅಂದಕ್ಕೆ ಮೂಕಪ್ರೇಕ್ಷಕನಾಗಿದ್ದೆ. ನಾನು ಸುಮ್ಮನೆ ತಲೆ ಅಲ್ಲಾಡಿಸಿದೆ. ಅವಳು ನಿನ್ನ ತಲೆ ಅಂತ ನನ್ನ ತಲೆಗೆ ಒಂದು ಬಡಿದು ಅಲ್ಲಿಂದ ಹೊರಟಳು.

ಮರುದಿನ ಕಾಲೇಜಿನ ಬೇಸ್ಮೆಂಟ್ ಗೆ ಬಂದೆ. ಲಿಫ್ಟ್ ತುಂಬಿತ್ತು. ನೆಕ್ಸ್ಟ್ ಲಿಫ್ಟಿಗೆ ಹೋಗೋಣ ಅಂತ ನಿಂತಿದ್ದೆ. ಅಷ್ಟರಲ್ಲಿ ಸಾಗರಿಕ ಲಿಫ್ಟ್ ಒಳಗಿಂದ “ಸೌರಭ್, ಬಾರೋ ಹಾಗುತ್ತೆ ಅಂತ ಸ್ವಲ್ಪ ಜಾಗ ಮಾಡಿಸಿ ನನ್ನನ್ನು ಒಳಗೆ ಕರೆದುಕೊಂಡಳು.” ಆ ಕ್ಷಣ ನನಗೆ ಅವಳ ಹೃದಯಕ್ಕೆ ಪ್ರವೇಶ ಕೊಟ್ಟಂತೆ ಭಾಸವಾಯಿತು. ಬೆಂಗಳೂರಿನ RKMT ಹಾಸ್ಟೆಲ್ ನಲ್ಲಿ ತಂಗಿದ್ದ ನಾನು ಲಂಚ್ ಬಾಕ್ಸ್ ತಗೆದು ಕೊಂಡು ಹೋಗುತ್ತಿರಲಿಲ್ಲ. ಅವಳೇ ನನಗೆಂದು ಎಕ್ಸ್ಟ್ರಾ ಲಂಚ್ ಬಾಕ್ಸ್ ತೆಗಿದುಕೊಂಡು ಬರುತ್ತಿದ್ದಳು. ಹೀಗೆ ದಿನದಿಂದ ದಿನಕ್ಕೆ ಸ್ನೇಹ ಪ್ರೀತಿಯ ಕಡೆಗೆ ತಿರುಗಿತು. ಇತ್ತಕಡೆ ವರ್ಷದಿಂದ ವರ್ಷಕ್ಕೆ ನನ್ನ backlog ಸಂಖ್ಯೆ ಹೆಚ್ಚತೊಡಗಿತು. ತುಂಬಾ backlog ಆದ ಕಾರಣ ನನಗೆ ಫೈನಲ್ year ಗೆ ಪ್ರವೇಶ ಸಿಗಲಿಲ್ಲ.
Hostel ನಲ್ಲೂ ನನಗೆ ಸೀಟು ಕೊಡಲಿಲ್ಲ. ರಾಜಾಜಿನಗರದಲ್ಲೇ ಒಂದು ರೂಮು ಮಾಡಿಕೊಂಡೆ. ರೂಮಿನ ಬಾಡಿಗೆಗೆಂದು ಚಿಕ್ಕ ಸ್ಟುಡಿಯೋದಲ್ಲಿ ಕ್ಯಾಮೆರಾಮ್ಯಾನ್ ನ್ನಾಗಿ ಸೇರಿಕೊಂಡೆ. ಸಾಗರಿಕ ಜೊತೆ ಬರೀ ಫೋನಿನಲ್ಲಿ ಮಾತ್ರ ಮಾತನಾಡತೊಡಗಿದೆ. ಒಂದು ದಿನ ಸ್ಟುಡಿಯೋದವರು ನನ್ನನ್ನು ಯಾವುದೋ ಒಂದು ಮದುವೆಗೆ ನೀನೆ ಕ್ಯಾಮೆರಾ ಮ್ಯಾನ್ ನಾಗಿ ಹೋಗೆಂದು ಬಡ್ತಿ ಕೊಟ್ಟರು. ನನಗೆ ತುಂಬಾ ಖುಷಿಯಾಯಿತು. ಇಷ್ಟು ಬೇಗ ನನ್ನನ್ನು ನಂಬಿ ಒಂದು ಮದುವೆಗೆ ಕಲಿಯಿಸುತ್ತಿರುವುದು ನನ್ನ ಕೆಲಸಕ್ಕೆ ಮೆಚ್ಚಿಯೇ ಸರಿ ಅಂದುಕೊಂಡು ಹೊರಟೆ.

ತುಂಬಾ ದೊಡ್ಡ ಮದುವೆ ಮಂಟಪವದು. ತುಂಬಾ ಶ್ರೀಮಂತರ ಮದುವೆಯದು. ನಾನು ಕ್ಯಾಮೆರಾದಲ್ಲಿ ಶೂಟ್ ಮಾಡತೊಡಗಿದೆ. ಇದ್ದಕಿದ್ದ ಹಾಗೆ ಸಾಗರಿಕ ನನ್ನ ಕ್ಯಾಮೆರಾ ಕಣ್ಣಿಗೆ ಸೆರೆಯಾದಳು. ತುಂಬಾ ದಿನದಿಂದ ಅವನನ್ನು ಮಾತನಾಡಿಸದಿದ್ದ ಕಾರಣ ಅವಳ ನೋಡಿ ಮರುಭೂಮಿಯಲ್ಲಿ ಕರಿ ಮೋಡ ನೋಡಿದಂತಾಯ್ತು. ಸಾಗರಿಕ ಅಂತ ಜೋರಾಗಿ ಕೂಗಿದೆ. ಅವಳು ನನ್ನನ್ನು ನೋಡಿ ಮೊದಲು ನಕ್ಕು ಆಮೇಲೆ ಆಶ್ಚರ್ಯ ಚಕಿತಳಾದಳು. ನನ್ನ ಹತ್ತಿರ ಬಂದವಳೇ ನೀನೇನು ಇಲ್ಲಿ ಎಂದಳು. ನಾನೇ ಕ್ಯಾಮೆರಾಮ್ಯಾನ್ ಇಲ್ಲಿ ಎಂದೆ. ಅವಳು ವಾಟ್ ????ಕ್ಯಾಮೆರಾಮ್ಯಾನ್ ಹಾ ? ಎಂದಳು. ನಾನು ನಿದಾನವಾಗಿ ಎಲ್ಲ ವಿಚಾರಿಸಿದೆ. ಹಾಸ್ಟೆಲ್ ನಲ್ಲಿ ಸೀಟ್ ಸಿಗದೇ ರೂಮ್ ಮಾಡಿಕೊಂಡಿರುವುದು ಹಾಗು ರೂಮಿನ ಬಾಡಿಗೆ ಹಾಗು ಮೂರತ್ತು ಊಟಕ್ಕೆ ಸ್ಟುಡಿಯೋ ದಲ್ಲಿ ಕೆಲಸ ಮಾಡುವುದನ್ನೆಲ್ಲ ಅವಳತ್ರ ಹೇಳಿದೆ. ಅದಕ್ಕೆ ಅವಳು ಸರಿ ಸರಿ ಇದು ನಮ್ಮ ಸಂಭಂದಿಕರ ಮದುವೆ, ಮತ್ತೆಂದೂ ಇಲ್ಲಿ ಜೋರಾಗಿ ನನ್ನ ಹೆಸರು ಕೂಗಬೇಡ ತಿಳಿತಾ ಅಂತ ವಾರ್ನಿಂಗ್ ಕೊಡುವ ರೀತಿ ಕೊಟ್ಟು ಹೊರಟಳು.

ಅವಳು ಈ ರೀತಿ ನನ್ನ ಜೊತೆ ಎಂದೂ ಕಠೋರವಾಗಿ ಮಾತನಾಡಿದವಳೇ ಅಲ್ಲ. ನಾನು ಅದರ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡಿಲ್ಲ ಯಾಕೆಂದ್ರೆ ಮೊದಲ ಬಾರಿಗೆ ಸ್ಟುಡಿಯೋದವರು ನನ್ನನ್ನು ನಂಬಿ ಕ್ಯಾಮೆರಾಮ್ಯಾನ್ ನಾಗಿ ಬಡ್ತಿ ಕೊಟ್ಟಿದಾರೆ. ಇಲ್ಲಿ ಏನೂ ತಪ್ಪಿಲ್ಲದೆ ಕೆಲಸ ಮಾಡಿ ಅವರ ನಂಬಿಕೆ ಉಳಿಸೋದು ನನ್ನ ಕರ್ತವ್ಯ ಆಗಿತ್ತು. ಅಷ್ಟರಲ್ಲಿ ನಮ್ಮೂರು ಗೌಡ ನನ್ನ ಹತ್ರ ಬಂದ. ನಾನು ಅಣ್ಣಾ, ಚೆನ್ನಾಗಿದ್ದೀಯ ಅಂದೆ. ಅದಕ್ಕೆ ಗೌಡ, ಹೂ ಮಗ ಚೆನ್ನಾಗಿದ್ದೀನಿ ನೀನೇನು ಈ ಕೆಲಸ ಮಾಡ್ತಾ ಇದ್ದೀಯ ? ನಿಮ್ ಅಪ್ಪ ಇಂಜಿನಿಯರಿಂಗ್ ಮಾಡ್ತಾ ಅವ್ನೆ ಅಂತ ಬೆಳಿಗ್ಗೆ ಸಾಯಂಕಾಲ ಕೂಲಿ ಮಾಡ್ತಾನೆ ಕಂಡೋರ ಹೊಲದಲ್ಲಿ ಅಂದ. ಅದಕ್ಕೆ ನಾನು ರಜೆ ಇದ್ದಾಗ ಈ ಕೆಲಸ ಮಾಡ್ತೀನಿ ಕಣಣ್ಣ ಅಂತ ಸುಳ್ಳು ಹೇಳ್ದೆ. ಈ ಮದುವೆಗೆ ನಮ್ಮೂರು ಗೌಡ್ರು ಬರ್ತಾರೆ ಅಂತ ಮುಂಚೆನೇ ಗೊತ್ತಿದ್ರೆ ನನ್ನ ಎಡಗಾಲು ಇಲ್ಲಿ ಇಡ್ತಾ ಇರ್ಲಿಲ್ಲ ಅಂತ ಮನಸಲ್ಲೇ ಅಂದುಕೊಂಡೆ. ಗೌಡ್ರು ಚೆನ್ನಾಗಿ ಓದು ಮಗ ನಮ್ಮೂರಿಗೆ ನೀನೆ ಮೊದಲನೇ ಇಂಜಿನಿಯರ್ ಅಂತ ತನ್ನ ಜೋಬಿನಿಂದ 500 ರೂ ತೆಗಿದು ನನ್ನ ಜೋಬಲ್ಲಿ ಇಟ್ಟ. ಬ್ಯಾಡ ಕಣಣ್ಣ ಅಂದೆ, ಮಡಕೋ ಮಗ ಬೇಕಾಗತೈತೆ ಅಂದ. ಬಡ್ಡಿ ತಿನ್ನೋ ಬಡ್ಡಿ ಮಗ ನಮ್ಮೂರು ಗೌಡನಿಗೆ ಒಳ್ಳೆ ಬುದ್ದಿ ಬಂತಲಪ್ಪಾ ಅಂತ ಸುಮ್ಮನಾದೆ.

ಮದುವೆ ಎಲ್ಲ ಮುಗಿದ ಮೇಲೆ ಕ್ಯಾಮೆರಾ ಎಲ್ಲ ಪ್ಯಾಕ್ ಮಾಡಿ ಆಟೋಗೆ ಕಾಯ್ತಾ ಇದ್ದೆ.ಸಾಗರಿಕ ಓಡೋಡಿ ನನ್ನ ಕಡೆಗೆ ಬಂದಳು. ನಿನ್ನ ಜೊತೆ ಎರಡು ನಿಮಿಷ ಮಾತನಾಡಬೇಕು ಅಂದಳು. ನಾನು ಆಯ್ತು ಮಾತನಾಡು ಅಂದೆ. ಇಲ್ಲಿಯವರೆಗೆ ಆದದ್ದೆಲ್ಲ ಮರೆತುಬಿಡು, ನೀನು ಕ್ಯಾಮೆರಾಮ್ಯಾನ್ ಅಂತ ನಮ್ಮ ಮನೆಯವರಿಗೆ ಇರ್ಲಿ ನನ್ನ ಕೈನಲ್ಲೂ ಅರಿಗಿಸಿಕೊಳ್ಳಲು ಸಾಧ್ಯವಿಲ್ಲ. ಇನ್ನು ನನ್ನ ಅಪ್ಪ ಅಮ್ಮ, ಸಂಬಂದಿಕರು ಒಪ್ಪೋದೇ ಇಲ್ಲ. ಈಗಾಗಲೇ ನನಗೆ ಮೂರು ಕಂಪನಿ ಗಳಲ್ಲಿ ಕೆಲಸ ಸಿಕ್ಕಿದೆ. ಫೈನಲ್ year ಪ್ರಾಜೆಕ್ಟ್ ಮುಗಿದ ನಂತರ ಕೆನಡಾ ಗೆ ಹೋಗ್ತಾ ಇದೀನಿ…ಸಾರೀ ಕಣೋ ಅಂದಳು.

ನಾನು ಏನೂ ಹಾಗಾದವನಂತೆ ಹುಸಿ ನಗೆಯೊಂದನ್ನು ಚೆಲ್ಲಿ “ಸರಿ ಸಾಗರಿಕ, ನಿನಗೆ ಇಷ್ಟ ಬಂದಂತೆ ಮಾಡು” ಅಂದೆ. ಸರಿ ನಾನಿನ್ನು ಬರ್ತೀನಿ, ನನ್ನ ಜೊತೆ ಕ್ಯಾಂಟೀನ್ ನಲ್ಲಿ, ಕಾರಿಡಾರ್ ನಲ್ಲಿ, ಕೆಫೆ ದಲ್ಲಿ, ಮೂವಿ ಥೀಯೇಟರ್ ನಲ್ಲಿ, ಪಾರ್ಕ್ ನಲ್ಲಿ ತೆಗಿಸಿಕೊಂಡಿರೋ ಎಲ್ಲ ಫೋಟೋ ಗಳನ್ನೂ ಡಿಲೀಟ್ ಮಾಡೋ ಅಂತ ಹೇಳಿ ಹೊರತು ಹೋದಳು. ಅಷ್ಟರಲ್ಲಿ ಆಟೋ ಬಂದು ನಿಂತಿದ್ದ. ಎಲ್ಲಿಗೆ ಅಣ್ಣಾ ಅಂದ. ನಾನು ಸುಡುಗಾಡಿಗೆ ಅಂದೆ, ಅವನು ಮರುಮಾತನಾಡದೆ ರಾಜಾಜಿನಗರ ದ ಹರಿಚಂದ್ರ ಘಾಟಲ್ಲಿ ಬಿಟ್ಟು ಹೊರಟ. ಆಟೋ ಹಿಂದುಗಡೆ ” ಪ್ರೀತಿ ಮಾಯೆ ಹುಷಾರು, ಕಣ್ಣೀರು ಮಾರೋ ಬಜಾರು ” ಅಂತ ಬರೆಸಿ ಕೊಂಡಿದ್ದ. ಇಂಜಿನಿಯರಿಂಗ್ ಗೆ ಬೆಂಗಳೂರಿಗೆ ಬಂದ ಮೊದಲನೆಯ ದಿನವೇ ಈ ಆಟೋ ಹತ್ತಬೇಕಿತ್ತು ಅಂದುಕೊಂಡೆ. ಸ್ಟುಡಿಯೋ ದಲ್ಲಿ ಕ್ಯಾಮೆರಾ ಇಟ್ಟು ರೂಮಿನಲ್ಲಿ ಮಲಗಿಕೊಂಡೆ. ಅವತ್ತೆಲ್ಲ ನಿದ್ರೆಯೇ ಬಂದಿಲ್ಲ.

ಅವಳ ನೆನಪಲ್ಲೇ ಸ್ಟುಡಿಯೋಗೆ ಹೋಗುವುದನ್ನು ಬಿಟ್ಟೆ. ಒಂದು ದಿನ ಗೌಡ್ರು ಮನೆಯಿಂದ ನನ್ನ ತಂದೆ ಕರೆ ಮಾಡಿದರು. ನಿನ್ನ ತಂಗಿಗೆ ಒಳ್ಳೆ ಸಂಬಂಧ ಬಂದಿದೆ ಮಗಾ. ನಿನಗೆ ಕೆಲಸ ಸಿಗ್ಲಿ ಆಮೇಲೆ ಮದುವೆ ಮಾಡ್ತೀನಿ ಅಂತ ಗಂಡಿನ ಕಡೆಯವರಿಗೆ ಹೇಳಿ ಕಳುಹಿಸಿದೆ. ಇನ್ನು ಎಷ್ಟು ದಿನ ಐತೆ ಮಗಾ ನೀನು ಓದೋದು ಅಂದ್ರು. ನಾನು ಇನ್ನೇನು ಮೂರು ತಿಂಗಳು ಇದೆ ಅಪ್ಪ ಅಂತ ಹೇಳಿ ತಂಗಿಗೆ ಫೋನ್ ಕೊಡು ಅಂದೇ. ಅತ್ತ ಕಡೆ ತಂಗಿ ಕುಶಲ ” ಅಣ್ಣ, ನಂಗೇನು ಮದುವೆ ಅರ್ಜೆಂಟ್ ಇಲ್ಲ, ನೀನು ಆರಾಮಾಗಿ ಓದು ಆಮೇಲೆ ಮದುವೆ ಆದ್ರೆ ಆಯಿತು. ನೀನು ಯಾವುದೇ ಸಾಲಕ್ಕೆ ಸಿಕ್ಕಾಕಿ ಕೊಲ್ಲಬೇಡ ಅಂದ್ಲು.” ಅಮ್ಮ ಎಲ್ಲಿ ಅಂದೇ ಅದಕ್ಕೆ ಕುಶಲ, ಗೌಡ್ರು ಹೊಲದಲ್ಲಿ ಕೂಲಿ ಮಾಡ್ತಾ ಅವಳೇ ಅಂದ್ಳು. ಆಯ್ತಮ್ಮಾ ಅಂತ ಫೋನ್ ಕಟ್ ಮಾಡಿದೆ.

ನನ್ನ ತಂಗಿಗೆ ಇರೋ ಜವಾಬ್ದಾರಿ ನನಗೆ ಇಲ್ಲವಲ್ಲ ಅಂತ ನನ್ನ ಮೇಲೆ ನನಗೆ ಹೇಸಿಗೆ ಆಗತೊಡಗಿತು. ಸಾಗರಿಕ ಮೇಲಿದ್ದ ಪ್ರೀತಿಯನ್ನೆಲ್ಲ ಕ್ಯಾಮೆರಾ ಕಡೆ ತಿರುಗಿಸಿದೆ. ಹೆಚ್ಚೆಚ್ಚು ಕ್ಯಾಮೆರದಲ್ಲಿನ ವಿಶೇಷತೆಗಳನ್ನು ಕಲಿತೆ, ಸಂಪಾದಿಸಿದೆ. ಜನಾರ್ಧನ್ ರೆಡ್ಡಿ ಮಗಳ ಮದುವೆ, ರಾಧಿಕಾ ಕುಮಾರಸ್ವಾಮಿ ಮದುವೆ, ರವಿ ಬೆಳಗೆರೆ ಎರಡೆನೆಯ ಮದುವೆ, ದುನಿಯಾ ವಿಜಯ್ ಎರಡೆನೆಯ ಮದುವೆ, ಯಶ್ ರಾಧಿಕಾ ಮದುವೆ, ರಕ್ಷಿತ್ ಶೆಟ್ಟಿ ಎಂಗೇಜ್ಮೆಂಟ್ ಎಲ್ಲ ಶೂಟ್ ಮಾಡಿದ್ದು ನಮ್ಮ ಸ್ಟುಡಿಯೋದಿಂದಲೇ. ಮೊನ್ನೆ ನಾಲ್ಕು ವರ್ಷದ ಹಿಂದುಗಡೆ ತಂಗಿಗೆ ಮದುವೆ ಮಾಡಿಸಿದೆ. ಗಂಡನ ಜೊತೆ ಸುಖವಾಗಿ ಸಂಸಾರ ನಡಿಸ್ತಾ ಇದಾಳೆ.IAS ಗೆ ಪ್ರಿಪೇರ್ ಆಗ್ತಾ ಇದಾಳೆ.

ಈಗ, ಯಾರನ್ನು ಜೀವಮಾನವೆಲ್ಲ ನೋಡಬಾರದೆಂದು ಅಂದುಕೊಂಡಿದ್ದೇನೋ ಹೀಗ ಅವಳ ಮದುವೆಗೆ ಫೋಟೋಶೂಟ್ ಮಾಡುವ ದೌರ್ಭಾಗ್ಯ ಒದಗಿ ಬಂದಿದೆ. ಸಾಗರಿಕ ನನ್ನ ಕಡೆ ತಿರುಗಿ ಏನೂ ತಿಳಿದವಳಂತೆ ಹಯ್ ಎಂದಳು. ನಾನು ಹಲೋ ಮೇಡಂ ಎಂದೇ. ಅವಳ ಮುಖದಲ್ಲಿ ಕೊಂಚ ಬದಲಾವಣೆಯಾದರೂ ತೋರಿಸಿಕೊಂಡಿಲ್ಲ. ಬಾವಿ ಗಂಡನ ಜೊತೆ ಮಾಜಿ ಪ್ರೇಯಸಿ ಫೋಟೋಗಳನ್ನು ಒಬ್ಬ ಮಾಜಿ ಪ್ರೇಯಸನಾಗಿ ಎಷ್ಟು ಕೆಟ್ಟದಾಗಿ ತೆಗೆಯಲು ಸಾಧ್ಯವೋ ಅಷ್ಟು ಕೆಟ್ಟದಾಗಿ ತೆಗೆದೇ. ಫೋಟೋಶೂಟ್ ಎಲ್ಲ ಮುಗಿದಮೇಲೆ ನಿಂಗನಿಗೆ ಎಲ್ಲ ಪ್ಯಾಕ್ ಮಾಡು ಐದು ನಿಮಿಷ ಬಂದೆ ಅಂತ ಕಬ್ಬನ್ ಪಾರ್ಕ್ ನ ಗ್ರಂಥಾಲಯ ಮುಂದಿರೋ ಗುಲಾಬಿ ತೋಟದ ಮುಂದೆ ಹೋಗಿ ಅತ್ತು ಬಿಟ್ಟೆ. ನಿಂಗ ನನಗಾಗಿ ಹುಡುಕಿಕೊಂಡು ಬಂದದ್ದು ಅರಿವಾಗಲಿಲ್ಲ. ಅಣ್ಣ, ಪೇಮೆಂಟ್ ಮಾಡೋಕೆ ಡೇನಿಯಲ್ ಕರೀತಿದಾರೆ ಅಂದ. ನಾನು, ನಡಿ ಬಂದೆ ಅಂದೇ.
ಡೇನಿಯಲ್ ಪೇಮೆಂಟ್ ಮಾಡಿದ. ತುಂಬಾ ಥ್ಯಾಂಕ್ಸ್ ಸೌರಭ್ ಅಂದ. ನಾನು ವೆಲ್ಕಮ್ ಅಂದೇ. ಇಫ್ ಯು ಡೋಂಟ್ ಮೈಂಡ್, ಕಾಫಿ ಕುಡಿದುಕೊಂಡು ಹೋಗಬಹುದಲ್ವಾ ಅಂದ, ನಾನು ತಲೆ ಅಲ್ಲಾಡಿಸಿದೆ. M G ರೋಡ್ ನಲ್ಲಿರೋ ಗ್ರೀನ್ ಕೆಫೆ ದಲ್ಲಿ ಟೀ ಕುಡಿತ ಇದ್ವಿ. ಬ್ರೇಕ್ ಫೇಲ್ಯೂರ್ ಆದ ಕಾರೊಂದು ನಮ್ಮೆಡೆ ನುಗ್ಗಿತು. ನಾನು, ಡೇನಿಯಲ್ ಪಾರಾದ್ವಿ. ಸಾಗರಿಕ, ನಿಂಗ ಕೊಂಚ ದೂರದಲ್ಲಿ ಬಿದ್ದರು. ನಾನು ಕೂಡಲೇ ನಿಂಗನ ಕಡೆ ಓಡಿ ಹೋಗಿ ಅವನನ್ನು ಎತ್ತಿಕೊಂಡೆ. ಡೇನಿಯಲ್ ಸಾಗರಿಕಳ ಕೈನಿಂದ ಜಾರಿ ಬಿದ್ದಿದ್ದ I-Phone X ಕೈ ನಲ್ಲಿ ಎತ್ತುಕೊಂಡು scrtach ಹಾಗಿದೀಯ ಅಂತ ಚೆಕ್ ಮಾಡ್ತಾ ಇದ್ದ. ನಿಂಗ ನನ್ನನು ನೋಡಿ, ಕ್ಯಾಮೆರಾ ಹೊಡೆದು ಹೋಗಿದೆ ಅಂದ. ನನ್ನ ಎರಡು ಲಕ್ಷ ಬೆಲೆಬಾಳುವ professional ಕ್ಯಾಮೆರಾ ನಿಂಗನ ಕೈನಿಂದ ಬಿದ್ದು ಚೂರಾಗಿತ್ತು. ನಾನು ಪರವಾಗಿಲ್ಲ ಬಿಡೋ ನಿಂಗ ನಿಂಗೇನು ಆಗಿಲ್ವಲ್ಲ ಅಷ್ಟೇ ಪುಣ್ಯ ಅಂದೇ. ಸಾಗರಿಕ ಬಿದ್ದ ಸ್ಥಳದಿಂದ ನನ್ನನ್ನು ಶೂನ್ಯಗಣ್ಣಿನಿಂದ ನೋಡುತ್ತಿದ್ದಳು. ಡೇನಿಯಲ್ “ಥಾಂಕ್ ಗಾಡ್, ಮೊಬೈಲ್ ಗೆ ಏನೂ ಆಗಿಲ್ಲ ಅಂತ ಸಾಗರಿಕಳ ಕೈ ಹಿಡಿದು ಮೇಲಕ್ಕೆ ಎತ್ತಿದ.

ಆದರೆ, ಆ ಕ್ಷಣದಲ್ಲಿ ನನಗೆ ಕ್ಯಾಮೆರಾ ಹಾಗು ಸಾಗರಿಕಳಿಗಿಂತಾನು ನಿಂಗಾನೆ ಮುಖ್ಯನಾಗಿದ್ದ. ನನ್ನ ಹೃದಯಾನಾ ಕೊಲೆ ಹಾಗು ಕೊಳೆ ಮಾಡಿ ಹೋದವಳಿಗಿಂತ ನಿತ್ಯ ನನ್ನ ಸ್ಟುಡಿಯೋ ದಲ್ಲಿ ಕಸ ಹೊಡೆಯುವವನೇ ನನಗೆ ಶ್ರೇಷ್ಠ ಅನ್ನಿಸಿತು.

“ಎಲ್ಲಾ ಕ್ಯಾಮೆರಾಮ್ಯಾನ್ ಗಳು, ಎಲ್ಲರ ಬದುಕಿನ ಕ್ಷಣಗಳನ್ನು ಅತಿ ಸುಂದರವಾಗಿ ಚಿತ್ರಿಸುವ ಭರದಲ್ಲಿ ತಮ್ಮ ಬದುಕಿನ ಅಮೂಲ್ಯ ಕ್ಷಣಗಳನ್ನು ಮರೆತುಬಿಟ್ಟಿರುತ್ತೇವೆ. ಅಲ್ಲಿಂದ ನಾಲ್ಕೆಜ್ಜೆ ದೂರ ಬಂದು ನನ್ನ ತಂದೆಗೆ ಫೋನ್ ಮಾಡಿ “ಅಪ್ಪ, ಹುಡುಗಿನ ನೋಡು, ಮದುವೆಯಾಗಬೇಕೆನ್ನಿಸಿದೆ” ಅಂದೆ. ಅತ್ತಕಡೆಯಿಂದ ತಂದೆ, ಆಯ್ತು ಮಗಾ ಸಂಬಂಧಿಕರನ್ನು ವಿಚಾರಿಸ್ತಿನಿ ಅಂದ್ರು. ಕದ್ದು ಕೇಳಿಸಿ ಕೊಳ್ಳುತ್ತಿದ್ದ ನಿಂಗ ” ಅಣೋ ನಿಮ್ ಮದ್ವೆಗೆ ನಾನೇ ಕ್ಯಾಮೆರಾಮ್ಯಾನ್ ಅಂದ 🙂

ನಿಂಗ, ಯಾರನ್ನಾದ್ರೂ ಪ್ರೀತಿಸುತಿದಿಯ ಅಂತ ಕೇಳ್ದೆ? ಅದಕ್ಕೆ ನಿಂಗ ಹೂ ಕಣಣ್ಣ ಅಂದ. ನನಗೆ ಅಚ್ಚರಿ ಯಾಗಿ ಯಾರೋ ಅದು ಅಂದೆ…..ಅದಕ್ಕೆ ನಿಂಗ ನಿಮ್ಮನ್ನೇ ಕಣಣ್ಣೋ ಅಂದ.

ನವ ದಂಪತಿಗಳಿಗೆ ಮುಂಚಿತವಾಗಿ ವಿಷ್ ಮಾಡಿ ಸ್ಟುಡಿಯೋ ಕಡೆ ಬಂದೆವು.

-ದಯಾನಂದ ರಂಗದಾಮಪ್ಪ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x