ಗೋಧಿಯ ಕಣಜವಾದ ಪಂಜಾಬ್ ರಾಜ್ಯದ ಕ್ಯಾನ್ಸರ್ ಟ್ರೇನ್ ಕತೆ ಗೊತ್ತಿರಬಹುದು. ಆದರೂ ಕೊಂಚದಲ್ಲಿ ಹೇಳಿಬಿಡುತ್ತೇನೆ. ನಮ್ಮಲ್ಲಿ ಹೇಗೆ ಅಕ್ಕಿ ಮುಖ್ಯ ಆಹಾರವೋ ಹಾಗೆ ಉತ್ತರ ಭಾರತದಲ್ಲಿ ಗೋಧಿ ಮುಖ್ಯ ಆಹಾರ. ಅಲ್ಲಿ ಅಕ್ಕಿಯನ್ನು ಬಹು ಅಪರೂಪಕ್ಕೆ ಉಪಯೋಗಿಸುತ್ತಾರೆ. ಅದರಲ್ಲೂ ಡಾಭಾಗಳು ಮೈದಾ ಹಿಟ್ಟಿನ ರೋಟಿಯನ್ನೇ ಮಾಡುತ್ತಾರೆ. ಮೈದಾಹಿಟ್ಟು ತಯಾರಾಗುವುದು ಗೋಧಿಯಿಂದಲೇ. ಶಕ್ತಿಯುತ, ಹೇರಳ ಪ್ರೊಟೀನ್ ಮತ್ತು ನಾರಿನಂಶವಿರುವ ಗೋಧಿಯ ಮೇಲಿನ ಭಾಗ ಬೂಸ ಎಂದು ಕರೆಯಲ್ಪಟ್ಟು ಜಾನುವಾರುಗಳಿಗೆ ಆಹಾರವಾಗುತ್ತದೆ. ಹಾಗೆಯೇ ಗೋಧಿ ರವೆ, ಹಿಟ್ಟು ಆಮೇಲೆ ಗೋಧಿಯ ತಿರುಳು ಮೈದಾವಾಗುತ್ತದೆ. ಮೈದಾಕ್ಕೆ ಬಿಳಿವಿಷ ಎಂಬ ಪ್ರತಿನಾಮವೂ ಇದೆ. ಇರಲಿ, ಮಕ್ಕಳು ಅತಿಮೆಚ್ಚಿ ತಿನ್ನುವ ಹೆಚ್ಚಿನ ಎಲ್ಲಾ ತರಹದ ಬೇಕರಿ ತಿಂಡಿಗಳು ಮೈದಾದಿಂದಲೇ ತಯಾರಾಗುತ್ತದೆ. ಹಾಗೆಯೇ ಯಾವುದೇ ಶಹರಕ್ಕೆ ಹೋದರೂ ಪ್ರತಿ ನಾಲ್ಕು ಅಂಗಡಿಗಳಲ್ಲಿ ಒಂದು ಬೇಕರಿ ಸಿಗುತ್ತದೆ.
ಹಲವು ಕಾರಣಗಳಿಂದ ಒಂದೋ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಉಳಿದ ರೈತರನ್ನು ಕೀಟನಾಶಕ ಕಂಪನಿಗಳು ನಿಧಾನಕ್ಕೆ ವಿಷವಿಕ್ಕಿ ಕೊಲ್ಲುತ್ತಿವೆ. ಶಿವಮೊಗ್ಗ ಜಿಲ್ಲೆಯ ಬಹುಭಾಗದಲ್ಲಿ ಕಳೆದ ಹತ್ತು-ಹದಿನೈದು ವರ್ಷಗಳಿಂದ ಶುಂಠಿ ಮತ್ತು ಜೋಳ ಬೆಳೆಯಲಾಗುತ್ತಿದೆ. ಶುಂಠಿಗಾಗಿ ಅಪಾರವಾದ ಕಾಡುನಾಶ ಮಾಡಲಾಯಿತು. ಮಿಣಿಸುತ್ತಿನ ಮರಗಳ ಬುಡಕ್ಕೆ ಅದೇ ಮರದ ದರಗೆಲೆಗಳನ್ನು ಇಟ್ಟು ಬೆಂಕಿ ಹಚ್ಚಿ ಸುಟ್ಟು ಹಾಕಲಾಯಿತು. ಕೇರಳ ಕೃಷಿ ಸಂಸ್ಕ್ರತಿ-ಪದ್ಧತಿ ಪರಿಶುದ್ಧ ಮಲೆನಾಡಿನ ಬಹುಭಾಗವನ್ನು ವಿಷಮಯವನ್ನಾಗಿಸಿತು. ಇಲ್ಲಿನ ನೆಲ-ಜಲ-ವಾತಾವರಣವೆಲ್ಲವೂ ವಿಷಮಯವಾಗಿದೆ.
ಚುಮು-ಚುಮು ಬೆಳಗಿನ ಕಡುಚಳಿಯಲ್ಲಿ, ಬೆಳಗಿನ 7.30ಕ್ಕೆ ಸರಿಯಾಗಿ ಭಟಿಂಡಾ ರೈಲ್ವೆ ನಿಲ್ದಾಣವನ್ನು ಆಗಷ್ಟೆ ತೊಳೆದಿಡಲಾಗಿತ್ತು. ಕಬ್ಬಿಣದ ಮೆಟ್ಟಿಲನ್ನು ನಿಧಾನವಾಗಿ ಇಳಿಯುತ್ತಾ ಬರುವಾಗಲೇ ಪುಷ್ಪಿಂದರ್ ಕೌರ್ ಕಣ್ಣು ಬೆಚ್ಚಗಿನ ಜಾಗವನ್ನು ಅರಸುತ್ತಿತ್ತು. ಕೌರ್ ಹಿಂದೆ ಮಗ ಪವನ್‍ಜೀತ್ ಹಾಗೂ ಅತ್ತಿಗೆ ಕುಲ್‍ದೀಪ್ ಕೌರ್ ಹೆಜ್ಚೆ ಹಾಕುತ್ತಿದ್ದರು. ತರನ್ ತರನ್ ಎಂಬ ಊರಿನಿಂದ 3 ತಾಸು ಬಸ್ಸಿನಲ್ಲಿ ಕುಳಿತು ಬಂದ ಸುಸ್ತು ಮುಖದಲ್ಲಿತ್ತು. ಸ್ತನ ಕ್ಯಾನ್ಸರ್‍ಗೆ ಚಿಕಿತ್ಸೆ ಪಡೆಯಲು ಬಿಕಾನೇರ್ ಎಂಬ ರಾಜಸ್ಥಾನದ ಮರಳುಗಾಡಿನ ಆಚಾರ್ಯ ತುಳಸಿ ರೀಜನಲ್ ಕ್ಯಾನ್ಸರ್ ಟ್ರೀಟ್‍ಮೆಂಟ್ & ರೀಸರ್ಚ್ ಇನ್ಸಿಟೀಟ್ಯೂಟ್‍ಗೆ ಹೊರಟಿರುವ ಪುಷ್ಪಿಂದರ್ ಕೌರ್‍ಗೆ ಇದು ಮೊದಲ ಪಯಣವೇನಲ್ಲ.
50 ವರ್ಷದ ರಾಮ್‍ಕಿಷನ್ ಏದುಸಿರು ಬಿಡುತ್ತಾ, ಕೆಮ್ಮುತ್ತಾ ಕ್ಯಾನ್ಸರ್ ಟ್ರೇನ್‍ಗಾಗಿ ಕಾಯುತ್ತಿದ್ದಾನೆ. ಟ್ರೇನ್ ಬರುತ್ತಲೇ ಒದ್ದಾಡುತ್ತಾ ತಾನು ರಿಜರ್ವ್ ಮಾಡಿಸಿದ ಕಿಟಕಿ ಬದಿಯ ಸೀಟಿನಲ್ಲಿ ಕೂಡುತ್ತಾನೆ. ರಾಮ್‍ಕಿಷನ್ ಬಿಕನೇರ್‍ಗೆ ಹೊರಟಿದ್ದಾನೆ. ಡಾಕ್ಟರ್ ಹೇಳುವ ಪ್ರಕಾರ ಕ್ಯಾನ್ಸರ್ ಅಂತಿಮ ಹಂತದಲ್ಲಿದೆ. ಬಹುಷ: ರಾಮ್‍ಕಿಷನ್‍ನ ಕಡೆಯ ಪ್ರಯಾಣವೂ ಇರಬಹುದು. 12 ಬೋಗಿಗಳ ಈ ರೈಲಿನ ಪ್ರತಿ ಬೋಗಿಯಲ್ಲೂ 72 ಸೀಟುಗಳಿವೆ. ಇದರಲ್ಲಿ 30ಕ್ಕಿಂತ ಹೆಚ್ಚು ಜನ ಕ್ಯಾನ್ಸರ್‍ನಿಂದ ಬಳಲುವವರಾಗಿದ್ದಾರೆ.
ರಾಜಸ್ಥಾನದ ಮುಖ್ಯಮಂತ್ರಿಯಾದ ಅಶೋಕ್ ಗೆಹ್ಲೋಟ್‍ರವರ ರಾಜಸ್ಥಾನ್ ಮೆಡಿಕಲ್ ಸರ್ವೀಸಸ್ ಕಾರ್ಪೊರೇಷನ್ ಅಡಿಯಲ್ಲಿ ರಾಜ್ಯದ ಜನತೆಗೆ ಕಡಿಮೆ ದರದಲ್ಲಿ ಔಷಧ ಪೂರೈಸಲು ಪ್ರಾರಂಭಿಸಿರುವ ಪೈಲಟ್ ಆರೋಗ್ಯ ಯೋಜನೆಯಿದು. ಉದಾಹರಣೆಗೆ, ನವಾರ್ಟಿಸ್ ಎಂಬ ಅಂತಾರಾಷ್ಟ್ರೀಯ ಔಷಧ ಕಂಪನಿಯ 10 ಡೈಕ್ಲೋಫಿನಾಕ್ ಮಾತ್ರೆಗಳಿಗೆ ಮಾರುಕಟ್ಟೆಯಲ್ಲಿ ರೂ.31.73 ಇದೆ. ಅದೇ ಈ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಬರೀ ರೂ.1.24 ಈ ಔಷಧ ಲಭ್ಯವಾಗುತ್ತಿದೆ. ಕ್ಲೋಪಿಡೋಗ್ರೆಲ್ ಎಂಬ ಮಾತ್ರೆಗೆ ಮಾರುಕಟ್ಟೆಯಲ್ಲಿರುವ ದರ ರೂ.1,615.88 (14 ಮಾತ್ರೆಗಳಿಗೆ), ಅದೇ ಈ ಆಸ್ಪತ್ರೆಯಲ್ಲಿ ಬರೀ ರೂ.8.54 ಮಾತ್ರ. ಹಾಗೆಯೇ ಪಾಕ್ಲಿಟಾಕ್ಲ್ಸೆಲ್ ಎಂಬ ಸ್ತನಕ್ಯಾನ್ಸರಿನ ಚುಚ್ಚುಮದ್ದಿಗೆ ಮಾರುಕಟ್ಟೆಯಲ್ಲಿ ರೂ.10,850 ಇದ್ದರೆ, ಇಲ್ಲಿ ಬರೀ ರೂ.533 ಮಾತ್ರ.
ಈ ಕ್ಯಾನ್ಸರ್ ಆಸ್ಪತ್ರೆಗೆ ಬರುವ ಕ್ಯಾನ್ಸರ್ ರೋಗಿಗಳ ಸಂಖ್ಯೆ ಏರುತ್ತಲೇ ಇದೆ. ಪ್ರತಿದಿನ ಪಂಜಾಬಿನಿಂದಲೇ 40 ಜನ ಕ್ಯಾನ್ಸರ್ ರೋಗಿಗಳು ಬರುತ್ತಾರೆ. ಪಂಜಾಬಿನಲ್ಲೇ ಯಾಕೆ ಹೆಚ್ಚು ಕ್ಯಾನ್ಸರ್ ಕಾಡುತ್ತಿದೆ? ಇದೆಲ್ಲಾ ಶುರುವಾಗಿದ್ದು, 1960ರ ಹಸಿರುಕ್ರಾಂತಿಯ ದಶಕದಲ್ಲಿ. ದೇಶದ ಹಸಿವನ್ನು ತಣಿಸಲು ಆಗಿನ ಸರ್ಕಾರ ಹೆಚ್ಚು ಹೆಚ್ಚು ಆಹಾರ ಬೆಳೆಯಲು ಪ್ರೋತ್ಸಾಹಿಸಿತು. ಅನಿಯಮಿತ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ಸುರಿಯಲಾಯಿತು. ಈ ವಿಷ ಈಗ ಪಂಜಾಬಿನ ಅಂತರ್ಜಲಕ್ಕೆ ಸೇರಿದೆ. ನೀರು ಕುಡಿಯುವ ಪ್ರತಿಯೊಬ್ಬನೂ ಸಂತ್ರಸ್ಥನೇ ಆಗಿದ್ದಾನೆ. ಅದೆಷ್ಟೋ ಮಕ್ಕಳು ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಬಿಕನೇರ್‍ಗೆ ಬರುತ್ತಾರೆ. ಲುಕೇಮಿಯಾದಿಂದ ಬಳಲುತ್ತಿರುವ 9 ವರ್ಷದ ರಾಹುಲ್ ಮತ್ತು 12 ವರ್ಷದ ಸತಿಂದರ್ ಸಿಂಗ್ ಅಕ್ಕಪಕ್ಕದ ಬೆಡ್ಡಿನಲ್ಲೇ ಇದ್ದಾರೆ. ರಾಹುಲನ ತಂದೆ ಕೂಲಿ-ಕಾರ್ಮಿಕನಾದರೆ, ಸತಿಂದರ್‍ನ ತಂದೆ ಕೃಷಿ ನೆಚ್ಚಿಕೊಂಡಿರುವವ.
ಸಿಳ್ಳೆ ಹೊಡೆಯುತ್ತಾ ಬಂದು ನಿಂತ ರೈಲಿನೊಳಕ್ಕೆ ಸೇರಿಕೊಂಡ ಪುಷ್ಪಿಂದರ್ ಕೌರ್ ಮತ್ತಿಬ್ಬರು, ಚಳಿಗಾಳಿಯನ್ನು ತಡೆಯಲು ಕಿಟಕಿಯನ್ನು ಮುಚ್ಚುತ್ತಾರೆ. ನಿಧಾನವಾಗಿ ಬುತ್ತಿಯನ್ನು ಬಿಚ್ಚುತ್ತಾರೆ. ರೋಟಿ ಮತ್ತು ತುಪ್ಪದ ಸಬ್ಜಿಯ ಹಿತವಾದ ಪರಿಮಳ ಇಡೀ ಬೋಗಿಗೆ ಆವರಿಸುತ್ತದೆ. ಬೋಗಿಯಲ್ಲಿರುವ ಇನ್ನಿತರರದೂ ಇದೇ ಕತೆ. ಪರಸ್ಪರ ಪರಿಚಯವಿಲ್ಲದಿದ್ದರೂ, ನೆಂಟರಲ್ಲದಿದ್ದರೂ, ಊರಿನವರಲ್ಲದಿದ್ದರೂ, ಒಂದು ಪರಿಚಯದ ಪೇಲವದ ನಗೆ ಪರಸ್ಪರ ವಿನಿಮಯವಾಗುತ್ತದೆ. ಬಂದಿದ್ದು ಬೇರೆ ಬೇರೆ ಊರಿನಿಂದಾದರೂ, ಹೋಗುವುದು ಅದೇ ಕ್ಯಾನ್ಸರ್ ಆಸ್ಪತ್ರೆಗೆ ಎಂದು ಒಬ್ಬರಿಗೊಬ್ಬರು ಹೇಳಿಕೊಳ್ಳದಿದ್ದರೂ, ಗೊತ್ತಾಗುತ್ತದೆ.
ಸ್ತನ ಕ್ಯಾನ್ಸರ್‍ನಿಂದ ಬಳಲುತ್ತಿರುವ ಪಂಜಾಬ್‍ನ ಬುಟಿಯಾಲದ ಮಹಿಳೆ
ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಿರುವ ಕ್ಯಾನ್ಸರ್ ರೋಗವನ್ನು ತಡೆಯುವ ಸಲುವಾಗಿ ಪಂಜಾಬ್‍ನಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿದರು. ಆದರೆ, ಸರಿಯಾದ ನಿರ್ವಹಣೆಯಿಲ್ಲದ ಶುದ್ಧಘಟಕಗಳು ಶುದ್ಧನೀರನ್ನು ನೀಡುವಲ್ಲಿ ವಿಫಲವಾಗಿವೆ. ದೇಶದ ಭದ್ರತೆಯಲ್ಲಿ ತಮ್ಮದೇ ಆದ ಬಲಿಷ್ಟ ಸಿಕ್ ರೆಜಿಮೆಂಟ್ ಎಂಬುದಕ್ಕೆ ಖ್ಯಾತಿಯಾದ ಪಂಜಾಬ್‍ನಲ್ಲಿ ಕ್ಯಾನ್ಸರ್ ಇದೀಗ ತಾರತಮ್ಯವಿಲ್ಲದೇ ಎಲ್ಲಾ ವಯಸ್ಸಿನವರನ್ನು ಬಲಿತೆಗೆದುಕೊಳ್ಳುತ್ತಿದೆ. ಅಂತಾರಾಷ್ಟ್ರೀಯವಾಗಿ ನಿರ್ಭಂದಕ್ಕೊಳಗಾದ ಡಿ.ಡಿ.ಟಿ. ಮತ್ತು ಎಂಡೋಸಲ್ಪಾನ್ ಇಲ್ಲಿ ಈಗಲೂ ಲಭ್ಯವಿದೆ. ರಾಸಾಯನಿಕ ಮತ್ತು ಕೀಟನಾಶಕ ಕಂಪನಿಗಳ ಲಾಬಿ ಬಲಿಷ್ಟವಾಗಿ ಬೆಳೆದು ಅಮಾಯಕ ರೈತರನ್ನು ಬಲಿತೆಗೆದುಕೊಳ್ಳುತ್ತಿದೆ. 1 ಮಿಲಿ ರಾಸಾಯನಿಕ ಸಿಂಪಡಿಸುವಲ್ಲಿ, ಮಾಹಿತಿ ಕೊರತೆಯ ಕಾರಣಕ್ಕೆ 10-100 ಮಿಲಿ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಹೆಚ್ಚು ಗೊಬ್ಬರ-ಹೆಚ್ಚು ಹೆಚ್ಚು ಕೀಟನಾಶಕಗಳು, ತಮಗೆ ಹೆಚ್ಚಿನ ಆದಾಯ ತಂದು ಕೊಡುತ್ತವೆ ಎಂದು ಸಾಮಾನ್ಯವಾಗಿ ನಂಬಿದ್ದಾರೆ.
ಕೀಟನಾಶಕ ಸಿಂಪರಣೆ ಮಾಡುತ್ತಿರುವ ರೈತ (ಪಂಜಾಬ್)
ಇದು ದೂರದ ಪಂಜಾಬಿನ ಕತೆಯಾದರೆ, ನಮ್ಮ ಜಿಲ್ಲೆಯ ಕತೆಯೇನು ಕೊಂಚ ನೋಡೋಣವೇ? 2014-15ನೇ ಸಾಲಿನಲ್ಲಿ ಶಿವಮೊಗ್ಗದಲ್ಲಿ ಬಿಕರಿಯಾದ ಕೀಟನಾಶಕಗಳ ಒಟ್ಟು ಮೊತ್ತ 2 ಕೋಟಿ ದಾಟಿದೆ ಎಂದು ಸಮೀಕ್ಷೆ ಹೇಳುತ್ತದೆ. ಅಂದರೆ ಅತಿಹೆಚ್ಚು ಬಳಕೆಯಾಗಿದ್ದು ಶುಂಠಿ ಬೆಳೆಗಾಗಿ. ಶುಂಠಿಗೆ ಕೊಳೆ ರೋಗ ಬಂದು ಬೆಳೆ ಹಾಳಾಗುತ್ತದೆ ಇದಕ್ಕೆ ಇಂತಹ ವಿಷವನ್ನು ಹಾಕಿರಿ ಎಂದು ಕೃಷಿ-ತೋಟಗಾರಿಕ ಇಲಾಖೆಯ ತಜ್ಞರೇ ಸಲಹೆ ನೀಡುತ್ತಾರೆ. ಇಂತಿಷ್ಟು ಬಾರಿ ಗೊಬ್ಬರ ಹಾಕಲೇ ಬೇಕು ಇಲ್ಲದಿದ್ದರೆ ಲಾಭದಾಯಕ ಬೆಳೆ ಸಿಗದು ಎಂಬ ಮೌಢ್ಯವನ್ನೂ ತುಂಬುತ್ತಾರೆ. ಶುಂಠಿ ಬೀಜವನ್ನು ನಾಟಿ ಮಾಡುವಾಗಲೇ ಇಂತಹ ನಾಶಕವನ್ನು ಉಪಯೋಗಿಸಬೇಕು ಎಂಬ ಅದ್ಭುತ ಸಲಹೆಗಳು ಬರುತ್ತವೆ. ಸರ್ಕಾರಿ ಇಲಾಖೆ ತಜ್ಞ ಎಕರೆಗೆ ಕಾಲು ಲೀಟರ್ ಸಾಕು ಎಂದರೆ, ಕೀಟನಾಶಕದ ಅಂಗಡಿಯವ 1 ಲೀಟರ್ ಬೇಕು ಎನ್ನುತ್ತಾನೆ. ಅಂತಿಮವಾಗಿ ರೈತ ಎಕರೆಗೆ 2 ಲೀಟರ್‍ನಂತೆ ಕೀಟನಾಶಕ ಖರೀಸಿದಿ ಸಿಂಪರಣೆ ಮಾಡುತ್ತಾನೆ. ಭೂಮಿಯಲ್ಲಿರುವ ರೈತಸ್ನೇಹಿ ಸೂಕ್ಷ್ಮಾಣುಗಳು ಹೇಳ ಹೆಸರಿಲ್ಲದಂತೆ ಸತ್ತು ಹೋಗುತ್ತವೆ. ಶುಂಠಿ ಬೆಳವಣಿಗೆಗೆ ಬೇಕಾದ ಯಾವ ಪೂರಕ ಅಂಶಗಳೂ ಭೂಮಿಯಲ್ಲಿ ಸಿಗುವುದಿಲ್ಲ. ಈ ಸಾಲಿನಲ್ಲಿ ಶುಂಠಿ ಬೆಳೆದ ಯಾವ ರೈತರ ಹೊಲದಲ್ಲೂ ಶುಂಠಿಯಿಲ್ಲ. ಸಾಲ ಮಾಡಿಕೊಂಡು ಲಾಭದ ಆಸೆ ಹೊಂದಿ, ಶುಂಠಿ ಬೆಳೆದವ ಈಗ ನಿಜವಾಗಲೂ ಕಷ್ಟದಲ್ಲಿದ್ದಾನೆ. ಅಲ್ಲದೇ ಇಡೀ ಜಿಲ್ಲೆಯ ನೆಲ-ಜಲ-ವಾತಾವರಣವನ್ನು ಇನ್ನಿಲ್ಲದಂತೆ ಹಾನಿ ಮಾಡಿದ್ದಾನೆ.
ಅದೆಷ್ಟೋ ವರ್ಷಗಳ ಹೋರಾಟ ಮಾಡಿ ಸಾಗರಕ್ಕೆ ಮತ್ತೆ ಟ್ರೇನ್ ಬಂತು. ಮೊಟ್ಟಮೊದಲಿಗೆ ರೈಲು ಸಾಗರಕ್ಕೆ ಬಂದಾಗ ವಿವಿಧ ಕಾರಣಗಳಿಗಾಗಿ ಸಾಕಷ್ಟು ಕಾಡುನಾಶವಾಗಿತ್ತು. ಈಗ ಮತ್ತೆ ಬಂದ ರೈಲಿಗೆ ಬೆಂಗಳೂರು-ತಾಳಗುಪ್ಪ ಎಕ್ಸ್‍ಪ್ರೆಸ್ ಬದಲು ಮಲೆನಾಡು ಕ್ಯಾನ್ಸರ್ ರೈಲು ಎಂಬ ಕುಖ್ಯಾತಿ ಬರಲು ಹೆಚ್ಚು ಸಮಯ ಹಿಡಿಯಲಾರದು ಎಂಬ ಭಯದೊಂದಿಗೆ.
******
'ಕ್ಯಾನ್ಸರ್ ಟ್ರೇನ್' ಬಗ್ಗೆ ನಾನು ಈ ಮೊದಲು ಓದಿದ್ದೆ ಮತ್ತು ಅದು ಪಂಜಾಬಿಂದ ಹೊರಡುತ್ತದೆ ಎಂದು ಈ ಮೊದಲು ತಿಳಿದಿದ್ದೆನಾದರೂ, ಆ ರಾಜ್ಯದಲ್ಲಿ ಕ್ಯಾನ್ಸರಿಗೆ ಅಲ್ಲಿಯ ಕೃಷಿ ಪದ್ಧತಿಯೇ ಕಾರಣವಾಗಿರುವುದು ಓದಿ ಅಘಾತವಾಯಿತು. ನಮ್ಮ ರಾಜ್ಯದಲ್ಲೂ ಮುಖ್ಯವಾಗಿ ಶುಂಠಿ ಮತ್ತು ಎಲೆಕೋಸಿಗೆ (ಕ್ಯಾಬೆಜ್) ಹೊಡೆಯುತ್ತಿರುವ ಕ್ರಿಮಿ, ಕೀಟನಾಶಕಗಳು ನನ್ನ ಸುತ್ತಮುತ್ತ ನೋಡಿರುವುದರಿಂದ ನಾವು ಕೂಡ ಒಂದಲ್ಲ ಒಂದು ದಿನ ಬೆಲೆ ತೆರಬೇಕಾಗಿರುವುದು ತಪ್ಪಿದ್ದಲ್ಲ. ನಮ್ಮಲ್ಲಿ ಕೃಷಿ ಇಲಾಖೆ ಎಂಬುದಿದೆ. ಅದು ಕೇವಲ ಸಬ್ಸಿಡಿ ದರದಲ್ಲಿ ಕೃಷಿ ಉಪಕರಣಗಳನ್ನು, ಗೊಬ್ಬರ ಕೀಟನಾಶಕಗಳನ್ನು ಹಂಚುವುದಷ್ಟೇ ತನ್ನ ಜವಬ್ದಾರಿ ಎಂದು ತಿಳಿದಿರುವಂತಿದೆ. ರೈತ ಸಲಹೆ ಕೇಳುವುದು ಮಾತ್ರ ಕೀಟನಾಶಕ ಮಾರುವ ಅಂಗಡಿಯವರನ್ನೇ!
ನೀವು ಹೇಳಿರುವುದು ಅಕ್ಷರಷ: ಸತ್ಯ. ಹೆಚ್ಚಿನ ಅಧಿಕಾರಿಗಳು ಗೊಬ್ಬರದ ಅಂಗಡಿಯವರಿಂದ ಕಮಿಷನ್ ಪಡೆಯುತ್ತಾರೆ. ಇದನ್ನು ಹಿಡಿಯಲು ಯಾವ ಲೋಕಾಯುಕ್ತಕ್ಕೂ ಸಾಧ್ಯವಿಲ್ಲ. ಪ್ರತಿಕ್ರಯಿಸಿದ್ದಕ್ಕೆ ಧನ್ಯವಾದಗಳು ಜೆ.ವಿ.ಕಾರ್ಲೊ ಸರ್.