ಜಾತೀಯತೆ ನಮ್ಮ ಸಮಾಜಕ್ಕಂಟಿದ ಕ್ಯಾನ್ಸರ್ ತರಹದ ಮಾರಕ ಕಾಯಿಲೆ ಎಂದು ಬಹಳ ಹಿಂದಿನಿಂದಲೂ ಕೇಳಿ ಬರುತ್ತಿರುವ ಮಾತು. ಆ ಕಾಯಿಲೆಯನ್ನು ನಮ್ಮ ಸಮಾಜದಿಂದ ನಿರ್ಮೂಲನೆ ಮಾಡಬೇಕು ಎಂದು ಪಣತೊಟ್ಟವರಿಗಿಂತ ಈ ಸಮಾಜದ ತುಂಬ ಜನರ ಬುದ್ದಿ ಮತ್ತು ಮನಸ್ಸುಗಳಲ್ಲಿ ಅದನ್ನು ಎಷ್ಟು ಸಾಧ್ಯವೋ ಅಷ್ಟು ಹರಡಬೇಕು ಎನ್ನುವವರ ಸಂಖ್ಯೆ ಈ ದಿನಗಳಲ್ಲಿ ಜಾಸ್ತಿ ಎಂದರೆ ತಪ್ಪಾಗಲಾರದು. ಒಂದೆಡೆ ಹಾಗೆ ಜಾತೀಯತೆಯನ್ನು ಹರಡಿ ಇಡೀ ಸಮಾಜವನ್ನೇ ರೋಗಗ್ರಸ್ತ ಸಮಾಜವನ್ನಾಗಿ ನಿರ್ಮಾಣ ಮಾಡಬೇಕು ಎಂದು ಕನಸು ಕಾಣುವವರ ಮಧ್ಯೆ ಈ ಕಾಯಿಲೆಯನ್ನು ಎಷ್ಟು ಸಾಧ್ಯವೋ ಅಷ್ಟು ಅಳಿಸಿ ಹಾಕಬೇಕು ಎಂದು ಕನಸು ಕಂಡವರೂ ಇದ್ದಾರೆ.
ಈ ಕ್ಯಾನ್ಸರ್ ಕಾಯಿಲೆಯ ನಿರ್ಮೂಲನ ಆಂದೋಲನದ ನಾಂದಿ ಮೊದಲಿಗೆ ಬರವಣಿಗೆಯ ಮೂಲಕ ಶುರುವಾಯಿತು ಎನ್ನಬಹುದೇನೋ. ಲೇಖನಿ ಹಿಡಿದು ಅದರ ಮೊನಚಿನ ರುಚಿಯನ್ನು ಜಾತಿವಾದಿಗಳಿಗೆ ತೋರಿಸಿ ಜನರಿಂದ ಸಮಾನತೆಯ ಮಂತ್ರ ಬಿತ್ತುವ ವೈದ್ಯ ಎಂಬ ಪದವಿ ಪಡೆದ ನಂತರವಷ್ಟೇ ಆ ವೈದ್ಯನಾಡುವ ಮಾತಿಗೆ ಈ ಸಮಾಜದಲ್ಲಿ ಒಂದು ಬೆಲೆ ಸಿಗುವುದು. ಅಚ್ಚರಿಯೆಂದರೆ ಆ ರೀತಿ ಬರವಣಿಗೆಯ ಮೂಲಕ ಬೆಳಕಿಗೆ ಬಂದು, ಸಾರ್ವಜನಿಕವಾಗಿ ಜಾತೀಯತೆಯನ್ನು ವಿರೋಧಿಸಿ ಮಾತನಾಡುವ ಧೈರ್ಯ ಪಡೆದು ಸಮಾನತೆಯ ಮಂತ್ರವನ್ನು ಜನರಲ್ಲಿ ಬಿತ್ತುವ ಕನಸು ಕಂಡ ವೈದ್ಯರುಗಳ ಸಂಖ್ಯೆ ನಮ್ಮಲ್ಲಿ ಕಡಿಮೆ. ಆ ಅತೀ ಕಡಿಮೆ ಸಂಖ್ಯೆಯ ವೈದ್ಯರುಗಳು ಕಾಲಾಂತರದಲ್ಲಿ ನುರಿತ ವೈದ್ಯರಾಗಿ ಹೆಸರು ಮಾಡಿದ್ದಾರೆ. ವಿಪರ್ಯಾಸದ ಸಂಗತಿ ಎಂದರೆ ಆ ನುರಿತ ವೈದ್ಯರುಗಳಲ್ಲಿ ಕೆಲವರು ಸಮಾಜದ ಸೇವೆಗಿಂತ ತಮ್ಮ ಸೇವೆಯೇ ಮುಖ್ಯ ಎಂಬುದನ್ನು ಮನಗಂಡು ಜಾತೀಯತೆಯ ಹೆಸರಿನಲ್ಲಿ ಹೆಸರು ಮಾಡಿ ಬಿರುದು ಪಡೆದು ಎಷ್ಟು ಸಾಧ್ಯವೋ ಅಷ್ಟು ಹಣ ಮಾಡಿ ಪದವಿ ಪಟ್ಟಗಳ ಪಡೆದು ಎಲ್ಲೋ ಆರಾಮಾಗಿ ವಿಶ್ರಾಂತಿ ಪಡೆಯುವ ಮೂಲಕ ಹೆಸರು ಕೆಡಸಿಕೊಂಡಿದ್ದಾರೆ. ಇನ್ನೂ ಕೆಲವರು ಆ ಕುರಿತು ಬರೆದದ್ದು ಸಾಕು ಎಂಬ ನಿರ್ಧಾರಕ್ಕೆ ಬಂದು ಜಾತೀಯತೆಯ ನಿರ್ಮೂಲನೆಯ ತಮ್ಮ ಆಂದೋಲನಕ್ಕೆ ಕೊನೆಯ ಅಧ್ಯಾಯ ಬರೆದುಬಿಟ್ಟಿದ್ದಾರೆ.
ಆದರೆ ಕೆಲವೇ ಕೆಲವು ಬೆರಳೆಣಿಕೆಯಷ್ಟು ವೈದ್ಯರು ಮೊದಲಿನಿಂದಲೂ ತಮ್ಮ ಬರಹ ಮತ್ತು ತತ್ವಗಳಿಗೆ ಅಂಟಿಕೊಂಡು ಹಣ ಮತ್ತು ಪದವಿಗಳ ಆಮಿಷಕ್ಕೆ ಒಳಗಾಗದೆ ಇಂದಿಗೂ ಜಾತಿ ನಿರ್ಮೂಲನೆಯ ಕನಸು ಕಾಣುತ್ತಿದ್ದಾರೆ. ಆ ವೈದ್ಯರುಗಳಿಗೆ ಜಾತೀಯತೆಯ ಬದಲು ಮಾನವೀಯತೆಗೆ ಬೆಲೆ ಕೊಡುವ ಜನ ಇಂದಿಗೂ ಗೌರವ ನೀಡುತ್ತಾರೆ. ಆ ಗೌರವಗಳು ಹೆಚ್ಚು ಸಲ ಪ್ರಶಸ್ತಿಯ ರೂಪ ಪಡೆದು ಆ ವೈದ್ಯರುಗಳ ಮನೆಯ ಬಾಗಿಲ ಮುಂದೆ ನಿಲ್ಲುತ್ತವೆ. ಈ ಪ್ರಶಸ್ತಿ ಗಿಸಸ್ತಿ ನಮಗೆ ಬೇಡ ಅಂತ ಒಂದು ಕಾಲದಲ್ಲಿ ಯಾವುದ್ಯಾವುದೋ ಕಾರಣಕ್ಕೆ ಧಿಕ್ಕರಿಸಿದ ವೈದ್ಯರು ಕಾಲಾಂತರದಲ್ಲಿ ಅನುಯಾಯಿಗಳ ಪ್ರೀತಿಗೆ ಸೋತು ಪ್ರಶಸ್ತಿಗಳನ್ನು ಸ್ವೀಕರಿಸುತ್ತಾರೆ ಸಹ. ಆ ರೀತಿ ಆ ವೈದ್ಯರುಗಳು ಸ್ವೀಕರಿಸಿದ ಪ್ರಶಸ್ತಿಗಳು ಒಂದು ದಿನ ಅವರ ಮನೆಯ ಕಪಾಟು ಸೇರಿಬಿಡುವುದೇನೋ ಸರಿ. ಆದರೆ ಈ ಜಾತೀಯತೆ ಎಂಬ ಕ್ಯಾನ್ಸರ್ ಅನ್ನು ಈ ಸಮಾಜದಿಂದ ಅಳಿಸಬೇಕೆಂಬ ಆಶಯ ಹೊತ್ತ ಆ ವೈದ್ಯರುಗಳ ಕನಸುಗಳು ತತ್ವಗಳು ಜನ ಮನದಲ್ಲಿ ಭದ್ರವಾಗಿ ಬೇರೂರದ ಹೊರತು ಆ ವೈದ್ಯರುಗಳ ಮನದ ಕಪಾಟಿನಲ್ಲಿ ಉಳಿಯಬಹುದಾದ ನಿಜವಾದ ಪ್ರಶಸ್ತಿ ಅವರಿಗೇ ಧಕ್ಕಿರುವುದೇ ಇಲ್ಲ.
ಮೊನ್ನೆ ದೇವನೂರ ಮಹಾದೇವರಿಗೆ ನಾಡೋಜ ಪ್ರಶಸ್ತಿ ಸಿಕ್ಕಿತು ಎಂಬ ಸುದ್ದಿ ಕೇಳಿ ಯಾಕೋ ಉಳಿದವರಂತೆ ಖುಷಿಯಾಗಲೂ ಇಲ್ಲ ಬೇಸರವೆನಿಸಲೂ ಇಲ್ಲ. ಬದಲಿಗೆ ನನ್ನೊಳಗೆ ಹುಟ್ಟಿದ ತಟಸ್ಥ ಭಾವಕ್ಕೆ ಈ ರೀತಿಯ ಅಕ್ಷರ ರೂಪ ಕೊಡಬೇಕು ಎನಿಸಿತು. ಜಾತೀಯತೆ ಎಂಬ ಕ್ಯಾನ್ಸರ್ ನ ವಿಸ್ತಾರ, ವ್ಯಾಪಕತೆ ಮತ್ತು ಅದರ ಕೆಟ್ಟ ಪರಿಣಾಮಗಳನ್ನು ಅತೀ ಹತ್ತಿರದಿಂದ ಕಂಡ ಕಾಣುತ್ತಿರುವ ನನ್ನಂತಹವನು ದೇವನೂರ ಮಹಾದೇವರಂತಹ ಹಿರಿಯರಿಗೆ ಪ್ರಶಸ್ತಿ ಬಂದಿದೆ ಎಂದರೆ ಅವರಿಗೆ ಅಭಿನಂದನೆಗಳನ್ನು ತಿಳಿಸಬೇಕೋ ಬೇಡವೋ ತಿಳಿಯುತ್ತಿಲ್ಲ.. ಆದರೂ ಸಮಾನತೆಯ ಕನಸನ್ನು ಕಾಣುತ್ತಾ ದಶಕಗಳಿಂದ ನಿರಂತರವಾಗಿ ಹೋರಾಡುತ್ತಲೇ ಬಂದವರಿಗೆ ಹೀಗೊಂದು ಪ್ರಶಸ್ತಿ ಬಂದಿದೆ ಎಂದರೆ ಒಂಚೂರಾದರೂ ಖುಷಿಪಡಬೇಕೇನೋ.
ಅಂದ ಹಾಗೆ ಸಹೃದಯಿಗಳೇ ಪಂಜು ಐದನೇ ಸಂಚಿಕೆಯೊಂದಿಗೆ ನಿಮ್ಮ ಮುಂದಿದೆ. ಕಳೆದ ವಾರವಂತೂ ನೂರ ಎಪ್ಪತ್ತಕ್ಕೂ ಹೆಚ್ಚು ಕಾಮೆಂಟ್ ಗಳನ್ನು ಪಂಜು ಪಡೆದಿದೆ ಎಂದರೆ ಪಂಜುವನ್ನು ಪ್ರೀತಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ ಎನ್ನಬಹುದು. ನಿಮ್ಮ ಪ್ರೀತಿ ಹೀಗೆಯೇ ಇರಲಿ..
ಮತ್ತೆ ಸಿಗೋಣ
ನಿಮ್ಮ ಪ್ರೀತಿಯ
ನಟರಾಜು
ಐದನೇ ಕಂತೂ ಮನಸೂರೆಗೊಂಡಿತು.
Kelavomme prasasthigallu barahagarinige prothsaha niduthave
Mathe kelavomme somareeyagisuthave
Adhene erali devanurarige abhinandanegallu
5ne varada panjuvige shubhavagali
good writing…………
ಜಾತಿ ಮತಗಳ ಹೆಸರಿನಲ್ಲಿ ಹೊಟ್ಟೆ 'ಬೆಳೆ'ಕೂಳ್ಳುವವರ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿದೆ. ಕಷ್ಟಪಟ್ಟು ದುಡಿದು ಹೊಟ್ಟೆ 'ತುಂಬಿ'ಸಿಕೊಳ್ಳುವವರ ಸಂಖ್ಯೆಗಿಂತ ವೇಗವಾಗಿ ಬೆಳೆಯುತ್ತಿದೆ. ಸ್ವಾಗತಾರ್ಹ ಬರಹ…
ದಾರಿಯಲ್ಲಿ ನಡೆದು ಹೋಗುವಾಗ ಅಕಸ್ಮಾತ್ ಕಣ್ಣುಕತ್ತಲೆ ಬಂದು ಬಿದ್ದು ಬಿಟ್ಟರೆ, ಯಾವ ಜಾತಿಯವರು ಮುಖಕ್ಕೆ ತಣ್ಣೀರು ಎರಚ್ತಾರೋ… ಯಾವ ಜಾತಿಯವರು ಒಂದು ಗುಟುಕು ನೀರನ್ನು ಕುಡಿಸಿ ಜೀವ ಉಳಿಸ್ತಾರೋ ಗೊತ್ತಿಲ್ಲ. ಆದರೂ ಎಲ್ಲಾ ವಿಷಯಗಳಲ್ಲೂ ಈ 'ಜಾತಿ' ಎಂಬ ಎರಡಕ್ಷರದ ಶಬ್ದದ ಜೊತೆ , ಇಡೀ ಜಗತ್ತೇ ಕಿತ್ತಾಡ್ತಾ ಇರತ್ತೆ. ಜನರಿಗೆ ಮಾನವೀಯತೆಗಿoತ ಜಾತೀಯತೆಯೇ ಮುಖ್ಯವಾಗಿದೆ. 🙁
ಎಂದಿನಂತೆ ಚಂದದ ಬರಹ. ಐದನೇ ವಾರದ ಸಂಚಿಕೆಗೆ ಶುಭ ಹಾರೈಕೆಗಳು… 🙂
ಐದನೇ ಸಂಚಿಕೆ ಕೂಡ ಸೊಗಸಾಗಿದೆ. ಅಭಿನಂದನೆಗಳು ಪಂಜು ಬಳಗಕ್ಕೆ.
– ಪ್ರಸಾದ್.ಡಿ.ವಿ.
ಸೊಗಸಾಗಿದೆ.
ಬಂಡಾಯದ ಬೀಜ ಬಿತ್ತಿದ ಕನಸುಗಾರರಿಗೆ ಅಭಿನಂದನೆಗಳು ಸಲ್ಲ ಬೇಕು
ಸ್ವಲ್ಪ ಅವಧಿ ಹೆಚ್ಚು ತೆಗೆದುಕೊಂಡರೂ ಲೋಕದ ಡೊಂಕುಗಳು ಮರೆಯಾಗುತ್ತವೆ
Rayare..
Sundaravagide….Adare Varadinda Varake Mukha Puta Vibinna Vagi Kanali…
ಯಾವುದೇ ಒಂದು ಪಿಡುಗಿನ ನಿವಾರಣೆಗಾಗಿ ಕೇವಲ ಒಬ್ಬ ಒಳ್ಳೆ ವೈದ್ಯನಿದ್ದರೆ ಸಾಲದು, ಆ ಒಳ್ಳೆ ವೈದ್ಯನು ನೀಡುವ ಚಿಕಿತ್ಸೆಗೆ ರೋಗ ಪೀಡಿತ ದೇಹವೂ ಸ್ಪಂದಿಸಬೇಕು, ಆಗ ಮಾತ್ರವೇ ರೋಗದ ಗುಣಮುಖವು ಸಾಧ್ಯ. ಈ ನಮ್ಮ ಸಮಾಜ ಯಾವುದೇ ವೈದ್ಯನ ಚಿಕಿತ್ಸೆಗಳಿಗೆ ಬಗ್ಗದೆ 'ಜಡ ಮೈ' ಆದಾಗ ಯಾವ ವೈದ್ಯರು ತಾನೆ ಏನು ಮಾಡಿಯಾರು?. ಹಾಗಂತ ವೈದ್ಯರ ಶ್ರಮ-ಶ್ರದ್ದೆಗಳಿಗೆ ಮನ್ನಣೆ ಬೇಡವೇ??. ವೈದ್ಯ ಸಾಹಿತಿಗಳನ್ನು ಗೌರವಿಸೋಣ, ಸಾಮಾಜಿಕ ಪಿಡುಗುಗಳ ನಿವಾರಣೆ ಕಾರ್ಯಗಳು ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕನ ಜವಾಬ್ದಾರಿಗಳು ಎನ್ನುವುದು ನನ್ನ ಅಭಿಪ್ರಾಯ ಸರ್. ಧನ್ಯವಾದಗಳು.
ಅಣ್ಣ, ಐದನೆಯ ಸಂಚಿಕೆ ಕೂಡ ಒಳ್ಳೆಯ ಸಂದೇಶವನ್ನು ಹೊತ್ತು ತಂದಿದೆ.. 🙂
ಕ್ಯಾನ್ಸರ್ ಒಳಗೊಳೊಗೆ ದೇಹವನ್ನು ತಿಂದರೆ, ಜಾತಿ ಕ್ಯಾನ್ಸರ್ ದೇಶವನ್ನು ತಿನ್ನುತ್ತದೆ, ಇದು ದೊಡ್ಡ ಕಾಯಿಲೆ. ಒಬ್ಬಿಬ್ಬರು ವೈದ್ಯರು ಸಾಲುವುದಿಲ್ಲ. ನಿಮ್ಮ ಸಂಪಾದಕಿಯ ಗಮನ ಸೆಳೆಯುತ್ತದೆ
olle sampadakiya natanna. 🙂
ದೇವನೂರರ ಸಾಲಿನಲ್ಲಿ ನಾಡೋಜ ಪ್ರಶಸ್ತಿ ಪಡೆದ ಇತರರನ್ನೊಮ್ಮೆ ಗಮನಿಸಿದರೆ, ದೇವನೂರರ ಜಾಗ ಇದಲ್ಲ ಎನ್ನಿಸುವುದು ಸುಳ್ಳಲ್ಲ. ಆದ್ದರಿಂದ ಈ ಸಾಲಿಗಿಂತ ಎಷ್ಟೋ ಮೇಲ್ಮಟ್ಟದಲ್ಲಿರುವ ದೇವನೂರರಿಗೆ ಈ ಪ್ರಶಸ್ತಿ ಸಂದದ್ದಕ್ಕೆ ಸಂತಸವೆಂದೇನು ಅನಿಸುವುದಿಲ್ಲ.
ಒಳ್ಳೆಯ ಸಂಪಾದಕೀಯ…………….