ಕೌಟುಂಬಿಕ ಮೌಲ್ಯ ಮತ್ತು ವಿಶ್ವಭ್ರಾತೃತ್ವ: ಡಿ. ಪಿ. ಭಟ್, ಪುತ್ತೂರು.

ಅನೇಕ ತೀರ್ಥ ಕ್ಷೇತ್ರಗಳನ್ನು, ಹಲವು ಪರಿಶುದ್ಧ ಪಾವಿತ್ರ್ಯತೆಯಿಂದ ಕೂಡಿದ ಕಲ್ಯಾಣಿಗಳನ್ನು, ಮಠ ಮಂದಿರಗಳನ್ನು, ವಿದ್ಯಾ ದೇಗುಲಗಳನ್ನು ಸೇರಿದಂತೆ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಒಳಗೊಂಡಿರುವ ಹಲವು ಪ್ರಕೃತಿ ವಿಸ್ಮಯಾತ್ಮಕ ರಮಣೀಯ ಸ್ಥಳಗಳ ಮೂಲಕ ಪ್ರವಹಿಸುತ್ತಿರುವ ಆಧ್ಯಾತ್ಮಿಕತೆಯ ಅಭಿವ್ಯಕ್ತಿಯಿಂದ ನಮ್ಮ ಭಾರತವು ಕಂಗೊಳಿಸುತ್ತಿದೆ. ಪರಮೋತ್ಕಟ ಭಕ್ತಿಭಾವೋನ್ಮಾದಸ್ನಾತರಾದ ರಾಮ, ಸೀತಾ, ಕೃಷ್ಣ,  ಶಂಕರರು, ರಾಮಾನುಜರು, ಮಾಧ್ವರು, ಶೀರಾಮಕೃಷ್ಣರು, ಶ್ರೀಮಾತೆ ಶಾರದಾದೇವಿ, ಸ್ವಾಮೀ ವಿವೇಕಾನಂದರಂತಹ ಭಗವದ್ ಸತ್ಪುರುಷರು, ಸಂತರು, ಶರಣರು, ದಾರ್ಶನಿಕರು ಓಡಾಡಿದ ದೇಶವಿದು. ಆಧ್ಯಾತ್ಮಿಕ ಶಕ್ತಿಯ ಪ್ರಬಲತೆಯಿಂದ ಕೂಡಿದ ಭರತ ಭೂಮಿಯಲ್ಲಿಂದು ಕೊಲೆ, ಸುಲಿಗೆ, ಅತ್ಯಾಚಾರ ಕಳ್ಳತನದಂತಹ ಪೈಶಾಚಿಕ ಕೃತ್ಯಗಳ ಆರ್ಭಟ ಕೇಳಿಸುತ್ತಿದೆ. ಇಡೀ ಸಮಾಜ ಭಯಾನಕತೆಯ ರೂಪವನ್ನು ಪಡೆದುಕೊಳ್ಳುತ್ತಿರುವುದಕ್ಕೆ ನಾವೇ ಕಾರಣಕರ್ತರಾಗುತ್ತಿದ್ದೇವೆ ಎನ್ನುವುದು ಬೇಸರದ ಸಂಗತಿ.

ಭಗವದ್ ಗೀತೆಯ ಆರಂಭದ ಮೊದಲ ಎರಡು ಪದಗಳನ್ನು ಗಮನಿಸಿ. “ಧರ್ಮಕ್ಷೇತ್ರೇ ಕುರುಕ್ಷೇತ್ರೇ”, ವಾಸ್ತವಿಕತೆಗೆ ಅತ್ಯಂತ ಸೂಕ್ತವಾದ ಅರ್ಥಗಳನ್ನು ಕಲ್ಪಿಸುವ ಈ ಪದಗಳಲ್ಲಿ ಎಂಥಹ ಸ್ಪಷ್ಟತೆಯಿದೆ. ಆಧ್ಯಾತ್ಮಿಕ ವಿಭೂತಿಪುರುಷರ ಮಾತುಗಳನ್ನಾಗಲಿ, ಆದರ್ಶಮಯ ಜೀವನದ ನಡೆಯನ್ನಾಗಲಿ ನಾವುಗಳು ಅನುಸರಿಸುವುದು ಬಿಡಿ ಅಧ್ಯಯನಕ್ಕೂ ತಯಾರಿಲ್ಲ. ಈ ಮಹಾಪುರುಷರೆಲ್ಲರೂ ಒಂದಲ್ಲ ಒಂದು ವಿಚಾರಗಳಿಗೆ ಸಮಾಜ ಭಯಾನಕತೆಯನ್ನು ಪಡೆಯುತ್ತಿರುವುದನ್ನು ಗಮನಿಸಿ, ಪ್ರತಿಯೊಂದು ಹಂತದಲ್ಲೂ ಎಚ್ಚರಿಕೆಯನ್ನು ನೀಡುತ್ತಾ ಬಂದರು. ಭಾರತದ ಅಸ್ತಿತ್ವ ಆಧ್ಯಾತ್ಮಿಕತೆಯಲ್ಲಿ ಹಾಗೂ ಕೌಟುಂಬಿಕ ಮೌಲ್ಯಗಳ ಅನುಷ್ಠಾನದಲ್ಲಿ ಎಂಬುದು ಅಕ್ಷರಸಹ ಸತ್ಯವಾದುದು. ಸಮಾಜದ ಒಗ್ಗೂಡುವಿಕೆಗೆ ಅವತರಿಸಿ ಬಂದ ಅನೇಕ ವಕ್ತಾರವರೇಣ್ಯರು, ಸರಸ್ವತಿ ಪುತ್ರರು, ಚಿಂತಕರು, ವಿಮರ್ಶಕರು, ವಿಧ್ವಾಂಸರಿದ್ದ ಕಾಲಮಾನ ಅತ್ಯಂತ ಶ್ರೀಮಂತಗರ್ಭಿತವಾಗಿತ್ತು. ಆ ಕಾಲಮಾನವನ್ನು ದಾಟಿ ಬಂದಿರುವ ನಾವಿಂದು ಸ್ವಂತಿಕೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಸಂಸ್ಥೆ, ಸಂಘಟನೆಗಳ ಹಿಂಬಾಲಕರಲ್ಲಿ ವಿಚಾರವಂತಿಕೆಯ ಕುರುಡುತನ ಎದ್ದು ಕಾಣುತ್ತಿದೆ. ಜನರು ಕ್ಷಣಿಕ ಸುಖದೆಡೆಗೆ ಮನಸ್ಸನ್ನು ಹರಿಯಬಿಡುತ್ತಿದ್ದಾರೆ. ದೇಶದ ಸಂಸ್ಕೃತಿಯನ್ನು ಆಚಾರ ವಿಚಾರಗಳನ್ನು ಒಡೆಯುವ ವ್ಯಕ್ತಿಗಳನ್ನು ಬೇರ್ಪಡಿಸುವ ಪೂರ್ವಗ್ರಹಗಳ ಗೋಡೆಗಳನ್ನು ಕಟ್ಟಿಕೊಳ್ಳುತ್ತಿದ್ದೇವೆ. ಹೆಚ್ಚು ಹೆಚ್ಚು ಸೌಲಭ್ಯಗಳಿದೆ ನಮ್ಮಲ್ಲಿ ಆದರೆ ಅನುಭವಿಸಲು ಸಮಯದ ಅಭಾವ. ಸಂಬಂಧಗಳ ನಡುವೆ ಭಿನ್ನಾಭಿಪ್ರಾಯ. ರಸ್ತೆಗಳು ಅಗಲವಾಗುತ್ತಿರಬಹುದು ಆದರೇ ಜನರ ದೃಷ್ಠಿಕೋನಗಳು ಕಿರಿದಾಗುತ್ತಿವೆ ಅನ್ನುವುದನ್ನೂ ಗಮನಿಸಬೇಕಾಗಿದೆ.

ಭಾರತದ ಸಂಸ್ಕೃತಿಯನ್ನು  ಹಾಗೂ ಕೌಟುಂಬಿಕ ಮೌಲ್ಯಗಳ ಮೇಲಿರುವ ನಂಬಿಕೆಗಳನ್ನು ನಾಶಮಾಡಿದರೆ ಭಾರತ ಉಳಿದುಕೊಳ್ಳಲು ಸಾಧವಿಲ್ಲ ಅನ್ನುವ ಮೆಖಾಲೆ ವರದಿಯನ್ನು ನಾವು ನೀವುಗಳು ಕೇಳಿಯೇ ಇರುತ್ತೇವೆ. ವಾಸ್ತವ ಸ್ಥಿತಿ ಗತಿಯನ್ನು ಗಮನಿಸಿದಾಗ ಆತ ಹೇಳಿರುವುದೆಲ್ಲಾ ಪರಿಪೂರ್ಣವಾಗುವುದರಲ್ಲಿ ಸಂಶಯವಿಲ್ಲ. ಒಂದೆಡೆ ಪಾಶ್ಚಾತ್ಯರ ವಿವಿಧ ಬೇರೆ ಬೇರೆ ರೀತಿಯ ಆಕ್ರಮಣದಿಂದ ಭಾರತ ನಾಶವಾದರೇ ಇತ್ತ ಪುರೋಹಿತ ಶಾಹೀ ವರ್ಗದಿಂದ, ರಾಜಕೀಯ ಗುಂಪುಗಾರಿಕೆಯಿಂದ, ಜಾತಿ ಜಾತಿಗಳ ನಡುವೆ ಉಂಟಾದ ಕೋಮುಗಲಭೆಯಿಂದ, ಮೂಢನಂಬಿಕೆಗಳ ಆಚರಣೆಯಿಂದ, ಹೆಚ್ಚು ಹೆಚ್ಚು ಔಷಧಿಗಳಿದ್ದರೂ ಅತೀಯಾದ ಆರೋಗ್ಯದ ಸಮಸ್ಯೆಗಳಿಂದ ಭಾರತವು ತತ್ತರಿಸಿಹೋಗುತ್ತಿದೆ. ಕಾರಣಗಳನ್ನು ತಡಕಾಡುತ್ತಾ ಹೋದರೆ ಶಿಕ್ಷಣ ವ್ಯವಸ್ಥೆಗಳಲ್ಲಿಯೂ ಅಮೂಲಾಗ್ರವಾಗಿ ಬದಲಾವಣೆ ಹೊಂದಿರುವುದನ್ನು ನಾವು ಕಾಣುತ್ತೇವೆ. ಗೊತ್ತಿರುವ ಸಂಗತಿಗಳೇ ಆದರೂ ಗೊತ್ತಿದ್ದೂ ಎಡವುತ್ತಾ ಇದ್ದೇವೆ.  ಶಿಕ್ಷಣ ಸಂಸ್ಥೆಗಳ ಗುರಿ ಬದುಕಿನ ಮೌಲ್ಯಗಳನ್ನು ತಿಳಿಸುವುದಾಗಿರದೆ ಸ್ಪರ್ಧಾತ್ಮಕವಾದ ಫಲಿತಾಂಶದತ್ತ ತಿರುಗಿರುವುದು ವಿಷಾದನೀಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಮಾರುಕಟ್ಟೆಗಳಿಗೆ ಬೇಕಾದ ರೀತಿಯಲ್ಲಿ ತಯಾರು ಮಾಡಿ ಕಳಿಹಿಸುತ್ತಿದೆ. ಈ ಸ್ಪರ್ಧಾತ್ಮಕ ಬೆಳವಣಿಗೆಯಲ್ಲಿ ಅನೇಕ ಶಿಕ್ಷಣದ ಅಂಗಡಿಗಳು ತಲೆ ಎತ್ತಿ ನಿಂತಿವೆ. ಈ ಶಿಕ್ಷಣದ ಅಂಗಡಿಗಳು ಗ್ರಾಹಕರನ್ನು ಆಕರ್ಷಿಸಲು ನೈತಿಕ ಶಿಕ್ಷಣ, ಸಂಸ್ಕಾರ ಶಿಕ್ಷಣ, ದೇಶೀಯ ಶಿಕ್ಷಣವೆಂಬ ವಿವಿಧ ರೀತಿಯ ಮುಖವಾಡವನ್ನು  ಹೊಂದಿಕೊಂಡು ವ್ಯವಹಾರ ನಡೆಸಲು ಕಸರತ್ತು ನಡೆಸುತ್ತಿದೆ. ಸ್ಪರ್ಧಾತ್ಮಕ ಆಲೋಚನೆಯನ್ನು ಬಿತ್ತುತ್ತಾ ವಿದ್ಯಾರ್ಥಿಗಳಲ್ಲಿ ಕೌಟುಂಬಿಕ ಮೌಲ್ಯಗಳನ್ನುಕಸಿದುಕೊಳ್ಳುತ್ತಿದೆ. ಮತ್ಸರದ ಬೀಜವನ್ನುಬಿತ್ತುತ್ತಿದೆ. ವಿಶ್ವಭ್ರಾತೃತ್ವದ ಅನನ್ಯತೆಯನ್ನು ಮರೆಮಾಚುತ್ತಿದೆ.

ಎಲ್. ಕೆ. ಜಿ ಯಿಂದ ಪದವಿವರೆಗಿನ ಶಿಕ್ಷಣ ಪಡೆದಿದ್ದರೂ ವಿದ್ಯಾರ್ಥಿಗಳಲ್ಲಿ ಸ್ವಚ್ಚತೆಯ ಅರಿವು ಮೂಡಿಲ್ಲ. ಹೆಸರಿನ ಮುಂದೆ ಸಾಲು ಸಾಲು ಪದವಿಗಳಿದ್ದರೂ ವ್ಯವಹಾರ ಜ್ಞಾನದ ಕೊರತೆ ಎದ್ದು ಕಾಣುತ್ತಿದೆ. ಎಳವೆಯಲ್ಲಿದ್ದ ಮಾತೃದೇವೋಭವ, ಪಿತೃದೇವೋಭವ ಎಂಬ ಅನುಷ್ಠಾನವು ವಿದ್ಯಾರ್ಥಿಯ ಹಿರಿವಯಸ್ಸಿನಲ್ಲಿ ಆಶ್ರಮವನ್ನು ಆಧರಿಸಿಕೊಂಡಿದೆ. ಪಾಶ್ಚಾತ್ಯ ಶಿಕ್ಷಣದ ಬಲೆಗೆ ಸಿಲುಕಿಹಾಕಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಅದರಾಚೆಗಿನ ಪರಪಂಚದ ಅರಿವೇ ಇಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿ. ಪರಿಶುದ್ಧ ಚಾರಿತ್ರ್ಯ ನಿರ್ಮಾಣವಾಗುವುದು ಬದುಕಿನುದ್ದಕ್ಕೂ ಬರುವ ಸೋಲುಗೆಲುವುಗಳನ್ನಾಧರಿಸಿದ ಸಾವಿರಾರು ಏಳುಬೀಳುಗಳ ನಡುವೆ ಅನ್ನುವುದು ಸತ್ಯ. ಏನನ್ನು ಬಿತ್ತುತ್ತೇವೆಯೋ ಅದನ್ನೇ ಪಡೆಯುತ್ತೇವೆ. ತಿಳಿದೂ ತಿಳಿದೂ ವಿಷಬೀಜವನ್ನೇ ಬಿತ್ತುತ್ತಿರುವ ನಾವು ಪಡೆಯಬೇಕಾದುದು ಅದನ್ನೇ ಅಲ್ಲವೇ?

-ಡಿ. ಪಿ. ಭಟ್, ಪುತ್ತೂರು.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x