ಕಳೆದ ೪-೫ ದಿನಗಳಿಂದ ಕುಸುಮಳ ಮನಸ್ಸು ಕುದಿಯಲು ಶುರುವಾಗಿದೆ. ಪ್ರತಿ ವರುಷ ಸುಮಾರು ಈ ಹೊತ್ತಿಗೆ ಅವಳ ಮನಸ್ಸು ಬಾಂಡಲೆಯಲ್ಲಿ ಕುದಿಯುತಿರುವ ಎಣ್ಣೆಯಂತಾಗುತ್ತದೆ. ಕೊತ ಕೊತ ಕುದಿವ ಮನಸ್ಸಿನಲ್ಲಿ ಅನೇಕನೇಕ ಭಾವನೆಗಳು. ಸುಮಾರು ಒಂದು ವಾರದ ನಂತರ " ಆ ದಿನ" ಬಂದಾಗ ಮನಸ್ಸಿನಲ್ಲಿರುವ ಭಾವನೆಗಳೆಲ್ಲಾ ಸಿಡಿದು ಮನೆಯವರಿಗೆಲ್ಲಾ ಎರಚುವುದು ಅಥವಾ ಮೂಕ ಕಣ್ಣೆರಿನಲ್ಲಿ ಕೊನೆಗಾಣುವುದು. ಮಾರನೆಯ ದಿನದಿಂದ ಮಾಮೂಲು ದಿನಚರಿ ಶುರು. ಒಂದೆರಡು ದಿನ ನೋವು ಮನಸ್ಸನ್ನು ಕಾಡುತ್ತಿದ್ದರೂ ಹಿಂದಿನ ವಾರದಷ್ಟಿಲ್ಲ.
ತನ್ನ ಮದುವೆಯ ದಿನ, ವಿವಾಹ ವಾರ್ಷಿಕೋತ್ಸವ ಬಂತೆಂದರೆ ಹೀಗೆ ಆಡುವ ಮನಸ್ಸಿನ ಮೇಲೆ ಕುಸುಮಳಿಗೆ ಬಹಳ ಮುನಿಸಿದೆ. ಗಂಡ ರಾಜೀವನಿಗೆ ಅದು ಮಾಮೂಲಿ ದಿನ. ಆಫೀಸಿದ್ದು ಬಿಟ್ಟರಂತೂ ಅವನು ಪರಮ ಸುಖಿ. ಮಕ್ಕಳಿಂದ ಶುಭ ಹಾರೈಕೆ ಪಡೆದು, ಹೆಂಡತಿ ಮಾಡಿದ ಪಾಯಸ ತಿಂದು ಹೊರಟು ಬಿಟ್ಟರೆ ಅವನು ಬಚಾವ್. ಮನೆಗೆ ಬಂದ ಮೇಲೆ ತುಂಬಾ ಕೆಲಸ, ಬಹಳ ಸುಸ್ತು ಎಂಬ ಸಬೂಬು ಮಾಮೂಲು. ಕೆಲವೊಮ್ಮೆ ಮಕ್ಕಳ ಬಲವಂತಕ್ಕೆ ಹೋಟೆಲ್ಲಿಗೆ ಹೊಗುವುದು ಇದೆ. ಆದರೆ ಬೆಳೆಯುತ್ತಾ ಹೋದಂತೆ ಅವರುಗಳು ತಮ್ಮಷ್ಟಕ್ಕೆ ತಾವು ಗೆಳಯರ ಜತೆ ಹೊರಗಡೆ ತಿನ್ನುವುದು ರೂಢಿಯಾದ ಮೇಲೆ ಅಪ್ಪ ಅಮ್ಮನ ಮದುವೆಯ ದಿನ ಅವರಿಗೆ ಅಷ್ಟು ಮಹತ್ವವೆನಿಸಲಿಲ್ಲ. ಶನಿವಾರ ಭಾನುವಾರ ಬಿದ್ದಾಗ ವಿಧಿಯಿಲ್ಲದೆ ಹೆಂಡತಿಯ ಬಾಯಿಗೆ ಹೆದರಿ ದೇವಸ್ಥಾನಕ್ಕೆ ಕರೆದೊಯ್ಯುತ್ತಾನೆ. ವಾಪಸ್ಸು ಬರುವಾಗ ಅಲ್ಲೇ ಚಾಟ್ ತಿಂದು ಮನೆಗೆ ಬಂದರೆ ಅವನು ತನ್ನ ಕರ್ತವ್ಯ ಮುಗಿಸಿದಂತೆ ನಿರಾಳವಾಗುತ್ತಾನೆ.
ಆದರೆ ಕುಸುಮ ಹಾಗಲ್ಲ. ಅದು ತನ್ನ ಬದುಕನ್ನು ಬದಲಾಯಿಸಿದ ದಿನ, ತನ್ನನ್ನು ಗಂಡ ಓಲೈಸಬೇಕು, ಉಡುಗೊರೆ ನೀಡಬೇಕು, ರಾಣಿಯ ಹಾಗೆ ನೋಡಿಕೊಳ್ಳಬೇಕು. ತಾವಿಬ್ಬರು ಇಡೀ ದಿನ ಹೊರಗಡೆ ಸುತ್ತಬೇಕು. ಇದೆಲ್ಲಾ ಅವಳ ಆಸೆ. ಖಾಸಗಿ ಕಂಪನಿಯಲ್ಲಿ ಕೆಲಸ, ಬೆಳಗಾದರೆ ಬೇಯಿಸು, ತಿನ್ನು, ಓಡು, ಕೆಲಸ ಮಾಡು, ಕೆಲವೊಮ್ಮೆ ಜಗಳವಾಡು, ಸರಿ ಹೋಗು, ಅಳು, ನಗು, ಈ ರೀತಿಯ ಏಕತಾನತೆಯ ಮಧ್ಯೆ ವಾರ್ಷಿಕೋತ್ಸವ, ಹುಟ್ಟು ಹಬ್ಬ ಇವೆಲ್ಲಾ ಆಚರಿಸುವುದರಿಂದ ಮನಸ್ಸಿಗೆ ಮುದ, ಬದುಕಬೇಕೆಂಬ ಆಸೆ ಜಾಸ್ತಿಯಾಗುವುದೆಂದು ಅವಳ ನಂಬಿಕೆ. ಆ ದಿನಗಳಂದು ಅವಳು ಬಹಳ ಭಾವುಕಳಾಗಿ ಬಿಡುತ್ತಾಳೆ. ಕಣ್ಣಲ್ಲಿ ಸಣ್ಣ ಸಣ್ಣ ವಿಷಯಕ್ಕೊ ನೀರು ಬಂದು ಬಿಡುತ್ತದೆ. ತನ್ನ ಭಾವನೆಗಳನ್ನು ಗಂಡ ಬೇಕೆಂದೇ ಕಡೆಗಾಣಿಸುತ್ತಿದ್ದಾನೆ ಎಂಬುದು ಅವಳ ಮನಸ್ಸಿನಲ್ಲಿ ಬೇರೂರಿದೆ. ಸಿಟ್ಟಿನಿಂದ ಕೂಗಾಡಿದರೆ ಸುಮ್ಮನಿರುವನಲ್ಲ ರಾಜೀವ. ಅವಳಿಗಿಂತ ಜೋರು ದನಿಯಲ್ಲಿ ಅಬ್ಬರಿಸುತ್ತಾನೆ. ತನ್ನ ಹುಟ್ಟು ಹಬ್ಬದ ದಿನ ಅವನಿಗೆ ಯಾರಾದರೂ ಶುಭ ಕೋರಿದರೆ ಅವನಿಗಿಷ್ಟವಾಗುವುದಿಲ್ಲ. ಇನ್ನು ಟ್ರೀಟ್, ಉಡುಗೊರೆ ಎಂದರಂತೂ ಬೆಂಕಿಯಾಗುತ್ತಾನೆ. ನೀನು ನನ್ನ ತರಹ ಇರಲಾರೆಯಾ ಎಂದು ಪರೋಕ್ಷವಾಗಿ ಸೂಚಿಸುತ್ತಿರುತ್ತಾನೆ.
ಮಾರ್ದವ್ಯತೆ ಕಮ್ಮಿ ಹಾಗು ಭಾವನೆಗಳಿಗೆ ಬೆಲೆ ಜಾಸ್ತಿ ಕೊಡದವ ಎಂಬುದನ್ನು ಬಿಟ್ಟರೆ ಅವನು ಒಳ್ಳೆಯವನೆ. ಮನೆಗೆ ಸಾಮಾನು ತರುವುದರಲ್ಲಿ, ಯಾರಿಗಾದರೂ ಆರೋಗ್ಯ ಕೆಟ್ಟರೆ ದವಾಖಾನೆಗೆ ಕರೆದೊಯ್ಯುವುದರಲ್ಲಿ, ಕೌಟುಂಬಿಕ ಕಾರ್ಯಕ್ರಮಗಳಿಗೆ ಹೋಗುವುದರಲ್ಲಿ, ತುಂಬಾ ಅಲ್ಲದಿದ್ದರೂ ಎಷ್ಟು ಬೇಕೋ ಅಷ್ಟು ಮಾತಾಡುವುದರಲ್ಲಿ, ಗುರು ಹಿರಿಯರಿಗೆ ಮರ್ಯಾದೆ ಕೊಡುವುದರಲ್ಲಿ ಅವನು ಎತ್ತಿದ ಕೈ." ಒಳ್ಳೆ ಗಂಡ" ಎಂದು ಯಾರದರೂ ಒಪ್ಪುವ ಹಾಗಿದ್ದ ಅವನು. ಕುಸುಮ ಖಾಯಿಲೆ ಬಿದ್ದಾಗ ಅವಳನ್ನು ನೋಡಿಕೊಂಡ ರೀತಿ ಕಂಡು ಅವನತ್ತೆ ಅಂದರೆ ಕುಸುಮಳ ತಾಯಿ ಬಹಳ ಮೆಚ್ಚಿಕೊಂಡಿದ್ದರು. ೫೯ ದಾಟಿದ ಮಡದಿಗೆ ಅಡುಗೆಯವರನ್ನಿಟ್ಟುಕೊಳ್ಳಲು ತಾಕೀತು ಮಾಡಿದವನೂ ರಾಜೀವನೆ. ಇಷ್ಟೆಲ್ಲಾ ಗುಣಗಳಿರುವ ರಾಜೀವನನ್ನು ತೆಗಳಲು ಕುಸುಮಳಿಗೆ ಅಪರಾಧವೆನಿಸುತ್ತಿತ್ತು.
ಕಚೇರಿ ಮುಗಿದ ಮೇಲೆ ಮನೆಗೆ ಬಂದು ಆರಾಮಾವಾಗಿ ಟೀವಿಯ ಮುಂದೆ ಕೂರುವ ರಾಜೀವನಿಗೆ ಮಡದಿಯ ಮನಸ್ಸಿನಲ್ಲಿ ಆಗುತ್ತಿರುವ ತುಮುಲಗಳ ಅರಿವಿಲ್ಲ. ಅವನ ಮನಸ್ಸಿನಲ್ಲಿ ಹೆಂಡತಿ ವಿನಾಕಾರಣ ತಲೆ ಕೆಡಿಸಿಕೊಳ್ಳುವಳು, ಎಲ್ಲಾ ವಿಷಯಗಳಿಗೂ ಭಾವುಕಳಾಗುವಳು,ಇಲ್ಲ ಸಲ್ಲದ್ದು ಯೋಚಿಸಿ ನೆಮ್ಮದಿ ಹಾಳುಮಾಡಿಕೊಳ್ಳುವಳು, ತನ್ನ ಗೆಳತಿಯರು, ಸಂಬಂಧಿಕರಿಗೆ ತನ್ನನ್ನು ಹೋಲಿಸಿಕೊಳ್ಳುತ್ತಾ ಬೇಸರ ಮಾಡಿಕೊಳ್ಳುವಳು. ಕುಸುಮಳ ಪ್ರಕಾರ ರಾಜೀವನ ಬದುಕು ಸಿಂಪಲ್. ಏಳು, ತಿನ್ನು, ಕೆಲಸ ಮಾಡು, ಮನೆಗೆ ಬಾ, ಊಟ ಮಾಡು, ಮಲಗು. ತನ್ನ ಜತೆಯವರು, ಸಂಬಂಧಿಕರು, ಓರಿಗೆಯವರು, ಕಛೇರಿಯವರು, ಇವರ ಬಗ್ಗೆ ಅವನು ಚಿಂತಿಸಿದವನೇ ಅಲ್ಲ. ಕೆಲವರು ಮಾಡಿದ ಮನಸ್ಸಿನ ಗಾಯಗಳು ಅವನ ಜೀವನದಲ್ಲೂ ಇದೆ. ಆದರೆ ಅದನೆಲ್ಲಾ ಅವನು ಹೇಗೆ ಪರಿಗಣಿಸುತ್ತಾನೆ, ಅದನ್ನು ಕುರಿತು ಯೋಚಿಸುತ್ತಾನ, ಕೊರಗುತ್ತಾನಾ ಎಂಬುದು ಅವಳಿಗೆ ತಿಳಿದಿಲ್ಲ. ಅದಕ್ಕೆ ಕಾರಣ ರಾಜೀವ ಹೆಚ್ಚು ಮಾತಿನವನಲ್ಲ. ಅದರಲ್ಲೂ ತನಗೇನು ಇಷ್ಟ, ತನಗೇನು ನೋವುಂಟು ಮಾಡುತ್ತದೆ ಎಂಬುದು ಅವನು ಹಂಚಿಕೊಂಡೇ ಇಲ್ಲ.
ಈಗ ಮದುವೆಯ ೩೦ ನೇ ವಾರ್ಷಿಕೋತ್ಸವ ಬರುತ್ತಿದೆ. ೨ ತಿಂಗಳ ಮುನ್ನ ಮಗಳ ಮದುವೆ ಆಗಿದೆ. ಅತ್ತೆ ಮಾವ ಆದ ಮೇಲೂ ನಮ್ಮ ಬದುಕಿನ ಬಗ್ಗೆ, ನಮ್ಮ ಖುಶಿಯ ಬಗ್ಗೆ ಯೋಚಿಸಬಹುದೇ? ಮಕ್ಕಳ ಬದುಕೇ ನಮ್ಮ ಬದುಕು ಎಂದು ಜೀವನ ಸಾಗಿಸಬೇಕೆ? ಈ ಸಲ ಆ ದಿನ ಭಾನುವಾರ. ಹಿರಿ ಮಗಳು ಅತ್ತೆ ಮನೆಯಲ್ಲಿ. ಕಿರಿಯವಳು ಹಾಸ್ಟಲ್. ಮನೆಯಲ್ಲಿ ತಾವಿಬ್ಬರೇ. ಈ ಸಲವಾದರೂ ರಾಜೀವ ಏನಾದರೂ ಪ್ರೋಗ್ರಾಮ್ ಹಾಕುವನೇನೋ ಎಂದು ಕುಸುಮಳಿಗೆ ಆಸೆ. ಅವನಿಗೆ ಹೇಳದೆ ಹೊಸ ಸೀರೆ ತಂದು, ರವಿಕೆ ಹೊಲಿಸಿ ರೆಡಿ ಮಾಡಿಕೊಂಡಿದಾಳೆ. ಈ ಸಲವಾದರೂ ರಾಜೀವ ಏನಾದರೂ ಪ್ರೋಗ್ರಾಮ್ ಹಾಕುವನೇನೋ ಎಂದು ಕುಸುಮಳಿಗೆ ಆಸೆ. ಅವನಿಗೆ ಹೇಳದೆ ಹೊಸ ಸೀರೆ ತಂದು, ರವಿಕೆ ಹೊಲಿಸಿ ರೆಡಿ ಮಾಡಿಕೊಂಡಿದಾಳೆ. ಆ ದಿನ ಪೂರ್ತಿ ಅಡುಗೆ ಮನೆಗೆ ರಜೆ ಹಾಕುವುದು. ಬೆಳಗ್ಗೆ ಸಿಂಗರಿಸಿಕೊಂಡು ತಾನು ರಾಜೀವನೊಟ್ಟಿಗೆ ಹೊರಟರೆ ಇನ್ನು ಮನೆಗೆ ರಾತ್ರಿಯೆ ಬರುವುದು. ಇಡೀ ದಿನ ದೇವಸ್ಠಾನ, ಚಲನ ಚಿತ್ರ, ಹೋಟೆಲು. ಇನ್ನು ಅವನ ಮೂಡಿದ್ದರೆ ತನಗೆರಡು ಸೀರೆ. ಬಣ್ಣ ಬಣ್ಣದ ಕನಸು ಹೊತ್ತ ಕುಸುಮಳಿಗೆ ಸ್ವಲ್ಪ ಇರಿಸು ಮುರಿಸಾಗಿದ್ದು ಬೆಳಗ್ಗೆಯೇ ಚಿಕ್ಕ ಮಗಳು ಬಂದಿಳಿದಿದ್ದು. ಮಗಳು ಬಂದಳೆಂದು ಖುಶಿಯಾದರೂ, ತನ್ನ ಕಾರ್ಯಕ್ರಮಗಳೆಲ್ಲಾ ರದ್ದು ಎಂದು ಬೇಸರವೂ ಆಯಿತು. ಮಗಳು ಬಂದದ್ದು ರಾಜೀವನಿಗೆ ಬಹಳ ಸಂತಸ.
. ದೊಡ್ಡವಳಿಗೆ ಮದುವೆ ಮಾಡಿದಾಗಲಿಂದ ಒಂದು ರೀತಿಯ ಶೂನ್ಯ ಭಾವ ಮನಸ್ಸಿನಲ್ಲಿ. ಚಿಕ್ಕವಳೂ ದೂರ ಹೋದ ಮೇಲೆ ಮನಸ್ಸು ಭಾರವಾಗಿತ್ತು. ಅವಳು ಬಂದಳೆಂದು ಭಾನುವಾರದ ವಾರ್ತಾಪತ್ರಿಕೆ ಬದಿಗೊತ್ತಿ ಅವಳೊಡನೆ ಹರಟುತ್ತಾ ಕುಳಿತ. ಅಡುಗೆ ಮನೆ ಸೇರಿದ ಕುಸುಮಳ ಮನಸ್ಸು ಸರಿ ಇರಲಿಲ್ಲ.
ಇವತ್ತು ಅಡುಗೆ ಮನೆಗೆ ರಜ ಹಾಕಲು ಯೋಚಿಸಿದ್ದಾಗ ಹೀಗೆ ಆಯಿತಲ್ಲ.ಒಂದು ದಿನದ ಯಾಂತ್ರಿಕತೆಯಿಂದ ತಪ್ಪಿಸಿಕೊಳ್ಳೋಣ ಎಂದರೆ ಮಗಳು " ಅಮ್ಮ, ಇವತ್ತು ಏನು ಸ್ಪೆಷಲ್ ಮಾಡುತ್ತೀಯಾ? ಹಾಸ್ಟಲ್ ಊಟ ಮಾಡಿ ಬಾಯಿ ಕೆಟ್ಟು ಹೋಗಿದೆ" ಎಂದಾಗ ಮೌನವಾಗಿ ತಲೆ ಆಡಿಸಿದಳಷ್ಟೆ.
ಅಡುಗೆ, ಊಟ, ಮಾತು ಮುಗಿಯುವ ವೇಳೆಗೆ ಸಂಜೆ ಆಗಿತ್ತು. ಮಗಳ ಗೆಳತಿಯರ ದಂಡು ಬಂದಾಗ ಅವರಿಗೆಲ್ಲಾ ಬಜ್ಜಿ ಸಪ್ಲೈ ಮಾಡಿ, ಅವರಿಂದ ಮನೆಯಲ್ಲಿ ಶುಭಾಶಯಗಳನ್ನು ಸ್ವೀಕರಿಸಿ ಮಗಳನ್ನು ರಾತ್ರಿ ಬಸ್ಸಿಗೆ ಹತ್ತಿಸಿ ಬಂದಾಗ ರಾತ್ರಿ ೮ ಘಂಟೆ. ಈಗಲಾದರೂ ರಾಜೀವನ ಕಡೆಯಿಂದ "ಎಲ್ಲಾದರೂ ಹೊರಗೆ ಹೋಗೋಣವೇ" ಎಂದು ಬರುತ್ತದೆಯೋ ಎಂದು ಕಾದಳು. ಆರಾಮವಾಗಿ ಟೀವಿ ಹಚ್ಚಿ ಕುಳಿತ ಅವನು. ತಡೆಯಲಾಗದೆ ಇವಳೇ ಬಾಯಿ ಬಿಟ್ಟಳು." ಈ ದಿನ ದೇವಾಲಯಕ್ಕೂ ಹೋಗಲಿಲ್ಲ ನಾವು. ಮನೆಯಲ್ಲಿ ಬರೀ ಸಾರು, ಪಲ್ಯ ಮಿಕ್ಕಿದೆ. ಏನು ಮಾಡಲಿ" ಹೆಂಡತಿಯ ಮನದಲ್ಲಾಗುತ್ತಿರುವ ತುಮುಲದ ಅರಿವಿರವದ ಅವನು ಆರಾಮವಾಗಿ ನುಡಿದ" ಹೋಗಲಿ ಬಿಡು. ಪುಟ್ಟಿ ಬಂದಿದ್ದು ಇವತ್ತು ತುಂಬಾ ಚೆನ್ನಾಗಿತ್ತು. ದೊಡ್ಡವಳು ಗಂಡನ ಮನೆಗೆ ಹೊರಟ ಮೇಲೆ ನನಗೆ ಮಂಕು ಬಡಿದ ಹಾಗಾಗಿತ್ತು. ಭಾನುವಾರ ಯಾಕಾದರೂ ಬರುತ್ತೊ ಅನ್ನಿಸುತ್ತಿತ್ತು. ಮನೆಗೆ ಬಂದರೆ ಅವಳದೇ ನೆನಪು. ಅವಳಂತೂ ಮದುವೆಯಾದ ಮೇಲೆ ನಮ್ಮನ್ನು ಮರೆತೇ ಬಿಟ್ಟುದ್ದಾಳೆ" ನಗಾಡಿದ.
"ಏಕೆ ಬೇಸರ? ಮನೆಯಲ್ಲಿ ನಾನಿಲ್ಲವೇ? ಇಷ್ಟು ವರುಷ ಮಕ್ಕಳನ್ನು ನೋಡಿಕೊಳ್ಳುವ ಹೊಣೆಗಾರಿಕೆಯಲ್ಲಿ ನಾವು ಜತೆಯಲ್ಲಿ ಸಮಯ ಕಳೆಯಲೇ ಇಲ್ಲ. ಈಗ ಆ ಆಸೆಗಳನೆಲ್ಲಾ ಪೂರೈಸಿಕೊಳ್ಳಬಹುದಲ್ಲ" ಮನದಲ್ಲಿ ಮೂಡಿದ ಮಾತುಗಳನ್ನು ಬಲವಂತವಾಗಿ ನುಂಗಿದಳು. "ಸರಿ ಊಟ ಎಷ್ಟೊತ್ತಿಗೆ? " ತನ್ನ ಪ್ರಶ್ನೆಗೆ ಅವನು "ಹೊರಗೆ ಹೋಗೋಣವಾ? ಎನ್ನುತ್ತಾನೇನೊ ಎಂದು ಕಾದಳು." ಅಯ್ಯೋ, ಸಾಕಮ್ಮ. ನನಗೆ ಹಸಿವೇ ಇಲ್ಲ. ಅನ್ನ ಸಾರು ತಿಂದು ಮಲಗುವ" ಒಂದು ವಾರದಿಂದ ಆಸೆ ಪಟ್ಟಿದ್ದು, ಬೆಳಗ್ಗಿಂದ ಆದ ಸುಸ್ತು, ಬೇಸರ, ನಿರಾಸೆ ಅವಳ ಮನಸ್ಸನ್ನು ರೊಚ್ಚಿಗೆಬ್ಬಿಸಿತು. ಮಾತಿಗೆ ಮಾತು ಬೆಳೆದು, ಎರಡೊ ಕಡೆಯ ನೆಂಟರು, ಅಪ್ಪ, ಅಮ್ಮ, ಹಿಂದಿನ ಜಗಳಗಳು, ವಿರಸಗಳು, ಎಲ್ಲಾ ನೆನಪಿಗೆ ಬಂದು ಪರಿಸ್ತಿತಿ ವಿಕೋಪಕ್ಕೆ ಹೋಯಿತು. ಅವಳ ಮಾತಿಗೆ ಅವನೂ ಪ್ರತಿಉತ್ತರ ನೀಡಿ ಜಗಳ ಜಾಸ್ತಿಯಾಯಿತು. ವಿವಾಹ ವಾರ್ಷಿಕೋತ್ಸವ ಎಂದು ನೂರು ಆಸೆ ಕಟ್ಟಿಕೊಂಡಿದ್ದ ಹೆಂಡತಿಯ ಮನಸ್ಸು ಅವನಿಗೆ ಅರ್ಥವಾಗಲೇ ಇಲ್ಲ. ಸುಮ್ಮನೆ ಜಗಳ ಮಾಡುತ್ತಿದ್ದಾಳೆ ಎಂದು ಅವನೂ ಮಾತಿಗೆ ಮಾತು ಬೆಳೆಸಿದ. ಸುಮಾರು ಕಿರುಚಾಟವಾದ ಮೇಲೆ ಇಬ್ಬರೂ ಸುಮ್ಮನಾದರೂ. ಮೆಲ್ಲಗೆ ಅಳುತ್ತ ಅಡುಗೆ ಮನೆ ಸೇರಿದ ಹೆಂಡತಿಯನ್ನು ನೋಡಿ ರಾಜೀವನ ಕರುಳು ಚುರುಕ್ಕೆಂದಿತು.
"ಚೆ, ತನಗೇಕೆ ಕೆಲವು ವಿಷಯಗಳು ಹೊಳೆಯುವುದೇ ಇಲ್ಲ. ಇಷ್ಟು ವರುಷಗಳಾದರೂ ಮಡದಿಗೆ ಏನು ಬೇಕು ಎಂದು ಗ್ರಹಿಸಲಾಗದಷ್ಟು ಮನಸ್ಸು ಒರಟಾಗಿದೆಯೇ. ಪಾಪ, ವರುಷವಿಡೀ ಮನೆಯಲ್ಲಿ, ಹೊರಗಡೆ ದುಡಿಯುತ್ತಾಳೆ.ಸರಿಯಾಗಿ ಪ್ಲಾನ್ ಮಾಡಿ ಅವಳನ್ನು ಎಲ್ಲಾದರೂ ಕರೆದೊಯ್ಯಬಹುದಿತ್ತು. ಏನಾದರೂ ಕೊಡಿಸಬಹುದಿತ್ತು. ತಾನೆಷ್ಟು ಸ್ವಾರ್ಥಿಯಾದೆ. ತನ್ನ ಬಗ್ಗೆ ಮಾತ್ರ ಯೋಚಿಸಿ ತಾನು ಆರಾಮವಾಗಿದ್ದರೆ ಸಾಕು ಎಂದು ಸುಮ್ಮನಿದ್ದುಬಿಟ್ಟೆನಲ್ಲ." ಎದ್ದು ಅಳುತ್ತಿದ್ದ ಅವಳನ್ನು ಸಮಾಧಾನಗೊಳಿಸಿ ರಮಿಸಿ ಎಬ್ಬಿಸಿದ." ಬಾ, ಒಟ್ಟಿಗೆ ಊಟ ಮಾಡೊಣ. ಮೂಲೆ ಬೇಕರಿಯಿಂದ ಚಿಪ್ಸ್ ತರಲಾ? ಹಾಗೇ ಸ್ವಲ್ಪ ಕೇಕ್ ಕೂಡ?"
ಅವನ ಮಾತಿಗೆ ಕುಸುಮಳ ಬೇಸರ ಇನ್ನೂ ಹೆಚ್ಚಿತು. " ಇವತ್ತಿನ ದಿನವೂ ಆ ಕೋಸಿನ ಪಲ್ಯ ತಿನ್ನಬೇಕಾ? ನೀವು ಊಟ ಮಾಡಿ. ನನಗೆ ಹಸಿವಿಲ್ಲ"
" ಇಷ್ಟೊತ್ತಿಗೆ ಯಾವ ಹೋಟೆಲೂ ತೆಗೆದಿರುವುದಿಲ್ಲ. ಈಗ ಮನೆಯಲ್ಲಿರುವುದು ತಿನ್ನೋಣ. ಮುಂದಿನ ಭಾನುವಾರ ಲಂಚಿಗೆ ಹೋಗೋಣ. ಈಗ ಪ್ಲೀಸ್ ಏಳು"
" ಯಾಕೆ ತೆರೆದಿರುವುದಿಲ್ಲ. ಇನ್ನು ಒಂಬತ್ತೂ ಮುಕ್ಕಾಲು. ಮಾರ್ಕೆಟ್ ಬಳಿ ಇರುವ ಹೊಸ ಹೋಟೆಲ್ ತೆಗೆದಿರುತ್ತದೆ. ಅವಳ ಮಾತಿಗೆ ಅವನು ಒಪ್ಪಿ ಇಬ್ಬರೂ ರೆಡಿಯಾಗಿ ಹೊರಟರು. ಹೋಟೆಲ್ಲಿನ ಹತ್ತಿರ ಬಂದಾಗ ಹತ್ತೂ ಕಾಲಾಗಿತ್ತು." ಊಟ ಇಲ್ಲ ಸಾರ್. ಪೂರಿ, ದೋಸೆ ಇದೆ ಅಷ್ಟೆ" ಎಂದ ಸರ್ವರ್ ಗೆ ೨ ಪ್ಲೇಟ್ ಪೂರಿ ತರಲು ಹೇಳಿ ಕುಳಿತರು. ಅಲ್ಲಿ ನೆರೆದಿದ್ದ ಜನ, ಅವರ ನಗು, ಕೇಕೆ, ಮಾತು ಅವಳಿಗೆ ಮತ್ತಷ್ಟು ಬೇಸರವಾಯಿತು. ಎಲ್ಲಾ ಎಷ್ಟು ಖುಶಿಯಾಗಿದ್ದಾರೆ. ತಾವಿಬ್ಬರೇ ಏಕೆ ಹೀಗೆ, ಏನಾದರೂ ಮನಸ್ತಾಪ ಇಲ್ಲವೇ ಘನ ಗಾಂಭೀರ್ಯ. ಕೆಲವು ದಂಪತಿಗಳು ಒಟ್ಟಿಗೆ ಕೂತು ನಗಾಡುತ್ತ ಊಟ ಮಾಡುತ್ತಿದ್ದರು. ಕೆಲವರು ದೊಡ್ಡ ಗುಂಪಿನಲ್ಲಿ ಗದ್ದಲ ಮಾಡುತ್ತ, ಪಟ ತೆಗೆಯುತ್ತಾ ಐಸ್ ಕ್ರೀಮ್ ಸವಿಯುತ್ತಿದ್ದರು. ಯುವ ಜೋಡಿಗಳು ಒಬ್ಬರನ್ನೊಬ್ಬರು ಒತ್ತಿ ಕುಳಿತು ಹರಟುತ್ತಿದ್ದರು. ತಾವಿಬ್ಬರು? ಎದುರು ಬದಿರು ಕುಳಿತು, ಈಗಷ್ಟೆ ಆಡಿದ ಜಗಳದಿಂದ, ಮಾತು ಕತೆಯಿಂದ ಚೇತರಿಸಿಕೊಳ್ಳುತ್ತಾ ಬೇಸರದಿಂದ ಕಾಟಾಚಾರಕ್ಕೆ ಬಂದಂತೆ ಇದ್ದೇವೆ.
ಪೂರಿ, ಚಟ್ನಿ, ಕೋಸಿನ ಪಲ್ಯ ತಂದಿಟ್ಟ ಬೇರರ್. "ಸಾಗು ಖಾಲಿ ಆಗಿದೆ ಸಾರ್. ಅದಕ್ಕೆ ಈ ಪಲ್ಯ" ಅವನ ಮಾತು ಕೇಳಿದ ರಾಜೀವನ ಮೊಗದ ಮೇಲೆ ನಗು ಮೂಡಿದರೆ ಕುಸುಮಳ ಮನಸ್ಸು, ಮುಖದ ಮೇಲೆ ವಿಷಾದ ಮೂಡಿತು. ಎದುರಿಗಿಟ್ಟಿದ್ದ ತಟ್ಟೆಯಲ್ಲಿದ್ದ ಕೋಸಿನ ಪಲ್ಯ ಅವಳನ್ನು ಅಣಕಿಸುತ್ತಿತ್ತು.
"ಕೋಸಿನ ಪಲ್ಯ"ಚೆನ್ನಾಗಿತ್ತು.
ಸಣ್ಣ ಘಟನೆಯ ಹಂದರ ಹಿಡಿದು ಯಾಂತ್ರಿಕ ಬದುಕಿಗೆ ಒಗ್ಗಿಕೊಂಡಿದ್ದ ಗಂಡನೊಡನೆ, ಭಾವುಕ ಹೆಂಡತಿಯ ತೊಳಲಾಟ ಚೆನ್ನಾಗಿ ಚಿತ್ರಿಸಿದ್ದೀರಿ.
ನಾನು ಯಾವಾಗಲೂ ನಿಮ್ಮ ಆದರ್ಶ ಅನಿಸಿಕೆಯ ಮಾತು ಆಲಿಸುತೆನೆ ,
ಇದರಿಂದ ನಾನು ಒಂದು ಮಾತು ಹೇಳತಿನಿ,
ಸ್ನೇಹಿತರೇ ಓದುವುದನ್ನು ಯಾವತ್ತೂ ಬಿಡಬೇಡಿ ,
ಯಾಕೆಂದ್ರೆ ನಮ್ಮ ಈ ಬದುಕು ಭೋದಿಸುವುದನ್ನು ನಿಲ್ಲಿಸುವುದಿಲ್ಲ
ನಾನು ಇಷ್ಟೇ ಹೇಳುವುದು ಓದುವದರಿಂದ ಜ್ಞಾನ ವೃಧ್ಧಿಯಾಗುತ್ತದೆ